ವರಮಾನಗಳ ಅಸಮತೆ ಹೆಚ್ಚುವುದರಿಂದಾಗಿಯೇ ಸಂಪತ್ತಿನ ಅಸಮತೆಯೂ ಹೆಚ್ಚುತ್ತದೆ

ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂನಾಗರಾಜ್

ಸಂಪತ್ತಿನ ಅಸಮತೆಯ ಏಕಾಏಕಿ ಏರಿಕೆ ಕೇವಲ ಭಾರತದಂತಹ ದೇಶಗಳಿಗೇ ಸೀಮಿತವಾಗಿಲ್ಲ. ಅಮೆರಿಕಾದಂತಹ ಶ್ರೀಮಂತ ದೇಶಗಳಲ್ಲೂ ಕಾಣ ಬರುತ್ತಿದೆ. ನಿಜ, ಆ ದೇಶಗಳಲ್ಲಿನ ಹೆಚ್ಚಳವು ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳಲ್ಲಿ ಕಾಣುವ ಅಸಮತೆಯ ಏರಿಕೆಗಿಂತ ಕೆಳ ಮಟ್ಟದಲ್ಲಿದೆ. ಈ ಅಸಮತೆ ನವ-ಉದಾರವಾದದಲ್ಲಿಯೇ ಅಂತರ್ಗತವಾಗಿರುವ ಸಂಗತಿ. ತಂತ್ರಜ್ಞಾನ-ಸಂರಚನೆಯ ಬದಲಾವಣೆಯಿಂದಾಗಿ ಹೆಚ್ಚುವ ಆರ್ಥಿಕ ಮಿಗುತಾಯದಲ್ಲಿ ಹೆಚ್ಚಿನದ್ದು ಬಂಡವಾಳದ ಪಾಲಾಗುವುದು, ಬಂಡವಾಳದ ಕೇಂದ್ರೀಕರಣ ಮತ್ತು ಉತ್ಪಾದಕ ಆಸ್ತಿಗಳ ಬಲವಂತದ ಸ್ವಾಧೀನದಿಂದ ವರಮಾನಗಳ ಅಸಮತೆ ಸಂಪತ್ತಿನ ಅಸಮತೆಯನ್ನೂ ತರುತ್ತದೆ. ಸಂಪತ್ತಿನ ಅಸಮತೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸುವ ಎಲ್ಲಾ ವಿಧಾನಗಳೂ ನವ-ಉದಾರವಾದದ ಆಳ್ವಿಕೆಯಲ್ಲಿ ಉತ್ತೇಜನ ಪಡೆಯುತ್ತವೆ.

ನವ-ಉದಾರವಾದಿ ಆಳ್ವಿಕೆಯಲ್ಲಿ ವರಮಾನ ಮತ್ತು ಸಂಪತ್ತಿನ ಅಸಮಾನತೆಗಳು ಏಕಾಏಕಿಯಾಗಿ ಹೆಚ್ಚುತ್ತಿವೆ ಎಂಬ ಅಂಶದ ಬಗ್ಗೆ ವಿವಾದವಿಲ್ಲ. ಫ್ರೆಂಚ್ ಅರ್ಥಶಾಸ್ರಜ್ಞ ಥಾಮಸ್ ಪಿಕೆಟ್ಟಿ ಅವರ ತಂಡದ ಅಧ್ಯಯನವು ಅಸಮತೆಗಳು ಹೆಚ್ಚುತ್ತಿವೆ ಎಂಬುದನ್ನು ಖಾತ್ರಿಪಡಿಸುತ್ತದೆ. ಒಂದು ದೇಶದ ಜನಸಂಖ್ಯೆಯ ಮೇಲ್ತುದಿಯ ಶೇ.ಒಂದರಷ್ಟು ಮಂದಿಯು ಆ ದೇಶದ ರಾಷ್ಟ್ರೀಯ ಆದಾಯದಲ್ಲಿ ಹೊಂದಿರುವ ಪಾಲನ್ನು ನಿರ್ಣಯಿಸಲು ಪಿಕೆಟ್ಟಿ ತಂಡವು ಆದಾಯ ತೆರಿಗೆ ದತ್ತಾಂಶವನ್ನು ಬಳಸಿಕೊಳ್ಳುತ್ತದೆ. ಈ ರೀತಿಯ ಅಂದಾಜುಗಳನ್ನು ಮಾಡಲು ಅವರು ಅನುಸರಿಸುವ ಈ ವಿಧಾನದ ಬಗ್ಗೆ ಆಕ್ಷೇಪಣೆಗಳಿರಬಹುದು. ಆದರೆ, ಅವರ ಈ ಅಧ್ಯಯನದಿಂದ ಹೊರಹೊಮ್ಮಿದ ಅಂಕಿ-ಅಂಶಗಳು ಮಾತೇ ಹೊರಡದಷ್ಟು ಗಂಭೀರವಾಗಿವೆ. ಉದಾಹರಣೆಗೆ, ಪಿಕೆಟ್ಟಿ ಮತ್ತು ಚಾನ್ಸೆಲ್ ಅವರ ತಂಡವು, 1982ರಲ್ಲಿ ಭಾರತದ ರಾಷ್ಟ್ರೀಯ ಆದಾಯದಲ್ಲಿ ಕೇವಲ ಶೇ.6ರಷ್ಟು ಪಾಲನ್ನು ಹೊಂದಿದ್ದ ಅಗ್ರ ಶೇ.ಒಂದರಷ್ಟು ಮಂದಿಯು 2013ರಲ್ಲಿ ಶೇ. 22ಕ್ಕಿಂತಲೂ ಹೆಚ್ಚು ಪಾಲನ್ನು ಹೊಂದಿದ್ದರು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಒಂದು ವಾಸ್ತವಾಂಶವಾಗಿ ಹೇಳುವುದಾದರೆ, ಭಾರತದಲ್ಲಿ ಆದಾಯ ತೆರಿಗೆಯನ್ನು 1922 ರಲ್ಲಿ ಜಾರಿಗೊಳಿಸಿದಾಗಿನಿಂದ ಹಿಡಿದು, ಅಂಕಿ-ಅಂಶಗಳು ಲಭ್ಯವಿರುವ 2013ರ ವರೆಗಿನ ಅವಧಿಯಲ್ಲಿ ಇದು ಅತ್ಯಂತ ಹೆಚ್ಚಿನ ಪಾಲು.

ಇದನ್ನು ಓದಿ: ದಾರಿಗಾಣದಾಗಿರುವ ನವ-ಉದಾರವಾದದ ಆಳ್ವಿಕೆಯಲ್ಲಿ ಜಾಗತಿಕವಾಗಿ ಹೆಚ್ಚುತ್ತಿದೆ ದುಡಿಯುವ ವರ್ಗದ ಪ್ರತಿರೋಧ

ವರಮಾನಗಳ ಅಸಮತೆಯ ಈ ರೀತಿಯ ಹೆಚ್ಚಳದ ಬಗ್ಗೆ ಪಿಕೆಟ್ಟಿಯವರು ಕೊಡುವ ಸೈದ್ಧಾಂತಿಕ ವಿವರಣೆಯು ಸಂಪೂರ್ಣವಾಗಿ ಸಮರ್ಥನೀಯವಲ್ಲ. ಏಕೆಂದರೆ ಅವರ ವಿವರಣೆಯು, ಬಂಡವಾಳಶಾಹಿ ಅರ್ಥವ್ಯವಸ್ಥೆಯು ಸದಾ ಪೂರ್ಣ ಉದ್ಯೋಗದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬ ಪೂರ್ವಕಲ್ಪನೆಯನ್ನು ಆಧರಿಸಿದೆ. ಅನುಭವದ ಆಧಾರದಲ್ಲಿ ಹೇಳುವುದಾದರೆ ಈ ಭಾವನೆ ಸುಳ್ಳು ಮಾತ್ರವಲ್ಲ ತರ್ಕದ ದೃಷ್ಟಿಯಲ್ಲೂ ಅದು ದೋಷಪೂರಿತವಾಗಿದೆ. ಏಕೆಂದರೆ, ಪೂರ್ಣ ಉದ್ಯೋಗದ ಪರಿಸ್ಥಿತಿ ಇರುವಲ್ಲಿ ಉತ್ಪಾದನೆಯನ್ನು ಒಂದು ಶಿಸ್ತಿಗೊಳಪಡಿಸುವ ಒಂದು ಏರ್ಪಾಟು ಅರ್ಥವ್ಯವಸ್ಥೆಯಲ್ಲಿ ಇಲ್ಲದಾಗುತ್ತದೆ. ಅದೇನೇ ಇರಲಿ, ಆದಾಯಗಳ ಅಸಮತೆಯ ಹೆಚ್ಚಳಕ್ಕೆ ಸೈದ್ಧಾಂತಿಕ ವಿವರಣೆ ಕೊಡಲು ಬಹಳೇನೂ ಹುಡುಕಾಡುವ ಅವಶ್ಯಕತೆಯಿಲ್ಲ. ಅದನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು: ನವ-ಉದಾರವಾದಿ ಅರ್ಥವ್ಯವಸ್ಥೆಯಲ್ಲಿ ತಂತ್ರಜ್ಞಾನ-ಸಂರಚನಾತ್ಮಕ ಬದಲಾವಣೆಗಳಿಗೆ ಸಂಬಂಧಿಸಿದ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುವುದರಿಂದಾಗಿ ಕಾರ್ಮಿಕರ ಉತ್ಪಾದಕತೆಯ ಬೆಳವಣಿಗೆಯ ದರ ಹೆಚ್ಚುತ್ತದೆ. ಜಿಡಿಪಿಯ ಹೆಚ್ಚಳ ಎಷ್ಟೇ ಇದ್ದರೂ, ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಮತ್ತು ಶ್ರಮ ಶಕ್ತಿಯ ಸ್ವಾಭಾವಿಕ ಬೆಳವಣಿಗೆಯ ದರಕ್ಕೆ ಹೋಲಿಸಿದರೆ, ಉದ್ಯೋಗಗಳ ಬೆಳವಣಿಗೆಯ ದರ ಇಳಿಕೆಯಾಗಿರುತ್ತದೆ. ಹಾಗಾಗಿ, ಕಾರ್ಮಿಕರ ಸಂಖ್ಯೆಗೆ ಹೋಲಿಸಿದರೆ, ಕಾರ್ಮಿಕ ಮೀಸಲು ಪಡೆಯ ಗಾತ್ರವು ಸಾಪೇಕ್ಷವಾಗಿ ದೊಡ್ಡದಾಗಿರುತ್ತದೆ. ಶ್ರಮದ ಉತ್ಪಾದಕತೆಯ ಬೆಳವಣಿಗೆಯ ಹೆಚ್ಚಳದಿಂದಾಗಿ ಒಟ್ಟು ಉತ್ಪಾದನೆಯಲ್ಲಿ ಮಿಗುತಾಯದ ಪಾಲು ಹೆಚ್ಚುತ್ತಿದ್ದರೂ ಸಹ, ಕಾರ್ಮಿಕರ ನಿಜ ವೇತನವನ್ನು ಒಂದು ಬದುಕುಳಿಯಲು ಸಾಲುವಷ್ಟೇ ಮಟ್ಟಕ್ಕೆ ಮಿತಿಗೊಳಿಸಲಾಗುತ್ತದೆ. ಆದ್ದರಿಂದ, ಆದಾಯಗಳ ಅಸಮತೆಯ ಮಟ್ಟ ಹೆಚ್ಚುತ್ತದೆ. ಪಿಕೆಟ್ಟಿ ತಂಡವು ಪತ್ತೆಹಚ್ಚಿದ ವೈಯಕ್ತಿಕ ಆದಾಯಗಳ ಅಸಮತೆಯ ಹೆಚ್ಚಳವು ನವ-ಉದಾರವಾದವು ಹೇರಿದ ವರ್ಗ ಆದಾಯ ಅಸಮತೆಯ ಈ ರೀತಿಯ ಹೆಚ್ಚಳದಲ್ಲಿ ಬೇರೂರಿದೆ. (ಶ್ರಮ ಶಕ್ತಿಯ ಮೇಲಿನ ವೆಚ್ಚಗಳ ಉಳಿತಾಯಕ್ಕಾಗಿಯೇ ತಂತ್ರಜ್ಞಾನದ ಬಳಕೆ ಮಾಡುವುದರಿಂದಾಗಿ, ಅದರ ಫಲವಾಗಿ ಹೆಚ್ಚುವ ಕಾರ್ಮಿಕರ ಉತ್ಪಾದಕತೆಯ ಹೆಚ್ಚಳದ ಪರಿಣಾಮವಾಗಿಯೇ ಉದ್ಯೋಗಗಳ ಕುಸಿತ ಉಂಟಾಗುತ್ತದೆ.

ಇದನ್ನು ಓದಿ: ರೈತರನ್ನು ಹಿಂಡುವ ನವ-ಉದಾರವಾದ ಮತ್ತು ಹಿಂದುತ್ವ ರಾಷ್ಟ್ರೀಯವಾದದ ಮೈತ್ರಿ

ಇದೇ ರೀತಿಯಲ್ಲಿ, ನವ-ಉದಾರವಾದದ ಅಡಿಯಲ್ಲಿ, ಸಂಪತ್ತಿನ ಅಸಮತೆಯ ಏಕಾಏಕಿ ಹೆಚ್ಚಳವು ಜಾಗತಿಕ ದಕ್ಷಿಣ ದೇಶಗಳಲ್ಲೂ ಕಂಡುಬಂದಿದೆ. 2000 ಮತ್ತು 2021ರ ನಡುವೆ, ಕ್ರೆಡಿಟ್ ಸ್ಯೂಸೆ ದತ್ತಾಂಶದ ಪ್ರಕಾರ, ಅಮೇರಿಕಾದಲ್ಲಿಯೂ ಸಂಪತ್ತಿನ ಅಸಮತೆ ಹೆಚ್ಚಿದೆ. ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳಿಗೆ ಹೋಲಿಸಿದರೆ ಅಮೇರಿಕಾದ ಹೆಚ್ಚಳವು ಕೆಳ ಮಟ್ಟದಲ್ಲಿದೆ. ಸಂಪತ್ತಿನ ಅಸಮತೆಯ ಅಂದಾಜುಗಳು ನಂಬಲರ್ಹವಲ್ಲ ಎಂಬುದು ನಿಜವೇ. ಏಕೆಂದರೆ, ಅವು ಷೇರು ಮಾರುಕಟ್ಟೆಯ ಏರಿಳಿತಗಳಿಂದ ಪ್ರಭಾವಿತವಾಗಿರುತ್ತವೆ. ಆಸ್ತಿಗಳ ಭೌತಿಕ ಬೆಲೆಗಳು ಏರಿಕೆಯಾಗದಿದ್ದರೂ ಸಹ, ಷೇರು ಮಾರುಕಟ್ಟೆಯು ಭರಾಟೆಯಲ್ಲಿದ್ದಾಗ ಒಟ್ಟು ಸಂಪತ್ತಿನ ಅಂದಾಜು ಕೃತಕವಾಗಿ ಉಬ್ಬಿಕೊಂಡಿರುತ್ತದೆ ಮಾತ್ರವಲ್ಲ, ಶ್ರೀಮಂತರು ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಸಕ್ರಿಯರಾಗಿರುವುದರಿಂದ, ಅವರ ಸಂಪತ್ತಿನ ಪಾಲು ಹೆಚ್ಚುತ್ತದೆ ಕೂಡ. ಈ ವಿದ್ಯಮಾನವು ಸಂಪತ್ತಿನ ಅಸಮತೆಯ ಹೆಚ್ಚಳವನ್ನು ತೋರಿಸುತ್ತದೆ. ಆದರೆ, ಷೇರು ಮಾರುಕಟ್ಟೆಯ ಕುಸಿತದ ಅವಧಿಯಲ್ಲಿ ಈ ಸಂಪತ್ತಿನ ಮೌಲ್ಯವು ಕುಸಿದಿರುತ್ತದೆ. ತನ್ನ ಜನಸಂಖ್ಯೆಯ ಅಗ್ರ ಶೇ.ಒಂದರಷ್ಟು ಮಂದಿಯು ರಾಷ್ಟ್ರೀಯ ಆದಾಯದಲ್ಲಿ 2000 ರಲ್ಲಿ ಹೊಂದಿದ್ದ ಶೇ.32 ಪಾಲು 2021 ರ ವೇಳೆಗೆ ಶೇ.40.6ಕ್ಕೆ ಏರಿಕೆಯಾಗಿದೆ ಎಂಬುದನ್ನು ಭಾರತವು ತೋರಿಸುತ್ತಿರುವಾಗ ಮತ್ತು 2000 ಇಸವಿಯಲ್ಲಿದ್ದ ಇದೇ ಈ ಪಾಲು ಶೇ.43ರಿಂದ 2021ರ ವೇಳೆಗೆ ಶೇ.49.3ಕ್ಕೆ ಏರಿಕೆಯಾಗಿದೆ ಎಂಬುದನ್ನು ಬ್ರೆಜಿಲ್ ತೋರಿಸುತ್ತಿರುವಾಗ, ಈ ಹೆಚ್ಚಳವನ್ನು ಆಸ್ತಿಗಳ ಮಾರಾಟದಿಂದ ಗಳಿಸಿದ ಕ್ಷಣಿಕ ಲಾಭವೆಂದು ವಿವರಿಸಲಾಗದು. ಕೆಲವು ಮೂಲಭೂತ ಅಂಶಗಳು ಇಲ್ಲಿ ಕಾರ್ಯಪ್ರವೃತ್ತವಾಗಿವೆ ಎಂಬುದು ಸ್ಪಷ್ಟವಾಗುತ್ತದೆ.

ಚಿತ್ರಕೃಪೆ: ನ್ಯೂಸ್ ಕ್ಲಿಕ್

ವರಮಾನಗಳ ಅಸಮತೆ ಮತ್ತು ಮಿಗುತಾಯದ ಹೆಚ್ಚಳ

ಅಂತಹ ಒಂದು ಮೂಲಭೂತ ಅಂಶವೆಂದರೆ, ವರಮಾನಗಳ ಅಸಮತೆಯ ಹೆಚ್ಚಳದ ಬೇರು ಉತ್ಪಾದನೆಯಲ್ಲಿ ಆರ್ಥಿಕ ಮಿಗುತಾಯದ ಪಾಲಿನ ಹೆಚ್ಚಳದಲ್ಲಿ ಊರಿದೆ ಎಂಬುದು. ಆಸ್ತಿಗಳ ಮಾರಾಟದ ಮೂಲಕ ಗಳಿಸುವ ತಾತ್ಕಾಲಿಕ ಲಾಭಗಳ ಸಂಗ್ರಹವನ್ನು ಬದಿಗಿಟ್ಟರೆ, ಸಂಪತ್ತಿನ ಯಾವುದೇ ಏರಿಕೆಯು ಉಳಿತಾಯದ ಮೂಲಕ ಸಂಭವಿಸುತ್ತದೆ. ಮೇಲ್ನೋಟದಲ್ಲಿ ಇದು ವಿಚಿತ್ರವಾಗಿ ತೋರಬಹುದು: ಭೌತಿಕ ಸ್ವತ್ತುಗಳಲ್ಲಿ ಹೂಡಿಕೆ ಮಾಡುವುದರಿಂದ ಮಾತ್ರ ಸಂಪತ್ತಿನ ಹೆಚ್ಚಳ ಸಂಭವಿಸುತ್ತದೆ ಎಂದು ಭಾವಿಸಬಹುದು.

