ಒಂದು ಬೃಹತ್‌ ಕಾರ್ಪೋರೇಟ್‌ ಶಕ್ತಿಕೇಂದ್ರ–ಎಲ್‌ಐಸಿ

ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದೇ ಈ ಸಂಸ್ಥೆಯ ಮೂಲ ಧ್ಯೇಯೋದ್ದೇಶ

ಮೂಲ: ಸಿ ಶರತ್‌ ಚಂದ್ರನ್‌
(ದ ಹಿಂದೂ 03.05.2022)

ಅನುವಾದ: ನಾ ದಿವಾಕರ

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸ್ಥಾಪಿಸಲಾದ ಅಪಾರ ಸಂಖ್ಯೆಯ ಸಾರ್ವಜನಿಕ ಸಂಸ್ಥೆಗಳು ಎಲ್ಲ ವ್ಯತ್ಯಯಗಳನ್ನೂ ಸಹಿಸಿಕೊಂಡು ತಮ್ಮ ಅಸ್ತಿತ್ವವನ್ನು ಇಂದಿಗೂ ಉಳಿಸಿಕೊಂಡಿದ್ದರೆ, ಅನೇಕ ಸಂಸ್ಥೆಗಳು ಜಾಗತಿಕ ಮಟ್ಟಕ್ಕೆ ಏರಿದ್ದರೆ ಅದರ ಶ್ರೇಯ ನೆಹರೂ ಅವರ ಮುಂಗಾಣ್ಕೆಗೆ ಸಲ್ಲಬೇಕು. ತೈಲದಿಂದ ಉಕ್ಕಿನವರೆಗೆ , ಅಣೆಕಟ್ಟುಗಳಿಂದ ಹೆದ್ದಾರಿಗಳವರೆಗೆ, ಪ್ರತಿಮಾರೂಪದ ಐಐಟಿಗಳಿಂದ ಪ್ರತಿಷ್ಠಿತ ವಿನ್ಯಾಸ ಸಂಸ್ಥೆಯವರೆಗೆ ಈ ಸಂಸ್ಥೆಗಳು ಅರ್ಥವ್ಯವಸ್ಥೆಯ ಎಲ್ಲ ವಲಯಗಳನ್ನೂ ಅವರಿಸಿವೆ.  ಭಾರತದ ಪ್ರಥಮ ಪ್ರಧಾನಿ ಜವಹರಲಾಲ್‌ ನೆಹರೂ ಈ ಸಂಸ್ಥೆಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದು ಬಣ್ಣಿಸಿದ್ದರು.  ನಿಸ್ಸಂದೇಹವಾಗಿ, ಇಂದು ಭಾರತ ಒಂದು ಬೃಹತ್‌ ಆರ್ಥಿಕತೆಯಾಗಿ ಬೆಳೆದಿದ್ದರೆ ಇದರ ಅಡಿಪಾಯವಾಗಿ ಸ್ವಾತಂತ್ರ್ಯಾನಂತರದಲ್ಲಿ ಸ್ಥಾಪಿಸಲಾದ ಈ ಪ್ರತಿಷ್ಠಿತ ಸಂಸ್ಥೆಗಳನ್ನು ಕಾಣಬೇಕು.

