ಆಯಂಕರ್: ಕೋಲಾರ ಜಿಲ್ಲೆಯ ವಿವಿಧ ಸರ್ಕಾರಿ ಕಛೇರಿಗಳಿಗೆ ಕಳೆದ ಮಾರ್ಚ್ 10 ರಂದು ದಿಡೀರನೇ ಉಪಲೋಕಾಯುಕ್ತ ನ್ಯಾಯಮೂರ್ತಿ ಪಿ. ವೀರಪ್ಪನವರು ಭೇಟಿ ನೀಡಿದಾಗ ಹಲವಾರು ಲೋಪಗಳು ಮತ್ತು ಅಕ್ರಮಗಳನ್ನು ಗಮನಿಸಿದ್ದಾರೆ. ತೀವ್ರ ಸ್ವರೂಪದ ಕರ್ತವ್ಯ ಲೋಪ ಎಸಗಿದ 13 ಮಂದಿ ಅಧಿಕಾರಿಗಳ ವಿರುದ್ದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮೇರೆಗೆ ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸಿಕೊಂಡಿದ್ದಾರೆ. ಸರ್ಕಾರಿ
ಕೋಲಾರ ಗ್ರೇಡ್-1 ತಹಶೀಲ್ದಾರ್ ಡಾ.ನಯನ ಎಂ, ಕೋಲಾರ ನಗರ ಸಭೆಯ ಪೌರಾಯುಕ್ತ ಎಸ್.ಪ್ರಸಾದ್ರೆಡ್ಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವೇಣುಗೋಪಾಲ್ ರೆಡ್ಡಿ, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ಎನ್.ರವಿಚಂದ್ರ, ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಎಂ.ಆರ್ ಪ್ರತಿಮಾ, ಸರ್ಕಾರಿ ವಿಮಾ ಇಲಾಖೆಯ ಜಿಲ್ಲಾ ವಿಮಾಧಿಕಾರಿ ಜಿ.ಹೆಚ್.ಶ್ರೀನಿವಾಸ್, ಸಾಮಾಜಿಕ ಅರಣ್ಯ ಇಲಾಖೆಯ ಉಪ ವಲಯ ಅರಣ್ಯ ಅಧಿಕಾರಿ ಮನೋಹರ್, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸಲು, ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯ ಪ್ರಭಾರಿ ಜಿಲ್ಲಾಶಸ್ತ್ರಚಿಕಿತ್ಸಕ ಡಾ. ಜಗದೀಶ್, ಅಬಕಾರಿ ಉಪಾಧೀಕ್ಷ ಎಂ. ಶ್ರೀನಿವಾಸಮೂರ್ತಿ, ಕೋಲಾರದ ಉಪನೊಂದಣಾಧಿಕಾರಿ ಶಿವರಾಜ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾಯಕ ನಿರ್ದೇಶಕ ರವಿಕುಮಾರ್, ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶ ಮಾಡಲಾಗಿದೆ.
ಇದನ್ನೂ ಓದಿ: 13,500 ಕೋಟಿ ರೂ. ಸಾಲ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿದ್ದಾನೆ
ಕೋಲಾರ ತಾಲ್ಲೂಕು ಕಚೇರಿಗೆ ದಿಡೀರನೇ ಭೇಟಿ ನೀಡಿದಾಗ ಗ್ರೇಡ್-೧ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ನಯನ.ಎಂ, ಗ್ರೇಟ್-೨ ತಹಶೀಲ್ದಾರ್ ಹನ್ಸಾಮರಿಯಾ, ಹಾಜರಾತಿ ವಹಿಯಲ್ಲಿ ಸಹಿ ಮಾಡಿರಲಿಲ್ಲ. ಕಛೇರಿಯ ಆರ್.ಆರ್ಟಿ ಶಿರೇಸ್ತೇದಾರ್ ಭಾಸ್ಕರ್ ಮೊಬೈಲ್ ಪರಿಶೀಲಿಸಿದಾಗ ೫ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು ಅವರ ವೇತನಕ್ಕಿಂತ ಹೆಚ್ಚು ಹಣಕಾಸು ವಹಿವಾಟು ನಡೆಸಿರುವುದು ಕಂಡು ಬಂದಿದೆ. ಸರ್ಕಾರಿ
ಕೋಲಾರ ನಗರಸಭೆಯ ಪೌರಾಯುಕ್ತ ಎಸ್.ಪ್ರಸಾದ್ ರೆಡ್ಡಿ ಕಡೆಗೂ ಲೋಕಾಯುಕ್ತ ಖೆಡ್ಡಾಗೆ ಬಿದ್ದಿದ್ದಾರೆ. ಉಪಲೋಕಾಯುಕ್ತರು ಕಛೇರಿಗೆ ಭೇಟಿ ನೀಡಿದಾಗ ನನ್ನ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಖಾತೆಗಳನ್ನು ಮಾಡಿದ್ದೇನೆ ಅವೆಲ್ಲಾ ಅಕ್ರಮ ಎಂದು ಆರೋಪ ಮಾಡಲಾಗುತ್ತಿದೆ. ಖಾತೆ ಮಾಡಿದರು ತಪ್ಪು ಮಾಡದೇ ಇದ್ದರು ತಪ್ಪು. ಶಾಸಕ ಕೊತ್ತೂರು ಮಂಜುನಾಥ್ ಮನವಿ ಮೇರೆಗೆ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದರು. ಆದರೆ ಭೇಟಿ ಸಮಯದಲ್ಲಿ ಕಛೇರಿಯ ಕಡತಗಳನ್ನು ಪರಿಶೀಲಿಸಿದಾಗ ಹಲವಾರು ಉಲ್ಲಂಘನೆಗಳು ಕಂಡು ಬಂದಿವೆ. ಸರ್ಕಾರಿ
ಅಕ್ರಮ ಕಟ್ಟಡಗಳಿಗೆ ದಂಡ ವಿಧಿಸಿದ್ದು. ಉಲ್ಲಂಘನೆ ಮಾಡಿದವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ಖರೀದಿ ಕರಾರಿನ ಮೇರೆಗೆ ೪೦೮ ಪ್ರಕರಣಗಳಲ್ಲಿ ಅಕ್ರಮ ಖಾತೆಗಳನ್ನು ಮಾಡಿರುವುದನ್ನು ಪತ್ತೆ ಹಚ್ಚಲಾಗಿದೆ. ಆದರೆ ಸಮರ್ಪಕ ದಾಖಲೆಗಳನ್ನು ಸಲ್ಲಿಸಿದರು. ಸಾರ್ವಜನಿಕರ ಆಸ್ತಿಗಳ ಖಾತೆ ಮಾಡದೇ ಸಾರ್ವಜನಿಕರನ್ನು ಕಛೇರಿಗೆ ಅಲೆದಾಡಿಸುತ್ತಿದ್ದನ್ನು ಲೋಕಾಯುಕ್ತರು ಗಮಿಸಿದ್ದಾರೆ. ಸರ್ಕಾರಿ
ಒಂದು ತಿಂಗಳಿಗಿಂತ ಹೆಚ್ಚು ಹಳೆಯದಾದ ಇ-ಖಾತೆ ಅರ್ಜಿಗಳು ಬಾಕಿ ಇಲ್ಲ ಎಂದು ಪೌರಾಡಳಿತ ಇಲಾಖೆಯ ಯೋಜನಾ ನಿರ್ದೇಶಕರಾದ ಅಂಬಿಕ ತಿಳಿಸಿದ್ದರು. ಆದರೆ ಕಛೇರಿಯಲ್ಲಿ ಪರಿಶೀಲಿಸಿದಾಗ ೬೮ ಅರ್ಜಿಗಳು ಉಳಿಸಿಕೊಂಡಿರುವುದು ಕಂಡು ಬಂದಿತ್ತು. ಸರ್ಕಾರಿ
ಸಾರಿಗೆ ಇಲಾಖೆಯಲ್ಲಿ ಉಪ ಲೋಕಾಯುಕ್ತರು ಹಲವಾರು ಲೋಪಗಳನ್ನು ಪತ್ತೆ ಹಚ್ಚಿದ್ದಾರೆ. ಶಾಲಾ ವಾಹನಗಳ ಫಿಟ್ನೆಸ್ ಹಾಗೂ ಇನ್ಸೂರೆನ್ಸ್ ಅವಧಿ ಮುಗಿದುಹೋಗಿದ್ದರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಅವಧಿ ಮುಗಿದು ಹೋದ ೧೫ ಸಾವಿರ ವಾಹನಗಳ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದನ್ನು ಲೋಕಾಯುಕ್ತರು ಪತ್ತೆ ಹಚ್ಚಿದ್ದಾರೆ.
ಜಿಲ್ಲಾ ಕೃಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕಛೇರಿಗೆ ಉಪಲೋಕಾಯುಕ್ತರು ಭೇಟಿ ನೀಡಿದಾಗ ಕಛೇರಿಯ ಬಾಗಿಲು ತೆರೆದಿತ್ತು. ಕಛೇರಿಯಲ್ಲಿ ಫ್ಯಾನ್ ಸುತ್ತುತ್ತಿತ್ತು ದೀಪಗಳು ಉರಿಯುತ್ತಿದ್ದವು ಆದರೆ ಕಛೇರಿಯಲ್ಲಿ ಯಾವೊಬ್ಬ ಅಧಿಕಾರಿ ಸಿಬ್ಬಂದಿ ಹಾಜರಿರಲಿಲ್ಲ. ಕಛೆರಿಯ ಅಧಿಕಾರಿ ಮತ್ತು ಸಿಬ್ಬಂದಿ ದುರ್ನಡತೆಯಿಂದ ನಡೆದುಕೊಂಡಿದ್ದಾರೆ. ಕರ್ತವ್ಯ ಲೋಪ ಮತ್ತು ದುರ್ನಡತೆ ಆರೋಪದ ಮೇಲೆ ಉಪನಿರ್ದೇಶಕ ರವಿಚಂದ್ರ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಅರಣ್ಯ ಇಲಾಖೆಯ ಕಛೇರಿಯಲ್ಲಿ ಅನಧಿಕೃತವಾಗಿ ಕಂಪ್ಯೂಟರ್ ಆಪರೇಟರ್ ಅವರನ್ನು ನೇಮಕ ಮಾಡಿಕೊಂಡಿದ್ದು ಅವರಿಗೆ ಸಂಬಳ ನೀಡಲಾಗಿದೆ. ಕಳೆದ ಆರು ತಿಂಗಳಿನಿಂದ ತಿಂಗಳಿಗೆ ೧೨ ಸಾವಿರ ರೂ ವೇತನವನ್ನು ನರೇಗಾ ಯೋಜನೆಯಲ್ಲಿ ನಕಲಿ ಜಾಬ್ ಕಾರ್ಡ್ಗಳನ್ನು ಸೃಷ್ಟಿಸಿ ವೇತನ ಪಾವತಿ ಮಾಡಲಾಗಿದೆ.
ಜಿಲ್ಲಾ ಸರ್ಕಾರಿ ಎಸ್.ಎನ್.ಆರ್ ಆಸ್ಪತ್ರೆಗೆ ಭೇಟಿ ನೀಡಿದಾಗ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ಮಾಡಲು ವೈದ್ಯರು ಮತ್ತು ನರ್ಸ್ಗಳು ಮತ್ತು ಸಿಬ್ಬಂದಿ ಒತ್ತಾಯ ಪೂರ್ವಕವಾಗಿ ಹಣ ಪಡೆಯುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.
ಆಸ್ಪತ್ರೆಯ ಸ್ತ್ರೀಯರ ಶಸ್ತ್ರಚಿಕಿತ್ಸಾ ಘಟಕದಲ್ಲಿ ಅವಧಿ ಮುಗಿದ ಚುಚ್ಚು ಮದ್ದುಗಳನ್ನು ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಪ್ರಭಾರಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್ ವಿರುದ್ದ ಉಪ ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಎಪಿಎಂಸಿ ಕಾಯ್ದೆಯ ಪ್ರಕಾರ ರೈತರಿಂದ ಕಮೀಷನ್ ಪಡೆಯುಂವತಿಲ್ಲ. ಆದರೆ ದಲ್ಲಾಳಿಗಳು ರೈತರಿಂದ ಶೇ ೧೦ ರಷ್ಟು ಕಮೀಷನ್ ಪಡೆಯುತ್ತಿದ್ದಾರೆ. ಕಮೀಷನ್ ಪಡೆಯುತ್ತಿರುವ ಏಜೆಂಟ್ಗಳ ವಿರುದ್ದ ಎಪಿಎಂಸಿ ಸಹಾಯಕ ಕಾರ್ಯದರ್ಶಿ ಯಾವುದೇ ಕ್ರಮ ಕೈಗೊಂಡಿಲ್ಲ.
ಎಪಿಎಂಸಿಯಲ್ಲಿ ರೈತರು ಮಾರಾಟ ಮಾಡಿದ ಉತ್ಪನ್ನಗಳಿಗೆ ಅಧಿಕೃತ ಬಿಲ್ ನೀಡದೇ ಬಿಳೀ ಚೀಟಿ ಬರೆದುಕೊಡುತ್ತಿರುವುದು ಕಂಡು ಬಂದಿದೆ. ತೂಕದಲ್ಲಿ ರೈತರನ್ನು ವಂಚಿಸಲಾಗಿದೆ.
ಎಪಿಎಂಸಿ ಆವರಣದಲ್ಲಿರುವ ಟೀ ಅಂಗಡಿಯಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಎಪಿಎಂಸಿ ಆಡಳಿತ ಕಛೇರಿಯಲ್ಲಿ ನಗದು ಪುಸ್ತಕದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಘೋಷಣೆ ಮಾಡಿಕೊಂಡಿಲ್ಲ ಎಂಬುದನ್ನು ಉಪಲೋಕಾಯುಕ್ತರು ಪತ್ತೆ ಹಚ್ಚಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆಯ ಸಹಾಯಕ ನಿರ್ದೇಶಕ ರವಿಕುಮಾರ್ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದರೆ ತಮ್ಮನ್ನು ಏನು ಮಾಡುವುದಿಲ್ಲ ನೋಟೀಸ್ ನೀಡಿ ವಿವರಣೆ ಕೇಳುತ್ತಾರೆ ಎಂಬ ಭ್ರಮೆಯಲ್ಲಿದ್ದ ಅಧಿಕಾರಿಗಳಿಗೆ ಉಪ ಲೋಕಾಯುಕ್ತರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಶಿಸ್ತು ಕ್ರಮದ ಭೀತಿಯಲ್ಲಿದ್ದಾರೆ.
ಚಿತ್ರ: ಮಾಚ್ 10 ರಂದು ಕೋಲಾರದ ತಾಲ್ಲೂಕು ಕಛೇರಿಗೆ ಉಪ ಲೋಕಾಯುಕ್ತ ನ್ಯಾಯ ಮೂರ್ತಿ ಬಿ.ವೀರಪ್ಪನವರು ಭೇಟಿ ನೀಡಿ ಕಛೇರಿಯ ಅಧಿಕಾರಿಗಳು ಸಿಬ್ಬಂದಿಯ ಹಾಜರಾತಿ ಪುಸ್ತಕ ಪರಿಶೀಲಿಸಿದರು.
ಇದನ್ನೂ ನೋಡಿ: ತುಮಕೂರು | ರೈತರ ಮೇಲೆ ಗುಬ್ಬಿ ಶಾಸಕನ ದರ್ಪ – KPRS ಖಂಡನೆ Janashakthi Media