ಆಕ್ಸಿಜನ್ ಬಿಕ್ಕಟ್ಟು : ಭಾರತ ಉಸಿರುಗಟ್ಟುತ್ತಿರುವುದು ಏಕೆ?

‌ವಸಂತರಾಜ ಎನ್‌ ಕೆ

ಕೋವಿಡ್‌ ಎರಡನೆ ಅಲೆಯಲ್ಲಿ ಭಾರತದ ಉಸಿರುಗಟ್ಟಲು ಆರಂಭವಾಗಿದೆ. ಆಕ್ಸಿಜನ್ ಕೊರತೆಯಿಂದ – ಆಕ್ಸಿಜನ್ ಬೆಡ್ ಕೊರತೆ, ದಾಖಲು ಮಾಡಲು ನಿರಾಕರಣೆ, ದಾಖಲಾದವರ ಬಲವಂತ ಡಿಸ್ಚಾರ್ಜ್, ಕಾಳಸಂತೆ, ಸಕಾಲಿಕವಾಗಿ ಸಾಕಷ್ಟು ಆಕ್ಸಿಜನ್ ಸಿಗದೆ ಸಾವು – ಇತ್ಯಾದಿ ಬಿಕ್ಕಟ್ಟು ಸ್ವರೂಪ ಪಡೆದಿದೆ. ಕಳೆದ ಒಂದು ವರ್ಷದ ವೈದ್ಯಕೀಯ ಆಕ್ಸಿಜನ್ ಯೋಜನೆಯನ್ನು ಪರಾಮರ್ಶಿಸಿದರೆ – ಅದರ ಬೇಡಿಕೆ ಹೆಚ್ಚಳ, ಹೆಚ್ಚಿದ ಬೇಡಿಕೆಗೆ ಹೋಲಿಸಿದರೆ ಉತ್ಪಾದನೆಯಲ್ಲಿ ಕೊರತೆ, ಅದಕ್ಕೆ ಬೇಕಾದ ಉತ್ಪಾದಕ ಸಾಮರ್ಥ್ಯವನ್ನು ಹೆಚ್ಚಿಸುವುದು, ಅದಕ್ಕೆ ಬೇಕಾದ ಸಕಾಲಿಕ ಕ್ರಮ ಕೈಗೊಳ್ಳುವುದು, ಸಾಗಾಣಿಕೆಯ ಸಮಸ್ಯೆಯನ್ನು ಮುಂಗಂಡು ಅದಕ್ಕೆ ಬೇಕಾದ ಸೌಕರ್ಯ ಹೆಚ್ಚಿಸುವುದು – ಹೀಗೆ ಎಲ್ಲದರಲ್ಲೂ ಪ್ರಾಮಾಣಿಕ ಕಾಳಜಿ, ಯೋಜನೆಯ, ದೂರದರ್ಶಿತ್ವದ ಅಭಾವ ಎದ್ದು ಕಾಣುತ್ತದೆ.  ಇದರ ಬದಲಾಗಿ ಕ್ರಿಮಿನಲ್ ನಿರ್ಲಕ್ಷದ ಧೋರಣೆ ಕಾಣುತ್ತದೆ. ಪರಿಣತರ ಸಲಹೆಯನ್ನು ಪಡೆದುಕೊಳ್ಳುವುದರಲ್ಲಿ ನಿರ್ಲಕ್ಷ, ಎಲ್ಲ ನಿರ್ಣಯಗಳ ಯೋಜನೆಗಳ ಅತಿ ಕೇಂದ್ರೀಕರಣ, ಉತ್ತರದಾಯಿತ್ವದ ಅಭಾವವೂ ಭಾರತ ಆಕ್ಸಿಜನ್ ಕೊರತೆಯಿಂದ ಉಸಿರುಗಟ್ಟುವುದಕ್ಕೆ ಕಾರಣವಾಗಿದೆ ಎನ್ನಬಹುದು.

