ಓಕಳಿಯ ‘ಸೀಬಿ’ ಪಾಟೀಲ ಗೌಡರೆಂದರೆ…

ಮಲ್ಲಿಕಾರ್ಜುನ ಕಡಕೋಳ

ಪ್ರೊ. ಬಿ. ಬಿ. ಪಾಟೀಲ ಅವರು, ಖರ್ಗೆ ಮತ್ತು ಧರ್ಮಸಿಂಗ್ ಇಬ್ಬರಿಗೂ ಗುಡ್ ಅಡ್ವೈಸರ್ ಆಗಿದ್ದರು. ಅವರ ಸೂಕ್ತ ಮತ್ತು ಸೂಕ್ಷ್ಮ ಸಲಹೆಗಳು ಕೇವಲ ಚುನಾವಣಾ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅದರಾಚೆಯ ಸಮಾಜಮುಖಿ ಬದುಕಿನ ಸಾಧ್ಯತೆ ಮತ್ತು ಸವಾಲುಗಳಿಗೆ ಸಂಬಂಧಿಸಿರುತ್ತಿದ್ದವು. ಧರ್ಮ ಮತ್ತು ಜಾತಿನಿಷ್ಠ ನಿರೂಪಣೆಗಳಾಚೆ ನಿಲ್ಲಬಲ್ಲ ವ್ಯಕ್ತಿತ್ವ ಬೆಳೆಸಿಕೊಂಡವರು ಓಕಳಿ ಬ್ರದರ್ಸ್. 

ಓಕಳಿ ಎಂಬುದು ಕಲಬುರ್ಗಿ ಜಿಲ್ಲೆ ಕಮಲಾಪುರ ಹತ್ತಿರದ ಹಳ್ಳಿ. ಆ ಊರಿನ ಗೌಡರ ಮನೆತನಕ್ಕೆ ಲೋಕ ಮೆಚ್ಚುಗೆಯ ಮಹತ್ವದ ಹೆಸರಿದೆ. ಅವತ್ತಿನ ನಮ್ಮ ಹೈದರಾಬಾದ್ ಕರ್ನಾಟಕ ಯಾನೇ ಇವತ್ತಿನ ಕಲ್ಯಾಣ ಕರ್ನಾಟಕದ ಕಡೆಗೆ ಹಳ್ಳಿಯ ಗೌಡರೆಂದರೆ ಪಕ್ಕಾ ಫ್ಯೂಡಲ್ ಆಟ್ಟಿಟ್ಯುಡ್ ಮತ್ತು ಠೇಂಕಾರದ ಗತ್ತು ಗೈರತ್ತುಗಳ ಪ್ರದರ್ಶನ ಅಂತಲೇ ಅರ್ಥ. ಅದು ಅವರ ಬ್ರಾಂಡ್ ಕೂಡಾ ಆಗಿರುತ್ತದೆ. ಅದರಲ್ಲೂ ಮೇಲ್ಜಾತಿಯ, ಮತ್ತದರಲ್ಲೂ ಜಮೀನ್ದಾರಿ ಗೌಡರಾಗಿದ್ದರಂತೂ ಅದು ಹಂಡ್ರೆಡ್ ಪರ್ಸೆಂಟ್ ಪಕ್ಕಾ ಫ್ಯೂಡಲಿಸ್ಟಿಕ್ ಗೌಡಕಿ ಎಂಬ ಖಾತರಿಯ ಬ್ರಾಂಡ್ನೇಮ್. ಪ್ರಸ್ತುತ ಓಕಳಿ ಗೌಡರು ಅದಕ್ಕೆ ಅಪವಾದ.

ಓಕಳಿಯ ಭೀಮರಾಯಗೌಡರೆಂದರೆ ಸುಸಂಸ್ಕೃತ ಮತ್ತು ಪ್ರೀತಿ, ವಾತ್ಸಲ್ಯಗಳ ವಾರಿಧಿ. ಸಭ್ಯತೆಯ ನಿರಾಳ ನಿಲುವು. ಸೌಹಾರ್ದದ ಸರಳ ಸ್ನೇಹ, ಸಲುಗೆಗಳ ಸಾಕಾರ ಮೂರ್ತಿ. ಹೌದು ಓಕಳಿಯ ಭೀಮರಾವ್ ಪಾಟೀಲರು ದಾಕ್ಷಿಣ್ಯಕ್ಕೆ ಒಳಗಾಗದ ನ್ಯಾಯನಿಷ್ಠುರಿ ಶರಣ. ಊರಿನ ಜಗಳಗಳು ಅವರ ಮಾತುಮೀರಿ ಪೋಲಿಸ್ ಠಾಣೆಯ ಕಟ್ಟೆ ಏರುತ್ತಿರಲಿಲ್ಲ. ಊರಿನ ಸರ್ವ ಜನಗಳ ಶ್ರಮದೊಂದಿಗೆ ಓಕಳಿಯಿಂದ ಕಮಲಾಪುರದವರೆಗೆ ರಸ್ತೆಯನ್ನೇ ನಿರ್ಮಿಸಿದ ಹೆಗ್ಗಳಿಕೆ ಭೀಮರಾವ್ ಪಾಟೀಲರದು. ಮಹಾಗಾಂವ ಚಂದ್ರಶೇಖರ ಪಾಟೀಲ, ವೀರೇಂದ್ರ ಪಾಟೀಲರಂತಹ ಮೇಧಾವಿಗಳು ಭೀಮರಾವ್ ಪಾಟೀಲರ ಮನೆಗೆ ಬಂದು ಅತಿಥಿ ಸತ್ಕಾರ ಪಡೆಯುತ್ತಿದ್ದರು.

ಓಕಳಿ ಗೌಡರ ಹಿರಿಮಗ ಪ್ರೊ. ಬಿ. ಬಿ. ಪಾಟೀಲರು ಆಗಿನ ಗುಲಬರ್ಗಾ ಸ್ನಾತಕೋತ್ತರ ಕೇಂದ್ರದ ಪೊಲಿಟಿಕಲ್ ಸೈನ್ಸ್ ವಿಭಾಗ ಮುಖ್ಯಸ್ಥರಾಗಿ ಹೆಸರು ಮಾಡಿದವರು‌. ಅಷ್ಟಲ್ಲದೇ ಅದಕ್ಕೆ ಮೊದಲು ಕಲಬುರಗಿಯ ಎಸ್‌. ಬಿ. ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಗ್ರಾಮಾಂತರ ಪ್ರದೇಶದ ಬಡಮಕ್ಕಳ ವಿದ್ಯಾರ್ಜನೆಗೆ ನೆರವಾದವರು. ಮುಖ್ಯವಾಗಿ ಅವರು ತಮ್ಮ ಪ್ರಗತಿಪರ ಧೋರಣೆಗಳಿಂದ ಭಲೇ ಭಲೇ ರಾಜಕಾರಣಿಗಳ ಗಮನ ತಮ್ಮತ್ತ ಸೆಳೆದವರು. ಧರ್ಮಸಿಂಗ್, ತಮ್ಮ ರಾಜಕೀಯ ಜೀವನದ ಆರಂಭಿಕ ದಿನಮಾನಗಳಲ್ಲಿ ವಾಮಪಂಥೀಯ ವಿಚಾರಗಳ ರಾಜಕೀಯ ಒಲವುಳ್ಳವರಾಗಿದ್ದರು.

