ಉಲ್ಬಣಿಸಿದ ಬಿಕ್ಕಟ್ಟು ಪಲಾಯನದ ಮಹಾಪೂರ

ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ನಡುವೆ ವಲಸೆ ಹೋಗುವವರೂ ಹೆಚ್ಚಾಗುತ್ತಿದ್ದಾರೆ

ನಾ ದಿವಾಕರ

ಎರಡು ವರ್ಷಗಳ ಕೋವಿದ್‌ ಸಾಂಕ್ರಾಮಿಕದ ಬಿಕ್ಕಟ್ಟಿನಿಂದ ಹೊರಬರಲು ಹೆಣಗಾಡುತ್ತಿರುವ ಸನ್ನಿವೇಶದಲ್ಲೇ ತೃತೀಯ ಜಗತ್ತಿನ ಹಲವು ರಾಷ್ಟ್ರಗಳು ರಷ್ಯಾ ಉಕ್ರೇನ್‌ ಯುದ್ದದ ಪರಿಣಾಮವನ್ನೂ ಎದುರಿಸುತ್ತಿದ್ದು, ಭಾರತವನ್ನೂ ಒಳಗೊಂಡಂತೆ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟುಗಳು ಮತ್ತಷ್ಟು ಉಲ್ಬಣಿಸುತ್ತಿವೆ. ಆಂತರಿಕವಾಗಿ ರಾಜಕೀಯ ಕ್ಷೋಭೆ ಮತ್ತು ಪಲ್ಲಟಗಳು ಆಡಳಿತಾರೂಢ ಸರ್ಕಾರಗಳನ್ನು ಅಸ್ಥಿರಗೊಳಿಸುತ್ತಿದ್ದರೆ, ಮಾರುಕಟ್ಟೆ ಆರ್ಥಿಕತೆಯ ವ್ಯತ್ಯಯಗಳು ಜನಸಾಮಾನ್ಯರನ್ನು ಸಂಕಷ್ಟದ ಅಂಚಿಗೆ ತಳ್ಳುತ್ತಿವೆ. ಭಾರತದಲ್ಲೂ ಹಣದುಬ್ಬರದ ಏರಿಕೆ, ಅವಶ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಚಾರಿತ್ರಿಕ ದಾಖಲೆಗಳನ್ನು ನಿರ್ಮಿಸುತ್ತಿದ್ದರೂ, 70 ವರ್ಷಗಳ ಮಿಶ್ರ ಆರ್ಥಿಕ ನೀತಿಯನುಸಾರ ಭಾರತದ ಅರ್ಥವ್ಯವಸ್ಥೆಯಲ್ಲಿ ಸೃಷ್ಟಿಯಾಗಿರುವ ಸಾರ್ವಜನಿಕ ಸಂಪತ್ತು ಈ ಆಘಾತಗಳನ್ನು ಸಹಿಸಿಕೊಳ್ಳುವಂತಹ ಒಂದು ತಡೆಗೋಡೆಯನ್ನು ನಿರ್ಮಿಸಿದೆ. ಆದರೆ ಉಕ್ರೇನ್‌ ಯುದ್ಧ ಹೀಗೆಯೇ ಮುಂದುವರೆದರೆ ಮತ್ತಷ್ಟು ದೇಶಗಳು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆಗಳೂ ಇವೆ.

