ಎಸ್.ವೈ. ಗುರುಶಾಂತ
ತನ್ನ ಸೋಲಿನ ವಸ್ತುನಿಷ್ಠ ಕಾರಣಗಳನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಬಿಜೆಪಿ ಇದೀಗ ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿದೆ. ಬಿಜೆಪಿ-ಜೆಡಿಎಸ್ ಪಕ್ಷಗಳ ನಡುವಿನ ಮೈತ್ರಿ ಏರ್ಪಡುವ ಮಾತುಕತೆಗಳು ಬಿರುಸಾಗಿ ಸಾಗಿದ್ದು ಅಧಿಕೃತ ವಿರೋಧ ಪಕ್ಷದ ನಾಯಕನ ಆಯ್ಕೆ ಅವು ಅಂತಿಮಗೊಂಡ ಬಳಿಕವೇ?!
ಕರ್ನಾಟಕದ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಬರೋಬ್ಬರಿ ಎರಡು ತಿಂಗಳು ಸರಿದವು. ಭರ್ಜರಿ ಸದ್ದು ಮಾಡಿದ ವಿಧಾನಸಭೆಯ ಅಧಿವೇಶನ ಸಮಾರೋಪಗೊಳ್ಳುತ್ತಿದೆ. ಆದರೆ ರಾಷ್ಟ್ರೀಯ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ ಇನ್ನೂ ವಿರೋಧ ಪಕ್ಷದ ತನ್ನ ನಾಯಕನನ್ನು ಆರಿಸಿಕೊಳ್ಳಲಾಗಲಿಲ್ಲ. ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ಬಜೆಟ್ ನಂತಹ ಕಲಾಪ ಮುಗಿದೇ ಹೋದದ್ದು ವಿಶೇಷ ಮತ್ತು ವಿಚಿತ್ರ.
ಹೀಗೇಕಾಯಿತು? ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳುವ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ಯಾಕೆ ವಿಳಂಬ ನೀತಿ ಅನುಸರಿಸಿತು? ಎನ್ನುವ ಪ್ರಶ್ನೆಗಳು ಈ ಅವಧಿಯ ಉದ್ದಕ್ಕೂ ಕೇಳಿ ಬಂದವು. ಹಾಗೆ ನೋಡಿದರೆ ಬಿಜೆಪಿ ತನ್ನ ದಯನೀಯ ಸೋಲಿನ ಕುರಿತಾದ ಚುನಾವಣಾ ವಿರ‍್ಶೆಯನ್ನು ಇನ್ನು ಪರ‍್ಣಗೊಳಿಸಲಿಲ್ಲ. ಚುನಾವಣಾ ವಿಮರ್ಶೆಗೆಂದು ನಾಯಕರು ಸೇರಿದರಾದರೂ ಯಾವ ಮಹತ್ವದ ಅಂಶಗಳನ್ನು ಗುರುತಿಸಲಿಲ್ಲ. ಇನ್ನೇನು ವಿರೋಧ ಪಕ್ಷಕ್ಕೆ ನಾಯಕರ ಆಯ್ಕೆಯಾಗಬೇಕು ಎನ್ನುವ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ಬಿಜೆಪಿ ಒಳಗಿನ ಬಣಗಳ ಬಡಿದಾಟ ತಾರಕಕ್ಕೇರಿತು! ಇದರ ಜೊತೆಗೆ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರ ಆಯ್ಕೆಯ ಅನಿವರ‍್ಯತೆಯೂ ಜೊತೆಗೂಡಿ ಬಿಜೆಪಿ ಒಳ ಹೊರಗಿನ ವೈರುಧ್ಯ ಮತ್ತು ವೈಫಲ್ಯಗಳಿಗೆ ಇನ್ನೊಂದು ಪ್ರತಿರೂಪ ಪಡೆದುಕೊಂಡಿತು. ವಿಧಾನಸಭೆಯ ಕಲಾಪ ಆರಂಭಕ್ಕೆ ಮೊದಲು, ವಿರೋಧ ಪಕ್ಷದ ನಾಯಕನ ಆಯ್ಕೆಯ ಪರ‍್ವದಲ್ಲಿ ಬಣಗಳ ಬಡಿದಾಟದಲ್ಲಿನ ಬಿಜೆಪಿ ಹೈಕಮಾಂಡ್ ಮತ್ತು ಆರ್.ಎಸ್.ಎಸ್. ನ ಪಾತ್ರ ಇಲ್ಲದಿಲ್ಲ. ಆಯ್ಕೆಯ ಸಂರ‍್ಭವನ್ನು ಬಳಸಿಕೊಂಡ, ಸೋಲಿನ ಸೂತ್ರಧಾರಿ ಬಿ.ಎಲ್.ಸಂತೋಷ್ ಬಣ ಅಥವಾ ಆರ್ ಎಸ್ ಎಸ್ ಬಣ ಪರೋಕ್ಷವಾಗಿ ಯಡಿಯೂರಪ್ಪನವರ ಮೇಲೆ ವಾಗ್ದಾಳಿಯನ್ನು ಕೇಂದ್ರೀಕರಿಸಿತು.
ಅದಕ್ಕೆ ಬಳಸಿದ್ದು ಯುವ ಸಂಸದರನ್ನು. ಮೈಸೂರು ಸಂಸದ ಪ್ರತಾಪ್ ಸಿಂಹ, ಸಿ.ಟಿ.ರವಿ ಅಂತವರು ಬಿಜೆಪಿಯ ಕೆಲವು ನಾಯಕರ ಹೊಂದಾಣಿಕೆಯ ರಾಜಕೀಯದ ಬಗ್ಗೆ ಬಹಿರಂಗವಾಗಿ ಟೀಕಿಸಿದರು. ಅವರ ಮಾತುಗಳ ವೈಖರಿ, ಗುರಿ ನೇರವಾಗಿ ಯಡಿಯೂರಪ್ಪನವರನ್ನು ಮತ್ತು ಅವರ ಬಣವನ್ನೇ ನಿರ್ದೇಶಿಸಿತು. ಈ ವಿಷಯದ ಸುತ್ತ ಸದಾನಂದ ಗೌಡರು, ಬೊಮ್ಮಾಯಿ ಮುಂತಾದ ಹಿರಿಯ ನಾಯಕರು ಪ್ರತಿಕ್ರಿಯಿಸಿ ಅದಕ್ಕೊಂದು ಹೆಚ್ಚಿನ ಪ್ರಾಮುಖ್ಯತೆಯನ್ನು ತಂದರು. ಈ ಎಲ್ಲಾ ಕಸರತ್ತುಗಳು ತಮ್ಮ ವಿರುದ್ಧವೇ ನಿರ್ದೇಶಿಸಿತವಾಗಿರುವುದನ್ನು ಅರಿಯಲಾರದಷ್ಟು ಮುಗ್ಧರಲ್ಲ ಬಿ.ಎಸ್. ವೈ.ಬಣ. ಸಂತೋಷ್ ತಂತ್ರಕ್ಕೆ ಪ್ರತ್ಯುತ್ತರವಾಗಿ ಮಾಜಿ ಸಚಿವ ರೇಣುಕಾಚರ‍್ಯ ರವರ ಮೂಲಕ ದಿನ ಬಿಟ್ಟು ದಿನ ಹೀಗೆ ಐದಾರು ದಿನಗಳ ಕಾಲ ಓತೋಪ್ರೋತವಾಗಿ ಬಿ.ಎಸ್.ವೈ. ಅವರನ್ನು ಸರ‍್ಥಿಸಿಕೊಳ್ಳುವ ಮತ್ತು ಸಂತೋಷ್ ಹಾಗೂ ಆ ಬಣದ ಮೇಲೆ ವಾಗ್ದಾಳಿ ನಡೆಸಿ ಸೋಲಿನ ಹೊಣೆ ಅವರದ್ದೇ ಎಂದು ಅಬ್ಬರಿಸುವ ಪ್ರಸಂಗವೂ ಜರುಗಿತು. ಇದರ ನಡುವೆ ವಿಧಾನಸಭೆಯ ಅಧಿವೇಶನ ಹತ್ತಿರವಾಗುತ್ತಿರುವಂತೆ ಒಂದು ಸುತ್ತಿನ ಬಡಿದಾಟ ವಿರಾಮ ಪಡೆದುಕೊಂಡು ವಿರೋಧ ಪಕ್ಷದ ನಾಯಕನ ಸುತ್ತ ಒಂದಿಷ್ಟು ಚರ್ಚೆಗಳು ನಡೆದದ್ದು, ಒಮ್ಮತ ಮೂಡದೇ, ವಿರೋಧ ಪಕ್ಷದ ನಾಯಕ ಇಲ್ಲದೆ ಕಲಾಪದಲ್ಲಿ ಬಿಜೆಪಿ ಪಕ್ಷ ಭಾಗವಹಿಸಿದ್ದು ಅದರ ಚಿಂತಾಜನಕ ಪರಿಸ್ಥಿತಿಗೆ ಹಿಡಿದ ಕನ್ನಡಿ.
ಇಡೀ ಪ್ರಸಂಗದಲ್ಲಿ ಬಿಜೆಪಿಯ ಹೈಕಮಾಂಡ್ ಮತ್ತು ರಾಜ್ಯದ ನಾಯಕತ್ವ ತಮ್ಮ ಸೋಲಿನ ವಸ್ತುನಿಷ್ಠ ಕಾರಣಗಳನ್ನು ಕಂಡುಕೊಳ್ಳುವ, ಹೊಣೆ ಹೊತ್ತುಕೊಳ್ಳುವ ಯಾವ ಸೂಚನೆಯೂ ಇಲ್ಲವಾಯಿತು. ಕರ್ನಾಟಕದಲ್ಲಿ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಸೋತ ಹಿನ್ನೆಲೆ ಕುರಿತಾದಂತೆ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ಸೈದ್ಧಾಂತಿಕ ಪತ್ರಿಕೆ ʼಆರ್ಗನೈಸರ್ʼ ನಲ್ಲಿ ಪ್ರಕಟವಾದ ಸಂಪಾದಕೀಯ (ಮೇ23, 2023) ಅತ್ಯಂತ ಗಮನರ‍್ಹವಾಗಿದೆ. ಅದು ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಸೋಲಿನ ಕಾರಣಗಳನ್ನು ಗುರುತಿಸುವಾಗ ರಾಜ್ಯದ ಪ್ರಾದೇಶಿಕ ನಾಯಕತ್ವದ ನೇತೃತ್ವ ಪ್ರತಿಬಿಂಬಿತವಾಗದೆ ಕೇವಲ ಅಖಿಲ ಭಾರತ ನಾಯಕರಾದ ಮೋದಿ ಮತ್ತು ಅಮಿತ್‌ಶಾ ರಂತಹವರ ವರ್ಚಸ್ಸನ್ನೇ ಅವಲಂಬಿಸಿದ್ದು ಒಂದು ಕಾರಣವೆಂದು ಹೇಳಿದೆ.
‘ಪ್ರಾದೇಶಿಕ ಹಂತದಲ್ಲಿ ಬಲಿಷ್ಠ ನಾಯಕತ್ವ ಮತ್ತು ಅದನ್ನು ಪರಿಣಾಮಕಾರಿಯಾಗಿ ತಲುಪಿಸದ ಹೊರತು ಪ್ರಧಾನಿ ಮೋದಿ ಅವರ ವರ್ಚಸ್ಸು ಹಾಗೂ ಹಿಂದುತ್ವದ ಸೈದ್ಧಾಂತಿಕ ಬೆಸೆಯುವಿಕೆ ಒಂದೇ ಸಾಕಾಗುವುದಿಲ್ಲ’ ಎನ್ನುತ್ತದೆ ಸಂಪಾದಕೀಯ. ಅದೇ ಹೊತ್ತಿನಲ್ಲಿ ‘ರಾಜ್ಯಮಟ್ಟದಲ್ಲಿ ಪರಿಣಾಮಕಾರಿ ಆಡಳಿತ ನಡೆಸಲು ಮೋದಿಯವರ ನಾಯಕತ್ವ ಮತ್ತು ಹಿಂದುತ್ವ ಸಿದ್ಧಾಂತ ಬಿಜೆಪಿಗೆ ಅಮೂಲ್ಯ ಆಸ್ತಿಗಳು ಎನ್ನುವುದರಲ್ಲಿ ಅನುಮಾನವಿಲ್ಲ ಎಂದೂ ಹೇಳುತ್ತದೆ. ‘ರಾಷ್ಟ್ರೀಯ ಕರ‍್ಯಕ್ರಮಗಳ ಮೂಲಕವಾಗಿ ಮತದಾರರನ್ನು ಕ್ರೋಢಿಕರಿಸಲು ಆಡಳಿತ ಪಕ್ಷ ಪ್ರಯತ್ನಿಸಿತು. ಕಾಂಗ್ರೆಸ್ ಪಕ್ಷ ಸ್ಥಳೀಯ ಮಟ್ಟಕ್ಕೆ ಆದಷ್ಟು ಎಲ್ಲವನ್ನೂ ಸೀಮಿತಗೊಳಿಸಲು ಯತ್ನಿಸಿತು’ ಎಂದು ಅವಲೋಕಿಸುತ್ತದೆ ಆರ್ಗನೈಸರ್. ಹಾಗೆಯೇ ಕರ್ನಾಟಕದಲ್ಲಿ ಜಾತಿ ಆಧಾರಿತ ಕ್ರೋಢೀಕರಣದ ಬಗ್ಗೆ ವಿಪರೀತ ಚರ್ಚೆ ನಡೆಯುತ್ತಿದೆ.
ಜಾತಿ ಕ್ರೋಢೀಕರಣದ ವಿಪರೀತತೆ ಪಡೆದಿರುವುದು ಖೇದಕರ’ ಎಂದು ಹೇಳುತ್ತದೆ. ಮತ್ತು ‘ಭಾಷಿಕ ಹಾಗೂ ಧಾರ್ಮಿಕ ಅಸ್ಮಿತೆಯನ್ನು ಓಟುಗಳನ್ನಾಗಿಸುವ ಪ್ರಯತ್ನ ತೆರೆದಿಟ್ಟಿದೆ’ ಎಂದು ಹೇಳುತ್ತದೆ. ಹೀಗೆ ಹೇಳುವ ಮೂಲಕ ಜಾತಿ ಅಸ್ಮಿತತೆಯನ್ನು ಬಳಸಿ (ಸೋಷಿಯಲ್ ಇಂಜನೀಯರಿಂಗ್ ಸಿದ್ಧಾಂತ- ಬಿ.ಎಲ್.ಸಂತೋಷ್ ಪ್ರತಿಪಾದಕ) ಅಧಿಕಾರ ಹಿಡಿಯುವ ತಂತ್ರವನ್ನು ಹೆಣೆದ ಸಂಘ ತಪ್ಪೊಪ್ಪಿಕೊಳ್ಳುತ್ತಿದೆಯೋ ಅಥವಾ ಬೇರೆಯವರ ತಲೆಗೆ ಕಟ್ಟಲು ಯತ್ನಿಸುತ್ತಿದೆಯೋ? ಅಥವಾ ಅಂತರವನ್ನು ಕಾಯ್ದುಕೊಳ್ಳಲು ಬಯಸಿದೆಯೋ?! ಬೊಮ್ಮಾಯಿ ಸರ್ಕಾರದ ಮೇಲೆ ಜನರಿಗಿರುವ ಆಕ್ರೋಶ ಅತೃಪ್ತಿಯನ್ನು ಗುರುತಿಸಿರುವ ಆರ್ಗನೈಸರ್ ಬಿಜೆಪಿಯ ಭ್ರಷ್ಟತೆಯನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದೆ. ‘ಮೋದಿ ಅವರು ಕೇಂದ್ರದಲ್ಲಿ ಅಧಿಕಾರ ನಿಯಂತ್ರಣವನ್ನು ಕೈಗೆ ತೆಗೆದುಕೊಂಡ ಮೇಲೆ ಮೊದಲ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ಭ್ರಷ್ಟಾಚಾರದ ಆರೋಪವನ್ನು ಸರ‍್ಥಿಸಿಕೊಳ್ಳಬೇಕಾಯಿತು’ ಎಂದು ಒಪ್ಪಿಕೊಂಡಿದೆ.
ಇದನ್ನೂ ಓದಿ:ಕರ್ನಾಟಕಕ್ಕೆ ಅಕ್ಕಿ ನಿರಾಕರಿಸುವ ಆಹಾರ ನಿಗಮದ ವಿಲಕ್ಷಣ ತರ್ಕ
ವಿಶೇಷವೆಂದರೆ, ಆರ್.ಎಸ್. ಎಸ್. ನ ನಿರ್ದೇಶನದಂತೆ ಇಡೀ ಚುನಾವಣೆಯ ಹೋರಾಟ ಕರ‍್ಯತಂತ್ರ ರೂಪಿತವಾಗಿತ್ತು. ಮುಂಬರುವ ಸರ್ಕಾರವನ್ನು ಸಂಪೂರ್ಣವಾಗಿ ಆರೆಸ್ಸೆಸ್ ತನ್ನ ಕೈಗೆ ತೆಗೆದುಕೊಳ್ಳಬೇಕು, ಹೇಳಿದಮಾತು ಕೇಳುವ, ದುರ್ಬಲ ಮುಖ್ಯಮಂತ್ರಿ ಇರಬೇಕು ಎನ್ನುವ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ಬಿ.ಎಲ್. ಸಂತೋಷ್ ಅವರ ಮೂಲಕ ಅಭ್ಯರ್ಥಿಗಳ ಆಯ್ಕೆಯನ್ನು ಒಳಗೊಂಡಂತೆ ಚುನಾವಣಾ ತಂತ್ರ, ಎಲ್ಲವನ್ನು ನಿರ್ಧರಿಸಿಯಾಗಿತ್ತು. ಇಷ್ಟು ಪ್ರಮುಖವಾದ ಹೊಣೆಗಾರಿಕೆ ಇರುವ ಆರ್.ಎಸ್.ಎಸ್. ಇದೀಗ ತನ್ನ ಸಂಪಾದಕೀಯದಲ್ಲಿ ಬಿಜೆಪಿಯ ಸೋಲಿನ ಯಾವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಸಿದ್ಧವಿಲ್ಲ. ಬದಲಾಗಿ,ಇವೆಲ್ಲದರಿಂದ ತಾನು ಹೊರ ನಿಂತು ಮೇಲಿಂದನೋಡುವವರಂತೆ, ಗುರುವಿನಂತೆ ಮಾರ್ಗದರ್ಶನ ಮಾಡುವ ಶಕ್ತಿ ಎನ್ನುವ ನಯ ತಂತ್ರಗಾರಿಕೆಯನ್ನು ಅದು ಪ್ರದರ್ಶಿಸಿದೆ ಹಾಗೆ ನೋಡಿದರೆ ಕರ್ನಾಟಕದ ಬಿಜೆಪಿಯ ಎಲ್ಲಾ ಏಳು ಬೀಳುಗಳು ಮತ್ತು ಅದರ ದುರಾಡಳಿತ ಮತ್ತು ಅಟ್ಟಹಾಸಗಳಿಗೆ, ಭ್ರಷ್ಟತೆಗೆ ಹೂರಣ, ಆವರಣವನ್ನು ಮತ್ತು ರಕ್ಷಣೆಯನ್ನು ಒದಗಿಸಿದ್ದು ಇದೇ ಆರ್ ಎಸ್ ಎಸ್! ಫ್ಯಾಸಿಸ್ಟ್ ಹಿಂದುತ್ವದ ಮಾದರಿಯನ್ನು ಕರ್ನಾಟಕದಲ್ಲಿ ರೂಢಿಸಲು ಒತ್ತಾಸೆಯಾಗಿ ನಿಂತು ಜಾರಿಗೊಳಿಸಲು ಇದೇ ಸಂಘ ಪರಿವಾರ ತನ್ನ ಕುಡಿಗಳನ್ನು ಸಕ್ರಿಯವಾಗಿಸಿತು.
ಸಂಘದ ಗಮನ, ನಿರ್ದೇಶನವನ್ನ ಮೀರಿ ಅವೆಲ್ಲಾ ಸಂಭವಿಸಿದವೇ? ಇಲ್ಲ. ಆದರೆ ಈಗ ಅದರಲ್ಲಿ ತನ್ನದೇನು ಹೊಣೆಗಾರಿಕೆ ಇಲ್ಲ ಎನ್ನುವ ಜಾಣತನವನ್ನು ಮತ್ತು ಈ ಸೋಲಿನ ಎಲ್ಲಾ ಹೊಣೆಗಾರಿಕೆಯನ್ನು ಈಗಿರುವ ಆಯ್ದ ಕೆಲ ನಾಯಕರ ಹೆಗಲಿಗೆ ಹೊರಿಸಿ ಪಾರಾಗುವ, ‘ಕೋತಿ ಬೆಣ್ಣೆಯನ್ನು ತಾನೆಲ್ಲಾ ತಿಂದು, ಮೇಕೆ ಮೂತಿಗೆ ಸವರಿತು’ ಎನ್ನುವ ಗಾದೆಯಂತೆ ತನ್ನ ಹಳೇ ಪಾರಂಪರಿಕ ಒಂದು ವಿಧಾನವನ್ನು ಆರ್.ಎಸ್.ಎಸ್. ಅನುಸರಿಸಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರವನ್ನು ಹಿಡಿಯಬೇಕೆಂದರೆ ಪ್ರಾದೇಶಿಕವಾದ ವಿವಿಧ ರಾಜಕೀಯ ಶಕ್ತಿಗಳ ಜೊತೆಯಲ್ಲಿ ಹೊಂದಾಣಿಕೆ ಅಥವಾ ಮೈತ್ರಿಯನ್ನು ಮಾಡಿಕೊಳ್ಳಬೇಕು ಎನ್ನುವ ನಿರ್ದೇಶನ ಇದೆ. ಸಂಘದ ಸಮ್ಮತಿ ಇದ್ದಂತಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪ್ರತೀ ರಾಜ್ಯಗಳಲ್ಲೂ ಅಂತಹ ಕಸರತ್ತನ್ನು ಆರಂಭಿಸಿದ್ದಾರೆ.
ಹೀಗಿರುವಾಗ, ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳದೇ ಇರುವುದಕ್ಕೆ ಮತ್ತೊಂದು ಆಯಾಮವು ಸಿಕ್ಕಿದೆ. ತನ್ನದೇ ಆದ ತಪ್ಪುಗಳಿಂದ, ಸಂದರ್ಭಸಾಧಕ ರಾಜಕಾರಣದಿಂದ ಜನತೆಯಿಂದ ತಿರಸ್ಕೃತ ಗೊಂಡಿರುವ ಜಾತ್ಯಾತೀತ ಜನತಾದಳ ಪಕ್ಷ ಹೇಗಾದರೂ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ಬಿಜೆಪಿಯ ಬಾಲ ಹಿಡಿಯುವ ಸೂಚನೆಗಳು ದಟ್ಟವಾಗಿವೆ. ವಿಧಾನಸಭೆಯ ಕಲಾಪಗಳಲ್ಲಿ ಅದು ಬಹಳಷ್ಟು ನಿಚ್ಚಳವಾಗಿಬಿಜೆಪಿಯ ತಂತ್ರಕ್ಕೆ ಸಾಥ್ ನೀಡಿತು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ದೆಹಲಿಯ ‘ಸೆಂಟ್ರಲ್ ವಿಸ್ತಾ’ ಕಟ್ಟಡದ ಉದ್ಘಾಟನೆಗೆ ಮೋದಿಯವರ ಸಂವಿಧಾನಾತ್ಮಕ ಪರಂಪರೆಯ ವಿರೋಧಿ ನಡೆಯನ್ನು ಸಮರ್ಥಿಸುತ್ತಾ ವಿಮಾನ ಹತ್ತುವಾಗ ಕೊಟ್ಟ ಕಾರಣದಲ್ಲಿ ಮುಂದಿನ ರಾಜಕೀಯ ನಡೆಯ ಸೂಚನೆಯೂ ಇತ್ತು. ಈಗ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜೆ.ಡಿ.ಎಸ್. ನಾಯಕತ್ವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಹೆಜ್ಜೆ ಇರಿಸತೊಡಗಿದೆ. ಈ ದೆಸೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ-ಎನ್.ಡಿ.ಎ. ಯನ್ನು ಪುನಶ್ಚೇತನಗೊಳಿಸಲು ಮತ್ತು ಹೊಸಬರನ್ನು ಸೇರ್ಪಡೆ ಮಾಡಿಕೊಳ್ಳಲು ಚಾಲನೆ ನೀಡಲಾಗಿದೆ. ಅದರಂತೆ ಏನ್.ಡಿ.ಎ. ಯ ಭಾಗವಾಗಲು ಜೆಡಿಎಸ್ ಜೊತೆಯಲ್ಲಿ ಮಾತುಕತೆಗಳು ನಡೆದಿರುವ ಅಂಶಗಳು ಹೊರ ಬಿದ್ದಿವೆ. ಬಿಜೆಪಿ ಪಕ್ಷದ ಜೊತೆಗೆ ಜೆಡಿಎಸ್ ಅನ್ನು ವಿಲೀನಗೊಳಿಸಬೇಕೇ? ಆಗ ಬಿಜೆಪಿಯ ಅಧಿಕೃತ ವಿರೋಧ ಪಕ್ಷದ ನಾಯಕದ ಸ್ಥಾನ ಕುಮಾರಸ್ವಾಮಿಯವರಿಗೆ ನೀಡಲಾಗುವುದು ಎನ್ನುವ ಬಿಜೆಪಿ ನಾಯಕತ್ವದ ಸೂಚನೆಗೆ ಎಚ್ ಡಿ ಕುಮಾರಸ್ವಾಮಿ ಅವರು ಇನ್ನೂ ಒಪ್ಪಿಲ್ಲವಂತೆ.
ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಿಜೆಪಿಯ ಜೊತೆಯಲ್ಲಿ ಸೇರಿದರೆ ಮುಂಬರುವ ವಿಧಾನ ಲೋಕಸಭಾ ಚುನಾವಣೆಯಲ್ಲಿ ಒಂದಿಷ್ಟು ಸ್ಥಾನಗಳನ್ನ ಪಡೆಯಬಹುದು. ಅದೇ ರೀತಿ ಬಿಜೆಪಿಯೂ ಕೂಡ ಲಾಭವನ್ನು ಪಡೆಯಬಹುದು ಎನ್ನುವ ಲೆಕ್ಕಾಚಾರ ಅವರದಂತೆ! ಪಕ್ಷವನ್ನು ವಿಲೀನಗೊಳಿಸದೇ ಎನ್ ಡಿ ಎ ಭಾಗವಾದಲ್ಲಿ ಈಗ ಕೇಂದ್ರದ ಮಂತ್ರಿಗಳನ್ನಾಗಿ ತಮ್ಮನ್ನು ಮಾಡಬೇಕು ಎಂಬ ಬೇಡಿಕೆಯನ್ನು ಜೆಡಿಎಸ್ ನಾಯಕರು ಇಟ್ಟಿದ್ದಾರಂತೆ. ಇವೆಲ್ಲವೂ ಇದೇ ಜುಲೈ 18, 2023ರಂದು ಸೇರಲಿರುವ ಎನ್.