ಕೊರೊನಾದ ಎರಡನೇ ಅಲೆ ‘ಬಿರುಗಾಳಿಯಾಗಿ ಅಪ್ಪಳಿಸಿರುವಾಗ’ ಕೇಳಬರುತ್ತಿರುವ ಒಂದು ಪ್ರಧಾನ ಕೂಗು ಎಂದರೆ ಆಕ್ಸಿಜನ್ ಕೊರತೆ, ಹೌದು ಆಕ್ಸಿಜೆನ್ ಆಕ್ಸಿಜೆನ್ ಆಕ್ಸಿಜೆನ್ ಎಲ್ಲೆಲ್ಲೂ ಆಕ್ಸಿಜೆನ್ಗಾಗಿ ಹಾಹಾಕಾರ. ಬೆಡ್ ಗಾಗಿ ಪರದಾಟ, ಇದು ಕರ್ನಾಟಕದ ಕರುಣಾಜನಕ ಕತೆ.
ಕರೊನಾ ಎರಡನೇ ಅಲೆಯ ಆರ್ಭಟ ಹಲವು ಸಂಕಷ್ಟಗಳನ್ನು ತಂದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ, ಮರಣ ಪ್ರಮಾಣ ಹೆಚ್ಚುತ್ತಿದೆ. ಬೆಂಗಳೂರಿನ ಸ್ಥಿತಿಯಂತೂ ಅಯೋಮಯವಾಗಿದೆ. ಜಿಲ್ಲಾಕೇಂದ್ರಗಳಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಬಾರಿ ಕರೊನಾ ಎದುರಿಸುವುದು ಆರೋಗ್ಯ ಇಲಾಖೆಗೆ, ಮತ್ತು ಸರ್ಕಾರಕ್ಕೆ ಹೊಸದಾಗಿತ್ತು. ಏನು ಕ್ರಮ ಕೈಗೊಳ್ಳಬೇಕು, ಸೋಂಕು ಪ್ರಸರಣದ ವೇಗ ತಗ್ಗಿಸುವುದು ಹೇಗೆ ಎಂಬ ಬಗ್ಗೆ ಹಲವು ಪ್ರಶ್ನೆ, ಅನುಮಾನಗಳಿದ್ದವು.
ಒಂದು ವರ್ಷದ ಅನುಭವದ ಬಳಿಕ ಅಧಿಕಾರಿಗಳು ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸಬೇಕಿತ್ತು. ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿದ್ದಂತೆ ಆರೋಗ್ಯ ಇಲಾಖೆಯ ತಯಾರಿ ಕೊರತೆ ಢಾಳಾಗಿ ಗೋಚರಿಸಿವೆ. ಎಲ್ಲೂ ಸಮರ್ಪಕವಾದ ಔಷಧಗಳಿಲ್ಲ, ಆಕ್ಸಿಜನ್ ಗಂತೂ ಭಾರಿ ಪರದಾಟ ನಡೆಸುವ ಸ್ಥಿತಿ ಬಂದೊದಗಿದೆ. ರೋಗಿಗಳನ್ನು ಚಿಕಿತ್ಸೆಗೆ ದಾಖಲು ಮಾಡಬೇಕಾದರೆ ದೊಡ್ಡ ಹೋರಾಟ ನಡೆಸುವಂತಾಗಿದೆ.
