ಪ್ಯಾನಾಪ್ಟಿಕನ್ ಎಂಬ ಡಿಜಿಟಲ್ ಬಂಡವಾಳಶಾಹಿ ವ್ಯವಸ್ಥೆ

ಪ್ರೊ.ವಿ.ಎನ್. ಲಕ್ಷ್ಮೀನಾರಾಯಣ

1984 ಎಂಬ ಕಾದಂಬರಿಯಲ್ಲಿ ಜಾರ್ಜ್ ಆರ್ವೆಲ್ ನ ತೀಕ್ಷ್ಣ ವ್ಯಂಗ್ಯ, ಕಟಕಿ ಮತ್ತು ವಿಡಂಬನೆಗೆ ಗುರಿಯಾಗಿರುವ ಆ ‘ಬಿಗ್ ಬ್ರದರ್’ ಪಾತ್ರಕ್ಕೆ ಆಗಿನ ಸೋವಿಯತ್ ರಷ್ಯಾದ ಆಡಳಿತಗಾರ ಸ್ಟಾಲಿನ್ ಮಾದರಿ ಎಂದು ಈ ಕಾದಂಬರಿಯನ್ನು ಮೆಚ್ಚುವ ಬಹುಮಂದಿ ‘ಪ್ರಜಾತಂತ್ರ-ಪ್ರಿಯರು’ ನಂಬುತ್ತಾರೆ. ‘ಶೀತಲ ಸಮರೋತ್ತರ’ ಆಧುನಿಕ ಜಗತ್ತಿನ ದೊಡ್ಡಣ್ಣ, ‘ಬಿಗ್ ಬ್ರದರ್’ ಆರ್ವೆಲ್ ಹೇಳುವಂಥಾ ಸರ್ವಾಧಿಕಾರಿ ವ್ಯಕ್ತಿ ರೂಪದ ರಾಷ್ಟ್ರಾಧ್ಯಕ್ಷನೋ, ಪ್ರಧಾನಿಯೋ ಆಗಿರುವ ಬದಲು ಅಮೆರಿಕಾದ ಬಂಡವಾಳಶಾಹೀ ಆಳುವ ವರ್ಗವೇ ಆಗಿದೆ. ಪ್ಯಾನಾಪ್ಟಿಕನ್ ಹೇಗೆ ಒಂದು ಕಟ್ಟಡ ವಿನ್ಯಾಸವಾಗದೆ ಒಂದು ನಿಯಂತ್ರಕ ಸಮಾಜದ ಪರಿಕಲ್ಪನೆಯಾಗಿದೆಯೋ ಹಾಗೆ, ಎಲ್ಲರನ್ನೂ, ಎಲ್ಲವನ್ನೂ ಗಮನಿಸಿ ನಿರ್ದೇಶಿಸಿ ನಿಯಂತ್ರಿಸಬಯಸುವ ಸರ್ವಾಧಿಕಾರಿ – ಬಿಗ್ ಬ್ರದರ್ ಒಬ್ಬ ವ್ಯಕ್ತಿಯಾಗಿರದೆ, ಒಂದು ಕರಾಳ ಶೋಷಕ ವ್ಯವಸ್ಥೆಯಾಗಿದೆ.

1984 ಎಂಬ ಕಾದಂಬರಿಯನ್ನು ಜಾರ್ಜ್ ಆರ್ವೆಲ್ ಬರೆದದ್ದು 1948-49ರಲ್ಲಿ. ಕತೆ ನಡೆಯುವ ಕಾಲ ಆಗ ಭವಿಷ್ಯದ ಒಂದು ಕಾಲಘಟ್ಟವಾಗಿದ್ದ 1984. ಅದೇ ಈ ಕಾದಂಬರಿಯ ಶೀರ್ಷಿಕೆ. ತನ್ನ ದೇಶದ ಜನರನ್ನು ಪರದೆಯ ಮೇಲೆ ಸದಾ ಗಮನಿಸಬಲ್ಲ ತಾಂತ್ರಿಕ ನಿಯಂತ್ರಣವನ್ನು ಹೊಂದಿದ್ದ ಸರ್ವಾಧಿಕಾರಿಯೊಬ್ಬನ ಕಟು ವಿಡಂಬನೆ ಆ ಕಾದಂಬರಿ. ‘ಪ್ರಜಾಪ್ರಭುತ್ವ’ ಎಂಬ ಪದದ ಅರ್ಥವನ್ನೇ ತಿಳಿಯದೆ, ಸಮಾಜವಾದವನ್ನು ಕುರುಡಾಗಿ ದ್ವೇಷಿಸುವ ಬಹುಮಂದಿಗೆ ತುಂಬಾ ಪ್ರಿಯವಾದ ಕಾದಂಬರಿ ಇದು. ಕಾದಂಬರಿಯಲ್ಲಿ ಆ ಸರ್ವವೀಕ್ಷಕ ಅಗೋಚರ ಸರ್ವಾಧಿಕಾರಿಯನ್ನು ‘ಬಿಗ್ ಬ್ರದರ್’ ಎಂದು ಹೆಸರಿಸಲಾಗಿದೆ. ಆರ್ವೆಲ್ಲನ ತೀಕ್ಷ್ಣ ವ್ಯಂಗ್ಯ, ಕಟಕಿ ಮತ್ತು ವಿಡಂಬನೆಗೆ ಗುರಿಯಾಗಿರುವ ಆ ‘ಬಿಗ್ ಬ್ರದರ್’ ಪಾತ್ರಕ್ಕೆ ಆಗಿನ ಸೋವಿಯತ್ ರಷ್ಯಾದ ಆಡಳಿತಗಾರ ಸ್ಟಾಲಿನ್ ಮಾದರಿ ಎಂದು ಈ ಕಾದಂಬರಿಯನ್ನು ಮೆಚ್ಚುವ ಬಹುಮಂದಿ ‘ಪ್ರಜಾತಂತ್ರ-ಪ್ರಿಯರು’ ನಂಬುತ್ತಾರೆ.

