ನವದೆಹಲಿ: ನಾಗಾಲ್ಯಾಂಡ್‌ನಲ್ಲಿ ನಡೆದ 14 ಮಂದಿ ನಾಗರಿಕರ ಹತ್ಯೆ ಘಟನೆಗೆ ಸಂಬಂಧ ಪಟ್ಟಂತೆ ಭಾರತೀಯ ಸೇನೆಯು ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಯ ಅಡಿಯಲ್ಲಿ ತನಿಖೆ ಮಾಡಲು ನ್ಯಾಯಾಲಯದ ವಿಚಾರಣೆಯನ್ನು ಸ್ಥಾಪಿಸಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ವಿವರಣೆ ನೀಡಿದ ಸೇನಾಧಿಕಾರಿಯೊಬ್ಬರು, ‘ನಾಗಾಲ್ಯಾಂಡ್ ನಾಗರಿಕ ಹತ್ಯೆಗಳನ್ನು ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಯ ಅಡಿಯಲ್ಲಿ ತನಿಖೆ ಮಾಡಲು ಭಾರತೀಯ ಸೇನೆಯು ನ್ಯಾಯಾಲಯದ ವಿಚಾರಣೆಯನ್ನು ಸ್ಥಾಪಿಸಿದೆ. ಅಧಿಕಾರಿಯನ್ನು ಈಶಾನ್ಯ ವಲಯದಲ್ಲಿ ಮಾತ್ರ ನಿಯೋಜಿಸಲಾಗಿದೆʼʼ ಎಂದು ಹೇಳಿದ್ದಾರೆ.
ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯ ತಿರು ಮತ್ತು ಒಟಿಂಗ್ ಗ್ರಾಮಗಳಲ್ಲಿ 14 ನಾಗರಿಕರನ್ನು ಭದ್ರತಾ ಪಡೆಗಳ ಸಿಬ್ಬಂದಿಗಳು ನಾಗರಿಕರ ಹತ್ಯೆಯನ್ನು ಮಾಡಿದ್ದಾರೆ. ದಾಳಿಯಲ್ಲಿ 11 ನಾಗರಿಕರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ.
ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಭಾರತೀಯ ಸೇನೆಯ 21ನೇ ಪ್ಯಾರಾ ವಿಶೇಷ ಪಡೆ ವಿರುದ್ಧ ನಾಗಾಲ್ಯಾಂಡ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದೆಡೆ ನಾಗರಿಕರ ಹತ್ಯೆ ಖಂಡಿಸಿ ಬುಡಕಟ್ಟು ಸಂಸ್ಥೆಗಳು ಬಂದ್ ನಡೆಸಿದವು. ಮೋನ್ ಪಟ್ಟಣದಲ್ಲಿ ಸಿಆರ್‌ಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಭದ್ರತೆ ಬಿಗಿಗೊಳಿಸಲಾಗಿದೆ. ಆದರೂ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ನಾಗರಿಕರನ್ನು ಉಗ್ರರು ಎಂದು ತಪ್ಪಾಗಿ ಗುರುತಿಸಿ ಸೈನಿಕರು ದಾಳಿ ನಡೆಸಿದರು. ಕತ್ತಲಾದರೂ ಮನೆಗೆ ಬಾರದೇ ಇದ್ದವರನ್ನು ಹುಡುಕಿಕೊಂಡು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದಾಗ ಅಲ್ಲಿ ಸಂಘರ್ಷ ಏರ್ಪಟ್ಟಿತು. ನಾಗರಿಕರ ಹತ್ಯೆಯ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಅಸ್ಸಾಂ ರೈಫಲ್ಸ್‌ನ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ.
ನಾಗಾಲ್ಯಾಂಡ್‌ನ ಮೋನ್ನಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ತಪ್ಪಾಗಿ ಭಾವಿಸಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣವನ್ನು ಮೇಜರ್ ಜನರಲ್ ಶ್ರೇಣಿ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲು ಭಾರತೀಯ ಸೇನೆ ನಿರ್ಧರಿಸಿದ್ದು, ಇನ್ನು ಸಿಬ್ಬಂದಿ ವಿಚಾರಣೆಯನ್ನು ಕೋರ್ಟ್ನಲ್ಲಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾಗಿ ಸೇನಾ ಮೂಲಗಳು ತಿಳಿಸಿವೆ. ಈ ಮಧ್ಯೆ ರಾಜ್ಯದ ಬುಡಕಟ್ಟು ಜನಾಂಗದ ಪ್ರಮುಖ ಸಂಘಟನೆಯೊಂದು, ಭದ್ರತಾ ಪಡೆಯ ದಾಳಿಯಲ್ಲಿ ಮೃತಪಟ್ಟವರು 14 ಮಂದಿ ನಾಗರಿಕರಲ್ಲ, 17 ಮಂದಿ ಎಂದು ಪ್ರತಿಪಾದಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಪರಿಹಾರ ಘೋಷಣೆ
ಓಟಿಂಗ್ ಗ್ರಾಮದಲ್ಲಿ ನಡೆದ ಮೃತರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ನಾಗಾಲ್ಯಾಂಡ್ ಮುಖ್ಯಮಂತ್ರಿ ನಿಫಿಯೂ ರಿಯೋ, ರಾಜ್ಯ ಸರ್ಕಾರವು ತಲಾ 5 ಲಕ್ಷ ರೂಪಾಯಿ ಕೊಡುವುದಾಗಿ ಪ್ರಕಟಿಸಿದರು.
ಸಂಸತ್ತಿನಲ್ಲಿ ಅಮಿತ್ ಷಾ ವಿವರಣೆ
ನಾಗಾಲ್ಯಾಂಡ್‌ನಲ್ಲಿ ಸೇನೆಯಿಂದ ನಾಗರಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವರಣೆ ನೀಡಿದ್ದಾರೆ. ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದೆ.
ಪ್ರಸ್ತುತ ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ಈಗ ನಿಯಂತ್ರಣದಲ್ಲಿದೆ. ನಾಗಾಲ್ಯಾಂಡ್ ಡಿಜಿಪಿ, ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿದ್ದರು. ಘಟನೆ ಸಂಬಂಧ ಎಫ್‌ಐಆರ್ ಕೂಡ ದಾಖಲಿಸಲಾಗಿದೆ. ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ತನಿಖೆ ಹಸ್ತಾಂತರ ಮಾಡಲಾಗಿದೆ. ರಾಜ್ಯ ಅಪರಾಧ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲು ಎಸ್‌ಐಟಿಗೆ ನಿರ್ದೇಶನ ನೀಡಲಾಗಿದೆ. ಘಟನೆ ಬಗ್ಗೆ ಸೇನೆಯಿಂದಲೂ ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕಿದೆ. ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಘಟನೆಯು ರಾಷ್ಟ್ರಾದ್ಯಂತ ಚರ್ಚೆಗೆ ಒಳಪಟ್ಟಿದೆ. ವಿರೋಧ ಪಕ್ಷಗಳು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ನಾಗಾಲ್ಯಾಂಡ್ ನಲ್ಲಿ ನಾಗರಿಕರ ಹತ್ಯೆ ವಿಚಾರವು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇಂದು ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ದಿನದ ಕಲಾಪ ಆರಂಭವಾಗುತ್ತಿದ್ದಂತೆಯೇ ಘಟನೆ ಬಗ್ಗೆ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟುಹಿಡಿದಿದ್ದರು. ತೀವ್ರ ಗದ್ದಲದಿಂದಾಗಿ ರಾಜ್ಯಸಭೆ ಕಲಾಪವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಧ್ಯಾಹ್ನದ ವರೆಗೆ ಮುಂದೂಡಿದ್ದರು.