ಅಚ್ಯುತ ಸಂಕೇತಿ
ದೊಡ್ಡ ಸ್ಟಾರ್ ಕಾಸ್ಟ್ ಇಲ್ಲ. ದೊಡ್ಡ ಬ್ಯಾನರ್ ಇದಲ್ಲ; ಅಪ್ಪಟ ಪ್ರತಿಭೆಯನ್ನೇ ಮೂಲದ್ರವ್ಯವಾಗಿ ಭರವಸೆ ಇರಿಸಿಕೊಂಡಿರುವ ಕನ್ನಡದ ಕಲಾವಿದರು. ಅನಗತ್ಯವಾಗಿ ವಿದೇಶೀ ನೆಲದಲ್ಲಿ ಚಿತ್ರೀಕರಿಸುವ ಭ್ರಮೆ ಇರದ ನಿರ್ದೇಶಕ. ಮರ ಸುತ್ತುವ ಪ್ರೇಮಿಗಳ ಯುಗಳ ಗಾನವಿಲ್ಲ. ಅತಿ ದೊಡ್ಡ ಹೂಡಿಕೆ ಇಲ್ಲ; ಇವೆಲ್ಲ ಇಲ್ಲಗಳ ಮಧ್ಯೆಯೂ ಎಲ್ಲವೂ ಇರುವ ಒಂದು ಚಿತ್ರ ತೆರೆಗೆ ಬಂದಿದೆ – ಅದುವೇ ಪಂಪ’.
ಸಿನಿಮಾ ಪರಿಭಾಷೆಯ ದೃಷ್ಟಿಯಿಂದ ಅಮೂರ್ತವಾದ ಕನ್ನಡ ಭಾಷೆ, ಅಭಿಮಾನ, ಕನ್ನಡ ಜಾಯಮಾನ, ಕನ್ನಡಪರ ನಿಲುವು ಇವೇ ಚಿಂತನೆಯ ಒಂದು ಎಳೆಯಾಗಿ, ಮುಂದೆ ಎಳೆಎಳೆಯಾಗಿ ಹೆಣೆದು, ಬೆಳೆದು ಬಲವಾದ ಬುನಾದಿ ಹೊಂದಿದುದರ ಪ್ರತಿಫಲವೇ ಪಂಪ (ಪಂಚಳ್ಳಿ ಪರಶಿವಮೂರ್ತಿ)’ ಚಲನಚಿತ್ರವಾಗಿದೆ. ಅಮೂರ್ತವಾದ ಕನ್ನಡಪರ ಚಿಂತನೆಯೇ ಮೂರ್ತರೂಪಗೊಂಡು ಚಿತ್ರವಾಗಿ ಹೇಗೆ ರೂಪುಗೊಳ್ಳಬಹುದು ಎಂಬುದಕ್ಕೆ ಪಂಪ’ ಕನ್ನಡ ಚಲನಚಿತ್ರ ಒಂದು ಜ್ವಲಂತ ನಿದರ್ಶನ.
ಕರ್ನಾಟಕದಲ್ಲಿ ಕನ್ನಡವೇ ಮರೆಯಾಗುತ್ತಿರುವ ಅಪಾಯ ಅನುಭವವಾಗುತ್ತಿರುವ ಈ ಪರ್ವಕಾಲದಲ್ಲಿ, ಕನ್ನಡ ನೆಲದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಕನ್ನಡವೇ ಅನ್ನದ ಭಾಷೆ, ಕನ್ನಡವೇ ಜ್ಞಾನದ ಮೂಲ, ಕನ್ನಡವೇ ಉಸಿರು ಎಂದು ಗಟ್ಟಿಯಾಗಿ, ಪ್ರಾಮಾಣಿಕವಾಗಿ ನಂಬಿ, ಅದರಂತೆ ಹೋರಾಟದ ಬದುಕು ಬದುಕುತ್ತಿರುವ ಕನ್ನಡದ ಪ್ರಾಧ್ಯಾಪಕ, ಆತನ ಕಾಲೇಜು, ಸುತ್ತಲೂ ನಡೆಯುವ ಕೆಲವು ಘಟನೆಗಳು ಒಂದೊಂದೇ ತೆರೆದುಕೊಳ್ಳುತ್ತಾ ಕೆಲವು ಅನಿರೀಕ್ಷಿತ ತಿರುವುಗಳನ್ನು ಪಡೆಯುವ ರೋಚಕ ಹಂತವನ್ನೂ ತಲುಪುವುದು ಚಿತ್ರದ ವಿಶೇಷತೆ.
ಚಿತ್ರದ ನಿರ್ಮಾಪಕ ಟೋಟಲ್ ಕನ್ನಡದ ಲಕ್ಷ್ಮೀಕಾಂತ್ ಹಾಗೂ ಪಂಪ ನಿರ್ದೇಶಕ ಎಸ್. ಮಹೇಂದರ್ ಅಭಿವ್ಯಕ್ತಿಸಿದಂತೆ ಪಂಪ-ಕಾಲ್ಪನಿಕವಲ್ಲ; ಒಂದು ಸತ್ಯ ಘಟನೆಯ ಪ್ರೇರಣೆಯ ಫಲಶೃತಿ.
ಇಡೀ ಚಿತ್ರದ ಪಾತ್ರದ ಆಯ್ಕೆ ಹಾಗೂ ಅದರ ಪೋಷಣೆಯಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಅನಗತ್ಯ ಪಾತ್ರಗಳ ದೊಂಬಿ-ಗೋಜು-ಗದ್ದಲಗಳಿರದೆ, ಕತೆಗೆ ಪೂರಕವಾದ ಪಾತ್ರಗಳ ಪೋಷಣೆ ಪಂಪ’ನ ವೈಶಿಷ್ಯ. ಮಧ್ಯವಯಸ್ಕ ಪ್ರೊಫೆಸರ್(ಕೀರ್ತಿಭಾನು) ಆದಿಯಾಗಿ, ಎಲ್ಲರ ಭಾಷಾ ಪ್ರೌಢಿಮೆ, ಉಚ್ಚಾರಣೆ, ಸ್ಪಷ್ಟ-ಸಹಜ ಹಾವಭಾವಾಭಿವ್ಯಕ್ತಿ ಚಲನಚಿತ್ರದುದ್ದಕ್ಕೂ ಹೇರಳವಾಗಿ ದೊರಕುವುದು. ಯುವಪಾತ್ರಗಳ ಲವಲವಿಕೆಯ ಅಭಿನಯ (ಸಂಗೀತಾ, ರಾಘು), ರವಿಭಟ್, ಶ್ರೀನಿವಾಸಪ್ರಭು, ಅರವಿಂದ್, ಹಿರಿಯ ನಟ ಮೊದಲಾದವರ ಸಹಜಾಭಿನಯ, ಗಮನ ಸೆಳೆಯುವಂತಹುದು; ಶ್ಲಾಘನೀಯ.
ಕನ್ನಡ ಪರ ದನಿ ಎತ್ತಿದರೆ, ಕರ್ನಾಟಕದಲ್ಲಿ ಕನ್ನಡವನ್ನು ಆಳವಾಗಿ ಬೇರೂರಿಸಿದರೆ, ಎಲ್ಲಿ ತಮ್ಮ ತಮ್ಮ ಭದ್ರತೆಗೆ ಅಪಾಯವಾಗುವುದೋ ಎನ್ನುವ ವ್ಯಾಪಾರೀ ಭೀತಿಯ ಹಿನ್ನೆಲೆ ಇಂಗ್ಲೀಷ್ ವ್ಯಾಮೋಹಿ ಶಾಲೆಗಳ ಸ್ವಹಿತಾಸಕ್ತಿಗಳು, ರಾಜಕಾರಣ, ಪಟ್ಟಭದ್ರ ಹಿತಾಸಕ್ತಿಗಳ ತೆರೆಮರೆಯ ಕುಹಕಗಳನ್ನು ಮಾರ್ಮಿಕವಾಗಿ ಬಿಚ್ಚಿಡುವ ಮೂಲಕ ಪಂಪ, ಕನ್ನಡ ಭಾಷೆಯ ಮೇಲೆ ಖಾಸಗಿ ಆಂಗ್ಲವ್ಯಾಮೋಹಿ ಶಾಲೆಗಳ ಆಟಾಟೋಪ, ಅದರ ಅಡ್ಡಪರಿಣಾಮಗಳನ್ನು ನಮ್ಮ ಮುಂದಿರಿಸುತ್ತದೆ. ಈ ದೃಷ್ಟಿಯಿಂದ ಕನ್ನಡ ಭಾಷೆ, ನೆಲ-ಜಲದ ಬಗ್ಗೆ ಚಿತ್ರ ಅಲ್ಪಕಾಲವಾದರೂ ವೀಕ್ಷಕರನ್ನು ಚಿಂತನೆಗೆ ಹಚ್ಚಿದರೆ ಅಷ್ಟರಮಟ್ಟಿಗೆ ಪಂಪ’ ಪ್ರಯತ್ನ ಸಾರ್ಥಕವಾದೀತು.
