ಬೆಂಗಳೂರು : ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಸಿದ್ಧಪಡಿಸಲಾಗಿರುವ ಪಠ್ಯಪುಸ್ತಕದಲ್ಲಿರುವ ವಿಷಯವೊಂದು ಇದೀಗ ಭಾರಿ ವಿವಾದ ಸೃಷ್ಟಿಸುವ ಲಕ್ಷಣಗಳು ಕಾಣುತ್ತಿದೆ. ಈಗಾಗಲೇ ಪಠ್ಯ ವಿಷಯದ ವಿರುದ್ಧ ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರಹಾಕಿದ್ದು, ಕೂಡಲೇ ವಿಷಯವನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಅನ್ವಯ ಮೈಸೂರು ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿ ಪದವಿ ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕದಲ್ಲಿ ಏಡ್ಸ್ ಮತ್ತು ಕ್ಯಾನ್ಸರ್‌ಗೆ ಸ್ವಮೂತ್ರ ಪಾನವೇ ಮದ್ದು ಎಂದು ಉಲ್ಲೇಖಿಸಲಾಗಿದೆ. ಇದು ಅತ್ಯಂತ ಅವೈಜ್ಞಾನಿಕ ಮತ್ತು ಮೂರ್ಖತನದ ಪರಮಾವಧಿಗೆ ವಿದ್ಯಾರ್ಥಿಗಳು ಟೀಕೆ ಮಾಡಿದ್ದಾರೆ.
ಮೂತ್ರ ಚಿಕಿತ್ಸೆಯು ಪ್ರಕೃತಿ ಚಿಕಿತ್ಸೆಯ ಒಂದು ಭಾಗವಾಗಿದೆ. ಸ್ವಮೂತ್ರ ಪಾನದಿಂದ ಏಡ್ಸ್, ಕ್ಯಾನ್ಸರ್, ಕಣ್ಣು, ಕಿವಿ, ಹಲ್ಲು, ಹಾಗೂ ಚರ್ಮರೋಗಗಳನ್ನು ನಿಯಂತ್ರಿಸಬಹುದು ಎಂಬ ಅವೈಜ್ಞಾನಿಕವಾದ ಅಂಶಗಳನ್ನು ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿ ಅಳವಡಿಸಿರುವುದು ದುರಂತವೇ ಸರಿ ಎಂದು ಆಕ್ರೋಶ ಹೊರಹಾಕಿದ್ದಾರೆ. ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕದಲ್ಲಿ ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶಗಳನ್ನು ಸೇರಿಸಬೇಕೆ ಹೊರತು, ಕೇವಲ ಪ್ರಾಚೀನ ಗ್ರಂಥಗಳನ್ನು ಉಲ್ಲೇಖ ಮಾಡಿ ಈ ರೀತಿ ಪಠ್ಯಗಳನ್ನು ರಚಿಸಿರುವುದನ್ನು ಈ ಕೂಡಲೇ ವಾಪಸ್ ಪಡೆಯಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.
ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ವೈಜ್ಞಾನಿಕ, ಪ್ರಜಾತಂತ್ರ, ಧರ್ಮ ನಿರಪೇಕ್ಷತ ಶಿಕ್ಷಣವನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಈ ಕೂಡಲೇ ವಿಶ್ವವಿದ್ಯಾನಿಲಯದ ಪದಾಧಿಕಾರಿಗಳು ಹಾಗೂ ಸರ್ಕಾರವೇ ಮಧ್ಯಪ್ರವೇಶಿಸಿ ಅವೈಜ್ಞಾನಿಕ ಪಠ್ಯಕ್ರಮವನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಬೃಹತ್ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಅವೈಜ್ಞಾನಿಕ ಶಿಕ್ಷಣ ಪದ್ಧತಿಯನ್ನು ರೂಪಿಸುತ್ತಿರುವ NEP-2020 ಶಿಕ್ಷಣ ಪದ್ಧತಿಯನ್ನು ಹಿಂಪಡೆಯಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.
