ಜಾತಿ ಜನಗಣತಿಗೆ ಮೋದಿ ಸರಕಾರದ ನಿರಾಕರಣೆ – ಹಿಂದುತ್ವ ಕೋಮು ರಾಜಕೀಯದ ನಿಜರೂಪ ಬಯಲು

ಬಿ ವಿ ರಾಘವುಲು

ಬಿ ವಿ ರಾಘವುಲು

ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ, 2021ರ ಜನಗಣತಿ ಕಾರ್ಯಾಚರಣೆಯಲ್ಲಿ ಜಾತಿ ಗಣತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಇದು “ಪ್ರಜ್ಞಾಪೂರ್ವಕ ನೀತಿ ನಿರ್ಧಾರ” ಎಂದೂ ಅದು ಸ್ಪಷ್ಟಪಡಿಸಿದೆ. ಸಾಮಾನ್ಯ ಜನಗಣತಿಯ ಭಾಗವಾಗಿ ಜಾತಿಗಣತಿಯನ್ನು ನಡೆಸಬೇಕೆಂಬ ಬೇಡಿಕೆಗೆ ವ್ಯಾಪಕ ಜನ ಬೆಂಬಲವಿದೆ. ಇದನ್ನು ತಿರಸ್ಕರಿಸಲು ಕೇಂದ್ರ ಸರ್ಕಾರವು ಮುಂದಿಟ್ಟಿರುವ ಕಾರಣಗಳು ತುಂಬಾ ದುರ್ಬಲ ಮತ್ತು ಕ್ಷುಲ್ಲಕವಾಗಿವೆ. ವಾಸ್ತವವಾಗಿ, ಅದರ ನಿರಾಕರಣೆಯ ಹಿಂದಿನ ನಿಜವಾದ ಕಾರಣವೆಂದರೆ, ಜಾತಿ ಗಣತಿಯ ಫಲಿತಾಂಶಗಳು ಹಿಂದುತ್ವ ಕೋಮು ರಾಜಕೀಯದ ನೈಜ ಸ್ವರೂಪವನ್ನು ಬಹಿರಂಗಪಡಿಸಲು ಸಂಘ ಪರಿವಾರ ಬಯಸುವುದಿಲ್ಲ ಎಂಬುದೇ ಆಗಿದೆ.

ಸೆಪ್ಟೆಂಬರ್ 23ರಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ, 2021 ರ ಜನಗಣತಿ ಕಾರ್ಯಾಚರಣೆಯಲ್ಲಿ ಜಾತಿ ಗಣತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಇದು “ಪ್ರಜ್ಞಾಪೂರ್ವಕ ನೀತಿ ನಿರ್ಧಾರ” ಎಂದೂ ಅದು ಸ್ಪಷ್ಟಪಡಿಸಿದೆ. ಸಾಮಾನ್ಯ ಜನಗಣತಿಯ ಭಾಗವಾಗಿ ಜಾತಿಗಣತಿಯನ್ನು ನಡೆಸಬೇಕೆಂಬ ಬೇಡಿಕೆಗೆ ವ್ಯಾಪಕ ಜನ ಬೆಂಬಲವಿದೆ. ಇದನ್ನು ತಿರಸ್ಕರಿಸಲು ಕೇಂದ್ರ ಸರ್ಕಾರವು ಮುಂದಿಟ್ಟಿರುವ ಕಾರಣಗಳು ತುಂಬಾ ದುರ್ಬಲ ಮತ್ತು ಕ್ಷುಲ್ಲಕವಾಗಿವೆ. ವಾಸ್ತವವಾಗಿ, ಅದರ ನಿರಾಕರಣೆಯ ಹಿಂದಿನ ನಿಜವಾದ ಕಾರಣವೆಂದರೆ, ಜಾತಿ ಗಣತಿಯ ಫಲಿತಾಂಶಗಳು ಹಿಂದುತ್ವ ಕೋಮು ರಾಜಕೀಯದ ನೈಜ ಸ್ವರೂಪವನ್ನು ಬಹಿರಂಗಪಡಿಸಲು ಸಂಘ ಪರಿವಾರ ಬಯಸುವುದಿಲ್ಲ ಎಂಬುದೇ ಆಗಿದೆ.

ಹಿಂದುಳಿದ ವರ್ಗಗಳ ಜಾತಿ ವಿವರಗಳನ್ನು ಸಂಗ್ರಹಿಸುವುದು, ’ಆಡಳಿತಾತ್ಮಕವಾಗಿ ಕಷ್ಟಕರ ಮತ್ತು ತೊಡಕಿನದ್ದು’ ಎಂದು ಕೇಂದ್ರ ಸರ್ಕಾರ ತನ್ನ ಪ್ರಮಾಣ ಪತ್ರದಲ್ಲಿ ಹೇಳಿದೆ. “ಅಂಕಿ ಅಂಶಗಳ ಸಂಪೂರ್ಣತೆ ಮತ್ತು ನಿಖರತೆಯ” ‘ಬಗ್ಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ ಮತ್ತು ಆ ಅಂಕಿಅಂಶಗಳನ್ನು ಅಧಿಕೃತ ಉದ್ದೇಶಗಳಿಗಾಗಿ ’ಯಾವುದೇ ಅಧಿಕೃತ ದಾಖಲೆಗಳಲ್ಲಿ ಜನಸಂಖ್ಯೆಯ ಮಾಹಿತಿಯ ಒಂದು ಮೂಲವಾಗಿ ಬಳಸಲಾಗುವುದಿಲ್ಲ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜಾತಿ ದತ್ತಾಂಶವನ್ನು ಸಂಗ್ರಹಿಸುವ ಹಿಂದಿನ ಪ್ರಯತ್ನಗಳನ್ನು ಗಮನಿಸಿದ ಯಾರಿಗಾದರೂ ಈ ವಾದಗಳು ಸತ್ಯಗಳನ್ನು ಆಧರಿಸಿರುವುದಿಲ್ಲ ಮತ್ತು ಹಿಂದಿನ ಅನುಭವಕ್ಕೆ ವಿರುದ್ಧವಾದ ಮಾತು ಎಂದು ಅರ್ಥವಾಗುತ್ತದೆ. ಸಾಕಷ್ಟು ರಾಜಕೀಯ ಆಶಯವಿದ್ದರೆ ಜಾತಿಗಣತಿಯನ್ನು ಮಾಡಬಹುದು.

ಸ್ವಾತಂತ್ರ್ಯ ಪೂರ್ವದಲ್ಲಿ, ಅಂದರೆ, 1881 ರಿಂದ 1941 ರವರೆಗಿನ ಎಲ್ಲಾ ದಶಕದ ಜನಗಣತಿ ಕಾರ್ಯಾಚರಣೆಯಲ್ಲಿ, ಜಾತಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ವಿಶೇಷ ಸಂಗತಿಯೆಂದರೆ 1921ರ ಜನಗಣತಿಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ನಾವು ಇನ್ನೂ ಅವಲಂಬಿಸಿದ್ದೇವೆ, ಏಕೆಂದರೆ ಜಾತಿಗೆ ಸಂಬಂಧಿಸಿದ ಮಾಹಿತಿಯನ್ನು ನಂತರದ ಜನಗಣತಿ ಕಾರ್ಯಾಚರಣೆಯಲ್ಲಿ ಸೇರಿಸಲಾಗಿಲ್ಲ (1941ರ ಜನಗಣತಿಯಲ್ಲಿ ಸಂಗ್ರಹಿಸಿದ ಜಾತಿ ವಿವರಗಳನ್ನು ಎರಡನೇ ವಿಶ್ವಯುದ್ಧದ ಕಾರಣ ಪಟ್ಟಿ ಮಾಡಿ ಪ್ರಕಟಿಸಲಾಗಿಲ್ಲ).

ಮಂಡಲ್ ಆಯೋಗವು ಈ ಜನಗಣತಿಯ ದತ್ತಾಂಶದ ಮೇಲೆ ಹಿಂದುಳಿದ ಜಾತಿಗಳ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು 52 ಶೇಕಡಾ ಎಂದು ಅಂದಾಜಿಸಿದೆ. ಅನೇಕ ಬೂರ್ಜ್ವಾ ಪಕ್ಷಗಳು ತಮ್ಮ ಸಾಮಾಜಿಕ ಹೂಟ ತಂತ್ರಗಳನ್ನು ನಿಖರಗೊಳಿಸಲು ಈ ಅಂಕಿಅಂಶಗಳನ್ನು ಬಳಸುತ್ತಿವೆ. ಮೋದಿ ಸರ್ಕಾರ ಹೇಳಿಕೊಂಡಂತೆ, ಸ್ವಾತಂತ್ರ್ಯದ ನಂತರವೂ, ಜಾತಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹವನ್ನು ಕೈಬಿಟ್ಟಿಲ್ಲ. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ, 1968ರಲ್ಲಿ, ಇಎಂಎಸ್ ನಂಬೂದಿರಿಪಾಡ್ ನೇತೃತ್ವದ ಎಲ್‌ಡಿಎಫ್ ಸರ್ಕಾರವು ಜಾತಿ ವಿವರಗಳನ್ನು ಸಮಗ್ರ ಮತ್ತು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸಿತು. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಅದು ತನ್ನ ಸಾಮಾಜಿಕ-ಆರ್ಥಿಕ, ಕಲ್ಯಾಣ ಕಾರ್ಯಕ್ರಮಗಳನ್ನು ಬಡವರಿಗಾಗಿ ವಿನ್ಯಾಸಗೊಳಿಸಲು ಮತ್ತು ಮೀಸಲಾತಿಯ ನಮೂನೆಯನ್ನು ನಿರ್ಧರಿಸಲು ಬಳಸಿತು.

ಅಂದಿನಿಂದ, ಅನೇಕ ಸರ್ಕಾರಿ ಸಂಸ್ಥೆಗಳು ತಮ್ಮ ಸಮೀಕ್ಷೆಗಳ ಮೂಲಕ ಜಾತಿಗೆ ಸಂಬಂಧಿಸಿದ ಮಾಹಿತಿಯನ್ನು ನಿಯಮಿತವಾಗಿ ಸಂಗ್ರಹಿಸುತ್ತಿವೆ. ರಾಷ್ಟ್ರೀಯ ಮಾದರಿ ಸಮೀಕ್ಷೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಮತ್ತು ಕೃಷಿ ಸಂಸಾರಗಳ ಸನ್ನಿವೇಶ ಮೌಲ್ಯಮಾಪನ, ಇದಕ್ಕೆ ಕೆಲವು ಉದಾಹರಣೆಗಳಾಗಿವೆ. ಈ ಸಮೀಕ್ಷೆಗಳ ಮೂಲಕ ಸಂಗ್ರಹಿಸಿದ ದತ್ತಾಂಶಗಳನ್ನು ಅನೇಕ ಸರ್ಕಾರದ ಮಧ್ಯಪ್ರವೇಶಗಳನ್ನು ವಿನ್ಯಾಸಗೊಳಿಸಲು ಬಳಸಲಾಗುತ್ತಿದೆ.

2011ರಲ್ಲಿ, ಸಾಮಾನ್ಯ ಜನಗಣತಿ ಕಾರ್ಯಾಚರಣೆಯ ಭಾಗವಾಗಿ ಮಾಡದಿದ್ದರೂ ಸಹಾ, ದೇಶವ್ಯಾಪಿ ಬೃಹತ್ “ಸಾಮಾಜಿಕ-ಆರ್ಥಿಕ ಜಾತಿಗಣತಿ” (ಎಸ್‌ಇಸಿಸಿ) ಯನ್ನು ಕೈಗೊಳ್ಳಲಾಯಿತು. ಇದರಲ್ಲಿ 118 ಕೋಟಿ ಜನರ ಮಾಹಿತಿಗಳನ್ನು ಸಂಗ್ರಹಿಸಲಾಯಿತು. ಈ ದತ್ತಾಂಶವನ್ನು ತಾಳೆ ನೋಡಲಾಗಿದೆ ಮತ್ತು ಪಟ್ಟಿ ಮಾಡಲಾಗಿದೆ. ಗುರುತಿಸಲಾದ ಹೆಚ್ಚಿನ ತಪ್ಪುಗಳನ್ನು ಆಯಾ ರಾಜ್ಯಗಳ ಸಹಾಯದಿಂದ ಸರಿಪಡಿಸಲಾಗಿದೆ. ಕೇವಲ 1,42,00,000 (ಒಂದು ಕೋಟಿ ನಲವತ್ತು ಮೂರು ಲಕ್ಷ) ದೋಷಗಳನ್ನು ಮಾತ್ರ ಇನ್ನೂ ಪರಿಹರಿಸಬೇಕಾಗಿದೆ. ಇದು ಕೇವಲ 1.2 ಪ್ರತಿಶತದಷ್ಟಿದೆ. ಆದರೆ ಸರ್ಕಾರಗಳು, ಮೊದಲು ಕಾಂಗ್ರೆಸ್, ನಂತರ ಬಿಜೆಪಿ, ಈ ದತ್ತಾಂಶವನ್ನು ಬಿಡುಗಡೆ ಮಾಡಿಯೇ ಇಲ್ಲ. 2014 ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಕ್ರೋಡಿಕೃತ ಅಂಕಿಅಂಶಗಳನ್ನು ಮಾತ್ರ ಬಿಡುಗಡೆ ಮಾಡಿತು. 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಮೋದಿ ಸರ್ಕಾರ, ದತ್ತಾಂಶವನ್ನು ಬಿಡುಗಡೆ ಮಾಡದೆ ಎಸ್‌ಇಸಿಸಿ ರೂ 5000 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ ಎಂದು ಘೋಷಿಸಿತು. ಸಂಪೂರ್ಣ ದತ್ತಾಂಶವನ್ನು ಕಸದ ಡಬ್ಬಿಗೆ ರವಾನಿಸಿತು. ಎಸ್‍ಇಸಿಸಿ ರೀತಿಯಾಗಿ, ಮಾಡಿದ ಉತ್ತಮ ಆರಂಭವು ಅಮೂಲ್ಯವಾದ ಹಣದ ಬೃಹತ್ ದುಂದುವೆಚ್ಚವಾಗಿ ಕೊನೆಗೊಂಡಿತು.

2016ರಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ಗ್ರಾಮೀಣಾಭಿವೃದ್ಧಿಯ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಎಸ್‌ಇಸಿಸಿ ದತ್ತಾಂಶವು ಶೇಕಡಾ 98ರಷ್ಟು ದೋಷರಹಿತ ಎಂದು ಹೇಳಿದ್ದಾರೆ. ಆದರೆ ಮೋದಿ ಸರ್ಕಾರವು ಪ್ರಸಕ್ತ ದತ್ತಾಂಶವನ್ನು ಬಿಡುಗಡೆ ಮಾಡಲು ಮತ್ತು ಜಾತಿಗಣತಿಯನ್ನು ನಡೆಸಲು ನಿರಾಕರಿಸುತ್ತಿರುವುದನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ ಈ ದತ್ತಾಂಶ ಕಳಪೆ ಗುಣಮಟ್ಟದ್ದೆಂದು ಹಣೆಪಟ್ಟಿ ಹಚ್ಚುತ್ತಿದೆ. ಆ ಶೇಕಡಾ 2 ರಷ್ಟು ದೋಷಗಳು ಕೂಡ ಯಾವುದೇ ಜನಗಣತಿಯಲ್ಲಿ ಸಂಭವಿಸುವುದಕ್ಕಿಂತ ಹೆಚ್ಚೇನಲ್ಲ. ಎಸ್‌ಇಸಿಸಿಯಿಂದ ಪಡೆದ ಅನುಭವವನ್ನು ಬಳಸಿಕೊಂಡು, ತಾಂತ್ರಿಕ ದೋಷಗಳನ್ನು ಸರಿಪಡಿಸುವ ಮೂಲಕ, ಜನಗಣತಿ ಸಿಬ್ಬಂದಿಗೆ ಸರಿಯಾಗಿ ತರಬೇತಿ ನೀಡುವ ಮೂಲಕ, ಆಧುನಿಕ ಮಾಹಿತಿ ತಂತ್ರಜ್ಞಾನ ಮತ್ತು ದೊಡ್ಡ ದತ್ತಾಂಶ ವಿಶ್ಲೇಷಣಾಶಾಸ್ತ್ರ(ಬಿಗ್ ಡಾಟಾ ಅನಾಲಿಟಿಕ್ಸ್)ವನ್ನು ಬಳಸುವುದರಿಂದ, ಭವಿಷ್ಯದಲ್ಲಿ ಆ ಸಣ್ಣ ಪ್ರಮಾಣದ ದೋಷಗಳನ್ನು ಸಹ ತಪ್ಪಿಸಬಹುದು. ಆದರೆ ಮೋದಿ ಸರ್ಕಾರ ಜಾತಿಗಣತಿಯ ಬೇಡಿಕೆಯನ್ನು ತಿರಸ್ಕರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಅಸಮರ್ಥನೀಯ ವಾದವನ್ನು ಮುಂದುವರಿಸುತ್ತಿದೆ.

ಜಾತಿ ಗಣತಿಯ ವಿರುದ್ಧ ಇನ್ನಿತರ ಕೆಲವು ಆಕ್ಷೇಪಗಳನ್ನು ಎತ್ತಲಾಗುತ್ತಿದೆ. ಅವುಗಳಲ್ಲಿ ಒಂದು ಆಕ್ಷೇಪವೆಂದರೆ, ಇತರ ಹಿಂದುಳಿದ ವರ್ಗ(ಒಬಿಸಿ)ಗಳ ದತ್ತಾಂಶವನ್ನು ಸಂಗ್ರಹಿಸುವುದು ತುಂಬಾ ಕಷ್ಟಕರವಾಗಿದೆ, ಏಕೆಂದರೆ ಒಂದೇ ಜಾತಿಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಪಟ್ಟಿಗಳಲ್ಲಿ ವರ್ಗೀಕರಿಸಲಾಗಿದೆ; ರಾಜ್ಯ ಮತ್ತು ಕೇಂದ್ರ ಪಟ್ಟಿಗಳ ನಡುವೆ ವ್ಯತ್ಯಾಸವಿದೆ; ಅಂತರ್ಜಾತಿ ವಿವಾಹಗಳಿಂದ ಹುಟ್ಟಿದ ಮಕ್ಕಳನ್ನು ವರ್ಗೀಕರಿಸುವಲ್ಲಿ ಸಮಸ್ಯೆ ಇದೆ; ಮತ್ತು ಯಾವುದೇ ಜಾತಿಯವರು ಎಂದು ಹೇಳಲು ನಿರಾಕರಿಸುವವರನ್ನು ಹೇಗೆ ವರ್ಗೀಕರಿಸುವುದು ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ, ಇತ್ಯಾದಿಯಾಗಿ. ಆದರೆ ಇವೆಲ್ಲ ನಿವಾರಿಸಲಾಗದ ತೊಂದರೆಗಳೇನಲ್ಲ.

ಸಾಮಾನ್ಯ ಜನಗಣತಿಯಲ್ಲಿ, ಧರ್ಮದ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುವಲ್ಲಿಯೂ ಇಂತಹುದೇ ತೊಂದರೆಗಳಿವೆ- ಭಿನ್ನ ಧಾರ್ಮಿಕ ನಂಬಿಕೆಗಳವರ ವಿವಾಹಗಳಿಂದ ಹುಟ್ಟಿದ ಮಕ್ಕಳನ್ನು ವರ್ಗೀಕರಿಸುವುದು ಮತ್ತು ಯಾವುದೇ ಧರ್ಮವನ್ನು ಅನುಸರಿಸುತ್ತಿಲ್ಲ ಎಂದು ಹೇಳುವವರು ಇತ್ಯಾದಿ. ಧರ್ಮದ ಬಗ್ಗೆ ಅಂತಹ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಯಾವುದೇ ಸಮಸ್ಯೆ ಇಲ್ಲದಿರುವಾಗ, ಜಾತಿಗಣತಿಗೆ ಮಾತ್ರ ಮಾಹಿತಿ ಸಂಗ್ರಹಿಸಲು ಏಕೆ ಸಾಧ್ಯವಾಗುವುದಿಲ್ಲ? ಜನಗಣತಿಯಲ್ಲಿ ಧಾರ್ಮಿಕ ಅನುಸರಣೆ ಕುರಿತಾದ ದತ್ತಾಂಶ ಸಂಗ್ರಹವನ್ನು ವಿರೋಧಿಸದ ಬಿಜೆಪಿ, ಜಾತಿ ಗಣತಿಯನ್ನು ಮಾತ್ರ ವಿರೋಧಿಸುವುದು ಸ್ಪಷ್ಟವಾಗಿ ಅದರ ರಾಜಕೀಯ ಇಬ್ಬಂದಿತನವನ್ನು ಬಯಲುಗೊಳಿಸುತ್ತದೆ.

ಜಾತಿಗಣತಿ ವಿಚಾರದಲ್ಲಿ, ಬಿಜೆಪಿ ಅದರ ಪೋಷಕ ಸಂಘಟನೆ ಆರ್‌ಎಸ್‌ಎಸ್‌ಗೆ ವಿರುದ್ದವಾದ ನಿಲುಮೆ ಹೊಂದುತ್ತದೆ ಎಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಆರ್‌ಎಸ್‌ಎಸ್, ವಾಸ್ತವವಾಗಿ ಜಾತಿ ಗಣತಿಯ ಸಂಗ್ರಹವನ್ನು ಸದಾ ವಿರೋಧಿಸಿಕೊಂಡೇ ಬಂದಿದೆ. ಅನೇಕ ಸಂದರ್ಭಗಳಲ್ಲಿ ಹಲವಾರು ಆರ್‌ಎಸ್‌ಎಸ್ ಪ್ರಚಾರಕರು ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಮನು ಧರ್ಮವನ್ನು ತಮ್ಮ ಆದರ್ಶವಾಗಿ ಸ್ವೀಕರಿಸಿದವರು ಸಾಮಾಜಿಕ ನ್ಯಾಯದ ಪರವಾಗಿ ನಿಲ್ಲುತ್ತಾರೆಂದು ನಿರೀಕ್ಷಿಸಲಾಗದು. ಅವರು ಜಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸುವುದನ್ನು ಎಂದಿಗೂ ಸಹಿಸುವುದಿಲ್ಲ. ಹಿಂದುತ್ವದ ಆಧಾರದ ಮೇಲೆ ಹಿಂದುಗಳ ಕೋಮುವಾದೀಕರಣ ಮಾಡಬೇಕಾದರೆ, ಅಸ್ತಿತ್ವದಲ್ಲಿರುವ ಸಾಮಾಜಿಕ-ಆರ್ಥಿಕ-ರಾಜಕೀಯ ಅಸಮಾನತೆಗಳು ಮತ್ತು ಜಾತಿ ಆಧಾರಿತ ದಬ್ಬಾಳಿಕೆಗಳನ್ನು ಮುಚ್ಚಿಡಬೇಕು ಮತ್ತು ಅದನ್ನು ಬೆಳಕೆಗೆ ಬರಲು ಬಿಡಬಾರದು. ಆದರೆ ಜಾತಿಗಣತಿ ನಡೆದರೆ, ಅದು ಹಿಂದೂ ಧರ್ಮದ ತಿರುಳಾಗಿರುವ ಜಾತಿ ವ್ಯವಸ್ಥೆಯ ಅಸಹ್ಯಕರ ಸ್ವರೂಪವನ್ನು ಬಹಿರಂಗಪಡಿಸುತ್ತದೆ. ಇದು ಕೋಮುವಾದಿ ರಾಜಕೀಯವನ್ನು ಆಧರಿಸಿದ ಏಕತೆಯನ್ನು ಹಾಳು ಮಾಡುತ್ತದೆ. ಹಿಂದುಗಳಲ್ಲಿ ಒಬಿಸಿಗಳು ಸೇರಿದಂತೆ ದಮನಿತ ಜಾತಿ ಸಮುದಾಯಗಳು ಸಂಪನ್ಮೂಲಗಳ ಅಸಮಾನ ವಿತರಣೆಯ ಬಗ್ಗೆ ಪ್ರಶ್ನಿಸಲು ಆರಂಭಿಸಿದರೆ, ಅದು ಕೋಮುವಾದಿ ಹಿಂದುತ್ವ ಯೋಜನೆಗೆ ಹಾನಿಯುಂಟು ಮಾಡುತ್ತದೆ. ಅದಕ್ಕಾಗಿಯೇ ಜಾತಿ ಗಣತಿಯ ವಿಚಾರವು ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಅಪಥ್ಯವಾಗಿದೆ.

ಇನ್ನೊಂದು ವ್ಯಾಪಕವಾದ ಅನಿಸಿಕೆಯೆಂದರೆ, ಜಾತಿ ದತ್ತಾಂಶ ಮಾಹಿತಿಯ ನೆರವಿನಿಂದ, ಜಾತಿ ಭಾವನೆಗಳು ಹೆಚ್ಚಾಗುತ್ತವೆ ಎಂಬುದು. ಇದು ಗಾಡಿ ಮೊದಲೋ ಕುದುರೆ ಮೊದಲೋ ಎಂಬಂತೆ. ಜಾತಿ ಪ್ರತ್ಯೇಕತೆ, ಅಸ್ಮಿತೆಯ ಭಾವನೆ, ಜಾತಿ ಶ್ರೇಣೀಕರಣದ ಅಂತರ್ಗತ ಲಕ್ಷಣವಾಗಿದೆ. ಎಲ್ಲಿಯವರೆಗೆ ಜಾತಿ ವ್ಯವಸ್ಥೆಯ ನಿರ್ಮೂಲನೆಯಾಗುವುದಿಲ್ಲವೋ ಅಲ್ಲಿಯವರೆಗೆ ಅಂತಹ ವಿಚಾರಗಳಿಗೆ ಬುನಾದಿಗಳು ಇದ್ದೇ ಇರುತ್ತದೆ. ಜಾತಿಗಣತಿ ಇಲ್ಲದಿದ್ದರೂ, ವಿವಿಧ ಅಂಶಗಳಿಂದಾಗಿ, ನಮ್ಮ ಸಮಾಜದಲ್ಲಿ ಜಾತಿ ಅಸ್ಮಿತೆಯ ಪ್ರಜ್ಞೆ ಹೆಚ್ಚುತ್ತಲೇ ಇದೆ. ಬೂರ್ಜ್ವಾ ರಾಜಕೀಯ ಪಕ್ಷಗಳು ತಮ್ಮ ಪಟ್ಟಭದ್ರ ಚುನಾವಣಾ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಅವುಗಳನ್ನು ಹುರಿದುಂಬಿಸುತ್ತಿವೆ. ದುರ್ಬಲ ವರ್ಗಗಳಲ್ಲಿ ಸಾಮಾಜಿಕ ಅಸಮಾನತೆಗಳ ವಿರುದ್ಧ ಜಾಗೃತಿ ಹೆಚ್ಚಾದಂತೆ, ಜಾತಿ ಅಸ್ಮಿತೆಯ ಪ್ರಜ್ಞೆ ಹೆಚ್ಚಾಗುತ್ತದೆ. ದುರ್ಬಲ ವರ್ಗಗಳಲ್ಲಿ ಈ ಜಾತಿ ಅಸ್ಮಿತೆಯ ಪ್ರಜ್ಞೆಯಲ್ಲಿ ಸಂಕುಚಿತತೆ ಇದ್ದರೂ, ಅದರಲ್ಲಿ ಒಂದು ಪ್ರಜಾಪ್ರಭುತ್ವ ಅಂಶ ಇರುವುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಜಾತಿಗಣತಿಯನ್ನು ವಿರೋಧಿಸುವ ಮೂಲಕ ನಾವು ಜಾತಿ ಪ್ರಜ್ಞೆಯನ್ನು ತಡೆದು ನಿಲ್ಲಿಸಬಹುದು ಎಂದು ಭಾವಿಸುವುದು ತಪ್ಪು. ಜಾತಿ ವ್ಯವಸ್ಥೆಯ ವಿರುದ್ಧ ನಮ್ಮ ಹೋರಾಟದ ಮೂಲಕವೇ, ನಾವು ಜಾತಿ ಪ್ರಜ್ಞೆಯನ್ನು ನಿರಾಕರಿಸಲು ಸಾಧ್ಯ.

ಕೆಲವರು, ಜಾತಿಗಣತಿಯನ್ನು ಆಕ್ಷೇಪಿಸಲು, ಅದು ಮೀಸಲಾತಿಗಾಗಿ ಹೊಸ ಬೇಡಿಕೆಗಳಿಗೆ ಮತ್ತು ಅಸ್ತಿತ್ವದಲ್ಲಿರುವ ಮೀಸಲಾತಿಗಳ ಮರುಹಂಚಿಕೆಗೆ ಕಾರಣವಾಗಬಹುದು ಎಂದು ವಾದ ಹೂಡುತ್ತಾರೆ. ಈ ವಾದದಲ್ಲಿ ಸ್ವಲ್ಪ ಸತ್ಯಾಂಶವಿದೆ. ಆದಾಗ್ಯೂ, ಜಾತಿ ಗಣತಿ ಇಲ್ಲದಿದ್ದರೂ ಸಹಾ, ಅಂತಹ ಬೇಡಿಕೆಗಳನ್ನು ಎತ್ತಲಾಗುತ್ತದೆ ಎಂಬುದನ್ನು ಗಮನಿಸಬೇಕು. ಆಯೋಗಗಳು ಹೊಸ ಜಾತಿಗಳಿಗೆ ಮೀಸಲಾತಿಯನ್ನು ಶಿಫಾರಸು ಮಾಡುತ್ತಿವೆ. ರಾಜಕೀಯ ಪಕ್ಷಗಳು ಕೂಡ ಇಂತಹ ಮೀಸಲಾತಿಗಳ ಭರವಸೆ ನೀಡುತ್ತಿವೆ. ಸರ್ಕಾರಗಳು ಕೂಡ ಇಂತಹ ಮೀಸಲಾತಿಗಳನ್ನು ನೀಡುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಜಾತಿ ಗಣತಿ ಇಲ್ಲದಿದ್ದರೂ ಇದೆಲ್ಲವೂ ನಡೆಯುತ್ತಲೇ ಬಂದಿವೆ.

ವಾಸ್ತವವಾಗಿ, ಜಾತಿ ಗಣತಿಯು ಕೆಲವು ಗುಂಪುಗಳ ಇಂತಹ ಬೇಡಿಕೆಗಳ ನೈಜತೆಯನ್ನು ನಿರ್ಧರಿಸಲು ಮತ್ತು ಇತರ ಕೆಲವು ಬೇಡಿಕೆಗಳನ್ನು ತಿರಸ್ಕರಿಸಲು ಸಹಾಯ ಮಾಡುತ್ತದೆ. ಅನೇಕ ಸಂದರ್ಭಗಳಲ್ಲಿ ನ್ಯಾಯಾಲಯಗಳು ಸರ್ಕಾರಗಳ ನಿರ್ಧಾರಗಳನ್ನು ತಿರಸ್ಕರಿಸುತ್ತಿದ್ದು ಅವುಗಳನ್ನು ಪರಿಶೀಲಿಸಬಹುದಾದ ದತ್ತಾಂಶದ ಆಧಾರದಲ್ಲಿ ತೆಗೆದುಕೊಳ್ಳಲಾಗಿಲ್ಲ ಎಂದು ಹೇಳುತ್ತಿವೆ. ಜಾತಿ ಗಣತಿಯನ್ನು ನಡೆಸಿದರೆ, ನ್ಯಾಯಾಲಯಗಳು ತಾಂತ್ರಿಕ ಆಧಾರದ ಮೇಲೆ ಪ್ರಕರಣಗಳನ್ನು ಬರ್ಖಾಸ್ತು ಮಾಡಲು ಸಾಧ್ಯವಿಲ್ಲ. ಇದಲ್ಲದೆ, ಜಾತಿ ಗಣತಿಯು ಜಾತಿ ಮತ್ತು ಸಾಮಾಜಿಕ-ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಯ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಆಳುವ ವರ್ಗಗಳ ಇದುವರೆಗಿನ ನೀತಿಗಳ ಮತ್ತು ಮೀಸಲಾತಿಗಳ ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಕೆಲವು ಒಬಿಸಿ ಜಾತಿ ಸಮುದಾಯಗಳಿಗೆ ಇನ್ನೂ, ಸಂಪನ್ಮೂಲಗಳುಮತ್ತು ಅವಕಾಶಗಳನ್ನು ಲಭ್ಯತೆಯನ್ನು ನಿರಾಕರಿಸಲಾಗಿರುವ ವಾಸ್ತವತೆಯು ಜಾತಿ ಗಣತಿಯ ಮೂಲಕ ಹೊರಬರುತ್ತದೆ. ಆಳುವ ವರ್ಗಗಳ ದಿವಾಳಿಕೋರ ನೀತಿಗಳು ಮತ್ತು ಸಾಮಾಜಿಕ ನ್ಯಾಯವನ್ನು ಈಡೇರಿಸುವಲ್ಲಿ ಅವರ ವೈಫಲ್ಯ ಬಯಲಿಗೆ ಬರುತ್ತದೆ.

ಆದಾಗ್ಯೂ, ಕೆಲವು ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳು ಜಾತಿ ಗಣತಿಯನ್ನು ಸಾಮಾಜಿಕ ನ್ಯಾಯದ ಸಾಕ್ಷಾತ್ಕಾರ ಮಾಡಿಸುವ ಒಂದು ಮಾಂತ್ರಿಕ ಗುಳಿಗೆ ಮತ್ತು ದುರ್ಬಲ ವರ್ಗಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಒಂದು ಪರಿಹಾರ ಎಂದು ಬಿಂಬಿಸುತ್ತಿದ್ದಾರೆ ಎಂಬ ಬಗ್ಗೆ ನಾವು ಜಾಗರೂಕರಾಗಿರಬೇಕು. ಎಸ್‌ಸಿ ಮತ್ತು ಎಸ್‌ಟಿಗಳ ಜಾತಿ/ಜನಾಂಗೀಯ ಮಾಹಿತಿ ಲಭ್ಯವಿದೆ, ಆದರೂ, ಸ್ವಾತಂತ್ರ್ಯದ ಏಳು ದಶಕಗಳ ನಂತರವೂ ಸಾಮಾಜಿಕ ನ್ಯಾಯವನ್ನು ಪಡೆಯುವಲ್ಲಿ ಅವರ ಅನುಭವ ಶೋಚನೀಯವಾಗಿದೆ. ಇದು ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತರುವ ನೀತಿಗಳತ್ತ ನಮ್ಮ ಗಮನ ಸೆಳೆಯಬೇಕು.

ನವ ಉದಾರವಾದಿ ನೀತಿಗಳ ಅನುಷ್ಠಾನದ ನಂತರ, ವಿಶೇಷವಾಗಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ನಂತರವಂತೂ ಖಾಸಗೀಕರಣ, ನಗದೀಕರಣ, ಸಬ್ಸಿಡಿಗಳು ಮತ್ತು ಕಲ್ಯಾಣ ಯೋಜನೆಗಳಲ್ಲಿ ಭೂ ಸುಧಾರಣೆ ಶಾಸನವನ್ನು ದುರ್ಬಲಗೊಳಿಸುವುದು, ಬಡ ಮತ್ತು ಮಧ್ಯಮ ರೈತರನ್ನು ದಿವಾಳಿತನಕ್ಕೆ ತಳ್ಳುವ ಹೊಸ ಕೃಷಿ ಕಾನೂನುಗಳನ್ನು ತರುತ್ತಿರುವುದು ಮತ್ತಿತರ ನೀತಿಗಳು ಮೀಸಲಾತಿಯ ಉಪಯುಕ್ತತೆಯನ್ನು ತೀವ್ರವಾಗಿ ಕಡಿಮೆ ಮಾಡಿವೆ ಮತ್ತು ಕಲ್ಯಾಣ ಯೋಜನೆಗಳ ಮಹತ್ವವನ್ನು ಮೊಟಕುಗೊಳಿಸಿವೆ. ಇಂತಹ ನೀತಿಗಳ ವಿರುದ್ಧ ಹೋರಾಟ ಮಾಡದೆ, ಜಾತಿ ಗಣತಿ ನಡೆಸಿದರೂ, ಒಬಿಸಿಗಳ ಬದುಕುಗಳಲ್ಲಿ ಒಂದು ದೊಡ್ಡ ಬದಲಾವಣೆಯಾಗುತ್ತದೆ ಎಂಬ ಭ್ರಮೆಯಲ್ಲಿ ನಾವು ಇರಬಾರದು.

ಅದೇ ಸಮಯದಲ್ಲಿ, ಜಾತಿ ಗಣತಿಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ನಾವು ಭಾವಿಸಬಾರದು. ವಿವಿಧ ಜಾತಿಗಳ ಸ್ಥಿತಿಗಳ ಬಗ್ಗೆ ಅಧಿಕೃತ ಮತ್ತು ವೈಜ್ಞಾನಿಕ ಮಾಹಿತಿಯ ಲಭ್ಯತೆಯು ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಸಾಮಾಜಿಕ ನ್ಯಾಯದ ಸಾಕ್ಷಾತ್ಕಾರಕ್ಕಾಗಿ ಪರ್ಯಾಯ ನೀತಿಗಳನ್ನು ಪ್ರಸ್ತಾಪಿಸಲು ಸಹಾಯ ಮಾಡುತ್ತದೆ. ಜಾತಿ ಜನಗಣತಿಯಿಂದ ನಾವು ಪಡೆಯುವ ಮಾಹಿತಿಯು ದುರ್ಬಲ ವರ್ಗಗಳು ಜಾತಿ ಅಸ್ಮಿತೆಯ ಪ್ರಜ್ಞೆಯ ಮಿತಿಯನ್ನು ಮತ್ತು ವರ್ಗ ಪ್ರಜ್ಞೆಯನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿಯೇ ನಾವು ಜಾತಿ ಗಣತಿಯನ್ನು ಬಯಸುತ್ತೇವೆ, ಅದರ ಮೂಲಕ ಯಾವುದೇ ಪವಾಡಗಳು ಸಂಭವಿಸುತ್ತವೆ ಎಂದು ನಾವು ನಿರೀಕ್ಷಿಸದಿದ್ದರೂ ಸಹಾ, ಜಾತಿ ಗಣತಿಯಿಂದ ಪಡೆಯಬಹುದಾದ ನೈಜ ದತ್ತಾಂಶವನ್ನು ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟದಲ್ಲಿ ಅಸ್ತ್ರವಾಗಿ ಬಳಸಬಹುದು.

ಇಂದಿಗೂ ಸ್ವತ್ತುಗಳು ಮತ್ತು ಸಂಪತ್ತು ಪ್ರಬಲರ ಮತ್ತು ಮೇಲ್ಜಾತಿಗಳ ಕೈಗಳಲ್ಲಿಯೇ ಕೇಂದ್ರೀಕೃತವಾಗಿದೆ. ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಲ್ಲಿ ಹೆಚ್ಚಿನವರು ಇನ್ನೂ ಬಡವರಾಗಿ ಉಳಿದಿದ್ದಾರೆ ಮತ್ತು ಕಾರ್ಮಿಕರಾಗಿ ಬದುಕುತ್ತಿದ್ದಾರೆ. ಜಾತಿ ದಬ್ಬಾಳಿಕೆ ಇನ್ನೂ ವ್ಯಾಪಕವಾಗಿ ಚಾಲ್ತಿಯಲ್ಲಿದೆ. ಕೆಲವರೇ ಭೂಮಿಯನ್ನು ಹೊಂದಿರುವ ಸನ್ನಿವೇಶವನ್ನು ಮುರಿಯದೆ ಮತ್ತು ಎಲ್ಲರಿಗೂ ಉದ್ಯೋಗವನ್ನು ಖಾತ್ರಿಪಡಿಸಿಕೊಳ್ಳದೆ ನಾವು ಸಾಮಾಜಿಕ ನ್ಯಾಯವನ್ನು ಸಾಧಿಸಲು ಸಾಧ್ಯವಿಲ್ಲ.

ಅನು: ನಾಗರಾಜ ನಂಜುಂಡಯ್ಯ

Donate Janashakthi Media

Leave a Reply

Your email address will not be published. Required fields are marked *