ಗುರುರಾಜ ದೇಸಾಯಿ
16 ನೇ ವಿಧಾನಸಭಾ ಅಧಿವೇಶನ ಸೋಮವಾರದಿಂದ ಆರಂಭವಾಗಿದೆ. ವಿರೋಧ ಪಕ್ಷದ ನಾಯಕ ಇಲ್ಲದೆ ಚರ್ಚೆಗಳು ಸಪ್ಪೆಯಾಗಿ ನಡೆಯುತ್ತಿವೆ. ವಿರೋಧ ಪಕ್ಷದ ನಾಯಕ ಯಾರು ಮತ್ತು ಏಕೆ ವಿಳಂಬವಾಗುತ್ತಿದೆ ಎಂಬ ನಿರ್ಣಾಯಕ ಪ್ರಶ್ನೆಗಳು ಬಿಜೆಪಿ ಸುತ್ತ ಸುಳಿದಾಡುತ್ತಲೇ ಇವೆ. 30 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ವಿಪಕ್ಷ ನಾಯಕನಿಲ್ಲದೆ ನಡೆಯುತ್ತಿರುವ ಅಧಿವೇಶ ಎಂಬ ಕುಖ್ಯಾತಿ ಪಡೆದಿದೆ.
ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ರಾಜ್ಯ ಬಿಜೆಪಿ ಪ್ರತಿಭಟಿಸುತ್ತಿದೆ. ಆರೋಪ ಪ್ರತ್ಯಾರೋಪಗಳ ಮೂಲಕ ಸದನದ ಬಾವಿಗಿಳಿದು ಗದ್ದಲ ಮಾಡುತ್ತಿದೆ. ನಾವಿಕನಿಲ್ಲದ ದೋಣಿಯಂತಾಗಿರುವ ಬಿಜೆಪಿಯ ಶಾಸಕರು ಮನಸ್ಸಿಗೆ ತಿಳಿದಂತೆ ಕೂಗುತ್ತಿದ್ದರು. ಹೊಸದಾಗಿ ಆಯ್ಕೆಯಾದ ಶಾಸಕರು ಸದನದಲ್ಲಿ ಗದ್ದಲ್ಲ ನಡೆಸಿದ್ದಕ್ಕೆ ಹೆಮ್ಮೆ ಪಟ್ಟುಕೊಂಡು ಸಂಭ್ರಮಿಸುತ್ತಿದ್ದರು. ಕೂಗಾಡುತ್ತಿದ್ದ ತಮ್ಮ ಶಾಸಕರನ್ನು ಸಮಾಧಾನ ಪಡಿಸಬಹುದಾದ ನಾಯಕನ ಕೊರತೆ ಎದ್ದು ಕಾಣಿಸಿತು.
ಚುನಾವಣೆ ಫಲಿತಾಂಶ ಘೋಷಣೆಯಾಗಿ ಎರಡು ತಿಂಗಳಾಗುತ್ತಾ ಬರುತ್ತಿದೆ. ಬಿಜೆಪಿಗೆ ವಿರೋಧ ಪಕ್ಷ ಸ್ಥಾನ ಖಚಿತವಾಗುತ್ತಿದ್ದಂತೆ ವಿಪಕ್ಷ ಸ್ಥಾನವನ್ನು ಯಾರು ಅಲಂಕರಿಸಬೇಕು ಎಂಬುದರ ಬಗ್ಗೆ ಕುತೂಹಲ ಎದ್ದಿತ್ತು. ಅತ್ತ ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕ ಯಾರಾಗಬೇಕೆಂದು ತಿಂಗಳಿನಿಂದಲೂ ಚರ್ಚಿಸುತ್ತಲೆ ಇದ್ದಾರೆ. ಈಗ ಅದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಆರಂಭದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಕೇಳಿ ಬಂದಿತು. ಅವರೊಂದಿಗೆ ವಿ.ಸುನೀಲ್ ಕುಮಾರ್, ಆರ್.ಅಶೋಕ್, ಆರಗ ಜ್ಞಾನೇಂದ್ರ ಸೇರಿದಂತೆ ಕೆಲವು ವಿರೋಧ ಪಕ್ಷದ ನಾಯಕರ ರೇಸಿನಲ್ಲಿದ್ದರು. ಈ ಮಧ್ಯೆ ಬಿಜೆಪಿ ವಿಧಾನಸಭೆ ಅಧಿವೇಶನ ಮೊದಲೇ ವಿರೋಧ ಪಕ್ಷದ ನಾಯಕರ ನೇಮಕ ನಡೆಯಲಿದೆ ಎಂದು ಹೇಳಿತ್ತು. ಅಧಿವೇಶನ ಆರಂಭವಾಗಿ ಮೂರು ದಿನ ಕಳೆದರೂ ಹೆಸರು ಮಾತ್ರ ಘೋಷಣೆಯಾಗಿಲ್ಲ.
ಯಡಿಯೂರಪ್ಪ ದೆಹಲಿಗೆ ಹೋಗಿದ್ದು ಯಾಕೆ: ಇನ್ನೂ ಈ ಎಲ್ಲ ಬೆಳವಣಿಗೆ ನಡುವೆ ಯಡಿಯೂರಪ್ಪ ಒಬ್ಬರೆ ದೆಹಲಿಗೆ ಹೋಗಿ ಹೈಕಮಾಂಡ್ ಬಳಿ ಕುಳಿತು ವಿಪಕ್ಷ ನಾಯಕ ಯಾರಾದರೆ ಸೂಕ್ತ? 2024 ರ ಲೋಕಸಭೆಯ ಚುನಾವಣೆಯ ಲಾಭ ನಷ್ಟದ ಬಗ್ಗೆ ಚರ್ಚಿಸಿ , ನಗುತ್ತಲೆ ವಾಪಸ್ ಬಂದಿದ್ದಾರೆ. ಒಂದೇ ಏಟಿಗೆ ಯಡಿಯೂರಪ್ಪ ಎರಡು ಹುದ್ದೆ ಭೇಟೆಯಾಡಿದ್ದಾರೆ ಎಂದು ಬಿಜೆಪಿಯ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್. ಅಶೋಕ್ ವಿಪಕ್ಷನಾಯಕನಾದರೆ ಒಳ್ಳೆಯದು ಎಂದು ಹೈಕಮಾಂಡ್ ಬಳಿ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ವಿಪಕ್ಷ ನಾಯಕನಾದರೆ, ಚುನಾವಣೆಯಲ್ಲಿ ಬಿಟ್ಟುಹೋದ ಲಿಂಗಾಯತ ಮತಗಳನ್ನು ಮತ್ತೆ ಪಡೆಯಬಹುದು ಎಂಬ ಲೆಕ್ಕಾಚಾರ ಅವರು ನೀಡಿದ್ದಾರೆ. ಆರ್. ಅಶೋಕ್ ಅವರನ್ನು ಮಾಡಿದರೆ ಒಕ್ಕಲಿಗರ ಮತಗಳು ಗಟ್ಟಿಗೊಳ್ಳುವುದರ ಜೊತೆಗೆ, ಜೆಡಿಎಸ್ ಜತೆಗಿನ ಸಂಬಂಧವನ್ನು ಗಟ್ಟಿಗೊಳಿಸಬಹುದು. ಹಾಗೂ ಜೆಡಿಎಸ್‌ನಿಂದ ಕೈಬಿಟ್ಟಿರುವ ಒಕ್ಕಲಿಗರು ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗಟ್ಟಿಗೊಳಿಸಬಹುದು ಎಂಬ ಲೆಕ್ಕಾಚಾರ ಇದೆ.
ಅಂತಿಮವಾಗಿ ಬಸವರಾಜ ಬೊಮ್ಮಾಯಿ ವಿಪಕ್ಷ ನಾಯಕರಾಗಲಿ, ಶೋಭಾ ಕರಂದ್ಲಾಜೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಲಿ. ಲಿಂಗಾಯತ – ಒಕ್ಕಲಿಗ ಸಮತೋಲಿತ ಕೆಲಸ ರಾಜಕೀಯವಾಗಿ ಲಾಭವಾಗಬಹುದು ಎಂದು ಯಡಿಯೂರಪ್ಪ ಇವರಿಬ್ಬರ ಹೆಸರನ್ನು ಸೂಚಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸುನೀಲ್ ಕುಮಾರ್, ಬಸವರಾಜ ಯತ್ನಾಳ್, ಆರಗ ಜ್ಞಾನೇಂದ್ರ ವಿಪಕ್ಷ ನಾಯಕನಾದರೆ ಪಕ್ಷಕ್ಕೆ ನಷ್ಟ ಎಂದು ವಿವರಣೆ ನೀಡಿರುವುದು ಬಿಎಲ್ ಸಂತೋಷ್ & ಕೇಂದ್ರ ಸಚಿವ ಜೋಶಿ ಬಣಕ್ಕೆ ಯಡಿಯೂರಪ್ಪ ನಡೆ ಬಿಸಿತುಪ್ಪವಾಗಿದೆ. ಇದು ಬಿಜೆಪಿಯಲ್ಲಿ ಬಣ ರಾಜಕೀಯ ಜೀವಂತ ಇರುವುದಕ್ಕೆ ಹಿಡಿದ ಕನ್ನಡಿಯಾಗಿದೆ.
ಹಿಂದುತ್ವವಾದಿ ವಿಪಕ್ಷ ನಾಯಕನಾಗಲಿ : ಯಾವುದೇ ಹೊಂದಾಣಿಕೆಗೆ ಬಗ್ಗದ, ಮುಲಾಜಿಗೊಳಗಾಗದ ಹಿಂದುತ್ವವಾದಿ ವ್ಯಕ್ತಿಗಳು ಪ್ರತಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆಯಾಗಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪಟ್ಟು ಹಿಡಿದಿದ್ದಾರೆ. ಯತ್ನಾಳ ಪರವಾಗಿ ಬ್ಯಾಟ್ ಬೀಸಿರುವ ಈಶ್ವರಪ್ಪ, ತಮಗೂ ಯಡಿಯೂರಪ್ಪನವರ ಸಂಬಂಧ ಹಳಸಿದೆ ಎಂಬುದನ್ನು ಬಹಿರಂಗ ಗೊಳಿಸಿದ್ದಾರೆ.
ಚುನಾವಣೆಯಲ್ಲಿ ನಾವು ಅಂಕಿ ಸಂಖ್ಯೆಯಲ್ಲಿ ಸೋತಿದ್ದೇವೆಯೇ ಹೊರತು ಶೇಕಡಾವಾರಿನಲ್ಲಿ ಅಲ್ಲ. ಕಳೆದ ಬಾರಿ ಶೇ.36ರಷ್ಟು ಮತದಾನ ಪ್ರಮಾಣ ತೆಗೆದುಕೊಂಡಿದ್ದರೆ, ಈ ಬಾರಿ ಶೇ.36.6ರಷ್ಟುಮತದಾನ ಪ್ರಮಾಣವನ್ನು ತೆಗೆದುಕೊಂಡಿದ್ದೇವೆ. ಇಡೀ ಹಿಂದುತ್ವದ ಮೂಲಕ ಬಿಜೆಪಿ ಮತ್ತು ಸಂಘಟನೆ ಬೆಳೆದಿದೆ. ಇದರ ಆಧಾರದ ಮೇಲೆಯೇ ಪ್ರತಿಪಕ್ಷ ನಾಯಕನ ಆಯ್ಕೆ ಆಗಬೇಕು ಎಂದು ಹೈಕಮಾಂಡ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆದರೆ ಇವರ ಮಾತನ್ನು ಹೈಕಮಾಂಡ್ ನಿರಾಕರಿಸಿದೆ ಎಂದು ತಿಳಿದು ಬಂದಿದೆ.
66 ಶಾಸಕರಲ್ಲಿ ಅರ್ಹರಿಲ್ಲವೇ? : ‘‘ವಿಧಾನಸಭೆ ಚುನಾವಣೆ ಸೋಲಿನ ಹತಾಶೆಯಲ್ಲಿರುವ ಬಿಜೆಪಿಗೆ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲೂ ಆಸಕ್ತಿ ಇಲ್ಲ. ಬಿಜೆಪಿಯ 66 ಶಾಸಕರಲ್ಲಿಪ್ರತಿಪಕ್ಷ ನಾಯಕರಾಗುವ ಅರ್ಹತೆ ಮತ್ತು ಯೋಗ್ಯತೆ ಯಾರೊಬ್ಬರಿಗೂ ಇಲ್ಲವೇ?,’’ ಎಂದು ಕಾಂಗ್ರೆಸ್ ಬಿಜೆಪಿಯ ಕಾಲೆಳೆದಿತ್ತು. ವಿರೋಧ ಪಕ್ಷದ ನಾಯಕನ ಹುದ್ದೆಯನ್ನೂ ಮಾರಾಟಕ್ಕೆ ಇಡಲಾಗಿದೆಯೇ?. ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ. ಫಿಕ್ಸ್ ಮಾಡಲಾಗಿತ್ತು. ಈಗ ವಿರೋಧ ಪಕ್ಷದ ನಾಯಕನ ಹುದ್ದೆ ಎಷ್ಟಕ್ಕೆ ಬಿಕರಿಯಾಗುತ್ತಿದೆ? ಆ ಚೌಕಾಶಿ ವ್ಯವಹಾರಕ್ಕಾಗಿಯೇ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆಯೇ? ಇದಕ್ಕೆ ಬಿಜೆಪಿ ಉತ್ತರಿಸಬೇಕು ಎಂದು ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆ ಗೈದಿತ್ತು.