ಕಮ್ಯೂನಿಸ್ಟ್ ಸರ್ಕಾರ ವಿಶ್ವದ ಯಾವುದೇ ಭಾಗದಲ್ಲಿದ್ದರೂ ಅದು ಪ್ರಜಾತಾಂತ್ರಿಕವಾಗೇ ಅಧಿಕಾರಕ್ಕೆ ಬಂದಿದ್ದರೂ ಅದನ್ನು ಹೇಗಾದರೂ ಸರಿ, ಅಂದರೆ ಅಧಿಕಾರಸ್ಥರ ಕೊಲೆ, ರಾಜಕೀಯ ಪಿತೂರಿ, ಆರ್ಥಿಕ ನಿರ್ಬಂಧ, ಮಿಲಿಟರಿ ಕ್ರಾಂತಿ ಅಥವಾ ಇವೆಲ್ಲವುಗಳ ಸಂಯುಕ್ತ ವಿಧಾನದಿಂದ ಬೀಳಿಸಿ ಅಲ್ಲಿ ತನ್ನ ನಿರ್ವಚನೆಯ ಪ್ರಜಾತಾಂತ್ರಿಕ, ಅಂದರೆ ಆ ದೇಶದ ಸಂಪನ್ಮೂಲಗಳನ್ನು ಕೊಳ್ಳೆಹೊಡೆಯಲು ಅನುವು ಮಾಡಿಕೊಡುವ ಕೈಗೊಂಬೆ ಸರ್ಕಾರವನ್ನು ಸ್ಥಾಪಿಸುವುದು ಅಮೇರಿಕನ್ ಆಳುವ ವರ್ಗದ ಉದ್ಘೋಷಿತ ಪಕ್ಷಾತೀತ ರಾಜಕೀಯ ನೀತಿ. ಅದರ ಸಹಸ್ರಾಕ್ಷರೂಪೀ (ಸಾವಿರಾರು ಕಣ್ಣುಗಳ) ಗುಪ್ತಚರ ಸಂಸ್ಥೆಗಳು ಮತ್ತು ರೂಕ್ಷ ಉಪಾಂಗಗಳು ಪ್ರಜಾತಂತ್ರದ ಹೆಸರಿನಲ್ಲಿ ಸರ್ವಾಂತರ್ಯಾಮಿಯಾಗಿ ಜಗತ್ತಿನ ಎಲ್ಲಾ ದೇಶಗಳ ಆಗು-ಹೋಗುಗಳನ್ನು ಗಮನಿಸುವ, ನಿಯಂತ್ರಿಸುವ ಸಾಧನಗಳಾಗಿವೆ. ಹೀಗಾಗಿ ‘ಶೀತಲ ಸಮರೋತ್ತರ’ ಆಧುನಿಕ ಜಗತ್ತಿನ ದೊಡ್ಡಣ್ಣ, ‘ಬಿಗ್ ಬ್ರದರ್’ ಆರ್ವೆಲ್ ಹೇಳುವಂಥಾ ಸರ್ವಾಧಿಕಾರಿ ವ್ಯಕ್ತಿ ರೂಪದ ರಾಷ್ಟ್ರಾಧ್ಯಕ್ಷನೋ, ಪ್ರಧಾನಿಯೋ ಆಗಿರುವ ಬದಲು ಅಮೆರಿಕಾದ ಬಂಡವಾಳಶಾಹೀ ಆಳುವ ವರ್ಗವೇ ಆಗಿದೆ.

ಯಾವುದೇ ದೇಶದ ಆಳುವ ವರ್ಗವು ಸಮಾಜವಾದಿಯಾಗಿದ್ದಾಗ, ಸಮಾಜವಾದದ ಜನಪರ ನೀತಿಗಳನ್ನು ವಿರೋಧಿಸಲಾಗದೆ ಅದರ ಆಡಳಿತಗಾರರನ್ನು ಸರ್ವಾಧಿಕಾರಿಗಳೆಂದು ಧಿಕ್ಕರಿಸುವುದು, ಮತ್ತು ಆ ಮೂಲಕ ಸಮಾಜವಾದವು ಪ್ರಜಾಪ್ರಭುತ್ವದ ವಿರೋಧಿಯೆಂದು ಜನಸಾಮಾನ್ಯರ ನಡುವೆ ಬಿಂಬಿಸುವುದು ಬಂಡವಾಳಶಾಹಿ ರಾಜಕೀಯದ ಒಂದು ಪ್ರಬಲ ನಯವಂಚನೆಯ ತಂತ್ರ. ಅದೇ ರೀತಿಯಲ್ಲಿ ಒಂದು ದೇಶದ ಆಳುವ ವರ್ಗವು ಬಂಡವಾಳಶಾಹಿಯಾಗಿದ್ದಾಗ ಅದರ ಜನವಿರೋಧೀ ಸರ್ವಾಧಿಕಾರವನ್ನು ಮರೆಮಾಚಲು ಆ ದೇಶದ ಆಡಳಿತಗಾರರನ್ನು ಅಪ್ರತಿಮ ಪ್ರಜಾಪ್ರಭುತ್ವವಾದೀ ನಾಯಕರೆಂದು ಕೊಂಡಾಡುವುದು ಈ ನಯವಂಚನೆಯ ತಂತ್ರದ ಇನ್ನೊಂದು ಮುಖ.

‘ಬಿಗ್ ಬ್ರದರ್’ ಎಂಬ ರೂಪಕದ ಸರ್ವಾಂತರ್ಯಾಮೀ ಶಕ್ತಿಗೆ ಎರಡು ಮುಖಗಳಿವೆ. ಒಂದು: ಎಲ್ಲವನ್ನೂ, ಎಲ್ಲರನ್ನೂ ಗಮನಿಸುವ ಮೂಲಕ ಜನರಿಗೆ ತಾವು ಏನೇ ಮಾಡಿದರೂ ಅವನ ಕಣ್‌ಗಾವಲಿನಲ್ಲಿ ಮಾಡುತ್ತಿದ್ದೇವೆ ಎಂಬ ಭಯ ಹುಟ್ಟಿಸಿ ಅವರು ಯಾವುದೇ ವಿರೋಧೀ ಕೃತ್ಯಗಳಲ್ಲಿ ತೊಡಗದಂತೆ ತಡೆಯುವುದು. ಎರಡು: ಬಿಗ್‌ಬ್ರದರ್ ವಿರೋಧೀ ಕೃತ್ಯಗಳನ್ನು ಎಸಗುವ ಜನರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ಎಚ್ಚರಿಸುವುದು.

ಇದು ಬಹುಮಟ್ಟಿಗೆ ದೈವಭಕ್ತರು ನಂಬುವ ಅಗೋಚರನಾದ ದೇವರ ಸರ್ವಾಂತರ್ಯಾಮೀ ಸರ್ವಶಕ್ತತೆ ಮತ್ತು, ಸರ್ವಜ್ಞತೆಯ ಶಕ್ತಿಗಳಂತೆ. ಒಂದೇ ವ್ಯತ್ಯಾಸವೆಂದರೆ ಭೌತ ಜಗತ್ತಿನ ಮಾನವ ಸರ್ವಾಧಿಕಾರೀ ಬಿಗ್‌ಬ್ರದರ್‌ನ ಸರ್ವೇಕ್ಷಣಾ ಶಕ್ತಿಗೆ ಮಿತಿಗಳಿವೆ. ನಂಬಿದವರಿಗೆ ತಾಯಿ, ತಂದೆ, ಬಂಧು, ಸ್ನೇಹಿತ (ತ್ವಮೇವ ಮಾತಾಶ್ಚ ಪಿತಾ ತ್ವಮೇವ…) ಎಲ್ಲವೂ ಆಗಿರುವ ಕಲ್ಪನೆಯ ದೇವರಿಗೆ ಮನುಷ್ಯರ ಸುಕೃತ್ಯ-ಕುಕೃತ್ಯಗಳು ಮಾತ್ರವಲ್ಲ, ಅವರು ಗುಟ್ಟಾಗಿ ಆಡುವ ಮಾತು ಮತ್ತು ಮಾಡುವ ಆಲೋಚನೆಗಳೂ ಸಹ ತಿಳಿದುಬಿಡುತ್ತವೆ ಎಂಬ ಶಿಶು ಸಹಜ ಭಯ. ಇದನ್ನು ಬೇಕಾದರೆ (ಕಾಯಾ, ವಾಚಾ, ಮನಸಾ ಪೂರ್ವಕವಾದ) ತ್ರಿಕರಣ ಭಯ ಎಂದೂ ಕರೆಯಬಹುದು. ಹಾಗಿದ್ದರೂ ಈ ದೈವಭಕ್ತರಲ್ಲಿ ಸಾಕಷ್ಟು ಮಂದಿ ದೇವರು-ಧರ್ಮದ ಹೆಸರಿನಲ್ಲೇ ಭ್ರಷ್ಟರೂ ಸುಳ್ಳರೂ, ಕ್ರೂರಿಗಳೂ ಆಗಿರುತ್ತಾರಲ್ಲಾ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಹೇಗೇ ಆದರೂ ಆರ್ವೆಲ್‌ನ ಬಿಗ್ ಬ್ರದರ್‌ಗೆ ಈ ಧಾರ್ಮಿಕ ಸರ್ವಾಧಿಕಾರಿಯಾದ ದೇವರಿಗೆ ಇರುವಂತೆ ತ್ರಿಕರಣ ಭಯವನ್ನು ಹುಟ್ಟಿಸುವ ಶಕ್ತಿಯಿಲ್ಲ.