ತಾಂತ್ರಿಕವಾಗಿ ಕೆಲ ಲೋಪದೋಷಗಳು ಚಲನಚಿತ್ರದಲ್ಲಿ ಇಲ್ಲದಿಲ್ಲ. ʻಮಧ್ಯರಾತ್ರಿಯಾಯಿತು’ ಎಂದು ಪ್ರೊಫೆಸರ್ ಪಂಪ, ನಾಯಕಿ ಲೇಖನಾಳನ್ನು ಮನೆಗೆ ಬಿಟ್ಟುಬರಲು ಎದ್ದಾಗ ಆ ಮನೆಯಲ್ಲಿದ್ದ ಗಡಿಯಾರ ಮಧ್ಯರಾತ್ರಿ ೨ ಗಂಟೆ ತೋರಿಸಿರುತ್ತದೆ. ಆದರೆ, ಪ್ರೊಫೆಸರ್ ಪಂಪ (ಪಂಚಳ್ಳಿ ಪರಶಿವಮೂರ್ತಿ) ಜೊತೆ ಕಾರಿನಲ್ಲಿ ಹೊರಟು, ತನ್ನ ಮನೆ ತಲುಪಿ ಒಳಗೆ ಪ್ರವೇಶಿಸುವ ಲೇಖನಾಳನ್ನು ಅವರ ತಂದೆತಾಯಿಗಳು ತರಾಟೆಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಲೇಖನಾಳ ಮನೆಯಲ್ಲಿನ ಗಡಿಯಾರ ಕೇವಲ ೧೧.೩೫ ತೋರಿಸಿರುತ್ತದೆ.
ಮತ್ತೊಂದು ಅಂಶವೆಂದರೆ, ಕನ್ನಡಪರ ಮನಸ್ಸಿನ ಪ್ರೊಫೆಸರ್ ಸದಾ ವಿದೇಶಿ ದಿರಿಸನ್ನು ನೆನಪಿಸುವ ಸೂಟ್ ಧರಿಸುತ್ತಾ ಓಡಾಡುತ್ತಿರುವುದು ಕಂಡಾಗ, ಚಿಂತನೆಯಲ್ಲಿ ಕನ್ನಡಪರವಾಗಿರುವ ಪ್ರೊಫೆಸರ್ ತನ್ನ ವಸ್ತ್ರ ಸಂಹಿತೆಯಲ್ಲಿ ಕನ್ನಡತನವನ್ನು ಮರೆತು, ಸದಾ ಆಂಗ್ಲರ ಧಿರಿಸನ್ನು ನೆನಪಿಸುವ ಧಿರಿಸು ಹಾಕಿಕೊಂಡಿರುವುದು ಸ್ವಲ್ಪ ವೈರುಧ್ಯ ಎನಿಸಿತು. ಪಂಪನ ಕನ್ನಡದ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಒಂದೆರಡು ಸನ್ನಿವೇಶವಿರುವ ಪರಿಣಾಮಕಾರಿ ಘಟನೆಗಳನ್ನು ಹೆಣೆಯಬಹುದಿತ್ತು.
ಕಥಾಹಂದರ, ಚಿತ್ರಕಥೆಯ ದೃಷ್ಟಿಯಿಂದ ʻಪಂಪ’ ನೋಡುಗರಿಗೆ ಹತ್ತಿರವಾಗುತ್ತಾನೆ. ನಿರ್ದೇಶಕರೊಂದಿಗೆ ನೈಪುಣ್ಯತೆಯೊಂದಿಗೆ, ತಾಂತ್ರಿಕವಾಗಿಯೂ ಚಲನಚಿತ್ರ ಗೆದ್ದಿದೆ. ಕಾಲೇಜು ವಾತಾವರಣ, ಪರಿಸರ, ನದಿ, ಹಸಿರು ಪ್ರದೇಶಗಳನ್ನು ಅತ್ಯಂತ ಮನೋಜ್ಞವಾಗಿ ಸೆರೆಹಿಡಿದಿರುವುದು ಚಲನಚಿತ್ರಕ್ಕೆ ಪೂರಕ ಅಂಶ. ಪ್ರೇರಕ ಸಂಗೀತ, ಹಿನ್ನೆಲೆ ಸಂಗೀತ (ನಾದಬ್ರಹ್ಮ ಹಂಸಲೇಖ), ಉತ್ತಮ ಸಂಭಾಷಣೆ, ಚುರುಕು ಸಂಕಲನ ಚಿತ್ರಕ್ಕೆ ಮೆರುಗು ನೀಡಿದೆ. ನಿರ್ಮಾಪಕ ಲಕ್ಷ್ಮೀಕಾಂತ್ ಅವರ ಕನ್ನಡಪ್ರೇಮ ಚಿತ್ರದುದ್ದಕ್ಕೂ ಅನುಭವವಾಗುತ್ತದೆ. ಬ್ರಹ್ಮ (ಹಂಸಲೇಖ), ವಿಷ್ಣು (ಲಕ್ಷ್ಮೀಕಾಂತ್), ಮಹೇಶ್ವರ (ಮಹೇಂದರ್)-ಹೀಗೆ ತ್ರಿಮೂರ್ತಿ ಸಂಗಮದ ಫಲವಾದ ʻಪಂಪ’ ಹರಡಲಿ ಎಲ್ಲೆಡೆ ಕನ್ನಡದ ಕಂಪ.