17 ವರ್ಷಗಳಲ್ಲಿ 5422 ಕಪ್ಪುಹಣವನ್ನು ‘ಸ್ವಚ್ಛ’ಗೊಳಿಸುವ ಪ್ರಕರಣಗಳು-ಶಿಕ್ಷೆಯಾದದ್ದು 23 ಪ್ರಕರಣಗಳಲ್ಲಿ: ಸಂಸತ್ತಿನಲ್ಲಿ ಸರಕಾರದ ಹೇಳಿಕೆ

ಜುಲೈ 25ರಂದು ಸಂಸತ್ತಿನಲ್ಲಿ ಜೆಡಿ(ಯು) ಸಂಸದ್‍ ಸದಸ್ಯರ ಪ್ರಶ್ನೆಗೆ ಕೇಂದ್ರ ಹಣಕಾಸು ಮಂತ್ರಾಲಯ ಸಲ್ಲಿಸಿರುವ ಉತ್ತರದ ಪ್ರಕಾರ ಹಣವನ್ನು ಮಡಿಗೊಳಿಸುವುದನ್ನು ತಡೆಯುವ ಕಾನೂನಿನ(ಪಿಎಂಎಲ್‍ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.) 2005ರಿಂದ  ಮಾರ್ಚ್ 31, 2022ರ ವರೆಗೆ ದಾಖಲುಗೊಳಿಸಿರುವ ಪ್ರಕರಣಗಳ ಸಂಖ್ಯೆ 5422. ಹಣಕಾಸು ರಾಜ್ಯ ಮಂತ್ರಿಗಳು ಸಲ್ಲಿಸಿರುವ ಪಿಎಂಎಲ್‍ಎ ಪ್ರಕರಣಗಳ ಮಾಹಿತಿ ಹೀಗಿದೆ:

ವರ್ಷ       ಕೇಸುಗಳು
2012-13        221
2013-14        209
2014-15        178
2015-16        111
2016-17         200
2017-18         148
2018-19         195
2019-20         562
2020-21         981
2021-22        1180

ಈ ಮಾಹಿತಿಯ ಪ್ರಕಾರ,  ನರೇಂದ್ರ ಮೋದಿ ನೇತೃತ್ವದ ಎನ್. ಡಿ.ಎ ಸರಕಾರದ ಆಳ್ವಿಕೆಯಲ್ಲಿ ಕಳೆದ 8 ವರ್ಷಗಳಲ್ಲಿ ದಾಖಲು ಮಾಡಿದ ಪ್ರಕರಣಗಳ ಸಂಖ್ಯೆ  3535, ಅಂದರೆ ಸುಮಾರು ಮೂರನೇ ಎರಡರಷ್ಟು. ಅದರಲ್ಲೂ ಎರಡನೇ ಮೋದಿ ನೇತೃತ್ವದ ಸರಕಾರ ಅಧಿಕಾರ ವಹಿಸಿಕೊಂಡ ಮೇಲೆ ಇದು ತೀವ್ರವಾಗಿ ಹೆಚ್ಚಿದೆ, ಕಳೆದ ಮೂರು ವರ್ಷಗಳಲ್ಲಿ ಇ.ಡಿ. ದಾಖಲಿಸಿದ ಇಂತಹ ಪ್ರಕರಣಗಳ ಸಂಖ್ಯೆಯೇ 2723, ಅಂದರೆ 50%ದಷ್ಟು.

ಕಳೆದ 17ವರ್ಷಗಳಲ್ಲಿ ಈ ಕಾಯ್ದೆಯ ಅಡಿಯಲ್ಲಿ ಶಿಕ್ಷೆಯಾದದ್ದು 23 ವ್ಯಕ್ತಿಗಳಿಗೆ ಎಂದೂ ಮಂತ್ರಿಗಳು ಸಂಸತ್ತಿಗೆ ಕೊಟ್ಟಿರುವ ಮಾಹಿತಿಗಳು ಹೇಳುತ್ತವೆ, ಅಂದರೆ 0.5% ಕ್ಕಿಂತಲೂ ಕಡಿಮೆ!

ಇದು ಜಾರಿ ನಿರ್ದೇಶನಾಲಯದ ಅಸಾಮಾರ್ಥ್ಯಕ್ಕಿಂತ ಹೆಚ್ಚಾಗಿ, ಅದು ದಾಳಿ ಇತ್ಯಾದಿ  ಕಾರ್ಯಾಚರಣೆಗಳನ್ನು ನಡೆಸುವುದರ  ನಿಜ ಉದ್ದೇಶ  ಕಪ್ಪು ಹಣವನ್ನು ಬಿಳಿ ಮಾಡಿಸುವುದನ್ನು ಪತ್ತೆ ಹಚ್ಚಿ ಶಿಕ್ಷಿಸುವುದಲ್ಲ ಎಂಬ ಸಂಗತಿಯತ್ತ ಬೊಟ್ಟುಮಾಡುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

ಮೋದಿ ಸರಕಾರ ಇ.ಡಿ. ಮುಂತಾದ ಸರಕಾರೀ ಏಜೆನ್ಸಿಗಳನ್ನು ರಾಜಕೀಯ ವಿರೋಧಿಗಳ ಮೇಲೆ ಗುರಿಯಿಡಲು, ಅವರಿಗೆ ಕಿರುಕುಳ ಕೊಡಲು ಮತ್ತು ಅವರು ತಮಗೆ ಮಣಿಯುವಂತೆ ಮಾಡಲು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬುದನ್ನು ಇದು ದೃಢಪಡಿಸುತ್ತದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಈ ಬಗ್ಗೆ  ಟಿಪ್ಪಣಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *