ನವದೆಹಲಿ: ಹಿಂದುಳಿದ ವರ್ಗಗಳನ್ನು ಗುರುತಿಸುವ ಅಧಿಕಾರವನ್ನು ರಾಜ್ಯಗಳಿಗೆ ಹಿಂತಿರುಗಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಸಂವಿಧಾನದ 105 ನೇ ತಿದ್ದುಪಡಿಯ ಈ ಮಸೂದೆಯನ್ನು ಒಬಿಸಿ ಮಸೂದೆಯೆಂದೇ ಹೇಳಲಾಗುತ್ತದೆ. ಆಗಸ್ಟ್ 11ರಂದು ಸಂಸತ್ತಿನ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾಗಿತ್ತು.
ರಾಜ್ಯಗಳು ತಾವೇ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರ ಪಟ್ಟಿಯನ್ನು ಮಾಡಬಹುದಾದ ಮಸೂದೆ ಇದಾಗಿದೆ. ಕಾನೂನು ಮತ್ತು ನ್ಯಾಯ ಸಚಿವಾಲಯ ಪ್ರಕಟಿಸುವ ರಾಜ್ಯಪತ್ರದ ಪ್ರಕಾರ ಈ ಕಾಯ್ದೆ ಸಂವಿಧಾನದ ಉಪವಾಕ್ಯದ ಅಡಿಯಲ್ಲಿನ ಆರ್ಟಿಕಲ್ 338 ಬಿಯನ್ನು ತಿದ್ದುಪಡಿ ಮಾಡಲಿದೆ ಎಂದು ಹೇಳಿತ್ತು.
ತಿದ್ದುಪಡಿಯ ಮೂಲಕ ಆಯಾ ರಾಜ್ಯ ಹಾಗೂ ಕೇಂದ್ರಾಡಳಿತಗಳು ಕಾನೂನು ಸಮ್ಮತವಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದ ವರ್ಗಗಳನ್ನು ಗುರುತಿಸಿ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರ ಹೊಂದಲಿದೆ. ಕೇಂದ್ರದ ಪಟ್ಟಿಗಿಂತಲೂ ಭಿನ್ನವಾದ ಪಟ್ಟಿಯನ್ನು ಸಿದ್ಧಪಡಿಸಬಹುದಾಗಿದೆ.
ಸಂಸತ್ತಿನ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಒಬಿಸಿ ತಿದ್ದುಪಡಿ ಮಸೂದೆ ಅಂಗೀಕಾರಗೊಂಡ ಬಗ್ಗೆ ಪ್ರಧಾನಿ ನರೇಂದ್ರಮೋದಿ ಶ್ಲಾಘಿಸಿದ್ದರು.
ರಾಜ್ಯಗಳೇ ಒಬಿಸಿ ಪಟ್ಟಿಗಳನ್ನು ರಚಿಸುವ ಅಧಿಕಾರವನ್ನು ಮರುಸ್ಥಾಪಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಸಂಸತ್ತಿನ ಅಧಿವೇಶನದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸಹ ಬೆಂಬಲ ಸೂಚಿಸಿದ್ದವು. ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರಗಳಿಂದ ಕಸಿದುಕೊಂಡಿದ್ದ ಸಾಂವಿಧಾನಿಕ ಹಕ್ಕೊಂದನ್ನು ಕೇಂದ್ರವು ಮರಳಿ ರಾಜ್ಯಗಳಿಗೆ ಹಸ್ತಾಂತರಿಸಿದೆ.
ಮಸೂದೆಗೆ ತಿದ್ದುಪಡಿ ಹಿಂದಿನ ಆಲೋಚನೆ ಮಹಾರಾಷ್ಟ್ರದ ಪ್ರಕರಣದಿಂದ ಪ್ರಾರಂಭವಾಗಿತ್ತು. ಮಹಾರಾಷ್ಟ್ರದಲ್ಲಿ ಮರಾಠರಿಗೆ ಮೀಸಲಾತಿ ನೀಡುವ ಪ್ರಕರಣದಲ್ಲಿ ತೀರ್ಪು ನೀಡುವ ಸಂವಿಧಾನದ 342ಎ ವಿಧಿಯನ್ನು ವ್ಯಾಖ್ಯಾನಿಸಿದ್ದ ಸುಪ್ರೀಂ ಕೋರ್ಟ್, ಒಬಿಸಿ ಪಟ್ಟಿ ಸಿದ್ಧಪಡಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಮಾತ್ರ ಇದೆ. ರಾಜ್ಯಗಳಿಗೆ ಈ ಅಧಿಕಾರ ಇಲ್ಲ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ನೀಡಿದ್ದ ಮೀಸಲು ರದ್ದುಪಡಿಸಬೇಕು ಎಂದು ಆದೇಶ ನೀಡಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯ ರಾಜ್ಯಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಮತ್ತು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನರಿಗೆ ಪ್ರವೇಶ ನೀಡಲು ಯಾವುದೇ ಹಕ್ಕಿಲ್ಲ ಎಂದು ಹೇಳಿತ್ತು. ಇದಕ್ಕಾಗಿ ನ್ಯಾಯಾಧೀಶರು ಸಂವಿಧಾನದ 102ನೇ ತಿದ್ದುಪಡಿಯನ್ನು ಉಲ್ಲೇಖಿಸಿದ್ದರು.