ಬೆಂಗಳೂರು: ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆ ಹಾಗೂ ಪಟ್ಟಣ ಪಂಚಾಯಿತಿಗಳ ಚುನಾವಣೆ ಘೋಷಿಸಿ ಈಗಾಗಲೇ ಪ್ರಚಾರದ ಭರಟೆ ಮುಗಿದಿದೆ. ಸೆಪ್ಟೆಂಬರ್ 3ರ ಶುಕ್ರವಾರ ಮತದಾನ ನಡೆಯಲಿದೆ.
ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳಿಗೆ ಹಾಗೂ ವಿವಿಧ ಜಿಲ್ಲೆಗಳಲ್ಲಿ ತೆರವಾಗಿದ್ದ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳಿಗೆ ಮತದಾನ ನಡೆಯಲಿದೆ.
ಸ್ಪರ್ಧೆಯಲ್ಲಿರುವ ಎಲ್ಲಾ ಬಹುತೇಕ ಕಡೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಯಿಂದ ಕ್ಷೇತ್ರದಲ್ಲಿನ ಮತದಾರರ ಒಲವು ಯಾರ ಪರವಾಗಿ ಎಂಬುದು ಫಲಿತಾಂಶ ಘೋಷಣೆಯ ನಂತರವೇ ತಿಳಿಯಲಿದೆ.
ಬೆಳಗಾವಿ ಮಹಾನಗರ ಪಾಲಿಕೆ
58 ಸದಸ್ಯ ಬಲದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಬಹಿರಂಗ ಪ್ರಚಾರ ಅಂತ್ಯವಾಗಿರುವ ಹಿನ್ನಲೆಯಲ್ಲಿ ಅಭ್ಯರ್ಥಿಗಳು ಮನೆ ಮನೆ ಮತಯಾಚನೆ ನಡೆಸುತ್ತಿದ್ದಾರೆ.
ಬೆಳಗಾವಿ ಪಾಲಿಕೆಯಲ್ಲಿ ಕಾಂಗ್ರೆಸ್, ಬಿಜೆಪಿ ಬಂಡಾಯ ಅಭ್ಯರ್ಥಿಗಳಿಗೆ ಪಕ್ಷದ ನಾಯಕರು ಬಿಸಿ ಮುಟ್ಟಿಸಿದ್ದಾರೆ. ಬಿಜೆಪಿಯಲ್ಲಿ 9 ಜನ, ಕಾಂಗ್ರೆಸ್ ನಲ್ಲಿ ಇಬ್ಬರನ್ನು ಉಚ್ಛಾಟನೆ ಮಾಡಲಾಗಿದೆ. ಪಕ್ಷಗಳಿಗೆ ಪಕ್ಷೇತರ ಅಭ್ಯರ್ಥಿಗಳು ದೊಡ್ಡ ಸವಾಲ್ ಆಗಿದ್ದು, ಫಲಿತಾಂಶದ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ: ಸೆಪ್ಟಂಬರ್ 3ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ
ಬಿಜೆಪಿಯಲ್ಲಿ ಬಂಡಾಯವೆದ್ದ 9 ಜನರನ್ನು ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಮಾಜಿ ಮೇಯರ್ ಶಿವಾಜಿ ಸುಂಟಕರ, ದೀಪಕ ಜಮಖಂಡಿ, ಸುರೇಶ ಯಾದವ್.ಶಿವಾನಂದ ಮುಗಳಿಹಾಳ್, ಗಣೇಶ ನಂದಗಡಕರ್, ಸಂಜಯ ಸವಾಸೇರಿ, ಆರತಿ ಪಾಟೋಳೆ, ಶಿವಾನಂದ ಮುರಗೋಡ, ಜ್ಯೋತಿ ಭಾವಿಕಟ್ಟಿ ಉಚ್ಛಾಟನೆ ಮಾಡಿ ಆದೇಶ ಮಾಡಲಾಗಿದೆ.
ಮಾಜಿ ಪಾಲಿಕೆ ಸದಸ್ಯ ಶಿವನಗೌಡ ಪಾಟೀಲ್ ಮಾತನಾಡಿ ‘ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಬಂಡಾಯ ಅಭ್ಯರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದರಿಂದ ಖಂಡಿತವಾಗಿಯೂ ಬಿಸಿ ಎದುರಿಸಬೇಕಾಗುತ್ತದೆ. ಎರಡೂ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಎಡವಿದೆ. ಅನೇಕ ಬಂಡಾಯ ಅಭ್ಯರ್ಥಿಗಳು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಸ್ಪರ್ಧೆಗೆ ಪೈಪೋಟಿಯನ್ನು ನೀಡಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿಯೂ ಬಂಡಾಯ ಎದುರಾಗಿದ್ದು ಜಯಶ್ರೀ ಮಾಳಗಿ ಮತ್ತು ಜಯರಾಜ್ ಹಲೇಕರ್ ಇಬ್ಬರನ್ನೂ ಉಚ್ಛಾಟನೆ ಮಾಡಲಾಗಿದೆ.
ಬೆಳಗಾವಿ ಪಾಲಿಕೆಯಲ್ಲಿ ಭಾಷೆ, ಗಡಿ ವಿಚಾರದಲ್ಲಿ ನಡೆಯುತ್ತಿದ್ದ ಚುನಾವಣೆ ಈಗ ತಣ್ಣಗಾಗಿದ್ದು, ಪಕ್ಷಗಳ ಚಿಹ್ನೆ ಮೇಲೆ ಸ್ಪರ್ಧೆ ಏರ್ಪಟ್ಟಿದೆ. ರಾಜಕೀಯ ತಜ್ಞರ ಪ್ರಕಾರ ಹಾಲಿ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳೇ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ. ಗುರುತಿಸಲ್ಪಟ್ಟ ರಾಜಕೀಯ ಪಕ್ಷಗಳಲ್ಲಿನ ಕೆಲವು ವಿಭಾಗಗಳು ಜಾತಿ ಸಮೀಕರಣಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದು. ಇದಲ್ಲದೆ ಪ್ರತಿ ವಾರ್ಡಿನಲ್ಲಿಯೂ ಸ್ಥಳೀಯ ಸಮಸ್ಯೆಗಳ ಮೇಲೆ ಮಾತ್ರ ನಿಗಮದ ಚುನಾವಣೆಗಳು ನಡೆಯುತ್ತವೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
82 ಸದಸ್ಯ ಬಲದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ಸಿಗದಿರುವವರು ಬಂಡಾಯದ ಬಾವುಟ ಹಾರಿಸಿದ್ದು, ಬಿಜೆಪಿ-ಕಾಂಗ್ರೆಸ್ ಪಕ್ಷದಲ್ಲಿನ ಹಲವು ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ. ಕೊನೆ ಕ್ಷಣದವರೆಗೂ ಟಿಕೆಟ್ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ತಮ್ಮನ್ನು ಪರಿಗಣಿಸದೆ ಇರುವುದನ್ನು ಕಂಡು ಬಂಡಾಯದ ಬಾವುಟ ಹಾರಿಸಿದ್ದಾರೆ.
ಇದನ್ನು ಓದಿ: ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲ: ಇನ್ನೂ ಒಂದೂವರೆ ವರ್ಷ ಚುನಾವಣೆ ಇಲ್ಲ
ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬಿಸಿ ಜೋರಾಗಿದೆ. ಬಂಡಾಯವೆದ್ದ ಅಭ್ಯರ್ಥಿಗಳ ಉಚ್ಚಾಟನೆ ಮಾಡಲಾಗಿದ್ದು, ಕಾಂಗ್ರೆಸ್ ನಾಯಕರ ಮನವೊಲಿಕೆಗೂ ಮಣಿಯದೆ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ 34 ಜನರನ್ನು ಮುಂದಿನ 6 ವರ್ಷ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಹಲವು ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ನಿರತರಾಗಿದ್ದ ವೀರೇಶ ಉಂಡಿ ಸೇರಿ ಹಲವು ಹಾಲಿ ಸದಸ್ಯರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ವೀರೇಶ ಉಂಡಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ ನಂ.52ರಲ್ಲಿ ಆಕಾಂಕ್ಷಿಯಾಗಿದ್ದ ಚೇತನ ಹಿರೇಕೆರೂರ ಸಹ ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ.