1947ರಲ್ಲಿ 34.5 ಕೋಟಿ ಜನಸಂಖ್ಯೆ ಹೊಂದಿದ್ದ ಭಾರತದಲ್ಲಿ ತಲಾ ಆದಾಯ 249.6 ರೂಗಳಷ್ಟಿತ್ತು. ಸಾಕ್ಷರತೆ ಪ್ರಮಾಣ ಶೇ 12ರಷ್ಟಿದ್ದು, ವಿಶ್ವದ ಬಡ ರಾಷ್ಟ್ರಗಳಲ್ಲೊಂದಾಗಿತ್ತು. ಈ ಕೊರತೆ ಮತ್ತು ಕಡಿಮೆ ಆದಾಯದ ವಾತಾವರಣದಲ್ಲೂ ನೆಹರೂ ಸಾಮಾಜಿಕ ಭದ್ರತೆಯ ಮಹತ್ವವನ್ನು ಅರಿತಿದ್ದುದೇ ಅಲ್ಲದೆ ವಿಮಾ ಸಂಸ್ಕೃತಿಯನ್ನು ಜನಸಾಮಾನ್ಯರ ನಡುವೆ ಬೆಳೆಸಲು ನಿರ್ಧರಿಸಿದ್ದರು. ಈ ಚಿಂತನೆಯ ನಡುವೆಯೇ ಸೃಷ್ಟಿಯಾಗಿದ್ದು ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ ಅಥವಾ ಎಲ್‌ಐಸಿ. ಎಲ್‌ಐಸಿ 1956ರ ಸೆಪ್ಟಂಬರ್‌ 1ರಂದು ಸ್ಥಾಪನೆಯಾಗಿತ್ತು.

ಮಹಿಳೆಯರಿಗಾಗಿ ಕ್ರಮಗಳು

ಕಳೆದ ಆರೂವರೆ ದಶಕಗಳಲ್ಲಿ ಎಲ್‌ಐಸಿ ಬೃಹತ್ತಾಗಿ ಬೆಳೆದಿದೆ. ಇಂದಿಗೆ 290 ದಶಲಕ್ಷ ಪಾಲಿಸಿದಾರರನ್ನು ಹೊಂದಿರುವ ಈ ಸಂಸ್ಥೆಯ ಒಟ್ಟ ಆಸ್ತಿಯ ಮೌಲ್ಯ 38 ಲಕ್ಷ ಕೋಟಿ ರೂಗಳಷ್ಟಿದೆ. ಎಲ್‌ಐಸಿ ವಿಶ್ವದ ಅತಿ ದೊಡ್ಡ ವಿಮಾ ಸಂಸ್ಥೆಯಾಗಿ ಹೆಸರು ಗಳಿಸಿದೆ. ಆದಾಗ್ಯೂ, 2017ರಲ್ಲಿ ಎಲ್‌ಐಸಿಯ 60ನೆಯ ವರ್ಷಾಚರಣೆಯ ಸಂದರ್ಭದಲ್ಲಿ ಈ ಸಂಸ್ಥೆಯ ಮಹತ್ತರವಾದ ಒಂದು ಸಾಧನೆಯ ಬಗ್ಗೆ ಪ್ರಸ್ತಾಪವನ್ನೂ ಮಾಡಲಿಲ್ಲ. 1956ರ ತನ್ನ ಆರಂಭದ ದಿನಗಳಿಂದಲೇ ಎಲ್‌ಐಸಿ ಬೃಹತ್ ಪ್ರಮಾಣದಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿರುವುದನ್ನು ಮಹಾನ್‌ ಸಾಧನೆ ಎಂದು ಬಿಂಬಿಸಲಿಲ್ಲ. 1950 ಮತ್ತು 60ರ ದಶಕದಲ್ಲಿ ಉದ್ಯೋಗಾವಕಾಶಗಳೇ ವಿರಳವಾಗಿದ್ದ ಸಂದರ್ಭದಲ್ಲಿ ಸಾವಿರಾರು ಮಹಿಳೆಯರಿಗೆ ಎಲ್‌ಐಸಿ ಉದ್ಯೋಗ ಕಲ್ಪಿಸಿತ್ತು. ಈ ಉದ್ಯೋಗಕ್ಕೆ ಪ್ರವೇಶ ಪಡೆಯಲು ವಯೋಮಿತಿಯಾಗಲೀ, ದುಡಿಮೆಯ ಅವಧಿಯಾಗಲೀ ನಿರ್ಬಂಧಗಳಿರಲಿಲ್ಲ. ಹೈಸ್ಕೂಲು ತೇರ್ಗಡೆಯಾಗಿದ್ದರೆ ಅರ್ಹತೆ ಪಡೆಯಬಹುದಾಗಿತ್ತು. ಬಹುತೇಕ ಮಹಿಳೆಯರು ಗೃಹಿಣಿಯರೇ ಆಗಿದ್ದು ಎಲ್‌ಐಸಿ ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ ಅಲ್ಪ ಆದಾಯವನ್ನು ಗಳಿಸಲು ಸಾಧ್ಯವಾಗಿತ್ತು.

ಇದು ಡಿಜಿಟಲ್‌ ತಂತ್ರಜ್ಞಾನ ಮತ್ತು ಮೊಬೈಲ್‌ ಫೋನುಗಳು ಬರುವುದಕ್ಕೂ ಮುಂಚಿನ ದಿನಗಳಾಗಿದ್ದವು. ಕೆಲವೇ ಮನೆಗಳಲ್ಲಿ ದೂರವಾಣಿ ಸಂಪರ್ಕ ಲಭ್ಯವಿರುತ್ತಿತ್ತು. ಈ ಮಹಿಳೆಯರು ವೈಯಕ್ತಿಕ ಸಂಪರ್ಕದ ಮೂಲಕವೇ ಪಾಲಿಸಿಗಳನ್ನು ಮಾರಾಟ ಮಾಡಬೇಕಿತ್ತು. ಬಹುಪಾಲು ಮಹಿಳೆಯರಿಗೆ ಯಾವುದೇ ರೀತಿಯ ಮಾರಾಟ ತಂತ್ರಗಾರಿಕೆಯ ತರಬೇತಿ ಇರುತ್ತಿರಲಿಲ್ಲ. ಆದರೂ ಎಲ್‌ಐಸಿ ಸ್ವಪ್ರೇರಣೆಯಿಂದಲೇ ದುಡಿಯುವ ಒಂದು ಬೃಹತ್‌ ಪಡೆಯನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿತ್ತು. ಈ ಏಜೆಂಟರುಗಳಿಂದ ಸ್ಫೂರ್ತಿದಾಯಕ ಅನುಭವಾತ್ಮಕ ಕಥೆಗಳನ್ನೂ ಕೇಳಬಹುದು.

ಎಲ್‌ಐಸಿ ಆಫ್‌ ಇಂಡಿಯಾ ಸಂಸ್ಥೆಯ ಪ್ರಪ್ರಥಮ ಮಹಿಳಾ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಶ್ರೀಮತಿ ಉಶಾ ಸಾಂಗ್ವಾನ್‌ ಸಂಸ್ಥೆಯ ಈ ಕ್ರಿಯಾತ್ಮಕತೆಯನ್ನು “ಆ ಕಾಲಘಟ್ಟದ ಮಹತ್ತರವಾದ ಸಾಮಾಜಿಕ ಪ್ರಯೋಗಗಳಾಗಿ ಕಚ್ಚಾ ಪ್ರತಿಭೆಗಳನ್ನು ನುರಿತ ವೃತ್ತಿಪರರನ್ನಾಗಿ ಮಾಡಿತ್ತು” ಎಂದು ಬಣ್ಣಿಸುತ್ತಾರೆ. ಎಲ್‌ಐಸಿ ಸಂಸ್ಥೆಯು ಏಜೆಂಟರಿಗಾಗಿಯೇ ಪರಿವರ್ತನಕಾರಕ ಉತ್ತೇಜನಕಾರಿ ಯೋಜನೆಗಳನ್ನು ರೂಪಿಸಿತ್ತು.  ಏಜೆಂಟರ ಸಾಧನೆಯ ಆಧಾರದ ಮೇಲೆ ಅವರಿಗೆ ಪ್ರತ್ಯೇಕ ಕ್ಲಬ್‌ಗಳ ಸದಸ್ಯತ್ವವನ್ನು ನೀಡಲಾಗುತ್ತಿತ್ತು. ಈ ಕ್ಲಬ್‌ಗಳು ಮೇನೇಜರ್‌ಗಳಿಂದ ಹಿಡಿದು ಇನ್ನೂ ಉನ್ನತ ಹಂತವನ್ನು ತಲುಪುತ್ತಾ ಸಂಸ್ಥೆಯ ಅಧ್ಯಕ್ಷರ ಕ್ಲಬ್‌ವರೆಗೂ ವಿಸ್ತರಿಸುತ್ತಿದ್ದವು.  ಅನೇಕ ಏಜೆಂಟರು ತಮ್ಮ ವೃತ್ತಿಯಲ್ಲಿ ಈ ಮೆಟ್ಟಿಲುಗಳನ್ನು ಕ್ರಮಿಸುತ್ತಾ ಅತ್ಯುನ್ನತ ಹಂತವನ್ನು ತಲುಪಿ, ಬೃಹತ್‌ ಮೊತ್ತದ ಕಮಿಷನ್‌ ಸಂಪಾದಿಸಲು ಸಾಧ್ಯವಾಗಿತ್ತು.

