ಪರ್ಯಾಯ ಮೀಡಿಯಾ ಎಂಬುದಿಲ್ಲ

 “ಮಾಧ್ಯಮ” ಎಂಬುದು ಮೂಲತಃ ಸುದ್ದಿಗಳನ್ನು ಮತ್ತು ಮಾಹಿತಿಗಳನ್ನು ತಿಳಿಯುವ ಒಂದು ಹಾದಿ. ಅದೀಗ ಕೈಗಾರಿಕೀಕರಣಗೊಂಡು “ಉದ್ಯಮ” ಆಗಿರುವುದರಿಂದ, ಅದನ್ನು ಬೇಕಿದ್ದರೆ “ಉತ್ಪನ್ನ” ಎಂದೇ ಕರೆಯಿರಿ. ಹಾಗೆಂದ ಕೂಡಲೆ, ಮಾಧ್ಯಮದ ಮೂಲ ಸ್ವರೂಪ ಬದಲಾಗಬೇಕಿಲ್ಲ.

ಮನೆಯಲ್ಲಿ ಅಕ್ಕಿಯೋ, ಚಹಾ-ಕಾಫಿ ಪುಡಿಯ ಬ್ರ್ಯಾಂಡೊ ಅಥವಾ ಒಂದು ಟೆಲಿವಿಷನ್-ಫ್ರಿಡ್ಜ್ ಬ್ರ್ಯಾಂಡೊ ಅಥವಾ ಬೇಕಿದ್ದರೆ ಒಂದು ಸಿಗರೇಟು-ವಿಸ್ಕಿ ಬ್ರ್ಯಾಂಡೇ ಇರಲಿ… ಆ “ಉತ್ಪನ್ನ” ಬಳಕೆದಾರರಾಗಿ ನಮಗೆ ಸರಿ ಬರದಿದ್ದರೆ, ನಾವೇನು ಮಾಡುತ್ತೇವೆ? ಮುಂದಿನ ಬಾರಿ ಸಲೀಸಾಗಿ, ಬ್ರ್ಯಾಂಡ್ ಬದಲಾಯಿಸುತ್ತೇವೆ. ಅದು ಬಿಟ್ಟು ಬ್ರ್ಯಾಂಡ್ ನಮ್ಮ ನೆಚ್ಚಿನದು ಎಂಬ ಕಾರಣಕ್ಕೆ ಅದೇ ಕಳಪೆ ಮಾಲು ಬಳಸುವುದನ್ನು ಮುಂದುವರಿಸುತ್ತೇವೆಯೆ?

ಹಾಗಿದ್ದರೆ, ನಮ್ಮ “ಮಾಧ್ಯಮ”ಗಳ ವಿಷಯದಲ್ಲಿ, ಅವು ತಮ್ಮ ಮೂಲ ಉದ್ದೇಶವನ್ನು ಮರೆತು ಬೇರೆ ಹಾದಿ ಹಿಡಿದಿದ್ದರೂ, ಕಳಪೆ ಗುಣಮಟ್ಟದ್ದಾಗಿದ್ದರೂ, ಅವಕ್ಕೊಂದು ಸದರ ಸಿಕ್ಕಿದ್ದು ಹೇಗೆ?!

ಈ ಪ್ರಶ್ನೆಗೆ ಉತ್ತರದಲ್ಲೇ ನಮ್ಮ ಮುಂದಿನ ಹಾದಿ ತೆರೆಯುತ್ತದೆ; ತೆರೆಯಬೇಕು.

– ರಾಜಾರಾಂ ತಲ್ಲೂರು

 

ಭಾರತದಲ್ಲಿ ಪತ್ರಿಕೋದ್ಯಮ ಹುಟ್ಟಿದ್ದೇ ದೇಶದ ಸ್ವಾತಂತ್ರ್ಯ ಹೋರಾಟದ ಕಿಡಿ ಹರಡುವ ದೊಂದಿಯ ರೂಪದಲ್ಲಿ. ಹಾಗಾಗಿ, ಒಂದು ಕರಪತ್ರದ ಸ್ವರೂಪ ಮತ್ತು ಆಡಳಿತದ ವಿರುದ್ಧ ಸೆಟೆದು ನಿಲ್ಲುವಿಕೆ, ಅನ್ಯಾಯ-ಅಕ್ರಮಗಳನ್ನು ಎತ್ತಿ ತೋರಿಸುವುದು ಅದರ ಸಹಜಗುಣ. ಈ ಕಿಡಿ ಬರಬರುತ್ತಾ ತನ್ನ ಪ್ರಖರತೆ ಕಳೆದುಕೊಳ್ಳುತ್ತಾ ಬಂದಿದ್ದರೂ, ಬಹುತೇಕ 1990ರ ದಶಕದ ತನಕವೂ ಜೀವ ಹಿಡಿದುಕೊಂಡಿತ್ತು.