ಹೇಳುವಂತೆ ಬೆಂಗಳೂರಿನಲ್ಲಿ ಬೆಡ್ ಗಾಗಿ, ಆಕ್ಸಿಜನ್ ಗಾಗಿ, ಚಿತಾಗಾರಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ನಿಜ, ಇಲ್ಲಿ ಎರಡ ಮೂರು ಘಟನೆಗಳು ನಾವು ನೋಡೋಣ, ನಗರದ ಮತ್ತಿಕೆರೆ ನಿವಾಸಿಯೊಬ್ಬರು ತಂದೆಯ ಅಂತ್ಯ ಸಂಸ್ಕಾರಕ್ಕೆ ತಾಳಿ ಮಾರಲು ಮುಂದಾದ ಘಟನೆ ನಡೆದಿದೆ. ಕೋವಿಡ್ ಸೋಂಕಿನಿಂದ ಮೃತಪಟ್ಟ ತಂದೆಯು ಬದುಕಿರಬಹುದೆಂದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅದರೆ, ವೈದ್ಯರು ಪರೀಕ್ಷಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಅದೇ ಆಯಂಬುಲೆನ್ಸ್‌ನಲ್ಲಿ ಸಿಬ್ಬಂದಿ ಮೃತದೇಹ ತರಲು 60 ಸಾವಿರ ರೂ. ಡಿಮ್ಯಾಂಡ್ ಮಾಡಿದ್ದಾರೆ.
ಇದನ್ನೂ ಓದಿ : ಭಾರತದಲ್ಲಿ ಕೋವಿಡ್ ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಪ್ರಮಾಣ ಹೇಗಿದೆ?
ಆಕ್ಸಿಜನ್ ಸಿಗದ ಕೊರೊನಾ ಸೋಂಕಿತ ಟೆಕ್ಕಿ ಸುಬ್ರಹ್ಮಣ್ಯ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸಾವನ್ನಪ್ಪುತ್ತಾರೆ, ಆರಂಭದಲ್ಲಿ ಮೃತರ ಪತ್ನಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಅವರು ಚೇತರಿಸಿಕೊಂಡಿದ್ದರು. ಬಳಿಕ ಸುಬ್ರಹ್ಮಣ್ಯ ಅವರಿಗೆ ಸೋಂಕು ತಗಲಿದ್ದು, ಅವರನ್ನು ಬನಶಂಕರಿಯ ದೇವಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಬ್ರಹ್ಮಣ್ಯ ಅವರಿಗೆ ಆಮ್ಲಜನಕ ಪೂರೈಕೆ ಅನಿವಾರ್ಯವಾದ ಕಾರಣ ವೈದ್ಯರು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸಲಹೆ ನೀಡಿದ್ದರು. ”ಸಾಕಷ್ಟು ಆಸ್ಪತ್ರೆಗಳಿಗೆ ಕರೆ ಮಾಡಿ ಆಕ್ಸಿಜನ್ ಇರುವ ಹಾಸಿಗೆಗಾಗಿ ಪ್ರಯತ್ನಿಸಿದ್ದೆ. ನೋಡಲ್ ಅಧಿಕಾರಿ, ಸ್ಥಳೀಯ ಅಧಿಕಾರಿ, ಸಚಿವ ಸುಧಾಕರ್ ಅವರ ಕಚೇರಿ, ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿದ್ದರೂ ಸಹಾಯ ಸಿಗಲಿಲ್ಲ.
ಬೀದರ್ ನಲ್ಲೂ ಈಗ ಹಾಸಿಗೆ ಅಭಾವ ಸೃಷ್ಟಿಯಾಗಿದೆ, ಹಾಸಿಗೆ ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಹಾಸಿಗೆ ಇಲ್ಲದಿದ್ದರೂ ಸರಿ ನೆಲದ ಮೇಲೆ ಮಲಗಿಸಿಯಾದರೂ ಚಿಕಿತ್ಸೆ ಕೊಡಿಸುವಂತೆ ರೋಗಿಗಳು ಅಂಗಲಾಚುತ್ತಿದ್ದ ದೃಶ್ಯ ಕರ್ನಾಟಕದ ಚಿಂತಾಜನಕ ಸ್ಥಿತಿಯನ್ನು ತೆರೆದಿಡುತ್ತದೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತ ವ್ಯಕ್ತಿಯ ಆರೈಕೆಯನ್ನು ಆತನ ಮಗಳೇ ಮಾಡುತ್ತಿದ್ದಾಳೆ, ಕೋವಿಡ್ ಸೋಂಕಿತರು ಇರುವ ಈ ಆಸ್ಪತ್ರೆಯ ಒಳಗೆ ಯಾರೆಂದರೆ ಅವರನ್ನು ಯಾವ ನಿರ್ಬಂಧವೂ ಇಲ್ಲದೆ ಬಿಡಲಾಗ್ತಿದೆಯಂತೆ. ಹುಬ್ಬಳ್ಳಿ ಆಸ್ಪತ್ರೆಯ ಈ ಬೇಕಾಬಿಟ್ಟಿ ಧೋರಣೆ ಮತ್ತು ನಿರ್ಲಕ್ಷ್ಯವನ್ನು ಸೋಂಕು ಹರಡಲು ಕಾರಣವಾಗುತ್ತಿಲ್ಲವೆ ಎಂಬ ಪ್ರಶ್ನೆ ಮೂಡುತ್ತದೆ.
