ಬೆಂಗಳೂರು : ಇದೇ ಮಾರ್ಚ್ ಅಂತ್ಯದೊಳಗೆ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಲಿರುವುದರಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಫೆಬ್ರವರಿ 2ರಂದು ವಿಧಾನಸಭೆಯಲ್ಲಿ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರ ಅವಧಿಯು ಮುಕ್ತಾಯಗೊಳ್ಳುತ್ತಿರುವುದರಿಂದ ಮುಂದಿನ ಚುನಾವಣೆ ನಡೆಸುವವರೆಗೂ ಆಡಳಿತಾಧಿಕಾರಿಯನ್ನು ನೇಮಿಸುವ ಬದಲು ಈಗಿರುವ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸಬೇಕೆಂದು ಬಿಜೆಪಿ ಸದಸ್ಯ ದೊಡ್ಡನಗೌಡ ಪಾಟೀಲ್ ಗಮನ ಸೆಳೆದ ಸೂಚನೆಗೆ ಅವರು ಉತ್ತರಿಸಿದರು.
ಚುನಾವಣೆ ನಡೆಸುವುದು ತುಂಬಾ ತಡವಾಗುವುದಾದರೆ ಮಾತ್ರ ಕಾನೂನಿನಡಿ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸಲು ಅವಕಾಶವಿರುತ್ತದೆ. ಆದರೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿರುವುದರಿಂದ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸುವ ಅವಶ್ಯಕತೆ ಬರುವುದಿಲ್ಲ.
ಚುನಾವಣೆಯನ್ನು ಸರಕಾರ ಆದಷ್ಟು ಬೇಗ ನಡೆಸಲಿದೆ. ಆದಾಗ್ಯೂ ಚುನಾವಣೆ ನಡೆಸುವುದು ತಡವಾದಲ್ಲಿ ಸದಸ್ಯರ ಮನವಿ ಕುರಿತು ಕಾನೂನಿನಡಿ ಪರಿಶೀಲಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಇದನ್ನೂ ನೋಡಿ: ಬೆಂಗಳೂರು ಚಲನಚಿತ್ರೋತ್ಸವ| ಪ್ಯಾಲೆಸ್ತೀನ್ ಸಿನಿಮಾಗಳಿಗೆ ನಿರ್ಬಂಧ – ಪ್ರಕಾಶ್ ರಾಜ್ ಆಕ್ರೋಶ Janashakthi Media