90ರ ದಶಕದ ನಾಲ್ಕು ಮುಖ್ಯ ಬೆಳವಣಿಗೆಗಳು, ಭಾರತೀಯ ಪತ್ರಿಕೋದ್ಯಮದ ಮೂಲ ಸ್ವರೂಪವನ್ನು ಬದಲಾಯಿಸಿದವು. ಅವು ಯಾವುವೆಂದರೆ:

* 1991ರ ಹೊತ್ತಿಗೆ ದೇಶದ ಆರ್ಥಿಕತೆ ಉದಾರೀಕರಣಗೊಂಡದ್ದು

*1992ರಲ್ಲಿ ಅಯೋಧ್ಯೆ ವಿವಾದ ಭುಗಿಲೆದ್ದದ್ದು

*1992ರಲ್ಲಿ ಖಾಸಗಿ ಟೆಲಿವಿಷನ್ ಚಾನೆಲ್ ಗಳಿಗೆ ಅವಕಾಶ ದೊರೆತದ್ದು.

*1995ರಲ್ಲಿ ಇಂಟರ್ನೆಟ್ ಭಾರತವನ್ನು ಪ್ರವೇಶಿಸಿದ್ದು.

ಈ ನಾಲ್ಕೂ ಘಟನೆಗಳು ಮೇಲುನೋಟಕ್ಕೆ ಪರಸ್ಪರ ಸಂಬಂಧಿ ಅನ್ನಿಸದಿದ್ದರೂ, ಇವುಗಳ ಅಂತಃಸಂಬಂಧವೇ ಈವತ್ತು ಮಾಧ್ಯಮಗಳು ಕೊಳೆತು ನಾರಲು ಕಾರಣ ಎಂಬುದರಲ್ಲಿ ಸಂಶಯ ಇಲ್ಲ. ಅದು ಹೇಗೆಂಬುದನ್ನು ನೋಡೋಣ.

ಉದಾರೀಕರಣ

ದೇಶದ ಆರ್ಥಿಕತೆ ಉದಾರೀಕರಣ ಆಗುವ ತನಕ ಕೈಗಾರಿಕೋದ್ಯಮಿಗಳಿಗೆ ಮಾಧ್ಯಮಗಳ ಕಡೆ ಹೆಚ್ಚಿನ ಗಮನ-ಆಸಕ್ತಿ ಇರಲಿಲ್ಲ. ಯಾಕೆಂದರೆ ಮಾಧ್ಯಮವು (ಆಗದು ಕೇವಲ ಮುದ್ರಣ ಮಾಧ್ಯಮ) ಮುದ್ರಣ ತಂತ್ರಜ್ಞಾನ ಸುಧಾರಣೆಗೊಂಡ ಮೇಲೆ ಯಾವತ್ತೂ ತಾನೇತಾನಾಗಿ ಒಂದು ಲಾಭದಾಯಕ “ವ್ಯವಹಾರ” ಆಗಿದ್ದ ಚರಿತ್ರೆ ಇಲ್ಲ. ಆದರೆ, ಉದಾರೀಕರಣದ ಫಲವಾಗಿ ಮಾರುಕಟ್ಟೆಗಳು ಗರಿಗೆದರಲಾರಂಭಿಸಿದಾಗ, ಉದ್ಯಮಗಳ ಕಣ್ಣು ಮಾಧ್ಯಮಗಳತ್ತ ಬಿತ್ತು. ಹಾಗೆ ಬೀಳುವುದಕ್ಕೆ ಮುಖ್ಯ ಕಾರಣ- ಜಾಹೀರಾತು ಮತ್ತು ಮಾರ್ಕೆಟಿಂಗ್ ಹೆಸರಲ್ಲಿ ಖರ್ಚಾಗುವ ಹಣ ಉಳಿತಾಯದ ಆಸೆ. ನವಮಾರುಕಟ್ಟೆಯ ದೊಡ್ಡ ಖರ್ಚಿನ ಬಾಬ್ತೇ ಅದು.

ಹೀಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಮಾಧ್ಯಮದ ಮ್ಯಾನೇಜ್ಮೆಂಟ್ ಗಳಲ್ಲಿ ದೇಶದ ಕಾರ್ಪೋರೇಟ್ ಜಗತ್ತು ಹಂತಹಂತವಾಗಿ ಕಾಲಿರಿಸಿತು ಮತ್ತು ರಕ್ತದ ರುಚಿ ಹತ್ತಿದಂತೆಲ್ಲ, ಮಾಧ್ಯಮಗಳ ಮೇಲೆ ಕಾರ್ಪೋರೇಟ್ ಬಿಗಿ ಹಿಡಿತ ಹೆಚ್ಚುತ್ತಾ ಹೋಯಿತು.

