ಗೋಪಾಲಕೃಷ್ಣ ಹರಳಹಳ್ಳಿ
ಕೇಂದ್ರ ಸರ್ಕಾರ 2006ರಲ್ಲಿ ಡೆಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಉಷಾ ಮೆಹ್ರಾ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಮೀಸಲು ಅಧ್ಯಯನಾ ಆಯೋಗವನ್ನು ರಚಿಸಿತು. ಈ ಸಮಿತಿಯು ಪರಿಶಿಷ್ಟ ಜಾತಿ ಮೀಸಲಾತಿಯವರಿಗೆ ಅನುಕೂಲವಾಗುವಂತೆ ಕಾಯ್ದೆ ರಚನೆಗಾಗಿ ಸಂವಿಧಾನದ 341ನೇ ಪರಿಚ್ಚೇದಕ್ಕೆ ತಿದ್ದುಪಡಿ ಮಾಡಿ, ಕಲಂ(3) ಸೇರಿಸಬೇಕು ಎಂದು 2008ರ ಮೇ 21ರಂದು ಶಿಫಾರಸು ಮಾಡಿತು. ಈ ಶಿಫಾರಸು ಮಾಡಿ 14 ವರ್ಷಗಳಾದರೂ ಕೇಂದ್ರ ಸರ್ಕಾರ ಇದನ್ನು ಮಾಡಿಲ್ಲ. ದಲಿತ ವಿರೋಧಿ ನೀತಿಗಳನ್ನು ಹೊಂದಿರುವ ಬಿಜೆಪಿ ಸರ್ಕಾರಕ್ಕೆ ಬದ್ಧತೆ ಇಲ್ಲವೆಂಬುದು ಇದರಿಂದ ಸಾಬೀತಾಗಿದೆ.
ಪ್ರವೇಶಿಕೆ
ನಮ್ಮ ದೇಶವನ್ನು ಇಂದು ಕಾಡುತ್ತಿರುವ ಜಾತಿ ಪದ್ದತಿ, ಅಸ್ಪೃಶ್ಯತೆಗೆ ಮನುವಾದವೇ ಮೂಲ. ಅದರ ಬೇರುಗಳಾಗಿ ಹಿಂದುತ್ವ, ಧಾರ್ಮಿಕ ಕೋಮುವಾದ ಜೀವಂತ ಸಾಕ್ಷಿಯಾಗಿದೆ. ಇಂತಹ ಆಳವಾಗಿ ಕಾಡುತ್ತಿರುವ ಈ ಅಸಮಾನತೆಗೆ ಪರಿಹಾರ ಇಲ್ಲವೇನೋ ಎಂಬ ಒಗಟಿನ ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ. 74ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ನಮ್ಮ ದೇಶದಲ್ಲಿ ಜಾತ್ಯಾತೀತ ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ ಏರ್ಪಟ್ಟಿದೆ. ಆಳುವ ಮನುವಾದಿ ಸರ್ಕಾರದ ಕೋಮುವಾದಿ, ಜಾತಿವಾದಿ ನೀತಿಗಳು ಮೀಸಲಾತಿ ಅವಕಾಶಗಳನ್ನು ವಂಚಿಸುತ್ತಿರುವುದಲ್ಲದೆ, ಖಾಸಗೀಕರಣದ ನೀತಿಗಳ ಜಾರಿಯಿಂದಾಗಿ ದಲಿತರಿಗೆ ಮೀಸಲಾತಿ ಸೌಲಭ್ಯಗಳೇ ಇಲ್ಲದಂತೆ ಮಾಡುತ್ತಿದೆ. ಈ ದಲಿತ ವಿರೋಧಿ ನೀತಿಗಳ ವಿರುದ್ದ ದೃಡವಾದ ಐಕ್ಯ ಹೋರಾಟ ನಡೆಯಲೇಬೇಕಾಗಿದೆ.
1956ರಲ್ಲಿ ಸಂವಿದಾನದ ಆಶಯಗಳೊಂದಿಗೆ ಆರಂಭವಾದ ‘ಮೀಸಲಾತಿ’ ಅಸಮಾನತೆಯ ಕರಿ ನೆರಳಿನಲ್ಲಿ ಕುಗ್ಗಿರುವ ದಲಿತರಿಗೆ ಅಸ್ಪೃಶ್ಯತೆ, ಜಾತಿ ಬೇಧಗಳನ್ನು ಸ್ವಲ್ಪವಾದರೂ ಮೆಟ್ಟಿ ನಿಲ್ಲುವ ಒಂದು ಶಕ್ತಿ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಅದೇ ಪರಿಹಾರವಲ್ಲ. ಹತ್ತು ವರ್ಷಗಳಲ್ಲಿ ಮೀಸಲಾತಿ ಸೌಲಭ್ಯಗಳನ್ನು ಸಂಪೂರ್ಣವಾಗಿ ಜಾರಿ ಮಾಡಬೇಕು, ಮೇಲ್ಜಾತಿ ಜನರ ಮತ್ತು ಬಡ ದಲಿತರ ನಡುವಿನ ಅಂತರವನ್ನು ಸರಿದೂಗಿಸುವಂತಾಗಬೇಕು ಎಂದು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಆಶಯವಾಗಿತ್ತು. 75ನೇ ಅಮೃತ ಮಹೋತ್ಸವ ಆಚರಿಸುತ್ತಿರುವ ಭಾರತದಲ್ಲಿ ಕೊನೆಗೂ ಅಮೃತ ಕಟ್ಟ ಕಡೆಯಲ್ಲಿರುವ ದಲಿತರಿಗೆ, ಆದಿವಾಸಿಗಳಿಗೆ ಸಿಗಲೇ ಇಲ್ಲ.
ಇದನ್ನು ಓದಿ: ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆ-1 : ನ್ಯಾ.ಹೆಚ್.ಎನ್.ನಾಗಮೋಹನದಾಸ್ ಅವರ “ಮೀಸಲಾತಿ – ಭ್ರಮೆ ಮತ್ತು ವಾಸ್ತವ” ಆಯ್ದ ಭಾಗ
ಭಾರತದ ವಿವಿಧ ರಾಜಕೀಯ ಪಕ್ಷಗಳು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಯಾವ ಪಕ್ಷಗಳೂ ಡಾ. ಬಿ.ಆರ್ ಅಂಬೇಡ್ಕರ್ ರವರ ಸೂಚಿಸಿದ್ದನ್ನು ಪಾಲಿಸಲಿಲ್ಲ. 10 ವರ್ಷಗಳಲ್ಲಿ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಇತರೆ ಮೇಲ್ಜಾತಿಯವರ ಸಮಕ್ಕೆ ತರುವ ಇಚ್ಚಾಶಕ್ತಿಯನ್ನು ಈ ಪಕ್ಷಗಳು ತೋರಲಿಲ್ಲ ಎಂಬುದು ಕಟು ಸತ್ಯ. ಇವರು ದಲಿತರನ್ನು ಮತ ಬ್ಯಾಂಕುಗಳಾಗಿ ಪರಿರ್ವತನೆ ಮಾಡಿದರು. ದಲಿತರ ಜೀವನ ಕಗ್ಗತ್ತಲ್ಲಿ ಮುಂದುವರೆಯಿತು. ಅಸಮಾನತೆ ಹೆಚ್ಚುತ್ತಿದ್ದಂತೆ ಮೀಸಲಾತಿ ಪರ-ವಿರೋಧಿ ಹೋರಾಟಗಳು ನಿರಂತರಗೊಂಡವು.
ರಾಜ್ಯ ಸರ್ಕಾರದಲ್ಲಿ ನಿವೃತ್ತಿಯಿಂದ ಖಾಲಿಯಾದ ಹುದ್ದೆಗಳಿಗೆ ಹೊರಗುತ್ತಿಗೆ, ಗುತ್ತೇದಾರಿ ಪದ್ದತಿ ಜಾರಿ ಮಾಡಲಾಗುತ್ತಿದೆ. ಮೀಸಲಾತಿ ಸೌಲಭ್ಯಗಳು ಮಾಯವಾಗುತ್ತಿವೆ. ದಲಿತರು ತಮಗಾಗುತ್ತಿರುವ ಈ ಘೋರ ಅನ್ಯಾಯದ ವಿರುದ್ದ ಪ್ರಬಲ ಹೋರಾಟ ನಡೆಸಲೇಬೇಕಾಗಿದೆ. ಈ ಪರಿಸ್ಥಿತಿ ವಿರುದ್ದ ದಲಿತರು, ಹೊಲೆ-ಮಾದಿಗರು ತಮ್ಮಲ್ಲೇ ಬಡಿದಾಡಿಕೊಂಡು ತಮ್ಮ ಶಕ್ತಿಯನ್ನು ಕುಂದಿಸಿಕೊಳ್ಳುತ್ತಿದ್ದೇವೆ. ಬಿಜೆಪಿ ಅಧಿಕಾರದ ಗದ್ದುಗೆ ಏರಿದ ಮೇಲೆ ರಾಜ್ಯ ಸರ್ಕಾರ ವಿಧಾನಸೌಧವೂ ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ಖಾಸಗೀಕರಣ ಮಾಡಿ ಬಿಟ್ಟಿದೆ. ಖಾಲಿಯಾದ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುತ್ತಿಲ್ಲ. ಈ ಅಕ್ರಮಣಕಾರಿ ಖಾಸಗೀಕರಣ ನೀತಿಯನ್ನು ಸಹಿಸಿಕೊಳ್ಳಬೇಕೆ? ಅಥವಾ ಮಿಸಲಾತಿ ಉಳಿಸಿಕೊಳ್ಳಲು ಎಲ್ಲರೂ ಐಕ್ಯ ಹೋರಾಟಕ್ಕೆ ಮುಂದಾಗಬೇಕೇ?
