ಅರಣ್ ಜೋಳದಕೂಡ್ಲಿಗಿ
ಗದಗ ಜಿಲ್ಲೆ ರೋಣ ತಾಲೂಕಿನ ರಾಜೂರಿನ ಗೆಳೆಯ ಟಿ.ಎಸ್. ಗೊರವರ ಭ್ರಮೆ ಎನ್ನುವ ಅವರ ಮೊದಲ ಸಂಕಲನದಲ್ಲೇ ಭರವಸೆಯನ್ನು ಹುಟ್ಟಿಸಿ ಗಮನಸೆಳೆದಿದ್ದರು. ಹಲವು ಸ್ಪರ್ಧೆಗಳಲ್ಲಿ ಕಥೆಗಾಗಿ ಬಹುಮಾನ ಗಳಿಸಿ, ಈ ಭರವಸೆಯನ್ನು ಮತ್ತಷ್ಟು ಗಟ್ಟಿಗೊಳಿಸಿದವರು. ಇದೀಗ ಬಾಲ್ಯದ ಅನುಭವ ಕಥನವನ್ನು ಕಟ್ಟಿಕೊಡುವ ಅವರ `ಆಡು ಕಾಯೋ ಹುಡುಗನ ದಿನಚರಿ’ ಹಲವು ಕಾರಣಗಳಿಗೆ ಬಹಳ ಮುಖ್ಯ ಅನ್ನಿಸುತ್ತದೆ. ಉಡಾಳ
ಉತ್ತರ ಕರ್ನಾಟಕದ ಜನಜೀವನದ ದಿನ ಬದುಕಿನ ನಾಡಿ ಮಿಡಿತವನ್ನು ತುಂಬಾ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಅನುಭವಗಳ ಮೈದಡವಿದರೆ ಹಳ್ಳಿಬದುಕಿನ ಘಮಲು, ದುಡಿಮೆಯ ಬೆವರ ವಾಸನೆ, ಜನರ ಬದುಕಿನ ಸಣ್ಣ ಸಣ್ಣ ಸಂಭ್ರಮಗಳು, ಮುಸುಕಿನ ಗುದ್ದಾಟಗಳು ನವಿರಾಗಿ ನಮ್ಮೊಳಗನ್ನು ಆವರಿಸಿಕೊಳ್ಳುತ್ತವೆ.
ಇದನ್ನೂ ಓದಿ: ಕ್ಯಾಪ್ಟನ್ ಕವಿತೆಗಳು: ನೋವಿನ ಮೇಲೆ ಎಳೆದಿಟ್ಟುಕೊಂಡ ಕಾಣದ ಪರದೆಯೊಳಗಣ ಸೂಕ್ಷ್ಮ ಸಂಘರ್ಷದ ಗುಚ್ಛ
ನೂರು ಪುಟದ ಈ ಪುಸ್ತಕದಲ್ಲಿ ಹದಿನಾರು ಕಂತುಗಳ ಬರಹವಿದೆ. ಉಡಾಳ ಉಡುಗನ ದಿನಚರಿಯಿಂದ ಆರಂಭವಾದದ್ದು, ಕನಸಾಗಿ ಕಾಡುವ ಗಂಧವತಿ ಬರಹದಲ್ಲಿ ದಾರವಾಡಕ್ಕೆ ಎಂ.ಎ ಪತ್ರಿಕೋದ್ಯಮ ಓದಲು ಸೇರಿಕೊಳ್ಳುವ ತನಕ ಬರಹದ ಪಯಣವಿದೆ. ಈ ಬರಹ ಓದುತ್ತಾ ಹೋದಂತೆ, ಉತ್ತರ ಕರ್ನಾಟಕದ ಬಾಲ್ಯಕಾಲದ ಸಮೃದ್ಧ ಅನುಭವ ಲೋಕವೊಂದು ತೆರೆದುಕೊಳ್ಳುತ್ತಾ ಹೋಗುತ್ತದೆ. ಜೀತಗಾರನ ಮಗನೊಬ್ಬ ಆಕಸ್ಮಿಕವಾಗಿ ಅಕ್ಷರಲೋಕಕ್ಕೆ ಮುಖ ಮಾಡಿದ್ದರ ಫಲವೇ ಈ ಬರಹ. ಹಾಗಾಗಿಯೇ ಇಲ್ಲಿನ ದಿನಚರಿ ವಯಕ್ತಿಕ ಹಿರಿಮೆ ಗರಿಮೆಯನ್ನು ತೂಗಿ ಕೊಡುವಂಥದ್ದಲ್ಲ, ಬದಲಾಗಿ ಇದೊಂದು ಉಡಾಳ ಉಡುಗನ ದಿನಚರಿ.