 ಬಲಪಂಥೀಯ ರಾಜಕಾರಣ

ಮಾಧ್ಯಮಗಳಲ್ಲಿ ಬಲಪಂಥೀಯ ’ಉತ್ಪನ್ನ’ಗಳ ಚರಿತ್ರೆ ಹಳೆಯದಾದರೂ, ಅವಕ್ಕೆ ಅವರದೇ ಓದುಗರೂ ಇರಲಿಲ್ಲ. ದೇಶದಾದ್ಯಂತ ಇದಕ್ಕೆ ಉದಾಹರಣೆಗಳು ಸಿಗುತ್ತವೆ. ಅದು ಕೇವಲ ಪ್ರೊಪಗಾಂಡಾ ಮಾಧ್ಯಮವಾಗಿ ಸೀಮಿತವಾಗಿತ್ತು. ಆದರೆ, ಅಯೋಧ್ಯೋತ್ತರ ಬೆಳವಣಿಗೆಗಳು ಮತ್ತು ದೇಶದಾದ್ಯಂತ ಅದಕ್ಕೆ ದೊರೆತ ಪ್ರತಿಸ್ಪಂದನಗಳು ಬಲಪಂಥೀಯ ಮಾಧ್ಯಮಗಳಿಗೆ ಹೊಸ ಸಾಧ್ಯತೆಗಳನ್ನು ತೆರೆದವು.

ಉದಾರೀಕರಣ ಕಾರಣವಾಗಿ, ಹೊಸ ಹೊಸ ಮಾಧ್ಯಮ ಸಂಸ್ಥೆಗಳು ಹುಟ್ಟಿಕೊಳ್ಳತೊಡಗಿದವು ಮತ್ತು ಪ್ರೊಪಗಾಂಡಾ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದ, ಕಸುಬು ಗೊತ್ತಿರುವ ವ್ಯಕ್ತಿಗಳನ್ನು ನಿಧಾನಕ್ಕೆ ಈ ಹೊಸ ಮುಖ್ಯವಾಹಿನಿ ಮಾಧ್ಯಮಗಳ ಸುದ್ದಿಕೋಣೆಗಳಿಗೆ ಹೊಕ್ಕಲು ಅನುವು ಮಾಡಿಕೊಡಲಾಯಿತು. ಉದ್ಯೋಗಾವಕಾಶಗಳು ಹೆಚ್ಚಾದುದರಿಂದ ಈ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಕಾರ್ಪೋರೇಟ್ ಜಗತ್ತು ಮತ್ತು ಆಗಷ್ಟೇ ಬಲಿಯತೊಡಗಿದ್ದ ಬಲಪಂಥೀಯ ರಾಜಕಾರಣಗಳ ನಡುವಿನ ಸಂಬಂಧ ಕೂಡ ವ್ಯವಹಾರ, ಜಾತಿ, ವರ್ಗ, ಸಿದ್ಧಾಂತ ಮತ್ತಿತರ ಹತ್ತು ಹಲವು ಕೋನಗಳಿಂದ ಸಹಜ ಕೂಡಿಕೆಯಾಗಿತ್ತು.

 ಖಾಸಗಿ ಚಾನೆಲ್ ಗಳು

ಸರ್ಕಾರಿ ದೂರದರ್ಶನದಿಂದ ಖಾಸಗಿ ಚಾನೆಲ್ ಗಳಿಗೆ ದೇಶ ಬದಲಾದಾಗ, ಆದ ಒಂದು ಮಹತ್ವದ ಬದಲಾವಣೆ ಎಂದರೆ, ಸುದ್ದಿಗಳನ್ನು ನೋಡಿ ಅರ್ಥೈಸಿಕೊಳ್ಳಲು ಮತ್ತು ಅಭಿವ್ಯಕ್ತಿಸಲು ಕಸುಬು ಗೊತ್ತಿರುವ ಪತ್ರಕರ್ತ ಅಗತ್ಯ ಎಂಬ “ಮಿಥ್” ತೊಲಗಿಹೋಯಿತು! ವೀಡಿಯೊ ಕ್ಯಾಮರಾ ಹೊಂದಿರುವುದು ಮತ್ತು ಅದನ್ನು ಚಲಾಯಿಸಲು ತಿಳಿದಿರುವುದೇ ತಳಮಟ್ಟದಲ್ಲಿ ಸುದ್ದಿ ಸಂಗ್ರಹಕ್ಕೆ ಮೂಲ ಅರ್ಹತೆಯಾಯಿತು ಮತ್ತು ಆ ಕ್ಯಾಮರಾ ಹೊತ್ತವರ ಕಣ್ಣುಗಳು ದೇಶದ ಜನತೆಯ ಸುದ್ದಿ ಕಾಣುವ ಕಣ್ಣುಗಳಾಗಿ ಬದಲಾದವು.

ಇನ್ನೊಂದೆಡೆ, ಸ್ಯಾಟಲೈಟ್ ಮೂಲದಿಂದಾಗಲೀ ಅಥವಾ ಕೇಬಲ್ ಜಾಲದ ಮೂಲಕವಾಗಲೀ ಚಾನೆಲ್ ಗಳು ನಡೆಯಲು ಅಗಾಧ ಪ್ರಮಾಣದಲ್ಲಿ ಹಣ ಅಗತ್ಯವಿರುವುದರಿಂದ, ದುಡ್ಡು ಚೆಲ್ಲಿ ದುಡ್ಡು ಗಳಿಸಬಲ್ಲವರಿಗೆ ಮಾತ್ರ ಟೆಲಿವಿಷನ್ ಚಾನೆಲ್ ಗಳು ತೆರೆದುಕೊಂಡವು. ಅಕ್ರಮವಾಗಿ ದುಡ್ಡು ಚೆಲ್ಲಿದಾಗ ಏನೇನು ಅನಾಹುತಗಳು ನಡೆಯಬೇಕೋ ಅದೆಲ್ಲವೂ ನಡೆಯತೊಡಗಿದವು.

 ಇಂಟರ್ನೆಟ್ ಪ್ರವೇಶ

ಇದೇ ಹೊತ್ತಿಗೆ, ಇಂಟರ್ನೆಟ್ ದೇಶದೊಳಗೆ ಪ್ರವೇಶಿಸಿದ್ದರಿಂದಾಗಿ, ಸ್ಥೂಲವಾಗಿ ಎರಡು ಬದಲಾವಣೆಗಳಾದವು. ಮೊದಲನೆಯದಾಗಿ ಸುದ್ದಿ ಮತ್ತು ಮಾಹಿತಿಯ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹೊಸ ಹಾದಿಗಳು ತೆರೆದುಕೊಂಡವು ಮತ್ತು ಮಾಹಿತಿಯ ಮಹಾಪೂರದ ಕಾರಣದಿಂದಾಗಿ ಸಾಂಪ್ರದಾಯಿಕ “ಮಾಧ್ಯಮ” ಗಳಿಗೆ ಅದರ ಗ್ರಾಹಕರಿಂದ ಸುದ್ದಿಗಾಗಿ ಒತ್ತಡ ಕಡಿಮೆಯಾಯಿತು. ಯಾಕೆಂದರೆ ಅವರಿಗೆ ಬೇರೆ ಸುದ್ದಿಮೂಲಗಳು ತೆರೆದುಕೊಂಡವು. ಹಾಗಾಗಿ ಸಾಂಪ್ರದಾಯಿಕ ಮಾದ್ಯಮಗಳಿಗೆ ತಮ್ಮ ಪ್ರಸ್ತುತತೆ ಉಳಿಸಿಕೊಳ್ಳಲು ಹೊಸ ಹಾದಿಗಳನ್ನು ಹುಡುಕಿಕೊಳ್ಳುವುದು ಅನಿವಾರ್ಯ ಆಗತೊಡಗಿತು.  ಹಾಗೆ ಹಿಡಿದ ಹೊಸಹಾದಿಗಳೇ ನಮ್ಮನ್ನು ಈವತ್ತು ನಾವು ಇರುವಲ್ಲಿಗೆ ತಲುಪಿಸಿದ್ದು.

ಎರಡನೆಯದಾಗಿ, ಇಂಟರ್ನೆಟ್ ನ ಸಾಮಾಜಿಕ ಬಳಕೆಯ ಸ್ವರೂಪ ಬದಲಾಗುತ್ತಾ ಬಂದಂತೆ, ಸುದ್ದಿಗಳು -ಸಾಮಾಜಿಕ ಸಂವಹನಗಳ ಸ್ವರೂಪವೂ ಬದಲಾಗತೊಡಗಿತು. ಸೋಷಿಯಲ್ ಮೀಡಿಯಾ, ವಾಟ್ಸಾಪ್ ನಂತಹ ವ್ಯಕ್ತಿ-ವ್ಯಕ್ತಿ ಖಾಸಗಿ ಸಂವಹನ, ಯು ಟ್ಯೂಬ್ ನಂತಹ ಖಾಸಗಿತನದ ಕಿಟಕಿಗಳು, ಅಮೆಜಾನ್ ನಂತಹ ಖರೀದಿ ಕಿಟಕಿಗಳು ಇಂಟರ್ನೆಟ್ ಬಳಕೆಯ ಸ್ವರೂಪವನ್ನೇ ಬದಲಾಯಿಸಿದವು.

 

2000ದ ಬಳಿಕ

ಸುಮಾರಿಗೆ 2000ನೇ ಇಸವಿಯ ಹೊತ್ತಿಗೆ, ದೇಶದ ಮಾಧ್ಯಮಗಳ ಸ್ವರೂಪ ಬಹುತೇಕ ಬದಲಾಗಿತ್ತು. ಉದ್ಯಮಗಳಿಗೆ ಮಾಧ್ಯಮಗಳ ಒಳಗಿನ ಹಿಡಿತ ಸಿಕ್ಕಿದ್ದರಿಂದ ಮತ್ತು ಸುದ್ದಿಕೋಣೆಗಳ “ಸ್ಯಾಂಕ್ಟಿಟಿ” ಅವರಿಗೆ ಅಳತೆ ಮಾಡಿಕೊಳ್ಳಲು ಸಾಧ್ಯ ಆದ್ದರಿಂದ, ಬಹುತೇಕ ಎಲ್ಲ ಮಾಧ್ಯಮಗಳೂ ಕಾರ್ಪೋರೇಟ್ ಆಡಳಿತಕ್ಕೆ ಬದಲಾದವು. ಅವರಿಗೆ ಸಾಂಪ್ರದಾಯಿಕ ಪತ್ರಕರ್ತರ ಬದಲು ತಮ್ಮ ರಾಗಕ್ಕೆ ತಾಳ ಹಾಕಬಲ್ಲ ಕಾರುಕೂನರು ಬೇಕಾಗತೊಡಗಿದರು. ಅದರಲ್ಲೂ ನವಮಾಧ್ಯಮಗಳ ಉತ್ಪಾದಕ ಸಾಧ್ಯತೆಗಳನ್ನು (ವಿನ್ಯಾಸ, ಬಣ್ಣ, ಪ್ಯಾಕೇಜಿಂಗ್ ತಂತ್ರಗಳು) ಶೋಧಿಸಿಕೊಳ್ಳಬಲ್ಲ ಎಳೆಯರು ಸುದ್ದಿಕೋಣೆಗಳ ಆಯಕಟ್ಟಿನ ಜಾಗಗಳನ್ನು ತುಂಬತೊಡಗಿದರು.

ಇಂತಹದೊಂದು ಬೆಳವಣಿಗೆಯ ಫಲವಾಗಿ, ಸಾಂಪ್ರದಾಯಿಕ ಪತ್ರಕರ್ತರು ಅವರ ಉತ್ಪಾದಕತೆಯ ಅಪ್ರೈಸಲ್ ನಲ್ಲಿ ವಿಫಲಗೊಳ್ಳತೊಡಗಿದರು ಮತ್ತು ವಾಯಿದೆ ತೀರಿ, ಸುದ್ದಿಕೋಣೆಗಳಿಂದ ಹೊರಬೀಳತೊಡಗಿದರು.

ಟೆಲಿವಿಷನ್ ಚಾನೆಲ್ ಗಳು 24 x 7 ಸುದ್ದಿ ಬೀರತೊಡಗಿದ ಬಳಿಕವಂತೂ ಖಾಸಗಿತನವನ್ನು ರಂಗಾಗಿ ಮಾರುವುದನ್ನೇ ವೃತ್ತಿ ಮಾಡಿಕೊಂಡವು. ಅದೂ ಹುಣ್ಣು ಕೆರೆಯುವ ಉದ್ಯೋಗವಾಗಿ, ಈಗ ಮಲಗುವ ಕೋಣೆ-ಸ್ನಾನದ ಕೋಣೆಗಳನ್ನು ಹೊಕ್ಕಿ ಕುಳಿತಿವೆ ಮತ್ತು ಟೆಲಿವಿಷನ್ ಚಾನೆಲ್ ಗಳ ಕ್ಯಾಮರಾ ಹೊರಲು “ಪೀಪಿಂಗ್ ಟಾಮ್ ಸಿಂಡ್ರೋಮ್” ಎಂಬ ಮಾನಸಿಕ ತೊಂದರೆಯೂ, ಎದುರು ಕುಳಿತು ಆಂಕರಿಂಗ್ ಮಾಡಲು “ಮೆಗಲೋಮೇನಿಯಾ” ಎಂಬ ಗಂಭೀರ ಮಾನಸಿಕ ಕಾಯಿಲೆಯೂ ಇರುವುದು ಕಡ್ಡಾಯ ಆಗಿಬಿಟ್ಟಿದೆ!

ಕೊರೊನಾ ಕಾಲದಲ್ಲಿ

ಕೊರೊನಾ ಜಗನ್ಮಾರಿ ಆವರಿಸಿಕೊಂಡ ಮೇಲೆ ಮಾಧ್ಯಮರಂಗ ಆ ಸನ್ನಿವೇಶವನ್ನು ಹೇಗೆ ನಿಭಾಯಿಸಿತು ಎಂಬುದನ್ನು ಗಮನಿಸಿದರೆ, ಉದ್ಯಮವಾಗಿ ಮಾಧ್ಯಮ ಎತ್ತ ಸಾಗುತ್ತಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತಿದೆ. ಒಂದೆಡೆ ಜಗನ್ಮಾರಿಯ ಹರಿವನ್ನು ತಮ್ಮ ಅನ್ನದ ಧಣಿಗಳ ಹರಿವಿಗೆ ಅನುಕೂಲ ಆಗುವಂತೆ ತಿರುಚುವ ಕೆಲಸದ ಜೊತೆಗೇ, ಇನ್ನೊಂದೆಡೆ ಬಹುತೇಕ ಎಲ್ಲ ಮಾಧ್ಯಮಗಳೂ ಬಹಳ ಸಲೀಸಾಗಿ ತಮ್ಮ ಹೊರೆ ಕಳಚಿಕೊಳ್ಳುವ ಕೆಲಸ ಮಾಡುತ್ತಿವೆ.

ಕೊರೊನಾ ಯುರೋಪಿನ ದೇಶಗಳಲ್ಲಿ ಮತ್ತು ಅಮೆರಿಕದಲ್ಲಿ ಹೇಗೆ ನಿಯಂತ್ರಣ ತಪ್ಪಿತು ಎಂಬ ಉದಾಹರಣೆಗಳು ಎದುರಿರುವಾಗಲೇ ಭಾರತದಲ್ಲಿ ಅದರ ಆಟಾಟೋಪ ಆರಂಭ ಆದದ್ದು. ಕೊರೊನಾ ನಿಯಂತ್ರಣಕ್ಕೆ ಮತ್ತು ಜೀವಹಾನಿ ಆಗದಂತೆ ತಡೆಯಲು ಏನು ಮಾಡಬಹುದೆಂಬುದನ್ನು ಮುಂಚೂಣಿಯಲ್ಲಿ ನಿಂತು ಸರ್ಕಾರಕ್ಕೆ ತಿಳಿಹೇಳಬಹುದಾಗಿದ್ದ ಅಮೂಲ್ಯ ಅವಕಾಶವನ್ನು ಕೈಚೆಲ್ಲಿದ ಮಾಧ್ಯಮಗಳು, ಕೊರೊನಾ ಹುಟ್ಟಿದ್ದು ಚೀನಾದಲ್ಲಿ, ಹರಡಿದ್ದು ತಬ್ಲೀಘಿಗಳಿಂದ, ಅದನ್ನು ಚಪ್ಪಾಳೆ-ಜಾಗಂಟೆ – ದೀಪ-ಪುಷ್ಪವೃಷ್ಟಿಗಳ ಮೂಲಕ ಓಡಿಸಬಹುದೆಂದು ಜನರನ್ನು ನಂಬಿಸಿದರು; ಹೊಟ್ಟೆಪಾಡು ಕಳೆದುಕೊಂಡು ವಲಸೆ ಹೊರಟವರನ್ನು ನಿಂದಿಸಿದರು;  ಕೊರೊನಾ ಕುರಿತು ಒಂದು ಸಾಮಾಜಿಕ ಸ್ಟಿಗ್ಮಾ ಹುಟ್ಟಿಕೊಳ್ಳಲು ಕಾರಣರಾದರು ಮತ್ತು ತಯಾರಿಗಳೇ ಇಲ್ಲದ ಆಳುವವರ ಕ್ರಮಗಳನ್ನೆಲ್ಲ ಇನ್ನಿಲ್ಲ ಎಂಬಂತೆ ಸಮರ್ಥಿಸುತ್ತಾ ಬಂದರು.

ಒಂದು ಹಂತ ತಲುಪಿದ ಬಳಿಕ, ಸ್ವತಃ ಮಾಧ್ಯಮಗಳಿಗೇ ಲಾಕ್ ಡೌನ್ ಮತ್ತು ಅದು ತಂದ ಆರ್ಥಿಕ ಸಂಕಟಗಳ ಬಿಸಿ ಮುಟ್ಟಿತು. ಅದನ್ನೇ ಅವಕಾಶ ಎಂದು ಬಗೆದು, ಎಲ್ಲ ನಿಯಮಗಳನ್ನೂ ಬದಿಗೊತ್ತಿ, ದೇಶಾದ್ಯಂತ ಸಾವಿರಾರು ಮಂದಿಯನ್ನು ಮಾಧ್ಯಮಗಳಲ್ಲಿ ಕೆಲಸದಿಂದ ಕಿತ್ತುಹಾಕಿ ಮೈ ಹಗುರ ಮಾಡಿಕೊಳ್ಳಲಾಯಿತು. ಹಂಚಿತಿನ್ನಲು ಕಲಿಸಬೇಕಾದವರು ಕಿತ್ತುತಿನ್ನತೊಡಗಿದರು.

ಈವತ್ತಿಗೂ ಪ್ರತಿದಿನ ದೇಶದಲ್ಲಿ ಸಾವಿರಾರು ಮಂದಿ ಸಾಯುತ್ತಿದ್ದರೂ, ಅದಕ್ಕೆ ತೀರಾ ದಪ್ಪಚರ್ಮದ ಪ್ರತಿಕ್ರಿಯೆ ನೀಡುತ್ತಿರುವ ಮಾಧ್ಯಮಗಳು, ದೇಶದಲ್ಲಿ ಇಂದು ಪ್ರತಿದಿನವೆಂಬಂತೆ ಸಂಭವಿಸುತ್ತಿರುವ ಕೊರೊನೇತರ ಕಾರಣಗಳ ಸಾವಿಗೂ ಮೂಲ ಕುಮ್ಮಕ್ಕು ಎಂಬುದರಲ್ಲಿ ಸಂಶಯ ಇಲ್ಲ.

ಯಾಕೆ ಪರ್ಯಾಯ ಎಂಬುದಿಲ್ಲ?

ಇಂಟರ್ನೆಟ್ ನ ಫಲವಾದ ಸೋಷಿಯಲ್ ಮೀಡಿಯಾಗಳು, ವೆಬ್ ಲೈವ್ ನಂತಹ ರಿಯಲ್ ಟೈಮ್ ಪ್ರಸಾರಗಳು ಕಳೆದ ಎರಡು-ಮೂರು ವರ್ಷಗಳಿಂದ ಮುಂಚೂಣಿಗೆ ಬರಲಾರಂಭಿಸಿರುವುದು ಹಾಗೂ ಜಗತ್ತಿನಲ್ಲೇ ಅತ್ಯಂತ ಸಸ್ತಾ ಡೇಟಾ ದರದ ಕಾರಣದಿಂದಾಗಿ ಮಾಹಿತಿ ಮಹಾಪೂರವೆಲ್ಲವೂ ಅಂಗೈ ಎಟುಕಿನಲ್ಲೇ ಸಿಗತೊಡಗಿರುವುದು ಹೊಸದೊಂದು “ಪೊಳ್ಳು ಭರವಸೆ” ಹುಟ್ಟಿಸುತ್ತಿದೆ. ಅದು ಪರ್ಯಾಯ ಮಾಧ್ಯಮ!

ಮಾಧ್ಯಮ ಎಂಬುದು ಸುದ್ದಿ, ಮಾಹಿತಿಯ ಮೂಲ ಎಂದಾದಮೇಲೆ, ಅದನ್ನು ನೀಡದಿದ್ದದ್ದು ಮಾಧ್ಯಮವಾಗಿ ಉಳಿಯುವುದು ಹೇಗೆ? ಹಾಗಾಗಿ ಇಂದು ನಾವು ಪರ್ಯಾಯ ಮಾಧ್ಯಮ ಎಂದು ಅಂಚಿನ ಹಾದಿ ಹಿಡಿಯುವ ಬದಲು ನಾವೇ ಮಾಧ್ಯಮ ಎಂಬ ಹೆದ್ದಾರಿ ಹಿಡಿಯುವುದು ಅಗತ್ಯ ಇದೆ.

ಕ್ರಿಕೆಟ್ ಆಟದಲ್ಲಿ, ಒಂದು ಹಂತ ತಲುಪಿದ ಬಳಿಕ ಮರಳಿ ಗಾರ್ಡ್ ಪಡೆದು (ಅಂದರೆ ತನ್ನ ವಿಕೆಟ್ ಗಳೆಲ್ಲಿವೆ, ತಾನೆಲ್ಲಿದ್ದೇನೆ ಎಂಬುದನ್ನು ಮತ್ತೆ ಮನದಟ್ಟು ಮಾಡಿಕೊಂಡು ಆಟ ಮುಂದುವರಿಸುವುದು) ಆಟ ಶುರು ಮಾಡುವ ಕ್ರಮ ಇದೆ. ಈವತ್ತು ತಾವು ಪರ್ಯಾಯ ಮಾಧ್ಯಮಗಳು ಎಂದುಕೊಂಡಿರುವವರು ಮಾಡಬೇಕಿರುವುದು ಇದನ್ನು. ಮಾಧ್ಯಮ ಎಂಬುದೇ ಸತ್ತು ಇಪ್ಪತ್ತು ವರ್ಷಗಳು ಕಳೆದಿರುವಾಗ ಅದಕ್ಕೆ ತಾವು ಪರ್ಯಾಯ ಎಂದು ಕೂರುವುದೇ ಅಸಂಗತ. ಹಾಗಾಗಿ, ಮಾಧ್ಯಮಾಸಕ್ತರು ಮತ್ತು ಓದುಗರಿಬ್ಬರೂ  ತಾವೆಲ್ಲಿ ನಿಂತಿದ್ದೇವೆ ಎಂಬುದನ್ನು ಒಮ್ಮೆ ನೋಡಿ, ಅರ್ಥಮಾಡಿಕೊಂಡು ಮುಂದಡಿ ಇಡುವುದು ಈಗ ಅಗತ್ಯವಿದೆ.

