ನವದೆಹಲಿ: ಭಾರತದಾದ್ಯಂತ ಏಕಲವ್ಯ ಮಾದರಿ ವಸತಿ(ಇಎಂಆರ್) ಶಾಲೆಗಳಲ್ಲಿ ಕಲಿಯುತ್ತಿರುವ ಆದಿವಾಸಿ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಮಧ್ಯ ಪ್ರವೇಶಿಸಬೇಕು ಎಂದು ಹಿರಿಯ ಸಿಪಿಐ(ಎಂ) ಮುಖಂಡರು ಮತ್ತು ಮಾಜಿ ರಾಜ್ಯಸಭಾ ಸದಸ್ಯರಾದ ಬೃಂದಾ ಕಾರಟ್ ಒಕ್ಕೂಟ ಸರಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಿ ಜುವಲ್ ಓರಂ ರನ್ನು ವಿನಂತಿಸಿದ್ದಾರೆ.
ಈ ಶಾಲೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ಪ್ರಾಂಶುಪಾಲರ ಹುದ್ದೆಗೆ ನೇಮಕಾತಿ ಮಾಡುವ ಪ್ರಸ್ತುತ ವಿಧಾನವು ಅತ್ಯಂತ ದೋಷಪೂರಿತವಾಗಿದ್ದು, ಈ ಶಾಲೆಗಳ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆ ಎಂಬ ಸಂಗತಿಯತ್ತ ಬೃಂದಾ ಮಂತ್ರಿಗಳಿಗೆ ಬರೆದ ಪತ್ರದಲ್ಲಿ ಅವರ ಗಮನ ಸೆಳೆದಿದ್ದಾರೆ.
ಈ ಶಾಲೆಗಳನ್ನು ಸ್ಥಾಪಿಸಿರುವುದು ಉತ್ತಮ ಶೈಕ್ಷಣಿಕ ಆಚರಣೆಗಳನ್ನು ಉತ್ತೇಜಿಸಲು ಮತ್ತು ಆದಿವಾಸಿ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಒದಗಿಸಬೇಕೆಂಬ ಆದೇಶದೊಂದಿಗೆ. ಇದು ಬಹುಪಾಲು ಇಲ್ಲಿ ನೇಮಿಸುವ ಶಿಕ್ಷಕ ವರ್ಗವನ್ನು ಅವಲಂಬಿಸಿರುತ್ತದೆ. ಅವರು ಆದಿವಾಸಿ ಸಂಸ್ಕೃತಿಗಳು, ಭಾಷೆಗಳು ಮತ್ತು ಅವಶ್ಯಕತೆಗಳ ಚೌಕಟ್ಟನ್ನು ಅರ್ಥಮಾಡಿಕೊಳ್ಳಲು ಬದ್ದರಾಗಿರಬೇಕಾಗುತ್ತದೆ, ಮತ್ತು ಈ ವಿಷಯದಲ್ಲಿ ಸಂವೇದನಾಶೀಲರಾಗಿರಬೇಕಾಗುತ್ತದೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಸಚಿವ ಸಂಪುಟ ಸಭೆ ನಿರ್ಧಾರ
ಆದರೆ ದುರದೃಷ್ಟವಶಾತ್, ಈ ಏಕಲವ್ಯ ವಸತಿ ಶಾಲೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ಪ್ರಾಂಶುಪಾಲರ ಹುದ್ದೆಗೆ ನೇಮಕಾತಿ ಮಾಡುವ ಪ್ರಸ್ತುತ ವಿಧಾನವು ಈ ಶಾಲೆಗಳ ಉದ್ದೇಶವನ್ನು ನಾಶಪಡಿಸದಿದ್ದರೂ, ಅದು ದುರ್ಬಲಗೊಳ್ಳಲಂತೂ ಖಂಡಿತ ಕಾರಣವಾಗಿದೆ.
ಈ ಮೊದಲು ನೇಮಕಾತಿ ರಾಜ್ಯ ಪ್ರಾಧಿಕಾರಗಳ ಮೂಲಕ ನಡೆಯುತ್ತಿತ್ತು. ಆದರೆ ಈಗ, ಕೇಂದ್ರ ಸರ್ಕಾರದ ನಿರ್ಧಾರದಂತೆ, ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣ ಸಮಾಜ’(ಎನ್.ಇ.ಎಸ್.ಟಿ.ಎಸ್) ಹೊಸ ನೇಮಕಾತಿ ವಿಧಾನವನ್ನು ಅಂಗೀಕರಿಸಿದೆ. 2023 ರಲ್ಲಿ ಹಣಕಾಸು ಮಂತ್ರಿಗಳು ತಮ್ಮ ಬಜೆಟ್ ಭಾಷಣದಲ್ಲಿ, ಕೇಂದ್ರೀಯ ಸಂಸ್ಥೆಯಾದ ಎನ್.ಇ.ಎಸ್.ಟಿ.ಎಸ್. ಮುಂದಿನ ಐದು ವರ್ಷಗಳಲ್ಲಿ ಏಕಲವ್ಯ ಶಾಲೆಗಳಿಗೆ 38,000 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ ಎಂದು ಘೋಷಿಸಿದರು. ಇದಕ್ಕೆ ಆದಿವಾಸಿ ಸಂಸ್ಕೃತಿಗಳ ಬಗ್ಗೆ ಯಾವುದೇ ಪರಿಜ್ಞಾನವಿಲ್ಲದ ಕೇಂದ್ರೀಕೃತ ಪರೀಕ್ಷೆಯನ್ನು ರೂಪಿಸಲಾಯಿತು.
ಇದರ ಪ್ರಕಾರ ಎಲ್ಲಾ ಅಭ್ಯರ್ಥಿಗಳು ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ “ಭಾಷಾ ಸಾಮರ್ಥ್ಯ” ಹೊಂದಿರ ಬೇಕೇ ಹೊರತು, ಆದಿವಾಸಿ ಸಮುದಾಯಗಳ ಭಾಷೆಗಳಂತೂ ದೂರ, ರಾಜ್ಯ ಭಾಷೆಗಳಲ್ಲಿಯೂ ಇಂತಹ ‘ಸಾಮರ್ಥ್ಯ’ವನ್ನು ಹೊಂದಿರಬೇಕಾಗಿಲ್ಲ ಎಂಬ ಸಂಗತಿಯನ್ನು ಮಂತ್ರಿಗಳ ಗಮನಕ್ಕೆ ತರುತ್ತ ಬೃಂದಾ ಕಾರಟ್, ರಾಜ್ಯ ಭಾಷೆಯನ್ನು ಏಕೆ ಕಡೆಗಣಿಸಬೇಕು, ಈ ‘ಸಾಮರ್ಥ್ಯ’ ಆದಿವಾಸಿ ಸಂಸ್ಕೃತಿಗಳು ಮತ್ತು ಭಾಷೆಗಳ ಜ್ಞಾನದ ವಿಷಯದಲ್ಲಿಯೂ ಏಕೆ ಒಳಗೊಂಡಿರಬಾರದು, ಹಿಂದಿ ಆಡುಭಾಷೆಯಲ್ಲದ ದಕ್ಷಿಣ ಅಥವಾ ಪೂರ್ವ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಏಕೆ ಹೇರಬೇಕು ಎಂದು ಪ್ರಶ್ನಿಸಿದ್ದಾರೆ.
ನೇಮಕಗೊಂಡವರು ಎರಡು ವರ್ಷಗಳಲ್ಲಿ “ಸ್ಥಳೀಯ ಭಾಷೆ” ಕಲಿಯ ಬೇಕು ಎಂದು ಕೇಳಲಾಗಿದೆ, ಆದರೆ ಇದು ಕಾರ್ಯಸಾಧ್ಯವೇ? ಕಾರ್ಯಸಾಧ್ಯವಾದರೂ, ಆ ಎರಡು ವರ್ಷಗಳಲ್ಲಿ ಮಕ್ಕಳಿಗೆ ಕಲಿಯಲು ಭಾಷೆ ಅಡ್ಡಿಯಾದಾಗ ಏನಾಗುತ್ತದೆ? ವಾಸ್ತವವಾಗಿ, ಮಕ್ಕಳೇ ತಮಗೆ ಪರಕೀಯವಾದ ಭಾಷೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಮತ್ತು ತಮ್ಮ ಕಲಿಕೆಯಲ್ಲಿ ಅದರ ಎಲ್ಲ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸೇರಿಸಿದ್ದಾರೆ.
ಈ ಏಕಲವ್ಯ ಶಾಲೆಗಳು ಸಾಮಾನ್ಯವಾಗಿ ದೂರದ ಪ್ರದೇಶಗಳಲ್ಲಿ ಇರುತ್ತವೆ. ಸ್ಥಳೀಯರಲ್ಲದ ಶಿಕ್ಷಕರು ಮತ್ತು ಸಿಬ್ಬಂದಿಯ ಗೈರುಹಾಜರಿ ಒಂದಿಲ್ಲೊಂದು ನೆಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು ಅನುಭವಕ್ಕೆ ಬಂದಿದೆ. ಈ ರೀತಿ ನೇಮಕಗೊಂಡವರಲ್ಲಿ ಹೆಚ್ಚಿನವರು ತಮ್ಮ ಮನೆಗಳು ಮತ್ತು ಕುಟುಂಬಗಳಿಗೆ ಹತ್ತಿರವಿರುವ ಸ್ಥಳಗಳಿಗೆ ವರ್ಗಾವಣೆಯನ್ನು ಬಯಸುತ್ತಾರೆ.
“ಎಲ್ಲಾ ನೇಮಕಗೊಂಡ ಅಭ್ಯರ್ಥಿಗಳು ತಮ್ಮನ್ನು ಕಳಿಸಿದ ಸ್ಥಳದ ಬದಲಾವಣೆಗಾಗಿ ಎನ್.ಇ.ಎಸ್.ಟಿ.ಎಸ್. ಕಚೇರಿಯನ್ನು ಸಂಪರ್ಕಿಸ ಬಾರದು ಎಂದು ವಿನಂತಿಸಲಾಗಿದೆ. ಪ್ರಸ್ತುತ, ಪೋಸ್ಟಿಂಗ್ ಸ್ಥಳ ಬದಲಾವಣೆಯ ಯಾವುದೇ ವಿನಂತಿಯನ್ನು ಪರಿಗಣಿಸುತ್ತಿಲ್ಲ. ಮೇಲಾಗಿ, ವರ್ಗಾವಣೆಗಳು, [ಅವು] ಸಂಭವಿಸಿದಾಗ, ಎನ್.ಇ.ಎಸ್.ಟಿ.ಎಸ್ ವೆಬ್‌ಸೈಟ್‌ನಲ್ಲಿ ವರ್ಗಾವಣೆ ಪೋರ್ಟಲ್ ಮೂಲಕ ಆಗುತ್ತವೆ ಅದನ್ನು ವರ್ಗಾವಣೆ ನೀತಿಯನ್ನು ಪ್ರಕಟಿಸಿದ ನಂತರ ಅದನ್ನು ಲೈವ್ ಮಾಡಲಾಗುತ್ತದೆ” ಎಂದು ಸಚಿವಾಲಯದ ವೆಬ್‌ಸೈಟ್ ಮತ್ತು ಎನ್.ಇ.ಎಸ್.ಟಿ.ಎಸ್ ನ ವೆಬ್‌ಸೈಟ್ ನಿರ್ದಿಷ್ಟವಾಗಿ ಹೇಳಬೇಕಾಗಿ ಬಂದಿರುವುದು ಕೂಡ ಇದನ್ನು ಸಮರ್ಥಿಸುತ್ತದೆ ಎಂದು ಹೇಳಿದ್ದಾರೆ.
ಇಂತಹ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಖಾತರಿಪಡಿಸುವ ಉತ್ತಮ ಮಾರ್ಗವೆಂದರೆ ಏಕಲವ್ಯ ಶಾಲೆಗಳ ಸಿಬ್ಬಂದಿ ಮತ್ತು ಅಧ್ಯಾಪಕರು ವಿದ್ಯಾರ್ಥಿಗಳು ಮಾತನಾಡುವ ಭಾಷೆ ಮತ್ತು ಅವರು ವಾಸಿಸುವ ಸಾಂಸ್ಕೃತಿಕ ಚೌಕಟ್ಟಿನ ಬಗ್ಗೆ ಪರಿಚಿತರಾಗಿರುವವರು ಆಗಿರುವುದು, ಸ್ಥಳೀಯ ನೇಮಕಾತಿಯನ್ನು ಮಾತ್ರ ಪರಿಗಣಿಸಬೇಕು ಎಂದು ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ಸೂಚಿಸಿದ್ದಾರೆ. ವಿಭಜನಾ-ಪೂರ್ವ ಆಂಧ್ರಪ್ರದೇಶದ ಅನುಭವವನ್ನು ಇದಕ್ಕೆ ನಿದರ್ಶನವಾಗಿ ಉಲ್ಲೇಖಿಸಿದ್ದಾರೆ.
ಅಲ್ಲಿ ನಿಯಮಿತ ಹಾಜರಾತಿ ಮತ್ತು ಬೋಧನೆಯನ್ನು ಖಾತ್ರಿಪಡಿಸಲಿಕ್ಕಾಗಿ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಪರಿಶಿಷ್ಟ ಬುಡಕಟ್ಟಿನ ಶಿಕ್ಷಕರಿಗೆ 100 ಶೇ. ಮೀಸಲಾತಿ ಇತ್ತು. ಇದನ್ನು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್‌ನ ಪೀಠವು ರದ್ದುಗೊಳಿಸಿದಾಗ ನೇಮಕಾತಿ ನಿಯಮಗಳನ್ನು ಬದಲಾಯಿಸಲಾಯಿತು, ಇದರಿಂದಾಗಿ ಹೊಸ ನೇಮಕಾತಿಗಳಲ್ಲಿ ಬುಡಕಟ್ಟೇತರ ವಿಭಾಗಗಳವರೇ ದೊಡ್ಡ ಸಂಖ್ಯೆಯಲ್ಲಿದ್ದುದು , ಇವರ ಹಾಜರಿ ಬಹಳ ಅನಿಯಮಿತವಾಗಿರುವುದು ಮತ್ತು ಇದರಿಂದಾಗಿ ತೊಂದರೆಗೊಳಗಾದವರು ವಿದ್ಯಾರ್ಥಿಗಳು ಎಂಬುದು ಕಂಡು ಬಂತು.
ಈಗ ಎನ್.ಇ.ಎಸ್.ಟಿ.ಎಸ್. ನ ವಿಪರೀತವಾಗಿ ಕೇಂದ್ರೀಕರಿಸಲ್ಪಟ್ಟ ನೇಮಕಾತಿ ವಿಧಾನದಿಂದಾಗಿ ತೆಲಂಗಾಣದಲ್ಲಿ ಜೆಎಸ್‍ಎ (ಜೂನಿಯರ್ ಸೆಕ್ರೆಟಾರಿಯಟ್ ಅಸಿಸ್ಟೆಂಟ್ಸ್)ಯ ಖಾಲಿ ಹುದ್ದೆಗಳಲ್ಲಿ ನೇಮಕಗೊಂಡ 47 ರಲ್ಲಿ 44 ಹರಿಯಾಣ ರಾಜ್ಯಕ್ಕೆ ಸೇರಿದವರು ಮತ್ತು ತೆಲಂಗಾಣದಿಂದ ಯಾರೂ ಇಲ್ಲ ಎಂದು ವರದಿಯಾಗಿದೆ. ಏಕೆಂದರೆ ತೆಲಂಗಾಣದಿಂದ ಬಂದವರು ಹಿಂದಿಯಲ್ಲಿ “ಸಾಮರ್ಥ್ಯ” ಹೊಂದಿರುವುದಿಲ್ಲ ಆದರೆ ತೆಲುಗಿನಲ್ಲಿ “ಸಾಮರ್ಥ್ಯ” ಹೊಂದಿರುತ್ತಾರೆ ಆದರೆ ಅದನ್ನು ಸಾಮರ್ಥ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂಬ ಸಂಗತಿಯತ್ತ ಗಮನಸೆಳೆದಿರುವ ಬೃಂದಾ ಅವರ ಪತ್ರ, ಇದು ಸ್ಪಷ್ಟವಾಗಿ ನಮ್ಮ ಸಂವಿಧಾನದ ಒಕ್ಕೂಟ ಗುಣಲಕ್ಷಣದ ಮೇಲೆ ಆಕ್ರಮಣವಾಗಿದೆ ಮತ್ತು ಏಕಲವ್ಯ ಶಾಲೆಗಳ ಉದ್ದೇಶಕ್ಕೆ ಹಾನಿಕಾರಕವಾಗಿದೆ ಎಂದಿದೆ.
ಏಕಲವ್ಯ ಮಾದರಿ ವಸತಿ ಶಾಲೆ ಬುಡಕಟ್ಟು ವಿದ್ಯಾರ್ಥಿಗಳಿಗೆ ಸಹಾಯಕವಾಗುವ ಒಂದು ಪ್ರಮುಖ ಸಂಸ್ಥೆಯಾಗಿದೆ. ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈಗಿನ ನೇಮಕಾತಿ ವಿಧಾನವನ್ನು ಹಿಂತೆಗೆದುಕೊಳ್ಳಬೇಕು ಎಂದು ಬುಡಕಟ್ಟು ವ್ಯವಹಾರಗಳ ಮಂತ್ರಿಗಳನ್ನು ಆಗ್ರಹಿಸಿರುವ ಬೃಂದಾ ಕಾರಟ್ ಈ ವಿಷಯವನ್ನು ಸೂಕ್ತವಾಗಿ ಪರಿಶೀಲಿಸಬೇಕು ಎಂದು ವಿನಂತಿಸಿದ್ದಾರೆ.
ಇದನ್ನೂ ನೋಡಿ: ಇಡಿಗಂಟುಗಾಗಿ ಬಿಸಿಯೂಟ ನೌಕರರ ಅನಿರ್ಧಿಷ್ಟ ಧರಣಿ Janashakthi Media