2000ದ ಇಸವಿಯಲ್ಲಿ ವಿಮಾ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆ ಮತ್ತು ಭಾಗವಹಿಸುವಿಕೆಗೆ ಅವಕಾಶ ನೀಡಿದ್ದು ಎಲ್‌ಐಸಿ ಸಂಸ್ಥೆಯ ಹಾದಿಯಲ್ಲಿ ಒಂದು ಮೈಲಿಗಲ್ಲಾಗಿತ್ತು. ಈ ಪೈಪೋಟಿಯನ್ನು ಎದುರಿಸುವುದು ಎಲ್‌ಐಸಿಗೆ ಕಷ್ಟವಾಗಬಹುದು ಮತ್ತು ಸಂಸ್ಥೆಯು ಮಾರುಕಟ್ಟೆಯಲ್ಲಿ ಅಂಚಿಗೆ ತಳ್ಳಲ್ಪಡಬಹುದು ಎಂಬ ಆತಂಕವೂ ಮೂಡಿತ್ತು. ಇಂದು ಖಾಸಗಿ ವಲಯದ ಜೀವವಿಮಾ ಕ್ಷೇತ್ರದಲ್ಲಿ 24 ಸಂಸ್ಥೆಗಳಿವೆ. ಹಲವು ಸಂಸ್ಥೆಗಳು ವಿದೇಶಿ ಸಹಯೋಗವನ್ನು ಹೊಂದಿವೆ. ಆದಾಗ್ಯೂ ಎಲ್‌ಐಸಿ ದೇಶದ ವಿಮಾ ಮಾರುಕಟ್ಟೆಯಲ್ಲಿ ಶೇ 75ರಷ್ಟು ಪಾಲು ಹೊಂದಿದೆ. ಪಾಲಿಸಿಗಳನ್ನು ಅಂತಿಮ ಇತ್ಯರ್ಥಗೊಳಿಸುವುದರಲ್ಲಿ ಶೇ 99.87ರಷ್ಟು ಸಾಧಿಸಿದೆ. ಇಡೀ ವಿಮಾ ಕ್ಷೇತ್ರದ ಸರಾಸರಿ ಶೇ 84ರಷ್ಟಿದೆ.

