ತುಮಕೂರು: ರಾಷ್ಟ್ರವ್ಯಾಪಿ ಮುಟ್ಟಿನ ರಜೆ ನೀತಿ ಕುರಿತ ಅರ್ಜಿಯನ್ನು ಭಾರತದ ಸುಪ್ರೀಂ ಕೋರ್ಟ್ ಇತ್ತೀಚೆಗೆ ವಜಾಗೊಳಿಸಿದ ಸಂದರ್ಭದಲ್ಲಿ ಮಾಡಿದ ಅವಲೋಕನಗಳು ಮಹಿಳಾ ಕಾರ್ಮಿಕರ ಹಕ್ಕುಗಳ ವಿಷಯದಲ್ಲಿ ದೋಷಪೂರಿತ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಎಂದು ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಹಾಗೂ ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ. ತುಮಕೂರು
ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವುದರಿಂದ ಮಹಿಳೆಯರ ವೃತ್ತಿ ಅವಕಾಶಗಳ ಮೇಲೆ ದುಷ್ಪರಿಣಾಮ ಬೀರಬಹುದು ಹಾಗೂ ಉದ್ಯೋಗದಾತರು ಮಹಿಳೆಯರನ್ನು ನೇಮಿಸಿಕೊಳ್ಳಲು ಹಿಂಜರಿಯಬಹುದು ಎಂಬ ನ್ಯಾಯಾಲಯದ ತರ್ಕವು ನವ-ಉದಾರವಾದಿ ಚಿಂತನೆಯ ಪ್ರತಿಫಲನವಾಗಿದೆ ಎಂದು ಸಂಘಟನೆಗಳು ಟೀಕಿಸಿವೆ. ಇದು ಗೃಹ ಕಾರ್ಮಿಕರಿಗೆ ಕನಿಷ್ಠ ವೇತನ ಅನ್ವಯಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಇತ್ತೀಚಿನ ಪ್ರತಿಕ್ರಿಯೆಯಂತೆಯೇ ಕಾರ್ಮಿಕ ವಿರೋಧಿ ಮತ್ತು ಮಹಿಳಾ ವಿರೋಧಿ ನಿಲುವಾಗಿದೆ ಎಂದು ಅವು ಹೇಳಿವೆ. ತುಮಕೂರು
ಭಾರತದಲ್ಲಿ ಸುಮಾರು 36 ಕೋಟಿ ಮಹಿಳೆಯರು ಮುಟ್ಟಾಗುತ್ತಾರೆ. ಅಧ್ಯಯನಗಳ ಪ್ರಕಾರ 50 ರಿಂದ 90 ಶೇಕಡಾ ಮಹಿಳೆಯರು ನೋವಿನ ಮುಟ್ಟಿನ ಸೆಳೆತವನ್ನು ಅನುಭವಿಸುತ್ತಾರೆ. ಎಂಡೊಮೆಟ್ರಿಯೋಸಿಸ್, ಪಿಸಿಒಎಸ್‌ನಂತಹ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ತೀವ್ರ ನೋವು ಮತ್ತು ಭಾರೀ ರಕ್ತಸ್ರಾವಕ್ಕೆ ಕಾರಣವಾಗುತ್ತವೆ ಎಂದು ಸಂಘಟನೆಗಳು ತಿಳಿಸಿವೆ.
ಇದನ್ನೂ ಓದಿ : ನಮಾಮಿ ಗಂಗೆ ಯೋಜನೆ ವಿಫಲ: ದೇವಪ್ರಯಾಗದ ನಂತರ ಗಂಗೆಯ ನೀರಿನ ಗುಣಮಟ್ಟ ಕುಸಿತ – CAG ವರದಿ
ಕರ್ನಾಟಕ, ಬಿಹಾರ ಮತ್ತು ಒಡಿಶಾ ರಾಜ್ಯಗಳಲ್ಲಿ ಈಗಾಗಲೇ ಮುಟ್ಟಿನ ರಜೆ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಜಪಾನ್, ಇಂಡೋನೇಷ್ಯಾ ಮತ್ತು ಸ್ಪೇನ್ ಸೇರಿದಂತೆ ಹಲವು ದೇಶಗಳು ಮುಟ್ಟಿನ ರಜೆ ನೀತಿಯನ್ನು ಯಶಸ್ವಿಯಾಗಿ ಜಾರಿಗೊಳಿಸಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ.
ಉದ್ಯೋಗದಾತರು ತಾರತಮ್ಯ ಮಾಡಬಹುದು ಎಂಬ ಕಾರಣಕ್ಕೆ ಮಹಿಳೆಯರ ಹಕ್ಕುಗಳನ್ನು ಸೀಮಿತಗೊಳಿಸಬೇಕು ಎಂಬ ವಾದ ಸ್ವೀಕಾರಾರ್ಹವಲ್ಲ. ಇದೇ ತರ್ಕವನ್ನು ಅನುಸರಿಸಿದ್ದರೆ ಪ್ರಸೂತಿ ಪ್ರಯೋಜನಗಳು ಹಾಗೂ ಕಾರ್ಯಸ್ಥಳದ ಸುರಕ್ಷತೆ ಮೊದಲಾದ ಪ್ರಗತಿಪರ ರಕ್ಷಣೆಗಳು ಎಂದಿಗೂ ಜಾರಿಗೆ ಬರಲಿಲ್ಲ ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ಸುಪ್ರೀಂ ಕೋರ್ಟ್ ಸ್ವತಃ ಮುಟ್ಟಿನ ಆರೋಗ್ಯವನ್ನು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಜೀವನ ಮತ್ತು ಘನತೆಯ ಹಕ್ಕಿನ ಭಾಗವೆಂದು ಗುರುತಿಸಿದೆ. ಆದ್ದರಿಂದ ಮುಟ್ಟಿನ ರಜೆ ಯಾವುದೋ ರಿಯಾಯಿತಿ ಅಲ್ಲ; ಅದು ಸಮಾನತೆ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸುವ ಅಗತ್ಯ ಕ್ರಮವಾಗಿದೆ. ದೇಶಾದ್ಯಂತ ರಾಷ್ಟ್ರೀಯ ಮುಟ್ಟಿನ ರಜೆ ನೀತಿ ಜಾರಿಗೊಳಿಸುವಂತೆ ಸಿಐಟಿಯು ಒತ್ತಾಯಿಸಿದೆ. ತುಮಕೂರು
ಇದನ್ನೂ ನೋಡಿ : ಜೀವನೋಪಾಯದ ಮೇಲೆ ದಾಳಿ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಮಹಿಳಾ ದಿನದ ಪ್ರತಿಭಟನೆ Janashakthi Media
