ರೋಗಿಯ ಕುಟುಂಬ ವೈದ್ಯರ ನಡವಿನ ವಾಗ್ವಾದಕ್ಕೆ “ಹಿಂದು v/s ಮುಸ್ಲಿಂ” ಬಣ್ಣ

ಇದನ್ನು ಪ್ರಶ್ನಿಸಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ವಿರುದ್ದ ಎಫ್ಐಆರ್!!
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ರೋಗಿಗಳ ಕುಟುಂಬದ ನಡುವೆ ವಾಗ್ವಾದ ನಡೆದಿತ್ತು. ಅದು ವೈದ್ಯರು ಹಾಗು ರೋಗಿಗಳ ನಡುವಿನ ಜಗಳ ಆಗಿ ಪರಿಗಣಿತವಾಗುತ್ತದೆ ವಿನಃ ರೋಗಿಯ ಕಡೆಯವರ ಜಾತಿ, ಧರ್ಮದ ಗುರುತಿನೊಂದಿಗೆ ತಳಕು ಹಾಕಿಕೊಳ್ಳುವುದಿಲ್ಲ. ಆದರೆ ಇಲ್ಲಿ “ವೈದ್ಯರು ಹಾಗೂ ರೋಗಿಯ ಕುಟುಂಬ” ಹೋಗಿ “ವೈದ್ಯರು ಹಾಗೂ ಮುಸ್ಲಿಮರು” ಎಂಬಂತೆ ಬದಲಾಗುತ್ತದೆ. ಇದನ್ನು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಬಹಿರಂಗವಾಗಿಯೇ ಪ್ರಶ್ನಿಸಿದರು. ಇದರಿಂದ ತೀವ್ರ ಮುಜುಗರಕ್ಕೊಳಗಾದ “ಸ್ವಯಂ ಸೇವಕ” ವೈದ್ಯರುಗಳು, ಮುನೀರ್ ಕಾಟಿಪಳ್ಳ ಹಾಗೂ ಇವರ ಮಾತುಗಳನ್ನು ಪ್ರಕಟಿಸಿದ ‘ವಾರ್ತಾ ಭಾರತಿ’ ಪತ್ರಿಕೆ ಸಂಪಾದಕರ ವಿರುದ್ದ ಪೊಲೀಸರಿಗೆ ದೂರು ಕೊಟ್ಟು, ಎಪ್ಐಆರ್ ದಾಖಲಿಸುವುದರಲ್ಲಿ ಯಶಸ್ವಿಯಾದರು.

-ಸಂಜಯ

ಕರಾವಳಿ ಕೋಮುವಾದದ ಪ್ರಯೋಗ ಶಾಲೆಯಾದರೆ, ಪುತ್ತೂರು ಆ ಪ್ರಯೋಗ ಶಾಲೆಯ ರಾಜಧಾನಿ ಇದ್ದಂತೆ. ಸಂಘಪರಿವಾರದ ನಿಯಂತ್ರಣ ಕೊಠಡಿಯ ಹೆಚ್ಚಿನ ಮೆದುಳುಗಳು ಪುತ್ತೂರುನಲ್ಲಿದೆ. ಪುತ್ತೂರಿನ ಪ್ರತಿಯೊಂದು ಗ್ರಾಮ, ಸಂಸ್ಥೆ, ವಿಭಾಗಗಳೂ ಸಂಘಪರಿವಾರದ ಉಕ್ಕಿನ ಹಿಡಿತದಲ್ಲಿದೆ. ಸಂಘಪರಿವಾರದ ಎಲ್ಲಾ ಪ್ರಯೋಗಳು ಪುತ್ತೂರು, ಸುಳ್ಯ ತಾಲೂಕುಗಳಲ್ಲಿ  ನೂರು ಶೇಕಡಾ ಪರೀಕ್ಷೆಗೆ ಒಳಪಟ್ಟು ಯಶಸ್ಸು ಕಂಡಿದೆ.

ಅದರ ಪರಿಣಾಮವೇ ಈಗ ಸದ್ದು ಮಾಡುತ್ತಿರುವ ಪುತ್ತೂರು ವೈದ್ಯರ ನಿರ್ಲಜ್ಜ ಕೋಮುರಾಜಕಾರಣದ ಪ್ರಕರಣ. ಇಲ್ಲಿ ಸಂಘದ ಅಣತಿ ಮೀರಿ ಯಾವುದೂ ನಡೆಯುವುದಿಲ್ಲ. ಇಲ್ಲಿನ ಹಲವು ವೈದ್ಯರುಗಳು ಸಂಘದ ಬದ್ದ ಕಾರ್ಯಕರ್ತರಾಗಿದ್ದಾರೆ‌. ಅವರು ಯಾವುದೆ ಫಿಲ್ಟರ್ ಇಲ್ಲದೆ ಸಂಘಪರಿವಾರದ ಪರ ಕೆಲಸ ಮಾಡುತ್ತಾರೆ. ಭಾರತ ವೈದ್ಯರ ಸಂಘ (ಐಎಂಎ)ದ ನಾಯಕತ್ವವೂ ಸಂಘಪರಿವಾರದ ಸಿದ್ದಾಂತದ ಪಾಲಕರ ಕೈಯಲ್ಲಿದೆ. ಹಲವು ಬಾರಿ ವೈದ್ಯರ ಸಂಘವು ಸಂಘಪರಿವಾರದ ಸಾಮೂಹಿಕ ಸಂಘಟನೆಯಂತೆ ನಡೆದುಕೊಳ್ಳುತ್ತದೆ.

