ಪದವಿಯಲ್ಲಿ ನಾಲ್ಕು ವರ್ಷವೂ ಕನ್ನಡ ಇರಲಿ : ಅಧ್ಯಾಪಕರ ಸಂಘದ ಒತ್ತಾಯ

ತುಮಕೂರು: ನೂತನ ಶಿಕ್ಷಣ ನೀತಿಯಲ್ಲಿ ಭಾಷಾ ವಿಷಯ ಅಧ್ಯಯನವನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸುವಂತೆ ತುಮಕೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ಒಕ್ಕೂಟ ಒತ್ತಾಯಿಸಿದೆ.

ಈ ಸಂಬಂಧ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮೂಲಕ ಗುರುವಾರ ಉನ್ನತ ಶಿಕ್ಷಣ ಸಚಿವರಿಗೆ ಅಧ್ಯಾಪಕರು ಮನವಿ ಸಲ್ಲಿಸಿದರು.

ನೂತನ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆಯೂ ಸೇರಿದಂತೆ ಇತರೆ ಎಲ್ಲಾ ಭಾಷೆಗಳ ಬೋಧನೆಯನ್ನು ಮೊದಲನೇ ವರ್ಷದ ಪದವಿಗೆ ಮಾತ್ರ ಅಳವಡಿಸಲಾಗುತ್ತಿದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷ ಪ್ರೊ.ಬಿ.ನಿತ್ಯಾನಂದ ಶೆಟ್ಟಿ, ಕೆಜಿಸಿಟಿಎ ತುಮಕೂರು ವಲಯ ಅಧ್ಯಕ್ಷ ಡಾ.ಒ.ನಾಗರಾಜು, ಒಕ್ಕೂಟದ ಅಧ್ಯಕ್ಷ ಡಾ.ಡಿ.ಶಿವನಂಜಯ್ಯ, ಕಾರ್ಯದರ್ಶಿ ಡಾ.ಎಂ.ಶಂಕರಲಿಂಗಯ್ಯ, ಖಜಾಂಚಿ ಡಾ.ಶಿವಲಿಂಗಮೂರ್ತಿ ಹೇಳಿದ್ದಾರೆ.

ಈವರೆಗೆ ಮೂರು ವರ್ಷಗಳ ಪದವಿ ತರಗತಿಗಳಲ್ಲಿ ಎರಡು ವರ್ಷಗಳ ಅವಧಿಗೆ ಕನ್ನಡ ಮತ್ತು ಇತರೆ ಭಾಷಾ ಪಠ್ಯವನ್ನು ಬೋಧಿಸಲಾಗುತಿತ್ತು.

ವಾರಕ್ಕೆ ನಾಲ್ಕು ಗಂಟೆಗಳ ಅವಧಿಯಲ್ಲಿ ಭಾಷೆ ಪಠ್ಯ ಬೋಧನೆಗೆ ಅವಕಾಶ ನೀಡಲಾಗಿತ್ತು. ಇದರಿಂದ ದೇಶಾಭಿಮಾನ, ಕನ್ನಡಾಭಿಮಾನ, ಜೀವನಮೌಲ್ಯ, ಕನ್ನಡ ಪರಂಪರೆ, ಸಾಹಿತ್ಯಾಧ್ಯಯ, ಮಾನವೀಯ ಸಂಬಂಧ, ಸಾಮಾಜಿಕ ಕಾಳಜಿ ಮುಂತಾದ ಮಹತ್ವದ ಮೌಲ್ಯಾತ್ಮಕ ವಿಷಯಗಳನ್ನು ಪರಿಣಾಮಕಾರಿಯಾಗಿ ಯುವಜನರಿಗೆ ಬಿತ್ತುವ ಕೆಲಸವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜತೆಗೆ ಅನ್ಯಶಿಸ್ತುಗಳ ಅಧ್ಯಯನಕ್ಕೂ ಅವಕಾಶವಿತ್ತು. ಈಗ ಭಾಷಾ ವಿಷಯದ ಬೋಧನೆಯ ಅವಧಿಯನ್ನು ಕಡಿತಗೊಳಿಸಿರುವುದು ವೈಜ್ಞಾನಿಕವಾಗಿ ಸಮರ್ಥನೀಯವಲ್ಲ. ಶಿಕ್ಷಣದ ಯಾವುದೇ ಹಂತದಲ್ಲಿ ಭಾಷೆ ಮತ್ತು ಇತರ ಶಿಸ್ತುಗಳ ಕಲಿಕೆಯನ್ನು ಬೇರ್ಪಡಿಸಿ ನೋಡಲಾಗದು ಮತ್ತು ನೋಡಬಾರದು ಎಂದು ಮನವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿ ತರಗತಿಗಳಿಗೆ ಭಾಷಾ ಬೋಧನೆ ಅವಧಿಯನ್ನು ಹೆಚ್ಚಿಸುವ ಬದಲು ಒಂದು ವರ್ಷಕ್ಕೆ ಇಳಿಸಿರುವುದು ಆಘಾತಕಾರಿ ಸಂಗತಿಯಾಗಿದೆ. ಇದರಿಂದ ಶಿಕ್ಷಣ ನೀತಿಯ ಉದ್ದೇಶವನ್ನು ಭಗ್ನಗೊಳಿಸಿದಂತಾಗುತ್ತದೆ. ಭಾಷಾ ಅಧ್ಯಾಪಕರಿಗೆ ಕಾರ್ಯಾಭಾರದ ಕೊರತೆ ಉಂಟಾಗುತ್ತದೆ. ಹಾಗಾಗಿ ನಾಲ್ಕು ವರ್ಷಗಳ ಕಾಲ ಭಾಷಾ ಪಠ್ಯ ಬೋಧನೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *