ಬಯಲಕಡೆ………..!?

– ಎಚ್.ಆರ್.ನವೀನ್ ಕುಮಾರ್, ಹಾಸನ

ಈ ಭಾಗದ ಜನರು ಯಾಕೆ ಮನೆಗಳಲ್ಲಿ ಶೌಚಾಲಯಗಳನ್ನು ಬಳಸುವುದಿಲ್ಲ, ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡುವುದಿಲ್ಲ ಎಂದು ಅವರ ಸಾಮಾಜಿಕ, ಆರ್ಥಿಕ ಹಿಂದುಳಿದಿರುವಿಕೆಯ ಬಗ್ಗೆ ಹಲವು ಬಾರಿ ಚರ್ಚಿಸಿದ್ದೇವೆ. ಆದರೆ ಈಗ ನನಗೆ ಮತ್ತೊಂದು ವಿಷಯ ಅದರ ಸಾಂಸ್ಕೃತಿಕ ಆಯಾಮದ ಪರಿಚಯವಾಯಿತು. ಬಯಲಕಡೆ

ನಸುಕಿನ ಜಾವ ಸೂರ್ಯ ಇನ್ನೂ ಮೂಡುವ ತವಕದಲ್ಲಿದ್ದ. ಮಬ್ಬು ಮುಂಜಾವಿನಲ್ಲಿ ಊರೊಳಗಿಂದ ಒಬ್ಬೊಬ್ಬರೇ ‘ಬಯಲ ಕಡೆ’ ಹೆಜ್ಜೆಯಾಕುತ್ತಿದ್ದರು.

ಕೈಯಲ್ಲಿ ತಂಬಿಗೆ ಹಿಡಿದು ಮನೆ ಮನೆಗಳಿಂದ ಮೆರವಣಿಗೆ ಹೊರಟ ಮಹಿಳೆಯರು, ಮಕ್ಕಳು ಬಯಲಕಡೆ ಮುಖ ಮಾಡಿದ್ದರು. ಕೈಯಲ್ಲಿ ಸಣ್ಣದೊಂದು ತಂಬಿಗೆಯಿದ್ದರೂ ಅವರ ಗಮನವೆಲ್ಲಾ ಮುಂದೆ ಯಾವ ತೊಂದರೆಯೂ ಇಲ್ಲದ ಮರೆಯಾದ, ಗಂಡು ಜೀವಗಳು ಕಾಣದ ಜಾಗದ ಹುಡುಕಾಟವಾಗಿತ್ತು.

ಈ ದೃಶ್ಯ ಕಂಡದ್ದು ಯಾದಗಿರಿ ಜಿಲ್ಲೆಯ ಶಹಪುರ ತಾಲ್ಲೂಕಿನ ರಸ್ತಾಪೂರದಲ್ಲಿ. ನಾನು ರೈತ ಸಂಘದ ಅಧ್ಯಯನ ಶಿಬಿರದಲ್ಲಿ ಭಾಗವಹಿಸಲು ಈ ಊರಿನ ಹೊರವಲಯದಲ್ಲಿರುವ ಶರಬಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿದ್ದೆ. ಬೆಳಗ್ಗೆ ಎದ್ದು ವಾಕ್ ಮಾಡುವ ಅಭ್ಯಾಸದಿಂದಾಗಿ‌ ಎಂದಿನಂತೆ 5.30 ಕ್ಕೆ ಎದ್ದು 6 ಗಂಟೆಯ‌ ಒಳಗಾಗಿ ವಾಕ್ ಹೊರಟೆ. ನಾನಿದ್ದ ಜಾಗದಿಂದ 5 ನಿಮಿಷ ವಾಕ್ ಮಾಡಿದರೆ ರಸ್ತಾಪೂರ ಗ್ರಾಮ ಸಿಗುತ್ತದೆ. ಇಲ್ಲಿಗೆ‌ ಪ್ರವೇಶಿಸಿದಾಗ‌ ನನಗೆ ಕಂಡ ದೃಶ್ಯ ಇದಾಗಿತ್ತು.

ಅಕ್ಷರಶಃ ಮೆರವಣಿಗೆಗೆ ಸೇರುವವರಂತೆ ಮನೆ ಮನೆಗಳಿಂದ ಹೊರಬಂದ ಈ ಮಹಿಳೆಯರ ಹೆಜ್ಜೆಗಳನ್ನು‌ ನೋಡಿ‌ ಒಂದು ಕ್ಷಣ ಗಾಬರಿಗೊಂಡೆ. ಕಾಲಲ್ಲಿ ಚಪ್ಪಲಿ ಇಲ್ಲ. ಅವರ ಮನಸ್ಸಿನಲ್ಲೇನಿರಬಹುದೆಂದು ನಾನು ಊಹಿಸುವುದು ಕಷ್ಟವೇನಲ್ಲ. ಯಾರು‌ ನಮ್ಮನ್ನ ನೋಡುತ್ತಾರೋ, ಹಂದಿಗಳ ಕಾಟವಿಲ್ಲದ ಜಾಗ‌ ಎಲ್ಲಿ ಸಿಗಿತ್ತದೋ‌ ಎಂದು‌ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿಕೊಂಡು‌ ನಡೆಯುವಂತಿತ್ತು. ಇದು ಉತ್ತರ ಕರ್ನಾಟಕ ಭಾಗದ ಹಳ್ಳಿಗಳಲ್ಲಿ‌ ಕಾಣುವ ಸಾಮಾನ್ಯ ದೃಶ್ಯ. ಈ ದೃಶ್ಯ ಕಂಡು ಸ್ವಲ್ಪ ವಿಚಲಿತನಾಗಿದ್ದ ನಾನು ಹಾಗೆ ಮುಂದೆ ಬಂದೆ. ಕೆಲವು ಮನೆಗಳ ಮುಂದೆಯೋ, ಪಕ್ಕದಲ್ಲೋ ಸಣ್ಣದಾದ ಶೌಚಾಲಯ ಇರುವುದು ಕಂಡುಬಂದಿತಾದರೂ ಅವುಗಳಾವುವೂ ಬಳಕೆ ಯೋಗ್ಯವಿದ್ದಂತೆ ಭಾಸವಾಗುತ್ತಿಲ್ಲ. ಕೆಲವೊಂದರಲ್ಲಿ ಸೌದೆಯನ್ನು ತುಂಬಲಾಗಿದೆ, ಇನ್ನು ಕೆಲವಕ್ಕೆ ಬಾಗಿಲೇ ಇಲ್ಲ, ಇನ್ನು ಕೆಲವುಗಳಲ್ಲಿ ಕಲ್ಲು ಮಣ್ಣು‌ ತುಂಬಿಕೊಂಡಿವೆ.

ಇದನ್ನು ನೋಡುತ್ತಾ ವಾಕ್ ಮುಂದುವರೆಸಿ‌ ಊರ ಒಳಗಿಂದ ಹೊರಗೆ ಹೋಗುವ ಒಂದು ರಸ್ತೆಗೆ ಬಂದರೆ ಅಲ್ಲಿಯೇ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ಎಂದು ಬರೆದಿದ್ದ ಕಟ್ಟಡದ ದರ್ಶನವಾಯಿತು. ಆ ಕಟ್ಟಡಕ್ಕೆ ಪ್ರವೇಶ ಪಡೆಯಲು ಯಾವ ದಾರಿಯೂ ಇಲ್ಲದಂತೆ ಗಿಡಗಂಟೆಗಳು ಬೆಳೆದು ಬೇಲಿ ನಿರ್ಮಾಣವಾಗಿದೆ. ಸುತ್ತಲೂ ಬಯಲು ಶೌಚದ ಕುರುಹುಗಳು ಎದ್ದುಕಾಣುತ್ತಿವೆ. ಕಟ್ಟಡದ ಮೇಲೊಂದು ಹಳದಿ ಬಣ್ಣದ ಸಿಂಟೆಕ್‌ ಇಡಲಾಗಿದ್ದು‌ ಅದು‌ ಹೊಡೆದು ಹೋಗಿದೆ. ಇದೇ‌ ಸಂದರ್ಭದಲ್ಲಿ ನನಗೆ ನೆನಪಾಗಿದ್ದು ಮಾನ್ಯ‌ ಪ್ರಧಾನಿಯವರು ಭಾರತವನ್ನು‌ ಬಯಲು‌ ಶೌಚ ಮುಕ್ತ‌ ದೇಶವನ್ನಾಗಿ‌ ಘೋಷಿಸುತ್ತೇವೆ‌ ಎಂದು‌ ಹೇಳಿದ್ದು. ಒಂದೆಡೆ ಆಧುನಿಕತೆ, ವಿಜ್ಞಾನ ತಂತ್ರಜ್ಞಾನ ಉತ್ತುಂಗ ಶಿಖರವನ್ನು ಏರಿ ಭಾರತ ಜಗತ್ತಿನ ನಾಯಕನಾಗುತ್ತಿದೆ ಎಂದು ಕೆಲವರು ಭ್ರಮಿಸುತ್ತಿರುವಾಗ, ಮತ್ತೊಂದೆಡೆ ನಾಗರೀಕತೆಯ ಯಾವ ಕುರುಹುಗಳೂ ಇಲ್ಲದಂತೆ ಜನ ಈಗಲೂ‌ ಬಯಲು‌ ಶೌಚಾಲಯಕ್ಕೆ ಹೋಗುವುದನ್ನು‌ ನೋಡಿದರೆ ಭಾರತದ ಗ್ರಾಮೀಣ ಜನತೆಯ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿಂದುಳಿದಿರುವಿಕೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಇದನ್ನೂ ಓದಿ: ಏರು ಮಹಡಿಗಳ ಕೆಳಗೆ ಸೋಲದ ಜೀವ