ಇದನ್ನೂ ಓದಿ: ಭಾರತ ಇನ್ನೂ ಜಪಾನ್‌ನ ಜಿಡಿಪಿ ಗಾತ್ರವನ್ನು ಹಿಂದಿಕ್ಕಿಲ್ಲ: ಐಎಂಎಫ್ ಸ್ಪಷ್ಟನೆ

ರೋಗಿಯ ಕುಟುಂಬ ವೈದ್ಯರ ನಡವಿನ ವಾಗ್ವಾದಕ್ಕೆ “ಹಿಂದು v/s ಮುಸ್ಲಿಂ” ಬಣ್ಣ

ವೈದ್ಯರು ಹಾಗೂ ರೋಗಿಗಳ ಕುಟುಂಬದ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯುವುದು ಹೊಸ ವಿದ್ಯಮಾನ ಏನಲ್ಲ. ಅದು ಹಲ್ಲೆ, ಸೊತ್ತುಗಳಿಗೆ ಹಾನಿ ಸಂಭವಿಸಿದ ಸಂದರ್ಭದಲ್ಲಿ ಮಾತ್ರ ಪೊಲೀಸ್ ಠಾಣೆ ತಲುಪುತ್ತದೆ. ಖಾಸಗಿ ವೈದ್ಯಕೀಯ ರಂಗದ ಆಡಂಬೊಲ ಆಗಿರುವ ಮಂಗಳೂರು, ಪುತ್ತೂರು ಸೇರಿದಂತೆ ಕರಾವಳಿಯಲ್ಲಿ ಇಂತಹ ಘಟನೆಗಳು ಸಹಜ ಎಂಬಂತೆ ನಡೆಯುತ್ತಿರುತ್ತದೆ‌.

ವೈದ್ಯರ ನಿರ್ಲಕ್ಷ್ಯ, ವಿಪರೀತ ಬಿಲ್ ಗಳ ಗಂಭೀರ ಆರೋಪದ ಸಂದರ್ಭ ಅದು ತೀವ್ರ ಸ್ವರೂಪ ಪಡೆಯುವುದು, ಪೊಲೀಸ್ ಮಧ್ಯ ಪ್ರವೇಶ ಆಗಿರುವುದೂ ಇದೆ. ಈ ಎಲ್ಲಾ ಸಂದರ್ಭದಲ್ಲಿ ಅದು ವೈದ್ಯರು ಹಾಗು ರೋಗಿಗಳ ನಡುವಿನ ಜಗಳ ಆಗಿ ಪರಿಗಣಿತವಾಗಿತ್ತು. ಅದು ರೋಗಿಯ ಕಡೆಯವರ ಜಾತಿ, ಧರ್ಮದ ಗುರುತಿನೊಂದಿಗೆ ತಳಕು ಹಾಕಿಕೊಂಡಿರಲಿಲ್ಲ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದಿರುವುದೂ ಅಂತಹದ್ದೊಂದು ಸಣ್ಣ ಮಾತಿನ ಚಕಮಕಿ.

ಅಂದು ಆಸ್ಪತ್ರೆಯಲ್ಲಿ ನಡೆದದ್ದೇನು?

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿದ್ದ ಬಾಣಂತಿಯನ್ನು ಕಾಣಲು ಆಕೆಯ ಕುಟುಂಬದ ತಾಯಿ, ಮಗ ಬಂದಿದ್ದಾರೆ‌. ಅವರು ಬಾಣಂತಿಯನ್ನು ಭೇಟಿಯಾದ ಸಮಯ ಸಂದರ್ಶಕರ ಸಮಯ ಅಲ್ಲ ಎಂಬುದು ಸರಕಾರಿ ವೈದ್ಯಾಧಿಕಾರಿ ಆಶಾ ಪುತ್ತೂರಾಯ ಅವರ ಆಕ್ಷೇಪ. ಈ ಆಕ್ಷೇಪ ಮಾತಿನ ಚಕಮಕಿಗೆ ಕಾರಣ ಆಗಿದೆ. ಸರಕಾರಿ ವೈದ್ಯರು ಪೊಲೀಸರನ್ನು ಕರೆಸಿದ್ದಾರೆ‌. ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆಸಿದ್ದಾರೆ‌.

