ಒಳಮೀಸಲಾತಿ ಜಾರಿಯಾಗಲಿ, ಆದರೆ ಮತ ಬೇಟೆಗೆ ಬಳಕೆಯಾಗದಿರಲಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ಜಾತಿಗಳಲ್ಲಿನ ಒಳಜಾತಿಗಳಿಗೆ ಒಳಮೀಸಲು ನೀಡಲು ಸುಪ್ರೀಂ  ಕೋರ್ಟ್ ಒಲವು ತೋರಿರುವುದು ಸ್ವಾಗತಾರ್ಹವಾಗಿದೆ. ಆದರೆ ಸುಪ್ರೀಂ ಕೋರ್ಟ್ ಈ ಅಭಿಮತವು ಮೀಸಲಾತಿಗೆ ಸಂಬಂಧಿಸಿ ದೇಶದಲ್ಲಿ ಬಹುದೊಡ್ಡ. ಚರ್ಚೆಯನ್ನು ಹುಟ್ಟು ಹಾಕಬಹುದು.
ಕರ್ನಾಟಕದಲ್ಲಿ ಈಗ ಎಸ್.ಸಿ. ಗೆ 15%, ಎಸ್.ಟಿ.ಗೆ 3% ಮತ್ತು ಒಬಿಸಿಗೆ 32% ಮೀಸಲಾತಿ ಇದೆ. 10% ಎಸ್.ಸಿ. ಜಾತಿಗಳಿಗೆ, 50 ಎಸ್.ಟಿ. ಜಾತಿಗಳಿಗೆ ಮತ್ತು 207 ಇತರರ ಹಿಂದುಳಿದ ಜಾತಿಗಳಿಗೆ ಮೀಸಲಾತಿ ದೊರೆಯುತ್ತಿದೆ.

ತಮಗೆ ತಮ್ಮ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿಯನ್ನು ಹೆಚ್ಚಿಸಿ ನ್ಯಾಯ ದೊರಕಿಸಬೇಕೆಂಬ ಕೂಗು ತೀವ್ರವಾದಾಗ ಎ.ಜೆ. ಸದಾಶಿವ ಆಯೋಗ ರಚನೆಯಾಯಿತು. ಆಯೋಗ ವರದಿಯನ್ನು ನೀಡಿತು. ಆದರೆ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಸ್ಪೃಶ್ಯ ಮತ್ತು ಅಸ್ಪೃಶ್ಯರಿಗೆ ಮರು ವರ್ಗೀಕರಣ ಮಾಡಿ ಒಳಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದೆ ಎನ್ನಲಾದ ಸದಾಶಿವ ಆಯೋಗ ವರದಿ ಸದನದಲ್ಲಿ ಮಂಡನೆ ಆಗಲೇ ಇಲ್ಲ. ಒಟ್ಟು 15% ಎಸ್.ಸಿ. ಮೀಸಲಾತಿಯಲ್ಲಿ 6% ಎಸ್.ಸಿ.(ಎಡ), 5% ಎಸ್.ಸಿ.(ಬಲ) 3% ಸ್ಪೃಶ್ಯರಿಗೆ ಮತ್ತು 1% ಇತರ ಎಸ್.ಸಿ. ಗಳಿಗೆ ವಿಭಜಿಸಬೇಕೆಂದು ಸಹ ಸದಾಶಿವ ಆಯೋಗ ವರದಿಯಲ್ಲಿ ಹೇಳಲಾಗಿದೆ ಎನ್ನಲಾಗಿದೆ.

ಆಂಧ್ರಪ್ರದೇಶದ ಸರ್ಕಾರ ಒಳಮೀಸಲಾತಿ ನೀಡಿದ ಕ್ರಮವನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟಿಗೆ ಹೋದರು. ನ್ಯಾ. ಸಂತೋಷ್ ಹೆಗ್ಡೆ ನೇತೃತ್ವದ ಪಂಚಪೀಠ ತೀರ್ಪು ನೀಡಿ ಮೀಸಲಾತಿ ವರ್ಗೀಕರಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಹೇಳಿತು. ಆದರೆ ಈಗ ಮೀಸಲಾತಿ ವರ್ಗೀಕರಣ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲವೆಂದು 2004ರಲ್ಲಿ ನೀಡಲಾದ ತೀರ್ಪನ್ನು ಮರುಪರಿಶೀಲನೆ ಮಾಡುವ ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಒಂದು ಸಮುದಾಯವನ್ನು ಒಳಮೀಸಲಾತಿಗೆ ಪರಿಶೀಲಿಸುವಾಗ ಅವರು ಎದುರಿಸುತ್ತಿರುವ ಅಸ್ಪೃಶ್ಯತೆಯನ್ನು ಪರಿಗಣಿಸಬೇಕೇ ಹೊರತು ಅವರ ಸಾಮಾಜಿಕ, ಶೈಕ್ಷಣಿಕ ಹಿಂದುಳಿಯುವಿಕೆಯನ್ನಲ್ಲ ಕರ್ನಾಟಕದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ 101 ಜಾತಿಗಳಿದ್ದರೂ ಅವರಲ್ಲಿ ಸ್ಪೃಶ್ಯ ಸಮುದಾಯದವರೇ ಹೆಚ್ಚು ಮತ್ತು ಅವರೇ ಇದುವರೆಗೆ ಮೀಸಲಾತಿ ಲಾಭದ ಹೆಚ್ಚಿನ ಪಾಲನ್ನು ಪಡೆದಿದ್ದಾರೆ. ಅಸ್ಪೃಶ್ಯತೆಯ ಯಾತನೆಯನ್ನೇ ಅನುಭವಿಸದಿರುವವರಿಗೆ ಮೀಸಲಾತಿಯ ಸೌಲಭ್ಯ ಸಿಕ್ಕಿದೆ. ಅಸ್ಪೃಶ್ಯತೆಯ ಕ್ರೌರ್ಯವನ್ನು ಅನುಭವಿಸುತ್ತಿರುವರು ಸ್ವಾಭಿಮಾನದ ಬದುಕಿನಿಂದ ವಂಚಿತರಾಗಿದ್ದಾರೆ. ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಯಾರು ಬಯಸದ ವೃತ್ತಿಗಳನ್ನು ಮಾಡಿಕೊಂಡು ಬದುಕುತ್ತಿದ್ದಾರೆ. ಇಂತಹವರಿಗೆ ಆಗಿರುವ ಅನ್ಯಾಯವನ್ನು ಈಗಲಾದರೂ ಸರಿಪಡಿಸಬೇಕಾಗಿದೆ.

ಸುಪ್ರೀಂ ಕೋರ್ಟಿನ ಈ ತೀರ್ಪು ದಲಿತ ಅಸ್ಪೃಶ್ಯರಲ್ಲಿ ಹೊಸ ಕನಸನ್ನು ಮೂಡಿಸಿದೆ. ಅದನ್ನು ನನಸು ಮಾಡಲು ಎಲ್ಲರೂ ಕೈಜೋಡಿಸಬೇಕಾಗಿದೆ. ಆದರೆ ಈ ಬೆಳವಣಿಗೆ ರಾಜಕಾರಣಕ್ಕೆ ಬಳಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಬಿಜೆಪಿಗರು ಸಹ ಒಳ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ. ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನೇ ಕಿತ್ತುಹಾಕಿ ಮನುಶಾಸ್ತ್ರವನ್ನು ಅನುಷ್ಠಾನಕ್ಕೆ ತರುವ ಗುಪ್ತ ಗುರಿ ಹೊಂದಿರುವ ಇವರ ಒಳಮೀಸಲಾತಿ ಪ್ರೇಮವನ್ನು ಯಾರಾದರೂ ನಂಬಬಹುದಾ?.  ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಅಂದರೆ ಸವರ್ಣೀಯರಿಗೆ 10% ರಷ್ಟು ಮೀಸಲಾತಿ ಘೋಷಿಸಿ ಜಾರಿಗೆ ತಂದಿರುವ ಮೋದಿ ಮಾಡುತ್ತಿರುವ ಮತಬೇಟೆ ಅಲ್ಲವೇ? ಇವರು ಬಾಯಿ ಮಾತಿನಲ್ಲೇ ಮೀಸಲಾತಿ ಪರವಾಗಿರುವುದು ರಹಸ್ಯವೇನಿಲ್ಲ. ಮೀಸಲಾತಿ ಪ್ರಶ್ನೆಯನ್ನು ಒಂದು ಏಣಿಯಾಗಿ ಬಳಸಲು ಬಿಜೆಪಿಗರು ನಿಪುಣರು. ಚುನಾವಣೆ ಬಂದಾಗಲಷ್ಟೇ ಇವರಿಗೆ  ಮೀಸಲಾತಿ, ಸದಾಶಿವ ಆಯೋಗ ವರದಿ ನೆನಪಾಗುತ್ತದೆ.

ನರೇಂದ್ರ ಮೋದಿಯವರು ದೇಶವನ್ನೇ ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಇವರು ಸಂಚು ಹೂಡಿರುವಂತೆ ಖಾಸಗೀಕರಣದ ಅನುಷ್ಠಾನ ಯಶಸ್ವಿಯಾದ್ದಾರೆ ಯಾವ ಮೀಸಲಾತಿಯೂ ಉಳಿಯದು. ಖಾಸಗಿ ಕೈಗಾರಿಕೆಗಳಲ್ಲಿ ಹಾಗೂ ಖಾಸಗೀಕರಣಗೊಂಡ ಸಾರ್ವಜನಿಕ ಉದ್ದಿಮೆಗಳಲ್ಲಿ ಮೀಸಲಾತಿಗೆ ಅವಕಾಶ ಇರಲಾರದು. ಆದ್ದರಿಂದ ಮೋದಿ ಸರ್ಕಾರದ ದಲಿತ ವಿರೋಧಿ ನಡೆಯ ವಿರುದ್ಧ, ಮೀಸಲಾತಿಯ ಉಳಿವಿಗಾಗಿ ನಾವು ಎಲ್ಲರೂ ಒಂದಾಗಿ ಹೋರಾಡಬೇಕಾಗಿದೆ. ನಮ್ಮ ನಡುವೆ ಭೇದಭಾವ, ಮತ್ಸರ ಇರಬಾರದು. ನಾವು ಸ್ಪೃಶ್ಯರು ಮತ್ತು ಅಸ್ಪೃಶ್ಯರು ಎಂಬ ಬೇಧವಿಲ್ಲದೆ ಒಂದಾಗಿ ಹೋರಾಡಬೇಕು.

ಅಸ್ಪೃಶ್ಯರೆನಿಸಿಕೊಂಡು ಹಿಂಸೆಯನ್ನು ಅನುಭವಿಸುತ್ತಿರುವವರ ಬಗ್ಗೆ ಪ್ರೀತಿ-ವಿಶ್ವಾಸ ಇರಲೇಬೇಕು. ಒಳ ಮೀಸಲಾತಿ ಜನಸಂಖ್ಯಾ ಆಧಾರದಲ್ಲಿ ಪ್ರತಿಯೊಂದು ದಲಿತ ಸಮುದಾಯಕ್ಕೆ ದೊರಕಿಸುವುದು ನಮ್ಮ ಗುರಿಯಾಗಬೇಕು. ಅಸ್ಪೃಶ್ಯತೆಯನ್ನು ಹಾಗೂ ಜಾತಿಪದ್ಧತಿಯನ್ನು ಹೊಡೆದು ಹಾಕಲು ನಾವು ಒಂದಾಗಬೇಕು. ಮೀಸಲಾತಿ ರಾಜಕಾರಣಕ್ಕೆ ಬಳಕೆಯಾಗುವುದನ್ನು ತಡೆಯಬೇಕು.

Donate Janashakthi Media

Leave a Reply

Your email address will not be published. Required fields are marked *