ಪಶ್ಚಿಮ ಬಂಗಾಲದಲ್ಲಿ ಒಟ್ಟು 294 ಕ್ಷೇತ್ರಗಳು ಇವೆ. ಆಡಳಿತವನ್ನು ನಡೆಸಲು 148 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಬೇಕು. ಆ ಗೆಲುವಿಗಾಗಿ ತೃಣಮೂಲ ಕಾಂಗ್ರೆಸ್, ಎಡಪಕ್ಷಗಳ ಮೈತ್ರಿಕೂಟ, ಮತ್ತು ಬಿಜೆಪಿ ನೇರಾನೇರ ಫೈಟ್ ನಡೆಸುತ್ತಿವೆ.
– ಗುರುರಾಜ ದೇಸಾಯಿ
ಪಶ್ಚಿಮ ಬಂಗಾಲದಲ್ಲಿ ಚುನಾವಣ ಕಾವು ಜೋರಾಗಿದೆ. ಎಡಪಕ್ಷಗಳ ಮೈತ್ರಿಕೂಟ, ತೃಣಮೂಲ ಕಾಂಗ್ರೆಸ್, ಬಿಜೆಪಿ, ತಮ್ಮದೇ ರೀತಿಯಲ್ಲಿ ಪ್ರಚಾರವನ್ನು ಆರಂಭಿಸಿವೆ. ಚುನಾವಣೆ ನಡೆಯುತ್ತಿರುವ ಪಂಚರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಚುನಾವಣೆ ಗಮನ ಸೆಳೆದಿದ್ದು, ಈ ಬಾರಿ ಗೆಲ್ಲುವವರು ಯಾರು? ಆಡಳಿತ ಪಕ್ಷದ ವಿರೋಧಿ ಅಲೆ ಬಿಜೆಪಿಗೆ ಲಾಭವಾಗುತ್ತಾ ಅಥವಾ ಎಡಪಕ್ಷಗಳ ಮೈತ್ರಿಕೂಟಕ್ಕೆ ಲಾಭವಾಗುತ್ತಾ? ಹೇಗಿದೆ ಪಶ್ಚಿಮ ಬಂಗಾಳ ಚುನಾವಣೆ
ಪಶ್ಚಿಮ ಬಂಗಾಲದಲ್ಲಿ ಪ್ರಥಮ ಹಂತದ ಮತದಾನ ಮುಗಿದಿದ್ದು, ಎರಡನೇ ಹಂತಕ್ಕೆ ವೇದಿಕೆ ಸಿದ್ಧವಾಗಿದೆ. ಒಟ್ಟು ಎಂಟು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ. ಪಶ್ಚಿಮ ಬಂಗಾಲದಲ್ಲಿ ಒಟ್ಟು 294 ಕ್ಷೇತ್ರಗಳು ಇವೆ. ಆಡಳಿತವನ್ನು ನಡೆಸಲು 148 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಬೇಕು. ಆ ಗೆಲುವಿಗಾಗಿ ತೃಣಮೂಲ ಕಾಂಗ್ರೆಸ್, ಎಡಪಕ್ಷಗಳ ಮೈತ್ರಿಕೂಟ, ಮತ್ತು ಬಿಜೆಪಿ ನೇರಾನೇರ ಫೈಟ್ ನಡೆಸುತ್ತಿವೆ.
ಸಿಎಂ ಮಮತಾ ಬ್ಯಾನರ್ಜಿ ಈ ಬಾರಿ ಬ್ಯಾಂಡೇಜ್ ಧರಿಸಿ ವೀಲ್ ಚೇರ್ ನಲ್ಲಿಯೇ ಪ್ರಚಾರ ನಡೆಸಿ ಅನುಕಂಪವನ್ನು ಗಳಿಸಲು ಪ್ರಯತ್ನವನ್ನು ನಡೆಸಿದರೆ, ಬಿಜೆಪಿ ಆಪರೇಷನ್ ಕಮಲದ ಮೂಲಕ ಟಿಎಂಸಿ ಶಾಸಕರನ್ನು ಪ್ರಮುಖ ಮುಖಂಡರುಗಳನ್ನು ತನ್ನತ್ತ ಸೆಳೆದು ಇನ್ನೊಬ್ಬರ ಮನೆಗೆ ಯಜಮಾನನಾಗುವ ಪ್ರಯತ್ನವನ್ನು ನಡೆಸಿದೆ. 35 ವರ್ಷಗಳ ಕಾಲ ಐತಿಹಾಸಿಕ ಆಡಳಿತ ನಡೆಸಿದ ಎಡಪಕ್ಷಗಳು ಕಾಂಗ್ರೆಸ್ ಮತ್ತು ಐಎಸ್ಎಫ್ ಪಕ್ಷಗಳ ಜೊತೆಸೇರಿ ಸಂಯುಕ್ತ ರಂಗವನ್ನು ರಚಿಸಿಕೊಂಡು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪೈಪೋಟಿ ನಡೆಸಿದೆ. ಹಾಗಾಗಿ ಪಶ್ಚಿಮ ಬಂಗಾಳದಲ್ಲಿ ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಮೂರು ವರ್ಷಗಳ ಚುನಾವಣಾ ಇತಿಹಾಸವನ್ನು ನೋಡುವುದಾರೆ
2006 | 2011 | 2016 | |
ಸಿಪಿಐಎಂ ನೇತೃತ್ವದ ಎಡರಂಗ | 176 ಸ್ಥಾನ 37.13% | 40 ಸ್ಥಾನ, 30.43% | 26 ಸ್ಥಾನ, 19,75 % |
ಟಿಎಂಸಿ | ಎನ್.ಡಿ.ಎ ಜೊತೆ ಮೈತ್ರಿಯಾಗಿತ್ತು 30 ಸ್ಥಾನಗಳಲ್ಲಿ ಗೆಲುವು 26.64 | 184 ಸ್ಥಾನ, 38.93% | 211 ಸ್ಥಾನ, 44,91% |
ಕಾಂಗ್ರೆಸ್ | 21 ಸ್ಥಾನ 14.71% | 42 ಸ್ಥಾನ, 9.09 % | 44 ಸ್ಥಾನ 12,25% |
ಬಿಜೆಪಿ | ಟಿಎಂಸಿ ಜೊತೆ ಮೈತ್ರಿ | 00 ಸ್ಥಾನ 4.06 % | 3 ಸ್ಥಾನ 10.16 % |
ಲೋಕಸಭೆ ಚುನಾವಣೆ ಕುರಿತು ಹೇಳುವುದಾದರೆ ಒಟ್ಟು ಸ್ಥಾನಗಳ ಸಂಖ್ಯೆ 42
2014 | 2019 | |
ಸಿಪಿಐಎಂ + ಎಡರಂಗ | 2 ಸ್ಥಾನ – 29.71% | 0 ಸ್ಥಾನ. 6.33% |
ತೃಣಮೂಲ ಕಾಂಗ್ರೆಸ್ | 34 ಸ್ಥಾನ – 39.05% | 22 ಸ್ಥಾನ, 43.3% |
ಬಿಜೆಪಿ | 2 ಸ್ಥಾನ – 17.02% | 18 ಸ್ಥಾನ, 40.7% |
ಕಾಂಗ್ರೆಸ್ | 4 ಸ್ಥಾನ 9.58% | 02 ಸ್ಥಾನ 5.67 % |
ಇನ್ನೂ ಪಕ್ವವಾರು ಪ್ರಾಬಲ್ಯ ಹೇಗಿದೆ ಎನ್ನುದನ್ನು ನೋಡೋಣ, ಮೊದಲಿಗೆ ಬಿಜೆಪಿ ಪಕ್ಷದತ್ತ ಗಮನ ಹರಿಸೋಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭದ್ರ ನೆಲೆ ಇಲ್ಲ. ಆದರೆ ತಂತ್ರಗಾರಿಕೆಯ ಮೂಲಕ, ಆಪರೇಷನ್ ಕಮಲದ ಮೂಲಕ, ತೃಣಮೂಲ ಕಾಂಗ್ರೆಸ್ ನ ಮನೆಯನ್ನು ಇಬ್ಬಾಗವಾಗಿಸಿ ಅದೇ ಮನೆಯಲ್ಲಿ ಯಜಮಾನನಾಗುವ ಕನಸು ಕಾಣುತ್ತಿದೆ.
ತೃಣಮೂಲ ಕಾಂಗ್ರೆಸ್ ನ ಪ್ರಮುಖ ಮುಖಂಡರನ್ನು, ಸಚಿವರನ್ನು, ಶಾಸಕರನ್ನು ಆಪರೇಷನ್ ಕಮಲದ ಮೂಲಕ ತನ್ನತ್ತ ಸೆಳೆದ ಬಿಜೆಪಿಗೆ ಸ್ಥಳೀಯವಾದ ನಾಯಕರಿಲ್ಲ ಎಂಬ ವಿಕ್ನಸ್ ಎದ್ದು ಕಾಣುತ್ತಿದೆ. ಬಿಜೆಪಿ ಮತ್ತು ಜನಸಂಘದ ಸಂಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿ ಪಶ್ಚಿಮಬಂಗಾಳ ಮೂಲದವರು, ಇದನ್ನು ಭಾವನಾತ್ಮಕವಾಗಿ ಜನರನ್ನು ಸೆಳೆಯುವುದಕ್ಕಾಗಿ ಬಿಜೆಪಿ ತಂತ್ರವನ್ನು ಹೆಣೆದಿದೆ. ಆದರೆ ಅದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೋ, ಗೊತ್ತಿಲ್ಲ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯೆಲ್ಲಿ ಏನೆಲ್ಲ ಭರವಸೆಗಳನ್ನು ನೀಡಿದೆ ಎನ್ನುವದನ್ನು ನೋಡ್ತಾ ಹೋಗೋಣ, ಪಶ್ಚಿಮ ಬಂಗಾಳದ ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ. 