ಸರಕಾರಿ ವೈದ್ಯೆಯ ದೂರಿನ ಕುರಿತು ರೋಗಿಯ ಕುಟುಂಬವನ್ನು ವಿಚಾರಿಸಿದ್ದಾರೆ‌. ತಾಯಿ, ಮಗನಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಮಗನ ಮೊಬೈಲ್ ನಲ್ಲಿದ್ದ ಮಾತಿನ ಚಕಮಕಿಯ ವೀಡಿಯೊ ತುಣಕುನ್ನು ಡಿಲೀಟ್ ಮಾಡಿಸಿದ್ದಾರೆ‌. ಈ ಮೂಲಕ ಪ್ರಕರಣ ಸಾಮಾನ್ಯವಾಗಿ ಹೇಗೆ ಮುಗಿಯಬೇಕೊ, ಹಾಗೆ ಮುಗಿದಿದೆ.

ವೈದ್ಯರಲ್ಲಿ ಕೆರಳಿದ “ಧರ್ಮ” ಪ್ರಜ್ಞೆ, ಸಂಘಪರಿವಾರದ ಪ್ರವೇಶ

ದೂರುದಾರೆ ಸರಕಾರಿ ವೈದ್ಯೆ ಆಶಾ ಪುತ್ತೂರಾಯ ಅವರ ಪತಿ ಪುತ್ತೂರಾಯ ಪುತ್ತೂರಿನಲ್ಲಿ ಖಾಸಗಿ ನರ್ಸಿಂಗ್ ಹೋಂ ನಡೆಸುತ್ತಾರೆ. ಸಂಘಪರಿವಾರದೊಂದಿಗೆ ಬಹಿರಂಗ ಒಡನಾಟವನ್ನೂ ಹೊಂದಿದ್ದಾರೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಮಾತಿನ ಚಕಮಕಿ ಇವರ ಮೂಲಕ ಪುತ್ತೂರು ವೈದ್ಯರ ಸಂಘದ ಗಮನಕ್ಕೆ ಬರುತ್ತದೆ. ಈ ಸಂಘದ ಕಾರ್ಯದರ್ಶಿ ಡಾ. ಗಣೇಶ್ ಪ್ರಸಾದ್ ಮುದ್ರಾಜೆಯವರೂ ಸಂಘಪರಿವಾರದ ಒಡನಾಟ ಹೊಂದಿದವರು.

ಸರಕಾರಿ ಆಸ್ಪತ್ರೆಯಲ್ಲಿ ಮಾತಿನ ಚಕಮಕಿ ನಡೆಸಿದ ತಾಯಿ, ಮಗ ಮುಸ್ಲಿಂ ಎಂಬುದು ಗಮನಕ್ಕೆ ಬಂದ ತಕ್ಷಣ ಇವರೊಳಗಡೆಯ ರಾಜಕಾರಣ ಎಚ್ಚೆತ್ತುಕೊಳ್ಳುತ್ತದೆ. ಮುಚ್ಚಳಿಕೆಯ ಮೂಲಕ ಮುಕ್ತಾಯಗೊಂಡಿದ್ದ ಪ್ರಕರಣಕ್ಕೆ ಮರುಜೀವ ನೀಡಲಾಗುತ್ತದೆ. ವೈದ್ಯೆಯೊಂದಿಗೆ ಮಾತಿನ ಚಕಮಕಿ ನಡೆಸಿದ (ಮುಸ್ಲಿಂ) ಕುಟುಂಬದ ಮೇಲೆ ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಬೇಕು ಎಂಬ ಬೇಡಿಕೆ ಮುಂದಿಡಲಾಗುತ್ತದೆ. ಪುತ್ತೂರು ತಾಲೂಕಿನಾದ್ಯಂತ ವೈದ್ಯಕೀಯ ಸೇವೆ ಬಂದ್ ಮಾಡಲಾಗುತ್ತದೆ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುತ್ತದೆ.

ಈ ದಿಢೀರ್ ಪ್ರತಿಭಟನೆ, ಪೊಲೀಸ್ ಠಾಣೆ ಘೇರಾವ್ ಗೆ ಸಂಘಪರಿವಾರ ಸಹಭಾಗಿತ್ವ ನೀಡುತ್ತದೆ. ನೋಡು ನೋಡುತ್ತಲೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತದೆ. ಮುಸ್ಲಿಂ ಕುಟುಂಬದ ಬಂಧನ ಆಗದೆ ಸ್ಥಳದಿಂದ ತೆರಳುವುದಿಲ್ಲ ಎಂದು ವೈದ್ಯರ ಸಂಘದ ಪ್ರಮುಖರು, ಸಂಘಪರಿವಾರದ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಘೋಷಿಸುತ್ತಾರೆ. ಪ್ರತಿಭಟನೆ ಗಂಟೆಗಳ ಕಾಲ ಮುಂದುವರಿಯುತ್ತದೆ. ಅವರಿಂದ ಮುಸ್ಲಿಂ ದ್ವೇಷದ ಮಾತುಗಳು ಹೊರಡುತ್ತವೆ. ಕೊನೆಗೆ ಠಾಣೆಯ ಮುಂಭಾಗ ರಸ್ತೆ ತಡೆಯೂ ನಡೆಯುತ್ತದೆ.

ಸರಕಾರಿ ವೈದ್ಯರು, ಖಾಸಗಿ ವೈದ್ಯರು, ಸಂಘಪರಿವಾರದ ಜನಗಳು ಜಂಟಿಯಾಗಿ ನಡೆಸಿದ ಈ ಪ್ರತಿಭಟನೆ ತೀವ್ರ ಸ್ವರೂಪ, ಆಯಾಮಗಳನ್ನು ಪಡೆಯುತ್ತದೆ. ವಿಷಯ “ವೈದ್ಯರು ಹಾಗೂ ರೋಗಿಯ ಕುಟುಂಬ” ಹೋಗಿ “ವೈದ್ಯರು ಹಾಗೂ ಮುಸ್ಲಿಮರು” ಎಂದಾಗಿ ಬದಲಾಗುತ್ತದೆ. ಅಲ್ಲಿಗೆ ಸಂಘಪರಿವಾರದ ಪ್ರಯೋಗಶಾಲೆಯ ರಾಜಧಾನಿ ಪುತ್ತೂರಿನಲ್ಲಿ ಹೊಸ ಪ್ರಯೋಗದ ಪರೀಕ್ಷೆ ಯಶಸ್ವಿಯಾಗಿ ನಡೆಯುತ್ತದೆ. ಪೊಲೀಸರು ಬೇರೆ ದಾರಿ ಕಾಣದೆ ರೋಗಿಯ ಕುಟುಂಬದ ತಾಯಿ, ಮಗನ ಮೇಲೆ ವೈದ್ಯಕೀಯ ಸೇವೆ ಸುರಕ್ಷಾ ಕಾಯ್ದೆ ಸಹಿತ ವೈದ್ಯ “ಪರಿವಾರ” ಆದೇಶಿಸಿದ ಎಲ್ಲಾ ಕಠಿಣ ಸೆಕ್ಷನ್ ಗಳನ್ನು ಒಳಗೊಂಡು ಎಫ್ಐಆರ್ ದಾಖಲಿಸುತ್ತಾರೆ.

ವೈದ್ಯಕೀಯ ಧರ್ಮ ಕೈ ಬಿಟ್ಟದ್ದು ಎಷ್ಟು ಸರಿ ?

ತಾಲೂಕು ವೈದ್ಯರ ಸಂಘ ಪ್ರಕರಣಕ್ಕೆ ಮತೀಯ ಬಣ್ಣ ಬಳಿದದ್ದು, ಮುಸ್ಲಿಂ ದ್ವೇಷಕ್ಕೆ ಕುಖ್ಯಾತರಾದ ಸಂಘಪರಿವಾರದ ಮುಖಂಡರ ಜೊತೆ ಸೇರಿ ಪ್ರತಿಭಟನೆ ಹಮ್ಮಿಕೊಂಡದ್ದು, ಮತೀಯ ದ್ವೇಷದ ಮಾತುಗಳಿಗೆ ಅವಕಾಶ ಮಾಡಿಕೊಟ್ಟದ್ದು, ಮಾತಿನ ಚಕಮಕಿಯಂತಹ ಸಾಮಾನ್ಯ ಘಟನೆಗೆ ತಾಲೂಕಿನಾದ್ಯಂತ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿದ್ದು, ಮುತ್ತಿಗೆ, ರಸ್ತೆ ತಡೆಯಂತಹ ತೀವ್ರರೀತಿಯ ಪ್ರತಿಭಟನೆ ನಡೆಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ನಾಗರಿಕ ವಲಯದಲ್ಲಿ ಸಹಜವಾಗಿಯೆ ಮೂಡಿದೆ. ಈ ಪ್ರಶ್ನೆಯನ್ನು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾಧ್ಯಮ ಹೇಳಿಕೆಯ ಮೂಲಕ ಬಹಿರಂಗವಾಗಿಯೆ ಕೇಳಿದರು. ವೈದ್ಯರ ನಡೆಯನ್ನು ಖಂಡಿಸಿದರು.

