- ಸರ್ಕಾರಿ ಐಟಿಐಗಳ ಉನ್ನತೀಕರಣಕ್ಕೆ ಟಾಟಾ ಟೆಕ್ನಾಲಜೀಸ್ ಜೊತೆ ಒಪ್ಪಂದ
ಬೆಂಗಳೂರು : ದೀಪಾವಳಿ ಹಬ್ಬದ ವೇಳೆ ಪಟಾಕಿ ಹೊಡೆಯುವುದನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳಿಗೆ ಸಿಎಂ ಈ ವಿಚಾರ ತಿಳಿಸಿದ್ದಾರೆ. ಪಟಾಕಿ ವಿಚಾರವನ್ನು ಚರ್ಚೆ ಮಾಡಿದ್ದೇನೆ. ನಿಷೇಧಿಸಬೇಕೆಂದು ನಿರ್ಧರಿಸಿದ್ದೇವೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಆದೇಶ ಹೊರಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಪಟಾಕಿಯನ್ನು ನಿಷೇಧಿಸುವ ಕುರಿತು ರಾಜ್ಯ ಸರ್ಕಾರ ತಜ್ಞರ ಸಮಿತಿಯನ್ನ ನೇಮಿಸಿತ್ತು. ಸಮಿತಿ ನಿನ್ನೆ ತನ್ನ ವರದಿಯನ್ನು ಸಲ್ಲಿಸಿ, ಪಟಾಕಿ ನಿಷೇಧಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ. ಈ ಸಮಿತಿ ಶಿಫಾರಸನ್ನು ಆಧರಿಸಿ ರಾಜ್ಯ ಸರ್ಕಾರ ಪಟಾಕಿ ನಿಷೇಧಕ್ಕೆ ನಿರ್ಧರಿಸಿದೆ.
ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಸಿಎಂ, ನೂರಕ್ಕೆ ನೂರು ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ಏನೇ ಹೇಳಬೇಕಾದರೆ ನೂರಾರು ಬಾರಿ ಲೆಕ್ಕಾಚಾರ ಹಾಕಿಯೇ ಹೇಳುವುದು. ಇದುವರೆಗೂ ನಾನು ಹೇಳಿದ್ದು ಸುಳ್ಳಾಗಿಲ್ಲ. ಈಗ ಉಪಚುನಾವಣೆಯಲ್ಲೂ ನಾನು ಹೇಳಿದಂತೆಯೇ ಆಗಲಿದೆ ಎಂದರು.
ಸಂಪುಟ ವಿಸ್ತರಣೆ ವಿಚಾರವನ್ನು ಪ್ರಸ್ತಾಪಿಸಿದ ಅವರು, ಉಪಚುನಾವಣೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ. ರಿಸಲ್ಟ್ ಬಂದ ನಂತರ ಫೋನ್ ಮೂಲಕ ವರಿಷ್ಠರನ್ನು ಸಂಪರ್ಕ ಮಾಡಿ ವಿಸ್ತರಣೆ ಮಾಡಬಹುದಾ ಎಂದು ನೋಡುತ್ತೇನೆ. ಇಲ್ಲದಿದ್ದರೆ 11ನೇ ತಾರೀಖು ನಾನೂ ಖುದ್ದಾಗಿ ದೆಹಲಿಗೆ ಹೋಗಿ ಬರುತ್ತೇನೆ ಎಂದು ತಿಳಿಸಿದರು.
ಮದಲೂರು ಕೆರೆಗೆ 3 ತಿಂಗಳಲ್ಲಿ ನೀರು:
ಮದಲೂರು ಕೆರೆಗೆ ಆರು ತಿಂಗಳಲ್ಲಿ ನೀರು ಹರಿಸಿಲ್ಲ ಎಂದರೆ ವಿಧಾನಸೌಧಕ್ಕೆ ಪಾದಯಾತ್ರೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಆರಲ್ಲ ಮೂರೇ ತಿಂಗಳಲ್ಲಿ ಮದಲೂರು ಕೆರೆಗೆ ನೀರು ಹರಿಸುತ್ತೇವೆ ಎಂದರು.
ತುಮಕೂರು ಡಿಸಿ ಜೊತೆ ಚರ್ಚೆ ಮಾಡಿದ್ದೇನೆ. ಕೆರೆ ಸ್ವಚ್ಛಗೊಳಿಸಿ ಕಾಲುವೆ ಮೂಲಕ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ. ಹೀಗಾಗಿ, ಮೂರೇ ತಿಂಗಳಲ್ಲಿ ನೀರು ತುಂಬಿಸುತ್ತೇನೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಸರ್ಕಾರಿ ಐಟಿಐಗಳ ಉನ್ನತೀಕರಣಕ್ಕೆ ಟಾಟಾ ಟೆಕ್ನಾಲಜೀಸ್ ಜೊತೆ ಒಪ್ಪಂದ:
ಇದೇ ವೇಳೆ, ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಟಾಟಾ ಟೆಕ್ನಾಲಜೀಸ್ ಸಂಸ್ಥೆಯ ನಡುವೆ ಒಡಂಬಡಿಕೆ ನಡೆಯಿತು. ರಾಜ್ಯದ 150 ಸರ್ಕಾರಿ ಐಟಿಐಗಳನ್ನು ಟಾಟಾ ಟೆಕ್ನಾಲಜೀಸ್ ಸಂಸ್ಥೆಯ ನಿರ್ವಹಣೆಗೆ ವಹಿಸಲು ಈ ಒಡಂಬಡಿಕೆ ಆಗಿದೆ. ಸಿಎಂ ಯಡಿಯೂರಪ್ಪ, ಉಪಮುಖ್ಯಮಂತ್ರಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಅಶ್ವಥ ನಾರಾಯಣ ಮತ್ತು ಟಾಟಾ ಸಂಸ್ಥೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೈಗಾರಿಕೆಗಳಿಗೆ ಅಗತ್ಯ ಇರುವ ಸ್ಮಾರ್ಟ್ ಪ್ರಾಡಕ್ಟ್ಗಳನ್ನ ಪೂರೈಸಲು ನಮ್ಮ ಐಟಿಐ ಕಾಲೇಜುಗಳು ಸನ್ನದ್ಧವಾಗಿಲ್ಲ. ಇಂಥ ವೃತ್ತಿಪರ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ತರಬೇತಿ ಸಿಕ್ಕರೆ ಅವರಿಗೆ ಉತ್ತಮ ಉದ್ಯೋಗಾವಕಾಶ ಸಿಗುತ್ತದೆ. ಈ ಉಪಕ್ರಮದಿಂದ ಕೈಗಾರಿಕೋದ್ಯಮಕ್ಕೆ ಲಾಭದಾಯಕವಾಗುತ್ತದೆ. 4,636 ಕೋಟಿ ವೆಚ್ಚದಲ್ಲಿ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.