- ಕರ್ನಾಟಕದಲ್ಲಿ ಒಮಿಕ್ರಾನ್ ಆತಂಕ
- ಹೊಸ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ
- ಸಿಎಂ ಬೊಮ್ಮಾಯಿ ಸಭೆ ಬಳಿಕ ಹೊಸ ನಿಯಮ ಜಾರಿಗೆ ತಂದ ಸರ್ಕಾರ
ಬೆಂಗಳೂರು ಕರ್ನಾಟಕದಲ್ಲಿ ಒಮಿಕ್ರಾನ್ ಪತ್ತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಡಿ.03) ಕರೆದಿದ್ದ ಮಹತ್ವದ ಸಭೆ ಅಂತ್ಯವಾಗಿದ್ದು, ಸಭಯಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಹತ್ವದ ಚರ್ಚೆಯಾಗಿದೆ.
ಸಭಯ ಬಳಿಕೆ ಕಂದಾಯ ಸಚಿವ ಆರ್.ಅಶೋಕ್ ಸರ್ಕಾರ ಮಾಡಿಕೊಳ್ಳುತ್ತಿರುವ ಸಿದ್ಧತೆ ಮತ್ತು ಹೊಸ ನಿಯಮಾವಳಿಗಳ ಬಗ್ಗೆ ಸಚಿವರು ಮಾಹಿತಿ ನೀಡಿದರು.
ರಾಜ್ಯದಲ್ಲಿ 2ನೇ ಅಲೆ ವೇಳೆ ಸಿದ್ಧಗೊಂಡಿದ್ದ ಕೊವಿಡ್ ಬೆಡ್, ಐಸಿಯು ಬೆಡ್‌ಗಳನ್ನು ಮತ್ತೆ ಸಿದ್ಧಪಡಿಸಲು ಸೂಚಿಸಲಾಗಿದೆ. ಆಕ್ಸಿಜನ್ ಪ್ಲ್ಯಾಂಟ್ ಸಿದ್ಧಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ. ರಾಜ್ಯದಲ್ಲಿ ಮತ್ತೆ ಕಂಟ್ರೋಲ್ ರೂಂ ಆರಂಭಿಸಲಾಗುವುದು. ಅದಕ್ಕೆ ಬೇಕಾದ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಔಷಧಿಗಳನ್ನು ಮುಂಚಿತವಾಗಿಯೇ ಖರೀದಿಸುವಂತೆ ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಕೊವಿಡ್ ಉಸ್ತುವಾರಿಗಾಗಿ ಶಿಲ್ಪಾ ನಾಗರಾಜ್ ಅವರನ್ನು ಸರ್ವೆಲೈನ್ಸ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕೊವಿಡ್ ಟೆಸ್ಟ್‌ಗೆ ₹ 500 ದರ ನಿಗದಿ ಮಾಡಲಾಗಿದೆ. ಅಬೇಟ್ ಟೆಸ್ಟ್‌ಗೆ 3 ಸಾವಿರ ನಿಗದಿ ಮಾಡಲಾಗಿದೆ. ಮೊದಲೇ ಸಮಯದ ವೇಳಾಪಟ್ಟಿ ನಿಗದಿ ಮಾಡಿರುತ್ತೇವೆ. ಏರ್‌ಪೋರ್ಟ್‌ನಲ್ಲಿಯೂ ಕಟ್ಟುನಿಟ್ಟಾಗಿ ಕೊವಿಡ್ ಟೆಸ್ಟ್ ನಡೆಸಲಾಗುವುದು. ನೆಗೆಟಿವ್ ವರದಿ ಬಂದ ನಂತರ ಏರ್‌ಪೋರ್ಟ್‌ನಿಂದ ಹೊರಕ್ಕೆ ಕಳಿಸಲಾಗುವುದು. ಬೆಳಗಾವಿ ಸುವರ್ಣಸೌಧದಲ್ಲಿಯೇ ಅಧಿವೇಶನ ನಡೆಯುತ್ತದೆ ಎಂದು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವವರಿಗೆ ಎರಡು ಡೋಸ್ ಲಸಿಕೆ ಕಡ್ಡಾಯ, ಮೆಟ್ರೋ ರೈಲು, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್‍ಗಳು, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ, ಸಂತೆ ಮೈದಾನ ಸೇರಿದಂತೆ ಮತ್ತಿತರ ಕಡೆ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.
ಮುಂಜಾಗ್ರತಾ ಕ್ರಮ ಮತ್ತು ಹೊಸ ನಿಯಮಾವಳಿಗಳನ್ನು ರೂಪಿಸಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದು ಈ ಕೆಳಗಿನಂತಿದೆ.
ಇದನ್ನೂ ಓದಿ : ಭಾರತದಲ್ಲಿ ಒಮಿಕ್ರಾನ್ ಪತ್ತೆ : ಆಶ್ವರ್ಯವೇನಿಲ್ಲ – ಡಬ್ಲ್ಯೂಎಚ್ಒ
ಸರ್ಕಾರದ ಮಾರ್ಗಸೂಚಿ (Guidelines)
- ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು, ಸಮಾರಂಭಕ್ಕೆ ಅವಕಾಶವಿಲ್ಲ. 2022 ಜನವರಿ l5 ರವರೆಗೆ ಮುಂದೂಡಬೇಕು.
- ಸಿನಿಮಾ ಹಾಲ್, ಮಾಲ್‌ನಲ್ಲಿ, ಶಾಲೆಗಳಲ್ಲಿ ಕೆಲಸ ಮಾಡುವವರು ಮತ್ತು ಮಕ್ಕಳ ಪೋಷಕರು 2 ಡೋಸ್ ಕಡ್ಡಾಯವಾಗಿ ಪಡೆದಿರಬೇಕು.
ಮದುವೆಗಳಲ್ಲಿ 500ರೊಳಗೆ ಮಾತ್ರ ಜನ ಸೇರಬೇಕು. - ಪ್ರತಿನಿತ್ಯ 1 ಲಕ್ಷ ಕೊವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆಗೆ ಸೂಚನೆ
- ಸರ್ಕಾರಿ ನೌಕರರಿಗೆ ಎರಡು ಡೋಸ್ ಕೋವಿಡ್ 9 ಲಸಿಕೆ ಕಡ್ಡಾಯ
- ಮಾಸ್ಕ್ ಧರಿಸುವುದು ಕಡ್ಡಾಯ, ಇಲ್ಲದಿದ್ದರೇ ಬಿಬಿಎಂ ವ್ಯಾಪ್ತಿಯಲ್ಲಿ 250 ಹಾಗೂ ಇತರೆ ಕಡೆಗಳಲ್ಲಿ 100 ದಂಡ
- ಕೇರಳ ಹಾಗೂ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಚಕ್ ಪೋಸ್ಟ್.
ಕರ್ನಾಟಕದ ಜತೆಗೆ ಗಡಿ ಪ್ರದೇಶಗಳನ್ನು ಹಂಚಿಕೊಂಡಿರುವ ಕೇರಳ ಮತ್ತು ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಹೆಚ್ಚಿನ ತಪಾಸಣೆ ನಡೆಸಬೇಕು. ಎರಡು ಡೋಸ್ ಲಸಿಕೆ ಪಡೆಯದಿದ್ದರೆ ಅಂತಹವರನ್ನು ರಾಜ್ಯಕ್ಕೆ ಪ್ರವೇಶ ನೀಡದಂತೆ ನಿರ್ಬಂಧ ಹಾಕಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಸಿಎಂಗೆ ಮನವಿ ಮಾಡಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ, ಮೈಸೂರು, ಬೆಳಗಾವಿ, ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಮತ್ತಿತರ ರಾಜ್ಯಗಳಿಂದ ಬರುವವರ ಮೇಲೆ ಹದ್ದಿನ ಕಣ್ಣಿಡಬೇಕು ಎಂದು ಹೇಳಿದೆ.
ರಾಜಧಾನಿ ಬೆಂಗಳೂರಿನಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿರುವುದರಿಂದ ಇದು ವೇಗವಾಗಿ ಹಬ್ಬುವ ಸಾಧ್ಯತೆ ಇರುವುದರಿಂದ 10 ಗಂಟೆ ನಂತರ ಕಫ್ರ್ಯೂ ವಿಸುವ ಬಗ್ಗೆಯೂ ಸರ್ಕಾರ ಮರುಪರಿಶೀಲನೆ ನಡೆಸುವಂತೆ ತಜ್ಞರ ಸಮಿತಿ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ಸಭೆ-ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆ, ಮದುವೆ, ರಾಜಕೀಯ ಕಾರ್ಯಕ್ರಮಗಳು ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಜನರು ಹೆಚ್ಚು ಗುಂಪುಗೂಡದಂತೆ ಈ ಹಿಂದೆ ಒಂದು ಮತ್ತು ಎರಡನೆ ಅಲೆ ಸಂದರ್ಭದಲ್ಲಿ ಅನುಸರಿಸಿದ ಕಾರ್ಯತಂತ್ರಗಳನ್ನೇ ಸರ್ಕಾರ ತೆಗೆದುಕೊಳ್ಳಬೇಕೆಂದು ಸೂಚಿಸಿದೆ.
ರಾಜ್ಯದಲ್ಲಿ ಇನ್ನೂ 45 ಲಕ್ಷ ಮಂದಿ ಎರಡನೆ ಲಸಿಕೆ ಪಡೆದಿಲ್ಲ. ಇಂತಹವರಿಗೆ ಕಡ್ಡಾಯವಾಗಿಯಾದರೂ ಸರಿಯೇ ಲಸಿಕೆ ನೀಡಬೇಕು. ಪ್ರತಿದಿನ ಟೆಸ್ಟಿಂಗ್ ಮತ್ತು ಲಸಿಕೆ ಪ್ರಮಾಣವನ್ನು ಹೆಚ್ಚಳ ಮಾಡುವುದು, ಕೋವಿಡ್ ವಾರಿಯರ್ಸ್‍ಗಳಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ತಜ್ಞರು ಹೇಳಿದ್ದಾರೆ.
ಜನರಿಗೆ ಓಮಿಕ್ರಾನ್ ಬಗ್ಗೆ ಅನಗತ್ಯವಾಗಿ ಭಯ ಹುಟ್ಟಿಸುವ ಬದಲು ಜಾಗೃತಿ ಮೂಡಿಸಲು ಸಂಘ-ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳ ನೆರವು ಪಡೆಯಬೇಕು. ವಿಮಾನ ನಿಲ್ದಾಣದಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುವ ತಜ್ಞ ವೈದ್ಯರನ್ನು ನಿಯೋಜನೆ ಮಾಡುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಜ್ಞರು ಹೇಳಿದ್ದಾರೆ.