33 ಮೀಸಲಾತಿ, ಧರ್ಮವನ್ನು ಲೆಕ್ಕಿಸದೆ ಎಲ್ಲಾ ಹಬ್ಬಗಳ ಆಚರಣೆ, ಕೆಜಿಯಿಂದ ಪಿಜಿಯವರೆಗೆ ಬಾಲಕಿಯರಿಗೆ ಉಚಿತ ಶಿಕ್ಷಣ, ಸರಕಾರ ರಚನೆಯಾದ ಮೊದಲ ಸಂಪುಟದಲ್ಲಿ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಗಡಿಯನ್ನು ಬಲಪಡಿಸುವುದು. ಒಳನುಸುಳುವಿಕೆಯನ್ನು ಪರಿಶೀಲಿಸಲು ಸಿಸಿಟಿವಿ ಹಾಗೂ ಫೆನ್ಸಿಂಗ್ ಸ್ಥಾಪನೆ, ಮೀನುಗಾರರಿಗೆ ಪ್ರತಿ ವರ್ಷ 6,000 ರೂ. ಬಿಡುಗಡೆ, ರಾಜಕೀಯ ಹಿಂಸಾಚಾರದ ಬಗ್ಗೆ ಎಸ್‌ಐಟಿ ತನಿಖೆ ಇದು ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು
ತೃಣಮೂಲ ಕಾಂಗ್ರೆಸ್ : 1997 ರ ಡಿಸೆಂಬರ್ 22 ರಂದು ಮಮತಾ ಬ್ಯಾನರ್ಜಿಯವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಯಿತು. ಅವರು ತಮ್ಮದೇ ಸ್ವಂತ ಪಕ್ಷವನ್ನು ಸ್ಥಾಪಿಸಿದರು. ಅದಕ್ಕೆ “ತೃಣಮೂಲ ಕಾಂಗ್ರೆಸ್” ಎಂದು ಹೆಸರಿಟ್ಟರು. 1998 ರಲ್ಲಿ ಪಕ್ಷವು ರಚನೆಯಾದ ನಂತರ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಭಾರಿ ಪ್ರತಿಕ್ರಿಯೆಯನ್ನು ಪಡೆಯಲು ಪ್ರಾರಂಭಿಸಿತು. 1998 ರ ಲೋಕಸಭಾ ಚುನಾವಣೆಯಲ್ಲಿ, ಟಿಎಮ್‌ಸಿ 7 ಸ್ಥಾನಗಳಲ್ಲಿ ಜಯಶಾಲಿಯಾಯಿತು.
2001 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಮ್‌ಸಿಯು 60 ಸ್ಥಾನಗಳಲ್ಲಿ ಜಯ ಸಾಧಿಸಿತು. 2004 ರ ಲೋಕಸಭಾ ಚುನಾವಣೆಯಲ್ಲಿ, ಟಿಎಮ್‌ಸಿಯು ಕಳಪೆ ಸಾಧನೆ ತೋರಿ ಕೇವಲ 1 ಸ್ಥಾನದಲ್ಲಿ ಮಾತ್ರ ಜಯ ಸಾಧಿಸಲು ಯಶಸ್ವಿಯಾಯಿತು. 2006 ರ ವಿಧಾನಸಭಾ ಚುನಾವಣೆಯಲ್ಲಿ, ಟಿಎಮ್‌ಸಿ 30 ಸ್ಥಾನಗಳಲ್ಲಿ ಜಯ ಸಾಧಿಸಿತು.
ಅನೇಕ ಪರಿಣತರು, ಚುನಾವಣ ಪಂಡಿತರು ಹಾಗೂ ತೃಣಮೂಲ ಕಾಂಗ್ರೆಸ್‌ನ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಸೇರಿದಂತೆ ಮಮತಾ ಬ್ಯಾನರ್ಜಿ ಅವರೇ ಗೆಲ್ಲಲಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಚುನಾವಣಾ ಪೂರ್ವ ಸಮೀಕ್ಷೆಗಳೂ ಸಹ, ಬಿಜೆಪಿ ತೃಣಮೂಲಕ್ಕೆ ಪ್ರಬಲ ಪೈಪೋಟಿ ಒಡ್ಡಬಹುದು, ಆದರೆ ದೀದಿಯದ್ದೇ ಮೇಲುಗೈಯಾಗಲಿದೆ ಎಂದಿವೆ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಮತಾಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡಿತ್ತು. ಅದೇ ಜನಪ್ರಿಯತೆ ವಿಧಾನಸಭಾ ಚುನಾವಣೆಯಲ್ಲೂ ಅದಕ್ಕೆ ದಕ್ಕಬಹುದೇ ಕಾಯ್ದು ನೋಡಬೇಕಿದೆ.