ಬಂಡವಾಳಶಾಹೀ ಬಿಗ್ ಬ್ರದರ್‌ಗೆ, ಸರಕು-ಸೇವೆಗಳ ಉತ್ಪಾದನೆ, ವಾಣಿಜ್ಯ-ವ್ಯಾಪಾರ ಮತ್ತು ಜನಸಾಮಾನ್ಯರ ಅಂದರೆ ಶ್ರಮಿಕರ ಉಸ್ತುವಾರಿ ಅಥವಾ ಸರ್ವೇಕ್ಷಣೆ ಬಹು ಮುಖ್ಯವಾದುದು. ಕೊನೆಯಿರದ ಲಾಭದ ಹಸಿವು, ವ್ಯಾಪಾರದ ಪೈಪೋಟಿ ಮತ್ತು ಸಹಜೀವಿಗಳ ಬಗೆಗಿರುವ ಅಪನಂಬಿಕೆ, ಸ್ವಂತ ಅಸ್ತಿತ್ವವನ್ನು ಕುರಿತಾದ ಅನಿಶ್ಚಿತತೆ-ಅಭದ್ರತೆಗಳು ನಾನಾ ಬಗೆಯ ಸ್ವರಕ್ಷಣಾ ಸಾಧನಗಳ ಸೃಷ್ಟಿ ಮತ್ತು ಬಳಕೆಗೆ ದಾರಿ ಮಾಡಿಕೊಟ್ಟಿವೆ. ಬೀಗ-ವಾಚ್‌ಮನ್‌ಗಳಿಂದ ಹಿಡಿದು ನಾನಾ ಸ್ತರಗಳ ಗೂಢಚಾರಿಕೆ, ಸರ್ವೇಕ್ಷಣಾ ಕ್ಯಾಮರಾ, ಮತ್ತು ಉಪಗ್ರಹಗಳವರೆಗೆ ಈ ಹಸಿವು-ಪೈಪೋಟಿ-ಅಭದ್ರತೆಗಳ ಫಲಿತಗಳು ಜಾಗತಿಕವಾಗಿ ಬಂಡವಳಿಗರನ್ನು ಸದಾ ಆವರಿಸಿರುತ್ತವೆ. ಬದುಕಿನ ಸಾಮಾಜಿಕ ಉತ್ಪಾದನೆಗೆ ಅತ್ಯಗತ್ಯವಾದ, ಶ್ರಮಿಕರ ಜೀವಂತ ಶ್ರಮ, ಸತ್ತ ಶ್ರಮಗಳಾದ ಕಚ್ಚಾವಸ್ತುಗಳು, ಉತ್ಪಾದನಾ ಸಾಧನಗಳು, ಅವುಗಳ ವಿಸ್ತರಣೆಯಾಗಿ ಯಂತ್ರಗಳು, ಯಂತ್ರಗಳನ್ನು ತಯಾರಿಸುವ ಯಂತ್ರಗಳು, ತಂತ್ರಜ್ಞಾನ, ತಂತ್ರಜ್ಞಾನದ ಸುಧಾರಣೆ-ಸಂಶೋಧನೆ-ಆವಿಷ್ಕಾರಗಳು, ಅಂದರೆ, ಈಗಿರುವ ಕಂಪ್ಯೂಟರ್, ಮಾಹಿತಿ ತಂತ್ರಜ್ಞಾನ, ಸಂವಹನ ತಂತ್ರಜ್ಞಾನ, ರೋಬೋಟ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ… ಹೀಗೆ ಮನುಷ್ಯರ ಸಾಮಾಜಿಕ ಶ್ರಮದಿಂದ ಹುಟ್ಟುವ ಎಲ್ಲವೂ ಬಂಡವಾಳಶಾಹಿಗಳ ನಿಯಂತ್ರಣಕ್ಕೊಳಪಟ್ಟು ಅಮಾನುಷ ರೂಪವನ್ನು ಪಡೆದಿವೆ. ಇಡೀ ಜಗತ್ತು ಡಿಜಿಟಲ್‌ಮಯವಾಗಿದೆ. ಅಂದರೆ ಬಂಡವಾಳಶಾಹಿಯು ಡಿಜಿಟಲೀಕರಣಗೊಂಡಿದೆ.