ಶ್ರೀಮತಿ ಸಾಂಗ್ವಾನ್‌ “ಸಂಸ್ಥೆಯ ಈ ಯಶಸ್ಸಿಗೆ ಹೆಚ್ಚಿನದಾಗಿ 12 ಲಕ್ಷ ಶಿಸ್ತುಬದ್ಧ ಏಜೆಂಟರೇ ಕಾರಣರಾಗಿದ್ದಾರೆ, ಇವರಲ್ಲಿ ಬಹುಸಂಖ್ಯೆಯ ಮಹಿಳೆಯರಿದ್ದು, ಈ ಮಹಿಳೆಯರು ತಮ್ಮ ವ್ಯಕ್ತಿತ್ವ ಮತ್ತು ಪ್ರತಿಭೆಗನುಗುಣವಾಗಿ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ವಿಮಾ ಸೌಲಭ್ಯದ ಮೌಲ್ಯವನ್ನು ಜನರ ನಡುವೆ ಪ್ರಸಾರ ಮಾಡುವಲ್ಲಿ ಇವರ ಯಶಸ್ಸು ಊಹೆಗೆ ನಿಲುಕುವಂತಹುದಲ್ಲ ” ಎಂದು ಹೇಳುತ್ತಾರೆ.

ಉಳಿತಾಯ ಉದ್ದೇಶಿತ ಪಾಲಿಸಿಗಳು

ಎಲ್‌ಐಸಿಯ ಮಾರುಕಟ್ಟೆ ರಣನೀತಿಯಲ್ಲಿ ಬಹುಮುಖ್ಯವಾಗಿ ಕಾಣುವುದು ಹೊಸ ಅವಿಷ್ಕಾರಗಳು. ತೀವ್ರವಾದ ಬಡತನ ಮತ್ತು ಕಡಿಮೆ ಆದಾಯವನ್ನು ಹೊಂದಿರುವ ಭಾರತದಂತಹ ದೇಶದಲ್ಲಿ , ಪಾಲಿಸಿದಾರನ ಸಾವಿಗೆ ಮುನ್ನವೇ ನೀಡಲಾಗುವ ರಿಸ್ಕ್‌ ಕವರ್‌ ಇರುವ ಪಾಲಿಸಿಗಳನ್ನೇ ಅವಲಂಬಿಸಿ ವ್ಯವಹಾರ ನಡೆಸಲಾಗುವುದಿಲ್ಲ ಎಂಬ ವಾಸ್ತವವನ್ನು ಎಲ್‌ಐಸಿ ಆರಂಭದಿಂದಲೇ ಅರ್ಥಮಾಡಿಕೊಂಡಿತ್ತು. ಹಾಗಾಗಿಯೇ ಹಲವು ಪಾಲಿಸಿಗಳನ್ನು ಉಳಿತಾಯದ ಉದ್ದೇಶದಿಂದಲೇ ರೂಪಿಸಲಾಯಿತು.  ಭಾರತದ ಸನ್ನಿವೇಶದಲ್ಲಿ ಬಹುಮುಖ್ಯವಾಗುವ ಮಕ್ಕಳ ವಿದ್ಯಾಭ್ಯಾಸ ಮತ್ತು ವಿವಾಹದ ಖರ್ಚುಗಳನ್ನು ಸರಿದೂಗಿಸಲು ಇಂತಹ ಪಾಲಿಸಿಗಳು ಉಪಯುಕ್ತವಾಗುತ್ತವೆ.

ಅಷ್ಟೇ ಅಲ್ಲದೆ ಪಾಲಿಸಿದಾರರು ಪಾವತಿಸುವ ಕಂತುಗಳ ಒಂದು ಅಂಶವನ್ನು ಕಾಲಾನುಕ್ರಮದಂತೆ ಪಾಲಿಸಿದಾರರಿಗೆ ಪಾವತಿ ಮಾಡುವುದರ ಮೂಲಕ ಯಾವುದೇ ಸಂದರ್ಭದಲ್ಲಾದರೂ ಪಾಲಿಸಿಯ ಮೊತ್ತವನ್ನು ಪಡೆಯುವ ಅನುಕೂಲವನ್ನು ಕಲ್ಪಿಸಲಾಗಿತ್ತು.  ಇದರೊಂದಿಗೆ ಪಾಲಿಸಿದಾರರು ಮೃತಪಟ್ಟರೆ ರಿಸ್ಕ್‌ ಕವರ್‌ ಸಹ ಇರುತ್ತಿತ್ತು.  ತನ್ನ ಮಾರುಕಟ್ಟೆ ಶೈಲಿಯಲ್ಲಿ ಮತ್ತು ಸಂಸ್ಕೃತಿಯಲ್ಲೂ ಸಹ ಎಲ್‌ಐಸಿ ಇತರ ಸಂಸ್ಥೆಗಳಿಗಿಂತಲೂ ವಿಭಿನ್ನವಾಗಿದೆ.  ಖಾಸಗಿ ಕಂಪನಿಗಳು ತಂತ್ರಜ್ಞಾನ ಆಧಾರಿತ ಮಾರುಕಟ್ಟೆ ತಂತ್ರಗಳನ್ನು ಅನುಸರಿಸುತ್ತಿದ್ದರೆ, ಎಲ್‌ಐಸಿ ಜನಕೇಂದ್ರಿತ ತಂತ್ರಗಾರಿಕೆಯನ್ನು ಅನುಸರಿಸುತ್ತದೆ.

ಎರಡು ಹಸ್ತಗಳು ಹಣತೆಯ ದೀಪದ ಇಕ್ಕೆಲಗಳಲ್ಲಿರುವ, ದೀಪವನ್ನು ಆರದಂತೆ ರಕ್ಷಿಸುವ ಸಂದೇಶವನ್ನು ನೀಡುವ ತನ್ನ ಲಾಂಛನದಂತೆಯೇ ಎಲ್‌ಐಸಿ ತನ್ನದೇ ಆದ ವೈಶಿಷ್ಟ್ಯದೊಂದಿಗೆ ಗ್ರಾಮೀಣ ಭಾರತದಲ್ಲಿ ತನ್ನ ನೆಲೆ ಕಂಡುಕೊಂಡಿದ್ದು ಜನಸಾಮಾನ್ಯರ ಜೀವನೋಪಾಯದ ಮೇಲೆ ಪ್ರಭಾವ ಬೀರಿದೆ. 2014ರ ಆಗಸ್ಟ್‌ 15ರಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಜನಪ್ರಿಯ ಜನಧನ ಯೋಜನೆಯ ಮೂಲಕ 300 ದಶಲಕ್ಷ ಗ್ರಾಮೀಣ ಜನತೆಯನ್ನು ಒಳಗೊಳ್ಳುವ ಹಣಕಾಸು ವ್ಯವಸ್ಥೆಯನ್ನು ರೂಪಿಸಿದ್ದ ಸಂದರ್ಭದಲ್ಲೇ ಎಲ್‌ಐಸಿ ಆವೇಳೆಗಾಗಲೇ 200 ದಶಲಕ್ಷ ಗ್ರಾಮೀಣ ಜನರನ್ನು ತಲುಪಿಯಾಗಿತ್ತು. ಅಷ್ಟೇ ಅಲ್ಲದೆ ಭಾರತದ ಸಾರ್ವಜನಿಕ ಸಂಸ್ಥೆಗಳ ಪೈಕಿ ಒಂದು ವಿಶಿಷ್ಟ ಸಂಸ್ಥೆಯಾಗಿ ಎಲ್‌ಐಸಿ  ಕಂಗೊಳಿಸುತ್ತಿದೆ. ಇದನ್ನು ಗುರುತಿಸುತ್ತಿಲ್ಲ ಎನ್ನುವುದು ವಿಷಾದಕರ ಸಂಗತಿ.

