ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಏರಿಕೆಯಾದ ಹಿನ್ನೆಲೆ ಬೆಡ್ಗಳು ಸಿಗದೇ ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದುರಂತ ಅಂದ್ರೆ ಕೊರೊನಾ ವಾರಿಯರ್ ಆಗಿದ್ದ ಸ್ವ್ಯಾಬ್ ಕಲೆಕ್ಟರ್ ಗೀತಾ(35) ಎಂಬುವವರು ಬೆಡ್, ಆಕ್ಸಿಜನ್ ಸಿಗದೇ ಸೋಂಕಿನಿಂದ ಬಳಲಿ ಸಾವನ್ನಪ್ಪಿದ್ದಾರೆ.
ಬಿಬಿಎಂಪಿ ಈಸ್ಟ್ ಝೋನ್ನ ಮರ್ಸಿಟೌನ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಾಬ್ ಕಲೆಕ್ಟರ್ ಆಗಿದ್ದ ಗೀತಾ ಅವರಿಗೆ ಕಳೆದ ಒಂದು ವಾರದ ಹಿಂದೆ ಪಾಸಿಟಿವ್ ಆಗಿತ್ತು ಎನ್ನಲಾಗಿದೆ. ನಾಲ್ಕೈದು ಆಸ್ಪತ್ರೆಗಳಿಗೆ ಅಲೆದಾಡಿದ್ರೂ ಬೆಡ್ ಸಿಗದಂತಾಗಿದೆ. ಕೊನೆಗೆ ವಿಕ್ಟೋರಿಯಾದಲ್ಲಿ ನಾಲ್ಕು ಗಂಟೆ ಕಾದ ಬಳಿಕ ಬೆಡ್ ಸಿಕ್ಕಿದೆ.. ಅಷ್ಟರಲ್ಲಿ ಆಕ್ಸಿಜನ್ ಲೆವಲ್ ಕಡಿಮೆಯಾಗಿ, ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕೋವಿಡ್ ಪಾಸಿಟಿವ್ ಬಂದ ನಂತರ ಐಸಿಯು ಬೆಡ್ ಸಹ ನೀಡಿರಲಿಲ್ಲ. ಕೋವಿಡ್ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರೂ ಬಿಬಿಎಂಪಿಯಿಂದ ಸರಿಯಾದ ಗ್ಲೌಸ್, ಮಾಸ್ಕ್ ಕೊಡುತ್ತಿಲ್ಲ. ಮೃತ ಸೋಂಕಿತ ಮಹಿಳೆಗೆ ಎಂಟು ವರ್ಷದ ಮಗಳು ಇದ್ದಾಳೆ. ಮಗಳಿಗೆ ಯಾರು ದಿಕ್ಕು ಎಂದು ಸಂಬಂಧಿಕರು ಕಣ್ಣೀರು ಹಾಕಿದರು.
ಖಾಸಗಿ ಆಸ್ಪತ್ರೆ ಬೆಡ್ ಸ್ವಾಧೀನಕ್ಕೆ ನಿರ್ಧಾರ : ರಾಜಧಾನಿಯಲ್ಲಿ ಬೆಡ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆಗಳಲ್ಲಿನ ಶೇ. 50ರಷ್ಟು ಹಾಸಿಗೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಂಟಿ ಕಾರ್ಯಾಚರಣೆ ನಡೆಸುವಂತೆ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಡ್ ಕೊರತೆ ಹಿನ್ನಲೆ ಸರ್ಕಾರ ಮಿನಿ ಹಾಸ್ಪಿಟಲ್ ತುರ್ತಾಗಿ ನಿರ್ಮಿಸಲು ನಿರ್ಧರಿಸಿದೆ. ಚಿಕಿತ್ಸೆಗೆ ಬೆಡ್, ಆಕ್ಸಿಜನ್ ಸಿಗದೆ ರೋಗಿಗಳು ಆಸ್ಪತ್ರೆಗಳಿಗೆ ಅಲೆದಾಡಿ ಪ್ರಾಣಬಿಡುತ್ತಿದ್ದಾರೆ. ಗುಣಲಕ್ಷಣವಿಲ್ಲದವರಿಗೆ ಬಿಬಿಎಂಪಿ 10 ಕೊರೋನಾ ಕೇರ್ ಸೆಂಟರ್ ತೆರೆಯಲಾಗಿದೆ. ಆದರೆ ಗುಣಲಕ್ಷಣವಿದ್ದು ಆಕ್ಸಿಜನ್ ಅಗತ್ಯವಿರುವ ಸೋಂಕಿತರಿಗೆ ಬೆಡ್ ಸಾಲುತ್ತಿಲ್ಲ.
