ಇಂದೋರ್: ಕಾಲೇಜುಗಳಲ್ಲಿ ಸೀನಿಯರ್ಗಳು ಜೂನಿಯರ್ ವಿದ್ಯಾರ್ಥಿಗಳನ್ನು ರ್ಯಾಗಿಂಗ್ ಮಾಡುವುದು ಸಹಜ. ಆದರೆ, ಅದು ಅತಿರೇಕವಾದಾಗ ಪ್ರಾಣಾಪಾಯಗಳು ಸಂಭವಿಸಿವೆ. ಇದೇ ರೀತಿ ಮಧ್ಯಪ್ರದೇಶದ ಇಂದೋರ್ನ ಎಂಜಿಎಂ ವೈದ್ಯಕೀಯ ಕಾಲೇಜಿನಲ್ಲಿ ರ್ಯಾಂಗಿಂಗ್ನಿಂದಾಗಿ ವಿದ್ಯಾರ್ಥಿನಿಯರು ತೀವ್ರ ಬೇಸತ್ತಿದ್ದರು. ಇದನ್ನು ಮಟ್ಟಹಾಕಲು ಪೊಲೀಸರು ಮಾಡಿದ ಐಡಿಯಾ ದೇಶದ ಗಮನ ಸೆಳೆದಿದೆ.
24 ವರ್ಷದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಶಾಲಿನಿ ಚೌಹಾಣ್ ಎನ್ನುವರು ಬರೋಬ್ಬರಿ 3 ತಿಂಗಳು ವಿದ್ಯಾರ್ಥಿಯಂತೆ ನಟಿಸಿ ಕಾಲೇಜಿನಲ್ಲಿ ನಡೆಯುತ್ತಿದ್ದ ರ್ಯಾಗಿಂಗ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಲಿನಿ ಅವರ ಕಾರ್ಯ ಸಾಧನೆಗೆ ಬಹಳಷ್ಟುಜನ ಶಹಬ್ಬಾಸ್ ಎಂದಿದ್ದಾರೆ.
ಇಂದೋರ್ ನಗರದಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿದ್ದ ರ್ಯಾಗಿಂಗ್ನ್ನು ಮಟ್ಟ ಹಾಕಲು ಪೊಲೀಸ್ ಕಾನ್ಸ್ಟೇಬಲ್ ಶಾಲಿನಿ ಚೌಹಾಣ್ ಎಂಬುವರು ಮೂರು ತಿಂಗಳು ಯಾರಿಗೂ ಒಂದು ಸಣ್ಣ ಅನುಮಾನ ಬರದಂತೆ ವಿದ್ಯಾರ್ಥಿಯಾಗಿದ್ದಳು. ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಗೆ ರ್ಯಾಗಿಂಗ್ ಮಾಡುತ್ತಿದ್ದ 11 ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಜೂನಿಯರ್ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡುತ್ತಿದ್ದ ಆ 11 ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜು ಹಾಗೂ ಹಾಸ್ಟೆಲ್ನಿಂದ ಮೂರು ತಿಂಗಳು ಕಾಲ ಅಮಾನತು ಮಾಡಲಾಗಿದೆ.
ಇದನ್ನೂ ಓದಿ : ಕಾಲೇಜುಗಳಲ್ಲಿನ ರ್ಯಾಗಿಂಗ್ ಹಾವಳಿ ತಪ್ಪಿಸುವಂತೆ ವಿದ್ಯಾರ್ಥಿಗಳ ಆಗ್ರಹ
ಕಾಲೇಜಿನಲ್ಲಿ ರ್ಯಾಗಿಂಗ್ ನಡೆಯುತ್ತಿರುವ ಬಗ್ಗೆ ತಮಗೆ ಅನಾಮಧೇಯ ದೂರುಗಳು ಬರುತ್ತಿದ್ದವು. ಅಶ್ಲೀಲ ಕೃತ್ಯಗಳು ಎಸಗುವಂತೆ ತಮ್ಮನ್ನು ಒತ್ತಾಯಪಡಿಸಲಾಗುತ್ತದೆ. ತಲೆದಿಂಬುಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ರೀತಿಯಲ್ಲಿ ನಟಿಸುವಂತೆ ಬಲವಂತ ಮಾಡಲಾಗುತ್ತಿದೆ ಎಂದು ಹಲವು ವಿದ್ಯಾರ್ಥಿಗಳು ದೂರು ನೀಡಿದ್ದರು. ಇದನ್ನು ತಿಳಿದ ಪೊಲೀಸರು ಕ್ಯಾಂಪಸ್ಗೆ ತೆರಳಿ ವಿಚಾರಣೆ ಮಾಡಿದ್ದಾರೆ. ಆದರೂ ಸಹ ವಿದ್ಯಾರ್ಥಿಗಳು ಹೆದರಿಕೊಂಡು ದೂರು ನೀಡಲು ಮುಂದೆ ಬಂದಿರಲಿಲ್ಲ. ಕೊನೆಗೆ ಪೊಲೀಸ್ ಕಾನ್ಸ್ಟೇಬಲ್ ಶಾಲಿನಿ ಅವರನ್ನು ವಿದ್ಯಾರ್ಥಿಯಂತೆ ಪ್ರತಿದಿನ ಶಾಲೆಗೆ ಕಳುಹಿಸಿ ರ್ಯಾಗಿಂಗ್ ಮಾಡುವವರನ್ನು ಪತ್ತೆ ಮಾಡುಬಹುದು ಎಂದು ಉಪಾಯ ಮಾಡಿಕೊಂಡು ಕಾಲೇಜಿಗೆ ನಿತ್ಯ ಕಳುಹಿಸಿದ್ದಾರೆ.
ಇನ್ನು ಈ ಬಗ್ಗೆ ಶಾಲಿನಿ ಮಾಧ್ಯಮಗಳ ಜೊತೆ ಮಾತನಾಡಿದ್ದು, “ನನ್ನ ಬಳಿ ಬ್ಯಾಗ್, ಯೂನಿಫಾರಂ, ಪುಸ್ತಕಗಳಿದ್ದವು. ವಿದ್ಯಾರ್ಥಿಯಂತೆಯೇ ಕಾಣುತ್ತಿದ್ದೆ. ನಾನು ಪ್ರತಿದಿನ ಕಾಲೇಜಿಗೆ ಹೋಗಬೇಕಿತ್ತು. ಮುಕ್ತವಾಗಿ ನನ್ನ ಬಗ್ಗೆ ಮಾತಾನಾಡುತ್ತಾ, ರ್ಯಾಗಿಂಗ್ ಘಟನೆಗಳನ್ನು ಕೇಳುತ್ತಾ ಹೋದೆ. ನನ್ನ ಬಗ್ಗೆ ಸಂಶಯದ ಪ್ರಶ್ನೆ ಕೇಳುವಾಗ ನಾನು ಮಾತು ಬದಲಾಯಿಸುತ್ತಿದ್ದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಸಿನಿಮಾದಲ್ಲಿ ಒಂದು ಪ್ರಕರಣವನ್ನು ಭೇದಿಸಲು ಹೇಗೆ ವೇಷದಾರಿ ಆಗುತ್ತಾರೋ ಅದೇ ಮಾದರಿಯಲ್ಲಿ ನಿಜ ಜೀವನದಲ್ಲಿ ಪೊಲೀಸ್ ಕಾನ್ಸ್ಟೇಬಲ್ ವಿದ್ಯಾರ್ಥಿಯಾಗಿ ರ್ಯಾಗಿಂಗ್ ಪ್ರಕರಣವನ್ನು ಮಟ್ಟಹಾಕಿದ್ದು ನಿಜಕ್ಕೂ ಗ್ರೇಟ್. ಶಾಲಿನಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.