ಇಲ್ಲಿ ಗೊರವರ ಕಟ್ಟಿಕೊಡುವ ಅನುಭವ ಲೋಕವು ರಾಜೂರು ಸುತ್ತ ಹಬ್ಬಿದ್ದರೂ, ಇದರ ಬೇರುಗಳು ಉತ್ತರ ಕರ್ನಾಟಕದ ಹಳ್ಳಿಗಳೊಳಗೆ ಮೈಚಾಚಿದಂತಿದೆ. ಆ ಕಾರಣಕ್ಕೆ ಇದು ವಯಕ್ತಿಕ ಅನುಭವ ಲೋಕದ ಒಳಗಣ ಆಯಾಮ ಸಾರ್ವಜನಿಕ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ. ಎತ್ತು, ಆಡು, ಕುರಿ, ದನ, ಕೋಳಿ ಹೀಗೆ ಪ್ರಾಣಿಪಕ್ಷಿ ಜಗತ್ತಿನೊಂದಿಗೆ ಕೂಡುಕುಟುಂಬ ಸಾಗಿಸುವ ಒಂದು ಬಗೆಯ ನಿಸರ್ಗದ ಜತೆಗಿನ ಸಾವಯವ ಸಂಬಂಧದ ನೆಲೆಯಲ್ಲಿ ಇಲ್ಲಿ ಬದುಕನ್ನು ಗ್ರಹಿಸಲಾಗಿದೆ. ಅದುವೆ ಈ ಬರಹದ ಚೈತನ್ಯವೂ ಕೂಡ. ಜೇನುಬಿಡಿಸುವ ಚಾಲಾಕಿತನ, ಲೀಲಾಜಾಲ ಈಜುವಿಕೆ, ಲಂಬಾಣಿಗರ ಭಟ್ಟಿ ಇಳಿಸುವ ಚಾಕಚಕ್ಯತೆ, ಜಾಲಿಕಟ್ಟಿಗೆ ಸುಟ್ಟು ಭಟ್ಟಿಹಾಕಿ ಇದ್ದಿಲು ಮಾಡುವಿಕೆಯಂತಹ ಜನರ ಜ್ಞಾನಪರಂಪರೆಯ ಶೋಧವನ್ನು ನೆನಪುಗಳಲ್ಲಿಯೇ ನವಿರಾಗಿ ಚಿತ್ರಿಸಲಾಗಿದೆ. ಉಡಾಳ
ಗೊರವರ ಕಟ್ಟಿಕೊಡುವ ಅಪ್ಪ ಅವ್ವನ ಚಿತ್ರ ನಿಜಕ್ಕೂ ಅಚ್ಚಳಿಯದೆ ಮನಸ್ಸಲ್ಲಿ ಉಳಿಯುತ್ತದೆ. ಬದುಕಿನ ಜಿಗುಟುತನ, ಕಠಿಣವಾದ ಸ್ವಾಭಿಮಾನ, ದಿನಬದುಕಿನ ಕಷ್ಟಕಾರ್ಪಣ್ಯಗಳಿಗೆ ಎದುರಾಗುವ ಎಡರುತೊಡರನ್ನು ಬಿಡಿಸಿಕೊಂಡು ಮನ್ನಡೆಯುವ ಛಲ ಇವುಗಳು ಹಳ್ಳಿಬದುಕಿನ ಚೈತನ್ಯವನ್ನು ಕಾಣಿಸುತ್ತವೆ. `ಕಣ್ಣೀರು ಕೌದಿ ತೊಯ್ಯಿಸಿದವು’ ಭಾಗದಲ್ಲಿ ತಂದೆಯ ಜೇಬಿನಿಂದ ಹಣ ಕದ್ದು ತೂರುಮುಚ್ಚೆ ಆಡುವಾಗ ಅಪ್ಪನ ಕೈಗೆ ಸಿಕ್ಕು ತಪ್ಪಿಸಿಕೊಂಡ ಘಟನೆಯೊಂದಿದೆ.