ಡಿ.ಎ. ಮೈತ್ರಿಕೂಟದ ಸಭೆಗೆ ಕುಮಾರಸ್ವಾಮಿಯವರಿಗೆ ಆಹ್ವಾನ ಬರುವುದು, ಬಂದ ನಂತರ ಅವರು ಅದರಲ್ಲಿ ಭಾಗವಹಿಸುವರೇ ಎನ್ನುವುದನ್ನು ಆಧರಿಸಿ ಮುಂದಿನ ಬೆಳವಣಿಗೆಗಳನ್ನು ಕಾಣಬಹುದು. ಹಾಗೆಯೇ ಬಳಿಕವೇ ಅದನದನು ಹೊಂದಿಕೊಂಡು ತನ್ನ ಶಾಂಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನೂ ಬಿಜೆಪಿ ಮಾಡಿಕೊಳ್ಳಲಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಕರ್ನಾಟಕ ರಾಜ್ಯದಲ್ಲಿ ಮೂರನೆಯ ರಾಜಕೀಯ ಶಕ್ತಿಗೆ ಇದ್ದ ಒಂದು ಅವಕಾಶ ಅದರಲ್ಲೂ ವಿಶೇಷವಾಗಿ ಜಾತ್ಯಾತೀತ ಜನತಾದಳಕ್ಕೆ ಇದ್ದ ಒಂದು ಸ್ಥಾನವನ್ನು ಅದು ಈಗ ಬಿಟ್ಟುಕೊಡಲು ಹೊರಟಿದೆ. ಅಂದರೆ ಅಧಿಕಾರಕ್ಕಾಗಿ ಎಂತಹ ರಾಜಿಗೂ ಸಿದ್ಧ ಎಂಬ ನಿರ್ಧಾರ ಕೈಗೊಂಡಿದೆ.
ಕಾಂಗ್ರೆಸ್ ವಿರುದ್ಧದ ಪ್ರರ್ಯಾಯ ಶಕ್ತಿಯಾಗಿ ಇದ್ದ ಜನತಾಪಕ್ಷ, ಜನತಾದಳ, ಅಥವಾ ಜನತಾ ಪರಿವಾರವನ್ನು ಬಿಜೆಪಿ ಸಖ್ಯತೆಯ ಮೂಲಕವಾಗಿ ಹೇಗೆ ನುಂಗಿ ನೊಣೆಯಿತು ಎನ್ನುವುದು ಗೊತ್ತಿರುವ ಸಂಗತಿಯೇ. ಈಗಲೂ ಜಾತ್ಯಾತೀತ ಜನತಾದಳದ ನಾಯಕರ ತೀರ್ಮಾನ ಬಿಜೆಪಿ ಜೊತೆಗಿನ ಯಾವುದೇ ರೀತಿಯ ರಾಜಕೀಯ ಸಂಬಂಧ ಅದಕ್ಕೆ ಸರ್ವ ನಾಶದ ‘ದೃತರಾಷ್ಟ್ರ ಆಲಿಂಗನ’ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕಾಂಗ್ರೆಸ್ ಬಿಜೆಪಿ ಎಂತಹ ಎರಡು ಪಕ್ಷಗಳ ನಡುವಿನ ರಾಜಕೀಯ ಕ್ರೋಢೀಕರಣವು ಭವಿಷ್ಯತ್ತಿನ ಭಾರತಕ್ಕೆ ಅತ್ಯಂತ ದುರ್ದಿನಗಳು. ಇದು ಎಚ್.ಡಿ. ಕುಮಾರಸ್ವಾಮಿ ಅಥವಾ ದೇವೇಗೌಡರು ಮತ್ತು ಸಿದ್ದರಾಮಯ್ಯನವರ ನಡುವಿನ ಸೇಡು ಸೆಡವಿನ ರಾಜಕಾರಣ ಎನ್ನುವುದಕ್ಕಿಂತ ಹೆಚ್ಚಿನ ಪರಿಣಾಮ ಬೀರಬಲ್ಲದು.