ಕೋವಿಡ್ ಎರಡನೆ ಅಲೆಯಲ್ಲಿ ಭಾರತದ ಉಸಿರುಗಟ್ಟಲು ಆರಂಭವಾಗಿದೆ. ದೆಹಲಿ, ಮುಂಬಯಿ, ಬೆಂಗಳೂರಿನ ಮಹಾನಗರಗಳಲ್ಲೂ, ಜಿಲ್ಲಾ ಕೇಂದ್ರಗಳಲ್ಲೂ ಎಲ್ಲೆಲ್ಲೂ, ಚಿಕಿತ್ಸೆಗೆ ಆಕ್ಸಿಜನ್ ಅಗತ್ಯವಿರುವ ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು ತೀವ್ರ ಆಕ್ಸಿಜನ್ ಕೊರತೆ ತಲೆದೋರಿದೆ. ದೆಹಲಿಯ ದೊಡ್ಡ ಆಸ್ಪತ್ರೆಗಳು ಸೇರಿದಂತೆ ಎಲ್ಲೆಲ್ಲೂ ತೀವ್ರ ಆಕ್ಸಿಜನ್ ಕೊರತೆಯಿಂದಾಗಿ ಹಲವು ಸಾವುಗಳು ಸಂಭವಿಸಿವೆ, ಸಂಭವಿಸುತ್ತಲೇ ಇವೆ. ಆಕ್ಸಿಜನ್ ಕೊರತೆಯಿಂದ ಹಲವು ಆಸ್ಪತ್ರೆಗಳು ಕೋವಿಡ್ ಪೀಡಿತರನ್ನು ದಾಖಲು ಮಾಡುತ್ತಿಲ್ಲ. ರೋಗಿಗಳಿಗೆ ಆಕ್ಸಿಜನ್ ತಂದು ಕೊಡಲು ಹೇಳಲಾಗುತ್ತಿದೆ. ಆಕ್ಸಿಜನ್‌ನ ಕಾಳಸಂತೆ ಸಹ ವ್ಯಾಪಕವಾಗಿ ಆರಂಭವಾಗಿದೆ. ಹಲವು ಕಡೆ ದಾಖಲಾದವರನ್ನು ಬಲವಂತವಾಗಿ ಡಿಸ್ಚಾರ್ಜ್ ಮಾಡಲಾಗುತ್ತಿದೆ. ಆಸ್ಪತ್ರೆಯ ಎದುರು ಆಕ್ಸಿಜನ್ ಬೆಡ್‌ಗೆ ಕಾಯುತ್ತಾ ಹಲವರು ಅಸು ನೀಗಿದ್ದಾರೆ. ಇತ್ತೀಚೆಗೆ ಮಾಜಿ ರಾಯಭಾರಿಯೊಬ್ಬರು ದೆಹಲಿಯ ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶದಲ್ಲಿ ಆಕ್ಸಿಜನ್ ಬೆಡ್ ಗೆ ಕಾಯುತ್ತಾ ಸತ್ತ ದಾರುಣ ಸುದ್ದಿ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಹಲವು ರಾಜ್ಯಗಳ ಹೈ ಕೋರ್ಟುಗಳ ಮುಂದೆ ಆಕ್ಸಿಜನ್ ಕೊರತೆ ಸಂಬಂಧಿತ ದೂರುಗಳ ದಾಖಲಾಗಿದ್ದು ಸರಕಾರಗಳ ವೈಫಲ್ಯಕ್ಕೆ ಕೋರ್ಟುಗಳು ತರಾಟೆಗೆ ತೆಗೆದುಕೊಂಡಿವೆ.