ಕೆ. ಭೈರಪ್ಪ ಬರೆದಿರುವ ‘ವೈದ್ಯಕೀಯ ಸಮಾಜಶಾಸ್ತ್ರ’ ಪುಸ್ತಕವನ್ನು ಮೈಸೂರು ವಿವಿ ಪಠ್ಯವನ್ನಾಗಿಸ ಹೊರಟಿದ್ದು ದುರಂತವೇ ಸರಿ, ಇದರಲ್ಲಿ ಅವೈಜ್ಞಾನಿಕ ಅಂಶಗಳು ಹೆಚ್ಚಾಗಿವೆ. ಅನೇಕ ವಿದ್ಯಾರ್ಥಿಗಳು ಇದನ್ನು ಓದುತ್ತಿದ್ದಾರೆ, ಈ ಪುಸ್ತಕದ ಅಧಿಕೃತವಾಗಿದೆಯೇ ಎಂದು ಕಾಲೇಜು ಶಿಕ್ಷಣ ಇಲಾಖೆಗೆ ಫೋನ್ ಮಾಡಿ ವಿಚಾರಿಸಿದರೆ ಅವರಿಂದ ಪ್ರತ್ಯುತ್ತರ ಬರಲಿಲ್ಲ. ಈ ಪುಸ್ತಕವನ್ನು ಅವರು ಅನುಮೋದಿಸಿದ್ದಾರೆಯೇ? ಹೌದಾಗಿದ್ದರೆ ಯಾವ ಆಧಾರದಲ್ಲಿ? ಇಲ್ಲ ಎಂದಾದರೆ ಸಂಬಂಧಿಸಿದ ಲೇಖಕರು ಈ ಪುಸ್ತಕದ ಮುಖಪುಟದ ಮೇಲೆ ಮೈಸೂರು ವಿವಿ, 5ನೇ ಸೆಮಿಸ್ಟರ್, ಎನ್ ಇಪಿ ಇತ್ಯಾದಿ ಹೇಗೆ ಬರೆಯಲು ಸಾಧ್ಯವಾಯಿತು? ನಿಮ್ಮ ಕ್ರಮವೇನು? ಎನ್ನುವ ಪ್ರಶ್ನೆಗೆ ಉತ್ತರಿಸಲು ಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಸಚಿವರು ಸಿದ್ಧರಾಗಬೇಕು ಎಂದು ಶಿಕ್ಷಣ ತಜ್ಞ ಬಿ. ಶ್ರೀಪಾದ ಭಟ್ ಆಕ್ರೋಶ ಹೊರಹಾಕಿದ್ದಾರೆ.
ಹೊಸ ಎನ್‌ಇಪಿ ಪಠ್ಯಕ್ರಮದಂತೆ ಆರೋಗ್ಯ ಸಮಾಜಶಾಸ್ತ್ರ ಪರಿಚಯಿಸಲಾಗಿದೆ. ಆದರೆ, ಪೂರ್ಣ ಪಠ್ಯಕ್ರಮ ಅಂತಿಮವಾಗಿಲ್ಲ. ಪುಸ್ತಕ ಗಮನಿಸಿದೆ. ಲೇಖಕರು ಏಕೆ ಹಾಗೆ ಬರೆದಿದ್ದಾರೆ ಎನ್ನುವ ಮಾಹಿತಿ ಇಲ್ಲ, ಇದರ ಬಗ್ಗೆ ಅಧ್ಯಯನ ನಡೆಸಿ ಸೂಕ್ತಕ್ರಮ ಕೈಗೊಳ್ಳುವುದಾಗಿ ರಾಜ್ಯ ಸಮಾಜಶಾಸ್ತ್ರ ಪಠ್ಯಕ್ರಮ ರಚನಾ ಮಂಡಳಿ ಅಧ್ಯಕ್ಷ ಪ್ರೊ. ಎ.ರಾಮೇಗೌಡ ಪ್ರತಿಕ್ರಿಯಿಸಿದ್ದಾರೆ.