ಆದರೆ, ಹೂಡಿಕೆಯ ಮೂಲಕ ಉಳಿತಾಯವೂ ಉಂಟಾಗಬಹುದು. ಮತ್ತು ಉಳಿತಾಯದ ಮೂಲಕವೂ ಸಂಪತ್ತಿನ ಹೆಚ್ಚಳವಾಗಬಹುದು. ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ದೇಶವು ಹೂಡಿಕೆ ಮಾಡದಿದ್ದರೂ ಸಹ, ಅದು ತನ್ನ ಉಳಿತಾಯಗಳನ್ನು ಬೇರೆ ದೇಶಗಳಿಗೆ ಸಾಲವಾಗಿ ನೀಡಿದರೆ, ಆ ದೇಶಗಳ ಮೇಲಿನ ದಾವೆಯ ರೂಪದಲ್ಲಿ ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತದೆ. ರಾಷ್ಟ್ರೀಯ ವರಮಾನದಲ್ಲಿ ಶ್ರೀಮಂತರ ಪಾಲು ಹೆಚ್ಚಿದಾಗ, ಬಡವರಿಗಿಂತ ಹೆಚ್ಚಿನ ಆದಾಯವನ್ನು ಶ್ರೀಮಂತರು ಉಳಿತಾಯ ಮಾಡುವುದರಿಂದ, ದೇಶದ ಒಟ್ಟು ಉಳಿತಾಯದಲ್ಲಿ ಶ್ರೀಮಂತರ ಪಾಲು ಇನ್ನೂ ವೇಗವಾಗಿ ಹೆಚ್ಚಾಗುತ್ತದೆ. ಇದು ಏನನ್ನು ಅರ್ಥೈಸುತ್ತದೆ ಎಂದರೆ, ಒಂದು ದೇಶದ ಸಂಪತ್ತಿನ ಹೆಚ್ಚಳದಲ್ಲಿ ಶ್ರೀಮಂತರ ಪಾಲು ಮೂಲತಃ ಇದ್ದುದಕ್ಕಿಂತಲೂ ಹೆಚ್ಚಾಗುತ್ತದೆ ಎಂಬುದು. ಅಂದರೆ, ಒಂದು ದೇಶದ ಒಟ್ಟು ಸಂಪತ್ತಿನಲ್ಲಿ ಶ್ರೀಮಂತರ ಪಾಲು ಹೆಚ್ಚುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ವರಮಾನಗಳ ಅಸಮತೆ ಹೆಚ್ಚುವಯದರಿಂದಾಗಿಯೇ ಸಂಪತ್ತಿನ ಅಸಮತೆಯೂ ಹೆಚ್ಚುತ್ತದೆ.