ಇದು ಜಿಲ್ಲೆಯಲ್ಲಿ ಚರ್ಚೆಯನ್ನು ಹುಟ್ಟುಹಾಕಿತು. ವೈದ್ಯರ ಸಂಘದ ಕಾರ್ಯದರ್ಶಿ ಮುದ್ರಾಜೆ, ಹಾಗೂ ದೂರುದಾರೆ ಸರಕಾರಿ ವೈದ್ಯೆಯ ಪತಿ ಡಾ. ಪುತ್ತೂರಾಯ ಈ ಹಿಂದೆ ನೀಡಿದ್ದ ಮತೀಯವಾದಿ ಹೇಳಿಕೆ, ಸಂಘಪರಿವಾರದ ಪರವಾದ ನಿಲುವುಗಳನ್ನು ತಮ್ಮ ಹೇಳಿಕೆಯಲ್ಲಿ ಮುನೀರ್ ಉಲ್ಲೇಖಿಸಿದ್ದರು. ಇದರಿಂದ ತೀವ್ರ ಮುಜುಗರಕ್ಕೊಳಗಾದ “ಸ್ವಯಂ ಸೇವಕ” ವೈದ್ಯರುಗಳು ಮುನೀರ್ ಕಾಟಿಪಳ್ಳ ಹಾಗೂ ಹೇಳಿಕೆ ಪ್ರಕಟಿಸಿದ ವಾರ್ತಾ ಭಾರತಿ ಪತ್ರಿಕೆಯ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ವಿರುದ್ದ ದೂರು ದಾಖಲಿಸಿದರು. ಕೋಮ ಸಂಘರ್ಷಕ್ಕೆ ಕುಮ್ಮಕ್ಕು, ವೈದ್ಯಕೀಯ ಸೇವಾ ಸುರಕ್ಷಾ ಕಾಯ್ದೆಯಂತಹ ಕಠಿಣ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಾಗಿ ಪಟ್ಟು ಹಿಡಿದರು.

ಆದರೆ, ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ನಿಯಮಗಳ ಉಲ್ಲಂಘನೆಯ ಯಾವುದೇ ಅಂಶಗಳು ಇಲ್ಲದೆ ಇರುವುದರಿಂದ ಪೊಲೀಸರು ಎಫ್ಐಆರ್ ದಾಖಲಿಸುವುದು ಸಾಧ್ಯ ಇಲ್ಲ ಎಂದು ಎನ್ ಸಿ ಆರ್ ದಾಖಲಿಸಿ ಸುಮ್ಮನಾದರು. ಆದರೂ ಪಟ್ಟು ಬಿಡದ ವೈದ್ಯ “ಪರಿವಾರ” ಮೇಲಿನ ಅಧಿಕಾರಿಗಳಿಗೆ ಮನವಿ, ಖಂಡನಾ ಹೇಳಿಕೆಯನ್ನು ನೀಡಿ ತಿದ್ದುಪಡಿ ಎಫ್ಐಆರ್ ದಾಖಲಿಸುವಂತೆ ಪಟ್ಟು ಹಿಡಿಯಿತು. ‘ಭಾರತ ವೈದ್ಯರ ಸಂಘ’ದ ಮಂಗಳೂರು ಘಟಕವೂ ಕೈ ಜೋಡಿಸಿತು. ಆದರೂ, ಪೊಲೀಸರು ಎಫ್ಐಆರ್ ದಾಖಲಿಸಲು ಅವಕಾಶ ಇಲ್ಲ ಎಂದು ಕೈ ಚೆಲ್ಲಿದರು. ಇದರಿಂದ ಹತಾಷರಾದ ವೈದ್ಯ “ಪರಿವಾರ” ದ ಕಾರ್ಯದರ್ಶಿ ಡಾ‌. ಗಣೇಶ್ ಪ್ರಸಾದ್ ಮುದ್ರಾಜೆ, ಮುನೀರ್ ಕಾಟಿಪಳ್ಳರಿಗೆ ಪಾಠ ಕಲಿಸಿಯೇ ಸಿದ್ದ ಎಂದು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ, ನ್ಯಾಯಾಲಯದಿಂದ ಸೂಚನೆ ಕೊಡಿಸಿ ತಾವು ಇಚ್ಚಿಸಿದ ಸೆಕ್ಷನ್ ಗಳ ಅಡಿ ಮುನೀರ್ ಕಾಟಿಪಳ್ಳ ಹಾಗೂ ವಾರ್ತಾ ಭಾರತಿಯ ಸಂಪಾದಕರ ಮೇಲೆ ಮೊಕದ್ದಮೆ ದಾಖಲಿಸುವುದರಲ್ಲಿ ಯಶಸ್ವಿಯಾದರು .

