ಪುರುಷೋತ್ತಮ ಬಿಳಿಮಲೆ
ಭಾಷೆಯು ನಮ್ಮ ಸುತ್ತಲಿನ ಜಗತ್ತನ್ನು ಕೆಲವು ಸಂಕೇತಗಳ ಮೂಲಕ ವಿವರಿಸುತ್ತದೆ ಮತ್ತು ನಮ್ಮ ಸಾಮಾಜಿಕ ಸಂಬಂಧಗಳನ್ನು (ಗಂಡ-ಹೆಂಡತಿ, ಅಣ್ಣ-ತಂಗಿ) ನಿರ್ಣಾಯಕವಾಗಿ ವಿಶದೀಕರಿಸುತ್ತದೆ. ಅದು ಅಧಿಕಾರ ಸ್ಥಾಪನೆಗೂ ನೆರವಾಗುತ್ತದೆ, ಅಧಿಕಾರ ನಾಶಕ್ಕೂ ಕಾರಣವಾಗುತ್ತದೆ.
ಪ್ರಜಾಪ್ರಭುತ್ವ, ಸ್ವರಾಜ್ಯ, ಸರ್ವಾಧಿಕಾರ ಇತ್ಯಾದಿ ಪದಗಳು ಒಂದು ನಿರ್ದಿಷ್ಟ ರಾಜಕೀಯ ಸ್ಥಿತಿಯನ್ನು ವಿವರಿಸಿದ ಹಾಗೆ, ಕಳ್ಳ, ಸುಳ್ಳ , ಮೋಸಗಾರ, ವಂಚಕ ಇತ್ಯಾದಿ ವಿಶೇಷಣಗಳು ವ್ಯಕ್ತಿಗಳ ಗುಣದೋಷಗಳನ್ನು ಸ್ಪಷ್ಟಪಡಿಸುತ್ತವೆ. ಹೀಗಾಗಿಯೇ ಅಧಿಕಾರದಲ್ಲಿರುವವರು ಜನರ ಮೇಲೆ ಹಿಡಿತ ಸಾಧಿಸಲು ಮಾಧ್ಯಮಗಳ ಮೊರೆಹೋಗುತ್ತಾರೆ. ಕೆಲವರಿಗೆ ಕೆಲವು ಪದಗಳನ್ನು ಮಾತ್ರ ಬಳಸಲು ಅದು ಒತ್ತಡ ಹೇರುತ್ತದೆ.
ಏನಿದ್ದರೂ ಒಂದು ಕಾಲಾವಧಿಯಲ್ಲಿ ಬಳಕೆಯಲ್ಲಿರುವ ಪದಗಳು ಆ ಕಾಲದ ಅಧಿಕಾರ ರಾಜಕಾರಣದ ಗುಣಗಳನ್ನು ಹಿಡಿದಿಡುತ್ತವೆ. ಸದ್ಯ ಭಾರತದ ಸಂಸತ್ತು ಜುಮ್ಲಾ ಜೀವಿ, ಬಾಲ ಬುದ್ಧಿ ಕೋವಿಡ್ ಹರಡುವವನು, ನಾಚಿಕೆಗೇಡು, ದುರುಪಯೋಗ, ವಂಚನೆ, ಭ್ರಷ್ಟ, ನಾಟಕ, ಆಷಾಢಭೂತಿತನ, ಅದಕ್ಷ, ಅರಾಜಕತ್ವ, ಶಕುನಿ, ನಿರಂಕುಶಾಧಿಕಾರಿ, ವಿನಾಶ್ ಪುರುಷ್, ಖಲಿಸ್ತಾನಿ, ಚಮಚಾಗಿರಿ, ಚೇಲಾ, ಅಪರಾಧಿ, ಕ್ರೂರಿ, ಗೂಂಡಾಗಳು, ಮೊದಲಾದ ಪದಗಳನ್ನು ಕಡತದಿಂದ ತೆಗೆದು ಹಾಕಲು ನಿರ್ಧರಿಸಿದೆ.
ಆದರೆ ತೆಗೆದು ಹಾಕಲಾದ ಪದಗಳೇ ಕಾಲಾಂತರದಲ್ಲಿ ಭಾರತದ ಸಂಸತ್ತು ಹೇಗೆ ಕಾರ್ಯ ನಿರ್ವಹಿಸುತ್ತಿತ್ತು ಎಂಬುದನ್ನು ಮುಂದಿನ ತಲೆಮಾರಿಗೆ ತಿಳಿಸುತ್ತವೆ ಮತ್ತು ಅಲ್ಲಿ ಯಾರ‍್ಯಾರು ಇದ್ದರು ಎಂಬುದನ್ನೂ ದಾಖಲಿಸುತ್ತದೆ.