ಇದನ್ನು ಓದಿ: ನವ ಭಾರತವನ್ನು ಕಾಡುತ್ತಿರುವ ಬೌದ್ಧಿಕ ದಾರಿದ್ರ್ಯ

ಬಂಡವಾಳದ ಕೇಂದ್ರೀಕರಣ” ಮತ್ತು ಸಂಪತ್ತಿನ ಕೇಂದ್ರೀಕರಣ

ಸಂಪತ್ತಿನ ಅಸಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಎರಡನೆಯ ಅಂಶವೆಂದರೆ, ಯಾವ ಪ್ರಕ್ರಿಯೆಯನ್ನು “ಬಂಡವಾಳದ ಕೇಂದ್ರೀಕರಣ” ಎಂದು ಮಾರ್ಕ್ಸ್ ಕರೆದಿದ್ದರೊ ಅದೇ ಪ್ರಕ್ರಿಯೆಯೇ. ತಂತ್ರಜ್ಞಾನದ ಆವಿಷ್ಕಾರಗಳು ಮತ್ತು ಸಂರಚನೆಯಲ್ಲಿನ ಬದಲಾವಣೆಗಳಿಂದಾಗಿ, ಒಂದು ವ್ಯವಹಾರೋದ್ದಿಮೆಯು ಕಾಲಾನಂತರದಲ್ಲಿ ಸಣ್ಣ ಬಂಡವಾಳದಿಂದ ದೊಡ್ಡ ಬಂಡವಾಳಕ್ಕೆ ಬದಲಾಗುತ್ತದೆ. ಇದು ಸಂಭವಿಸಲು ಕಾರಣ, ಕಾಲಾನಂತರದಲ್ಲಿ ಲಭ್ಯವಾಗುವ ಹೊಸ ಪ್ರಕ್ರಿಯೆಗಳು ಮತ್ತು ಉತ್ಪನ್ನಗಳನ್ನು ಬಳಕೆಗೆ ತರಲು ದೊಡ್ಡ ಗಾತ್ರದ ಬಂಡವಾಳವೇ ಬೇಕಾಗುತ್ತದೆ. ಅದಕ್ಕಾಗಿ, ಉದ್ದಿಮೆಯು ಕಾಲಾನಂತರದಲ್ಲಿ ಸಣ್ಣ ಬಂಡವಾಳದಿಂದ ದೊಡ್ಡ ಬಂಡವಾಳಕ್ಕೆ ಪಲ್ಲಟಗೊಳ್ಳಬೇಕಾಗುತ್ತದೆ. ಈ ರೀತಿಯ ಪಲ್ಲಟವು, ಮೇಲೆ ಚರ್ಚಿಸಿದಂತೆ, ಒಟ್ಟು ಉತ್ಪಾದನೆಯಲ್ಲಿ ಆರ್ಥಿಕ ಮಿಗುತಾಯದ ಪಾಲು ಹೆಚ್ಚುವ ರೀತಿಯಲ್ಲೇ ಸಂಭವಿಸುತ್ತದೆ ಮತ್ತು ನಿಖರವಾಗಿ ಅದೇ ಪರಿಣಾಮವನ್ನು ಬೀರುತ್ತದೆ: ವ್ಯವಹಾರೋದ್ದಿಮೆಯು ಸಣ್ಣ ಬಂಡವಾಳದಿಂದ ದೊಡ್ಡ ಬಂಡವಾಳಕ್ಕೆ ಪಲ್ಲಟ ಹೊಂದುವ ರೀತಿಯಲ್ಲೇ ಲಾಭಗಳ ವಿತರಣೆಯಲ್ಲೂ ಬದಲಾವಣೆ ಇರುತ್ತದೆ. (ಅಂದರೆ, ಸಣ್ಣ ಬಂಡವಾಳವು ವ್ಯವಹಾರದಲ್ಲಿ ಬಚಾವಾಗಿ ಮುಂದುವರೆದರೆ, ಅದು ತನ್ನ ಲಾಭದಿಂದ ಮಾಡುವ ಉಳಿತಾಯದ ಪ್ರಮಾಣವು ಸಣ್ಣದಿರುತ್ತದೆ; ಮತ್ತು ಒಂದು ವೇಳೆ ಅದನ್ನು ಸಂಪೂರ್ಣವಾಗಿ ಹೊಸಕಿ ಹಾಕಿದರೆ ಅದರ ಸಂಪೂರ್ಣ ಲಾಭವನ್ನು ದೊಡ್ಡ ಬಂಡವಾಳವು ವಶಪಡಿಸಿಕೊಳ್ಳುತ್ತದೆ). ಒಟ್ಟಿನಲ್ಲಿ, ಉಳಿತಾಯದ ಪ್ರಮಾಣವು ಸಣ್ಣ ಬಂಡವಾಳಕ್ಕಿಂತ ದೊಡ್ಡ ಬಂಡವಾಳಕ್ಕೆ ಹೆಚ್ಚಿನದಿರುತ್ತದೆ. ಈ ಕಾರಣದಿಂದಾಗಿ ಮತ್ತು ಉತ್ಪತ್ತಿಯಲ್ಲಿ ಉಳಿತಾಯದ ಪಾಲು ಹೆಚ್ಚುವ ಅಂಶದಿಂದಾಗಿ, ಒಟ್ಟು ಉಳಿತಾಯದಲ್ಲಿ ಅಗ್ರ ಶೇ.