ಉಲ್ಟಾ ಹೊಡೆದ ವೈದ್ಯ “ಪರಿವಾರ”ಲೆಕ್ಕಾಚಾರ, ಎದ್ದು ಬಂದ ಜನಾಕ್ರೋಶ

ತುಳುನಾಡಿನ ಮತೀಯ ರಾಜಕಾರಣದ ಸಹಜ ಲೆಕ್ಕಾಚಾರದ ಪ್ರಕಾರ, ಮುನೀರ್ ಕಾಟಿಪಳ್ಳರ ಮೇಲೆ ಪ್ರಕರಣ ಹೂಡಿದ್ದಕ್ಕೆ ಜನ ಶಹಬ್ಬಾಸ್ ಗಿರಿ ನೀಡುತ್ತಾರೆ‌ ಎಂಬ “ಪರಿವಾರ” ವೈದ್ಯರ ಲೆಕ್ಕಾಚಾರ ತಲೆಕೆಳಗಾಗುವ ರೀತಿಯಲ್ಲಿ ಪ್ರಜ್ಞಾವಂತ ಜನತೆ ವೈದ್ಯರ ಸಂಘದ ಈ ನಡೆಯ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಬಲ ವಿರೋಧ ವ್ಯಕ್ತಪಡಿಸಿದರು. ಮುನೀರ್ ಕಾಟಿಪಳ್ಳ ಹಾಗೂ ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕರ ಬೆಂಬಲಕ್ಕೆ ನಿಂತರು‌. ಒಂದು ವಿಭಾಗದ ವೈದ್ಯರ ಮುಸ್ಲಿಂ ವಿರೋಧಿ ದೋರಣೆ, ಕೋಮು ರಾಜಕಾರಣ, ವ್ಯಾಪಾರೀ ಮನೋಧರ್ಮದಿಂದ, ವೈದ್ಯರ ಕುರಿತು ಜನಸಾಮಾನ್ಯರು ನಂಬಿಕೆ ಕಳೆದುಕೊಳ್ಳುತ್ತಿರುವುದನ್ನೂ ಈ ಪ್ರಕರಣಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಎತ್ತಿತೋರಿಸಿದೆ.

ವೈದ್ಯರ ಸಂಘದ ನಡೆ ದಕ್ಷಿಣ ಕನ್ನಡ ಜಿಲ್ಲೆಗೆ ಹೊಸತಲ್ಲ

ಪುತ್ತೂರಿನ ಪರಿವಾರ ಸಿದ್ದಾಂತಿ ವೈದ್ಯರ ಮತೀಯ ಪಕ್ಷಪಾತಿ ನಡೆಗಳು ಪುತ್ತೂರಿಗೆ ಹೊಸದೇನಲ್ಲ. ಪತ್ತೂರಿನಲ್ಲಿ ನರ್ಸಿಂಗ್ ಹೋಂ ಹೊಂದಿರುವ ಡಾ. ಪ್ರಸಾದ್ ಭಂಡಾರಿ ಎಂಬ ಹಿರಿಯ ವೈದ್ಯರು ಸಂಘಪರಿವಾರದ ಅಧಿಕೃತ ಮುಖಂಡರು. ಇವರು ಯಾವ ಹಿಂಜರಿಕೆಯೂ ಇಲ್ಲದೆ ಕೋಮು ಪ್ರಚೋದಕ ಮಾತುಗಳನ್ನು ಹಲವು ಸಂದರ್ಭಗಳಲ್ಲಿ ಆಡಿದ್ದಾರೆ. ಬಿಜೆಪಿ ಪರ ಚುನಾವಣಾ ಕೆಲಸಗಳಲ್ಲಿ ಬಹಿರಂಗವಾಗಿಯೇ ತೊಡಗಿಸಿಕೊಂಡಿದ್ದಾರೆ.  ಈ ಬಾರಿಯ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಡಾ.‌ಪುತ್ತೂರಾಯರು ಕೊರೋನಾ ಸಂದರ್ಭದಲ್ಲಿ “ಕೊರೋನಾ ಹೇಗೂ ಭಾರತಕ್ಕೆ ಬಂದಿದ್ದೀಯಾ, ಮೋದಿ ವಿರೋಧಿಗಳನ್ನು ಭೇಟಿಯಾಗಿ (ಬಲಿ ಪಡೆದು) ಹೋಗು” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಇವರೂ ಪರಿವಾರದ ಅಜೆಂಡಾ ಜಾರಿಗೊಳಿಸುವುದರಲ್ಲಿ ಸಕ್ರಿಯರಾಗಿರುತ್ತಾರೆ. ಮುನೀರ್ ಕಾಟಿಪಳ್ಳ ಹಾಗೂ ವಾರ್ತಾಭಾರತಿ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಿರುವ, ಪುತ್ತೂರು ವೈದ್ಯರ ಸಂಘದ ಕಾರ್ಯದರ್ಶಿ  ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಅವರಂತೂ ತಾಲೂಕು ವೈದ್ಯರ ಸಂಘವನ್ನು ಪರಿವಾರದ ಸಹಭಾಗಿ ಸಂಘದ ಮಟ್ಟಿಗೆ ಇಳಿಸಿದ ಕುಖ್ಯಾತಿಗೆ ಗುರಿಯಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭ “ಪುತ್ತೂರಿಗೆ ಕ್ಷಾತ್ರ ತೇಜಸ್ಸಿನ ಶಾಸಕನ ಅಗತ್ಯ ಇದೆ. ಪುತ್ತೂರು ಕೇರಳದ ಜೊತೆಗೆ ಗಡಿ ಹಂಚಿಕೊಂಡಿದೆ.‌.” ಎಂಬ ಲೇಖನವನ್ನೇ ಬರೆದು ಆಕ್ರಮಣಕಾರಿ ಹಿಂದುತ್ವವಾದದ ಪರ ಬ್ಯಾಟ್ ಬೀಸಿದ್ದರು.

ಮತೀಯವಾದ, ವ್ಯಾಪಾರೀ ಹಿತಾಸಕ್ತಿ ಎತ್ತಿಹಿಡಿಯುವುದರಲ್ಲೆ ಹೆಚ್ಚು ಆಸಕ್ತಿ

ಮಂಗಳೂರು ಕೋಮುವಾದ ರಾಜಧಾನಿಯೂ ಹೌದು, ಖಾಸಗಿ ಆರೋಗ್ಯ ರಂಗದ ರಾಜಧಾನಿಯೂ ಹೌದು. ಒಂಬತ್ತು ಖಾಸಗಿ ಮೆಡಿಕಲ್ ಕಾಲೇಜು, ಬೀದಿಗೊಂದು ಖಾಸಗಿ ಆಸ್ಪತ್ರೆ ಇರುವ ಮಂಗಳೂರು ವೈದ್ಯಕೀಯ ಕ್ಷೇತ್ರದ ಸಾಧನೆಗೆ ಖ್ಯಾತಿ ಪಡೆದಂತೆ, ವ್ಯಾಪಾರೀಕರಣಕ್ಕೆ ಕುಖ್ಯಾತವೂ ಆಗಿದೆ. ಅದರೊಂದಿಗೆ ವೈದ್ಯರಲ್ಲಿ ಒಂದು ವಿಭಾಗ ಸಂಘ ಪರಿವಾರದ ವಿಚಾರಗಳಿಂದಲೂ ಪ್ರಭಾವಿತವಾಗಿದೆ. ಮಂಗಳೂರು ಐಎಂಎ ನಾಯಕತ್ವ ಇಂತಹ ವೈದ್ಯರ ಕೈಯ್ಯಲ್ಲಿದೆ. ಮಂಗಳೂರು ಐಎಂಎ ಗೆ ವೈದ್ಯಕೀಯ ರಂಗದ ಘನತೆ ಎತ್ತಿಹಿಡಿಯುವುದಕ್ಕಿಂತ, ಮತೀಯವಾದ, ವ್ಯಾಪಾರಿ ಹಿತಾಸಕ್ತಿ ಎತ್ತಿಹಿಡಿಯುವುದರಲ್ಲೆ ಹೆಚ್ಚು ಆಸಕ್ತಿ.

ಸಹಜವಾಗಿಯೆ ಮಂಗಳೂರು ಐಎಂಎ ಘಟಕ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ವಿರುದ್ಧದ ಷಡ್ಯಂತ್ರದಲ್ಲಿ ಪುತ್ತೂರು ಐಎಂಎ ಘಟಕಕ್ಕೆ ಬೆನ್ನೆಲುಬಾಗಿ ನಿಂತಿತು. ಮಂಗಳೂರಿನಲ್ಲಿ ನಡೆಯುತ್ತಿರುವ ಆರೋಗ್ಯ ಕ್ಷೇತ್ರದ ವ್ಯಾಪಾರೀಕರಣ, ರೋಗಿಗಳಿಗೆ ವಿಧಿಸುವ ದುಬಾರಿ ಬಿಲ್ ಗಳ ವಿರುದ್ದ ಎಡಪಂಥೀಯ ಚಳವಳಿಗಳು ಹೋರಾಟಗಳನ್ನು ಸಂಘಟಿಸುವುದು, ಖಾಸಗಿ, ಕಾರ್ಪೊರೇಟ್ ಆಸ್ಪತ್ರೆಗಳ ಸುಲಿಗೆ ನೀತಿಗಳ ವಿರುದ್ದ ಪ್ರತಿಭಟನೆಗಳನ್ನು ನಡೆಸುವುದು, ಅಂತಹ ಹೋರಾಟಗಳಲ್ಲಿ ಸಿಪಿಐ(ಎಂ) ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮುಂಚೂಣಿಯಲ್ಲಿ ಇರುವುದು, ಮೊದಲೆ ಮಂಗಳೂರಿನ “ಪರಿವಾರ” ವೈದ್ಯರ ಕೆಂಗಣ್ಣಿಗೆ ಗುರಿಯಾಗಿತ್ತು‌. ಪುತ್ತೂರು ವೈದ್ಯರ ಕೂಟ ಷಡ್ಯಂತ್ರ ರಚಿಸಿದಾಗ ಮಂಗಳೂರು ಐಎಂಎ ಸಹ ಜೊತೆ ಸೇರಿತು.