ಅಪ್ಪನಿಂದ ಹೊದೆ ತಿಂದು ಹಗಲ್ಲೆಲ್ಲಾ ಅಲೆದು ರಾತ್ರಿ ಭಯದಿಂದ ಮನೆಗೆ ಹೋದಾಗ ಅಪ್ಪ ನೀಲಿಗಿರಿ ಮರಕ್ಕೆ ಕಟ್ಟಿ ವಿಪರೀತ ಹೊಡೆಯುತ್ತಾನೆ. ಮಗನಿಗೆ ಅಪ್ಪನ ಮೇಲೆ ಇನ್ನಿಲ್ಲದ ಸಿಟ್ಟು ಆಕ್ರೋಶ ಬುಗಿಲೇಳುತ್ತಿರುತ್ತದೆ. ಆಗ ಅವ್ವ ಕಣ್ಣೀರು ಹಾಕುತ್ತಾ ಹಗ್ಗ ಬಿಚ್ಚಿ ಮಲಗಿಸುತ್ತಾಳೆ. ಸಿಟ್ಟು ಅವಮಾನ ನೆನೆಸಿಕೊಂಡು ನಿದ್ದೆ ಬರದಿದ್ದಾಗ ಅಪ್ಪ ಅವ್ವನ ಹತ್ತಿರ ಹೇಳುವ ಮಾತು ಕೇಳುತ್ತದೆ “ಮುದಿಯಾಗ ಬಾಳ ಬಡಿದೆ. ಅಂವ ಎಷ್ಟು ಬಡೂದ್ರೂ ಉಡಾಳತನ ಬಿಡುವಲ್ಲ. ನಾನರ ಏನು ಮಾಡ್ಲಿ, ಸಿಟ್ಟಿನ್ಯಾಗ ನುಗ್ಗುಳೆ ಹೊಡೆದೆ. ಅವ್ನ ಮೈ ಮುಟ್ಟಿ ನೋಡು ಜ್ವರ ಗಿರ ಬಂದೈತನ” ಎನ್ನುತ್ತಾನೆ. ಈ ಮಾತು ಕೇಳುತ್ತಲೂ ಹುಡುಗನ ಕಣ್ಣುಗಳು ಒದ್ದೆಯಾಗುತ್ತವೆ. ಓದುತ್ತಿರುವ ನಮ್ಮವೂ ಕೂಡ. ಹೀಗೆ ಮನಸ್ಸನ್ನು ಹಿಂಡುವ, ಹಿತಕೊಡುವ ಘಟನಾವಳಿಗಳ ಸರಣಿಯೇ ಇಲ್ಲಿದೆ.
ಇಲ್ಲಿನ ಬರಹ ಆಪ್ತವಾಗುವುದು ಬರಹದ ಪ್ರಾಮಾಣಿಕತೆ ಓದಿನಲ್ಲಿಯೂ ದಾಟುವ ಕಾರಣಕ್ಕೆ. ಎಷ್ಟೋ ಬಾರಿ ಹಳ್ಳಿ ಅನುಭವಗಳನ್ನು ವಿಜೃಂಬಿಸಿಯೋ, ಓದುಗರಲ್ಲಿ ಕರುಣೆ ಉಕ್ಕಲೆಂದು ತೀರಾ ಹೀನಾಯ ಸ್ಥತಿಯನ್ನು ಚಿತ್ರಿಸುವ ಮಾದರಿಗಳು ಸಿಗುತ್ತವೆ. ಆದರೆ ಇಲ್ಲಿ ಗೊರವರ ಬರಹ ಈ ಎರಡೂ ಅತಿಗಳಿಂದ ಮುಕ್ತವಾಗಿದೆ. ಅಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿದೆ. ಗೆಳೆಯ ಆರೀಫ್ ರಾಜ ಮಾತನಾಡುತ್ತಾ ಉತ್ತರ ಕರ್ನಾಟಕದ ಜನಜೀವನವನ್ನು ಅರ್ಥಮಾಡಿಕೊಳ್ಳಲು ಶಾಲಾ ಪಠ್ಯದಲ್ಲಿ ಸೇರಿಸುವಷ್ಟು ಚೆನ್ನಾಗಿದೆ ಎಂದಿದ್ದರು. ಪುಸ್ತಕ ಓದಿದ ನನಗೆ ಇದು ನಿಜವೆನ್ನಿಸಿತು.
ಇಲ್ಲಿನ ಅನುಭವಲೋಕ ಸ್ವಾಭಿಮಾನಕ್ಕಾಗಿ ಜಿಗುಟುತನದ ಬದುಕನ್ನು ಕಟ್ಟಿಕೊಂಡ, ಕಟ್ಟಿಕೊಳ್ಳುವ ಜೀವಗಳದ್ದು. ಈ ಬಗೆಯ ಅನುಭವ ಲೋಕ ಆಯಾ ಭಾಗದ ಅಭಿವೃದ್ಧಿಯ ಬೋಗಳೆ ಬಿಡುವ ರಾಜಕಾರಣಿಗಳ ಮಾತುಗಳನ್ನು, ಸರಕಾರಿ ಲೆಕ್ಕಬುಕ್ಕದಲ್ಲಿ ಅಭಿವೃದ್ಧಿಗಾಗಿ ಖರ್ಚು ಮಾಡಿದ ಲೆಕ್ಕಪತ್ರಗಳ ಹುಸಿತನವನ್ನು ಬಯಲುಮಾಡುತ್ತದೆ. ಸುದ್ದಿಮಾದ್ಯಮಗಳು ಭಿತ್ತರಿಸುವ ಉತ್ತರಕರ್ನಾಟಕದ ಚಿತ್ರಕ್ಕಿಂತ , ಬೇರೆಯದೇ ಆದ ಮಾನವೀಯ ಅಂತಃಕರಣದ ಚಿತ್ರವನ್ನು ಈ ಕೃತಿ ಕಟ್ಟಿಕೊಡುತ್ತದೆ. ಗೊರವರ ವೃತ್ತಿಯಲ್ಲಿ ಪತ್ರಕರ್ತನಾದರೂ, ವೃತ್ತಿ ಸಹಜ ವರದಿಗಾರಿಕೆಯ ಗುಣ ಈ ಬರಹಕ್ಕೆ ನುಗ್ಗಿಲ್ಲ, ಬದಲಾಗಿ ಕಥೆಗಾರನ ಕಥನಗಾರಿಕೆ ಇಲ್ಲಿ ಮೈದಾಳಿದೆ. ಈ ವಿವರಗಳು ಲೇಕಖನೊಳಗೆ ಇನ್ನಷ್ಟು ಶೋಧಕ್ಕೆ ಕಾರಣವಾದರೆ ಗೊರವರ ಕಾದಂಬರಿ ಬರೆಯಬಲ್ಲಷ್ಟು ಅನುಭವ ದಟ್ಟವಾಗಿದೆ.
ಇದನ್ನೂ ನೋಡಿ: ಚೆ ಅಂದ್ರೆ ಪ್ರೀತಿ, ಚೆ ಅಂದ್ರೆ ಕ್ರಾಂತಿJanashakthi Media