18ನೇ ಶತಮಾನದಲ್ಲಿ ಇಂಗ್ಲಿಷ್ ತತ್ವಜ್ಞಾನಿ ಮತ್ತು ಸಮಾಜ ಸೇವಕ ಜೆರೆಮಿ ಬೆಂಥ್ಯಾಮ್ ಎಂಬಾತ ಜೈಲಿನಲ್ಲಿರುವ ನೂರಾರು ಬಂದಿಗಳನ್ನು ಒಬ್ಬನೇ ಕಾವಲುಗಾರನು ಅವರಿಗೆ ಗೊತ್ತಾಗದಂತೆ ಗಮನಿಸಬಹುದಾದಂಥ ಬಂದೀಖಾನೆಯ ನಕ್ಷೆಯೊಂದನ್ನು ರಚಿಸಿದ. ಅಂಥ ರಚನೆಗೆ ಪ್ಯಾನಾಪ್ಟಿಕನ್ ಎಂಬ ಹೆಸರು ಇದೆ. ಭೌತಿಕವಾಗಿ ನೂರಾರು ಜನರನ್ನು ಒಬ್ಬ ಗಮನಿಸುವುದು ಅಸಾಧ್ಯವಾದರೂ, ಹಾಗೆ ತಮ್ಮ ಅರಿವಿಗೆ ಬಾರದಂತೆ ಯಾರೋ ತಮ್ಮನ್ನು ಗಮನಿಸುತ್ತಾರೆಂಬ ಕಲ್ಪನೆಯೇ ಬಂದಿಗಳ ನಡವಳಿಕೆಯನ್ನು ನಿಯಂತ್ರಿಸಿ ನಿರ್ದೇಶಿಸುತ್ತದೆ ಎಂಬುದು ಇಲ್ಲಿ ಮುಖ್ಯ. ಪ್ರಾರಂಭದಲ್ಲಿ ಬಂದೀಖಾನೆಗಳಿಗಾಗಿ ರಚಿಸಿದ ಈ ಕಟ್ಟಡವು ಕ್ರಮೇಣ ಸ್ಕೂಲು, ಆಸ್ಪತ್ರೆ ಮೊದಲಾದ ರಚನೆಗಳಿಗೂ ವಿಸ್ತರಿಸಿತು.

ಪ್ಯಾನಾಪ್ಟಿಕನ್ ರಚನೆಯ ಪರಿಕಲ್ಪನೆಯನ್ನು ಇಡೀ ಸಮಾಜಕ್ಕೆ ವಿಸ್ತರಿಸಿದರೆ ಎಲ್ಲರನ್ನೂ, ಎಲ್ಲವನ್ನೂ ಗಮನಿಸಿ ನಿರ್ದೇಶಿಸಿ ನಿಯಂತ್ರಿಸಬಯಸುವ ಸರ್ವಾಧಿಕಾರಿ – ಬಿಗ್ ಬ್ರದರ್ ನ ಚಿತ್ರ ಸಿಗುತ್ತದೆ. ಫ್ರೆಂಚ್ ತತ್ವಶಾಸ್ತ್ರಜ್ಞ ಫೂಕೋ ಹೇಳುವಂತೆ ಪ್ಯಾನಾಪ್ಟಿಕನ್ ಹೇಗೆ ಒಂದು ಕಟ್ಟಡವಾಗದೆ ಒಂದು ನಿಯಂತ್ರಕ ಸಮಾಜದ ಪರಿಕಲ್ಪನೆಯಾಗಿದೆಯೋ ಹಾಗೆ ಆ ಬಿಗ್‌ಬ್ರದರ್ ಒಬ್ಬ ವ್ಯಕ್ತಿಯಾಗಿರದೆ, ಒಂದು ಕರಾಳ ಶೋಷಕ ವ್ಯವಸ್ಥೆಯಾಗಿದೆ.

ತಾನು ಬೇರೆಯವರನ್ನು ಗಮನಿಸಬೇಕು. ಆದರೆ ಅದು ಆ ಬೇರೆಯವರಿಗೆ ಗೊತ್ತಾಗಬಾರದು ಎಂದು ಬಯಸುವ ಅನೇಕ ಜನರಿದ್ದಾರೆ. ಕಪ್ಪು ಕನ್ನಡಕವನ್ನು ಹಾಕಿಕೊಂಡವರು ಯಾರನ್ನು ಬೇಕಾದರೂ ನೋಡಬಹುದು, ಆದರೆ ಅವರು ಯಾರನ್ನು ನೋಡುತ್ತಿದ್ದಾರೆಂಬುದು ಅವರ ದೃಷ್ಟಿಯ ಪರಿಧಿಯಲ್ಲಿರುವ ಯಾರಿಗೂ ತಿಳಿಯುವುದಿಲ್ಲ. ಕೆಲವರು ಮನೆಯ ಕಿಟಕಿಗಳಿಗೆ ತೆಳು ಬಣ್ಣದ ಕಪ್ಪು ಗಾಜು ಅಥವಾ ಒಮ್ಮುಖ ಕನ್ನಡಿಯ ಗಾಜನ್ನು ಹಾಕಿಸುತ್ತಾರೆ. ಅದರ ಮೂಲಕ ಹೊರಗಿನವರು ಅವರಿಗೆ ಕಾಣಿಸುತ್ತಾರೆ. ಆದರೆ ಹೊರಗಿನವರಿಗೆ ಅವರು ಕಾಣಿಸುವುದಿಲ್ಲ. ಮತ್ತೆ ಕೆಲವರು ಮನೆ ಕಟ್ಟಿಸುವಾಗಲೇ ಅಡುಗೆ ಮನೆ ಮತ್ತು ಹಾಲ್ ಅನ್ನು ಪ್ರತ್ಯೇಕಿಸುವ ಗೋಡೆಯಲ್ಲಿ ರಂಧ್ರವೊಂದನ್ನು ರಚಿಸಿ ಅದೇ ಗೋಡೆಯ ಹಾಲ್‌ನ ಭಾಗದಲ್ಲಿ ಷೋಕೇಸ್ ನಿರ್ಮಿಸಿಕೊಳ್ಳುತ್ತಾರೆ. ಅಡುಗೆ ಮನೆಯಲ್ಲಿರುವವರಿಗೆ ರಂಧ್ರದ ಬಿಲ್ಲೆಯನ್ನು ಸರಿಸಿದರೆ ಹಾಲ್‌ನಲ್ಲಿರುವ ಜನರು ಕಾಣಿಸುತ್ತಾರೆ. ಹಾಲ್‌ನಲ್ಲಿ ಇರುವ ಜನರಿಗೆ ಅಡುಗೆಮನೆಯಲ್ಲಿ ಇರುವವರು ತಮ್ಮನ್ನು ಗಮನಿಸುತ್ತಿದ್ದಾರೆಂಬುದು ತಿಳಿಯುವುದಿಲ್ಲ.