ಶ್ರೀಲಂಕಾ ಒಂದು ಬಡ ರಾಷ್ಟ್ರವಂತೂ ಅಲ್ಲ. ಎರಡು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಈ ದ್ವೀಪ ರಾಷ್ಟ್ರದ ತಲಾ ಜಿಡಿಪಿ ದಕ್ಷಿಣ ಆಫ್ರಿಕಾ, ಪೆರು, ಈಜಿಪ್ಟ್‌, ಇಂಡೋನೇಷಿಯಾಗಳಿಗಿಂತಲೂ ಹೆಚ್ಚಿದೆ. ಆದರೆ ಪಸ್ತುತ ಸಂದರ್ಭದಲ್ಲಿ ಶ್ರೀಲಂಕಾ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ. ಆಹಾರ, ಇಂಧನ, ವಿದ್ಯುಚ್ಚಕ್ತಿ, ಔಷಧ ಹೀಗೆ ಜನಸಾಮಾನ್ಯರಿಗೆ ಅಗತ್ಯವಾದ ಎಲ್ಲ ಪದಾರ್ಥಗಳ ಕೊರತೆಯನ್ನು ಶ್ರೀಲಂಕಾ ಎದುರಿಸುತ್ತಿದೆ. ಶ್ರೀಲಂಕಾದ ಕರೆನ್ಸಿ ಸತತವಾಗಿ ಕುಸಿಯುತ್ತಿದ್ದು ಆಮದು ವೆಚ್ಚವನ್ನು, ಸಾಲ ಮರುಪಾವತಿಯನ್ನು ಪೂರೈಸಲು ಹೆಣಗಾಡುವಂತಾಗಿದೆ. ನಗರ ಜೀವನದಲ್ಲಿ ಈ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿರುವ ವ್ಯತ್ಯಯಗಳ ಫಲವಾಗಿಯೇ ಶ್ರೀಲಂಕಾದ ನಗರಗಳಲ್ಲಿ ಜನಸಾಮಾನ್ಯರು ರೊಚ್ಚಿಗೆದ್ದಿದ್ದಾರೆ, ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ರಾಜಕೀಯ ವಲಯದಲ್ಲೂ ಅಲ್ಲೋಲಕಲ್ಲೋಲವಾಗಿದೆ.

25 ವರ್ಷಗಳ ಆಂತರಿಕ ನಾಗರಿಕ ಕಲಹದಿಂದ ಜರ್ಝರಿತವಾಗಿದ್ದ ಶ್ರೀಲಂಕಾದಲ್ಲಿ 2009ರ ವೇಳೆಗೆ ಶಾಂತಿ ನೆಲೆಸಿದಂತೆ ಕಂಡುಬಂದರೂ, ಶ್ರೀಲಂಕಾದ ರಾಜಕಾರಣ ಹಿಂಸಾತ್ಮಕ ಮಾರ್ಗದಲ್ಲೇ ಮುನ್ನಡೆದಿದೆ. 2019ರಲ್ಲಿ ಐಸಿಸ್‌ ಇಸ್ಲಾಮಿಕ್‌ ಸಂಘಟನೆ ಕ್ರೈಸ್ತರ ಮೇಲೆ ನಡೆಸಿದ ಮಾರಣಾಂತಿಕ ದಾಳಿ ಸಾಕಷ್ಟು ಪ್ರಕ್ಷುಬ್ಧತೆಯನ್ನು ಉಂಟುಮಾಡಿತ್ತು. ಈ ಪ್ರಕ್ಷುಬ್ಧತೆಯ ನಡುವೆಯೇ ದೇಶದಲ್ಲಿ ಹೆಚ್ಚಾದ ಅಭದ್ರತೆಯ ಹಿನ್ನೆಲೆಯಲ್ಲಿ ಗೋಟಬಾಯ ರಾಜಪಕ್ಸಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ತಮ್ಮ ಅಧ್ಯಕ್ಷೀಯ ಅಧಿಕಾರವನ್ನು ಬಳಸಿಕೊಂಡೇ ರಾಜಪಕ್ಸ ತನ್ನ ಸೋದರ, ಮಹಿಂದಾ ರಾಜಪಕ್ಸನನ್ನು ಪ್ರಧಾನಮಂತ್ರಿಯಾಗಿ ನೇಮಿಸಿದ್ದರು. 2020ರಲ್ಲಿ ನಡೆದ ಮಹಾಚುನಾವಣೆಗಳಲ್ಲಿ ರಾಜಪಕ್ಸ ಅವರ ಪಕ್ಷವು ಮೂರನೆ ಎರಡರಷ್ಟು ಸ್ಥಾನಗಳನ್ನು ಗಳಿಸಿ ಬಹುಮತ ಗಳಿಸಿತ್ತು. ಈ ಪ್ರಾಬಲ್ಯವೇ ಸಂವಿಧಾನ ತಿದ್ದುಪಡಿ ಮಾಡುವ ಅವಕಾಶವನ್ನೂ ಕಲ್ಪಿಸಿತ್ತು. ತಮ್ಮ ಕುಟುಂಬ ಸದಸ್ಯರನ್ನೇ ಬಹುತೇಕ ಅಧಿಕಾರಯುತ ಸ್ಥಾನಗಳಿಗೆ ನೇಮಿಸುವ ಮೂಲಕ ರಾಜಪಕ್ಸ ಆಳ್ವಿಕೆ ಒಂದು ಕುಟುಂಬದ ಆಳ್ವಿಕೆಯಾಗಿಯೂ ಪರಿಣಮಿಸಿತ್ತು.