ಇದನ್ನೂ ಓದಿ : ಭಾರತದಲ್ಲಿ ಕೋವಿಡ್ ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಪ್ರಮಾಣ ಹೇಗಿದೆ?
ಈ ಕಾರಣಕ್ಕೆ ಸರ್ಕಾರ ಖಾಸಗಿ ಅಸ್ಪತ್ರೆಗಳು ಹಾಗೂ ಹೋಟೆಲ್ಗಳ ಸಹಕಾರದೊಂದಿಗೆ ಮಿನಿ ಆಸ್ಪತ್ರೆ ಶುರು ಮಾಡುತ್ತಿದೆ.ಕೊರೋನಾ ಗುಣಲಕ್ಷಣ ಇರುವ ರೋಗಿಗಳಿಗೆ, ಸಣ್ಣ ಪ್ರಮಾಣದ ಆಕ್ಸಿಜನ್ ಅಗತ್ಯವಿರುವವರಿಗೆ, ನಿಶ್ಶಕ್ತರಾಗಿ ಅಸ್ವಸ್ಥರಾದವರಿಗೆ ಡ್ರಿಪ್ ಹಾಕಿಸಿಕೊಳ್ಳಲು ಮಿನಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುತ್ತದೆ. ಆಕ್ಸಿಜನ್ ಸಮಸ್ಯೆ ಕಾಡುತ್ತಿರುವ ಹಿನ್ನೆಲೆ ಸರ್ಕಾರ ಕೂಡ ಕಟ್ಟು ನಿಟ್ಟಿನ ಕ್ರಮ ವಹಿಸಿದ್ದು, ಈ ಕುರಿತು ಉನ್ನತಮಟ್ಟದ ಸಭೆ ನಡೆಸಲಾಗಿದೆ. ಸುಮಾರು 800 ಮೆಟ್ರಿಕ್ ಟನ್ ಆಕ್ಸಿಜನ್ ಸರಬಾರಜು ಆಗುತ್ತಿದೆ. ಪ್ರತಿನಿತ್ಯ ಬೇಡಿಕೆ ಹೆಚ್ಚಾಗುತ್ತಿದೆ. ಚೀಫ್ ಸೆಕ್ರೆಟರಿ ಆಕ್ಸಿಜನ್ ಉತ್ಪಾದಕರ ಬಳಿ ಮಾತನಾಡಿ ಹೆಚ್ಚುವರಿ ಆಕ್ಸಿಜನ್ ಪಡೆದುಕೊಂಡಿದ್ದೇವೆ. ನಮ್ಮ ಪವರ್ ಪ್ಲ್ಯಾಟ್ ನಲ್ಲೂ ಆಕ್ಸಿಜನ್ ಉತ್ಪಾದನೆ ಮಾಡುತ್ತಿದ್ದೇವೆ. ಕೆಲವು ಸಿಮೆಂಟ್ ಫ್ಯಾಕ್ಟರಿಗಳಲ್ಲೂ ಉತ್ಪಾದನೆ ಆಗಿದ್ದನ್ನು ಮೆಡಿಕಲ್ ಉದ್ದೇಶಕ್ಕೆ ಬಳಸುತ್ತೇವೆ. ಒಟ್ಟಾರೆ ನಮ್ಮ ಪ್ರಯತ್ನ ಮಾಡಿ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.