ಆಕ್ಸಿಜನ್‌ಗಾಗಿ ನಿಲ್ಲದ ಹಾಹಾಕಾರ – ಕರ್ನಾಟಕದಲ್ಲಿ ಆಕ್ಸಿಜನ್‌ ಉತ್ಪಾದನೆ ಹೇಗಿದೆ?

ಕರ್ನಾಟಕದಲ್ಲಿ  ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅದರ ಬೆನ್ನಲ್ಲೇ ಆಕ್ಸಿಜನ್‌ಗೆ ಬೇಡಿಕೆಯಲ್ಲಿ ಏರಿಕೆಯಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ಅಧಿಕ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ ರಾಜ್ಯದಲ್ಲಿ ಆಕ್ಸಿಜನ್ ಎಷ್ಟು  ಉತ್ಪಾದನೆಯಾಗುತ್ತಿದೆಯೇ? ಯಾವ ಜಿಲ್ಲೆಗಳಿಂದ ಎಷ್ಟು ಪ್ರಮಾಣದ ಆಕ್ಸಿಜನ್‌ಗೆ ಬೇಡಿಕೆ ಇದೆ? ಒಂದು ವೇಳೆ ಆಕ್ಸಿಜನ್‌ಗೆ ಬೇಡಿಕೆ ಮತ್ತಷ್ಟು ಹೆಚ್ಚಿದರೆ ಅದನ್ನು ಈಡೇರಿಸುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕೆ ಇದೆಯೇ? ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಳ್ಳುತ್ತಿವೆ.

ರಾಜ್ಯದಲ್ಲಿ ಆಕ್ಸಿಜನ್‌ಗೆ ಬೇಡಿಕೆ ಹೆಚ್ಚಿದ್ದರೂ ದೊಡ್ಡ ಪ್ರಮಾಣದಲ್ಲಿ ಕೊರತೆ ಇದೆ ಎನ್ನುವ ಅಂಶ ಬೆಳಕಿಗೆ ಬಂದಿರಲಿಲ್ಲ. ಚಾಮರಾಜನಗರದಲ್ಲಿ ನಿನ್ನೆ  ಪ್ರಾಣವಾಯು ಸಿಗದೆ 24 ಜನ ಸಾವನ್ನಪ್ಪಿದ್ದರೆ ಇಂದು ಕಲಬರ್ಗಿ ಜಿಲ್ಲೆಯ ಅಫಜಲಪುರದಲ್ಲಿ 04 ಮಂದಿ ಸಾವನ್ನಪಿದ ನಂತರ ಕರ್ನಾಟಕದಲ್ಲಿ ಆಕ್ಸಿಜನ್‌ ಸಮಸ್ಯೆ ಎದುರಾಗಿರುವುದು ಗೊತ್ತಾಗುತ್ತದೆ.  ರಾಜ್ಯ ಸರ್ಕಾರ 1,500 ಮೆಟ್ರಿಕ್ ಟನ್ ದೈನಂದಿನ ಆಕ್ಸಿಜನ್ ಪೂರೈಕೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ರಾಜ್ಯದ ಆಕ್ಸಿಜನ್ ಹಂಚಿಕೆಯನ್ನು ಶನಿವಾರ ರಾತ್ರಿ 300 ಮೆಟ್ರಿಕ್‌ ಟನ್‌ನಿಂದ 800 ಮೆಟ್ರಿಕ್ ಟನ್‌ಗೆ ಹೆಚ್ಚಿಸಲಾಗಿದೆ ಎಂದು ಸರಕಾರದ ಅಂಕಿ ಅಂಶಗಳು ಹೇಳುತ್ತವೆ ಆದರೆ ಈ ಪೂರೈಕೆ ಯಾವಾಗ ಶುರುವಾಗಲಿದೆ ಮತ್ತು ಹೇಗೆ ಹಂಚಿಕೆಯಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳ ಜೀವ ಉಳಿಸಲು ಬೇಕಾದ ಆಮ್ಲಜನಕದ ಕೊರತೆಯಿಂದಾಗಿ ರಾಜ್ಯದಲ್ಲಿ ಸಾವಿನ ಸಂಖ್ಯೆ ನಿತ್ಯ ಏರುತ್ತಿದೆ. ಕರ್ನಾಟಕದ ಬೇಡಿಕೆಗೆ ತಕ್ಕಂತೆ ಆಮ್ಲಜನಕ ಉತ್ಪಾದನೆ ಆಗುತ್ತಿದ್ದರೂ ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳುತ್ತಿರುವುದರಿಂದ ರೋಗಿಗಳು ಜೀವ ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ‘ನಮ್ಮ ಬೇಡಿಕೆಗೆ ಅನುಗುಣವಾಗಿ ಆಮ್ಲಜನಕ ಪೂರೈಸದಿದ್ದರೆ ಆಸ್ಪತ್ರೆಗಳನ್ನು ಮುಚ್ಚಬೇಕಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಎದುರೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೇಳಿಕೊಂಡರೂ ಇನ್ನೂ ಯಾವುದೇ ಪ್ರಯೋಜನವಾಗಿಲ್ಲ.  ಇನ್ನೂ ರಾಜ್ಯದಲ್ಲಿನ ಆಕ್ಸಿಜನ್‌ ಉತ್ಪಾದನೆ ಹೇಗಿದೆ? ಸರಕಾರ ಏನು ಮಾಡಬೇಕು?  ಸರಕಾರ ದೃಢವಾದ ನಿಲುವನ್ನು ತೆಗೆದುಕೊಳ್ಳುತ್ತಾ ಎನ್ನುವ ವಿಚಾರಗಳತ್ತ ಗಮನ ಹರಿಸೋಣ.

ಕರ್ನಾಟಕದಲ್ಲಿ ಒಟ್ಟು ಏಳು ಲಿಕ್ವಿಡ್ ಆಕ್ಸಿಜನ್ ಉತ್ಪಾದನಾ ಘಟಕಗಳಿವೆ. ಇದೆಲ್ಲವೂ ಖಾಸಗಿ ಮಾಲೀಕತ್ವದ ಕಂಪೆನಿಗಳು.  ಪ್ರತಿದಿನ 812 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸಬಲ್ಲ ಸಾಮರ್ಥ್ಯ ಈ  ಘಟಕಗಳಿಗೆ ಇವೆ. ಆದರೆ  ಮುಂಬರುವ ದಿನಗಳಲ್ಲಿ ಉಂಟಾಗುವ ಆಕ್ಸಿಜನ್ ಬೇಡಿಕೆಯನ್ನು ಪೂರೈಸುವಷ್ಟು ಸಮರ್ಥ ಇವುಗಳಿಗೆ ಇಲ್ಲ.

ಬೆಂಗಳೂರಿನಲ್ಲಿರುವ ಭೊರುಕಾ ಗ್ಯಾಸಸ್ (ದಿನಕ್ಕೆ 65 ಮೆಟ್ರಿಕ್ ಟನ್) ಮತ್ತು ಯುನಿವರ್ಸಲ್ ಏರ್ ಪ್ರಾಡಕ್ಸ್ಟ್ (50 ಎಂಟಿ) ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸುತ್ತಿವೆ. ಕೊಪ್ಪಳ ಮತ್ತು ಬಳ್ಳಾರಿಯಲ್ಲಿರುವ ಪ್ರಾಕ್ಸ್‌ಏರ್ (225 ಮೆಟ್ರಿಕ್ ಟನ್) ಹಾಗೂ ಬಳ್ಳಾರಿಯಲ್ಲಿರುವ ಏರ್ ವಾಟರ್ಸ್ ಇಂಡಿಯಾ (92 ಮೆಟ್ರಿಕ್ ಟನ್), ಬಳ್ಳಾರಿ ಆಕ್ಸಿಜನ್ (80 ಎಂಟಿ) ಮತ್ತು ಜೆಎಸ್‌ಡಬ್ಲ್ಯೂ ಇಂಡಸ್ಟ್ರಿಯಲ್ ಗ್ಯಾಸಸ್ 300 ಎಂಟಿ ನಷ್ಟು ಉತ್ಪಾದಿಸುತ್ತವೆ. ಆಕ್ಸಿಜನ್ ಉತ್ಪಾದನೆಯ ಜತೆಗೆ ಅದರ ಸಂಗ್ರಹಣೆಯೂ ಮುಖ್ಯವಾಗಿದೆ. ಪ್ರಾಕ್ಸ್‌ಏರ್ 2,730 ಟನ್, ಏರ್ ವಾಟರ್ಸ್ 1,000 ಟನ್ ಮತ್ತು ಜೆಎಸ್‌ಡಬ್ಲ್ಯೂ 1,000 ಟನ್ ಸೇರಿದಂತೆ ಒಟ್ಟು 5,780 ಟನ್ ಆಕ್ಸಿಜನ್ ಸಂಗ್ರಹಿಸಬಲ್ಲವು. ಇವು ರಾಜ್ಯದಲ್ಲಿನ ಅತ್ಯಧಿಕ ಸಂಗ್ರಹಣ ಸಾಮರ್ಥ್ಯಗಳಾಗಿವೆ. ಈ ಮೂರೂ ರಾಜ್ಯದ ಉತ್ತರ ಭಾಗದ ಬಳ್ಳಾರಿ ಜಿಲ್ಲೆಯಲ್ಲಿವೆ. ನೆರೆಯ ತಮಿಳುನಾಡು ಮತ್ತು ಕೇರಳಗಳಲ್ಲಿ ಸರ್ಕಾರಗಳೇ ಆಕ್ಸಿಜನ್ ಉತ್ಪಾದನೆ ಹಾಗೂ ಸಂಗ್ರಹಣಾ ಸೌಲಭ್ಯಗಳನ್ನು ಹೊಂದಿವೆ. ಆದರೆ ಕರ್ನಾಟಕವು ಇದೆಲ್ಲದಕ್ಕೂ ಖಾಸಗಿ ಕಂಪೆನಿಗಳನ್ನು ಅವಲಂಬಿಸಬೇಕಾಗಿದೆ.

ಒಟ್ಟಾರೆ ಕರ್ನಾಟಕದಲ್ಲಿಯೇ ನಿತ್ಯ 1,043 ಟನ್‌ ಆಮ್ಲಜನಕ ಉತ್ಪಾದನೆ ಆಗುತ್ತಿದೆ. ಅರೇ ಇಷ್ಟೊಂದು ಪ್ರಮಾಣದಲ್ಲಿ ಉತ್ಪಾದನೆಯಾದರೂ ಯಾಕೆ ಪರದಾಡ್ತೆವೆ ಅಂತಾ ಯೋಚಸ್ತಾ ಇದ್ದೀರಾ, ಅದಕ್ಕೆ ಕಾರಣವೂ ಇದೆ, ಇಲ್ಲಿ ಉತ್ಪಾದನೆಯಾದ ಆಮ್ಲಜನಕವನ್ನು ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಿಗೆ ಪೂರೈಕೆಮಾಡುತ್ತಿದೆ.. ಕೇಂದ್ರದ ಈ ನೀತಿಯಿಂದಾಗಿ, ರಾಜ್ಯದಲ್ಲಿ ಆಕ್ಸಿಜನ್‌ ಕೊರತೆ ಉಂಟಾಗು?ತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಿದರೂ,  ಆಮ್ಲಜನಕವನ್ನು ಒಡಿಶಾ, ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಂದ  ತರಿಸಿಕೊಳ್ಳಬೇಕಾದ ಸ್ಥಿತಿ ರಾಜ್ಯದ್ದಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆಮ್ಲಜನಕ ಕೊರತೆ ಎದುರಾಗಲಿದೆ ಎಂಬ ಆತಂಕವನ್ನು ವೈದ್ಯಕೀಯ ತಜ್ಞರು, ಆರೋಗ್ಯ ಕ್ಷೇತ್ರದ ಪರಿಣತರು ಬಹಳಷ್ಟು ದಿನಗಳಿಂದ ಹೇಳುತ್ತಲೆ ಬರುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಆಮ್ಲಜನಕ ಸಿಗದೆ ಕೋಲಾರ, ಚಾಮರಾಜನಗರ, ಬೆಂಗಳೂರು, ಕಲಬುರ್ಗಿಯಲ್ಲಿ ಕೋವಿಡ್‌ ರೋಗಿಗಳು ಸಾವನ್ನಪ್ಪಿದರೂ  ರಾಜ್ಯ ಸರ್ಕಾರ ಮೈ ಕೊಡವಿ ನಿಲ್ಲಲಿಲ್ಲ. ಬೇಡಿಕೆ – ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಆಮ್ಲಜನಕ ಕೊರತೆ ಮತ್ತಷ್ಟು ತೀವ್ರಗೊಂಡಿದೆ.

ಇದನ್ನೂ ಓದಿ :  ರೆಮ್ಡೆಸಿವಿರ್‌ ಚುಚ್ಚುಮದ್ದಿನ ಹಾಹಾಕಾರದ ಹಿಂದಿರುವ ಷಡ್ಯಂತ್ರವೇನು?

ಕರ್ನಾಟಕದಲ್ಲಿ ಈಗಿನ ಪರಿಸ್ಥಿತಿಯಲ್ಲಿ ದಿನಕ್ಕೆ 1500 ಮೆಟ್ರಿಕ್ ಟನ್‌ಗಳಿಗೂ ಅಧಿಕ ಆಕ್ಸಿಜನ್ ಬೇಕಾಗುತ್ತಿದೆ. ಇದು ಪ್ರತಿ ಭಾಗಗಳಿಗೂ ಅಷ್ಟೇ ಪರಿಣಾಮಕಾರಿಯಾಗಿ ಹಂಚಿಕೆಯಾಗಬೇಕಿದೆ. ಆದರೆ ಆಕ್ಸಿಜನ್ ಎಂಬ ಜೀವದಾಯಿ ನಿರ್ವಹಣೆಯ ಯಾವುದೇ ಅಧಿಕಾರ ಸರ್ಕಾರದ ಕೈಯಲ್ಲಿ ಇಲ್ಲ. ಖಾಸಗಿ ಕಂಪೆನಿಗಳಿಂದ ಅಥವಾ ಕೇಂದ್ರದಿಂದ ಪಡೆದ ಆಕ್ಸಿಜನ್‌ಅನ್ನು ಹಂಚಿಕೆ ಮಾಡುವ ಸೂಕ್ತ ವ್ಯವಸ್ಥೆ ಕೂಡ ಇಲ್ಲ ಎಂಬ ಆರೋಪವಿದೆ. . ಕರ್ನಾಟಕದ ಆಮ್ಲಜನಕ ಪಾಲು ನಿತ್ಯ 865 ಮೆಟ್ರಿಕ್ ಟನ್‌ಗೆ ಏರಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಸಚಿವ ಸದಾನಂದ ಗೌಡ ಮೇ 1ರಂದು ಹೇಳಿದ್ದರು. ಆದರೆ, ಆ ಪಾಲು ಕೂಡ ಸರಿಯಾಗಿ ಸಿಕ್ಕಿಲ್ಲ. ಕರ್ನಾಟಕದಲ್ಲಿಯೇ ಉತ್ಪಾದನೆ ಆಗುತ್ತಿರುವುದರಲ್ಲಿ 675 ಟನ್‌ ಪಡೆದುಕೊಳ್ಳಲು ಅವಕಾಶ ನೀಡಿದೆ. ಉಳಿದಂತೆ, ಒಡಿಶಾ ಮತ್ತು ಆಂಧ್ರಪ್ರದೇಶದಿಂದ 130 ಟನ್‌ ಹಂಚಿಕೆ ಮಾಡಿದೆ. ರಾಜ್ಯದಲ್ಲಿ ಉತ್ಪಾದನೆಯಾದ ಆಮ್ಲಜನಕದಲ್ಲಿ ತನ್ನ ಪಾಲಿಗೆ ಹಂಚಿಕೆ ಆಗಿರುವ ಪ್ರಮಾಣವನ್ನು ಸಂಪೂರ್ಣವಾಗಿ ರಾಜ್ಯದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಆದರೆ, ಅದು ಸಾಕಾಗದೇ ಇರುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂಬ ಭೀತಿ ಎದುರಾಗಿದೆ. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸರಕಾರ ತೆಗೆದುಕೊಳ್ಳ ಬಹುದಾದ ಕ್ರಮಗಳು ಏನು ಅಂದ್ರೆ?