ಆದಾಯ ತೆರಿಗೆಯನ್ನು ರದ್ದುಪಡಿಸುವ ಮೂಲಕ ಮತ್ತು ಜನಪ್ರಿಯ ಯೋಜನೆಗಳ ಮೂಲಕ ಹಲವು ರೀತಿಯ ತೆರಿಗೆ ವಿನಾಯಿತಿಗಳನ್ನು ನೀಡುವ ಮೂಲಕ ಸರ್ಕಾರದ ಆದಾಯ ಕಡಿಮೆಯಾಗತೊಡಗಿತ್ತು. ಹೊರದೇಶಗಳಿಂದ, ವಿದೇಶಿ ಸಂಸ್ಥೆಗಳಿಂದ ಸಾಲ ಪಡೆಯುವುದೂ ದುಸ್ತರವಾಯಿತು. ಇಷ್ಟರ ನಡುವೆಯೇ ಕೋವಿದ್‌ 19 ಸಾಂಕ್ರಾಮಿಕದ ಪರಿಣಾಮ ಶ್ರೀಲಂಕಾದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರಿ ಹೊಡೆತ ನೀಡಿತ್ತು. ವಿದೇಶಗಳಲ್ಲಿ ನೆಲೆಸಿದ್ದ ಶ್ರೀಲಂಕಾದ ಅನಿವಾಸಿಗಳು ಸ್ವದೇಶಕ್ಕೆ ರವಾನಿಸುವ ಹಣದ ಪ್ರಮಾಣವೂ ಕುಸಿಯತೊಡಗಿತ್ತು. ಏತನ್ಮಧ್ಯೆ ಕೃಷಿ ಕ್ಷೇತ್ರದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುವ ಭರದಲ್ಲಿ ರಾಜಪಕ್ಸ ಸರ್ಕಾರವು ರಾಸಾಯನಿಕ ಗೊಬ್ಬರಗಳನ್ನು ನಿಷೇಧಿಸಿದ್ದು ದೇಶದ ಆಹಾರ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಿತ್ತು.

ಈ ಬಿಕ್ಕಟ್ಟುಗಳ ನಡುವೆಯೇ ರಷ್ಯಾ ಉಕ್ರೇನ್‌ ಮೇಲೆ ನಡೆಸಿದ ಹಠಾತ್‌ ದಾಳಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಆಹಾರ ಮತ್ತು ತೈಲ ಬೆಲೆಗಳು ಏರುಪೇರಾಗತೊಡಗಿದವು. ರಷ್ಯಾ ಮತ್ತು ಉಕ್ರೇನ್‌ ಎರಡೂ ರಾಷ್ಟ್ರಗಳು ಆಹಾರ ಧಾನ್ಯಗಳ ರಫ್ತು ಮಾಡುವ ಮುಂಚೂಣಿ ದೇಶಗಳಾಗಿದ್ದು, ಯುದ್ಧದ ಪರಿಣಾಮ ಈ ವ್ಯಾಪಾರ ಮಾರ್ಗಗಳೂ ಬಂದ್‌ ಆಗಿವೆ. ರಷ್ಯಾದಿಂದ ಸರಬರಾಜಾಗುವ ತೈಲವನ್ನೇ ಶ್ರೀಲಂಕಾ ಅವಲಂಬಿಸಿರುತ್ತದೆ. ಮತ್ತೊಂದೆಡೆ ತನ್ನ ಶೇ 80ರಷ್ಟು ಔಷಧಿಗಳನ್ನು ಆಮದು ಮಾಡಿಕೊಳ್ಳುವ ಶ್ರೀಲಂಕಾ ಇಲ್ಲಿಯೂ ಸಹ ತೀವ್ರ ಹೊಡೆತ ಬಿದ್ದಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲೇ ಮೇ ತಿಂಗಳಲ್ಲಿ ದೇಶಾದ್ಯಂತ ಕ್ಷೋಭೆ ಉಂಟಾಗಿತ್ತು. ನಿರುದ್ಯೋಗ, ಬೆಲೆ ಏರಿಕೆ ಮತ್ತು ಆಹಾರ ಧಾನ್ಯಗಳ ಕೊರತೆಯಿಂದ ಕಂಗೆಟ್ಟ ಜನತೆ ತಮ್ಮ ಆಕ್ರೋಶವನ್ನು ಹಿಂಸಾತ್ಮಕ ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿದ್ದರು.

ಪ್ರಧಾನಮಂತ್ರಿ ಮಹೀಂದ್ರ ರಾಜಪಕ್ಸಾ ರಾಜೀನಾಮೆಗಾಗಿ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ಗುಂಪುಗಳನ್ನು ಎದುರಿಸಲು ಅಧ್ಯಕ್ಷ ಗೋಟಬಾಯ ರಾಜಪಕ್ಸ ತಮ್ಮ ಬೆಂಬಲಿಗರನ್ನು ನಿಯೋಜಿಸಿದ್ದು, ಸಾರ್ವಜನಿಕ ಹಿಂಸೆಗೆ ಕಾರಣವಾಗಿತ್ತು. ಈ ಹಿಂಸಾತ್ಮಕ ಪ್ರತಿಭಟನೆಗಳಲ್ಲೇ ಪ್ರಧಾನಮಂತ್ರಿಗಳ ನಿವಾಸದ ಮೇಲೆ ದಾಳಿ ನಡೆದಿತ್ತು. ರಾಜಪಕ್ಸ ಕುಟುಂಬವೇ ನಾಗರಿಕರ ದಾಳಿಗೊಳಗಾಗಿತ್ತು. ಅಂತಿಮವಾಗಿ ಪ್ರಧಾನಮಂತ್ರಿ ಮಹೀಂದ್ರ ರಾಜಪಕ್ಸ ರಾಜೀನಾಮೆ ನೀಡಿ, ಭದ್ರತೆ ಪಡೆಯಬೇಕಾಯಿತು. ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಿಸಬೇಕಾಯಿತು. ರಾಜಪಕ್ಸ ಸಂಪುಟದ ಕೆಲವು ಸಚಿವರು ರಾಜೀನಾಮೆ ನೀಡಬೇಕಾಯಿತು. ಕಳೆದ ತಿಂಗಳು ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಶ್ರೀಲಂಕಾ ಸಾಲ ಮರುಪಾವತಿ ಮಾಡಲು ವಿಫಲವಾಗಿ ಸುಸ್ತಿದಾರ ದೇಶವಾಗಿ ಘೋಷಿಸಲ್ಪಟ್ಟಿತ್ತು. ಈ ಗಲಭೆಗಳ ನಂತರ ರಾಜಪಕ್ಸ ತನ್ನ ಅಧಿಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಜಾರಿಗೊಳಿಸಿಸದ್ದ ಸಂವಿಧಾನ ತಿದ್ದುಪಡಿಗಳನ್ನು ಮರುಪರಿಶೀಲಿಸಲು ಒಪ್ಪಿಕೊಂಡಿದ್ದು, ಭಾರತ ಮತ್ತು ಚೀನಾ ಸರ್ಕಾರಗಳ ಸಕಾಲಿಕ ನೆರವಿನೊಂದಿಗೆ ಪರಿಸ್ಥಿತಿಯನ್ನು ಸುಧಾರಿಸಲು ಯತ್ನಿಸುತ್ತಿದ್ದಾರೆ. ಐಎಂಎಫ್‌ ಬಳಿ ಸಾಲ ಮನ್ನಾ ಮಾಡಲು ಯಾಚಿಸಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಪ್ರಧಾನಿ  ರಾನಿಲ್‌ ವಿಕ್ರಮಸಿಂಘೆ, ತೆರಿಗೆ ಆದಾಯವನ್ನು ಹೆಚ್ಚಿಸುವ ಮೂಲಕ ಐಎಂಎಫ್‌ ಸಾಲವನ್ನು ಸರಿದೂಗಿಸುವ ಆಶ್ವಾಸನೆಯನ್ನೂ ನೀಡಿದ್ದಾರೆ.

ಅದರೆ ಈ ಆಶ್ವಾಸನೆಗಳು ಶ್ರೀಲಂಕಾದ ಜನತೆಯಲ್ಲಿ ವಿಶ್ವಾಸ ಮೂಡಿಸುವಲ್ಲಿ ವಿಫಲವಾಗಿವೆ. ಅಡುಗೆ ಅನಿಲವನ್ನೂ ಒಳಗೊಂಡಂತೆ ಜೀವನಾವಶ್ಯ ವಸ್ತುಗಳೆಲ್ಲವೂ ದುಬಾರಿಯಾಗಿರುವುದೇ ಅಲ್ಲದೆ ದೇಶದಲ್ಲಿ ಬಂಡವಾಳ ಹೂಡಿಕೆ ಕುಂಠಿತಗೊಂಡಿದೆ, ವಿದೇಶಿ ಬಂಡವಾಳದ ಹರಿವು ಬಹುತೇಕ ಸ್ಥಗಿತವಾಗಿದೆ. ಆಂತರಿಕವಾಗಿ ಅರ್ಥವ್ಯವಸ್ಥೆ ಕುಸಿದಿರುವುದರಿಂದ ಉದ್ಯೋಗಾವಕಾಶಗಳೂ ಕುಸಿದಿದ್ದು ಹೆಚ್ಚು ಹೆಚ್ಚು ಜನರು ಹೊರದೇಶಗಳಲ್ಲಿ ನೌಕರಿ ಅರಸಿ ವಲಸೆ ಹೋಗುತ್ತಿದ್ದಾರೆ. ಹೊರದೇಶಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಪಾಸ್‌ಪೋರ್ಟ್‌ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಆಹಾರ ಪೂರೈಕೆ ಇಲ್ಲದೆ, ಅಡುಗೆ ಅನಿಲವೂ ಇಲ್ಲದಿರುವುದರಿಂದ ಬೃಹತ್‌ ಸಂಖ್ಯೆಯ ಜನರು ಉತ್ತಮ ಜೀವನ ಅರಸಿ ಕೊಲ್ಲಿ ರಾಷ್ಟ್ರಗಳಿಗೆ, ಪೂರ್ವ ಏಷಿಯಾ ರಾಷ್ಟ್ರಗಳಿಗೆ ವಲಸೆ ಹೋಗಲಾರಂಭಿಸಿದ್ದಾರೆ. 2022ರ ಮೊದಲ ಐದು ತಿಂಗಳಲ್ಲೇ 2,88,645 ಪಾಸ್‌ ಪೋರ್ಟ್‌ಗಳನ್ನು ವಿತರಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 91,331 ಪಾಸ್‌ಪೋರ್ಟ್‌ ವಿತರಿಸಲಾಗಿತ್ತು.  ಶ್ರೀಲಂಕಾದ ಇಮಿಗ್ರೇಷನ್‌ ಇಲಾಖೆಯ ಮುಖ್ಯ ಕಚೇರಿಯ  ಮುಂದೆ ನೂರಾರು ಜನರು ಸಾಲುಗಟ್ಟಿ ನಿಂತಿರುವುದು ಸಾಮಾನ್ಯ ದೃಶ್ಯವಾಗಿದೆ.