ಹಾಗೆ‌ ವಾಕ್ ಮುಂದುವರೆಸಿ ಸರಿಸುಮಾರು‌ ಎರಡು‌ ಕಿಲೋಮೀಟರ್ ದೂರ‌ ಕ್ರಮಿಸಿದ‌ ನಂತರ ಶಹಪುರದ‌ ಮುಖ್ಯ ರಸ್ತೆ ಸಿಗುತ್ತದೆ. ಈ ಮುಖ್ಯ ರಸ್ತೆ ಸಿಗುವ‌ ಮುನ್ನ  ರಸ್ತೆಯ ಎರಡೂ ಬದಿಯಲ್ಲಿ‌ ಒಂದೊಂದು‌ ಕ್ಷೌರದ ಅಂಗಡಿಗಳಿದ್ದವು. ನಿರ್ಜನ ಪ್ರದೇಶದಲ್ಲಿ ಇವುಗಳನ್ನು ನೋಡಿ‌ ಆಶ್ಚರ್ಯವಾಯಿತು. ಈ ಕುತೂಹಲಕ್ಕೆ ಸರಿಯಾದ ಕಾರಣವನ್ನು‌ ಕಂಡು ಹಿಡಿಯುವ ಸಲುವಾಗಿ ವಾಕ್ ಮುಗಿಸಿ‌ ವಾಪಸ್ ಅದೇ‌ ರಸ್ತೆಯಲ್ಲಿ‌ ಬಂದು‌‌ ರಸ್ತಾಪುರವನ್ನು‌ ಪ್ರವೇಶಿಸಿದಾಗ ಅಲ್ಲಿದ್ದ‌ ಚಿಲ್ಲರೆ‌  ಅಂಗಡಿಯವನ‌ ಬಳಿ ಹೋಗಿ‌ “ನಾವು‌ ಕ್ಷೌರ ಮಾಡಿಸಬೇಕಿತ್ತು‌ ಅಂಗಡಿ ಎಲ್ಲಿದೆ” ಎಂದು ಕೇಳಿದೆ. ಅವರು ಕೂಡಲೇ ಇವತ್ತು ಯಾವ ವಾರ ಸರ್ ಎಂದರು. ನಾನು ಭಾನುವಾರ ಎಂದೆ, ಅದಕ್ಕವರು ಹೌದಾ ಹಾಗಾದ್ರೆ ಪರವಾಗಿಲ್ಲ ಸರ್, ಮಂಗಳವಾರವಾದರೆ ಅವರು ರಜೆ ಮಾಡಿರುತ್ತಾರೆ. ಆದರೆ ನೀವು ಕ್ಷೌರ ಮಾಡಿಸಬೇಕಾದರೆ ಊರ ಹೊರಗಿರುವ ಕ್ಷೌರದ ಅಂಗಡಿಗೆ ಹೋಗಬೇಕು ಅದು ಇಲ್ಲಿಂದ ಎರಡು ಕಿಲೋಮೀಟರ್ ಆಗಲಿದೆ. ನೀವು ಸಾಧ್ಯವಾದರೆ ಬೈಕ್‌ನಲ್ಲಿ ಹೋಗಿ ತಡವಾದರೆ ಬಾಗಿಲು ಮುಚ್ಚುತ್ತಾರೆ ಎಂದರು. ನಾನು ಮರು ಪ್ರಶ್ನೆ ಕೇಳುತ್ತಾ ಊರ ಒಳಗಡೆ ಕ್ಷೌರದ ಅಂಗಡಿಗಳು ಇಲ್ಲವಾ ಎಂದೆ, ಅದಕ್ಕವರು ಅಂಗಡಿಗಳು ಯಾವಾಗಲೂ ಊರ ಹೊರಗೇ ಇರುವುದು. ಅವರು ಇಲ್ಲಿ ಕೆಲವರಿದ್ದಾರೆ ಅವರ ಮನೆಗಳಿಗೆ ಹೋದರೆ ಅಲ್ಲಿಯೇ ಮಾಡಬಹುದು, ಆದರೆ ಯಾರು ಅಲ್ಲಿ ಮಾಡಿಸುವುದಿಲ್ಲ ಎಂದರು. ಮಾತು‌ ಮುಂದುವರೆಯುವಷ್ಟರಲ್ಲಿ ಅಂಗಡಿಗೆ ಯಾರೋ ಬಂದರು ಅಲ್ಲಿಗೆ‌ ಮಾತು‌ ನಿಂತಿತು. ಹೆಚ್ಚು ಸಮಯ ನಿಲ್ಲುವ ಸಾಧ್ಯತೆಗಳಿಲ್ಲದ್ದರಿಂದ ಅಲ್ಲಿಂದ ಹಾಗೆ ಮುಂದೆ ನಮ್ಮ ಜಾಗದ ಕಡೆ ಹೊರಟೆ. ಈಗ ನನಗೆ ಎದುರಾಗಿದ್ದು ಬೆಳಗಿನ ಜಾವದ ರೀತಿಯ ಅದೇ ತಂಬಿಗೆಗಳನ್ನು ಹಿಡಿದಿದ್ದ ಗಂಡಸರ ಮೆರವಣಿಗೆ. ಒಂದು ರೀತಿ ಕಾರ್ಖಾನೆಗಳಲ್ಲಿ ಪಾಳಿಯಲ್ಲಿ ಕೆಲಸಕ್ಕೆ ಹೋಗುತ್ತಿರುವವರ ಹಾಗೆ, ಸೂರ್ಯ ಮೂಡುವ ಮುನ್ನ ಹೆಂಗಸರ ಮೆರವಣಿಗೆ, ಸೂರ್ಯ ಉದಯಿಸಿದ ಮೇಲೆ ಗಂಡಸರ ಮೆರವಣಿಗೆ.

