ಕೋವಿಡ್‌ ಲಸಿಕೆ ಕೊರತೆ: ಕೇಂದ್ರದ ವಿರುದ್ಧ ಮಹಾರಾಷ್ಟ್ರ ಸರಕಾರ ಆಕ್ರೋಶ

ಮುಂಬೈ: ಅತಿ ಹೆಚ್ಚು ಕೋವಿಡ್‌–19 ಪ್ರಕರಣಗಳು ಮಹಾರಾಷ್ಟ್ರ ರಾಜ್ಯದಲ್ಲಿ ವರದಿಯಾಗುತ್ತಿದೆ. ಇದು ದೇಶದಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗುತ್ತಿರುವ ರಾಜ್ಯವಾಗಿದೆ. ಇಲ್ಲಿ ಕೋವಿಡ್‌ ಲಸಿಕೆ ಮತ್ತು ಔಷಧಗಳ ಕೊರತೆಯಾಗಿದೆ. ಸಾರ್ವಜನಿಕ ಆರೋಗ್ಯದಲ್ಲಿ ಗಂಭೀರ ಪರಿಣಾಮ ಬೀರಲಾರಂಭಿಸಿದೆ. ರಾಜ್ಯದಲ್ಲಿ ಕೇವಲ ಎರಡು ದಿನಗಳಿಗೆ ಮಾತ್ರ ಸಾಕಾಗುವಷ್ಟು ಮಾತ್ರ ಲಸಿಕೆಗಳ ಲಭ್ಯವಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ ಟೋಪೆ ಹೇಳಿದ್ದಾರೆ.

ರಾಜ್ಯದ ಕೆಲವು ಜಿಲ್ಲೆಗಳಾದ ಸಾತಾರಾ, ಸಾಂಗ್ಲಿ ಹಾಗೂ ಪನವೆಲ್‌ ನಲ್ಲಿ ಹಮ್ಮಿಕೊಳ್ಳುತ್ತಿರುವ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಸಿಕೆ ಅಭಿಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಲಸಿಕೆಗಳ ಕೊರತೆಯಾಗಿದೆ. ಕೇಂದ್ರ ಸರ್ಕಾರ ಕಡಿಮೆ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಿದ್ದೆ ಇದಕ್ಕೆ ಕಾರಣ ಎಂದು ರಾಜೇಶ್‌ ಟೋಪೆ ಕೇಂದ್ರ ಸರಕಾರದ ವಿರುದ್ಧ ಆಕ್ರೋಶಗೊಂಡರು.

ಇದನ್ನು ಓದಿ : ಕೋವಿಡ್‌ ನಿಯಮ : ಆಡಳಿತಾರೂಢ ಪಕ್ಷಕ್ಕೆ ಒಂದು ನಿಯಮ, ಸಾಮಾನ್ಯರಿಗೆ ಒಂದು ನಿಯಮ?

‘ನಾವು ನಿತ್ಯ 6 ಲಕ್ಷ ಜನರಿಗೆ ಲಸಿಕೆ ಹಾಕುತ್ತಿದ್ದೇವೆ, ತಿಂಗಳಿಗೆ ಸರಿಸುಮಾರು 1.6 ಕೋಟಿ ಲಸಿಕೆ ಡೋಸ್‌ಗಳು ಮತ್ತು ವಾರಕ್ಕೆ ಕನಿಷ್ಠ 40 ಲಕ್ಷ ಡೋಸ್‌ಗಳು ಅಗತ್ಯವಿದೆ. ಇತರೆ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಬದಲು, ನಮ್ಮದೇ ಸ್ವಂತ ರಾಜ್ಯಗಳಿಗೆ ಪೂರೈಕೆ ಮಾಡಲಿ. ಕೇಂದ್ರ ಸರ್ಕಾರವು ನಮಗೆ ಸಹಕಾರ ನೀಡುತ್ತಿದೆ, ಆದರೆ ಮಾಡಬೇಕಾದಷ್ಟು ಸಹಾಯವನ್ನು ಮಾಡುತ್ತಿಲ್ಲ’ ಎಂದಿದ್ದಾರೆ.

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪೂರೈಕೆ ಮಾಡುತ್ತಿರುವ ಲಸಿಕೆ ಪ್ರಮಾಣದ ಬಗ್ಗೆ ಪ್ರಸ್ತಾಪಿಸಿ, ‘ಜನಸಂಖ್ಯೆ ಹಾಗೂ ಕೋವಿಡ್‌ ಪ್ರಕರಣಗಳೊಂದಿಗೆ ಹೋಲಿಸಿದರೆ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್‌ ಹಾಗೂ ಹರಿಯಾಣ ರಾಜ್ಯಗಳಿಗೆ ಹೆಚ್ಚು ಪ್ರಮಾಣದಲ್ಲಿ ಲಸಿಕೆ ನೀಡಲಾಗುತ್ತಿದೆ. ಆದರೆ, ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರಕ್ಕೆ ಮಾತ್ರ ಕಡಿಮೆ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಲಾಗುತ್ತಿದೆ ‘ ಎಂದು ಹೇಳಿದರು.

ಇದನ್ನು ಓದು : ಸಾರಿಗೆ ನೌಕರರ ಮುಷ್ಕರ : ಕ್ವಾಟ್ರಸ್‌ ಖಾಲಿ ಮಾಡುವಂತೆ ನೋಟಿಸ್

‘ಗುಜರಾತ್‌ನಲ್ಲಿ ಮಹಾರಾಷ್ಟ್ರದ ಅರ್ಧದಷ್ಟು ಜನಸಂಖ್ಯೆ ಇದೆ. ಈವರೆಗೂ ಗುಜರಾತ್‌ 1 ಕೋಟಿ ಡೋಸ್‌ಗಳಷ್ಟು ಲಸಿಕೆ ಪಡೆದಿದೆ, ಆದರೆ ನಮಗೆ 1.04 ಕೋಟಿ ಡೋಸ್‌ಗಳಷ್ಟು ಮಾತ್ರ ಲಸಿಕೆ ದೊರೆತಿದೆ’ ಎಂದು ಸಚಿವ ಟೋಪೆ ಅಂಕಿ–ಅಂಶ ತೆರೆದಿಟ್ಟಿದ್ದಾರೆ.

ನೆನ್ನೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್‌ ಅವರೊಂದಿಗೆ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಟೋಪೆ, ‘ಮಹಾರಾಷ್ಟ್ರದಲ್ಲಿ ಈಗ 14 ಲಕ್ಷ ಡೋಸ್‌ ಲಸಿಕೆ ಲಭ್ಯವಿದೆ. ಇದು ಮೂರು ದಿನಗಳಿಗೆ ಮಾತ್ರ ಸಾಕಾಗುತ್ತದೆ. ಪ್ರತಿ ವಾರ ನಮಗೆ 40 ಲಕ್ಷ ಡೋಸ್‌ಗಳಷ್ಟು ಲಸಿಕೆ ಅಗತ್ಯವಿದೆ’ ಎಂದಿದ್ದರು.

Donate Janashakthi Media

Leave a Reply

Your email address will not be published. Required fields are marked *