ಟಿಎಂಸಿಯ ಚುನಾವಣಾ ಪ್ರಣಾಳಿಕೆ ಹೀಗೆದೆ, ಪ್ರತಿ ವರ್ಷ ಪಶ್ಚಿಮ ಬಂಗಾಳದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಮಮತಾ ಬ್ಯಾನರ್ಜಿ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಈ ಮೂಲಕ ಮುಂದಿನ ಅಧಿಕಾರವಧಿಯಲ್ಲಿ ಬಂಗಾಳದ ನಿರುದ್ಯೋಗ ಸಮಸ್ಯೆಗೆ ಮುಕ್ತಿ ಹಾಕುವುದಾಗಿ ಹೇಳಿದ್ದಾರೆ. ಬಡವರ ಮನೆ ಬಾಗಿಲಿಗೆ ಉಚಿತ ರೇಶನ್ ವಿತರಿಸುವುದಾಗಿ ಹೇಳಿದ್ದಾರೆ. ಬಡವರಿಗೆ ಆರ್ಥಿಕ ನೆರವು ನೀಡುವು ಯೋಜನೆ ಭರವಸೆ ನೀಡಿದ್ದಾರೆ. ಸಾಮಾನ್ಯ ಜಾತಿ ಫಲಾನುಭವಿಗಳಿಗೆ ವಾರ್ಷಿಕ 6,000 ರೂ, ಹಿಂದುಳಿದ ಸಮುದಾಯಗಳಿಗೆ ವಾರ್ಷಿಕ 12,000 ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಎಡರಂಗ : ಸಿಪಿಐಎಂ ನೇತೃತ್ವದ ಎಡರಂಗ ಈ ಬಾರಿ ಪ್ರಭಲ ಪೈಪೋಟಿ ನೀಡುತ್ತಿದೆ. ಸತತವಾಗಿ 35 ವರ್ಷಗಳ ಕಾಲ ಆಡಳಿತ ನೀಡಿದ ಖ್ಯಾತಿಯನ್ನು ಎಡರಂಗ ಹೊಂದಿದೆ. ಜ್ಯೋತಿ ಬಸು, ಬುದ್ದೇವ್ ಭಟ್ಟಾಚಾರ್ಯ ರವರು ಮುಖ್ಯಮಂತ್ರಿಯಾಗಿದ್ದವೇಳೆ ಜಾರಿಗೆ ತಂದಿರುವ ಜನಪರ ಕೆಲಸಗಳನ್ನು ಈ ಬಾರಿ ಜನರು ನೆನೆಯುತ್ತಿದ್ದಾರೆ. ಹಾಗಾಗಿ ಪಶ್ಚಿಮ ಬಂಗಾಳದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಎಡರಂಗವು ಈ ಬಾರಿ ಕಾಂಗ್ರೆಸ್ ಹಾಗೂ ಇಂಡಿಯನ್ ಸೆಕ್ಯೂಲರ್ ಫ್ರಂಟ್ ಜತೆ ಮೈತ್ರಿ ಮಾಡಿಕೊಂಡಿದ್ದು, ಅದಕ್ಕೆ ಸಂಯುಕ್ತ ರಂಗ ಎಂದು ಹೆಸರನ್ನಿಡಲಾಗಿದೆ.
ಅತ್ತ ತೃಣಮೂಲವನ್ನು ಇತ್ತ ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಿದೆ. ಪಶ್ಚಿಮ ಬಂಗಾಲದಲ್ಲಿ ಮುಸ್ಲಿಂ ಮತವರ್ಗದ ಸಂಖ್ಯೆ 30 ಪ್ರತಿಶತದಷ್ಟಿದ್ದು, ಅವರು ನಿರ್ಣಾಯಕ ಪಾತ್ರ ವಹಿಸಬಲ್ಲರು. ಈ ಕಾರಣಕ್ಕಾಗಿಯೇ ಎಡ ಮೈತ್ರಿಯು ಇಂಡಿಯನ್ ಸೆಕ್ಯೂಲರ್ ಫ್ರಂಟ್ ಜತೆ ಕೈಜೋಡಿಸಿರುವುದು. ಮುಸ್ಲಿಂ ಮತವರ್ಗ ತೃಣಮೂಲದ ಕಡೆ ಹೋಗುವುದೋ ಅಥವಾ ಎಡ ಮೈತ್ರಿಯೆಡೆಗೋ ನೋಡಬೇಕಿದೆ.
