- ರಾಜಧಾನಿಗೆ ಆಗಮಿಸುವ ಸಾವಿರಾರು ಆಶಾ ಕಾರ್ಯಕರ್ತೆಯರು
- ಆರ್‌ಸಿಹೆಚ್ ಪೋರ್ಟಲ್ ಸಮಸ್ಯೆ
- ಪ್ರೋತ್ಸಹ ಧನ-ಗೌರವಧನವನ್ನು ವೇತನವಾಗಿ ನೀಡಲು ಆಗ್ರಹ
ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಸ್ವಾತಂತ್ರ ಉದ್ಯಾವನದಲ್ಲಿ ಮತ್ತೊಮ್ಮೆ ಪ್ರತಿಭಟನೆ ನಡೆಸಲು ಆಶಾ ಕಾರ್ಯಕರ್ತೆಯರು ಮುಂದಾಗಿದ್ದಾರೆ. ನಾಳೆ(ಮೇ 17) ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಧರಣಿಯಲ್ಲಿ ಭಾಗಿಯಾಗಲಿದ್ದಾರೆ. ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘಟನೆ, ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ನೇತೃತ್ವದಲ್ಲಿ ಹೋರಾಟ ನಡೆಯಲಿದೆ.
ಕರ್ನಾಟಕದಲ್ಲಿ ಒಟ್ಟು 42,000 ಆಶಾ ಕಾರ್ಯಕರ್ತೆಯರು ಇದ್ದಾರೆ. ಸರಕಾರದಿಂದ ಸೂಕ್ತ ಪ್ರೋತ್ಸಾಹಧನ ನೀಡುತ್ತಿಲ್ಲ. ಆರೋಗ್ಯ ಸೌಲಭ್ಯಗಳು, ಆರೋಗ್ಯ ಸಮೀಕ್ಷೆಯಿಂದ ಒಂದೇ ಒಂದು ಮನೆಯೂ ವಂಚಿತವಾಗದಂತೆ ನೋಡಿಕೊಳ್ಳುತ್ತಾರೆ. ತಮ್ಮ ತಮ್ಮ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯು ತನಗೆ ನಿಯೋಜಿಸಲಾದ ಗ್ರಾಮಗಳಲ್ಲಿ ಪ್ರತೀ ಮನೆಗೆ ಭೇಟಿ ನೀಡುತ್ತಾರೆ, ಸಾಮಾನ್ಯವಾಗಿ ಈ ಕೆಲಸದಲ್ಲಿ ದಿನಕ್ಕೆ ಕಡ್ಡಾಯ ಸಮಯಕ್ಕಿಂತ ಹೆಚ್ಚು ಸಮಯ ಕೆಲಸ ಮಾಡುತ್ತಾರೆ ಆದರೂ ಅವರಿಗೆ ಸರ್ಕಾರದಿಂದ ಕಡಿಮೆ ಸಂಬಳ ಕೊಡುತ್ತಾರೆ.
ಇದನ್ನೂ ಓದಿ : ಗೌರವಧನ ಹೆಚ್ಚಳ-ಕೆಲಸದ ಒತ್ತಡ ಕಡಿಮೆ ಮಾಡಲು ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಆರ್‌ಸಿಎಚ್ ಪೊರ್ಟೋಲ್ ನಲ್ಲಿ ಅನ್ ಲೈನ್ ಮುಖಾಂತರ ಕಿರಿಯ ಆರೋಗ್ಯ ಮಹಿಳಾ ಅಧಿಕಾರಿಗಳು ಎಂಟ್ರಿ ಮಾಡಬೇಕಾಗುತ್ತೆ. ಆದರೆ, ಹಲವು ಕಡೆ ಡಾಟಾ ಎಂಟ್ರಿ ದಾಖಲೆ ಮಾಡುವ ಅಪರೇಟರ್‌ಗಳ ಕೊರತೆ, ತಾಂತ್ರಿಕ ಸಮಸ್ಯೆಗಳಿಂದ ಸಕಾಲದಲ್ಲಿ ದಾಖಲಾಗುತ್ತಿಲ್ಲ. ಇದರಿಂದ ಸಹಜವಾಗಿ ಆಶಾ ಕಾರ್ಯಕರ್ತೆಯರ ಕೆಲಸ ಮಾಡಿದರೂ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವೇತನ ಸಿಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದಂತೆ ಕೇಂದ್ರ ಸರ್ಕಾರವೂ ಸಹ ನಿಗದಿತ ಪ್ರೋತ್ಸಾಹ ಧನ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ.
ದಿನದಲ್ಲಿ 24 ಗಂಟೆಯು ಕೆಲಸ ಮಾಡುತ್ತೇವೆ, ಆದರೆ ಸರ್ಕಾರ ನಮಗೆ ಹೆಚ್ಚು ಮೋಸ ಮಾಡುತ್ತಿದೆ. ರಾಜ್ಯ ಸರ್ಕಾರ 4 ಸಾವಿರ ರೂಪಾಯಿ ಇದ್ದ ಮಾಸಿಕ ಪ್ರೋತ್ಸಾಹ ಧನವನ್ನ ಕಳೆದ ಬಜೆಟ್ ನಲ್ಲಿ 1 ಸಾವಿರ ರೂಪಾಯಿ ಹೆಚ್ಚಳ ಮಾಡಿ 5 ಸಾವಿರ ರೂ ಮಾಡಿದೆ ಆದರೂ, ಈಗಲೂ ಸಹ 4 ಸಾವಿರ ರೂಪಾಯಿ ಬರುತ್ತಿವೆ. ಮತ್ತೊಂದೆಡೆ ಕೇಂದ್ರ ಸರ್ಕಾರದಿಂದ ಕೆಲಸಕ್ಕೆ ತಕ್ಕಂತೆ ಮಾಸಿಕವಾರು ವಿವಿಧ ಯೋಜನೆಗಳಡಿ ಬರುವ ಹಣ ಸಹ ಸಕಾಲಕ್ಕೆ ಬರುತ್ತಿಲ್ಲಎಂದು ಆಶಾ ಕಾರ್ಯಕರ್ತೆಯರು ಆರೋಪಿಸಿದ್ದಾರೆ. ಪ್ರೋತ್ಸಾಹ ಧನ ಮತ್ತು ಗೌರವಧನ ಎರಡು ವೇತನವಾಗಿ ಬರಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವೆಲ್ಲವುಗಳ ಹಿನ್ನೆಲೆಯಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯ ಮಾಡಲು ಇಡೀ ರಾಜ್ಯಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚಿನ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು.
ನಿತ್ಯ ಎರಡು ಗಂಟೆ ಮಾತ್ರ ಕೆಲಸ ಮಾಡುವಂತೆ ಆದೇಶದಲ್ಲಿದೆ. ಕೆಲಸದ ಹೊರೆ ಹೆಚ್ಚಾಗಿದ್ದು, ನಿತ್ಯ ಎಂಟು ಗಂಟೆ ಕೆಲಸ ಮಾಡುವುದು ಅನಿವಾರ್ಯ ಎನ್ನುವಂತಾಗಿದೆ. ಈ ಮೊದಲು ಕೊರೊನಾ ಮೊದಲ ಅಲೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ಸರ್ಕಾರ ಆಶಾ ಕಾರ್ಯಕರ್ತರನ್ನೂ ಕೋವಿಡ್ ವಾರಿಯರ್ಸ್ ಎಂದು ಘೋಷಿಸಿತ್ತು. ಕೊರೊನಾ ಕೆಲಸದ ವೇಳೆ ಮೃತಪಟ್ಟವರಿಗೆ 50 ಲಕ್ಷ ಪರಿಹಾರ ಮತ್ತು ಕೂಡಲೇ ಎಲ್ಲರ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿತ್ತು. ಆದರೆ, ಕೊರೊನಾದಿಂದ ಈವರೆಗೆ 16 ಜನ ಆಶಾ ಕಾರ್ಯಕರ್ತರು ಮೃತಪಟ್ಟಿದ್ದು, ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಸರ್ಕಾರದ ಈ ನಡೆಯನ್ನು ವಿರೋಧಿಸಿ ಕಳೆದ ವರ್ಷವೂ ಸಹ ಪ್ರತಿಭಟನೆ ಮಾಡಿದ್ದೇವು.
ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಈ ನಡುವೆ ಆಶಾ ಕಾರ್ಯಕರ್ತರು ಮತ್ತೊಮ್ಮೆ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ, ಅಸುರಕ್ಷತೆ ಮಧ್ಯೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ಇನ್ನಾದರೂ ಪೂರೈಸುತ್ತದೆಯೇ ಎಂಬುದು ಪ್ರಶ್ನೆಯಾಗಿದೆ.