ತನ್ನ ರಾಷ್ಟ್ರ ಘಟಕದ ನಿಲುವಿಗೆ ವ್ಯತಿರಿಕ್ತವಾದ ನಿಲುವು

ಮಂಗಳೂರಿನಲ್ಲಿ ಆರೋಗ್ಯ ಕ್ಷೇತ್ರದ ಕಾರ್ಪೊರೇಟಿಕರಣ ಉಂಟು ಮಾಡಿರುವ ತಲ್ಲಣಗಳ ಕುರಿತು ಒಂದು ಚಕಾರವನ್ನೂ ಎತ್ತದ ಐಎಂಎ ಘಟಕ ಮುಸ್ಲಿಮರ ವಿಚಾರ ಬಂದಾಗ ಕೋಮುವಾದಿ ನಿಲುವು ತೆಗೆದುಕೊಂಡದ್ದಕ್ಕೆ ಹಲವು ಘಟನೆಗಳು ಸಾಕ್ಷಿ ನುಡಿಯುತ್ತವೆ. ಅದರಲ್ಲಿ ಒಂದು, ಎನ್ಆರ್ ಸಿ, ಸಿಎಎ ಹೋರಾಟದ ಸಂದರ್ಭದ ಮಂಗಳೂರು ಗೋಲಿಬಾರ್ ಘಟನೆ. ಆ ಗೋಲಿಬಾರ್ ನಲ್ಲಿ ಇಬ್ಬರು ಮುಸ್ಲಿಂ ಯುವಕರು ಮೃತರಾಗಿ, ಹಲವರು ಗಾಯಗೊಂಡಿದ್ದರು. ಹಾಗೆ ಗಾಯಗೊಂಡವರನ್ನು ನಗರದ ಹೈಲಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಸ್ಲಿಂ ಮಾಲಕತ್ವದ ಈ ಆಸ್ಪತ್ರೆಗೂ ನುಗ್ಗಿದ ಪೊಲೀಸರು, ಆಸ್ಪತ್ರೆ ಆವರಣದಲ್ಲಿ ಅಶ್ರುವಾಯು ಸಿಡಿಸಿದ್ದರು, ತೀವ್ರ ನಿಗಾ ಘಟಕಕ್ಕೂ ನುಗ್ಗಿ ದೌರ್ಜನ್ಯ ಎಸಗಿದ್ದರು.

ಈ ಘಟನೆಯನ್ನು ಐಎಂಎ ರಾಷ್ಟ್ರೀಯ ಘಟಕ ಬಲವಾಗಿ ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿತ್ತು‌. ಆದರೆ, ಆಘಾತಕಾರಿ ವಿದ್ಯಾಮಾನದಲ್ಲಿ ಐಎಂಎ ಮಂಗಳೂರು ಘಟಕವು ತನ್ನ ರಾಷ್ಟ್ರ ಘಟಕದ ನಿಲುವಿಗೆ ವ್ಯತಿರಿಕ್ತವಾದ ನಿಲುವು ಪ್ರಕಟಿಸಿತು. ಹೈಲ್ಯಾಂಡ್ ಆಸ್ಪತ್ರೆಯಲ್ಲಿ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿತು. ಗೋಲಿಬಾರ್ ಗೂ ಸಮರ್ಥನೆ ಒದಗಿಸಿತು‌. ಇದು ಕೋಮುವಾದ ಹಾಗೂ ಖಾಸಗಿ ಆರೋಗ್ಯ, ಶಿಕ್ಷಣ ಕ್ಷೇತ್ರದ ರಾಜಧಾನಿ ದಕ್ಷಿಣ ಕನ್ನಡದ ವೈದ್ಯಲೋಕದ ಕತೆ. ಪುತ್ತೂರು ಘಟನೆ ಅದರ ಒಂದು ನಿರ್ಲಜ್ಜ ತುಣುಕು ಮಾತ್ರ.

ಇದನ್ನೂ ಓದಿ: ಪಿಚ್ಚರ್‌ ಪಯಣ 159 | ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮೂರು ಸಿನಿಮಾಗಳತ್ತ ಒಂದು ನೋಟ

Donate Janashakthi Media

Leave a Reply

Your email address will not be published. Required fields are marked *