ಪಿಎಂಎಲ್‍ಎ ಕಾಯ್ದೆಗೆ ತಿದ್ದುಪಡಿಗಳನ್ನು ಎತ್ತಿ ಹಿಡಿದಿರುವ ತೀರ್ಪು ಅಪಾಯಕಾರಿ-ಪ್ರತಿಪಕ್ಷಗಳ ಜಂಟಿ ಹೇಳಿಕೆ

ಪಿಎಂಎಲ್‍ಎ, 2002 (Prevention of Money Laundering Act-ಹಣವನ್ನು ಮಡಿಗೊಳಿಸುವುದನ್ನು ತಡೆಯುವ ಕಾಯ್ದೆ)ಗೆ ತಂದಿರುವ ತಿದ್ದುಪಡಿಗಳನ್ನು ಸಂಪೂರ್ಣವಾಗಿ ಎತ್ತಿ ಹಿಡಿದಿರುವ  ಸುಪ್ರಿಂ ಕೋರ್ಟಿನ ಇತ್ತೀಚಿನ ತೀರ್ಪು ದೀರ್ಘಕಾಲೀನ ಪರಿಣಾಮಗಳನ್ನು ಉಂಟು ಮಾಡಬಹುದು. ಈ ಬಗ್ಗೆ ತಮಗೆ ಇರುವ ಆಳವಾದ ಸಂದೇಹಗಳನ್ನು ದಾಖಲಿಸಲೆಂದು ಎಡಪಕ್ಷಗಳೂ ಸೇರಿದಂತೆ ಸುಮಾರಾಗಿ ಎಲ್ಲ ಪ್ರತಿಪಕ್ಷಗಳು ಒಂದು ಜಂಟಿ ಹೇಳಿಕೆಯನ್ನು ಪ್ರಕಟಿಸಿವೆ. ಕಾಂಗ್ರೆಸ್‍, ಟಿಎಂಸಿ, ಎಎಪಿ, ಆರ್‌ಜೆಡಿ, ಆರ್‌ಎಲ್‍ಡಿ, ಎಸ್‍ಪಿ, ಡಿಎಂಕೆ, ಶಿವಸೇನೆ, ಎನ್‍ಸಿಪಿ, ಜೊತೆಗೆ ಸಿಪಿಐ(ಎಂ), ಸಿಪಿಐ ಮತ್ತು ಆರ್‌ಎಸ್‍ಪಿ ಮುಖಂಡರು ಇದಕ್ಕೆ ಸಹಿ ಮಾಡಿದ್ದಾರೆ.

ಈ ಅಪಾಯಕಾರೀ ತೀರ್ಪು ಬಹಳ ದಿನ ಉಳಿಯುವುದಿಲ್ಲ, ಬೇಗನೇ ಸಂವಿಧಾನಿಕ ಅಂಶಗಳ ಕೈಮೇಲಾಗುತ್ತದೆ ಎಂದು ಈ ಪ್ರತಿಪಕ್ಷಗಳು ತಮ್ಮ ಜಂಟಿ ಹೇಳಿಕೆಯಲ್ಲಿ ಆಶಿಸಿವೆ

ಈ ತಿದ್ದುಪಡಿಗಳಲ್ಲಿ ಕೆಲವನ್ನು ಹಣಕಾಸು ಕಾಯ್ದೆಯ ಮೂಲಕ ಶಾಸನವಾಗಿಸುವುದು ಸರಿಯೇ ಎಂದು ಪರೀಕ್ಷಿಸದೆ  ಈ ತೀರ್ಪು ನೀಡಲಾಗಿದೆ. ಮುಂದೆ, ಹಣಕಾಸು ಕಾಯ್ದೆಯ ಮೂಲಕ ತಂದ ತಿದ್ದುಪಡಿಗಳು ಕಾನೂನಿನ ಪ್ರಕಾರ ಕೆಟ್ಟದ್ದು ಎಂದು ಸುಪ್ರಿಂ ಕೋರ್ಟ್‍ ಹೇಳಿದರೆ, ಈ ಸಮಸ್ತ ಕೆಲಸ ನಿಷ್ಪ್ರಯೋಜಕವಾಗುತ್ತದೆ ಮತ್ತು ನ್ಯಾಯಾಂಗ ಸಮಯವನ್ನು ವ್ಯರ್ಥಗೊಳಿಸಿದಂತಾಗುತ್ತದೆ  ಎಂದು ಈ ಪಕ್ಷಗಳು ಹೇಳಿವೆ.

“ನಾವು ಸುಪ್ರಿಂ ಕೋರ್ಟನ್ನು ಸದಾ ಗೌರವಿಸುತ್ತೇವೆ, ಅದಕ್ಕೆ ಅತ್ಯುನ್ನತ ಗೌರವವನ್ನು ಕೊಡುತ್ತೇವೆ.  ಆದರೂ ಕೂಡ,ಈ ತೀರ್ಪು ಕೊಡುವ ಮೊದಲು ತಿದ್ದುಪಡಿಗಳನ್ನು ಹಣಕಾಸು ಕಾಯ್ದೆಯ ಮೂಲಕ ತರುವುದು ಸಾಂವಿಧಾನಕವೇ ಎಂಬುದನ್ನು ಒಂದು ದೊಡ್ಡ ಪೀಠ ಪರೀಕ್ಷಿಸುತ್ತಿರುವಾಗ, ಅದರ ತೀರ್ಪಿಗೆ ಕಾಯಬೇಕಿತ್ತು. ಈ ಬಹಳ ಆಳಕ್ಕೆ ಹೋಗುವ ತಿದ್ದುಪಡಿಗಳು ಹಣವನ್ನು ಮಡಿಗೊಳಿಸುವುದಕ್ಕೆ ಸಂಬಂಧಪಟ್ಟ ಇವೇ  ತಿದ್ದುಪಡಿಗಳನ್ನು ಮತ್ತು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು, ತನ್ನ ರಾಜಕೀಯ ವಿರೋಧಿಗಳ ಮೇಲೆ ಕಿಡಿಗೇಡಿತನದಿಂದ ಮತ್ತು  ದುರುದ್ದೇಶದಿಂದ ಗುರಿಯಿಡುವ  ಅತ್ಯಂತ ಕೆಟ್ಟದಾದ ರಾಜಕೀಯ ದ್ವೇಷ ಸಾಧನೆಯಲ್ಲಿ ತೊಡಗಿರುವ ಒಂದು ಸರಕಾರದ ಕೈಗಳನ್ನು ಬಲಪಡಿಸಿದೆ” ಎಂದು ಮುಂದುವರೆದು ಈ ಜಂಟಿ ಹೇಳಿಕೆ ಅಭಿಪ್ರಾಯ ಪಟ್ಟಿದೆ.

ಈ ಕಾಯ್ದೆಯಲ್ಲಿ ವಿಪರೀತಕ್ಕೆ ಹೋಗದಂತೆ ತಡೆಯುವ ಮತ್ತು ಸಮತೋಲನ ಕಾಯ್ದುಕೊಳ್ಳುವ ಅಂಶಗಳ ಕೊರತೆಯಿದೆ ಎಂಬುದರ ಕುರಿತು ಒಂದು ಸ್ವತಂತ್ರ ತೀರ್ಪನ್ನು ಕೊಡಬೇಕು ಎಂದು ನ್ಯಾಯಾಂಗದ ಈ ಸರ್ವೋಚ್ಚ ಪ್ರಾಧಿಕಾರವನ್ನು ಕೋರಲಾಗಿತ್ತು. ಆದರೆ ಅದು ಈ ಕರಾಳ ತಿದ್ದುಪಡಿಗಳನ್ನು ಬೆಂಬಲಿಸಲು ಕಾರ್ಯಾಂಗ ಕೊಟ್ಟಿರುವ ತರ್ಕಗಳನ್ನೇ ಸುಮಾರಾಗಿ ಯಥಾವತ್ತಾಗಿ ಕೊಟ್ಟಿರುವ ಬಗ್ಗೆ ತೀವ್ರ ನಿರಾಸೆಯನ್ನೂ  ಈ ಪ್ರತಿಪಕ್ಷಗಳು ವ್ಯಕ್ತಪಡಿಸಿವೆ. ಈ ಅಪಾಯಕಾರೀ ತೀರ್ಪು ಬಹಳ ದಿನ ಉಳಿಯುವುದಿಲ್ಲ, ಬೇಗನೇ ಸಂವಿಧಾನಿಕ ಅಂಶಗಳ ಕೈಮೇಲಾಗುತ್ತದೆ ಎಂದು ಈ ಪ್ರತಿಪಕ್ಷಗಳು ತಮ್ಮ ಜಂಟಿ ಹೇಳಿಕೆಯಲ್ಲಿ ಆಶಿಸಿವೆ.

Donate Janashakthi Media

Leave a Reply

Your email address will not be published. Required fields are marked *