ಒಂದರಷ್ಟು ಮಂದಿಯ ಪಾಲು ಹೆಚ್ಚುತ್ತದೆ ಮತ್ತು ಒಟ್ಟು ಸಂಪತ್ತಿನ ಅಸಮತೆಯ ಅಂತರವೂ ಹೆಚ್ಚುತ್ತದೆ. ಹಾಗಾಗಿ, ಸಂಪತ್ತಿನ ಕೇಂದ್ರೀಕರಣವು ಬಂಡವಾಳದ ಕೇಂದ್ರೀಕರಣದ ಪ್ರಕ್ರಿಯೆಯಲ್ಲಿ ಅಂತರ್ಗತವಾಗಿದೆ ಎಂಬುದಂತೂ ನಿಸ್ಸಂಶಯವೇ.

ಇಲ್ಲಿಯವರೆಗೆ ನಾವು ಉಳಿತಾಯದ ಹಂಚಿಕೆಯಲ್ಲಿ ಬದಲಾವಣೆಗಳ ಮೂಲಕ ಸಂಪತ್ತು ಸಾಂದ್ರಗೊಳ್ಳುವ ಬಗ್ಗೆ ಮಾತನಾಡಿದೆವು. ಉಳಿತಾಯವು ಸಾಕಾರಗೊಳ್ಳುವುದು ಸಮಸ್ಯೆಯಾದಾಗ, ಸಾಮರ್ಥ್ಯದ ಬಳಕೆಯ ಮೂಲ(base) ಮಟ್ಟದಲ್ಲಿ ಆಗುವ ಉಳಿತಾಯಕ್ಕಿಂತ ಒಂದು ವೇಳೆ ಹೂಡಿಕೆಯೇ ಕಡಿಮೆಯಾದರೆ ಮಾಡುವುದೇನು? ಎಂದು ಕೇಳಬಹುದು. ಆದರೆ, ಉಳಿತಾಯವು ಸಾಕಾರಗೊಳ್ಳುವುದು ಒಂದು ವೇಳೆ ಸಮಸ್ಯೆಯಾದರೆ, ಅಂದರೆ, ಸಾಮರ್ಥ್ಯದ ಬಳಕೆಯ ಮೂಲ ಮಟ್ಟದಲ್ಲಿ ಉತ್ಪತ್ತಿಯನ್ನು ಉತ್ಪಾದಿಸಿದಾಗ ಸಾಕಷ್ಟು ಬೇಡಿಕೆ ಇಲ್ಲದಿದ್ದರೆ, ಆಗ ಸಾಕಾರಗೊಳ್ಳುವ ಉಳಿತಾಯವು ಸಾಮರ್ಥ್ಯ ಬಳಕೆಯ ಮೂಲ ಮಟ್ಟದ ಉತ್ಪಾದನೆಯಿಂದ ಸೃಷ್ಟಿಯಾಗುವ ಉಳಿತಾಯಕ್ಕಿಂತಲೂ ಕಡಿಮೆ ಇರುತ್ತದೆ. ವರ್ಗಗಳ ನಡುವೆ ಅದರ ಹಂಚಿಕೆಯು, ಅಂದರೆ, ಸಣ್ಣ ಉತ್ಪಾದಕರು ಮತ್ತು ದೊಡ್ಡ ಬಂಡವಾಳಗಾರರ ನಡುವೆ, ಅಥವಾ ಸಣ್ಣ ಬಂಡವಾಳಗಾರರು ಮತ್ತು ದೊಡ್ಡ ಬಂಡವಾಳಗಾರರ ನಡುವೆ, ಇದೆಲ್ಲವೂ ಸಾಕಾರಗೊಂಡಿದೆ ಎಂಬಂತೆಯೇ ಇರುತ್ತದೆ. ಆದ್ದರಿಂದ ಸಂಪತ್ತಿನ ಕೇಂದ್ರೀಕರಣ ದ ಪ್ರವೃತ್ತಿಯನ್ನು  ಉಳಿತಾಯ ಸಾಕಾರಗೊಳ್ಳುವ ಸಮಸ್ಯೆ ಇದೆಯೇ ಅಥವಾ ಇಲ್ಲವೇ ಎಂಬುದು ಬಾಧಿಸುವುದಿಲ್ಲ.

ಇದನ್ನು ಓದಿ: ಕೊರೊನಾ ಮುನ್ನವೇ ದುಡಿಯುವ ಜನರ ವರಮಾನ ಕುಸಿದಿತ್ತು

ಕಿತ್ತುಕೊಳ್ಳುವ ಆದಿಮ ಪ್ರಕ್ರಿಯೆ

ನಾವು ಇಲ್ಲಿಯವರೆಗೆ ಉಲ್ಲೇಖಿಸಿದ ಎರಡು ಅಂಶಗಳ ಜೊತೆಗೆ, ಸಂಪತ್ತಿನ ಹಂಚಿಕೆಯನ್ನು ಹೆಚ್ಚು ಅಸಮಾನವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಮೂರನೆಯ ಅಂಶ ಯಾವುದೆಂದರೆ, ಯಾವ ಪ್ರಕ್ರಿಯೆಯನ್ನು ಬಂಡವಾಳದ ಆದಿಮ ಸಂಚಯ ಎಂದು ಮಾರ್ಕ್ಸ್ ಕರೆದಿದ್ದರೊ ಅದೇ ಪ್ರಕ್ರಿಯೆಯೇ. ಈ ಪ್ರಕ್ರಿಯೆಯು ರೈತರಿಂದ ಭೂಮಿಯನ್ನು ದೊಡ್ಡ ಬಂಡವಾಳಗಾರರು ಪುಕ್ಕಟೆಯಾಗಿ ಅಥವಾ ದುಗ್ಗಾಣಿ ಬೆಲೆಗೆ ಸ್ವಾಧೀನಪಡಿಸಿಕೊಳ್ಳುವ ಸಂದರ್ಭಗಳನ್ನು ಒಳಗೊಳ್ಳುತ್ತದೆ ಮಾತ್ರವಲ್ಲ, ಹಿಂದೆ ಚಾಲ್ತಿಯಲ್ಲಿದ್ದ ಮಾರುಕಟ್ಟೆ ಬೆಲೆಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯ ಮೇಲೆ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿದ ನಂತರ ಅಥವಾ ವಾಸದ ಮನೆಗಳನ್ನು ನಿರ್ಮಿಸಿದ ನಂತರ ಆ ಭೂಮಿಯ ಮೌಲ್ಯವು ಹೆಚ್ಚುವ ಸಂದರ್ಭಗಳನ್ನು ಸಹ ಒಳಗೊಳ್ಳುತ್ತದೆ. ಭೂಮಿಯ ಬೆಲೆಯಲ್ಲಿನ ಈ ಹೆಚ್ಚಳವನ್ನುಷೇರು ಮಾರುಕಟ್ಟೆಯಲ್ಲಿ ಆಸ್ತಿಗಳ (ಷೇರುಗಳ) ಮಾರಾಟದಿಂದ ಗಳಿಸಿದ ಬಂಡವಾಳ-ಗಳಿಕೆಯೊಂದಿಗೆ ಹೋಲಿಸಬಹುದು ಎಂದು ಮೊದಲ ನೋಟದಲ್ಲಿ ಅನಿಸಬಹುದು. ಆದರೆ ಇಲ್ಲೊಂದು ಮೂಲಭೂತ ವ್ಯತ್ಯಾಸವಿದೆ: ಷೇರು ಮಾರುಕಟ್ಟೆಯ ಏರಿಳಿತಗಳು ಬಂಡವಾಳ-ಗಳಿಕೆಗಳನ್ನು ಏರು ಪೇರು ಮಾಡಬಹುದಾದರೂ, ಭೂಮಿಯ ಬೆಲೆಗಳು ಸಾಮಾನ್ಯವಾಗಿ ಗಗನ ಮುಖಿಯಾಗಿರುತ್ತವೆ. ಆದ್ದರಿಂದ, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಇಂತಹ ಸಂದರ್ಭಗಳನ್ನೂ ಸಹ ಬಂಡವಾಳದ ಆದಿಮ ಸಂಚಯವೆಂದೇ ನೋಡಬೇಕಾಗುತ್ತದೆ. ಏಕೆಂದರೆ, ರೈತರಿಗೆ ಚಾಲ್ತಿಯಲ್ಲಿರುವ ಭೂಮಿಯ ಮಾರುಕಟ್ಟೆ ಬೆಲೆಗಿಂತ ಅತಿ ಕಡಿಮೆ ಬೆಲೆಯನ್ನು ಕೊಡಲಾಗಿರುತ್ತದೆ (ಈ ಬೆಲೆಯು ಸಂಪತ್ತಿನ ಲೆಕ್ಕಾಚಾರದಲ್ಲಿ ಪರಿಗಣಿತವಾಗುತ್ತದೆ).

ಸಾರ್ವಜನಿಕ ಸಂಪನ್ಮೂಲಗಳನ್ನು ದೊಡ್ಡ ಬಂಡವಾಳಶಾಹಿಗಳ ಜೇಬಿಗೆ ಪುಕ್ಕಟೆಯಾಗಿ ವರ್ಗಾಯಿಸುವ ಹಲವಾರು ವಿಧಾನಗಳು ಈಗಿನ ದಿನಗಳಲ್ಲಿ ಬಂಡವಾಳದ ಆದಿಮ ಶೇಖರಣೆಯ ಒಂದು ಪ್ರಮುಖ ಮೂಲವಾಗಿವೆ. ಬೆಳವಣಿಗೆಯನ್ನು ಉತ್ತೇಜಿಸಲು ಪ್ರೋತ್ಸಾಹಕಗಳನ್ನು ಒದಗಿಸುವ ಹೆಸರಿನಲ್ಲಿ ಇದನ್ನು ಮಾಡಲಾಗುತ್ತದೆ ಮತ್ತು ಇದು ಎಲ್ಲರಿಗೂ ಪ್ರಯೋಜನಕಾರಿಯಾಗುತ್ತದೆ ಎಂದು ಭಾವಿಸಲಾಗಿದೆ. ಸಂಪತ್ತಿನ ಅಸಮತೆಗಳ ಹೆಚ್ಚಳದ ಮೇಲೆ ಪರಿಣಾಮ ಬೀರುವ ಅಂತಹ ಬಹಿರಂಗ ಮಾರ್ಗಗಳ ಹೊರತಾಗಿಯೂ, ದೊಡ್ಡ ಬಂಡವಾಳವು ಈ ಉದ್ದೇಶಕ್ಕಾಗಿ ಯಾವುದಕ್ಕೂ ಹೇಸದ ನಾನಾ ರೀತಿಯ ಕೃತ್ಯಗಳಲ್ಲಿ ತೊಡಗುತ್ತದೆ. ತಮ್ಮ ಭೂಮಿಯಿಂದ ಜನರನ್ನು ಒಕ್ಕಲೆಬ್ಬಿಸಲು ಕೋಮು ಗಲಭೆಗಳನ್ನು ರೂಪಿಸಿ ನಂತರ ಆ ಭೂಮಿಯನ್ನು ನೇರವಾಗಿ ಅಲ್ಲದಿದ್ದರೂ ಸುತ್ತಿ ಬಳಸಿ ದುಗ್ಗಾಣಿ ಬೆಲೆಗೆ ದೊಡ್ಡ ಬಂಡವಾಳವು ಸ್ವಾಧೀನಪಡಿಸಿಕೊಂಡಿರುವ ಉದಾಹರಣೆಗಳಿವೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಸಂಪತ್ತಿನ ಅಸಮತೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸುವ ಈ ಎಲ್ಲಾ ವಿಧಾನಗಳೂ ನವ-ಉದಾರವಾದದ ಆಳ್ವಿಕೆಯಲ್ಲಿ ಉತ್ತೇಜನ ಪಡೆಯುತ್ತವೆ. ಖಾಸಗಿ ಕಿತ್ತುಕೊಳ್ಳುವಿಕೆಯು ಪರಾಕಾಷ್ಠೆಗೇರುವ ನವ-ಉದಾರವಾದದಲ್ಲಿ ಈ ಕ್ರಮಗಳು ಎಲ್ಲರಿಗೂ ಪ್ರಯೋಜನ ತರುತ್ತವೆ ಎಂಬ ನೆಲೆಯಲ್ಲಿ ಅವುಗಳಿಗೆ ಎದುರಾಗುವ ಎಲ್ಲ ಆಕ್ಷೇಪಣೆಗಳನ್ನೂ ಅದು ತಳ್ಳಿಹಾಕುವಾಗಲೇ, ಇತ್ತ ಸಾರ್ವಜನಿಕ ಉದ್ದಿಮೆಗಳನ್ನು ಹೀನೈಸುವ ಕೆಲಸವೂ ನಡೆಯುತ್ತದೆ.

Donate Janashakthi Media

Leave a Reply

Your email address will not be published. Required fields are marked *