ಅದಕ್ಕೆ ಪೂರಕ ಪರಿಕರ ಎಂಬಂತೆ ಓಕಳಿ ಪ್ರೊಫೆಸರ್ ಪಾಟೀಲರ ಮನೆತನದ ಪ್ರೀತಿ, ಔದಾರ್ಯಗಳ ಒಲವು. ಇಂತಹ ಅನೇಕಾನೇಕ ನೆರವು, ಸಹಕಾರ ಸಂಬಂಧಗಳಿಂದ ಅಧಿಕಾರ ರಾಜಕೀಯದಲ್ಲಿ ಮುಂದೆ ಬಂದವರು. ಅಂತೆಯೇ ಮಂತ್ರಿ ಆಗಿದ್ದಾಗ ಧರ್ಮಸಿಂಗ್, ಓಕಳಿ ಗೌಡರ ಋಣ ತೀರಿಸಲು ತಮ್ಮ ರಾಜಕೀಯ ಶಕ್ತಿ ಬಳಸಿ ಓಕಳಿಯ ಪ್ರೊ. ಬಸವರಾಜ ಭೀಮರಾವ್ ಪಾಟೀಲರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ, ಅಧ್ಯಕ್ಷ ಪದವಿಗೇರಿಸಿದರು.

ಇಂತಹ ಓಕಳಿ ಗೌಡರ ಮನೆತನಕ್ಕೆ ಸೇರಿದವರು ಇವತ್ತಿನ ನಮ್ಮ ಸಿ. ಬಿ. ಪಾಟೀಲ. ಚಂದ್ರಶೆಟ್ಟಿ ಭೀಮರಾವ್ ಪಾಟೀಲ ಎಂಬುದು ಸೀಬಿ ಪಾಟೀಲರ ಪೂರ್ಣ ಹೆಸರು. ಸದಾ ಸಂಕಟಭರಿತ ಆಕ್ರೋಶ, ಪ್ರತಿಭಟನೆಗೆ ಹಾತೊರೆವ ಚಹರೆ, ಹೇಳಲಾಗದ ಹಂಬಲವನ್ನೇ ಕೃಷ್ಣವರ್ಣದ ಮುಖದ ತುಂಬಾ ಮಡುಗಟ್ಟಿಸಿಕೊಂಡ ‘ಸೀಬಿ’ ಜೀವಪ್ರೀತಿಯ ಗೆಣೆಕಾರ. ತನ್ನಣ್ಣ ಪ್ರೊ. ಬಸವರಾಜ ಬಿ. ಪಾಟೀಲರಂತೆ ಸಮಾಜವಾದಿ ಕನಸುಗಳ ಎಡಪಂಥೀಯ ವಿಚಾರ ಸಾಹಿತ್ಯ ಓದಿದವರು. ಅದನ್ನು ತನ್ನ ಮತ್ತು ಜನಪರ ಬದುಕಿಗೂ ಬಳಸಿಕೊಂಡು ಬೆಳೆದವರು. ಹಾಗಂತ ಅದು ‘ಸಟಪಟ’ ಓದಲ್ಲ. ಅವರದು ಆಳದ ಅಧ್ಯಯನ.

ಇದನ್ನೂ ಓದಿ:ದುಶ್ಯಾಸನರ ದರ್ಬಾರಿನಲ್ಲಿ ದ್ರೌಪದಿ

ಎಲ್ಲಾ ಕಡೆಗೂ ಇರುವಂತೆ ಕಲಬುರ್ಗಿ ಸೀಮೆಯದು ಕೂಡಾ ಜಾತಿ ಪಾರಮ್ಯದ ರಾಜಕಾರಣ. ಕೊಳಕು ಕಟ್ಟುಪಾಡುಗಳ ದುರಿತ ಕಾಲದ ಮಧ್ಯೆಯೂ ಧರ್ಮಸಿಂಗ್ ಮತ್ತು ಖರ್ಗೆ ಅವರು ಐವತ್ತು ವರ್ಷಗಳ ಕಾಲ ಆರಿಸಿ ಬಂದು ಪ್ರಭುತ್ವದ ಚುಕ್ಕಾಣಿ ಹಿಡಿದರು. ವರ್ಗ ಮತ್ತು ವರ್ಣ ಶ್ರೇಣೀಕರಣಗಳ ಸಂಘರ್ಷದ ನಡುವೆ ಗೆಲುವು ಸಾಧಿಸಲು ಅದಕ್ಕೆ ಓಕಳಿ ಗೌಡರಂತಹ ನೂರಾರು ಕುಟುಂಬಗಳು ಕಾರಣ. ಅಂಥವರ ನೆರವಿಲ್ಲದೇ ಗೆಲುವು ಅಕ್ಷರಶಃ ಸಾಧ್ಯವೇ ಇರುತ್ತಿರಲಿಲ್ಲ. ಇವತ್ತಿಗೂ ಅವರ ಚುನಾವಣಾ ರಾಜಕೀಯದ ಗೆಲುವು ಅನೇಕ ಊರುಗಳ ಬಲಾಢ್ಯ ಪಾಟೀಲ ಗೌಡರುಗಳ ನೆರವಿನಿಂದಲೇ ಎಂಬುದು ಅಲ್ಲಗಳೆಯಲಾಗದು.

ಹಾಗೆ ನೋಡಿದರೆ ಪ್ರೊ. ಬಿ. ಬಿ. ಪಾಟೀಲ ಅವರು, ಖರ್ಗೆ ಮತ್ತು ಧರ್ಮಸಿಂಗ್ ಇಬ್ಬರಿಗೂ ಗುಡ್ ಅಡ್ವೈಸರ್ ಆಗಿದ್ದರು. ಅವರ ಸೂಕ್ತ ಮತ್ತು ಸೂಕ್ಷ್ಮ ಸಲಹೆಗಳು ಕೇವಲ ಚುನಾವಣಾ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅದರಾಚೆಯ ಸಮಾಜಮುಖಿ ಬದುಕಿನ ಸಾಧ್ಯತೆ ಮತ್ತು ಸವಾಲುಗಳಿಗೆ ಸಂಬಂಧಿಸಿರುತ್ತಿದ್ದವು. ಧರ್ಮ ಮತ್ತು ಜಾತಿನಿಷ್ಠ ನಿರೂಪಣೆಗಳಾಚೆ ನಿಲ್ಲಬಲ್ಲ ವ್ಯಕ್ತಿತ್ವ ಬೆಳೆಸಿಕೊಂಡವರು ಓಕಳಿ ಬ್ರದರ್ಸ್. 1983 ರ ವಿಧಾನಸಭಾ ಚುನಾವಣೆಯ ಆಳಂದ ಕ್ಷೇತ್ರದಲ್ಲಿ ಕೇವಲ ಐನೂರು ಮತಗಳಲ್ಲಿ ಪ್ರೊ.ಬಿ. ಬಿ.ಪಾಟೀಲ ಸೋತರು. 1996 ರ ಕಲಬುರ್ಗಿ ಉಪ ಚುನಾವಣೆಯಲ್ಲಿ ಸಿ. ಬಿ‌. ಪಾಟೀಲ ಸಹಿತ ಸೋಲಿನ ಅನುಭವ ಗಳಿಸುತ್ತಾರೆ.

ಸಿ. ಬಿ. ಪಾಟೀಲರ ಮಗಳು ಸಮತಾ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಅಳಿಯ ಹಣಮಂತರಾಯ ಐ.ಪಿ.ಎಸ್. ಅಧಿಕಾರಿ. ಮಗ ಚೇತನ್ ಕಾನೂನು ಪದವಿ ಅರ್ಧಕ್ಕೆ ನಿಲ್ಲಿಸಿದ. ಅಂದಹಾಗೆ ಕಾಂ. ಸೀಬಿ ಪಾಟೀಲ ಎಂ. ಎ. ಎಲೆಲ್. ಬಿ. ಪದವೀಧರರು. ತುಂಬಾ ಹಿಂದೆಯೇ ತನಗಿರುವ ಪ್ರಭಾವ ಬಳಸಿಕೊಂಡಿದ್ದರೇ ಹೈಕೋರ್ಟ್ ನ್ಯಾಯಾಧೀಶರಾಗಿ ಇಷ್ಟೊತ್ತಿಗೆ ವಿಶ್ರಾಂತ ನ್ಯಾಯಾಧೀಶರೆಂದು ಕರೆಸಿ ಕೊಳ್ಳುತ್ತಿದ್ದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಗೋಪಾಲಗೌಡ, ನ್ಯೂಕ್ಲಿಯರ್ ವಿಜ್ಞಾನಿ ಎಂ.ಕೆ.ಭಟ್, ಎರಡು ಬಾರಿ ಶಾಸಕರಾಗಿದ್ದ ಜಿ. ವಿ. ಶ್ರೀರಾಮರೆಡ್ಡಿ ಇವರೆಲ್ಲರೂ ‌ನಮ್ಮ ಸೀಬಿ ಪಾಟೀಲರ ವಿದ್ಯಾರ್ಥಿ ಜೀವನದ ಅಗ್ದೀ ಖಾಸ್ ದೋಸ್ತರು.