ಟಿಕೆಟ್ ತಪ್ಪಿರುವ ಬಗ್ಗೆ ಗಣೇಶ ಟಗರಗುಂಟಿ ವಾರ್ಡ್ ನಂ.71ರಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ ನಂ.50ರಲ್ಲಿ ಮಂಜುಳಾ ಯಾತಗೇರಿ ಪಕ್ಷೇತರರಾಗಿ ವಾರ್ಡ್ ನಂ.82ರಲ್ಲಿ ಕಾಂಗ್ರೆಸ್‌ನ ಕಟ್ಟಾಳು ಮೋಹನ ಅಸುಂಡಿ ಪತ್ನಿ ಅಕ್ಷತಾ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ವಾರ್ಡ್ ನಂ.68ರಲ್ಲಿ ಮಹಮ್ಮದ್ ಮುಧೋಳ ಎಂಬುವರು ಕೂಡ ಬಂಡಾಯ ಸಾರಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ
55 ಸದಸ್ಯ ಬಲದ ಕಲಬುರಗಿ ಮಹಾನಗರ ಪಾಲಿಕೆಯಲ್ಲಿಯೂ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಯಿಂದಾಗಿ ಎರಡೂ ಪಕ್ಷಗಳಿಗೆ ತಲೆನೋವಾಗಿದೆ. ಟಿಕೆಟ್ ವಂಚಿತರು ಪಕ್ಷೇತರ ಇಲ್ಲವೇ ಬೇರೆ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನು ಓದಿ: ಜಿಪಂ ತಾಪಂ ಚುನಾವಣೆ : ಗರಿಗೆದರಿದ ರಾಜಕೀಯ ಚಟುವಟಿಕೆ
ಬಿಜೆಪಿಯಿಂದ ಟಿಕೆಟ್ ವಂಚಿತರಾದವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ ನಂ 5ರಿಂದ ಎರಡು ಸಲ ಪಾಲಿಕೆ ಸದಸ್ಯ ರಾಗಿರುವ ಶಿವಾನಂದ ಪಾಟೀಲ್ ಅಷ್ಟಗಿ ತಮ್ಮ ಪತ್ನಿ ಟಿಕೇಟ್‌ಗಾಗಿ ಆಕಾಂಕ್ಷಿಯಾಗಿದ್ದರು. ಆದರೆ ಇಲ್ಲಿ ಗಂಗಮ್ಮ ಬಸವ ರಾಜ ಮುನ್ನೋಳಿಗೆ ಟಿಕೆಟ್ ನೀಡಿದ್ದರಿಂದ ಪಕ್ಷೇತರರಾಗಿ ಮಲ್ಲಮ್ಮ ಶಿವಾನಂದ ಪಾಟೀಲ್ ಅಷ್ಟಗಿ ನಾಮಪತ್ರ ಸಲ್ಲಿಸಿದ್ದಾರೆ.
ವಾರ್ಡ್ 36ರ ಸಾಮಾನ್ಯ ವಾರ್ಡ್‌ನಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ| ಶಂಭುಲಿಂಗ ಬಳಬಟ್ಟಿ ಸ್ಪರ್ಧಿಸಲು ತೀವ್ರ ಆಕಾಂಕ್ಷಿಯಾಗಿದ್ದರು. ಆದರೆ ಮಾಜಿ ಸದಸ್ಯ ಸೂರಜ್ ತಿವಾರಿಗೆ ಟಿಕೆಟ್ ನೀಡಿದ್ದರಿಂದ ಡಾ| ಬಳಬಟ್ಟಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.
ವಾರ್ಡ್ ನಂ 48 ರಲ್ಲಿ ಬಿಜೆಪಿ ಅಂತಿಮ ಪಟ್ಟಿಯಲ್ಲಿ ಉದಯ ಕಿರಣ ರೇಶ್ಮಿ ಹೆಸರು ಅಂತಿಮಗೊಂಡಿತ್ತು. ಆದರೆ ತದನಂತರ ವೀರಣ್ಣ ಹೊನ್ನಳ್ಳಿಗೆ ಟಿಕೆಟ್ ಅಂತಿಮ ಗೊಳಿಸಿದ್ದರಿಂದ ಉದಯ ಕಿರಣ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಟಿಕೆಟ್ ವಂಚಿತರಾದವರು ಬಂಡಾಯ ತೋರದೇ ಒಳಗೊಳಗೆ ಪಕ್ಷದ ವಿರುದ್ಧ ಕೆಲಸ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಚಿಂಚನಸೂರ್ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದು, ಬಿಜೆಪಿ ನಾಯಕರಿಗೆ ಅಧಿಕಾರದ ಮದ ಹೆಚ್ಚಾಗಿದೆ. ಮದ ಹೆಚ್ಚಾದ ಕಾರಣಕ್ಕೆ ಕಲ್ಯಾಣ ಕರ್ನಾಟಕ ಭಾಗವನ್ನು ಬಿಜೆಪಿ ನಾಯಕರು ಕಡೆಗಣಿಸಿದ್ದಾರೆ. ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬುದ್ಧಿ ಕಲಿಸಬೇಕು. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ ಎಂದು ಕರೆ ನೀಡಿದ್ದಾರೆ.