ಆರ್ಥಿಕ ಹಿಂಜರಿತದಿಂದ ಜರ್ಝರಿತವಾಗಿರುವ ಶ್ರೀಲಂಕಾದ ಜನತೆ ತಮ್ಮ ಜೀವನ ಮತ್ತು ಜೀವನೋಪಾಯಕ್ಕಾಗಿ ಹೊರದೇಶಗಳಲ್ಲಿ ನೌಕರಿಯನ್ನರಸಿ ಹೋಗುವ ಸಂಭವ ಹೆಚ್ಚಾಗುತ್ತಿರುವುದರೊಂದಿಗೆ ಗುಳೆ ಹೋಗುತ್ತಿರುವ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಗಾರ್ಮೆಂಟ್‌ ಉದ್ದಿಮೆಯಲ್ಲಿ ಕೆಲಸ ಮಾಡುವ ಆರ್‌ ಎಮ್‌ ಆರ್‌ ಲೆನೋರಾ, ಶ್ರೀಲಂಕಾದ ಪಾಸ್‌ಪೋರ್ಟ್‌ ಕಚೇರಿ ಮುಂದೆ ಎರಡು ದಿನಗಳ ಕಾಲ ಸಾಲಿನಲ್ಲಿ ನಿಂತು, ಕುವೈಟ್‌ಗೆ ಹೋಗಲು ಪಾಸ್‌ಪೋರ್ಟ್‌ ಪಡೆಯುವಲ್ಲಿ ಯಶಸ್ವಿಯಾಗಿರುವುದನ್ನು ಎನ್‌ಡಿಟಿವಿ ವರದಿ ಮಾಡಿದೆ. ಸಣ್ಣ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಲೆನೋರಾ ಈಗ ಹೋಟೆಲುಗಳು ಮುಚ್ಚಿರುವುದರಿಂದ ಬೀದಿಪಾಲಾಗಿದ್ದು ಆಕೆಯ ಪತಿಯೂ ಕೆಲಸ ಕಳೆದುಕೊಂಡಿದ್ದಾರೆ. “ ಅವಶ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ, ಅಡುಗೆ ಅನಿಲವೂ ಲಭಿಸುತ್ತಿಲ್ಲ, ಯಾವುದೇ ನೌಕರಿಯೂ ದೊರೆಯುತ್ತಿಲ್ಲ, ದೊರೆತರೂ ಅತಿ ಕಡಿಮೆ ವೇತನ ನೀಡಲಾಗುತ್ತಿದೆ ” ಎನ್ನುತ್ತಾರೆ ತಿಂಗಳಿಗೆ ಕೇವಲ  2500 ಶ್ರೀಲಂಕಾ ರೂಪಾಯಿಗಳ ಸಂಬಳ ಪಡೆಯುವ ಲೆನೋರಾ. ತನ್ನ ಪಾಸ್‌ಪೋರ್ಟ್‌ ಪಡೆಯಲೆಂದೇ ಈಕೆ 170 ಕಿಲೋಮೀಟರ್‌ ದೂರದ ಕೊಲಂಬೋಗೆ ಪ್ರಯಾಣ ಬೆಳೆಸಿದ್ದಾರೆ.

ಪಾಸ್‌ಪೋರ್ಟ್‌ ಕಚೇರಿಗಳಲ್ಲಿ ಜನಜಂಗುಳಿ ಹೆಚ್ಚಾಗುತ್ತಿದ್ದು ತಮ್ಮ ಭಾವಚಿತ್ರಗಳನ್ನು ತೆಗೆಸಿಕೊಳ್ಳಲು, ಬೆರಳಚ್ಚು ದಾಖಲಿಸಲು ಜನರು ಹಾತೊರೆಯುತ್ತಿದ್ದಾರೆ. ಪಾಸ್‌ಪೋರ್ಟ್‌ ಕಚೇರಿಯಲ್ಲಿ ಕಾರ್ಯನಿರ್ವಹಿಸುವ 160 ಸಿಬ್ಬಂದಿಗಳಿಗೆ ಈ ಜನಜಂಗುಳಿಯನ್ನು ನಿಯಂತ್ರಿಸುವುದೂ ಅಸಾಧ್ಯವಾಗುತ್ತಿದೆ ಎಂದು ಅಧಿಕಾರಿಗಳು ಅಲವತ್ತುಕೊಳ್ಳುತ್ತಿದ್ದಾರೆ. ಇಲಾಖೆಯ ವತಿಯಿಂದ ದಿನದ ಕೆಲಸದ ಅವಧಿಯನ್ನು ವಿಸ್ತರಿಸಲಾಗಿದ್ದು, ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಪ್ರತಿ ದಿನವೂ ಕನಿಷ್ಟ 3000 ಜನರು ಪಾಸ್‌ಪೋರ್ಟ್‌ಗಾಗಿ ಅರ್ಜಿಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ಕೆಲವು ತಿಂಗಳುಗಳ ಕಾಲ ಆನ್‌ ಲೈನ್‌ ವ್ಯವಸ್ಥೆಯಲ್ಲೂ ತಾಂತ್ರಿಕ ದೋಷಗಳಿಂದ ಸಮಸ್ಯೆ ಇದ್ದುದರಿಂದ, ನೂರಾರು ಹೊಸ ಅರ್ಜಿದಾರರಿಗೆ ನಿಗದಿತ  ಸಮಯದಲ್ಲಿ ಅರ್ಜಿ ಸಲ್ಲಿಸಲಾಗುತ್ತಿಲ್ಲ.  ಹತಾಶೆಗೊಳಗಾಗಿರುವ ಜನರಿಗೆ ತಾಂತ್ರಿಕ ದೋಷಗಳ ಪರಿವೆ ಇರುವುದಿಲ್ಲವಾದ್ದರಿಂದ, ಜನರ ಆಕ್ರೋಶವನ್ನೂ ಅಧಿಕಾರಿಗಳು ಎದುರಿಸಬೇಕಾಗಿದೆ.

ಆಟೋ ಚಾಲಕರೂ ಸಹ ತಮ್ಮ ನಿತ್ಯ ಕಾಯಕದಲ್ಲಿ ಸಮಸ್ಯೆ ಎದುರಿಸುತ್ತಿದ್ದು, ಪೆಟ್ರೋಲ್‌ ಖಾಲಿಯಾದ ಕೂಡಲೇ ರಾತ್ರಿಯಿಡೀ ಪೆಟ್ರೋಲ್‌ಗಾಗಿ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಪ್ರಯಾಣಿಕರು ಬಂದರೂ ಸಹ ತಮ್ಮ ಆಟೋಗಳಲ್ಲಿ ಪೆಟ್ರೋಲ್‌ ಇರುವುದನ್ನು ಖಾತರಿಪಡಿಸಿಕೊಂಡೇ ಒಪ್ಪಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.  ಎಂಟು ತಿಂಗಳ ಹಿಂದೆ ಇದ್ದ ದರಕ್ಕಿಂತಲೂ ಎರಡೂವರೆ ಪಟ್ಟು ಹೆಚ್ಚಿನ ಬೆಲೆ ನೀಡಿ ಪೆಟ್ರೋಲ್‌ ಖರೀದಿಸಬೇಕಿದೆ. ಈ ರೀತಿ ಸ್ವಯಂ ಉದ್ಯೋಗದಲ್ಲಿರುವ ಅಸಂಖ್ಯಾತ ಜನರು ತಮ್ಮ ಆದಾಯದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಕುಸಿತ ಅನುಭವಿಸಿದ್ದಾರೆ. ಈ ಸಮಸ್ಯೆಗಳ ಪರಿಣಾಮವಾಗಿಯೆ ಹೊರದೇಶಗಳಲ್ಲಿ ನೌಕರಿ ಅರಸುವವರ ಸಂಖ್ಯೆಯೂ ಹೆಚ್ಚಾಗಿದ್ದು ವಲಸೆ ಹೋಗುವವರೂ ಹೆಚ್ಚಾಗಿದ್ದಾರೆ.

ವಿಶ್ವಸಂಸ್ಥೆಯು ಶ್ರೀಲಂಕಾ ಸರ್ಕಾರದ ನೆರವಿಗೆ ಧಾವಿಸಿದ್ದು ತುರ್ತು ವ್ಯವಸ್ಥೆಯನ್ನು ಮಾಡಿದೆ. ಮಾನವೀಯ ನೆಲೆಯಲ್ಲಿ ಜನಸಾಮಾನ್ಯರ ಬದುಕು ಪಲ್ಲಟವಾಗದಂತೆ ಎಚ್ಚರವಹಿಸುವ ದೃಷ್ಟಿಯಿಂದ ವಿಶ್ವಸಂಸ್ಥೆ ಶ್ರೀಲಂಕಾ ಸರ್ಕಾರಕ್ಕೆ 47.2 ದಶಲಕ್ಷ ಡಾಲರ್‌ ನೆರವು ಘೋಷಿಸಿದೆ. ಶ್ರೀಲಂಕಾದಲ್ಲಿ  ಕಡುಬಡತನದಲ್ಲಿರುವ 17 ಲಕ್ಷ ಜನತೆಗೆ ನೆರವಾಗಲು ವಿಶ್ವಸಂಸ್ಥೆಯು ಮುಂದಾಗಿದೆ. ಐಎಂಎಫ್‌ ಸಾಲದ ಕಂತನ್ನು ಕಳೆದ ಏಪ್ರಿಲ್‌ ತಿಂಗಳಲ್ಲಿ ಪಾವತಿಸಲು ವಿಫಲವಾದ ನಂತರ ಶ್ರೀಲಂಕಾ ಸರ್ಕಾರ ಐಎಂಎಫ್‌ಗೂ ಅರ್ಜಿ ಸಲ್ಲಿಸಿದ್ದು 12 ಬಿಲಿಯನ್‌ ಡಾಲರ್‌ ಮೊತ್ತದ ಸಾಲದ ಹೊರೆಯಿಂದ ಮುಕ್ತಗೊಳಿಸಲು ಕೋರಿದೆ. ಈ ವರ್ಷದ ಕೊನೆಯವರೆಗೂ ಪರಿಸ್ಥಿತಿಯನ್ನು ಸರಿದೂಗಿಸುವ ಸಲುವಾಗಿಯೇ ಶ್ರೀಲಂಕಾಗೆ ಕನಿಷ್ಟ 5 ಬಿಲಿಯನ್‌ ಡಾಲರ್‌ ನೆರವು ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ.