ಎಡರಂಗ ನೇತೃತ್ವದ ಸಂಯುಕ್ತ ರಂಗದ ಪ್ರಣಾಳಿಕೆ ಈ ರೀತಿ ಇದೆ, ಜಾತ್ಯತೀತತೆಯ ತತ್ವಗಳಿಗೆ, ಮುಸ್ಲಿಮರು ಸೇರಿದಂತೆ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಕಾಪಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ. “ಸಿಎಎ, ಎನ್ಆರ್ಸಿ ರಾಜ್ಯದಲ್ಲಿ ಜಾರಿಗೆ ಬರದಂತೆ ಕ್ರಮವಹಿಸುವುದಾಗಿ ಹೇಳಿದೆ. “ಉದ್ಯಮ, ಕೃಷಿ, ಸಹಕಾರಿ ಕ್ಷೇತ್ರಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಉದ್ಯೋಗ ಸೃಷ್ಟಿಗಾಗಿ ಆದ್ಯತೆ ನೀಡಲಿದೆ. ದೊಡ್ಡ ಪ್ರಮಾಣದ ಕೈಗಾರಿಕೆಗಳನ್ನು ನಿರ್ಮಿಸಲು ನಿರ್ದಿಷ್ಟ ಮತ್ತು ಪರಿಣಾಮಕಾರಿ ನೀತಿಗಳನ್ನು ಸಹ ರೂಪಿಸಲಾಗುವುದು ಎಂದು 16 ಪುಟಗಳ ಪ್ರಣಾಳಿಕೆ ತಿಳಿಸಿದೆ.
ಬೆಂಗಾಲಿ ವರ್ಸಸ್ ಹೊರಗಿನವರು : ಪಶ್ಚಿಮ ಬಂಗಾಲದಲ್ಲಿ ಈಗ ಪ್ರಚಾರಗಳಲ್ಲಿ ಹರಿದಾಡುತ್ತಿರುವ ಪ್ರಮುಖ ಘೋಷಣೆಯೆಂದರೆ ಬೆಂಗಾಲಿ ವರ್ಸಸ್ ಹೊರಗಿನವರು ಎನ್ನುವ ಮಾತು. ತೃಣಮೂಲವಷ್ಟೇ ಅಲ್ಲ, ಎಡ ಮೈತ್ರಿಯೂ ಹೀಗೆಯೇ ಹೇಳುತ್ತಿದೆ. ಐಡೆಂಟಿಟಿ ರಾಜಕೀಯ ಈಗ ತಿರುವು ಪಡೆದಿದ್ದು, ಇದೇ ವಿಷಯವನ್ನು ಮುನ್ನೆಲೆಯಲ್ಲಿಟ್ಟು ಬಿಜೆಪಿ, ಪಶ್ಚಿಮ ಬಂಗಾಲದಲ್ಲಿರುವ 30 ಪ್ರತಿಶತಕ್ಕೂ ಅಧಿಕ ಬಂಗಾಲೇತರ ಜನಸಂಖ್ಯೆಯನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಡಾರ್ಜಿಲಿಂಗ್, ಜಲ್ಪಾಯಿಗುರಿ, ಉತ್ತರ ದಿನಾಜು ಮತ್ತು ರಾಜಧಾನಿ ಕೋಲ್ಕತಾದಲ್ಲೂ ಅನ್ಯ ಭಾಷಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಾರ್ಚ್ 28ರಂದು ಮಾಡಿದ ಭಾಷಣ ಇಡಿ ಚುನಾವಣೆಯ ಆಯಾಮವನ್ನೆ ಬದಲಿಸಿದೆ. ಅದು ಏನು ಅಂದ್ರೆ ಪಶ್ಚಿಮ ಬಂಗಾಲದಲ್ಲಿ ಎಡರಂಗದ ಆಳ್ವಿಕೆಯನ್ನು ಕೊನೆಗೊಳಿಸಲು ಟಿಎಂಸಿಗೆ ನೆರವಾದ ಎರಡು ಪ್ರಮುಖ ಘಟನೆಗಳಲ್ಲಿ ಒಂದಾದ ನಂದಿಗ್ರಾಮ್ ‘ಗೋಲೀಬಾರ್’ ಘಟನೆಯ ಹಿಂದೆ ಇದ್ದ ಭಯಾನಕ ಪಿತೂರಿಯ ಬಹಳಷ್ಟು ನಿಜಗಳನ್ನು 14 ವರ್ಷಗಳ ನಂತರ ಬಯಲಿಗೆ ತಂದಿದ್ದಾರೆ.
