ಬೆಂಗಳೂರು: ಅನೇಕ ಗುತ್ತಿದಾರರು, ಅಧಿಕಾರಿಗಳ ಜೀವದ ಜೊತೆ ಆಟವಾಡಿದ್ದ ಹಿಂದಿನ “40% ಕಮಿಷನ್ ಸರ್ಕಾರ”ದ ಚಾಳಿಯನ್ನೇ ಕಾಂಗ್ರೆಸ್ ಸರ್ಕಾರವೂ ಮೈಗೂಡಿಸಿಕೊಂಡಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ ಸುಮಾರು 187 ಕೋಟಿ ಮೊತ್ತದ ಅವ್ಯವಹಾರಕ್ಕೆ ಸಂಬಂಧಿಸಿ ಬೆಂಗಳೂರು ಕಚೇರಿ ಅಧೀಕ್ಷಕ ಪಿ.ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿರುವುದೇ ಇದಕ್ಕೆ ಸಾಕ್ಷಿ ಎಂದು ಜಗದೀಶ್ ವಿ. ಸದಂ ಆರೋಪಿಸಿದರು.
ಶಿವಮೊಗ್ಗದಲ್ಲಿ ಅಕೌಂಟೆಂಟ್ ಪಿ.ಚಂದ್ರಶೇಖರನ್ ಅವರ ಆತ್ಮಹತ್ಯೆಗೆ ಸಂಬಂಧಿಸಿ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಾರ್ಟಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಡೆತ್‌ನೋಟ್‌ನಲ್ಲಿ ಚಂದ್ರಶೇಖರನ್ ನಮೂದಿಸಿರುವ ಮಂತ್ರಿ ಬಿ. ನಾಗೇಂದ್ರ ರವರನ್ನು ಕೂಡಲೇ ಸಂಪುಟದಿಂದ ಕಿತ್ತುಹಾಕಬೇಕು.
ಇದನ್ನೂ ಓದಿ: 28ರಂದು ಬಿಜೆಪಿ ಬೃಹತ್ ಪ್ರತಿಭಟನೆ- ಎಸ್.ಹರೀಶ್
ಉನ್ನತ ಮಟ್ಟದ ತನಿಖೆ ನಡೆಸಬೇಕು. ಅವ್ಯವಹಾರದಲ್ಲಿ ಭಾಗಿಯಾಗಿರುವ ಮಂತ್ರಿ, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಧಿಕಾರಿಯ ಆತ್ಮಹತ್ಯೆ ಪ್ರಕರಣ ರಾಜ್ಯ ಸರ್ಕಾರವು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಾಗೆಲ್ಲ ದಾಖಲೆ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಳುತ್ತಿದ್ದರು. ಇದೀಗ ದಾಖಲೆಯ ಸ್ವರೂಪವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿಯ ಡೆತ್‌ನೋಟ್ ಇದೆ. ನಿಗಮದ 85 ಕೋಟಿ ರೂ.ಗಳನ್ನು ಅನ್ಯಾಯ ಮತ್ತು ನಿಯಮಬಾಹಿರವಾಗಿ ಲೂಟಿ ಮಾಡಿರುವ ಬಗ್ಗೆಯೂ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಸಚಿವರು ಮೌಕಿಕವಾಗಿ ಆದೇಶ ನೀಡಿದ್ದರೆಂದು ಉಲ್ಲೇಖಿಸಿದ್ದಾರೆ. ಇದೇನು ಕೇವಲ ಬಾಯಿ ಮಾತಿನಲ್ಲೇ ನಡೆಸುವ ಸರ್ಕಾರವಾಗಿದೆಯೇ? ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನೀಡುವುದಾಗಿ ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯನವರ ಸರ್ಕಾರವೂ ಕಮಿಷನ್ ಭ್ರಷ್ಟಾಚಾರದ ಹಾದಿ ಹಿಡಿದಿರುವುದು ವಿಪರ್ಯಾಸ ಎಂದು ಜಗದೀಶ್ ವಿ. ಸದಂ ಬೇಸರ ವ್ಯಕ್ತಪಡಿಸಿದರು.
ಇದನ್ನೂ ನೋಡಿ: ಈ ಬಾರಿ ಬಿಜೆಪಿಗೆ ಬಹುಮತ ಬರೋದು ಕಷ್ಟ – ಬಿ.ಎಂ.ಹನೀಫ್