ಈ ಭಾಗದ ಜನರು ಯಾಕೆ ಮನೆಗಳಲ್ಲಿ ಶೌಚಾಲಯಗಳನ್ನು ಬಳಸುವುದಿಲ್ಲ, ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡುವುದಿಲ್ಲ ಎಂದು ಅವರ ಸಾಮಾಜಿಕ, ಆರ್ಥಿಕ ಹಿಂದುಳಿದಿರುವಿಕೆಯ ಬಗ್ಗೆ ಹಲವು ಬಾರಿ ಚರ್ಚಿಸಿದ್ದೇವೆ. ಆದರೆ ಈಗ ನನಗೆ ಮತ್ತೊಂದು ವಿಷಯ ಅದರ ಸಾಂಸ್ಕೃತಿಕ ಆಯಾಮದ ಪರಿಚಯವಾಯಿತು. ಅದಕ್ಕೆ ಮತ್ತೊಂದು ಸಾಕ್ಷಿ‌ ಎಂಬಂತೆ ರೈತ ಸಂಘದ ಅಧ್ಯಯನ ಶಿಬಿರ ನಡೆದ ಅಮರ ಕಲ್ಯಾಣ ಮಂಟಪ ಆ ಭಾಗದಲ್ಲಿಯೇ ದೊಡ್ಡದಾದ ಮತ್ತು ಜಗಮಗಿಸುವ ದೀಪಾಲಂಕಾರಗಳಿಂದ ಕೂಡಿದ ಕಲ್ಯಾಣ ಮಂಟಪ. ಒಂದು ಕಲ್ಯಾಣ ಮಂಟಪದಲ್ಲಿ ಏನೇನು ಇರಬೇಕೊ ಅದೆಲ್ಲವೂ ಇತ್ತು ವಿಶಾಲವಾದ ವೇದಿಕೆ, ಎಡಬದಿ, ಬಲಬದಿ ಒಂದೊಂದು ರೂಂ ವಿಶಾಲವಾದ ಸಭಾಂಗಣ, ವಿಶಾಲವಾದ ಅಡುಗೆ ಕೋಣೆ, ವಿಶಾಲವಾದ ಊಟದ ಕೋಣೆ ಇವೆಲ್ಲವುಗಳು ಇದ್ದರೂ ಯಾವ ಕೋಣೆಯಲ್ಲಿಯೂ ಒಂದು ಶೌಚಾಲಯವೂ ಇರಲಿಲ್ಲ. ಮಾತ್ರವಲ್ಲ, ಈ ಕಲ್ಯಾಣ ಮಂಟಪ ದೇವಸ್ಥಾನದ ಸಮೀಪದಲ್ಲಿರುವುದರಿಂದ ಕಲ್ಯಾಣ ಮಂಟಪದ ಕಾಂಪೌಡ್‌ನ ಒಳಗೆ ಎಲ್ಲಿಯೂ ಶೌಚಾಲಯಗಳಿರಲಿಲ್ಲ. ಕಲ್ಯಾಣ ಮಂಟಪದಿಂದ ಸ್ವಲ್ಪ ದೂರ ಕೆರೆಯ ಪಕ್ಕದಲ್ಲಿ ಕೆಲವು ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಅವುಗಳನ್ನು ನಾವೇ ಉಧ್ಘಾಟನೆ ಮಾಡಿದಂತಿತ್ತು.