  • ಮೊದಲು ಆಕ್ಸಿಜನ್‌ನ ಕೃತಕ ಅಭಾವ ಸೃಷ್ಟಿ ಜಾಲವನ್ನು ನಿಯಂತ್ರಿಸಬೇಕಿದೆ. ಜತೆಗೆ ಬಳ್ಳಾರಿಯಿಂದ ಇತರೆ ಜಿಲ್ಲೆಗಳಿಗೆ ಅಲ್ಲಿನ ಬೇಡಿಕೆಗೆ ಅನುಗುಣವಾಗಿ ಆಕ್ಸಿಜನ್ ಸಾಗಿಸುವ ಮತ್ತು ಸಂಗ್ರಹಿಸುವ ವ್ಯವಸ್ಥೆ ಕಲ್ಪಿಸಬೇಕಿದೆ. ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ತನ್ನದೇ ಸ್ವಾಮ್ಯದಲ್ಲಿ ಆಕ್ಸಿಜನ್ ಉತ್ಪಾದನೆ, ಸಂಗ್ರಹಣೆ ಮತ್ತು ಶಾಶ್ವತ ಪೂರೈಕೆ ವ್ಯವಸ್ಥೆಯೊಂದನ್ನು ಸೃಷ್ಟಿಸದೆ ಇದ್ದರೆ ಇನ್ನಷ್ಟು ಸಮಸ್ಯೆಗಳನ್ನು ಎದುರಿಸುವ ಅಪಾಯ ಎದುರಾಗಬಹುದು. ಹಾಗಾಗಿ ಆ ನಿಟ್ಟಿನಲ್ಲಿ ಸರಕಾರಿ ಗಂಭಿರವಾಗಿ ಯೋಚಿಸಬೇಕಿದೆ.

 

  • ರಾಜ್ಯದಲ್ಲಿ ಆಮ್ಲಜನಕ ಸಾಗಣೆ ಟ್ಯಾಂಕರುಗಳಿಗೂ ಕೊರತೆ ಇದೆ. ಒಟ್ಟು ರಾಜ್ಯದಲ್ಲಿ  93 ಟ್ಯಾಂಕರ್‌ಗಳಷ್ಟೆ ಇವೆ. ಇವು ರಾಜ್ಯಗಳ ಜೊತೆ ಇತರ ರಾಜ್ಯಗಳಿಗೆ ಹೋಗಬೇಕಿದೆ. ಇತರೆ ರಾಜ್ಯಗಳಿಗೆ ಆಕ್ಸಿಜನ್‌ ತಲುಪಿಸಿ ಪುನಃ ಕರ್ನಾಟಕಕ್ಕೆ ಬರಬೇಕಾದರೆ ನಾಲ್ಕೈದು ದಿನ ಬೇಕಾಗಬಹುದು. ಹಾಗಾಗಿ ಅಗತ್ಯ ಸಾಗಾಣಿಕಾ ಟ್ಯಾಂಕರ್‌ ಗಳನ್ನು ಹೆಚ್ಚಿಸುವ ಕೆಲಸವನ್ನುರಾಜ್ಯ ಸರಕಾರ ಮಾಡಬೇಕಿದೆ.

 

  • ಎಲ್ಲಾ ಜಿಲ್ಲೆಗಳಿಗೆ ವಾರ್‌ ರೂಂ ಸ್ಥಾಪಿಸಿ, ಅದನ್ನು ಕ್ರೀಯಾಶೀಲಗೊಳಿಸಬೇಕು.  ಯಾವ ಆಸ್ಪತ್ರಯಲ್ಲಿ ಆಕ್ಸಿಜನ್‌ ಗೆ ಬೇಡಿಕೆ ಇದೆ? ಯಾವಗ ರವಾನೆ ಮಾಡಬೇಕು. ಆಕ್ಸಿಜನ್‌ ಸ್ಟಾಕ್‌  ಇರುವ ಜಾಗಕ್ಕೂ ಬೇಕಾದ ಜಾಗಕ್ಕೂ ಎಷ್ಟು ಅಂತರವಿದೆ. ಎಷ್ಟೊತ್ತಿಗೆ ಅದು ತಲುಪಲಿದೆ ಎಂಬ ಮಾಹಿತಿಯನ್ನು ಕಷ್ಣ ಕ್ಷಣಕ್ಕೂ ನೀಡುವಂತಾಗಬೇಕು. 24 ಗಂಟೆ ನಿರ್ವಹಿಸಲು ಪಾಳಿ ಪ್ರಕಾರದಲ್ಲಿ ಕೆಲಸವನ್ನು ನಿರ್ವಹಿಸಿದರೆ ಒಂದು ಹಂತದ ಆಕ್ಸಿಜನ್‌ ನ್ನು ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಿದೆ. ಆದರೆ ಸರಕಾರ ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಅಗತ್ಯವಿದೆ.   ಬೆಂಗಳೂರಿನಲ್ಲಿರುವ ವಾರ್‌ ರೂಂ ನಿಷ್ಕ್ರಿಯೆ ಗೊಂಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸರಕಾರ ಈ ರೀತಿಯ ನಿರ್ಲಕ್ಷ್ಯವನ್ನು ಬಿಟ್ಟು ಚುರುಕಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ : ನಗರಗಳಲ್ಲಿ ಉದ್ಯೋಗಕ್ಕಾಗಿ “ಡುಎಟ್” ಯೋಜನೆ

ಕರ್ನಾಟಕದ ಆಕ್ಸಿಜನ್ ಕೋಟಾ ಹೆಚ್ಚಿಸ್ತೀರೋ ಇಲ್ಲವೋ? ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಎಚ್ಚರಿಕೆಯನ್ನು ನೀಡಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಟ್ಟ ಘಟನೆ ಕುರಿತು ಕರ್ನಾಟಕ ಹೈಕೋರ್ಟ್​ ತೀವ್ರ ಕಳವಳ ವ್ಯಕ್ತಪಡಿಸಿದೆ. ಸ್ವಯಂ ಪ್ರೇರಿತ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಘಟನೆ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಸಲಹೆ ನೀಡಿದೆ. ಕರ್ನಾಟಕದ ಆಕ್ಸಿಜನ್ ಕೋಟಾ ಹೆಚ್ಚಿಸ್ತೀರೋ, ಇಲ್ಲವೋ? ಇನ್ನೂ ಎಷ್ಟು ಜನ ಮೃತಪಡಬೇಕು? ನಿಮಗೆ ಜನ ಮೃತಪಡುವುದು ಬೇಕೇ? ಎಂದು ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಜತೆಗೆ ನಾಳೆ ಬೆಳಗ್ಗೆ 10.30ರೊಳಗೆ ನಿರ್ಧಾರ ತಿಳಿಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾ.ಅರವಿಂದ್ ಕುಮಾರ್‌ರವರಿದ್ದ ಪೀಠ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇಂದೇ ಹೆಚ್ಚು ಆಕ್ಸಿಜನ್ ಹೆಚ್ಚಿಸುತ್ತೀರೋ ಇಲ್ಲವೋ. ಚಾಮರಾಜನಗರ, ಕಲ್ಬುರ್ಗಿ ಘಟನೆ ನಂತರವಾದರೂ ನಿರ್ಧಾರ ಬದಲಿಸಿ. ತಕ್ಷಣ ಆಕ್ಸಿಜನ್ ಪ್ರಮಾಣ ಹೆಚ್ಚಿಸುತ್ತೀರೋ ಇಲ್ಲವೋ ಎಂದು ಕೇಂದ್ರ ಸರ್ಕಾರವನ್ನು ಕೋರ್ಟ್ ಪ್ರಶ್ನಿಸಿದೆ.

ರಾಜ್ಯ ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಆಕ್ಸಿಜನ್‌ ಹಾಹಾಕಾರವನ್ನು ತಪ್ಪಿಸಲು ಅಗತ್ಯ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.  ಇಡೀ ಮಂತ್ರಿ ಮಂಡಲವೇ ಒಟ್ಟಾಗಿ ಕೆಲಸ ಮಾಡುವ ಮೂಲಕ ರಾಜ್ಯದ ಜನರ ಪ್ರಾಣವನ್ನು ಕಾಪಡಲೂ ರಾಜ್ಯ ಸರಕಾರ ಪಣ ತೊಡಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *