ಪ್ರಕಾಶ್ ಕಾರತ್
1990ರಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಗೆ ಮಂಡಲ್ ಆಯೋಗದ ಅನುಷ್ಠಾನ ಸಮಯದಲ್ಲಿ ಸಾಮಾನ್ಯ ವರ್ಗದ ಬಡವರಿಗೆ ಸ್ವಲ್ಪ ಪ್ರಮಾಣದ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆಯನ್ನು ಸಿಪಿಐ(ಎಂ) ಮುಂದಿಟ್ಟಿತ್ತು.
ಸಾಮಾನ್ಯ ವರ್ಗದೊಳಗಿನ (ಜನರಲ್ ಕೆಟಗರಿ) ಆರ್ಥಿಕವಾಗಿ ದುರ್ಬಲ ವಿಭಾಗಗಳಿಗೆ (ಇಡಬ್ಲ್ಯುಎಸ್) ಮೀಸಲಾತಿ ಕಲ್ಪಿಸುವ ಕುರಿತ ಸಂವಿಧಾನದ 103ನೇ ತಿದ್ದುಪಡಿಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ನ ಒಂದು ಸಂವಿಧಾನ ಪೀಠ 3-2 ಬಹುಮತದಿಂದ ಎತ್ತಿ ಹಿಡಿದಿದೆ. 2019 ಜನವರಿಯಲ್ಲಿ ಸಂಸತ್ತಿನಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಈ ಸಾಂವಿಧಾನಿಕ ತಿದುಪಡಿಗೆ ಬೆಂಬಲ ನೀಡಿತ್ತು.
ಸಾಮಾನ್ಯ ವರ್ಗದ ಇಡಬ್ಲ್ಯುಎಸ್‌ನವರಿಗೆ ಗರಿಷ್ಠ 10% ಮೀಸಲಾತಿ ನೀಡಲು ಈ ತಿದ್ದುಪಡಿ ನೆರವಾಗುತ್ತದೆ. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕೆಟಗರಿಯಲ್ಲಿ ಬಾರದ ವಿಭಾಗಗಳಿಗೆ ಎಂದು ಇದರ ಅರ್ಥವಾಗಿದೆ. 1990ರಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಗೆ ಮಂಡಲ್ ಆಯೋಗದ ಅನುಷ್ಠಾನ ಸಮಯದಲ್ಲಿ ಸಾಮಾನ್ಯ ವರ್ಗದ ಬಡವರಿಗೆ ಸ್ವಲ್ಪ ಪ್ರಮಾಣದ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆಯನ್ನು ಸಿಪಿಐ(ಎಂ) ಮುಂದಿಟ್ಟಿತ್ತು.
ಒಬಿಸಿಗಳಿಗೆ 27% ಮೀಸಲಾತಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದ ಸಿಪಿಐ(ಎಂ), ಜನರಲ್ ಕೆಟಗರಿಯ ಬಡ ವಿಭಾಗಗಳಿಗೆ ಸ್ವಲ್ಪ ಪ್ರಮಾಣದ ಮೀಸಲಾತಿ ಅಗತ್ಯ ಎಂದು ಪ್ರತಿಪಾದಿಸಿತ್ತು. ಮೀಸಲಾತಿ-ವಿರೋಧಿ ಚಳವಳಿಯೊಂದಿಗೆ ಆಗಿದ್ದ ತೀಕ್ಷ್ಣ ಧ್ರುವೀಕರಣವನ್ನು ಶಾಂತಗೊಳಿಸಲು ಇದು ನೆರವಾಗಬಹುದು ಎಂದು ಪಕ್ಷ ಭಾವಿಸಿತ್ತು. ವರ್ಗ ಧೋರಣೆ ಹೊಂದಿರುವುದರಿಂದ, ಒಬಿಸಿ ಕೋಟಾದೊಳಗೇ ಆರ್ಥಿಕ ಮನದಂಡವನ್ನೂ ಅಳವಡಿಸಬೇಕೆಂದು ಪಕ್ಷ ಅಭಿಪ್ರಾಯ ಪಟ್ಟಿತ್ತು. ಇದರಿಂದಾಗಿ ಈ ವರ್ಗದ ನೈಜ ಅರ್ಹರು ಮೀಸಲಾತಿ ಪಡೆಯಬಹುದು ಎನ್ನುವುದು ಇದರ ಉದ್ದೇಶವಾಗಿತ್ತು. ಅದನ್ನು ನಂತರ ಸುಪ್ರೀಂ ಕೋರ್ಟ್ `ಕೆನೆ ಪದರ’ (ಕ್ರೀಮಿ ಲೇಯರ್) ರೂಪದಲ್ಲಿ ಅಂಗೀಕರಿಸಿತ್ತು.
ಶತಮಾನಗಳ ಕಾಲದ ದಬ್ಬಾಳಿಕೆಯ ಜಾತಿ ವ್ಯವಸ್ಥೆಯನ್ನು ಆಧರಿಸಿರುವ `ಸಾಮಾಜಿಕ ಮತ್ತು ಶೈಕ್ಷಣಿಕವಾಗಿ’ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ಎತ್ತಿ ಹಿಡಿಯುವಾಗಲೇ ದುಡಿಯುವ ಜನರು ಮತ್ತು ಎಲ್ಲ ಜಾತಿ ಮತ್ತು ಸಮುದಾಯಗಳ ಬಡವರನ್ನು ಒಗ್ಗೂಡಿಸುವುದು ಸಿಪಿಐ(ಎಂ) ಕಾಳಜಿಯಾಗಿದೆ. ಈಗಿರುವ ಶೋಷಣಾತ್ಮಕ ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ವಿರುದ್ಧ ಹೋರಾಡಲು ಇರುವ ಮಾರ್ಗ ಇದಾಗಿದೆ. ಎಲ್ಲ ಜಾತಿಗಳ ಬಡವರನ್ನು ಒಗ್ಗೂಡಿಸಲು ಮತ್ತು ವಿಭಜನೆಗಳನ್ನು ನಿವಾರಿಸಲು ಸಾಮಾನ್ಯ ವರ್ಗದೊಳಗಿನ ಬಡ ವಿಭಾಗಗಳಿಗೆ ಸ್ವಲ್ಪ ಮಟ್ಟಿಗಿನ ಮೀಸಲಾತಿ ಅಗತ್ಯ ಎಂದು ಸಿಪಿಐ(ಎಂ) ಪ್ರತಿಪಾದಿಸಿತ್ತು. ಇದು ಒಬಿಸಿಗಳು, ಎಸ್‌ಸಿ ಮತ್ತು ಎಸ್‌ಟಿಗಳ ಹಾಲಿ ಮೀಸಲಾತಿ ಶೇಕಡಾವಾರಿನ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವುದು ಸ್ಪಷ್ಟ. ಹಾಲಿ ಅಸ್ತಿತ್ವದಲ್ಲಿರುವ ಮೀಸಲಾತಿ ಕೋಟಾ ಪಡೆಯಲು ಆಗದಿರುವ ಎಲ್ಲ ಧಾರ್ಮಿಕ ಗುಂಪುಗಳು ಮತ್ತು ಸಮುದಾಯಗಳನ್ನು ಒಳಗೊಳ್ಳುವಂತೆ ಸಾಮಾನ್ಯ ವರ್ಗದಿಂದ ಇಡಬ್ಲ್ಯುಎಸ್ ಕೋಟಾವನ್ನು ರೂಪಿಸಬೇಕು.
ಆದರೆ, ಯಾರು ಇಡಬ್ಲ್ಯುಎಸ್ ಎನ್ನುವುದನ್ನು ವ್ಯಾಖ್ಯಾನಿಸಲು ಅಧಿಕೃತ ಜ್ಞಾಪನದ ಮೂಲಕ ಮೋದಿ ಸರಕಾರ ನಿಗದಿಪಡಿಸಿದ ಮಾನದಂಡವನ್ನು ಪಕ್ಷ ಟೀಕಿಸಿದೆ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಕೇಂದ್ರ ಸರಕಾರದ ಮೀಸಲಾತಿಗೆ ಇಡಬ್ಲ್ಯುಎಸ್ ಎಂದರೆ ವಾರ್ಷಿಕ 8 ಲಕ್ಷ ರೂಪಾಯಿಗಿಂತ ಕಡಿಮೆ ವರಮಾನ ಇರುವವರು; ಆದರೆ ಐದು ಎಕರೆಗಿಂತ ಹೆಚ್ಚು ಕೃಷಿ ಜಮೀನು ಇಲ್ಲದವರು, ಅಥವಾ ಅಧಿಸೂಚಿತ ಮುನಿಸಿಪಾಲಿಟಿ ವ್ಯಾಪ್ತಿಯಲ್ಲಿ 1000 ಚದರ ಅಡಿಗಿಂತ ಮೇಲಿನ ವಾಸಸ್ಥಳ (ಮನೆ) ಅಥವಾ 100 ಯಾರ್ಡ್ ಪ್ಲಾಟ್ ಹೊಂದಿರದ ಕುಟುಂಬ ಎಂದು ಅರ್ಥ. ಅಂದರೆ ಯಾರು ಬಡವರಲ್ಲವೋ ಅವರು ಇಡಬ್ಲ್ಯುಎಸ್ ಕೋಟಾ ಸೌಲಭ್ಯ ಪಡೆಯಬಹುದು ಎಂದಾಗುತ್ತದೆ. ಆದಾಯ ತೆರಿಗೆ ವಿನಾಯಿತಿಗೆ ಇರುವ ವಾರ್ಷಿಕ ವರಮಾನ ಮಿತಿ 2.5 ಲಕ್ಷ ರೂಪಾಯಿ. ಅದಕ್ಕಿಂತ ಮೇಲಿನ ಆದಾಯಕ್ಕೆ ಆದಾಯ ತೆರಿಗೆ ಕಟ್ಟಬೇಕಾಗುತ್ತದೆ. ಅದೇ ರೀತಿ, ಐದು ಎಕರೆ ಕೃಷಿ ಭೂಮಿ ಹೊಂದಿರುವವರು ಬಡವರಾಗುವುದಿಲ್ಲ. ಹಾಗಾಗಿ, ಸೀಲಿಂಗ್ ಮತ್ತು ಮಿತಿಗಳನ್ನು ಜಾಸ್ತಿ ಮತ್ತು ವಿಶಾಲವಿರಿಸಿರುವುದರಿಂದ ಇಡಬ್ಲ್ಯುಎಸ್ ಮೀಸಲಾತಿಯ ಉದ್ದೇಶವೇ ವಿಫಲವಾಗುತ್ತದೆ. ಈ ಅಧಿಕೃತ ಜ್ಞಾಪನ ಪ್ರಶ್ನಿಸಿ ಹಲವರು ಅರ್ಜಿಗಳನ್ನು ಸಲ್ಲಿಸಿರುವುದರಿಂದ ಸುಪ್ರೀಂ ಕೋರ್ಟ್ ಈ ಅಂಶವನ್ನು ಇನ್ನಷ್ಟೇ ಪರಿಶೀಲಿಸಬೇಕಿದೆ.
ರಾಜ್ಯ ಮಟ್ಟದ ಉದ್ಯೋಗ ಮತ್ತು ಶಿಕ್ಷಣಕ್ಕೆ ಇಡಬ್ಲ್ಯುಎಸ್ ಕೋಟಾ ಕೊಡುವುದು ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು. ಇಡಬ್ಲ್ಯುಎಸ್ ಮಾನದಂಡ ಮತ್ತು ಕೋಟಾದ ಮಟ್ಟವನ್ನು ನಿರ್ಧರಿಸಲು ಕೇರಳದ ಎಲ್‌ಡಿಎಫ್ ಸರಕಾರ ಆಯೋಗವೊಂದನ್ನು ರಚಿಸಿದೆ. ಕುಟುಂಬದ ಆದಾಯ ವಾರ್ಷಿಕ 4 ಲಕ್ಷ ರೂಪಾಯಿಗಿಂತ ಕಡಿಮೆ ಇರುವ ಹಾಗೂ 2.5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರದ ಕುಟುಂಬ ಇಡಬ್ಲ್ಯುಎಸ್ ಮೀಸಲಾತಿಗೆ ಅರ್ಹ ಎಂದು ಜಸ್ಟಿಸ್ ಶ್ರೀಧರನ್ ನಾಯರ್ ಆಯೋಗ ಹಿಂದೆ ಹೇಳಿತ್ತು. ಕೇರಳ ಸಚಿವ ಸಂಪುಟ 2020ರಲ್ಲಿ ಈ ಶಿಫಾರಸುಗಳನ್ನು ಅಂಗೀಕರಿಸಿತ್ತು. ಕೇರಳದಲ್ಲಿ ಪ್ರಸ್ತುತ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇಕಡ 10 ಮೀಸಲಾತಿ ಅನುಷ್ಠಾನಗೊಳಿಸಲಾಗುತ್ತಿದೆ. ಇಡಬ್ಲ್ಯುಎಸ್ ವ್ಯಾಖಾನಿಸಲು ಅಳವಡಿಸಿಕೊಂಡ ಮಾನದಂಡವು ಸಾಮಾನ್ಯ ವರ್ಗದೊಳಗಿನ ಬಡ ವಿಭಾಗಗಳನ್ನು ಸರಿಯಾಗಿ ನಿರ್ವಹಿಸುತ್ತದೆ.
ಕೋಟಾದ ಲಾಭ ನಿಜವಾಗಿಯೂ ಆರ್ಥಿಕವಾಗಿ ವಂಚಿತರನ್ನು ತಲುಪಬೇಕಾದರೆ ಕೇಂದ್ರ ಸರಕಾರ ಇಡಬ್ಲ್ಯುಎಸ್ ವ್ಯಾಖ್ಯಾನಿಸಲು ಅನುಸರಿಸುವ ಮಾನದಂಡವನ್ನು ತಕ್ಷಣವೇ ಪರಿಷ್ಕರಿಸಬೇಕು.
ಅನು: ವಿಶ್ವ