ಕೌಶಲ್ಯ ಭಾರತ ಕಾರ್ಯಯೋಜನೆ

ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಸತ್ಯಜಿತ್‌ ರೇ ಅವರ ಜೀವನಚರಿತ್ರೆಯಲ್ಲಿ ಕೃತಿಕಾರ ಆಂಡ್ರ್ಯೂ ರಾಬಿನ್ಸನ್‌ ಹೀಗೆ ಹೇಳುತ್ತಾರೆ : “ ಪ್ರಪಂಚದ ಇತರೆಡೆಗಳಲ್ಲಿ ಇತರರು ಗುರುತಿಸುವವರೆಗೂ, ತಮ್ಮ ನೆಲದಲ್ಲೇ ಇರುವ ಯಶೋಗಾಥೆಗಳನ್ನು ನಿರ್ಲಕ್ಷಿಸುವ ವಿಸ್ಮಯಕಾರಿ ಧೋರಣೆಯನ್ನು ಭಾರತೀಯರು ಹೊಂದಿದ್ದಾರೆ. ”.  ಈ ಮಾತು ಎಲ್‌ಐಸಿಗೂ ಅನ್ವಯಿಸುತ್ತದೆ.

ತನ್ನ ಬಹುಮುಖೀ ಸಾಧನೆಗಳ ಹೊರತಾಗಿಯೂ ಎಲ್‌ಐಸಿ ಹೆಚ್ಚಾಗಿ ಬೆಳಕಿಗೆ ಬರಲಿಲ್ಲ ಎನ್ನುವುದು ವಾಸ್ತವ. ಪ್ರಧಾನಿ ನರೇಂದ್ರ ಮೋದಿ ಕೌಶಲ್ಯ ಭಾರತ ಮಿಷನ್‌ ಘೋಷಣೆ ಮಾಡಿದ ಸಂದರ್ಭದಲ್ಲಿ ಅನೇಕ ವಿದೇಶಿ ಏಜೆನ್ಸಿಗಳು ಮತ್ತು ಸಂಸ್ಥೆಗಳು ಅಲ್ಲಿ ಜೇನುಕುಡಿಕೆಯನ್ನೇ ಕಂಡಿದ್ದವು. ಇದನ್ನು ಪಡೆದುಕೊಳ್ಳಲು ಮುಗಿಬಿದ್ದು ಧಾವಿಸಿದ್ದವು. ಆದರೂ ಈ ಗುರಿಯನ್ನು ಸಾಧಿಸಲು ಎಲ್‌ಐಸಿಗಿಂತಲೂ ಹೆಚ್ಚು ಸಮರ್ಥವಾದ ಯಾವುದೇ ಸಂಸ್ಥೆಗಳು ಇರಲಿಲ್ಲ.

ಎಲ್‌ಐಸಿಯ ದಶಲಕ್ಷಕ್ಕೂ ಹೆಚ್ಚು ಏಜೆಂಟರು ಗ್ರಾಮೀಣ ಭಾರತವನ್ನು ಅರಿತುಗೊಳ್ಳಲು ನೆರವಾಗುವಂತಹ ಚಿತ್ರಣವನ್ನು ನೀಡುತ್ತಾರೆ. ನೈಜ ಬದುಕಿನ ಸನ್ನಿವೇಶಗಳ ಈ ಅಮೂಲ್ಯ ನಿಧಿಯೇ ಬೃಹತ್‌ ಪ್ರಮಾಣದ ಕೌಶಲ್ಯ ಕಾರ್ಯಯೋಜನೆಯ ಬುನಾದಿಯಾಗಬಲ್ಲದು. ಮೇನೇಜ್‌ಮೆಂಟ್‌ ಗುರು ಎಂದೇ ಪ್ರಸಿದ್ಧರಾಗಿರುವ ಶ್ರೀಯುತ ಸಿ ಕೆ ಪ್ರಹ್ಲಾದ್‌ ಹೇಳಿರುವಂತೆ, ಈ ಕಾರ್ಯಕ್ಷೇತ್ರದ ಅಧ್ಯಯನಗಳೇ ಭಾರತದ ಮೇನೇಜ್‌ಮೆಂಟ್‌  ಶಾಲೆಗಳ ಪಠ್ಯಕ್ರಮಗಳಾಗಬಹುದು ಮತ್ತು ವಿದೇಶಿ ವಿಶ್ವವಿದ್ಯಾಲಯಗಳಿಂದ ಎರವಲು ಪಡೆದ ಪಠ್ಯಕ್ರಮದ ಬದಲು ಉಪಯುಕ್ತವಾಗಬಹುದು. ಎಲ್‌ಐಸಿಯ ತರಬೇತಿ ಯೋಜನೆ, ಆನ್‌ ಲೈನ್‌ ಶಿಕ್ಷಣವನ್ನೂ ಒಳಗೊಂಡಿದ್ದು ನಿಜ ಜೀವನದ ಕಾರ್ಯಕ್ಷೇತ್ರದ ಅಧ್ಯಯನಗಳನ್ನೂ ಒಳಗೊಂಡಿರುವುದರಿಂದ ಭಾರತದ ಕೌಶಲ್ಯಾಭಿವೃದ್ಧಿ ಯೋಜನೆಗಳಿಗೆ ಇದು ಸೂಕ್ತ ಮಾದರಿಯನ್ನು ಒದಗಿಸಬಹುದು.

