ಪರಿಷತ್ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ: ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕಾರ

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿ ಎಂ ಇಬ್ರಾಹಿಂ ಇದೀಗ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಿಗ್ಗೆ ವಿಧಾನಸೌಧದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಕೊಠಡಿಗೆ ಆಗಮಿಸಿದ ಇಬ್ರಾಹಿಂ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಜೀನಾಮೆಯನ್ನು ಸಭಾಪತಿ ಅಂಗೀಕರಿಸಿದರು.

ಮಾರ್ಚ್ 12ರಂದೇ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಸಿ ಎಂ ಇಬ್ರಾಹಿಂ ಘೋಷಣೆ ಮಾಡಿದ್ದರು. ಆದರೆ, ಅಧಿಕೃತವಾಗಿ ರಾಜೀನಾಮೆ ನೀಡಿರಲಿಲ್ಲ. ಇಂದು ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. 2024 ರ ಜೂನ್ ತಿಂಗಳವರೆಗೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಎಂ.ಇಬ್ರಾಹಿಂ ಅವರ ಸದಸ್ಯತ್ವ ಅವಧಿ ಇತ್ತು.

ಇದನ್ನು ಓದಿ: ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಸಿ.ಎಂ. ಇಬ್ರಾಹಿಂ

ಕಾಂಗ್ರೆಸ್‌ ಪಕ್ಷದಲ್ಲಿ ಅಸಮಾಧಾನಗೊಂಡು, ಬಹಿರಂಗವಾಗಿಯೇ ಕಾಂಗ್ರೆಸ್ ಮುಖಂಡರ ವಿರುದ್ಧಆಕ್ಷೇಪ ವ್ಯಕ್ತಪಡಿಸಿದ್ದ ಸಿ ಎಂ ಇಬ್ರಾಹಿಂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಜೊತೆಗೆ ಸಿದ್ದರಾಮಯ್ಯ ವಿರುದ್ಧವೂ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸಿತಾದರೂ ಫಲಪ್ರದವಾಗಲಿಲ್ಲ.

ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಸಿ ಎಂ ಇಬ್ರಾಹಿಂ ಜೆಡಿ(ಎಸ್) ಸೇರಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿದೆ. ಇಬ್ರಾಹಿಂ ಬಂದರೆ ಸ್ವಾಗತಿಸುತ್ತೇವೆ ಎಂದು ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು.

Donate Janashakthi Media

Leave a Reply

Your email address will not be published. Required fields are marked *