ಇದನ್ನು ಓದಿ: ಆಕ್ಸಿಜನ್ ಗೆ ಪರದಾಟ ಕೇರಳದಲ್ಲಿ ಮಾತ್ರ ಇಲ್ಲ

ಮೊದಲನೆಯ ಅಲೆಯಲ್ಲೇ ಈ ಕೊರತೆ ಕಾಣಿಸಿಕೊಂಡಿದ್ದು ಈ ಸಮಸ್ಯೆಯ ಸ್ವರೂಪ ಮತ್ತು ಪ್ರಮಾಣ ಸ್ಪಷ್ಟವಾಗಿತ್ತು. ಆದರೂ ಎರಡನೆಯ ಅಲೆ ಇನ್ನೂ ಏರುಗತಿಯಲ್ಲಿರುವಾಗಲೇ ಇಂತಹ ತೀವ್ರ ಪರಿಸ್ಥಿತಿ, ಎರಡನೆಯ ಅಲೆಗೆ ಬೇಕಾದ ವೈದ್ಯಕೀಯ ಮೂಲಸೌಲಭ್ಯಗಳನ್ನು ಯೋಜಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂಬುದು ಸ್ಪಷ್ಟ. ಕೇಂದ್ರ-ರಾಜ್ಯ ಸರಕಾರಗಳ ವಿವಿಧ ವಕ್ತಾರರು ಸಮಸ್ಯೆ ತಾತ್ಕಾಲಿಕವಾದದ್ದು ಎಂದೋ, ಉತ್ಪಾದನೆ ಸಾಕಷ್ಟಿದೆ ಬರಿಯ ವಿತರಣೆಯ ಸಮಸ್ಯೆ ಎಂದೋ, ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚು ಮಾಡಲಾಗುತ್ತಿದೆ ಎಂದೋ ಸಮಜಾಯಿಷಿ ಹೇಳುತ್ತಿವೆ. ಸಮಸ್ಯೆಯ ಸ್ವರೂಪ, ಈಗ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ವಿಶ್ಲೇಷಣೆ ಮತ್ತು ಪರಿಹಾರಗಳ ಬಗ್ಗೆ ಸ್ಥೂಲ ನೋಟ ಬೀರಲು ಇಲ್ಲಿ ಪ್ರಯತ್ನಿಸಲಾಗಿದೆ.

ಆಕ್ಸಿಜನ್ ಕೊರತೆಗೆ – ಬೇಡಿಕೆಯಲ್ಲಿ ಏರುಪೇರು, ಉತ್ಪಾದನಾ ಸಾಮರ್ಥ್ಯ, ವಾಸ್ತವ ಉತ್ಪಾದನೆ, ವಿತರಣೆ, ಉತ್ಪಾದನೆ-ಬೇಡಿಕೆಗಳ ನಡುವೆ ಅಂತರ – ಹೀಗೆ ಹಲವು ಆಯಾಮಗಳಿವೆ. ಆಕ್ಸಿಜನ್ ಉತ್ಪನ್ನವನ್ನು ವೈದ್ಯಕೀಯ ಮತ್ತು ಕೈಗಾರಿಕಾ ಉಪಯೋಗಗಳಿಗೆ ಬಳಸಲಾಗುತ್ತದೆ. ಎರಡೂ ಉಪಯೋಗಗಳಿಗೆ ಬಳಸುವ ಉತ್ಪನ್ನ ಶೇ. 95-99 ಶುದ್ಧತೆ ಇರಬೇಕಾಗುತ್ತದೆ. ಮುಖ್ಯ ವ್ಯತ್ಯಾಸವಿರುವುದು ಅದನ್ನು ಶೇಖರಿಸಿಡುವ ಮತ್ತು ಸಾಗಾಣಿಕೆ ಮಾಡಲು ಬಳಸುವ ಸಿಲಿಂಡರ್, ಟ್ಯಾಂಕ್ ಇತ್ಯಾದಿಗಳಲ್ಲಿ ವೈದ್ಯಕೀಯ ಆಕ್ಸಿಜನ್‌ಗೆ ಹೆಚ್ಚಿನ ಶುದ್ಧತೆ ಬೇಕಾಗುತ್ತದೆ ಅಷ್ಟೇ. ಆದ್ದರಿಂದಲೇ ಮೊದಲ ಅಲೆಯಲ್ಲೂ ಈಗಲೂ ಕೈಗಾರಿಕಾ ಬಳಕೆಯನ್ನು ನಿಲ್ಲಿಸಿ ವೈದ್ಯಕೀಯ ಬಳಕೆಗೆ ವಿತರಣೆ ಮಾಡಲಾಗುತ್ತಿದೆ. ಆದರೆ ಇದರಿಂದ ಸಮಸ್ಯೆ ಬಗೆಹರಿಯುವುದಿಲ್ಲ.

ಇದನ್ನು ಓದಿ: ಪಿಎಂ ಕೇರ್ಸ್ ವೆಂಟಿಲೇಟರ್ ಗಳು ನಕಲಿ ವೆಂಟಿಲೇಟರ್ ಗಳು

ಮೊದಲನೆಯದಾಗಿ ಸಾಕಷ್ಟು ಆಕ್ಸಿಜನ್ ಉತ್ಪಾದನೆಯಾಗುತ್ತದೆ. ವಿತರಣೆಯ ಸಮಸ್ಯೆಯಷ್ಟೇ ಇರುವುದು ಎಂಬ ಸಮಜಾಯಿಷಿಯನ್ನು ಪರಿಶೀಲಿಸೋಣ. ಭಾರತದ ಒಟ್ಟು ಆಕ್ಸಿಜನ್ ಉತ್ಪಾದನೆ ಎಪ್ರಿಲ್ 24ರಂದು 9103 ಮೆಟ್ರಿಕ್ ಟನ್ (ಮೆ.ಟ.) ಇತ್ತು. ಹಿಂದೆ ಇದ್ದ ಸಾಮರ್ಥ್ಯ ದಿನಕ್ಕೆ 7259 ಮೆ.ಟ ಇದ್ದದ್ದನ್ನು 2021 ಎಪ್ರಿಲ್ ಕೊನೆಯ ಹೊತ್ತಿಗೆ ದಿನಕ್ಕೆ 9250 ಮೆ.ಟ.ಗೆ ಏರಿಸಲಾಗುತ್ತಿದೆ ಎಂದು ಅಧಿಕೃತ ವರದಿಗಳು ಹೇಳುತ್ತಿವೆ. ಕೋವಿಡ್ ಮೊದಲು ವೈದ್ಯಕೀಯ ಆಕ್ಸಿಜನ್ ಬೇಡಿಕೆ 700 ಮೆ.ಟ ಇದ್ದಿದ್ದು ಮೊದಲನೆಯ ಅಲೆಯ ಸಂದರ್ಭದಲ್ಲೇ 4800 ಮೆ.ಟ ಗೆ ಏರಿತ್ತು. ಈಗ ಅದು ಇನ್ನಷ್ಟು ಸುಮಾರು 7-8 ಸಾವಿರ ಮೆ.ಟ ಗೆ ಏರಿರಬೇಕು. ಕೈಗಾರಿಕಾ ಆಕ್ಸಿಜನ್ ಬೇಡಿಕೆ ಸುಮಾರು 4500 ಮೆ.ಟ ಇದೆ. ಅಣು, ಉಕ್ಕು, ಔಷಧಿ, ತೈಲ ಶುದ್ಧೀಕರಣ, ಇತ್ಯಾದಿ 9 ಆದ್ಯತೆಯ ಕ್ಷೇತ್ರಗಳ ಬೇಡಿಕೆಯೇ ಸುಮಾರು 2500 ಮೆ.ಟ. ಇದೆ. ಈಗ ಕೈಗಾರಿಕಾ ಆಕ್ಸಿಜನ್ (ಬಹಳಷ್ಟು ಆದ್ಯತೆಯ ಕ್ಷೇತ್ರ ಸೇರಿದಂತೆ) ನಿಲ್ಲಿಸಿದರೆ ಮಾತ್ರ ವೈದ್ಯಕೀಯ ಆಕ್ಸಿಜನ್ ಪೂರೈಸಲು ಸಾಧ್ಯವಿದೆ. ಎಲ್ಲ ಕೈಗಾರಿಕಾ ಆಕ್ಸಿಜನ್ ಬಳಕೆಯನ್ನು ಬಹಳ ಕಾಲ ನಿಲ್ಲಿಸುವುದು ಸಾಧ್ಯವಿಲ್ಲ. ದೈನಿಕ ಒಟ್ಟು ಸುಮಾರು 9000 ಮೆ.ಟ ಉತ್ಪಾದನೆ ಸಹ ಬರಬರುತ್ತಾ ಕೊರತೆಗೆ ಕಾರಣವಾಗಬಹುದು. ಮೇ ನಲ್ಲಿ ದೈನಿಕ 5 ಲಕ್ಷ ಕೋವಿಡ್ ಪ್ರಕರಣಗಳನ್ನು ನೀರೀಕ್ಷಿಸಲಾಗಿದ್ದು, ವೈದ್ಯಕೀಯ ಆಕ್ಸಿಜನ್‌ಗಳ ಬೇಡಿಕೆ 12 ಸಾವಿರ ಮೆ.ಟ ಗೆ ಏರಬಹುದು. ಆಗ ಎಲ್ಲಾ ಕೈಗಾರಿಕಾ ಆಕ್ಸಿಜನ್ ಬಳಕೆ ನಿಲ್ಲಿಸಿದರೂ ಕೊರತೆ ಕಾಣಿಸಿಕೊಳ್ಳಬಹುದು.

ಸರಕಾರ 551 ಪಿ.ಎಸ್.ಎ (Pressure Swing Adsorption) ಎಂಬ ಸ್ಥಳಿಯವಾಗಿ ಆಕ್ಸಿಜನ್ ತಯಾರಿಸುವ ಘಟಕಗಳಿಗೆ ಹೊಸದಾಗಿ ಆರ್ಡರ್ ಕೊಟ್ಟಿದ್ದು ಅವು ಬಂದಾಗ ಸಮಸ್ಯೆ ಪರಿಹಾರವಾಗುತ್ತದೆ ಎಂದು ಸಮಜಾಯಿಷಿ ಹೇಳುತ್ತಿದೆ. ಅಕ್ಟೋಬರ್ 2020ರಲ್ಲಿ 162 ಪಿ.ಎಸ್.ಎ ಗಳಿಗೆ ಈಗಾಗಲೇ ಆರ್ಡರ್ ಕೊಟ್ಟಿದ್ದರೂ, ಇವುಗಳಲ್ಲಿ ಇದುವರೆಗೆ 32 ಮಾತ್ರ ಪೂರೈಕೆಯಾಗಿ ಕೆಲಸ ಮಾಡುತ್ತಿವೆ. ಇದನ್ನು ಪಿಎಂ ಕೇರ್ಸ್‌‍ ಹಣ ಬಳಸಿ ನೇರವಾಗಿ ಆರ್ಡರ್ ಮಾಡಲಾಗಿದ್ದು ಈ ವಿಳಂಬವನ್ನು ರಾಜ್ಯ ಸರಕಾರಗಳ ತಲೆಗೆ ಕಟ್ಟಲು ಕೇಂದ್ರ ಪ್ರಯತ್ನಿಸಿತು. ಆದರೆ ಪ್ರಮುಖ ವಿಷಯವೆಂದರೆ ಈಗಾಗಲೇ ಆರ್ಡರ್ ಮಾಡಿದ 162 ಘಟಕಗಳು 1 ರಿಂದ 4 ಮೆ.ಟ ಸಾಮರ್ಥ್ಯದವು ಆಗಿದ್ದು ಒಟ್ಟು 154 ಮೆ.ಟ ಸಾಮರ್ಥ್ಯವನ್ನು ಮಾತ್ರ ಸೇರಿಸುತ್ತವೆ. ಇವು ಸಣ್ಣ ಆಸ್ಪತ್ರೆಗೆ ಹೊರಗಿನ ಆಕ್ಸಿಜನ್ ಪೂರೈಕೆಯಿಂದ ಮುಕ್ತಗೊಳಿಸಿ ದೂರಗಾಮಿ ದೃಷ್ಟಿಯಿಂದ ಒಳ್ಳೆಯದಾದರೂ, ಎಲ್ಲ ಘಟಕಗಳು ಮೇ ಕೊನೆಯೊಳಗೆ ಕೆಲಸ ಮಾಡಿದರೂ ಒಟ್ಟು ಕೊರತೆಯ ದೃಷ್ಟಿಯಿಂದ ಯಾವುದೇ ಪರಿಹಾರ ಒದಗಿಸುವುದಿಲ್ಲ. ಉದಾಹರಣೆಗೆ ದೆಹಲಿಯ ಇಂದಿನ ಕೊರತೆ 700 ಮೆ.ಟ ಇದ್ದು ಅಲ್ಲಿಗೆ ಕೊಡಲಾಗಿರುವ 8 ಘಟಕಗಳ ಒಟ್ಟು ಸಾಮರ್ಥ್ಯ 14.4 ಮೆ.ಟ ಅಷ್ಟೇ!

ಇದನ್ನು ಓದಿ: ಬಿಡೆನ್ ಪ್ಯಾಕೇಜ್ ಉದ್ದೇಶ ಒಳ್ಳೆಯದೇ, ಆದರೆ…

ಅದೇ ರೀತಿ ಆಕ್ಸಿಜನ್ ಕಾನ್ಸಂಟ್ರೇಟರ‍್ಸ್‌ ಖರೀದಿ ಸಹ ಸಮಸ್ಯೆಯನ್ನು ಪರಿಹರಿಸುತ್ತದೆ ಎನ್ನಲಾಗಿದೆ. ಇವು ಹಿಂದೆ ಹೇಳಿದ ಪಿ.ಎಸ್.ಎ ತಯಾರಕಗಳಂತೆ ಆದರೆ ಇನ್ನೂ ಸಣ್ಣ ಮತ್ತು ನಿಧಾನವಾದ (ಮಿನಿಟಿಗೆ 5-10 ಲೀಟರ್) ಆಕ್ಸಿಜನ್ ಪೂರೈಕೆ ಮಾಡುವ ಘಟಕಗಳು. ಐಸಿಯು ಗೆ ಮಿನಿಟಿಗೆ 40-50 ಲೀಟರ್ ಆಕ್ಸಿಜನ್ ಪೂರೈಕೆ ವೇಗ ಬೇಕಾಗಿದ್ದು ಅವುಗಳಿಗೆ ಸೂಕ್ತವಲ್ಲ. ಕೇಂದ್ರ ಸರಕಾರ 10 ಸಾವಿರ ಕಾನ್ಸಂಟ್ರೇಟರ‍್ಸ್‌ ಖರೀದಿ ಮಾಡಲಿದೆ. ಈಗ ಯು.ಎಸ್ ಸರಕಾರ ಒಂದು ಲಕ್ಷ ಕಾನ್ಸಂಟ್ರೇಟರ‍್ಸ್‌ ಗಳನ್ನು ಕೊಡಲಿದೆ ಎಂದು ವರದಿಯಾಗಿದೆ. ಆದರೆ ಕಾನ್ಸಂಟ್ರೇಟರ‍್ಸ್‌ ಹೆಚ್ಚಿನ ಬೆಲೆಯವು, ಏಕೆಂದರೆ ಇವನ್ನು ಆಮದು ಮಾಡಲಾಗುತ್ತಿದೆ. ಉದಾಹರಣೆಗೆ ಆಕ್ಸಿಜನ್ ಸಿಲಿಂಡರ್ ವೆಚ್ಚ 8-20 ಸಾವಿರ ರೂ. ಆದರೆ ಕಾನ್ಸಂಟ್ರೇಟರ‍್ಸ್‌ ವೆಚ್ಚ 40-90 ಸಾವಿರ ರೂ. ಇರುತ್ತದೆ. ಕೋವಿಡ್ ಮೊದಲು ವರ್ಷಕ್ಕೆ 40 ಸಾವಿರ ಕಾನ್ಸಂಟ್ರೇಟರ‍್ಸ್‌ ಗಳಿಗೆ ಬೇಡಿಕೆ ಇದ್ದರೆ ಈಗ ತಿಂಗಳಿಗೆ 35 ಸಾವಿರ ಬೇಡಿಕೆ ಇದೆ. ಬೆಲೆ ದುಪ್ಪಟ್ಟಾಗಿದೆ. ಕಡಿಮೆ ಬೇಡಿಕೆ ಮತ್ತು ಆಮದು ಸುಂಕ ಬಹಳ ಕಡಿಮೆ ಇದ್ದಿದ್ದರಿಂದ ಇವುಗಳ ಸ್ಥಳೀಯ ಉತ್ಪಾದನೆ ಆಗಿರಲಿಲ್ಲ. ಆದರೆ ವೆಂಟಿಲೇಟರ್, ಪಿಪಿಇ ಗೆ ಸೀಮಿತವಾಗಿಯಾದರೂ ಯೋಜಿಸಿದಂತೆ, ಕಳೆದ ಒಂದು ವರ್ಷದಲ್ಲಿ ಯೋಜಿಸಿದ್ದರೆ ಇದನ್ನು ಸ್ಥಳಿಯವಾಗಿ ಕಡಿಮೆ ವೆಚ್ಚಕ್ಕೆ ತಯಾರಿಸುವ ಸಾಧ್ಯತೆಯಿತ್ತು. ಇಂತಹ ಸಮಗ್ರ ಯೋಜನೆಯಲ್ಲಿ ಕೇಂದ್ರ ಸರಕಾರ ಎಡವಿದೆ ಎಂಬುದು ಸ್ಪಷ್ಟ. ಆದ್ದರಿಂದ ಈಗ ಭಿಕ್ಷೆ ಅಥವಾ ದುಬಾರಿ ಖರೀದಿಗೆ ಮೊರೆ ಹೋಗಬೇಕಾಗಿದೆ.

ಉತ್ಪಾದನೆಯ ಕೊರತೆಯಲ್ಲದೆ ಆಕ್ಸಿಜನ್ ಬೇಡಿಕೆ ಇರುವಲ್ಲಿ ಸಮಯಕ್ಕೆ ಸಿಗುವ ಹಾಗೆ ಅದರ ಸಾಗಾಣಿಕೆಯಲ್ಲೂ ಸಮಸ್ಯೆಗಳಿವೆ. ಆಕ್ಸಿಜನ್‌ನ ಬಹುಪಾಲು ದ್ರವರೂಪದಲ್ಲಿ ಶೇಖರಣೆ ಸಾಗಾಣಿಕೆಯಾಗಬೇಕಿದ್ದು ಅದನ್ನು ಸಾಗಾಣಿಕೆ ಮಾಡಲು – 180 ಡಿಗ್ರಿ ಶೀತದಲ್ಲಿ ಸಾಗಾಣಿಕೆ ಮಾಡಬೇಕಾಗುತ್ತದೆ. ಬೇಡಿಕೆ ಮತ್ತು ಬೇಡಿಕೆಯ ವೇಗ ಹೆಚ್ಚಿರುವುದರಿಂದ ಇಂತಹ ಟ್ಯಾಂಕರುಗಳ ಕೊರತೆ ಸಹ ಇದೆ. ಈ ಟ್ಯಾಂಕರುಗಳು 10-20 ಮೆ.ಟ ಸಾಮರ್ಥ್ಯದವು ಆಗಿದ್ದು, ಅವುಗಳಿಗೆ ಸರಾಸರಿ 6-7 ದಿನಗಳ ಟ್ರಿಪ್‌ಗಳು ಬೇಕಾಗುತ್ತವೆ ಎಂದಿಟ್ಟುಕೊಂಡರೆ ಈಗಿನ ಬೇಡಿಕೆ ಪೂರೈಸಲು ಸುಮಾರು 600 ಟ್ಯಾಂಕರುಗಳು ಬೇಕಾಗುತ್ತವೆ. ಆದರೆ ಈಗ 200 ಟ್ಯಾಂಕರುಗಳಷ್ಟೇ ಇವೆ. ಈಗ ತರಾತುರಿಯಲ್ಲಿ ಶೀತಟ್ಯಾಂಕರುಗಳನ್ನು ಆಮದು ಮಾಡಲಾಗುತ್ತಿದೆ. ಈ ಸಾಗಾಣಿಕೆಯ ಸಮಸ್ಯೆಯನ್ನೂ ಮುಂಗಂಡು ಅಗತ್ಯ ವ್ಯವಸ್ಥೆ ಮಾಡಲಾಗಿಲ್ಲ.

ಇದನ್ನು ಓದಿ: ಆಹಾರ ಭದ್ರತೆಯ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಬೇಕು

ಕಳೆದ ಒಂದು ವರ್ಷದ ವೈದ್ಯಕೀಯ ಆಕ್ಸಿಜನ್ ನ ಯೋಜನೆಯನ್ನು ಪರಾಮರ್ಶಿಸಿದರೆ ಅದರ ಬೇಡಿಕೆ ಹೆಚ್ಚಳ, ಹೆಚ್ಚಿದ ಬೇಡಿಕೆಗೆ ಹೋಲಿಸಿದರೆ ಉತ್ಪಾದನೆಯಲ್ಲಿ ಕೊರತೆ, ಅದಕ್ಕೆ ಬೇಕಾದ ಉತ್ಪಾದಕ ಸಾಮರ್ಥ್ಯವನ್ನು ಹೆಚ್ಚಿಸುವುದು, ಅದಕ್ಕೆ ಬೇಕಾದ ಸಕಾಲಿಕ ಕ್ರಮ ಕೈಗೊಳ್ಳುವುದು, ಸಾಗಾಣಿಕೆಯ ಸಮಸ್ಯೆಯನ್ನು ಮುಂಗಂಡು ಅದಕ್ಕೆ ಬೇಕಾದ ಸೌಕರ್ಯ ಹೆಚ್ಚಿಸುವುದು – ಹೀಗೆ ಎಲ್ಲದರಲ್ಲೂ ಪ್ರಾಮಾಣಿಕ ಕಾಳಜಿ, ದೂರದರ್ಶಿತ್ವದ ಅಭಾವ ಎದ್ದು ಕಾಣುತ್ತದೆ.  ಇದರ ಬದಲಾಗಿ ಕ್ರಿಮಿನಲ್ ನಿರ್ಲಕ್ಷ್ಯದ ಧೋರಣೆ ಕಾಣುತ್ತದೆ. ಪರಿಣತರ ಸಲಹೆಯನ್ನು ಪಡೆದುಕೊಳ್ಳುವುದರಲ್ಲಿ ನಿರ್ಲಕ್ಷ, ಎಲ್ಲ ನಿರ್ಣಯಗಳ ಯೋಜನೆಗಳ ಅತಿ ಕೇಂದ್ರೀಕರಣ, ಉತ್ತರದಾಯಿತ್ವದ ಅಭಾವವೂ ಭಾರತ ಆಕ್ಸಿಜನ್ ಕೊರತೆಯಿಂದ ಉಸಿರುಗಟ್ಟುವುದಕ್ಕೆ ಕಾರಣವಾಗಿದೆ ಎನ್ನಬಹುದು.

Donate Janashakthi Media

Leave a Reply

Your email address will not be published. Required fields are marked *