ಈ ಪದಗಳನ್ನು ತೆಗೆದು ಹಾಕಿದ ತಕ್ಷಣ ಅಲ್ಲಿ ಅಂತವರು ಯಾರೂ ಇರಲಿಲ್ಲ ಎಂದೇನೂ ಅರ್ಥವಲ್ಲ. ೨೦೧೯ರಲ್ಲಿ ಪ್ರಕಟವಾದ ವರದಿಯೊಂದು ಲೋಕಸಭೆಯಲ್ಲಿರುವ ಕ್ರಿಮಿನಲ್ ಪ್ರಕರಣದ ಆರೋಪಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳಲ್ಲಿ ಅಪರಾಧ ಹಿನ್ನೆಲೆಯುಳ್ಳ ಸಂಸದರ ಸಂಖ್ಯೆ ಶೇ. 43. ೨೦೧೪ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಇದು ಶೇ. 26ರಷ್ಟು ಹೆಚ್ಚು. ಅಂದರೆ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಮತದಾರರು ತಮ್ಮ ಚುನಾವಣಾ ಕ್ಷೇತ್ರದ ಅಭ್ಯರ್ಥಿಯು ಭ್ರಷ್ಟಾಚಾರ ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಅದನ್ನು ಕಡೆಗಣಿಸಿ ಮತದಾನ ಮಾಡಿದ್ದಾರೆ ಎಂಬುದು ಸ್ಪಷ್ಟ.
ಅಕ್ರಮ ಸಂಪಾದನೆ, ಹಣದ ಅವ್ಯವಹಾರ ಮತ್ತು ಭಯೋತ್ಪಾದನೆ ಕೃತ್ಯಗಳ ಆರೋಪಿಯಾಗಿರುವ ಸಂಸದರು ಲೋಕಸಭೆಯಲ್ಲಿದ್ದಾರೆ. ಮಾಲೆಗಾಂವ್ ಪ್ರಕರಣದ ಆರೋಪಿ ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಕಾಂಗ್ರೆಸ್‌ನ ಹಿರಿಯ ನೇತಾರ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ, ಹತ್ಯೆ ಪ್ರಕರಣದ ಆರೋಪಿಯಾದ ಉತ್ತರ ಪ್ರದೇಶದ ಅಫ್ಜಲ್ ಅನ್ಸಾರಿ ಮೊದಲಾದವರು ಕೆಲವು ಉದಾಹರಣೆಗಳಷ್ಟೇ. ಕೇರಳದ ಇಡುಕ್ಕಿ ಲೋಕಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಡೀನ್ ಕುರಿಯಕೋಸ್ (ಕಾಂಗ್ರೆಸ್) ವಿರುದ್ಧ 204 ಅಪರಾಧ ಪ್ರಕರಣಗಳು ಇವೆ.
ಪದ ಬಳಕೆಯನ್ನು ನಿಷೇಧಿಸುವ ಪಕ್ಷಗಳು ಆ ವಿಶೇಷಣಗಳನ್ನು ಹೊಂದಿರುವ ಅಭ್ಯರ್ಥಿಗಳನ್ನೇನೂ ನಿಷೇಧಿಸುವುದಿಲ್ಲ. ೨೦೧೯ರಲ್ಲಿ ಗೆಲುವು ಸಾಧಿಸಿದ ೨೩೩ ಸಂಸದರು ಅಪರಾಧ ಹಿನ್ನಲೆಯುಳ್ಳವರಾಗಿದ್ದಾರೆ. ಇದರಲ್ಲಿ ಬಿಜೆಪಿಯ ೧೧೬, ಕಾಂಗ್ರೆಸ್‌ನ ೨೯, ಜೆಡಿಯುನ ೧೩, ಡಿಎಂಕೆಯ ೧೦, ಮತ್ತು ಟಿಎಂಸಿಯ ೯ ಸಂಸದರಿದ್ದಾರೆ. ದ್ವೇಷ ಭಾಷಣ ಮಾಡಿದ ಆರೋಪವಿರುವ ೨೯ ಸಂಸದರು ಲೋಕಸಭೆಯಲ್ಲಿದ್ದಾರೆ. ಇವರು ಅನ್ಯಾಯ ಮಾಡಬಹುದು, ಸುಳ್ಳು ಹೇಳಬಹುದು, ಆದರೆ ಅವರನ್ನು ನೀವು ಅನ್ಯಾಯಗಾರ, ಸುಳ್ಳ, ವಂಚಕ ಎಂದೆಲ್ಲಾ ಕರೆಯಬಾರದು ಅಷ್ಟೆ.
ಲೋಕಸಭೆ, ರಾಜ್ಯಸಭೆಗಳು ಘನತೆಯಿಂದ ಕಾರ್ಯನಿರ್ವಹಿಸಬೇಕಾದ್ದು ಅವಶ್ಯಕ. ಅದಕ್ಕೆ ಅಷ್ಟೇ ಘನತೆಯುಳ್ಳ ವ್ಯಕ್ತಿಗಳು ಅಲ್ಲಿರಬೇಕು.