ಈ ಭಾಗದಲ್ಲಿರುವ ನಂಬಿಕೆಗಳು ಮತ್ತು ಮನುಷ್ಯ ವಿರೋಧಿ‌ ಆಚರಣೆಗಳ ಪರಿಣಾಮವಾಗಿ ಶೌಚಾಲಯ ಎಂದರೆ ಅದು ಹೊಲಸಾದ ಕೆಲಸ, ಅದನ್ನು ಮನೆಯ ಒಳಗಾಗಲೀ, ದೇವಸ್ಥಾನದ ಅಕ್ಕಪಕ್ಕದಲ್ಲಾಗಲಿ ನಿರ್ಮಾಣ ಮಾಡಬಾರದು ಎಂಬ ಭಾವನೆ ಇದೆ. ಮಾತ್ರವಲ್ಲದೆ ಕ್ಷೌರದ ಕೆಲಸವನ್ನು ಮಾಡುವುದು ಕೂಡ ಅತ್ಯಂತ ಕೀಳು ಕೆಲಸ ಹಾಗಾಗಿ ಇದು ಕೂಡ ಊರ ಹೊರಗಿರಬೇಕು ಎಂಬ ಆಳವಾದ ನಂಬಿಕೆಗಳು ಇವೆ. ಇದಕ್ಕೆ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಅನಿಷ್ಟ ಜಾತಿ ವ್ಯವಸ್ಥೆಯೇ ಕಾರಣ. ಇದು ಸಾಮಾಜಿಕ, ಆರ್ಥಿಕ ಹಿಂದಿಳಿದಿರುವಿಕೆಯ ಜೊತೆ ಸಾಂಸ್ಕೃತಿಕ ಹಿಂದುಳಿದಿರುವಿಕೆಯ ನಗ್ನ ದರ್ಶನನವೂ ಆಗಿದೆ.

ವಿಡಿಯೋ ನೋಡಿ:ʻಬದುಕಿನ ಬೀಗದ ಕೀ ನಮ್ಮ ಕೈಲೇ ಇದೆʻ ಹಿರಿಯ ರಂಗಕರ್ಮಿ ಜೇವರ್ಗಿ ರಾಜಣ್ಣ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *