ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟದೊಂದಿಗೆ ಭಾಗಿಯಾಗಿರುವ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ವಿರೋಧ ಪಕ್ಷದ ನಾಯಕರು ಜಂತರ್ ಮಂತರ್ ನಲ್ಲಿ ಪ್ರತಿಭಟನಾ ನಿರತ ರೈತರೊಂದಿಗೆ ‘ಕಿಸಾನ್ ಸಂಸದ್’ನಲ್ಲಿ ಭಾಗವಹಿಸಿ ರೈತರ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದರು.
ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ವಿರೋಧ ಪಕ್ಷದ ನಾಯಕರ ಮೊದಲ ಸಂಘಟಿತ ಭೇಟಿ ಇದಾಗಿದೆ. ರೈತರ ಪ್ರತಿಭಟನೆಗೆ 14 ಪ್ರತಿಪಕ್ಷಗಳ ಭಾಗವಹಿಸಿದ್ದವು.
ಜುಲೈ 22 ರಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಸುಮಾರು 200 ರೈತರು ‘ಕಿಸಾನ್ ಸಂಸದ್’ (ರೈತರ ಸಂಸತ್) ಗಾಗಿ ಜಂತರ್ ಮಂತರ್ ಭಾಗಿಯಾಗಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಕೋರಿ ರೈತರು ದೆಹಲಿಯ ಗಡಿಭಾಗದಲ್ಲಿ ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಕಳೆದ ವರ್ಷ ಕೇಂದ್ರದ ಬಿಜೆಪಿ ಸರಕಾರವು ಜಾರಿಗೆ ತಂದ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂದರು ಸಂಸತ್‌ನಿಂದ ಪ್ರತಿಭಟನಾ ಸ್ಥಳಕ್ಕೆ ಬಸ್ನಲ್ಲಿ ಬಂದರು. ಸಂಸತ್ನಲ್ಲಿ ರೈತ ಪ್ರತಿಭಟನೆ, ಪೆಗಾಸಸ್ ಬೇಹುಗಾರಿಕೆ ವಿವಾದದಂತಹ ಸಮಸ್ಯೆಗಳನ್ನು ಚರ್ಚಿಸುವಂತೆ ಪ್ರತಿಪಕ್ಷಗಳ ಬೇಡಿಕೆ ಇಟ್ಟು ಉಭಯ ಸದನದ ಅಧಿವೇಶನದ ಸಂದರ್ಭದಲ್ಲಿ ಪದೇಪದೇ ಪ್ರಸ್ತಾಪಿಸುತ್ತಿದೆ.
ರೈತರ ಪರ ಪ್ರತಿಭಟನೆಯಲ್ಲಿ ಭಾಗಿಯಾದ ಪ್ರತಿಪಕ್ಷ ನಾಯಕರು ಕೇಂದ್ರ ಸರ್ಕಾರದ ವಿವಾದಿತ ಕಾಯ್ದೆಗಳ ವಿರುದ್ಧ ಅವಿಶ್ವಾಸ ಮಂಡಿಸಿದರು. ರೈತರ ಹೋರಾಟ, ಕೇಂದ್ರ ಸರ್ಕಾರದ ಹಠದ ಜೊತೆಗೆ ಪ್ರತಿಪಕ್ಷಗಳು ಪ್ರತಿಭಟನೆಗೆ ಸಾಥ್ ನೀಡಿವೆ.
2020ರ ನವೆಂಬರ್ 26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ. ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಧಾನಿಯ ಮೂರು ಗಡಿಗಳಲ್ಲಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.