ಸಂಸತ್ ಕಲಾಪ ಮುಂದೂಡಿಕೆ-ಮಹಿಳಾ ಸದಸ್ಯರ ಮೇಲೆ ಹಲ್ಲೆ: ವಿರೋಧ ಪಕ್ಷಗಳ ಪ್ರತಿಭಟನೆ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಕಲಾಪವನ್ನು ಮುಂದೂಡಿಕೆ ಹಾಗೂ ಪ್ರತಿಪಕ್ಷಗಳ ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪದ ಬಗ್ಗೆ ಕಾಂಗ್ರೆಸ್ ನೇತೃತ್ವದಲ್ಲಿ ಸುಮಾರು 15ಕ್ಕೂ ಹೆಚ್ಚಿನ ವಿರೋಧ ಪಕ್ಷಗಳು ವಿಜಯ್‌ ಚೌಕ್‌ ನಿಂದ ಸಂಸತ್‌ ಭವನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 19ರಿಂದ ಆರಂಭವಾಗಿದ್ದ ಸಂಸತ್ ಆಗಸ್ಟ್ 13ರವರೆಗೂ ನಡೆಯಬೇಕಿತ್ತು. ಆದರೆ ಪೆಗಾಸಸ್ ಬೇಹುಗಾರಿಕೆ ಮತ್ತು ರೈತ ಕೃಷಿ ಕಾನೂನು ಬಗೆಗೆಗಿನ ಮತ್ತು ಅತೀ ಪ್ರಮುಖ ವಿಷಯಗಳನ್ನು ಮುಂದಿಟ್ಟು ಪ್ರತಿಪಕ್ಷಗಳು ಚರ್ಚೆಗೆ ಆಗ್ರಹ ಮತ್ತು ತೀವ್ರತರವಾದ ವಿರೋಧದಿಂದಾಗಿ ಉಂಟಾದ ಗದ್ದಲಗಳಿಂದಾಗಿ ಸಂಸತ್ತಿನ ಕಲಾಪ ಸುಗಮವಾಗಿ ನಡೆಯಲಿಲ್ಲ.

ನಿನ್ನೆ ಇದ್ದಕ್ಕಿದ್ದ ಹಾಗೇ ಲೋಕಸಭೆ ಮತ್ತು ರಾಜ್ಯಸಭೆಯನ್ನು ಮುಂದೂಡಲಾಯಿತು. ನಿನ್ನೆ ರಾಜ್ಯಸಭೆಯಲ್ಲಿಯೂ ಪ್ರತಿಪಕ್ಷಗಳ ಪ್ರತಿಭಟನೆ ವೇಳೆಯಲ್ಲಿ ಮಾರ್ಷಲ್‍ಗಳು ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರವಾದ ಸಂಘರ್ಷ ನಡೆದಿದೆ. 40 ಕ್ಕೂ ಹೆಚ್ಚು ರಾಜ್ಯಸಭಾ ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ ಎಂದು ಕೂಡಾ ಉಲ್ಲೇಖವಿದೆ.

ಇದನ್ನು ಓದಿ: ಚುನಾವಣೆಗೂ ಮೊದಲು ಅಭ್ಯರ್ಥಿಗಳ ಅಪರಾಧ ಮಾಹಿತಿ ಬಹಿರಂಗಗೊಳ್ಳಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ಈ ಸಂದರ್ಭದಲ್ಲಿ ಮಾರ್ಷಲ್‍ಗಳು ಕಾಂಗ್ರೆಸ್‍ನ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ನಿನ್ನೆ ಲೋಕಸಭೆ ಮುಂದೂಡಿಕೆಯಾಗುತ್ತಿದ್ದಂತೆ ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಅನೇಕ ಪ್ರತಿಪಕ್ಷದ ನಾಯಕರ ಜೊತೆ ಸಮಾಲೋಚನೆ ನಡೆಸಿದರು.

ರಾಜ್ಯಸಭೆಯಲ್ಲಿಯೂ ಗದ್ದಲ ಜೋರಾಗಿತ್ತು. ಚರ್ಚೆಗೆ ಅವಕಾಶ ನೀಡದಿರುವುದು ಮತ್ತು ಸಂಸತ್ ಒಳಗಿನ ಅಹಿತಕರ ಘಟನೆಯನ್ನು ವಿರೋಧಿಸಿ ಎಲ್ಲಾ ಪ್ರತಿಪಕ್ಷಗಳು ಒಟ್ಟಾಗಿ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.

ಸಂಸದರ ಮೇಲೆ ದಾಳಿ ನಡೆಸಲು ಹೊರಗಿನಿಂದ ಜನರನ್ನು ಕರೆ ತರಲಾಗಿದೆ. ರಾಜ್ಯಸಭೆಯಲ್ಲಿ ಸಭಾಪತಿ ಅವರ ಸಮ್ಮುಖದಲ್ಲೇ ಹಲ್ಲೆಯಾಗಿದೆ. ದೇಶದ ಶೇಕಡಾ 60ರಷ್ಟು ಜನರ ಧ್ವನಿಯನ್ನು ಅಡಗಿಸುವ ಪ್ರಯತ್ನಗಳು ನಡೆದಿವೆ. ದೈಹಿಕ ಹಲ್ಲೆ ಮಾಡುವ ಮೂಲಕ ಬೆದರಿಸುವ ಪ್ರಯತ್ನಗಳಾಗಿವೆ ಎಂದು ರಾಹುಲ್‍ಗಾಂಧಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಕಲಾಪವನ್ನು ಪದೇ ಪದೇ ಮುಂದೂಡುವ ಮೂಲಕ ನಿನ್ನೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇದು ಪ್ರಜಪ್ರಭುತ್ವದ ಕಗ್ಗೊಲೆ. ಸಂಸತ್ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಸದಸ್ಯರ ಮೇಲೆ ಸಂಸತ್ತಿನ ಒಳಗೆ ದಾಳಿ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು.

ಎನ್‍ಸಿಪಿ ನಾಯಕ ಶರದ್ ಪವಾರ್ ಮಾತನಾಡಿ ನನ್ನ 55 ವರ್ಷಗಳು ಸಂಸತ್ ಅನುಭವದಲ್ಲಿ ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದನ್ನು ನೋಡಿರಲಿಲ್ಲ. ನಿನ್ನೆ ಆ ದುರ್ಘಟನೆ ನಡೆದಿದೆ ಎಂದು ಆರೋಪಿಸಿದರು.

ಇದನ್ನು ಓದಿ: ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತ ಹೋರಾಟ: ‘ಕಿಸಾನ್ ಸಂಸದ್’​​ನಲ್ಲಿ ಪ್ರತಿಪಕ್ಷಗಳು ಭಾಗಿ

ಶಿವಸೇನೆಯ ಸಂಜಯ್ ರಾಹುತ್ ಮಾತನಾಡಿ ಮಾರ್ಷಲ್‍ಗಳ ಸಮವಸ್ತ್ರದಲ್ಲಿ ಇರುವವರನ್ನು ಹೊರಗಿನಿಂದ ಕರೆ ತರಲಾಗಿದೆ. ಅವರು ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಪ್ರತಿಪಕ್ಷಗಳಿಗೆ ಅವಕಾಶ ಸಿಗಲಿಲ್ಲ. ಸಂಸದರಿಗೆ ಸಂಸತ್‍ನಲ್ಲಿ ನಿಂತಿದ್ದೇವಾ ಅಥವಾ ಪಾಕಿಸ್ತಾನದ ಗಡಿಯಲ್ಲಿ ನಿಂತಿದ್ದೇವಾ ಎಂಬ ಅನುಭವವಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ರಾಹುಲ್‌ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಿವಸೇನೆಯ ಸಂಜಯ್ ರಾವತ್‌ ಮತ್ತು ಡಿಎಂಕೆ, ಸಮಾಜವಾದಿ ಪಕ್ಷ, ಆರ್‌ಜೆಡಿ, ಸಿಪಿಐ(ಎಂ) ಮತ್ತು ಸಿಪಿಐ, ಮುಸ್ಲಿಂ ಲೀಗ್, ಆರ್‌ಎಸ್‌ಪಿ ಮತ್ತು ಕೇರಳ ಕಾಂಗ್ರೆಸ್‌ನ ನಾಯಕರು ಕೂಡ ಭಾಗಿಯಾಗಿದ್ದರು. ಮೆರವಣಿಗೆ ನಂತರ ನಾಯಕರೆಲ್ಲರೂ ಸೇರಿ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ನಿವಾಸಕ್ಕೆ ತೆರಳಿ ದೂರು ಸಲ್ಲಿಸಿದರು.

ಪ್ರತಿಪಕ್ಷಗಳು ಸಂಸತ್ತಿನ ಅಧಿವೇಶನದ ಸಂದರ್ಭದಲ್ಲಿ ಪೆಗಾಸಸ್ ಫೋನ್ ಹ್ಯಾಕಿಂಗ್ ಹಗರಣ, ರೈತರ ಪ್ರತಿಭಟನೆ ಮತ್ತು ಇಂಧನ ಬೆಲೆ ಏರಿಕೆಯಂತಹ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ದಾಳಿ ನಡೆಸಿದೆ. ಸಂಸತ್ತಿನ ಹೊರಗೆ ಭಾಷಣಗಳು ಮತ್ತು ಮೆರವಣಿಗೆಗಳಿಂದ ಪೂರ್ಣ ಘರ್ಷಣೆಗಳವರೆಗೆ ಪ್ರತಿಭಟನೆಗಳು ನಡೆದವು, ಸಂಸದರು ಮೇಜುಗಳ ಮೇಲೆ ಹಾರಿ, ಫೈಲ್‌ಗಳನ್ನು ಎಸೆದರು, ಎರಡೂ ಸದನಗಳ ಬಾವಿಗಿಳಿದು ಕಪ್ಪು ಬಟ್ಟೆಯನ್ನು ಬೀಸಿದರು.

Donate Janashakthi Media

Leave a Reply

Your email address will not be published. Required fields are marked *