ಸರಿಯಾಗಿ 14 ವರ್ಷಗಳ ಹಿಂದೆ, ಮಾರ್ಚ್ 14, 2007ರಂದು 14 ತೃಣಮೂಲ ಕಾಂಗ್ರೆಸ್(ಟಿಎಂಸಿ)ನವರು ಎನ್ನಲಾದ 14 ಮಂದಿಯನ್ನು ಪೋಲಿಸರು ಹೊಡೆದು ಕೊಂದರು ಎಂದು ಆಗ ಪ್ರಚಾರ ಮಾಡಲಾಗಿತ್ತು. ಇಲ್ಲಿ ಮಮತಾ ಬ್ಯಾನರ್ಜಿಯವರು ಉಲ್ಲೇಖಿಸಿರುವ ತಂದೆ-ಮಗ ಜೋಡಿ ಎಂದರೆ ಶಿಶಿರ್ ಅಧಿಕಾರಿ ಮತ್ತು ಈ ಬಾರಿ ಈ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಎದುರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುವೇಂದು ಅಧಿಕಾರಿ. ಇವರು ಆಗ ಟಿಎಂಸಿ ಯ ಒಬ್ಬ ಪ್ರಮುಖ ಮುಖಂಡರು ಹಾಗೂ ಮಮತಾ ಬ್ಯಾನರ್ಜಿಯವರ ಪ್ರಮುಖ ಸಹಾಯಕರಲ್ಲಿ ಒಬ್ಬರಾಗಿದ್ದರು. ಈ ಮೂಲಕ ಈಗ ಅವರನ್ನು ಟೀಕಿಸುವ ಭರದಲ್ಲಿ ಮಮತಾ ಬ್ಯಾನರ್ಜಿಯವರು ಅವರೊಂದಿಗೆ, ತಮ್ಮ ಪಾತ್ರವನ್ನೂ ಬಯಲು ಮಾಡಿಕೊಂಡಿದ್ದಾರೆ ಎಂದು ಹಲವು ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ. ಹಾಗಾದ್ರೆ ಮಾರ್ಚ್ 2007ರಲ್ಲಿ ನಂದಿಗ್ರಾಮದಲ್ಲಿ ಏನು ನಡೆಯಿತು ಎಂದು ತಿಳಿಯೋಣ.
ಆಗ ಪಶ್ಚಿಮ ಬಂಗಾಲದಲ್ಲಿ ಎಡರಂಗದ ಆಳ್ವಿಕೆಯಿತ್ತು. ದೇಶದಲ್ಲಿ ಎರಡು ಪೆಟ್ರೋ ರಾಸಾಯನಿಕ ಕೇಂದ್ರಗಳನ್ನು ರಚಿಸುವ ಪ್ರಸ್ತಾವವಿದ್ದು, ಅವುಗಳಲ್ಲಿ ಒಂದನ್ನು ನಂದಿಗ್ರಾಮದಲ್ಲಿ ಸಾರ್ವಜನಿಕ ವಲಯದ ಕಂಪನಿಯ ಸಹಕಾರದಿಂದ ನಿರ್ಮಿಸುವ ಯೋಜನೆಯಿತ್ತು. ಆದರೆ ಇದಕ್ಕೆ ಜಮೀನು ಸ್ವಾಧೀನ ಪಡಿಸಿಕೊಳ್ಳುವಲ್ಲಿ ವಿರೋಧ ಬಂದುದರಿಂದ ಎಡರಂಗ ಸರಕಾರ ಈ ವಿಷಯದಲ್ಲಿ ಮುಂದುವರೆಯುವುದಿಲ್ಲ ಎಂದು ನಿರ್ಧರಿಸಿತು. “ನಂದಿಗ್ರಾಮದ ಜನತೆಗೆ ಬೇಡವಾದರೆ ಒಂದಿಂಚೂ ಜಮೀನನ್ನೂ ಸ್ವಾಧೀನ ಪಡಿಸಿಕೊಳ್ಳುವುದಿಲ್ಲ” ಎಂದು ಆಗ ಮುಖ್ಯಮಂತ್ರಿಯಾಗಿದ್ದ ಬುದ್ಧದೇಬ್ ಭಟ್ಟಾಚಾರ್ಯ ಘೋಷಿಸಿದ್ದರು. ಆದರೂ ಮಾವೋವಾದಿಗಳು ಇದನ್ನು ‘ಮುಕ್ತಾಂಚಲ’ (ವಿಮೋಚಿತ ಪ್ರದೇಶ) ಎಂದು ಘೋಷಿಸಿ ಯುವಕರಿಗೆ ಶಸ್ತ್ರ ತರಬೇತಿ ನೀಡುತ್ತಿದ್ದರು. ಸರಕಾರದ ಯಾವ ಕೆಲಸವೂ ಅಲ್ಲಿ ನಡೆಯದಂತೆ ಮಾಡಿದ್ದರು. ಪಂಚಾಯತಿ ಕಚೇರಿಗಳನ್ನು ಮುಚ್ಚಿದರು, ಇಲ್ಲವೇ ಲೂಟಿ ಮಾಡಿದರು. ಎಲ್ಲ ಅಭಿವೃದ್ಧಿ ಕಾಮಗಾರಿಗಳು ನಿಂತು ಹೋಗಿದ್ದವು. ಇವೆಲ್ಲದರಲ್ಲಿ ಟಿಎಂಸಿ ಮಾವೋವಾದಿಗಳ ಜತೆಗೆ ಕೈಜೋಡಿಸಿತ್ತು.
ಈ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದ ನಾಲ್ವರು ಹಿರಿಯ ಆಡಳಿತ ಮತ್ತು ಪೋಲಿಸ್ ಅಧಿಕಾರಿಗಳು ಮಾರ್ಚ್ 14ರಂದು ಗೋಲೀಬಾರಿನ ಮ್ಯಾಜಿಸ್ಟ್ರೇಟ್ ಅನುಮತಿಯೊಂದಿಗೆ ನಂದಿಗ್ರಾಮ ಪ್ರವೇಶಿಸಿದರು. ಪ್ರತಿರೋಧ ಬಂದಾಗ ಮೊದಲು ಆಶ್ರುವಾಯು ಪ್ರಯೋಗಿಸಿದರು, ರಬ್ಬರ್ ಬುಲೆಟ್ ಹಾರಿಸಿದರು, ನಂತರ ಗೋಲೀಬಾರ್ ನಡೆಸಿದರು. ಅವರ ಪ್ರಕಾರ ಮೂವರು ಜನ ಇದರಿಂದ ಸತ್ತರು. ಆದರೆ ಸತ್ತವರ ಸಂಖ್ಯೆ 14 ಆಗಿತ್ತು. ಈ 14 ಹೆಣಗಳಲ್ಲಿ ಕನಿಷ್ಟ ಆರು ಹೆಣಗಳು ಹರಿತ ಆಯುಧಗಳಿಂದ ಮಾಡಿದ ಗಾಯಗಳ ಗುರುತುಗಳಿದ್ದವು. ಅಂದರೆ ಅವರು ಪೋಲೀಸರ ಗೋಲೀಬಾರಿನಿಂದ ಸತ್ತಿರಲಿಲ್ಲ.
ಆದರೂ ಅಂದು ಅಲ್ಲಿ ಇರದ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ಎಡರಂಗ ಸರಕಾರ ಜನಗಳ ಹೆಣಗಳ ಮೇಲೆ ರಾಜ್ಯಭಾರ ನಡೆಸುತ್ತಿದೆ ಎಂದು ಆರ್ಭಟಿಸಿದರು. ಹವಾಯಿ ಚಪ್ಪಲಿ ಧರಿಸಿದ್ದ ಪೋಲೀಸರು ಜನಗಳ ಮಾರಣ ಹೋಮ ಮಾಡಿದರು ಎಂದು ಪ್ರಚಾರ ಮಾಡಿದರು.
ಕಲ್ಕತ್ತಾ ಹೈಕೋರ್ಟ್ ತಾನಾಗಿಯೇ ಈ ಘಟನೆಯನ್ನು ಗಮನಕ್ಕೆ ತೆಗೆದುಕೊಂಡಿತು. ಆದರೆ ಆ ವೇಳೆಗೆ ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ ಸರಕಾರ ನಿಜವಾದ ಹಲ್ಲೆಕೋರರ ತನಿಖೆ ನಡೆಯದಂತೆ ನೊಡಿಕೊಂಡಿತು ಎನ್ನಲಾಗಿದೆ. ಮೇಲೆ ಹೇಳಿದ ಪೋಲಿಸ್ ಮತ್ತಿತರ ಅಧಿಕಾರಿಗಳು ಟಿಎಂಸಿ ಆಳ್ವಿಕೆಯಲ್ಲಿ ಬಡ್ತಿ ಪಡೆದರು, ಒಬ್ಬರಂತೂ ನಿವೃತ್ತಿಯ ನಂತರ ಟಿಎಂಸಿ ಸೇರಿದರು!
ಈಗ, ಆ 14ರಲ್ಲಿ ಹೆಚ್ಚಿನವರನ್ನು ಕೊಂದ ‘ಚಪ್ಪಲಿಧಾರಿ ‘ಪೋಲೀಸರು’ ನಿಜವಾಗಿಯೂ ಯಾರು ಎಂದು ಸ್ವತಃ ಮುಖ್ಯಮಂತ್ರಿಗಳೇ ಸಂಕೇತ ನೀಡಿದ್ದಾರೆ. ಇದು ಟಿಎಂಸಿ-ಮಾವೋವಾದಿ ಪಿತೂರಿ, ವಾಸ್ತವವಾಗಿ ಹೆಣಗಳ ಮೇಲೆ ಅಧಿಕಾರ ಪಡೆದವರು ಟಿಎಂಸಿ ಯವರು ಎಂದು ಎಡಪಕ್ಷಗಳು ಆಗ ಹೇಳಿದ್ದರಲ್ಲಿ ಸತ್ಯಾಂಶ ಇದೆ ಎಂದುದನ್ನು ಟಿಎಂಸಿಯ ಹಾಲೀ ಮತ್ತು ಮಾಜೀ ಮುಖಂಡರುಗಳೇ ಸಾಬೀತು ಮಾಡುತ್ತಿರುವಂತೆ ಕಂಡು ಬರುತ್ತಿದೆ.