ಕರ್ನಾಟಕ ಸರ್ಕಾರದ ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ 2021ನೇ ವರ್ಷಕ್ಕೆ ಸರಿಸುಮಾರು 7,83,377 ಎಂದು ಅಂದಾಜಿಸಿದೆ. ಭರ್ತಿಯಾದ ಹುದ್ದೆಗಳು 5,29,066. ಈಗಲೂ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಪರಿಶಿಷ್ಠ ಜಾತಿ ಹುದ್ದೆಗಳು 2,54,511. ಇದು ಕೇವಲ ಡಿ ಮತ್ತು ಸಿ ದರ್ಜೆಯ ಪಟ್ಟಿಯಲ್ಲಿರುವುದು. ಈ ಲೆಕ್ಕಚಾರದಂತೆ ಸರಿ ಸುಮಾರು 40,000ಕ್ಕೂ ಹೆಚ್ಚು ಉದ್ಯೋಗಳನ್ನು ತುಂಬಬೇಕು. ಆದರೆ ಸರ್ಕಾರಕ್ಕೆ ತೆರದ ಮನಸ್ಸಿಲ್ಲ ಎಂಬುದು ಸಾಬೀತಾಗುತ್ತದೆ. ಬ್ಯಾಕ್‌ಲಾಕ್ ಹುದ್ದೆಗಳ ಮಾಹಿತಿ ಸಿಗುವುದಿಲ್ಲ. ಸರ್ಕಾರ ಆಡಳಿತ ಸುಧಾರಣೆ ಹೆಸರಿನಲ್ಲಿ ನಿವೃತ್ತಿಯಿಂದ ತೆರವಾದ ಸ್ಥಾನಗಳ ಅಂಕಿ ಅಂಶದ ಮಾಹಿತಿಯು ಸಿಗುವುದಿಲ್ಲ. ಖಾಲಿ ಇರುವ ಸಾವಿರಾರು ಬ್ಯಾಕ್‌ಲಾಕ್ ಹುದ್ದೆಗಳನ್ನು ತುಂಬುತ್ತಿಲ್ಲ. ಉನ್ನತ ಹುದ್ದೆ ಮತ್ತು ಸ್ಥಾನಗಳಲ್ಲಿ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹುದ್ದೆಗಳು ಇನ್ನೂ ದೊರಕಲೇ ಇಲ್ಲ ಎಂಬ ಸತ್ಯಾಂಶವನ್ನು ಮನವರಿಕೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಶೇ. 24%. ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿವೆ. ಈ ಜಾತಿಗಳ ಅಭಿವೃದ್ಧಿ ಮಾಡುವ ಬೇಡಿಕೆ ಆಧಾರದಲ್ಲಿ ಬಿಜೆಪಿ ಸರ್ಕಾರ 25 ಅಭಿವೃದ್ಧಿ ನಿಗಮಗಳನ್ನು ತೆರೆದು ದಲಿತರ ಜೀವನದ ಭವ್ಯ ಬಾಗಿಲು ತೆರೆದಿದ್ದೇವೆಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಹೊಲೆಯರು, ಮಾದಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಿಸಲಾತಿ ಸೌಲಭ್ಯಗಳು ಮಾತ್ರ ಸಿಗಲಿಲ್ಲ. 75 ವರ್ಷಗಳ ಅವಧಿಯಲ್ಲಿ ರಾಷ್ಟ್ರಪತಿ ಭವನ, ಪಾರ್ಲಿಮೆಂಟ್‌ನಲ್ಲಿ, ಕೇಂದ್ರ ಸರ್ಕಾರದ ವಿವಿಧ ವಿಭಾಗಗಳಲ್ಲಿ ಉನ್ನತ ಹುದ್ದೆಗಳಿಗೆ ನೇಮಕಾತಿಯೇ ಇಲ್ಲ. ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳ ಸ್ಥಾನ… ಹೀಗೆ ಯಾವುದೇ ಉನ್ನತ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯವರಿಗೆ ಹುದ್ದೆಗಳು, ಸ್ಥಾನಮಾನಗಳು ಸಿಗದೇ ವಂಚಿತವಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ.
ದಲಿತರ ಮತಗಳನ್ನು ಬಾಚಲು ಯೋಜನೆಗಳನ್ನು ರೂಪಿಸುವತ್ತ ಸಾಗಿದ ಸರ್ಕಾರ, ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ರವರ ಅದ್ಯಕ್ಷತೆಯಲ್ಲಿ ಮೀಸಲಾತಿ ಹೆಚ್ಚಿಸುವ ಬಗ್ಗೆ ಆಯೋಗ ರಚಿಸಿತು. ಪೂರ್ಣ ಅಧ್ಯಯನ ನಡೆಸಿದ ಆಯೋಗವು ಪರಿಶಿಷ್ಠ ಜಾತಿ/ಪರಿಶಿಷ್ಟ ಪಂಗಡದ ಜನಸಂಖ್ಯೆ ಆಧಾರದಲ್ಲಿ ಪರಿಶಿಷ್ಟ ಜಾತಿಗೆ ಶೇಕಡಾ 15 ರಿಂದ ಶೇ. 17ರ ಏರಿಕೆ, ಪರಿಶಿಷ್ಟ ಪಂಗಡಕ್ಕೆ ಶೇಕಡ 3 ರಿಂದ ಶೇ. 7 ರಷ್ಟು ಏರಿಕೆ ಮಾಡಿ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದಾರೆ. ಇದು ಹಲವು ಹಂತದ ಕಾನೂನು ನಿಯಯಮಗಳನ್ನು ದಾಟಿ ಜಾರಿಯಾಗಬೇಕಾಗಿದೆ. ಬಿಜೆಪಿ ಕೇಂದ್ರ ಸರ್ಕಾರ ಬದ್ದತೆಯನ್ನು ತೋರಿ ಜಾರಿಗೊಳಿಸಬೇಕು.
ಒಳ ಮಿಸಲಾತಿ ಪರಂಪರೆ:
ಒಳ ಮೀಸಲಾತಿ ಕೇಳಿ ಬಂದದ್ದು ಪರಿಶಿಷ್ಟ ಜಾತಿ (ಶೇಕಡ 29.1) ಹೆಚ್ಚಿರುವ ಪಂಜಾಬಿನಲ್ಲಿ. 37 ಜಾತಿಗಳನ್ನೊಳಗೊಂಡ ಅಲ್ಲಿನ ಪರಿಶಿಷ್ಟ ಜಾತಿಯೊಳಗೆ 3 ಗುಂಪುಗಳಿವೆ. 1) ಶೇ. 42ರಷ್ಟಿರುವ ಮಜಬಿ ಸಿಖ್ ಮತ್ತು ವಾಲ್ಮೀಕಿ ಭಂಗಿಗಳು, 2) ಶೇ. 41.59 ಅದ್-ಧರ್ಮಿಯರು ಮತ್ತು ಚಮ್ಮರ್ ಸಿಖ್ಖರು, 3) ಕೇವಲ ಶೇ. 51 ಇರುವ ಉಳಿದ 33 ಉಪಜಾತಿಗಳು. ಆ ರಾಜ್ಯದಲ್ಲಿ ಪ್ರಾರಂಭದಿಂದಲೂ ಎರಡನೆ ಗುಂಪು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮುಂದುವರಿದವರಾಗಿದ್ದಾರೆ.
ಇದನ್ನು ಓದಿ: ಮೀಸಲಾತಿ ಪ್ರಮಾಣದ ಹೆಚ್ಚಳ: ಮುಂದಿನ ಪ್ರಶ್ನೆಗಳು
1994ರಲ್ಲಿ ಹರಿಯಾಣ ಸರ್ಕಾರ ಚಮ್ಮಾರ ಚುಮ್ಮಾ ರೈತರಿಗೆ ಮೀಸಲಾತಿ ವರ್ಗಾಯಿಸಲಾಯಿತು. ಶೇ. 50 ವರ್ಗೀಕರಿಸಿತು. 30 ವರ್ಷ ಯಾವುದೇ ಸಮಸ್ಯೆ ಇಲ್ಲದೆ ಈ ವ್ಯವಸ್ಥೆ ಮುಂದುವರಿಯಿತು. ಯಾವಾಗ ಆಂದ್ರಪ್ರದೇಶ ಸರ್ಕಾರದ ಮೀಸಲಾತಿಯನ್ನು ರದ್ದುಪಡಿಸಿ ಸುಪ್ರಿಂ ಕೋರ್ಟ್ ಆದೇಶ ಹೊರಡಿಸಿತೋ ತಕ್ಷಣ ಹರಿಯಾಣ-ಪಂಜಾಬ್ ಗಳಲ್ಲೂ ವಿರೋಧದ ಅಲೆ ಎದ್ದಿತು. ಈ ಆದೇಶದ ಹಿನ್ನೆಲೆಯಲ್ಲಿ ಪಂಜಾಬ್-ಹರಿಯಾಣದ ಒಳಮೀಸಲಾತಿಯನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಯಿತು. ಇದಕ್ಕೆ ತ್ವರಿತಗತಿಯಲ್ಲಿ ಪ್ರತಿಕ್ರಿಯಿಸಿದ ಪಂಜಾಬ್ ಸರಕಾರ ಒಳಮೀಸಲಾತಿ ನೀಡಿಕೆಯ 1975ರ ಸರಕಾರಿ ಆದೇಶವನ್ನು ಕಾಯ್ದೆಯಾಗಿ ಅಂಗೀಕರಿಸಿತು.
ಆಂಧ್ರಪ್ರದೇಶದಲ್ಲಿ ಆರಂಭವಾದ ಒಳ ಮಿಸಲಾತಿ ಚಳುವಳಿ:
ಆಂಧ್ರದಲ್ಲಿ ಮಾದಿಗ ದಂಡೋರ, ಮಾದಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಜಂಟಿ ಚಳುವಳಿ ಆರಂಭಿಸಿತು. ಆಂಧ್ರಪ್ರದೇಶ ಸರ್ಕಾರ ನ್ಯಾಯಮೂರ್ತಿ ರಾಮಚಂದ್ರ ರಾಜ್ಯ ನೇತೃತ್ವದಲ್ಲಿ ಆಯೋಗ ರಚಿಸಿತು. ಆಯೋಗ ಪರಿಶಿಷ್ಟ ಜಾತಿಯನ್ನು ನಾಲ್ಕು ಪಂಗಡಗಳಾಗಿ ವಿಂಗಡಿಸಿ, ಮಾದಿಗ ಮತ್ತು ಮಲ್ಹಾರರಿಗೆ ಶೇ. 7, ಮಾಲಾಗಳಿಗೆ ಶೇ. 6 ಮತ್ತು ರೆಲ್ಲಿ ಹಾಗೂ ಅದಿಗಳಿಗೆ ತಲಾ ಶೇ. 1ರ ಮೀಸಲಾತಿ ನೀಡಬೇಕೆಂದು ಶಿಪಾರಸು ಮಾಡಿತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗದ ಜತೆ ಸಮಾಲೋಚನೆ ನಡೆಸಿ ವರ್ಗೀಕರಣ ನಡೆಸಬೇಕೆಂದು ಹೈಕೋರ್ಟ್ ಆದೇಶ ನೀಡಿತು. ಆದೇಶವನ್ನು ಒಪ್ಪಿಕೊಂಡು ಪರಿಶಿಷ್ಟ ಜಾತಿ, ಉಪಜಾತಿ ಒಳಗಿನ ವರ್ಗೀಕರಣ ಮತ್ತು ಮೀಸಲಾತಿ ಹಂಚಿಕೆಗೆ ಸಂಬಂಧಿಸಿದ ಎರಡು ಆದೇಶಗಳನ್ನು ಹೊರಡಿಸಿತು.
ಇದನ್ನು ಓದಿ: ಹಿಂದುತ್ವದ ಜಿಜ್ಞಾಸೆ ಹಾಗೂ ಹಿಂದೂಪರ ಸಂಘಟನೆಗಳ ಮೀಸಲಾತಿ ವಿರೋಧಿ ಹೇಳಿಕೆಯ ಪ್ರಶ್ನೆಗಳು…..???
ಈ ಆದೇಶಗಳನ್ನು ರದ್ದುಪಡಿಸದ ಆಂಧ್ರಪ್ರದೇಶ ಹೈಕೋರ್ಟ್ ಸಂವಿಧಾನದ 389(9) ಪರಿಚ್ಚೇದದ ಪ್ರಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮೀಸಲಾತಿಯ ವರ್ಗೀಕರಣವನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದೊಂದಿಗೆ ಸಮಾಲೋಚನೆಯೊಂದಿಗೆ ನಡೆಸಬೇಕು ಎಂದು ಆದೇಶ ನೀಡಿತು. ಇದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ ಆಂಧ್ರಸರ್ಕಾರ ಅಯೋಗದ ಮುಂದೆ ಅರ್ಜಿ ಸಲ್ಲಿಸಿತು. ಆದರೆ ವರ್ಗೀಕರಣವು ವೈಜ್ಞಾನಿಕವಾಗಿ ಮತ್ತು ತರ್ಕಸಮ್ಮತವಾಗಿ ನಡೆದಿಲ್ಲ, ಇದಕ್ಕಾಗಿ 1981ರ ಜನಗಣತಿಯನ್ನು ಬಳಸಲಾಗಿದೆ ಎಂಬ ಕಾರಣ ನೀಡಿ ಮೀಸಲು ವರ್ಗೀಕರಣವನ್ನು ತಿರಸ್ಕರಿಸಿತು. ಪರಿಶಿಷ್ಟ ಜಾತಿಯೊಳಗಿನ ಅಸಮಾನ ಹಂಚಿಕೆ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಸಮೀಕ್ಷೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿತು.
ಈ ಆದೇಶಕ್ಕೆ ಸವಾಲು ಹಾಕುವ ರೀತಿಯಲ್ಲಿ ಆಂಧ್ರಪ್ರದೇಶ ಸರ್ಕಾರ 2000ನೇ ಇಸವಿಯಲ್ಲಿ ಸುಗ್ರೀವಾಜ್ಙೆಯ ಮೂಲಕ ಕಾಯ್ದೆಯನ್ನು ರಚಿಸಿತು. ಈ ಕಾಯ್ದೆಯನ್ನು ಆಂಧ್ರಪ್ರದೇಶ ಹೈಕೋರ್ಟ್ ತಿರಸ್ಕರಿಸಿದಾಗ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಮೂರು ಪ್ರಮುಖವಾದ ವಿಷಯಗಳನ್ನು ಕೇಂದ್ರವಾಗಿಟ್ಟುಕೊಂಡು ವಿಚಾರ ನಡೆಸಿತು.
1. ಆಂಧ್ರಪ್ರದೇಶ ಸರ್ಕಾರ ರಚಿಸಿದ ಕಾನೂನಿನಿಂದ ಸಂವಿಧಾನ 341(2)ರ ಉಲ್ಲಂಘನೆಯಾಗಿದೆಯೇ?
2. ಇಂತಹ ಕಾನೂನು ರಚಿಸುವ ಅಧಿಕಾರ ವಿಧಾನ ಮಂಡಲಕ್ಕೆ ಇಲ್ಲದೆ ಇರುವುದರಿಂದ ವಿವಾದಿತ ಕಾನೂನು ಅನರ್ಜಿತವಾಗುತ್ತದೆಯೇ?
3. ವಿವಾದಿತ ಕಾರಣದಿಂದ ಸಂವಿಧಾನದ ಪರಿಚ್ಚೇಧ 14ರ ಉಲ್ಲಂಘನೆಯಾಗಿದೆಯೇ?
ಇದನ್ನು ಓದಿ: ಒಳಮೀಸಲಾತಿ ಜಾರಿಯಾಗಲಿ, ಆದರೆ ಮತ ಬೇಟೆಗೆ ಬಳಕೆಯಾಗದಿರಲಿ
ಈ ಎಲ್ಲಾ ಪ್ರಶ್ನೆಗಳಿಗೆ ಹೌದು ಎಂಬ ಉತ್ತರದ ತೀರ್ಪನ್ನು ನೀಡಿದ ಸುಪ್ರೀಂ ಕೋರ್ಟ್ ಪ್ರಶ್ನಿಸಲಾದ ಕಾಯ್ದೆಯನ್ನು ರದ್ದುಗೊಳಿಸಿತು. ಸಂವಿಧಾನದ 341ನೇ ಪರಿಚ್ಚೇಧದ ಅಡಿಯಲ್ಲಿ ತಯಾರಿಸಲಾದ ಪರಿಶಿಷ್ಟ ಜಾತಿಗಳ ಪಟ್ಟಿ ಬದಲಾವಣೆಗೆ ಸರಕಾರದಿಂದ ಕಾನೂನು ರಚಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇರುತ್ತದೆ ಎಂದು ನ್ಯಾಯಾಲಯ ಹೇಳಿತು.
ಒಳಮೀಸಲಾತಿಗೆ ಸಂಬಂಧಿಸಿ 2005ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಒಳ ಮೀಸಲಾತಿ ಹೋರಾಟದಲ್ಲಿ ಒಂದು ಹಿನ್ನೆಡೆ. ಒಳ ಮೀಸಲಾತಿಯನ್ನು ಅಂತರಂಗದಲ್ಲಿ ವಿರೋಧಿಸುವವರಿಗೆ, ಮತ ಬ್ಯಾಂಕುಗಳನ್ನು ಛಿದ್ರ ಮಾಡುವ ರಾಜಕಾರಣಿಗಳಿಗೆ ಈ ತೀರ್ಪು ಖುಷಿಯನ್ನು ತಂದು ಕೊಟ್ಟಿತು. ಇಂದಿಗೂ ಈ ವಿವಾದ ಹಾಗೇ ಉಳಿದಿದೆ.
ನಂತರ ಕೇಂದ್ರ ಸರ್ಕಾರಕ್ಕೆ ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರೂಪಿಸಿದ್ದ ಕಾಯಿದೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವ ಕಾರಣ ಈ ವಿಷಯವನ್ನು ಕೇಂದ್ರ ಸರ್ಕಾರ ಎತ್ತಿಕೊಂಡು ನ್ಯಾಯ ಒದಗಿಸಬೇಕೆಂದು ಕೇಳಿಕೊಂಡಿತು. ಆದರೆ ಇನ್ನೂ ಅದು ಇತ್ಯರ್ಥವಾಗಿಲ್ಲ.
ಕರ್ನಾಟಕದಲ್ಲಿ ಒಳ ಮೀಸಲಾತಿ ಚಳುವಳಿ:
ಕರ್ನಾಟಕದಲ್ಲಿ ಒಳ ಮೀಸಲಾತಿ ಚಳುವಳಿ ಗಂಬೀರವಾಗಿ ನಡೆಯುತ್ತಿದೆ. ಆದರೂ ಸರ್ಕಾರ ಜಾರಿಗೆ ತರುವಲ್ಲಿ ಚುನಾವಣೆಯಲ್ಲಿನ ಲಾಭ-ನಷ್ಟದ ದೃಷ್ಟಿಯಿಂದ ನೋಡುತ್ತಿರುವುದನ್ನು ಕಾಣಬಹುದು. ದಲಿತರು ತಿನ್ನುವ ಅನ್ನಕ್ಕೆ ಕನ್ನ ಹಾಕುವಲ್ಲಿ ಹಿಂಜರಿಯದೆ ಗೋ ಹತ್ಯೆ ಮಸೂದೆಯನ್ನು, ರೈತವಿರೋಧಿ ಮೂರು ಮಸೂದೆಗಳನ್ನು, ಇ.ಡಬ್ಲ್ಯೂ.ಎಸ್. ಶೇ.10 ಜಾರಿಗೆ ತಂದ ಡಬಲ್ ಎಂಜಿನ್ ಬಿಜೆಪಿ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿಗೆ ತರಲು ಸಾದ್ಯವಿಲ್ಲವೆ? ದೀರ್ಘಕಾಲ ಚಳುವಳಿ ನಡೆಯುತ್ತಿದ್ದರೂ ಇಚ್ಚಾಶಕ್ತಿಯ ಕೊರತೆ ಏಕೆ? ಕಳೆದ ಚುನಾವಣೆಗಳಲ್ಲಿ ಹೊಲೆ-ಮಾದಿಗರ ಒಗ್ಗಟ್ಟು ಮುರಿದು ಮತದ ಹಂಚಿಕೆ ಆಯಿತು. ಇದೇನು ರಾಜ್ಯದ ಜನತೆಗೆ ಗೊತ್ತಿರದ ವಿಷಯವಲ್ಲ. ಜೊತೆಗೆ ಖಾಸಗೀ ಕ್ಷೇತ್ರದಲ್ಲೂ ಮೀಸಲಾತಿ ಬೇಡಿಕೆಯನ್ನು ಸೇರಿಸಿಕೊಂಡು ಐಕ್ಯ ಹೋರಾಟ ತೀವ್ರಗೊಳ್ಳಬೇಕಿದೆ.
ಇದನ್ನು ಓದಿ: ಪರಿಶಿಷ್ಟ ಜಾತಿಗಳ ಒಳಮೀಸಲಾತಿ: ಸಚಿವ ಸಂಪುಟದ ಉಪ ಸಮಿತಿ ರಚನೆ
ಕರ್ನಾಟಕ 2004ರ ಜನವರಿ ತಿಂಗಳಲ್ಲಿಯೇ ನ್ಯಾ. ಎನ್.ವೈ. ಹನುಮಂತಪ್ಪ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತು. ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸಿದ ಕಾರಣ ರಾಜೀನಾಮೆ ನೀಡಿದ್ದರಿಂದ ಕಾರ್ಯರಂಭ ಮಾಡಲಿಲ್ಲ. ಕೊನೆಗೆ ನ್ಯಾಯಮೂರ್ತಿ ಬಾಲಕೃಷ್ಣ ಆಯೋಗದ ಅಧ್ಯಕ್ಷರಾದರು. ಅವರು ಅದೇ ವರ್ಷದಲ್ಲಿ ನಿಧನರಾದರು.
2005ರ ಸೆಪ್ಟೆಂಬರ್‌ನಲ್ಲಿ ನ್ಯಾಯಮೂರ್ತಿ ಹೆಚ್.ಜಿ. ಸದಾಶಿವ ಅಧ್ಯಕ್ಷತೆಯಲ್ಲಿ ಸರ್ಕಾರ ಆಯೋಗ ರಚಿಸಿತು. ಇದೇ ಸಮಯದಲ್ಲಿ ಆಂದ್ರಪ್ರದೇಶ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಿ ಸುಗ್ರೀವಾಜ್ಙೆಯ ಮೂಲಕ ರಚಿಸಿದ ಕಾಯ್ದೆಯನ್ನು 2004ರ ನವೆಂಬರ್ ನಲ್ಲಿ ಸುಪ್ರೀಂಕೋರ್ಟ್ ರದ್ದುಪಡಿಸಿತು. ಈ ಕಾರಣದಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ಕಾರ್ಯಸೂಚಿಯಲ್ಲಿ ಬದಲಾವಣೆ ಮಾಡಲಾಯಿತು. ಪರಿಶಿಷ್ಠ ಪಂಗಡವನ್ನು ಕೈ ಬಿಡಲಾಯಿತು.
2005ರಲ್ಲಿ ಆಂಧ್ರಪ್ರದೇಶ ಸರ್ಕಾರದ ಪ್ರಕರಣದಲ್ಲಿ ಒಳ ಮೀಸಲಾತಿ ಕೊಡುವುದಕ್ಕೆ ರಾಜ್ಯ ಸರ್ಕಾರಗಳಿಗೆ ಅಧಿಕಾರವಿಲ್ಲವೆಂದು ಹೇಳಿತು. ಐದು ಜನರ ಪೀಠ ನಂತರ ಒಂಭತ್ತು ನ್ಯಾಯಾಧೀಶರ ಪೀಠದಲ್ಲಿ ಅಂತಿಮ ತೀರ್ಮಾನವಾಗಬೇಕೆಂದು ಹೇಳಿತು. 2005ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಒಳ ಮೀಸಲಾತಿ ಹೋರಾಟಕ್ಕೆ ಬಹುದೊಡ್ಡ ಹಿನ್ನೆಡೆಯಾಯಿತು.
ನೆನೆಗುದಿ ಬಿದ್ದಿರುವ ಸದಾಶಿವ ಆಯೋಗದ ಶಿಪಾರಸ್ಸು
ನ್ಯಾಯಾಧೀಶ ಸದಾಶಿವ ಆಯೋಗ ವರದಿ ನೀಡಿ ವರ್ಷಗಳು ಕಳೆದಿವೆ. ವರದಿಯನ್ನು ಸರ್ಕಾರ ಬಹಿರಂಗಪಡಿಸಲೇ ಇಲ್ಲ. ಅದರಲ್ಲಿರುವ ಪರಿಹಾರೋಪಾಯ ಸಲಹೆ ಏನು ಎಂಬುದು ಸಹ ಗೊತ್ತಿಲ್ಲದೆ, ಈ ವರದಿ ಪರ-ವಿರೋಧ ಮಾತುಗಳು ಕಳೆದ ವಿಧಾನಸಭೆ ಚುನಾವಣೆ 2018 ಸಂದರ್ಭದಲ್ಲಿ ಸುದ್ದಿ ಮಾಡಿತು. ಮಾದಿಗರ ಮತವನ್ನು ಬಿಜೆಪಿ ಸೆಳೆದುಕೊಂಡಿತು. ಅಲ್ಲಿಂದ ಮತ್ತೆ ಮಲಗಿದ ಹೋರಾಟ ಆರೋಪ ಪತ್ಯಾರೋಪಗಳಿಂದ ಹೊಲೆ-ಮಾದಿಗರ ಐಕ್ಯತೆ ಹೋರಾಟವಾಗಿ ಬಲಗೊಳಿಸಲು ಸಾಧ್ಯವಾಗದೆ ಇರುವುದು ವಿಪರ್ಯಾಸದ ಸಂಗತಿ. ಎರಡು ಅಸ್ಪೃಶ್ಯ ಜಾತಿಗಳಲ್ಲಿ ಕಟ್ಟ ಕಡೆಯ ದಲಿತರಿಗೂ ಸೌಲಭ್ಯ ಸಿಗಬೇಕಾದರೆ ಐಕ್ಯ ಹೋರಾಟ ಅತ್ಯಂತ ಅಗತ್ಯವಾಗಿದೆ.
2023ರ ಚುನಾವಣೆ ಮತ್ತೆ ಬಂದಿದೆ. ಅದೇ ರಾಗ, ಅದೇ ತಾಳ. ಸರ್ಕಾರದ ನೀತಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮಾದಿಗರ ದಂಡೋರ ಸಮಿತಿ ಮತ್ತೆ ಹೋರಾಟಕ್ಕೆ ಇಳಿದಿದೆ. ಚಿತ್ರದುರ್ಗದಿಂದ ಪಾದಯಾತ್ರೆ ನಡೆಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಠ ಕಾಲ ಹೋರಾಟ ನಡೆಸುತ್ತಿದೆ. ದಲಿತ ಹಕ್ಕುಗಳ ಸಮಿತಿ(ಡಿ.ಹೆಚ್.ಎಸ್) ಬೆಂಬಲಿಸಿದೆ. ವಿವಿಧ ದಲಿತ ಸಂಘಟನೆಗಳು, ವ್ಯಕ್ತಿಗಳು ಬೆಂಬಲ ನೀಡಿವೆ. ಬೃಹತ್ ಸ್ವರೂಪದಲ್ಲಿ ಐಕ್ಯ ಹೋರಾಟವೊಂದೇ ದಾರಿಯಾಗಿದೆ.
ಸಂವಿಧಾನ ಉಳಿವು: ಮೀಸಲಾತಿ ಸೌಲಭ್ಯದ ಅಳಿವು: ಬದಲಾಗುತ್ತಿರುವ ಸಾಮಾಜಿಕ ನ್ಯಾಯ:
ಜಾಗತೀಕರಣ, ಉದಾರೀಕರಣ, ಖಾಸಗೀಕರಣ(ಎಲ್‌ಪಿಜಿ) ನೀತಿಗಳ ಅಪಾಯಗಳನ್ನು ದಲಿತರು ಅರಿತುಕೊಳ್ಳಲೇ ಬೇಕಾದ ಸಂದರ್ಭ ಬಂದಿದೆ. ಈ ನೀತಿಗಳು ಮೀಸಲಾತಿ ಅನುಕೂಲಗಳನ್ನು ಒಂದೊಂದಾಗಿ ನುಂಗುತ್ತಾ ಬಂದಿವೆ. ಸಂವಿಧಾನದ ಮೇಲೆ ಮನುವಾದಿಗಳ ದಾಳಿ ತೀವ್ರಗೊಂಡಿದೆ. ಸಂವಿಧಾನವನ್ನು ಬದಲಿಸಲೆಂದೇ ನಾವು ಬಂದಿದ್ದೇವೆ ಎಂದು ಬಿಜೆಪಿ ಸಂಸದರು ಆರ್ಭಟಿಸುತ್ತಿದ್ದಾರೆ. ಸಂವಿಧಾನದ ಪ್ರತಿಯನ್ನು ಸುಡಲಾಗಿದೆ. ದಲಿತರ ಮೇಲೆ ದೌರ್ಜನ್ಯಗಳು ತೀವ್ರಗೊಂಡಿದೆ. ದಲಿತರ ಜೀವನದ ಮೇಲೆ ಆಂತಂಕದ ಪರಿಣಾಮಗಳು ಉಂಟಾಗಿದೆ.
ಎಂಬತ್ತರ ದಶಕದಲ್ಲಿ ಆಧುನೀಕರಣದ ಹೆಸರಿನಲ್ಲಿ ಸಾರ್ವಜನಿಕ ಬ್ಯಾಂಕುಗಳಲ್ಲಿ, ಎಲ್.ಐ.ಸಿ ವಿಮಾ ಕಂಪನಿಗಳಲ್ಲಿ, ಸಾರ್ವಜನಿಕ ಉದ್ದಿಮೆಗಳಲ್ಲಿ ಕೇಂದ್ರ ಸರ್ಕಾರ ಕಂಪ್ಯೂಟರೀಕರಣ ಜಾರಿ ಮಾಡಲಾಯಿತು. ಆ ದಿನಗಳಲ್ಲಿ ಎಡಪಂಥೀಯ ಸಂಘಟನೆಗಳು ಮಾತ್ರ ಪ್ರತಿಭಟನೆಗಳನ್ನು ನಡೆಸಿದವು.
ಇದನ್ನು ಓದಿ: ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ: ಒಳ ಮೀಸಲಾತಿ ಜಾರಿ ಸೇರಿ 15 ನಿರ್ಣಯ
ಆ ನಂತರದಲ್ಲಿ ನಿಧಾನವಾಗಿ ನೂತನ ಆರ್ಥಿಕ ನೀತಿಗಳನ್ನು ಜಾರಿ ಮಾಡುತ್ತಾ ಕೇಂದ್ರ ಸರ್ಕಾರ ಉದ್ಯೋಗಗಳನ್ನು ಕಡಿತ ಮಾಡಲು ಸುರುಮಾಡಿತು. ಕೆ.ಪಿ.ಎಸ್.ಸಿ. ನಡೆಸುತ್ತಿದ್ದ ಪರೀಕ್ಷೆಗಳನ್ನು ರದ್ದುಗೊಳಿಸಿತು. ಸಾಮೂಹಿಕವಾಗಿ ಸರ್ಕಾರಿ ಉದ್ಯೋಗ ತುಂಬಿಕೊಳ್ಳುವ ಅವಕಾಶಗಳು ಕಳೆದು ಹೋಯಿತು. ಕೇಂದ್ರ ಸರ್ಕಾರ ರಿಕ್ಯ್ರೂಟ್ ಮೆಂಟ್ ಬೋರ್ಡುಗಳನ್ನು ರದ್ದುಗೊಳಿಸಿತು. ಹೀಗೆ ಉದ್ಯೋಗ ಅವಕಾಶಗಳನ್ನು ಕಸಿದುಕೊಳ್ಳಲಾಯಿತು. ಮೀಸಲಾತಿ ಅವಕಾಶಗಳನ್ನು ಕಿತ್ತುಕೊಳ್ಳಲಾಯಿತು. ಈ ಪ್ರಕಿಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಸೌಲಭ್ಯ ಇಲ್ಲವಾದವು.
ಒಳಮಿಸಲಾತಿ ಜಾರಿ ವೈಜ್ಜಾನಿಕ ತಿಳುವಳಿಕೆ
ಸದಾಶಿವ ಆಯೋಗದ ವರದಿಯನ್ನು ಬಹಿರಂಗ ಪಡಿಸಿ ಚರ್ಚೆ ನಡೆಯಬೇಕು. ಅದೇ ರೀತಿ ಇದಕ್ಕೆ ಸಂಬಂಧಿಸಿದ ಉಳಿದ ಆಯೋಗಗಳ ವರದಿಗಳನ್ನು ತಕ್ಷಣ ಜಾರಿಗಾಗಿ ಸೂಕ್ತ ಕ್ರಮ ಜರುಗಿಸಬೇಕು. ಸರಿಯಾದ ಜನಗಣತಿ ಮಾಡಬೇಕು. ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಅವರ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸಬೇಕು. ಒಳ ಮೀಸಲಾತಿ ಜಾರಿ ಮೂಲಕ ಅತ್ಯಂತ ತಳದಲ್ಲಿರುವ ಎಲ್ಲರಿಗೂ ಅವಕಾಶ, ಸೌಲಭ್ಯಗಳನ್ನು ಪಡೆಯುವ ಪರಿಸ್ಥಿತಿ ಉಂಟಾಗಬೇಕು. ಈಗಾಗಲೇ ವಂಚನೆಗೆ ಒಳಗಾಗಿರುವುದನ್ನು ನಾವು ಅರಿತುಕೊಳ್ಳಬೇಕು. ಸಮಾನವಾಗಿ ಹಂಚಿಕೊಂಡು ಬಾಳುವ ದಾರಿಯಲ್ಲಿ ನಡೆಯಬೇಕು. ಹೊಲೆ ಮಾದಿಗರಲ್ಲಿರುವ ಅಗಾಧ ಶಕ್ತಿಯನ್ನು ಜಾತಿ ನಿರ್ಮೂಲನೆಗಾಗಿ ಮುಂದಿನ ಸಮಾನತೆ, ಭಾತೃತ್ವ, ಜಾತ್ಯತೀತತೆ, ಸಹಬಾಳ್ವೆ, ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಉನ್ನತ ಸ್ಥಾನಗಳನ್ನು ದಕ್ಕಿಸಿಕೊಳ್ಳಲು ಮುಂದಾಗಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಪಡೆಯದೆ ದಲಿತರ ಬದುಕಿಗೆ ದಾರಿ ಇಲ್ಲ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