ಕೊಂಡಜ್ಜಿ ಮೋಹನ್, ಸೀಬಿಗೆ ಕಳೆದ ಶತಮಾನದಷ್ಟು ಹಿರಿತನದ ಆಪ್ತಮಿತ್ರ. ಅವರಿಬ್ಬರೂ ಏಕವಚನದ ಸನ್ಮಿತ್ರರು. ಬೆಂಗಳೂರಿಗೆ ಹೋದಾಗೆಲ್ಲ ಮೋಹನ್ ಮುಲಾಖತ್ ಆದಾಗಲೇ ಸೀಬಿಗೆ ಸಮಾಧಾನ. ಸಿ.ಬಿ. ಪಾಟೀಲ ತಮ್ಮ ಅನುಭವ ಕಥನ ಬರೆಯಬೇಕೆಂಬ ಹುರಿದುಂಬಿದ ಹಂಬಲ ಕೊಂಡಜ್ಜಿ ಮೋಹನ್ ಅವರದು. ಹಾಗೆ ನೋಡಿದರೆ ಅದು ಅವರಿಬ್ಬರ ಹೋರಾಟದ ಆನುಷಂಗಿಕ ಕಥನವೇ ಆಗಿರಬಲ್ಲದು. ಜ್ಞಾನ ಮತ್ತು ಕಠೋರ ಅನುಭವಗಳ ಕಣಜ ಏನಕೇನ ಖಾಲಿಯಾಗುವ ಮುನ್ನ ಸೀಬಿ ಜತನದ ನೆನಪುಗಳು ಕಥನಗೊಳ್ಳಲಿ. ಅಷ್ಟಕ್ಕೂ ಅವರಿಬ್ಬರೂ ಎಸ್. ಎಫ್. ಐ. ಸಂಘಟನೆಯ ಉತ್ಪನ್ನ ಸಂಪನ್ನರು.

ಪ್ರಸ್ತುತ ಅವರು ಸ್ಕೌಟ್ ಮತ್ತು ಗೈಡ್ಸ್ ಸಂಘಟನೆಯ ಕಲ್ಯಾಣ ಕರ್ನಾಟಕದ ಅಸಿಸ್ಟಂಟ್ ಕಮಿಷನರ್ ಆಗಿದ್ದಾರೆ. ಗಂಭೀರ ಸ್ವರೂಪದ ಅಧ್ಯಯನಶೀಲರಾಗಿ ಮಾವೋ, ಕಾರ್ಲ ಮಾರ್ಕ್ಸ್, ಲೆನಿನ್, ಫಿಡೆಲ್ ಕ್ಯಾಸ್ಟ್ರೋ ಮೊದಲಾದವರ ಬದುಕು, ಹೋರಾಟ, ಸಾಧನೆಗಳ ಕುರಿತು ಗಹನ ಅಧ್ಯಯನ ಮಾಡಿದವರು. ಇವತ್ತಿಗೂ ಅವರ ಬಳಿ  ಐದು ಲಕ್ಷಗಳಷ್ಟು ಮುಖಬೆಲೆಯ ಸಹಸ್ರಾರು ಪುಸ್ತಕಗಳ ಸಂಗ್ರಹವಿದೆ. ಅವರ ತಾಯಿ ಕಾಶಮ್ಮ ಪಾಟೀಲ ಹೆಸರಲ್ಲಿ ಗ್ರಂಥಾಲಯವನ್ನೇ ರೂಪಿಸಿಕೊಂಡಿದ್ದಾರೆ.

ರಾಷ್ಟ್ರಮಟ್ಟದ ಚಳವಳಿಗಾರರಾದ ಪಿ. ಸುಂದರಯ್ಯ, ಪ್ರಮೋದ್ ದಾಸ್ ಗುಪ್ತಾ, ಪ್ರಕಾಶ್ ಕಾರಟ್, ಸೀತಾರಾಮ ಯೆಚೂರಿ, ‘ದಹಿಂದು’ ಪತ್ರಿಕೆಯ ಎನ್. ರಾಮ್ ಇವರೆಲ್ಲರೂ ನಮ್ಮ ಸೀಬಿ ಪಾಟೀಲರ ಸಸ್ನೇಹದ ಸಂಗಾತಿಗಳು. ಇವರೊಂದಿಗೆ ರಾಷ್ಟ್ರಮಟ್ಟದ ಹತ್ತಾರು ಕಾರ್ಯಾಗಾರ, ಶಿಬಿರಗಳಲ್ಲಿ ಪಾಲ್ಗೊಂಡ ಅನನ್ಯತೆ ಅವರದು. ಇಂಥವರ ಹೈ ಪ್ರೊಫೈಲ್ ಸಾಂಗತ್ಯದ ‘ಸೀಬಿ’ ಯಾವತ್ತೂ ಪ್ರಚಾರದ ಬೆನ್ನು ಬಿದ್ದವರಲ್ಲ. ಕೆಲಕಾಲ ಕಾನೂನು ಓದಿದ ಇವರ‌ ಮಗ ಸಹಿತ ಇವರಂತೆಯೇ ಹಳ್ಳಿಯ ರೈತ ಬದುಕು, ಬಾಳುವೆಗೆ ಅರ್ಪಿಸಿಕೊಂಡ. ಮಗನ ವ್ಯವಸಾಯ ಬದುಕಿನ ಸತ್ಯಶುದ್ಧ ಕಾಯಕದ ಸದಿಚ್ಛೆಗೆ ಅವರು ಅಡ್ಡಿಯಾಗಲಿಲ್ಲ.

ಇದನ್ನೂ ಓದಿ: ಮುಗುಳು ಮಲ್ಲಿಗೆ ನಗೆಯ ಹಾಡುನಟಿ ಸುಜಾತಾ ಜೇವರ್ಗಿ  

ಪಾಟೀಲರದು ನಲವತ್ತೈದು ವರುಷಗಳ ಹಿಂದೆಯೇ ಸರಳಾತಿ ಸರಳ ವಿವಾಹ. ಅಂದು ಅವರ ಮದುವೆಗೆ ಖರ್ಚಾದುದು ನೂರು ರುಪಾಯಿ ಮಾತ್ರ. ಎಪ್ಪತ್ತೈದು ರುಪಾಯಿ ಮಾಂಗಲ್ಯದ ಖರ್ಚು ಮತ್ತು ಐವತ್ತು ಕಪ್ ಚಹದ ಖರ್ಚು ಮಾತ್ರ. ಚಿಂಚೋಳಿ ತಾಲೂಕಿನ ಚೇಂಗಟಾ ಗ್ರಾಮದವರಾದ ಅವರ ಪತ್ನಿ ಬಸಮ್ಮ ಪಾಟೀಲ, ಮುನ್ನೂರು ಎಕರೆಗಳಷ್ಟು ಆಸ್ತಿಯುಳ್ಳ ಜಮೀನ್ದಾರರ ಮಗಳು. ಸೀಬಿ ಪಾಟೀಲರ ಸರಳ ಮದುವೆಗೆ ಅವರ ಅಪ್ಪ ಭೀಮರಾವ್, ಅಣ್ಣ ಬಸವರಾಜ ಕೂಡ ಬರಲಿಲ್ಲವಂತೆ. ಅದ್ದೂರಿ ಮದುವೆಗಳೆಂದರೆ ಸಂಪತ್ತಿನ ಪ್ರದರ್ಶನ ಎಂಬ ಅಹಮಿಕೆಗಳನ್ನು ಹೊಡೆದು ಹಾಕಿದವರು ಸೀಬಿ. ಅವರ ಊರು ಓಕಳಿಯಲ್ಲಿ ಐವತ್ತಕ್ಕೂ ಹೆಚ್ಚು ಜೋಡಿಗಳು ಇವರ ಮದುವೆಯ ಸರಳ ಮಾದರಿಯನ್ನು ಅನುಕರಿಸಿದರು.

ಕಲಬುರಗಿ ನಗರದಲ್ಲಿ ಓಕಳಿ ಕ್ಯಾಂಪ್ ಹೆಸರಿನ‌ ಬಡಾವಣೆಯೇ ಇದೆ. ಮೊದಲು ಅದು ಅವರು ಖರೀದಿ ಮಾಡಿದ ಹೊಲವೇ ಅದಾಗಿದ್ದು ನಂತರ ಓಕಳಿ ಎಂಬ ಅವರ ಊರ ಹೆಸರಿನ ಬಡಾವಣೆಯೇ ಆಗಿದೆ. ಅಂದು ಅವರಣ್ಣ ಕನ್ನಡ ಕಾನ್ವೆಂಟ್ ಶಾಲೆ ಆರಂಭಿಸಿದ್ದು ಇಂದು ಪ್ರಗತಿಯ ಹಾದಿ ಕಂಡಿದೆ.

ಚೀನಾ, ಶ್ರೀಲಂಕಾ ಸೇರಿದಂತೆ ಹತ್ತಾರು ದೇಶಗಳನ್ನು ಸುತ್ತಿ ಬಂದಿರುವ ಸೀಬಿ ಪಾಟೀಲ ಅನುಭವಗಳ ಆಡುಂಬೊಲ. ಅವರೊಂದಿಗೆ ಮಾತಾಡುವುದೆಂದರೆ ಕಳೆದು ಹೋದ ಹೋರಾಟದ ಗಳಿಗೆಗಳೊಂದಿಗೆ ಒಡನಾಡಿದ ದಿವಿನಾದ ನೆನಪು. ಜೀವಪರ ಪರಂಪರೆಯೊಂದಿಗೆ ಸಂವಾದಗೊಂಡ ಸಂತೃಪ್ತ ಭಾವ. ಪ್ರಗತಿಪರ ಚಿಂತನೆಗಳೊಂದಿಗೆ ಅನುಸಂಧಾನಿಸಿದ ಅನುಭವ. ಅಷ್ಟುಮಾತ್ರವಲ್ಲ ವರ್ತಮಾನದ ಸಾಮಾಜಿಕ ಬದುಕಿನ ಸಹ್ಯಾಸಹ್ಯಗಳ “ಸುಡು ಸುಡುವ ಸತ್ಯದ” ಚಿತ್ರಣಗಳೇ ಕಣ್ಮನ ತುಂಬಿ ತುಳುಕುತ್ತವೆ. ಇದೆಲ್ಲದರ ನಡುವೆ ಹೋರಾಟಗಾರರ ಕೌಟುಂಬಿಕ ಬದುಕು ಸದಾ ನೆಮ್ಮದಿಯಿಂದ ಇರುವ ಹಾಗೆ ನೋಡಿಕೊಳ್ಳುವ ಕಟ್ಟೆಚ್ಚರದ ಕಳಕಳಿ ಅವರದು.

ವಿಡಿಯೋ ನೋಡಿ: ಪಿಚ್ಚರ್ ಪಯಣ – 138 ಸಿನೆಮಾ : ಜೂಲ್ಸ್ ಮತ್ತು ಜಿಮ್ ಭಾಷೆ : ಫ್ರೆಂಚ್ ನಿರ್ದೇಶನ : ಪ್ರಾನ್ಸುವಾ ತ್ರೂಫಾ

Donate Janashakthi Media

Leave a Reply

Your email address will not be published. Required fields are marked *