ಚುನಾವಣೆ ಘೋಷಣೆಗೆ ಮೊದಲೆ ನಡೆದ ಪೀಪಲ್ಸ್ ಬ್ರಿಗೇಡ್ ಮತ್ತೊಂದು ಆಯಾಮ ನೀಡಿದೆ. ಬಿಜೆಪಿ ಮತ್ತು ತೃಣಮೂಲಕ್ಕೆ ಪರ್ಯಾಯವಾಗಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಸೇರಿದಂತೆ ಜಾತ್ಯತೀತ ಶಕ್ತಿಗಳು ಒಂದಾಗಿ, ಈ ಬಾರಿಯ ಚುನಾವಣೆ ಎದುರಿಸಲಿದ್ದೇವೆ ಎಂಬ ಗಟ್ಟಿ ದನಿಯನ್ನು ಪೋಪಲ್ಸ್ ಬ್ರಿಗೇಡ್ ಹೆಸರಿನಲ್ಲಿ ಸಮಾವೇಶ ನಡೆಸುವ ಮೂಲಕ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿದೆ. ಬ್ರಿಗೇಡ್ ಸಮಾವೇಶದಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ಸಿನ ಘಟಾನುಘಟಿ ನಾಯಕರೊಂದಿಗೆ ಕೈಗೆ ಕೈ ಜೋಡಿಸಿ ನಿಂತಾಗ, ಸಭೆಯಲ್ಲಿ ನೆರೆದಿದ್ದ ಅಭೂತಪೂರ್ವ ಜನಸಾಗರದ ಜಯಘೋಷವನ್ನು ಹಾಕಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
10 ವರ್ಷದಲ್ಲಿ ಬಂಗಾಳದಲ್ಲಿ ಅಭಿವೃದ್ಧಿಗೆ ಆಧ್ಯತೆ ನೀಡುವ ಬದಲು ಕೋಮುದಾಳಿಗಳು ನಡೆದದ್ದೆ ಹೆಚ್ಚು, ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಜನರ ಸಮಸ್ಯೆಗಳ ಕಡೆ ಗಮನ ನೀಡಿದೆ ಕೋಮುವಿಚಾರಗಳಿಗೆ ಆಧ್ಯತೆ ನೀಡುತ್ತಿದೆ. ಮತಗಳನ್ನು ಸೆಳೆಯುವದಕ್ಕಾಗಿ ಜಾತಿ ಧರ್ಮಗಳನ್ನು ಮುಂದೆ ಮಾಡುತ್ತಿದೆ. ಸ್ವತ: ಮಮತಾ ಬ್ಯಾನರ್ಜಿ ನನ್ನದು ಶಾಂಡಿಲ್ಯ ಗೋತ್ರ ಎಂದು ಹೇಳುವ ಮೂಲಕ ಜಾತಿ, ಧರ್ಮಗಳ ಸುತ್ತ ಗಿರಕಿ ಹೊಡೆಯುತ್ತಿದ್ದಾರೆ. ಎಡರಂಗ ನೇತೃತ್ವದ ಸಂಯುಕ್ತ ರಂಗ ಇಂತಹ ಪ್ರಚಾರಗಳಿಗೆ ಆಧ್ಯತೆ ಕೊಡದೆ ಜನರ ನಿಜವಾದ ಸಮಸ್ಯೆಗಳತ್ತ ಗಮನ ನೀಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಕೋಮುವಾದಕ್ಕೆ, ಕೋಮುಗಲಭೆಗಳಿಗೆ ಅವಕಾಶ ನೀಡದೆ, ಪಶ್ಚಿಮ ಬಂಗಾಳದ ಸೌಹಾರ್ಧತೆಯನ್ನು ಎತ್ತಿಹಿಡಿಯಬೇಕು ಎಂದು ಪ್ರಚಾರವನ್ನು ನಡೆಸುತ್ತಿವೆ.
ಬಂಗಾಳದ ನೆಲದಲ್ಲಿ ತನ್ನ ನೆಲೆ ವಿಸ್ತರಿಸಿಕೊಂಡು ಶತಾಯಗತಾಯ ಅಧಿಕಾರ ಹಿಡಿಯಲೇಬೇಕು ಎಂಬ ಜಿದ್ದಿಗೆ ಬಿದ್ದಿರುವ ಬಿಜೆಪಿ, ತನ್ನೆಲ್ಲಾ ಶಕ್ತಿಯನ್ನು ಅದಕ್ಕಾಗಿ ವ್ಯಯಮಾಡುತ್ತಿದೆ. ಬಿಜೆಪಿಯ ಆಕ್ರಮಣಕಾರಿ ಪ್ರಚಾರ ಮತ್ತು ತಂತ್ರಗಳಿಗೆ ಪ್ರತಿತಂತ್ರಗಳನ್ನು ಹೂಡುತ್ತಲೇ ಇರುವ ಅಧಿಕಾರರೂಡ ತೃಣಮೂಲ ಕಾಂಗ್ರೆಸ್ ನಾಯಕಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಧಿಕಾರ ಉಳಿಸಿಕೊಳ್ಳಲು ಇನ್ನಿಲ್ಲದ ಪಟ್ಟುಗಳನ್ನು ಹೂಡುತ್ತಿದ್ದಾರೆ. ಈ ನಡುವೆ, ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಎಡಪಕ್ಷಗಳು ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು ಸಿಗುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರಗಳು ಕೇಳಿ ಬರುತ್ತಿವೆ.