ಭಾರತದಲ್ಲಿ ಶಿಕ್ಷಣ ಮತ್ತು ವಿದ್ಯಾಭ್ಯಾಸ ಎನ್ನುವುದು ಜ್ಞಾನಾರ್ಜನೆಗಿಂತಲೂ ಹೆಚ್ಚಾಗಿ ಉದ್ಯೋಗ ಅರಸುವ ಸಾಧನೆಯಾಗಿದೆ. ಸಾಧಾರಣ ಭಾರತೀಯ ಜನತೆಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ, ನಗರವಾಸಿಗಳಿಗೆ ಮತ್ತು ಗ್ರಾಮೀಣರಿಗೆ, ಅಪಾರ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಎಲ್‌ಐಸಿ  ಹೆಚ್ಚು ಪ್ರಸ್ತುತವಾಗಿಯೇ ಉಳಿಯುತ್ತದೆ.  ಇಂದು ಎಲ್‌ಐಸಿ ಮನ್ವಂತರದ ಹಾದಿಯಲ್ಲಿದೆ. ಷೇರುಮಾರುಕಟ್ಟೆಯಲ್ಲಿ ನಮೂದಿಸಲ್ಪಡುವ ಮೂಲಕ ಎಲ್‌ಐಸಿ ಭಾರತದ ಮೇಲ್ಪದರದ ಗಣ್ಯ ಕಾರ್ಪೋರೇಟ್‌ ವಲಯದ ಒಂದು ಭಾಗವಾಗಲಿದೆ. ಆದಾಗ್ಯೂ ಎಲ್‌ಐಸಿ ಎಂಬ ಈ ಸಂಸ್ಥೆಯನ್ನು ಸಾವಿರಾರು ಸಾಮಾನ್ಯ ಭಾರತೀಯ ಪ್ರಜೆಗಳ ಬೆವರು, ನೋವು, ತ್ಯಾಗದ ಮೇಲೆ ನಿರ್ಮಿಸಲಾಗಿದೆ ಎನ್ನುವ ವಾಸ್ತವಾಂಶವನ್ನು ನಾವು ಮರೆಯಕೂಡದು. ಈ ಪ್ರಜಾಸತ್ತಾತ್ಮಕ ಗುಣಲಕ್ಷಣಗಳೇ ಎಲ್‌ಐಸಿಯನ್ನು ಒಂದು ಅಮೂಲ್ಯ ಆಸ್ತಿಯನ್ನಾಗಿ ಮಾಡುತ್ತದೆ.

(ಲೇಖಕರು: ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌- ಹಿರಿಯ ಪ್ರಾಧ್ಯಾಪಕರು)

Donate Janashakthi Media

Leave a Reply

Your email address will not be published. Required fields are marked *