ಬಸ್ಸು ಬಂದಾಗ ಎತ್ತಿನಗಾಡಿ ಕಾಣದಾಗುವುದು, ಟೆಲಿವಿಷನ್ ಬಂದಾಗ ರೇಡಿಯೊ ಇಲ್ಲದಾಗುವುದು, ಮಾಲ್ ಬಂದು ಕಿರಾಣಿ ಅಂಗಡಿ ವಿನಾಶದಂಚಿಗೆ ಹೋಗುವುದು ಅಥವಾ ಆಫ್ ಸೆಟ್/ಡಿಜಿಟಲ್ ಮುದ್ರಣ ಬಂದಾಗ ಟ್ರಾಡಲ್ ಮುದ್ರಣ ಯಂತ್ರ ಕಣ್ಮುಚ್ಚಿದ್ದು… ಹೀಗೆ ಕಾಲಕಾಲಕ್ಕೆ ಆಗುವ ಬದಲಾವಣೆಗಳನ್ನೆಲ್ಲ ಸ್ವೀಕರಿಸುತ್ತಾ ಬರುವುದು ಸಹಜ ಬೆಳವಣಿಗೆ. ಈ ಸಹಜ ಬೆಳವಣಿಗೆ ಮಾಧ್ಯಮಗಳಿಗೆ ಸಂಬಂಧಿಸಿ ಯಾಕೆ ಸಂಭವಿಸಿಲ್ಲ ಎಂಬುದು ಅಚ್ಚರಿ.

ಅತ್ತ ಗುಣಮಟ್ಟವೂ ಇಲ್ಲದ, ಇತ್ತ ಸುದ್ದಿಗಾಗಿ ಅವಲಂಬನೆಯೂ ಅಗತ್ಯ ಇಲ್ಲದ, ಎಲ್ಲಕ್ಕಿಂತ ಮಿಗಿಲಾಗಿ ಇತ್ತೀಚೆಗೆ ತಮಗಂಟಿರುವ ಮಾನಸಿಕ ರೋಗಗಳನ್ನು ತಮ್ಮ ನೋಡುಗರಿಗೂ, ಓದುಗರಿಗೂ ಅಂಟಿಸುತ್ತಿರುವ ಮತ್ತು ಆ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ ಎಂದು ಬಹುತೇಕ ಎಲ್ಲರೂ ಒಪ್ಪುವ “ಮಾಧ್ಯಮೋದ್ಯಮ”ಕ್ಕೆ “ಬೈಬೈ” ಹೇಳಲು ಏನು ಕಷ್ಟ? ಯಾರದ್ದೋ ಜಾಹೀರಾತನ್ನು, ಇನ್ಯಾರದ್ದೋ ಪ್ರಚಾರದ ತೆವಲನ್ನು ಅಥವಾ ಮತ್ಯಾರದ್ದೋ ಟಿ ಆರ್ ಪಿ ತುರಿಕೆಯನ್ನು ಕಟ್ಟಿಕೊಂಡು ನಾಗರಿಕ ಸಮಾಜಕ್ಕೆ ಆಗಬೇಕಾದ್ದೇನಿದೆ? ಅವರನ್ನು ಇನ್ನೂ ನೀವು “ಮಾಧ್ಯಮ” ಎಂದು ದಂಡಿಗೆಯಲ್ಲಿ ಕೂರಿಸಿ, ನಾವು ಮಾನವಂತರು “ಪರ್ಯಾಯ ಮಾಧ್ಯಮ” ಕಟ್ಟಿಕೊಳ್ಳುತ್ತೇವೆ ಎಂಬ ಉದಾರತೆ ಏಕೆ?

ನನ್ನನ್ನು ಕೇಳಿದರೆ ಪರ್ಯಾಯ ಮಾಧ್ಯಮ ಎಂಬುದು ಇಲ್ಲ; ಇರಬಾರದು. ಪ್ರಿಂಟ್-ಡಿಜಿಟಲ್-ಟೆಲಿವಿಷನ್  ಧ್ಯಮಗಳಲ್ಲಿರುವ ಕಾಳುಗಳನ್ನು ಮಾತ್ರ ಹೆಕ್ಕಿಕೊಂಡು ಜಳ್ಳನ್ನೆಲ್ಲ ಚೆಲ್ಲಿ, ಅವನ್ನೆಲ್ಲ ಒಂದೆಡೆ ಕನ್ವರ್ಜ್ ಮಾಡಿದ ಹೊಸ ಮಾಧ್ಯಮ ಹಾದಿಗಳು ತೆರೆದುಕೊಳ್ಳತೊಡಗಿವೆ. ಅದು ಇನ್ನು “ಮುಖ್ಯವಾಹಿನಿ ಮಾಧ್ಯಮ.” ಮುಖ್ಯವಾಹಿನಿ ಮಾಧ್ಯಮ ಬಿಟ್ಟರೆ ಉಳಿದದ್ದೆಲ್ಲ “ರೋಗಿಷ್ಠ ಮಾಧ್ಯಮ”.

Donate Janashakthi Media

Leave a Reply

Your email address will not be published. Required fields are marked *