ತಿರುವನಂತಪುರ: ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಸೇರಿದಂತೆ, ಸಾಮಾನ್ಯ ಅನಾರೋಗ್ಯ ಸಂದರ್ಭ ಮತ್ತು ತಾಯಿ ಮಗುವಿನ ಆರೋಗ್ಯ ರಕ್ಷಣೆಯ ದೃಷ್ಠಿಯಿಂದ ಕೇರಳದ ಎಡರಂಗ ಸರ್ಕಾರವು ಒಬ್ಬ ನಾಗರಿಕ ಒಂದು ಇ-ಆರೋಗ್ಯ ಡಿಜಿಟಲ್ ಕಾರ್ಡ್ ಅನ್ನು ಬಿಡುಗಡೆಗೊಳಿಸಿದೆ.
ಈ ಕಾರ್ಡಿನ ಮೂಲಕ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ವಿಶಿಷ್ಟ ಗುರುತಿನ ಸಂಖ್ಯೆಯ ಮೂಲಕ ಪ್ರವೇಶಿಸಬಹುದಾದ ಪ್ರತಿಯೊಬ್ಬ ನಾಗರಿಕನ ಆರೋಗ್ಯ ಸಂಬಂಧಿಸಿದ ಮಾಹಿತಿಗಳು ದಾಖಲಾಗುವುದು. ಅಲ್ಲದೆ, ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆ, ಟೆಲಿಮೆಡಿಸಿನ್ ಮತ್ತು ಆನ್‌ಲೈನ್ ಮೂಲಕ ವೈದ್ಯರ ಭೇಟಿ ಮತ್ತು ಸಮಯದ ಬಗ್ಗೆಯೂ ನಿಗದಿಪಡಿಸಿಕೊಳ್ಳಬಹುದಾಗಿದೆ.
ಹೊಸ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆಯ ಕೆಲವು ವೈಶಿಷ್ಟ್ಯಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರಂಭಿಕವಾಗಿ 50 ಸರ್ಕಾರಿ ಆಸ್ಪತ್ರೆ ವ್ಯಾಪ್ತಿಗೆ ಇಂದು ಚಾಲನೆ ನೀಡಿದರು.
ಪ್ರತಿಯೊಬ್ಬ ನಾಗರಿಕರಿಗೆ ಒಂದು ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆಯು ಈ ಯೋಜನೆಯ ಗುರಿಯಾಗಿದೆ. ಎಂದು ಹೇಳಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಈ ಹೊಸ ವ್ಯವಸ್ಥೆಯು ವೈದ್ಯರೊಂದಿಗೆ ಭೇಟಿ ಮಾಡಲು ಸುಲಭವಾಗಿ ಪ್ರವೇಶವನ್ನು ಖಚಿತಪಡಿಸುತ್ತದೆ, ಹೊರರೋಗಿ ವಿಭಾಗಗಳಲ್ಲಿ, ಸುಲಭವಾದ ಉಲ್ಲೇಖಗಳು ಮತ್ತು ಆನ್‌ಲೈನ್ ಸಮಾಲೋಚನೆಗಾಗಿ ಟೆಲಿಮೆಡಿಸಿನ್ ಸೌಲಭ್ಯಗಳನ್ನು ಸಹ ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.
ಈ ಇ-ಆರೋಗ್ಯ ಯೋಜನೆಯಡಿಯಲ್ಲಿ, ಎಲ್ಲಾ ನಾಗರಿಕರ ಆರೋಗ್ಯ ಸಂಬಂಧಿತ ವಿವರಗಳನ್ನು ರಾಜ್ಯದ ದತ್ತಾಂಶ ಕೇಂದ್ರದಲ್ಲಿ ಸಂಗ್ರಹಿಸಲಾಗುವುದು ಮತ್ತು ರೋಗಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ಅಥವಾ ಕಾರ್ಡ್ ನೀಡಲಾಗುವುದು ಎಂದು ಹೇಳಿದರು. ಚಿಕಿತ್ಸೆ ಪಡೆಯಲು ಕೇರಳದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಇದನ್ನು ಬಳಸಬಹುದಾಗಿದೆ.
ಹೊಸ ವ್ಯವಸ್ಥೆಯಡಿ, ಆರೋಗ್ಯ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ವಿವರಗಳನ್ನು ಸಂಗ್ರಹಿಸುತ್ತಾರೆ. ಅಲ್ಲದೆ, ಈ ರೀತಿಯಾಗಿ ನಾವು ಸಾರ್ವಜನಿಕರಲ್ಲಿ ಹರಡಿರುವ ಸಾಂಕ್ರಾಮಿಕ ಮತ್ತು ಸಾಧಾರಣವಾದ ರೋಗಗಳ ಬಗ್ಗೆಯೂ ಸಂಪೂರ್ಣವಾದ ಮಾಹಿತಿಯನ್ನು ಕಲೆಹಾಕಲಾಗುವುದು ಎಂದು ಹೇಳಿದರು.
ಇದಲ್ಲದೆ, ಹಲವಾರು ಅತ್ಯಾಧುನೀಕ ತಂತ್ರಜ್ಞಾನದ ಆರೋಗ್ಯ ಯೋಜನೆಗಳಾದ – ಡಯಾಬಿಟಿಕ್ ರೆಟಿನೋಪತಿ, ಬ್ಲಡ್ ಬ್ಯಾಂಕ್ ಟ್ರೇಸಬಿಲಿಟಿ ಮತ್ತು ಲಸಿಕೆ ಕವರೇಜ್ ಅನಾಲಿಸಿಸ್ – ಕೇರಳ ಅಭಿವೃದ್ಧಿ ಮತ್ತು ನಾವೀನ್ಯತೆ ತಂತ್ರ ಮಂಡಳಿಯನ್ನು ಸಹ ಪ್ರಾರಂಭಿಸಲಾಗುತ್ತಿದೆ ಎಂದರು.