ಬೆಂಗಳೂರು: ಚರಂಡಿಯೊಂದು ತುಂಬಿ ಕೊಳಚೆ ನೀರು ರಸ್ತೆಗೆ ಹರಿದು ದುರ್ನಾತ ಬೀರುತ್ತಿರುವ ಪರಿಸ್ಥಿತಿ ಜಾಲಹಳ್ಳಿ ಕ್ರಾಸ್ ಸಮೀಪದಲ್ಲಿ ಉಂಟಗಿದ್ದು, ನಿವಾಸಿಗಳು ಈ ದುರ್ವಾಸನೆಯಿಂದ ಹೈರಾಣಾಗಿದ್ದಾರೆ.
ಜಾಲಹಳ್ಳಿ ಕ್ರಾಸ್ ಜಂಕ್ಷನ್‌ನಿಂದ ಗಂಗಮ್ಮ ವೃತ್ತದ ಕಡೆಗೆ ತೆರಳುವ ಮಾರ್ಗದ ಎಡ ಬದಿಯಲ್ಲಿ ಬೇಕರಿ, ಹೋಟೆಲ್, ಮೊಬೈಲ್ ಫೋನ್ ಮಾರಾಟದ ಅಂಗಡಿಗಳು ಸೇರಿದಂತೆ ಹತ್ತಾರು ಮಳಿಗೆಗಳಿವೆ. ಪಕ್ಕದಲ್ಲೇ ರಾಕ್‌ಲೈನ್ ಮಾಲ್ ಇದೆ. ಇನ್ನೊಂದು ಬದಿಯಲ್ಲಿ ಯಶವಂತಪುರ ಕಡೆಗೆ ಹೋಗುವ ಬಸ್‌ಗಳ ನಿಲುಗಡೆ ಸ್ಥಳವಿದೆ. ಇದು ಸದಾ ಜನದಟ್ಟಣೆಯ ಪ್ರದೇಶ.
ಗಂಗಮ್ಮ ವೃತ್ತದ ಕಡೆಗೆ ಹೋಗುವ ಮಾರ್ಗದ ಎಡ ಬದಿಯಲ್ಲಿರುವ ಅಂಗಡಿಗಳ ಮುಂಭಾಗ ಹಾದು ಹೋಗಿರುವ ಚರಂಡಿ ಆಗಾಗ್ಗೆ ತುಂಬಿ ಕೊಳಚೆ ನೀರು ರಸ್ತೆಗೆ ಹರಿಯುತ್ತಿರುತ್ತದೆ. ನಾಲ್ಕು ದಿನಗಳಿಂದ ಚರಂಡಿಯ ನೀರು ರಸ್ತೆಗೆ ಹರಿಯುತ್ತಾ ದುರ್ನಾತ ಬೀರುತ್ತಿದೆ. ಸುತ್ತಲಿನ ಅಂಗಡಿಯವರು ಕೊಳಚೆ ನೀರಿನ ದುರ್ವಾಸನೆಯಿಂದ ಬೇಸತ್ತು ಹೋಗಿದ್ದಾರೆ.
‘ಮಳೆಗಾಲದಲ್ಲಷ್ಟೇ ಈ ಸಮಸ್ಯೆ ಆಗಬಹುದು’ ಎಂದು ಊಹಿಸುವಂತಿಲ್ಲ. ಸ್ಥಳೀಯರು ಹೇಳುವಂತೆ ಎಲ್ಲ ಕಾಲದಲ್ಲೂ ಅಗಾಗ್ಗೆ ಚರಂಡಿ ತುಂಬಿ ಕೊಳಚೆ ನೀರು ರಸ್ತೆಗೆ ಹರಿಯುತ್ತಿರುತ್ತದೆ. ರೋಗ ಹರಡುವ ಭೀತಿಯೂ ಸುತ್ತಮುತ್ತಲಿನ ಅಂಗಡಿಯವರನ್ನು ಕಾಡುತ್ತಿದೆ.
ಇದನ್ನೂ ಓದಿ : ಹಿಟ್ ಅಂಡ್ ರನ್ ಪ್ರಕರಣ: ಶಾಲೆಯಿಂದ ಮಗುವನ್ನು ಕರೆತರುತ್ತಿದ್ದ ತಾಯಿ ಸಾವು- ಮಗು ಗಂಭೀರ
‘ಸರ್ಕಲ್ ಸುತ್ತಮುತ್ತಲಿನ ಅಂಗಡಿಯವರು, ಸಿಗ್ನಲ್‌ನಲ್ಲಿ ನಿಲ್ಲುವ ವಾಹನ ಸವಾರರು ಮೂಗು ಮುಚ್ಚಿಕೊಂಡೇ ಓಡಾಡಬೇಕು. ದುರ್ವಾಸನೆಯಿಂದಾಗಿ ಇಲ್ಲಿರುವ ಹೋಟೆಲ್, ಬೇಕರಿಯಂತಹ ಅಂಗಡಿಗಳಿಗೆ ಜನ ಬರಲು ಹಿಂದೇಟು ಹಾಕುತ್ತಾರೆ’ ಎಂದು ಮಾಲೀಕರು ಬೇಸರ ವ್ಯಕ್ತಪಡಿಸುತ್ತಾರೆ.
ಈ ಚರಂಡಿಯ ನೀರಿನ ದುರ್ವಾಸನೆಯಿಂದಾಗಿ ನಮ್ಮ ಬೇಕರಿಯಲ್ಲಿ ನಿಂತು ವ್ಯಾಪಾರ ಮಾಡುವುದು ಕಷ್ಟವಾಗುತ್ತಿದೆ. ಗ್ರಾಹಕರು ಬರುವುದಕ್ಕೂ ಹಿಂದೇಟು ಹಾಕುತ್ತಾರೆ’ ಎಂದು ಬೇಕರಿ ಮಾಲೀಕ ಮಧು ಬೇಸರ ವ್ಯಕ್ತಪಡಿಸಿದರು.
‘ಒಂದು ತಿಂಗಳಿನಿಂದ ನಮ್ಮ ಅಂಗಡಿ ಮುಂದಿನ ಚರಂಡಿಯಲ್ಲಿ ಗಲೀಜು ತುಂಬಿಕೊಂಡು ದುರ್ವಾಸನೆ ಬರುತ್ತಿದೆ. ಪಾದಚಾರಿ ಮಾರ್ಗದಲ್ಲಿ ಜನರು ಓಡಾಡುವುದು ಕಷ್ಟವಾಗಿದೆ. ಈಗಾಗಲೇ ಬಿಬಿಎಂಪಿಗೆ ಮೂರು ಬಾರಿ ದೂರು ನೀಡಿದ್ದೆವು. ಈಗ ಸರಿಪಡಿಸುತ್ತಿದ್ದಾರೆ’ ಎಂದು ಮೊಬೈಲ್ ಅಂಗಡಿಯೊಂದರ ಮಾಲೀಕ ಸಿದ್ದಾಂತ್ ತಿಳಿಸಿದರು.
‘ನಾನು ನಿತ್ಯ ಬಸ್‌ಗಾಗಿ ಇಲ್ಲಿಯೇ ಕಾಯುತ್ತಿರುತ್ತೇನೆ. ಚರಂಡಿಯ ನೀರಿನ ದುರ್ವಾಸನೆಯಿಂದಾಗಿ ಹೆಚ್ಚು ಹೊತ್ತು ಇಲ್ಲಿ ನಿಲ್ಲಲು ಆಗುವುದಿಲ್ಲ. ಮೂರ್ನಾಲ್ಕು ದಿನಗಳಿಂದ ಹೀಗೆ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ’ ಎಂದು ಪ್ರಯಾಣಿಕ ಶಶಿ ಹೇಳಿದರು.
ಹಿಂದೆ ಇಲ್ಲಿನ ಅಂಗಡಿಗಳ ಮಾಲೀಕರಲ್ಲಿ ಕೆಲವರು ಚರಂಡಿ ಸಮಸ್ಯೆ ಬಗ್ಗೆ ಬಿಬಿಎಂಪಿಯವರಿಗೆ ದೂರು ನೀಡಿದ್ದರು. ಆಗ ಬಿಬಿಎಂಪಿಯವರು ಒಂದೆರಡು ಬಾರಿ ಚರಂಡಿ ಸ್ವಚ್ಛಗೊಳಿಸಿದ್ದಾರೆ. ಆದರೂ, ಈ ಸಮಸ್ಯೆ ಆಗಾಗ್ಗೆ ಧುತ್ತೆಂದು ಕಾಣಿಸಿಕೊಳ್ಳುತ್ತದೆ.
‘ಪದೇ ಪದೇ ಚರಂಡಿ ತುಂಬಿ ಹರಿಯುತ್ತಿರುತ್ತದೆ. ದೂರು ನೀಡಿ ನಾಲೈದು ದಿನಗಳಾದರೂ ಇದನ್ನು ಸ್ವಚ್ಛಗೊಳಿಸುವುದಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು’ ಎಂಬುದು ಅಂಗಡಿಗಳ ಮಾಲೀಕರು ಮತ್ತು ನಿವಾಸಿಗಳ ಆಗ್ರಹವಾಗಿದೆ.
ಇದನ್ನೂ ನೋಡಿ : ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಕೇರಳ ಮಾದರಿ ಜಾರಿಯಾಗಲಿ – ಡಾ. ಅನೀಲ್ Janashakthi Media