ಒಬ್ಬ ಕೇಡಿಯೋ, ಕಳ್ಳಸಾಗಾಣಿಕೆದಾರನೋ, ಸಮಾಜಘಾತುಕ ವ್ಯಕ್ತಿಯೋ ಖಳನಾಯಕ ಅಥವಾ ಪ್ರತಿನಾಯಕನಾಗಿರುವ ಸಿನೆಮಾಗಳಲ್ಲಿ ಗೋಡೆಯ ಯಾವುದೋ ಚಿತ್ರಪಟವನ್ನು ಸರಿಸಿದರೆ ಒಂದು ಕಳ್ಳಬಾಗಿಲು, ಮತ್ಯಾವುದೋ ಗುಂಡಿಯನ್ನು ಒತ್ತಿದರೆ ನೆಲಮಾಳಿಗೆಗೆ ಕಳ್ಳದಾರಿ ತೋರಿಸುವ ಬಾಗಿಲುಗಳು ತೆರೆದುಕೊಳ್ಳುತ್ತವೆ. ಅದು ಅವನ ಆತ್ಮರಕ್ಷಣೆಗೆ. ದುಷ್ಟವ್ಯಕ್ತಿಗೂ ಆತ್ಮರಕ್ಷಣೆಯ ಹಕ್ಕು ಇದೆಯಲ್ಲವೆ!

ಇನ್ನೊಬ್ಬರ ಮಾತುಗಳನ್ನು ಕದ್ದು ಕೇಳಿಸಿಕೊಳ್ಳುವುದು ಅನೈತಿಕ. ಆದರೆ ಗೂಢಚಾರರು ಹಾಗೆ ಮಾಡಿದರೆ ಅನೈತಿಕವಾದರೂ, ಅಪರಾಧವಲ್ಲ. ಪರಮ ಪತಿವ್ರತೆಯಾದ ಸೀತೆಯ ಬಗ್ಗೆ ಒಡಕು ಮಾತಾಡಿದ ಸಂಗತಿಯು ಆದರ್ಶ ಪ್ರಜಾಪರಿಪಾಲಕನೆಂಬ ಖ್ಯಾತಿ ಪಡೆದ ಶ್ರೀರಾಮಚಂದ್ರನಿಗೆ ಗೊತ್ತಾಗಿದ್ದೇ ಒಬ್ಬ ಗೂಢಚಾರನ ಮೂಲಕ. ಸರ್ಕಾರವೇ ತಾನು ಆಳುವ ‘ಜನರ ಹಿತದೃಷ್ಟಿಯಿಂದ’, ಅವರ ‘ಕ್ಷೇಮಕ್ಕಾಗಿ’ ತನ್ನನ್ನು ಅಧಿಕಾರದಲ್ಲಿ ಕೂಡಿಸಿದ ಜನರ ಮಾತುಗಳನ್ನು ಕದ್ದಾಲಿಸಬಹುದು, ಸಂಗ್ರಹಿಸಬಹುದು. ಈ ಡಿಜಿಟಲ್ ಸತ್ಯ ಎನ್.ಎಸ್.ಎ ದ ಉದ್ಯೋಗಿಯಾದ ಸ್ನೋಡೆನ್ ಬಯಲು ಮಾಡುವ ತನಕ ಯಾರಿಗೂ ಗೊತ್ತಿರಲಿಲ್ಲ. ಈಗಲೂ ಇಂಥದ್ದು ತುಂಬಾ ಜನರಿಗೆ ಗೊತ್ತಿಲ್ಲ.

ಭಾರತವನ್ನು ಈಗ ಸಂಘಪರಿವಾರದ ಜನರಿರುವ, ಫ್ಯಾಸೀ ಧೋರಣೆಯ ಸರ್ಕಾರ ಆಳುತ್ತಿದೆ. ಡಿಜಿಟಲ್ ವ್ಯಾಪಾರದ ಜಾಗತಿಕ ಬಂಡವಳಿಗರು ಅದರ ಬೆನ್ನಿಗಿದ್ದಾರೆ. ಲಾಠಿ ಹಿಡಿದು ತಿರುಗಿಸಿದರೆ ಬುಲೆಟ್ ಕೂಡ ಒಳಗೆ ಬರುವುದಿಲ್ಲವೆಂದು ನಂಬುತ್ತಾ, ಕೋಮುದ್ವೇಷ-ಸುಳ್ಳು ವದಂತಿಗಳನ್ನು ಹರಡುತ್ತಿದ್ದ ಬಡ ಕುಟುಂಬಗಳ ಸ್ವಯಂಸೇವಕರು ಇಂದು ಜಾಗತಿಕ ಬಂಡವಾಳದ ಫಲಾನುಭವಿಗಳಾಗಿ ಲ್ಯಾಪ್‌ಟಾಪ್/ಸ್ಮಾರ್ಟ್‌ಫೋನ್ ಹಿಡಿದು ಮೊದಲು ಮಾಡುತ್ತಿದ್ದ ಕೆಲಸಗಳನ್ನೇ ಇನ್ನೂ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಡಿಜಿಟಲೀಕರಣದ ಬಂಡವಾಳಶಾಹಿ ಆಳ್ವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ, ಸಂವಹನದ ಸಾಧನಗಳಾಗಿ ಮಾರುಕಟ್ಟೆಯನ್ನು ಪ್ರವೇಶಿಸಿದ ಕಂಪ್ಯೂಟರ್, ಸೆಲ್‌ಫೋನ್, ಅಂತರ್ಜಾಲ ಕೊಂಡಿಗಳು, ಸ್ಮಾರ್ಟ್‌ಫೋನ್ ಕ್ಯಾಮರಾ, ಸಾಮಾಜಿಕ ಜಾಲತಾಣಗಳು ಮುಂತಾದ ಎಲ್ಲಾ ಡಿಜಿಟಲ್ ಸಾಧನಗಳೂ ಇಂದು ಜನರ ವೈಯಕ್ತಿಕ ಮಾಹಿತಿ, ಕುಟುಂಬದ ಸದಸ್ಯರು, ಸ್ನೇಹಿತರು, ಬೇಕು-ಬೇಡಗಳು, ಆಹಾರ, ಬಟ್ಟೆ-ಬರೆ, ರುಚಿ-ಅಭಿರುಚಿಗೆ ಸಂಬಂಧಿಸಿದ ಅವರ ವಿವಿಧ ಆಯ್ಕೆಗಳು,  ರಾಜಕೀಯ ಒಲವು, ಮುಂತಾದುವೆಲ್ಲವನ್ನೂ ವ್ಯವಸ್ಥಿತವಾಗಿ ಕಲೆಹಾಕುವ ಸರ್ವೇಕ್ಷಣೆಯ ಸಾಧನಗಳಾಗಿ ಬಳಕೆಯಾಗುತ್ತಿವೆ. ಬಳಕೆದಾರರ ವೈಯಕ್ತಿಕ ಮಾಹಿತಿ ಈಗ ಮಾರಾಟ ಮಾಡಬಹುದಾದ ಲಾಭದಾಯಕ ಸರಕಾಗಿದೆ.

ಕಳ್ಳರು ಗೋಡೆಗೆ ಕನ್ನ ಕೊರೆದು ಕಳ್ಳತನ ಮಾಡುತಿದ್ದ ಕಾಲವೊಂದಿತ್ತು. ಡಿಜಿಟಲ್ ಸಾಧನಗಳನ್ನು ಬಳಸಿ ಯಾರದೋ ಬ್ಯಾಂಕಿನಲ್ಲಿನ ಹಣವನ್ನು ಮತ್ಯಾರೋ ಕದಿಯಲು ಸಾಧ್ಯ ಎಂಬುದು ಈಗ ಹಳೆಯ ಮಾತು. ಕದಿಯುವುದು ಮಾತ್ರವಲ್ಲ, ಯಾರೋ ಮತ್ಯಾರದೋ ಕಂಪ್ಯೂಟರಿನೊಳಕ್ಕೆ ಡಿಜಿಟಲ್ ಮಾರ್ಗದಲ್ಲಿ ಕದ್ದು ಪ್ರವೇಶಿಸಿ ಆತಂಕಕಾರಿ ದಾಖಲೆಗಳನ್ನು ಹಾಕಬಹುದು. ಇದು ನಮಗಾಗದವರು ನಮ್ಮ ಮನೆಯೊಳಕ್ಕೆ ಕದ್ದು ಪ್ರವೇಶಿಸಿ ಗಂಧದ ತುಂಡನ್ನೋ, ಗಾಂಜಾ ಸೊಪ್ಪನ್ನೋ ಇರಿಸಿ ನಮ್ಮ ವಿರುದ್ಧ ಪೋಲೀಸರಿಗೆ ಮಾಹಿತಿ ಸಿಗುವಂತೆ ಮಾಡಿದ ಹಾಗೆ. ನಿಸ್ವಾರ್ಥ, ಸುಶಿಕ್ಷಿತ ವೃದ್ಧ, ಸಮಾಜಸೇವಕರ ಕಂಪ್ಯೂಟರಿನಲ್ಲಿ ಯಾರೋ ದುಷ್ಟ ಡಿಜಿಟಲ್ ಸೇವಕರು ‘ವಿಧ್ವಂಸಕ’ ದಾಖಲೆಗಳನ್ನು ಕದ್ದು ಇರಿಸಿ ಅವರನ್ನು ಜೈಲಿನಲ್ಲಿ ಕೊಳೆಯುವಂತೆ, ಸಾಯುವಂತೆ ಮಾಡುವ ವಿಧ್ವಂಸಕ ಡಿಜಿಟಲ್ ತಂತ್ರಜ್ಞಾನ ಈಗ ಮೂರು ವರ್ಷ ಹಳೆಯದು. ಆ‘ವಿಧ್ವಂಸಕ ದಾಖಲೆ’ಗಳು ಆ ಸಮಾಜಸೇವಕರ ಕಂಪ್ಯೂಟರಿನಲ್ಲಿ ಇವೆ ಎಂದು ಅವರನ್ನು ಬಂಧಿಸಿದ ಪೋಲೀಸರಿಗೆ ಹೇಗೆ ತಿಳಿಯಿತು? ಈ ಪ್ರಶ್ನೆಗೆ ಉತ್ತರ ಬಹುಶಃ ಡಿಜಿಟಲ್ ಸರ್ವೇಕ್ಷಣೆಯ ಸಾಧ್ಯತೆಗಳಲ್ಲಿ ದೊರೆಯಬಹುದು.