ಈ ಸಾಮಾಜಿಕ ಆರ್ಥಿಕ ಮತ್ತು ತೀವ್ರ ರಾಜಕೀಯ ಬಿಕ್ಕಟ್ಟುಗಳ ನಡುವೆಯೇ ಶ್ರೀಲಂಕಾ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಯುವ ಜನತೆ ಟ್ವಿಟರ್‌ ಮೂಲಕ ಮತ್ತು ಸಾಮಾಜಿಕ ತಾಣಗಳ ಮೂಲಕ ರಾಜಪಕ್ಸೆ ಕುಟುಂಬವನ್ನು ಮತ್ತು ಸರ್ಕಾರವನ್ನು ದೂಷಿಸುತ್ತಲೇ ಇದ್ದಾರೆ. ಜಾಗತಿಕ ಅರ್ಥಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ರಷ್ಯಾ ಉಕ್ರೇನ್‌ ಯುದ್ಧವು ಮುಂದುವರೆದಲ್ಲಿ, ಈ ಬಿಕ್ಕಟ್ಟು ಇತರ ದೇಶಗಳಿಗೂ ವ್ಯಾಪಿಸುವ ಸಾಧ್ಯತೆಗಳಿವೆ. ಭಾರತದಲ್ಲೂ ಹಣದುಬ್ಬರ, ಸಗಟು ಬೆಲೆ ಸೂಚ್ಯಂಕ ಏರುತ್ತಲೇ ಇದ್ದು ದಿನಬಳಕೆಯ ಪದಾರ್ಥಗಳು, ಅಡುಗೆ ಅನಿಲ, ಇಂಧನ ಮತ್ತು ತೈಲ ಬೆಲೆಗಳು ಸತತ ಏರಿಕೆ ಕಾಣುತ್ತಿದ್ದು ನಿರುದ್ಯೋಗ ಸಮಸ್ಯೆಯೂ ಚಾರಿತ್ರಿಕ ದಾಖಲೆ ನಿರ್ಮಿಸಿ, ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗ ಪ್ರಮಾಣ ದಾಖಲಾಗಿದೆ. ಆದರೆ ಭಾರತದ ಅರ್ಥವ್ಯವಸ್ಥೆ ಸುಭದ್ರ ಬುನಾದಿಯ ಮೇಲೆ ನಿಂತಿದ್ದು, ಇದಕ್ಕೆ ಕಾರಣ ಇಂದು ಬಹಳಷ್ಟು ದೂಷಣೆಗೊಳಗಾಗಿರುವ ನೆಹರೂ ಆರ್ಥಿಕತೆ ಮತ್ತು 60 ವರ್ಷಗಳ ಅವಧಿಯಲ್ಲಿ ಸೃಷ್ಟಿಸಲಾದ ಸಾರ್ವಜನಿಕ ಆಸ್ತಿಯೇ ಎನ್ನುವುದನ್ನು ಗಮನಿಸಬೇಕಿದೆ.

ಶ್ರೀಲಂಕಾದಲ್ಲಿ ಉದ್ಭವಿಸಿರುವ ಪರಿಸ್ಥಿತಿ ಭಾರತದಲ್ಲೂ ಕಾಣಿಸಿಕೊಳ್ಳುತ್ತದೆ ಎಂಬ ಆತಂಕ ಇಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟು ಭಾರತದ ದುಡಿಯುವ ವರ್ಗಗಳ ಪಾಲಿಗೆ ಕರಾಳ ದಿನಗಳನ್ನು ಸೃಷ್ಟಿಸುವ ಎಲ್ಲ ಸೂಚನೆಗಳೂ ಕಾಣುತ್ತಿವೆ.

Donate Janashakthi Media

Leave a Reply

Your email address will not be published. Required fields are marked *