ನಮ್ಮ ಗ್ಯಾರಂಟಿ ಯೋಜನೆಗಳ ಜಾರಿಯೂ ಆಯ್ತು. ಸದನವೂ ಪ್ರಾರಂಭವಾಯ್ತು. ಎಲ್ಲಿ ನಿಮ್ಮ ವಿರೋಧ ಪಕ್ಷದ ನಾಯಕ? ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಗ್ಯಾರಂಟಿಯನ್ನೂ ಕೊಡಲಾಗುತ್ತಿಲ್ಲ ಎಂದರೆ ಎಂತಹ ಹಿನಾಯ ಸ್ಥಿತಿಯಲ್ಲಿದೆ! ಎಂದು ಕರ್ನಾಟಕ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು. ಇರುವ 66 ಜನರಲ್ಲಿ ಆ ಸಮರ್ಥ ನಾಯಕ ಯಾರು ಇಲ್ಲವೆ? ಎಂಬ ಪ್ರಶ್ನೆಗೆ ಉತ್ತರ ಯಾವಾಗ ಸಿಗಬಹುದು ಎಂಬುದು ಕುತೂಹಲ ಕೆರಳಿಸಿದೆ.
ಮೌನ ಮುರಿಯದ ಹೈಕಮಾಂಡ್ : ರಾಜ್ಯದ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿರುವ ಬಿಜೆಪಿ ಹೈಕಮಾಂಡ್‌ಗೆ ವಿಪಕ್ಷ ನಾಯಕನ ಆಯ್ಕೆ ಬಿಸಿ ತುಪ್ಪವಾಗಿದೆ. ಈಗಾಗಲೆ ಹೈಕಮಾಂಡ್ ವಿರುದ್ದ ರಾಜ್ಯ ಬಿಜೆಪಿ ನಾಯಕರು, ಜಿಲ್ಲಾಧ್ಯಕ್ಷರುಗಳು ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ. ಚುನಾವಣೆಯಲ್ಲಿ ಟಿಕೆಟ್ ಆಯ್ಕೆ ಸೇರಿ ಎಲ್ಲವನ್ನೂ ವರಿಷ್ಠರೇ ತೀರ್ಮಾನ ಮಾಡಿದ್ದರು. ಆದರೂ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಾಣಬೇಕಾಯ್ತು. ಹೀಗಾಗಿ ಸೋಲಿನ ನಂತರ ವರಿಷ್ಠರ ನಿರ್ಧಾರಗಳಿಗೆ ರಾಜ್ಯ ನಾಯಕರು ಬೇಸರಗೊಂಡಿದ್ದರು. ಇದೀಗ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ವಿಷಯದಲ್ಲೂ ನಾಯಕರು ಬೇಸರ ಹೊರಹಾಕುತ್ತಿದ್ದಾರೆ, ಹಾಗಾಗಿ ಆಯ್ಕೆ ವಿಚಾರ ಭಾರೀ ಕಗ್ಗಂಟಾಗಿ ಪರಿಣಮಿಸಿದೆ.
ಈಗಾಗಲೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ, ವಿಪಕ್ಷ ಸ್ಥಾನಕ್ಕೆ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತವ್ಯಕ್ತಿಯನ್ನು ಆಯ್ಕೆ ಮಾಡುವಲ್ಲಿಯೂ ಸೋಲುತ್ತಿದೆ. ಇಂದು ನಾಳೆ ಘೋಷಿಸುತ್ತೇವೆ ಎಂದು ಸಮಯ ತಳ್ಳಿ ಹಾಕುತ್ತಿರುವ ಬಿಜೆಪಿ ಹೈಕಮಾಂಡ್ ಕರ್ನಾಟಕದ ಬಗ್ಗೆ ಆಸಕ್ತಿ ಕಳೆದುಕೊಂಡಂತೆ ಕಾಣುತ್ತಿದೆ?