ಇದನ್ನೆಲ್ಲಾ ತಿಳಿದುಕೊಂಡು ನಾವು ಮಾಡುವುದೇನಿದೆ? ಇದಕ್ಕೆ ಉತ್ತರ ಇಷ್ಟೆ. ಈ ಎಲ್ಲಾ ವಿವರಗಳ ಸಾರ ಸರ್ವಸ್ವವನ್ನು ಎರಡು ಮಾತುಗಳಲ್ಲಿ ಹೇಳಬಹುದು. ಇದು ಜಾಗತಿಕ ಬಂಡವಾಳವು ಜನಸಾಮಾನ್ಯರೊಂದಿಗೆ ಅವರ ಹಿತಾಸಕ್ತಿಗಳಿಗೆ ವಿರುದ್ಧವೇ ನಡೆಸುತ್ತಿರುವ ಉತ್ಪಾದನೆ ಮತ್ತು ವ್ಯಾಪಾರದ ಸಂಬಂಧಗಳು. ಜೊತೆಗೆ ಬಂಡವಾಳಶಾಹೀ ಮಾರುಕಟ್ಟೆಯು ಹುಟ್ಟಿಸಿದವರನ್ನೇ ಮೆಟ್ಟಿ ನಿಲ್ಲುವ ಪಿಶಾಚಿಯಂತೆ ಬಂಡವಳಿಗರನ್ನೂ ಆಳುತ್ತಿದೆ. ಪ್ರತಿಭಟನೆಗಳಿಂದ, ಆಗ್ರಹಗಳಿಂದ ಅಥವಾ ಇಂದಿನ ಸರ್ಕಾರಗಳಿಗೆ ಶಾಪಹಾಕುವುದರಿಂದ ಈ ವ್ಯವಸ್ಥೆಯನ್ನು ಬದಲಾಯಿಸುವುದು ಎಂದಿಗೂ ಸಾಧ್ಯವಿಲ್ಲ. ಬಂಡವಾಳದ ಬಂಡವಾಳ ನಿಂತಿರುವುದು ಜನಸಾಮಾನ್ಯರು ಬಂಡವಳಿಗರಿಗೆ ಮುಫತ್ತಾಗಿ ದುಡಿದು ಕೊಡುತ್ತಿರುವ ಹೆಚ್ಚುವರಿ ಮೌಲ್ಯದ ಮೇಲೆ. ಜನರಿಗೆ ಹುಟ್ಟಿನಿಂದಲೇ ಅಂಟಿಕೊಂಡು ಬಂದಿರುವ ಜಾತಿ ಎಂಬ ಶ್ರಮ ವಿಭಜನೆಯ ಮೇಲೆ. ಜನಸಾಮಾನ್ಯರು ಸಂಘಟಿತರಾಗಿ ಸಮಾಜವಾದೀ ಸರ್ಕಾರವನ್ನು ಅಧಿಕಾರಕ್ಕೆ ತಂದಾಗ ಮಾತ್ರ ಇವನ್ನು ಬದಲಾಯಿಸುವುದು ಸಾಧ್ಯ. ಚುನಾವಣೆ ಬಂದಾಗ ರಾಜ್ಯಾಧಿಕಾರಕ್ಕೆ ಪ್ರಯತ್ನಿಸುವುದಲ್ಲ. ಅದು ಬರುವ ಮೊದಲೇ ಸಮಾಜವಾದೀ ಅರಿವನ್ನು ಬೆಳೆಸಿಕೊಂಡು ಸಿದ್ಧರಾಗುವುದು.

Donate Janashakthi Media

Leave a Reply

Your email address will not be published. Required fields are marked *