ನಮ್ಮ ಭಾಗಕ್ಕೆ ಬಿಜೆಪಿ ನಾಯಕರು ಅನ್ಯಾಯ ಮಾಡುತ್ತಿದ್ದಾರೆ. ಕಾರ್ಯಕರ್ತರ ಶ್ರಮಕ್ಕೆ ಬೆಲೆ ನೀಡುತ್ತಿಲ್ಲ. ಐದು ಶಾಸಕರಿದ್ದರೂ ಯಾರೊಬ್ಬರಿಗೂ ಮಂತ್ರಿ ಸ್ಥಾನ ನೀಡಿಲ್ಲ. ಕೆಕೆಆರ್ಡಿಗೆ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಹೀಗಾಗಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬುದ್ದಿ ಕಲಿಸಬೇಕು. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದೇ ನೋಟಾ ಹಾಕುವಂತೆ ಹೇಳಿದ್ದೇನೆ ಎಂದು ಮಾಧ್ಯಮಗಳಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಗೆ ತೀವ್ರ ಮುಖಭಂಗ, ಕಾಂಗ್ರೆಸ್ ಜಯ
ಕಾಂಗ್ರೆಸ್‌ನಲ್ಲೂ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮಾಜಿ ಮೇಯರ್ ಅಷ್ಪಾಕ ಅಹ್ಮದ ಚುಲಬುಲ್ ಈಚೆಗೆ ಕಾಂಗ್ರೆಸ್ ಸೇರಿದ್ದರು. ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕೊನೆ ಗಳಿಗೆಯಲ್ಲಿ ಜೆಡಿಎಸ್‌ದಿಂದ ನಾಮಪತ್ರ ಸಲ್ಲಿಸಿದ್ದರೆ.
ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಅಲೀಂ ಪಟೇಲ್, ನಾಸೀರ ಮೌಲಾನಾ ಸಹ ನಾಮಪತ್ರ ಸಲ್ಲಿಸಿದ್ದು, ಮಾಜಿ ಉಪಮೇಯರ್ ಸಜ್ಜಾದ ಅಲಿ ಆಮ್ ಆದ್ಮಿ ಹಾಗೂ ಅಜೀಮ ಪಟೇಲ್ ಎಂಐಎಂಐಎಂದಿಂದ ಸ್ಪರ್ಧಿಸಿದ್ದಾರೆ.
ಇತರರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಾಜಿಮೇಯರ್ ಭೀಮರೆಡ್ಡಿ ಕುರಕುಂದಾ ಅವರಿಗೆ ಕೊನೆ ಗಳಿಗೆಯಲ್ಲಿ ವಾರ್ಡ್ ನಂ 16ರಿಂದ ಸ್ಪರ್ಧಿಸಲು ಮಧ್ಯರಾತ್ರಿ 2 ಗಂಟೆಗೆ ಕೊನೆ ಗಳಿಗೆಯಲ್ಲಿ ಹೇಳಿದ್ದರಿಂದ ಅವರೂ ಸ್ಪರ್ಧಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಮೂರು ಪ್ರಮುಖ ಜಿಲ್ಲೆಗಳಾದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿಗಳಲ್ಲಿ ಅಲ್ಲದೆ ರಾಜ್ಯ ವಿವಿಧ ಜಿಲ್ಲೆಗಳಲ್ಲಿನ ದೊಡ್ಡಬಳ್ಳಾಪುರ, ಬೀದರ್ ಭದ್ರಾವತಿ ನಗರ ಸಭೆ ಮತ್ತು ತರೀಕೆರೆ ಪುರಸಭೆಯ 56 ಕ್ಷೇತ್ರಗಳಿಗೆ ಹಾಗೂ ನಗರ ಸಭೆ, ಪಟ್ಟಣ ಪಂಚಾಯತಿ, ಪುರಸಭೆ, ಮೈಸೂರು ಮಹಾನಗರ ಪಾಲಿಕೆಯ ಒಂದು ವಾರ್ಡ್ ಸೇರಿದಂತೆ ಒಟ್ಟು 21 ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತದಾನ ಪ್ರಕ್ರಿಯೆಗಳು ನಾಳೆ ನಡೆಯಲಿವೆ.
ಸೆಪ್ಟೆಂಬರ್ 3 ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಸೆಪ್ಟೆಂಬರ್ 6ರಂದು ಫಲಿತಾಂಶ ಹೊರಬೀಳಲಿದೆ.