ಮೊನ್ನೆ ಏಪ್ರಿಲ್ 17ರಂದು ನಟಿ ಅನು ಪ್ರಭಾಕರ್ ಗೆ ಕೊರೋನಾ ಸೋಂಕು ಇರುವುದು ಗೊತ್ತಾಯಿತು. ಅದಾಗಿ ಐದು ದಿನ ಕಳೆದರೂ ಇನ್ನೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಡೆಯಿಂದ ಪ್ರತಿಕ್ರಿಯೆಯೇ ಬಂದಿಲ್ಲವಂತೆ. ಕೊರೋನಾ ದೃಢಪಟ್ಟು 5 ದಿನವಾಗಿದೆ, ಹೋಂ ಐಸೊಲೇಷನ್ ನಲ್ಲಿದ್ದೇನೆ. ಆದರೆ ಬಿಬಿಎಂಪಿ ಕಡೆಯಿಂದ ಯಾವ ಫೋನ್ ಬಂದಿಲ್ಲ, ಕೋವಿಡ್ ವಾರ್ ವೆಬ್ ಸೈಟ್ ನಲ್ಲಿ ತಮ್ಮ ಹೆಸರು ಅಪ್ಡೇಟ್ ಕೂಡ ಆಗಿಲ್ಲ, ಇನ್ನೂ ನನಗೆ ಬಿಯು ಸಂಖ್ಯೆ ಬಂದಿಲ್ಲ, ಈ ವಿಷಯವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಎಂದು ಆರೋಗ್ಯ ಸಚಿವ ಸುಧಾಕರ್ ಅವರ ಟ್ವಿಟ್ಟರ್ ಖಾತೆಯನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಈ ಎಲ್ಲಾ ಅಂಕಿಅಂಶಗಳು ಬೆಂಗಳೂರಿನಲ್ಲಿ ದಿನೇ ದಿನೇ ಆಕ್ಸಿಜನ್ ಮತ್ತು ಹಾಸಿಗೆಯ ಕೊರತೆ ಎಷ್ಟರೆ ಮಟ್ಟಿಗೆ ಉಂಟಾಗುತ್ತಿದೆ. ಎಂಬುದನ್ನು ತೋರಿಸುತ್ತವೆ. ಆದರೆ ಸರಕಾರ ಮಾತ್ರ ಈ ನ್ಯೂನ್ಯತೆಯನ್ನು ಒಪ್ಪಿಕೊಳ್ಳುವ ಬದಲು ಹಾಸಿಗೆ, ಆಕ್ಸಿಜನ್ ಕೊರತೆ ಇಲ್ಲ ಎಂದು ನುಣಿಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಸದ್ಯ ಏರುತ್ತಿರುವ ಪ್ರಮಾಣವನ್ನು ನೋಡಿದರೆ ಬೆಂಗಳೂರಿನಲ್ಲಿ 10,000 ಬೆಡ್ ಗಳ ಅಗತ್ಯವಿದೆ, 3000 ಕ್ಕೂ ಹೆಚ್ಚು ಐಸಿಯು ಬೆಡ್ ಗಳ ಅಗತ್ಯತೆ ಇದೆ. ಈಗಿರುವ ಬಹುತೇಕ ಬೆಡ್ ಗಳು ಭರ್ತಿಯಾಗಿವೆ. ಕಳೆದ ಬಾರಿ ತುಮಕೂರು ರಸ್ತೆಯಲ್ಲಿ 10 ಸಾವಿರದ 100 ಹಾಸಿಗೆಗಳನ್ನು ಹೊಂದಿದ್ದ ಕೋವಿಡ್ ಕೇರ್ ಸೆಂಟರ್ ನ್ನು ಸೆಪ್ಟಂಬರ್ ನಲ್ಲಿ ಮುಚ್ಚಲಾಗಿದೆ. ಈ ರೀಯಲ್ಲಿ ಮತ್ತೆ ದೊಡ್ಡದಾದ ಕೋವಿಡ್ ಸೆಂಟರ್ ಆರಂಭಿಸುವ ಅಗತ್ಯತೆ ಇದೆ.
ಇದನ್ನೂ ಓದಿ : ಏನಿದು ರೆಮ್ಡೆಸಿವಿರ್ ಔಷಧ? ಇದರ ಪ್ರಯೋಜನವೇನು ಮತ್ತು ಏಕೆ ಇದರ ಕೊರತೆಯಿದೆ?
ದಿಲ್ಲಿ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಕರ್ನಾಟಕವೂ ಸೇರಿದಂತೆ ಈ ಎರಡನೇ ಅಲೆಯಲ್ಲಿ ಬಹಳಷ್ಟು ಸಾವುಗಳು ಆಕ್ಸಿಜನ್ ಕೊರತೆಯಿಂದಾಗಿಯೆ ಸಂಭವಿಸಿವೆ, ಇವುಗಳ ನಡುವೆ, ಕೇರಳ ರಾಜ್ಯದಲ್ಲಿ ಮಾತ್ರವೇ ಆಕ್ಸಿಜನ್ ನ ಕೊರತೆ ಇಲ್ಲದೆ, ಇತರೆ ರಾಜ್ಯಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಆ ರಾಜ್ಯದ ಸ್ವಂತ ಅಗತ್ಯಗಳನ್ನು ಪೂರೈಸುವುದಲ್ಲದೇ ಕಳೆದ ವಾರ ಗೋವ, ಕರ್ನಾಟಕ ಮತ್ತು ತಮಿಳುನಾಢಿಗೆ ಕೇರಳದಿಂದ ವೈದ್ಯಕೀಯ ಆಕ್ಸಿಜನ್ ಟ್ಯಾಂಕರುಗಳು ಸರಬರಾಜು ಮಾಡಲಾಗಿದೆ. ಇದು ಕೇರಳ ರಾಜ್ಯದಲ್ಲಿನ ಸಾರ್ವತ್ರಿಕ ಆರೋಗ್ಯ ವ್ಯವಸ್ಥೆ ಹೇಗಿದೆ ಎಂಬುದನ್ನು ತೋರಿಸುತ್ತದೆ. ಆದರೆ ಕರ್ನಾಟಕದಲ್ಲಿ ಮಾತ್ರ ಆಕ್ಸಿಜನ್ ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಅಂದಾಜು 1500 ಮೆಟ್ರಿಕ್ ಟನ್ ನಷ್ಟು ಆಕ್ಸಿಜನ್ ನ ಅಗತ್ಯವಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.
ಈ ಎಲ್ಲಾ ಅಂಶಗಳನ್ನು ಗಮನಿಸುತ್ತಿದ್ದರೆ, ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡ ಹೆಚ್ಚಿದೆ ಎನ್ನುವುದು ನಿಜವಾದರೂ, ಪರಿಸ್ಥಿತಿ ನಿಭಾಯಿಸುವಲ್ಲಿ ಸರಕಾರ ಎಡವಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯ ಇಲ್ಲ, ಹಾಸಿಗೆ ಇದ್ದರೆ ಐಸಿಯು, ಇತರ ವೈದ್ಯಕೀಯ ಸೇವೆಗಳಿಲ್ಲ. ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕವನ್ನು ಭರಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಸರ್ಕಾರದ ಆಂಬುಲೆನ್ಸ್ಗಳೂ ಸಿಗುತ್ತಿಲ್ಲ. ಖಾಸಗಿ ಅಂಬುಲೆನ್ಸ್ಗಳು ಕೆಲವೇ ಗಂಟೆಗೆ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿವೆ. ಹೋಮ್ ಐಸೋಲೇಷನ್ ನಲ್ಲಿರುವವರಿಗೂ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ, ಹಣ ಕೊಟ್ಟು ಕೊಂಡುಕೊಳ್ಳಲಾಗದ ಸ್ಥಿತಿ ಅನೇಕ ಕಡೆಗಳಲ್ಲಿ ಕಂಡು ಬಂದಿದೆ.
ಕೋವಿಡ್ ರೋಗಿಗಳಿಗಾಗಿರುವ ರಾಜ್ಯದ ‘ಆಪ್ತಮಿತ್ರ’ ಹಾಗೂ ಬಿಬಿಎಂಪಿ ಸಹಾಯವಾಣಿ ನೆರವಿಗೆ ಬರುತ್ತಿಲ್ಲ. ಮೊದಲನೇ ಅಲೆ ಸಂದರ್ಭದಲ್ಲಿ ‘ಆಪ್ತಮಿತ್ರ’ ಸಹಾಯವಾಣಿ ಲಕ್ಷಾಂತರ ರೋಗಿಗಳಿಗೆ ಸಹಾಯ ಮಾಡಿತ್ತು. ಆದರೀಗ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಬಿಬಿಎಂಪಿ ಕೋವಿಡ್ ವಾರ್ ರೂಮ್ ಸ್ಥಾಪಿಸಿರುವ ಸಹಾಯವಾಣಿಯಿಂದಲೂ ಯಾವುದೇ ನೆರವು ಸಿಗುತ್ತಿಲ್ಲ. ಹೀಗೆ ಸಾಲು ಸಾಲು ನಿರ್ಲಕ್ಷ್ಯಗಳು ಅನಾವರಣಗೊಳ್ಳುತ್ತ ಹೋಗುತ್ತವೆ.
ಕಳೆದ ವರ್ಷ ಕೋವಿಡ್ ಮೊದಲನೇ ಅಲೆ ಕಾಣಿಸಿಕೊಂಡಾಗ ಆರೋಗ್ಯ ವ್ಯವಸ್ಥೆ ಸ್ವಲ್ಪವಾದರೂ ಎಚ್ಚೆತ್ತುಕೊಂಡಿತ್ತು, ಈ ಬಾರಿ ಆ ಉತ್ಸಾಹ, ಕಾಳಜಿ ಎರಡೂ ಕಾಣುತ್ತಿಲ್ಲ. ಸೋಂಕಿತರಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿಲ್ಲ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಪ್ರಕ್ರಿಯೆ ನಿಂತುಹೋಗಿದೆ. ಈ ಬಗೆಯ ಅಧ್ವಾನಗಳಿಂದ ಇನ್ನಷ್ಟು ಅನಾಹುತಗಳು ಸೃಷ್ಟಿಯಾಗುತ್ತಿವೆ.
ಇದೊಂದು ಮಾನವೀಯ ಸಂಕಟವಾಗಿದ್ದು, ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ, ಅಧಿಕಾರಿಗಳು, ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಒಂದೊಂದು ಜೀವದ ಮೌಲ್ಯವನ್ನೂ ಅರ್ಥಮಾಡಿಕೊಂಡು ಕೆಲಸವನ್ನು ಮಾಡುವುದಕ್ಕೆ ಸರಕಾರ ಮತ್ತು ಆರೋಗ್ಯವ್ಯವಸ್ಥೆ ಸಿದ್ಧವಾಗಬೇಕಿದೆ.