ಆಡಳಿತ ವ್ಯವಸ್ಥೆಯ ನರನಾಡಿಗಳಲ್ಲೂ ಹರಿಯುತ್ತಿರುವ ಭ್ರಷ್ಟತೆಗೆ ಜನರ ನಿಷ್ಕ್ರಿಯತೆಯೇ ಕಾರಣ
ನಾ ದಿವಾಕರ
ಸ್ವತಂತ್ರ ಭಾರತ 75 ವರ್ಷಗಳನ್ನು ಪೂರೈಸಲು ಇನ್ನು 40 ದಿನಗಳು ಬಾಕಿ ಇವೆ. ಅರ್ಧರಾತ್ರಿಯಲ್ಲಿ ವಿಧಿಯೊಡನೆ ಸಂಧಾನ ನಡೆಸಿದ ಸಾರ್ವಭೌಮ ಭಾರತ ಈ 75 ವರ್ಷಗಳಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದರೂ ಇಂದು ವಿಶ್ವ ಭೂಪಟದಲ್ಲಿ ಸಾಂಸ್ಕೃತಿಕವಾಗಿ, ಸಾಮಾಜಿಕ ನೆಲೆಯಲ್ಲಿ, ರಾಜಕೀಯ ನೆಲೆಯಲ್ಲಿ, ಆರ್ಥಿಕತೆಯ ನೆಲೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಇದಕ್ಕೆ ಕಾರಣ ಈ ದೇಶದ ರಥಚಕ್ರಗಳನ್ನು ನಿರಂತರವಾದ ಚಲನಶೀಲತೆಯೊಂದಿಗೆ ಮುನ್ನಡೆಸುತ್ತಿರುವ ಭಾರತದ ಸಾರ್ವಭೌಮ ಪ್ರಜೆಗಳು, ದುಡಿಯುವ ವರ್ಗಗಳು ಮತ್ತು ಕೋಟ್ಯಾನುಕೋಟಿ ಜೀವಗಳು. ಈ 75 ವರ್ಷಗಳಲ್ಲಿ ಭಾರತ ಬದಲಾಗಿದೆ. ಹಲವಾರು ತಾತ್ವಿಕ ಪಲ್ಲಟಗಳು ಸಂಭವಿಸಿವೆ, ಸೈದ್ಧಾಂತಿಕ ಸಂಘರ್ಷಗಳು ನಡೆದಿವೆ. ರಾಜಕೀಯ ವಲಯದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿದ್ದ ಆಶಯಗಳನ್ನು ಬದಿಗೊತ್ತಿ ಹೊಸ ಭಾರತವನ್ನು ಸೃಷ್ಟಿಸುವ ವಿದ್ಯಮಾನಕ್ಕೂ ನಾವು ಸಾಕ್ಷಿಯಾಗಿದ್ದೇವೆ.
ಈ ನಡುವೆಯೇ 75 ವರ್ಷಗಳ ಕಾಲವೂ, ಸ್ವತಂತ್ರ ಭಾರತದಲ್ಲಿ ಪಲ್ಲಟಗೊಳ್ಳದೆ ಉಳಿದುಕೊಂಡು ಬಂದಿರುವ ಒಂದು ವಿದ್ಯಮಾನ ಎಂದರೆ ಹಣಕಾಸು-ರಾಜಕೀಯ ಭ್ರಷ್ಟಾಚಾರ. ಹಣದುಬ್ಬರ ಮತ್ತು ಜಿಡಿಪಿಗಳ ಏರಿಳಿತಗಳಿಗೆ ಪೂರಕವಾಗಿ ಭ್ರಷ್ಟಾಚಾರದ ಕಣಜಗಳು ಪರಿಮಾಣಾತ್ಮಕವಾಗಿ ಬದಲಾಗುತ್ತಿವೆಯೇ ಹೊರತು, ಗುಣಾತ್ಮಕವಾಗಿ ಭ್ರಷ್ಟಾಚಾರದ ಕೂಪಗಳು ತಮ್ಮ ಮೂಲ ನೆಲೆಯನ್ನು ಕಾಪಾಡಿಕೊಂಡೇ ಬಂದಿವೆ. ಹಣಕಾಸು ಭ್ರಷ್ಟಾಚಾರದ ಬಾಹುಗಳು ತಳಮಟ್ಟದ ಮಂಡಲ ಪಂಚಾಯತಿ ಕಾರ್ಯಾಲಯದಿಂದ ಅತ್ಯುನ್ನತ ಹಂತದ ಪೊಲೀಸ್, ಕಾನೂನು, ನ್ಯಾಯ ವ್ಯವಸ್ಥೆಯ ಅಂಗಳವನ್ನೂ ತಲುಪಿದೆ. ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ರಾಜಕಾರಣದೊಂದಿಗೇ ಹರಿದುಬಂದಿರುವ ಭ್ರಷ್ಟಾಚಾರದ ನಾಡಿಗಳು ಮಂಡಲ ಪಂಚಾಯತ್ ಸದಸ್ಯರಿಂದ ಸಂಸದರವರೆಗೂ ವ್ಯಾಪಿಸಿದ್ದು, ಇಂದು ಭ್ರಷ್ಟ ಪರಂಪರೆಯ ವಿದ್ಯುತ್ ತಂತುಗಳು ಇಡೀ ಆಡಳಿತ ವ್ಯವಸ್ಥೆಯ ಪರಿಚಾರಕರಲ್ಲಿ ಪ್ರವಹಿಸುತ್ತಿವೆ. ಯಾರನ್ನು ಮುಟ್ಟಿದರೆ ಷಾಕ್ ಹೊಡೆಯುತ್ತದೆ ಎಂದು ಹೇಳಲಾಗದ ಸ್ಥಿತಿಯಲ್ಲಿ ನಾವಿದ್ದೇವೆ..
ಈ ನಡುವೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಕೂಡಲೇ ಭಾರತದ ಸಮಸ್ತ ಜನತೆ ನಿಟ್ಟುಸಿರು ಬಿಡುವಂತಹ ಒಂದು ಮಹತ್ವಾಕಾಂಕ್ಷೆಯ ಘೋಷಣೆಯನ್ನು ದೇಶಕ್ಕೆ ಸಮರ್ಪಿಸಿದ್ದರು. ” ನಾ ಖಾವೂಂಗಾ ನಾ ಖಾನೇದೂಂಗಾ” ಅಂದರೆ ನಾವು ತಿನ್ನುವುದಿಲ್ಲ ತಿನ್ನಲು ಬಿಡುವುದೂ ಇಲ್ಲ ಎಂಬ ಈ ಘೋಷಣೆ ದೇಶದ ನಾಗರಿಕರಲ್ಲಿ ಕೊಂಚ ಭರವಸೆ ಮೂಡಿಸಿದ್ದು ಸತ್ಯ. ಭ್ರಷ್ಟಾಚಾರವನ್ನು ಅಂತ್ಯಗೊಳಿಸಲು ಕೈಗೊಳ್ಳಲಾದ ನೋಟು ಅಮಾನ್ಯೀಕರಣದಂತಹ ಕ್ರಮಗಳು, ಭೂಗತವಾಗಿರುವ ಸಮಸ್ತ ಅಕ್ರಮ ಸಂಪತ್ತನ್ನೂ ಹೊರೆಗೆಳೆದುಬಿಡುತ್ತದೆ, ವಿದೇಶಗಳಲ್ಲಿ ಹೂಡಲಾಗಿರುವ ಅಕ್ರಮ ಸಂಪತ್ತಿನ ಕಪ್ಪುಹಣ ನಮ್ಮೆಡೆಗೆ ಹರಿದುಬರುತ್ತದೆ ಎಂಬ ಜನಸಾಮಾನ್ಯರ ಭ್ರಮೆ ಬಹುಶಃ ಈಗ ಉಳಿದಿರಲಿಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿ ವ್ಯಕ್ತಿಗತವಾಗಿ ತಮ್ಮ ಪ್ರಾಮಾಣಿಕತೆಯನ್ನು ಕಾಪಾಡಿಕೊಂಡೇ ಬಂದಿದ್ದಾರೆ. ಹಾಗೆ ನೋಡಿದರೆ ಮನಮೋಹನ್ ಸಿಂಗ್ ಸಹ ಸ್ವತಃ ಪ್ರಾಮಾಣಿಕರೇ ಆಗಿದ್ದರು. ಭಾರತದ ಯಾವ ಪ್ರಧಾನಮಂತ್ರಿಯೂ ಭ್ರಷ್ಟಾಚಾರದ ಹಗರಣದಲ್ಲಿ ತಪ್ಪಿತಸ್ಥರಾಗಿಲ್ಲ. ರಾಜೀವ್ ಗಾಂಧಿ ಅವರ ಮೇಲಿದ್ದ ಬೋಫೋರ್ಸ್ ಆರೋಪಗಳೂ ನಿರಾಧಾರವೆಂದು ನಿರೂಪಿತವಾದವು. ಹಾಗಾಗಿ ಪ್ರಧಾನಿ ಮೋದಿಯವರ ಘೋಷಣೆ ಈ ವ್ಯಕ್ತಿಗತ ನೆಲೆಯಿಂದಾಚೆಗೆ ಅಪ್ತಸ್ತುತ ಎನ್ನುವುದನ್ನು ನಮ್ಮ ದೇಶದ ಆಡಳಿತ ವ್ಯವಸ್ಥೆ ನಿರೂಪಿಸುತ್ತಲೇ ಬಂದಿದೆ.
ಭ್ರಷ್ಟಾಚಾರ ರೂಪಾಂತರ ಹೊಂದಿದೆ. ಅರ್ಥವ್ಯವಸ್ಥೆಯು ಡಿಜಿಟಲೀಕರಣಗೊಂಡಂತೆಯೇ ಅಕ್ರಮ ಹಣಗಳಿಕೆಯ ಮಾರ್ಗಗಳೂ ರೂಪಾಂತರಗೊಂಡಿವೆ. ಕ್ರಿಪ್ಟೋ ಕರೆನ್ಸಿ, ಬಿಟ್ ಕಾಯಿನ್ಸ್ ಯುಗದಲ್ಲಿ ಮೇಜಿನ ಕೆಳಗೆ ಎರಡು ನೋಟುಗಳನ್ನು ಕೊಡುವ ಗತಕಾಲದ ಪರಂಪರೆ ಉಳಿದಿರಲಿಕ್ಕೆ ಸಾಧ್ಯವಿಲ್ಲ. ಸಂಗ್ರಹಿಸಿದ ಅಕ್ರಮ ಹಣವನ್ನು ಶೇಖರಿಸಿಡಲು ಕೇವಲ ಸ್ವಿಸ್ ಬ್ಯಾಂಕ್ ಇರಬೇಕೆಂದಿಲ್ಲ. ನಮ್ಮಲ್ಲೇ ದೇವಾಲಯ, ಮಸೀದಿ, ಚರ್ಚು, ಆಧ್ಯಾತ್ಮಿಕ ಮಠಗಳು ಹೇರಳವಾಗಿವೆ. ಬ್ಯಾಂಕುಗಳಲ್ಲಿ ಲಾಕರುಗಳಿವೆ. ರಿಯಲ್ ಎಸ್ಟೇಟ್ ಉದ್ಯಮ ಇದೆ. ಹಾಗೆಯೇ ಹಣಕಾಸು ಭ್ರಷ್ಟಾಚಾರದ ವಾಹಿನಿಗಳೂ ಬದಲಾಗುತ್ತಲೇ ಇವೆ. ನೇರವಾಗಿ ರಾಜಕೀಯ ಪಕ್ಷಗಳಿಗೆ ನಿಧಿ ಪೂರೈಸುತ್ತಿದ್ದ ಉದ್ಯಮಿಗಳು ಈಗ ಚುನಾವಣಾ ಬಾಂಡ್‌ಗಳ ಮೂಲಕ ಪೂರೈಸುತ್ತಾರೆ. ಅದು ಸಾರ್ವಜನಿಕರ ಗಮನಕ್ಕೆ ಸುಲಭವಾಗಿ ಎಟುಕುವುದಿಲ್ಲ. ಇಂದು ಭಾರತದ ಆರ್ಥಿಕತೆಯನ್ನು ಮತ್ತು ರಾಜಕೀಯವನ್ನೂ ನಿಯಂತ್ರಿಸುತ್ತಿರುವ ಕಾರ್ಪೋರೇಟ್ ಮಾರುಕಟ್ಟೆ ಶಕ್ತಿಗಳು ಯಾವ ರೂಪದಲ್ಲಿ ತಮ್ಮ ಬಂಡವಾಳ ಹೂಡಿಕೆ ಮಾಡುತ್ತಿವೆ ಎಂದು ತಿಳಿಯಲು ಆಳವಾದ ಸಂಶೋಧನೆಯ ಅಗತ್ಯವಿದೆ.
ಈ ನಡುವೆಯೇ ನಾವು ಕರ್ನಾಟಕದಲ್ಲಿ ಭ್ರಷ್ಟಾಚಾರದ ರುದ್ರತಾಂಡವವನ್ನು ಕಾಣುತ್ತಿದ್ದೇವೆ. ಸಮಾಜದಲ್ಲಿ ಶಿಸ್ತು ಸಂಯಮ ಕಾಪಾಡಬೇಕಾದ ಪೊಲೀಸ್ ವ್ಯವಸ್ಥೆಯನ್ನು ಪ್ರವೇಶಿಸುವ ಮುನ್ನವೇ ಆಕಾಂಕ್ಷಿಗಳು ಲಕ್ಷಗಟ್ಟಲೆ ಲಂಚ ಪಾವತಿಸುವ ಒಂದು ವಿಶಾಲ ಭ್ರಷ್ಟ ಜಾಲವನ್ನು ಪಿಎಸ್‌ಐ ಹಗರಣ ತೆರೆದಿಟ್ಟಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಒಎಂಆರ್ ಪ್ರತಿಗಳನ್ನು ಇರಿಸಿದ್ದ ಭದ್ರತಾ ಕೊಠಡಿಯ ಕೀಲಿಯನ್ನು ತಮ್ಮ ಕೈಕೆಳಗಿನ ಅಧಿಕಾರಿಗಳ ಕೈಗೆ ನೀಡಿ, ಉತ್ತರಪತ್ರಿಕೆಗಳನ್ನು ತಿದ್ದಿಸಿರುವ ಆರೋಪದ ಮೇಲೆ ರಾಜ್ಯದ ಎಡಿಜಿಪಿ ಈಗ ಭ್ರಷ್ಟಾಚಾರ ನಿಗ್ರಹ ದಳದ ಅತಿಥಿಯಾಗಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅತ್ಯುನ್ನತ ದರ್ಜೆಯ ಪೊಲೀಸ್ ವರಿಷ್ಠರೊಬ್ಬರು ಭ್ರಷ್ಟಾಚಾರದ ಆರೋಪ ಎದುರಿಸಿ ಬಂಧನಕ್ಕೊಳಗಾಗುವ ಮೂಲಕ ಭ್ರಷ್ಟ ಭಾರತದಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದಿದ್ದಾರೆ. ಸಿಐಡಿ ಇಲಾಖೆ ನಡೆಸುತ್ತಿರುವ ಪಿಎಸ್‌ಐ ಹಗರಣದಲ್ಲಿ ಈವರೆಗೆ 65 ಆರೋಪಿಗಳನ್ನು ಬಂಧಿಸಲಾಗಿದ್ದು, ಎಂಟು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ನಾಲ್ವರು ಡಿವೈಎಸ್‌ಪಿಗಳು, 18 ಅಧಿಕಾರಿಗಳು, 47 ಮಧ್ಯವರ್ತಿಗಳು ಬಂಧನಕ್ಕೊಳಗಾಗಿದ್ದಾರೆ.
ಈ ನಡುವೆಯೇ ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಅವರ ಒಂದು ಸಂದೇಶ ಇಡೀ ನಾಡಿನ ಪ್ರಜ್ಞಾವಂತರನ್ನು ಬಲವಾಗಿ ಕಾಡಿದೆ. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕಚೇರಿಗಳೇ ಭ್ರಷ್ಟಾಚಾರದ ಕೂಪಗಳಾಗಿವೆ ಎಂದು ಪ್ರಕರಣದ ವಿಚಾರಣೆಯೊಂದರ ಸಂದರ್ಭದಲ್ಲಿ ಹೇಳಿದ್ದ ನ್ಯಾ ಸಂದೇಶ್, ತಮಗೆ ಮತ್ತೊಬ್ಬ ನ್ಯಾಯಾಧೀಶರಿಂದ ವರ್ಗಾವಣೆಯ ಬೆದರಿಕೆ ಎದುರಾಗಿರುವುದರ ಬಗ್ಗೆ ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ. ಸಂದೇಶ್ ಅವರ ಆರೋಪಗಳನ್ನು ರಾಜಕೀಯ ಪ್ರೇರಿತವೆಂದಾಗಲೀ ಅಥವಾ ಸ್ವಹಿತಾಸಕ್ತಿಯ ಹೇಳಿಕೆಗಳೆಂದಾಗಲೀ ತಳ್ಳಿಹಾಕಲಾಗುವುದಿಲ್ಲ. ಬಹುಶಃ ಇತ್ತೀಚಿನ ದಿನಗಳಲ್ಲಿ ಒಬ್ಬ ಸೇವೆಯಲ್ಲಿರುವ ನ್ಯಾಯಾಧೀಶರು ಇಟ್ಟು ದಿಟ್ಟತನದಿಂದ ಮಾತನಾಡಿಲ್ಲ ಎನ್ನಬಹುದು. ಐಪಿಎಸ್ ಅಧಿಕಾರಿಯೊಬ್ಬರ ಮನೆಯ ಮೇಲೆ ದಾಳಿ ನಡೆಸಿದಾಗ ನಾಲ್ಕೂವರೆ ಕೋಟಿ ನಗದು 5 ಕಿಲೋ ಚಿನ್ನ ಸಿಕ್ಕಿದ್ದರೂ ಅವರ ಪ್ರಕರಣದಲ್ಲಿ ಬಿ ರಿಪೋರ್ಟ್ (ಅಂದರೆ ಬಹುಪಾಲು ಆರೋಪ ಮುಕ್ತರಾಗುವುದು ಎಂದೇ ಅರ್ಥ) ದಾಖಲಿಸುವುದರ ಬಗ್ಗೆ ನ್ಯಾ ಸಂದೇಶ್ ತಮ್ಮ ವಿಷಾದ ವ್ಯಕ್ತಪಡಿಸಿದ್ದಾರೆ. ಪಿಎಸ್‌ಐ ನೇಮಕಾತಿಯಲ್ಲಿ 545 ಪೋಸ್ಟ್‌ಗಳ ಪೈಕಿ 400ಕ್ಕೂ ಹೆಚ್ಚು ಪೋಸ್ಟ್‌ಗಳು ಮಾರಾಟವಾಗಿವೆ ಎಂಬ ಆರೋಪದ ಬಗ್ಗೆಯೂ ನ್ಯಾ ಸಂದೇಶ್ ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ. ಅಡ್ವೋಕೇಟ್ ಜನರಲ್ ಕಚೇರಿಯಲ್ಲೇ ಲಂಚ ಪಡೆಯಲು ಏಜೆಂಟರನ್ನು ನೇಮಿಸಲಾಗಿದೆ ಎಂಬ ಅವರ ಆರೋಪವನ್ನು ಸರ್ಕಾರ ತಳ್ಳಿಹಾಕಬಹುದು ಆದರೆ ಸಾರ್ವಜನಿಕರು ನಿರ್ಲಕ್ಷಿಸುವಂತಿಲ್ಲ.
ಈ ಇಡೀ ಪ್ರಸಂಗದಲ್ಲಿ ಗಮನಿಸಬಹುದಾದ ಸೂಕ್ಷ್ಮ ಸಂಗತಿ ಎಂದರೆ, ಈ ಬ್ರಹ್ಮಾಂಡ ಭ್ರಷ್ಟಾಚಾರವೂ ಸರ್ಕಾರಕ್ಕೆ ಯಾವುದೇ ರೀತಿಯ ಮುಜುಗರ ಉಂಟುಮಾಡಿಲ್ಲ ಎನ್ನುವುದು. ತಳಮಟ್ಟದಿಂದ ಅತ್ಯುನ್ನತ ಹಂತದವರೆಗೂ ವ್ಯಾಪಿಸಿರುವ ಭ್ರಷ್ಟಾಚಾರದ ನಾಡಿಗಳು ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟುಮಾಡುವುದಿಲ್ಲ ಎಂದರೆ ಆಡಳಿತಾರೂಢ ಸರ್ಕಾರಗಳಿಗೆ ಈ ಹಗರಣಗಳು ಆಡಳಿತ ನಿರ್ವಹಣೆಯಲ್ಲಿ ಎದುರಾಗುವ ದೈನಂದಿನ ಸಮಸ್ಯೆಗಳಂತೆ ಮಾತ್ರವೇ ಕಾಣುತ್ತಿದೆ ಎಂದರ್ಥ. ಸರ್ಕಾರಿ ಕಾಮಗಾರಿಗಳಲ್ಲಿ ಟೆಂಡರ್ ಹಾಕುವಂತೆಯೇ ಕಾನೂನು ರಕ್ಷಕ ಪಿಎಸ್‌ಐ ಹುದ್ದೆಗಳನ್ನೂ ಟೆಂಡರ್ ಹಾಕಿರುವುದು ಈ ಹಗರಣದಲ್ಲಿ ಸ್ಪಷ್ಟವಾಗುತ್ತಿದೆ. ಸಂಗ್ರಹವಾದ ಲಂಚದ ಮೊತ್ತದಲ್ಲಿ ಅಧಿಕಾರಿಗಳಿಗೆಷ್ಟು, ರಾಜಕಾರಣಿಗಳಿಗೆಷ್ಟು ಮತ್ತು ಮಧ್ಯವರ್ತಿಗಳಿಗೆಷ್ಟು ಎಂಬ ಸತ್ಯ ಬಹುಶಃ ಅಂತಿಮ ವರದಿ ಸಲ್ಲಿಕೆಯಾಗುವ ವೇಳೆಗೆ ವಿಸ್ಮೃತಿಗೆ ಜಾರಿಬಿಟ್ಟಿರುತ್ತದೆ. ಏಕೆಂದರೆ ಇಂದು ಭ್ರಷ್ಟಾಚಾರದ ಆರೋಪ ಎದುರಿಸಿ ಬಂಧನಕ್ಕೊಳಗಾಗಿರುವ ಮತ್ತು ಬಂಧನದ ಭೀತಿ ಎದುರಿಸುತ್ತಿರುವ ಪೊಲೀಸ್ ಮತ್ತು ನಾಗರಿಕ ಅಧಿಕಾರಿಗಳು ಅಂತಿಮವಾಗಿ ಶಿಕ್ಷೆಗೊಳಗಾಗುತ್ತಾರೆ ಎಂದು ನಿಶ್ಚಿತವಾಗಿ ಹೇಳಲಾಗುವುದಿಲ್ಲ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂತಹ ಪ್ರಸಂಗಗಳು ಕಡತಗಳಲ್ಲೇ ಭೂಗತವಾಗಿರುವುದನ್ನು ಕಂಡಿದ್ದೇವೆ. ಮಧ್ಯಪ್ರದೇಶದಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದ ವ್ಯಾಪಂ ಹಗರಣ ಇತ್ತೀಚಿನ ಉದಾಹರಣೆ.
ಇಲ್ಲಿ ಪ್ರಶ್ನೆ ಇರುವುದು ತಿನ್ನುವವರು, ತಿನ್ನಿಸುವವರು ಯಾರು ಎನ್ನುವುದಲ್ಲ. ಅಥವಾ ಹೇಗೆ ತಿನ್ನುತ್ತಾರೆ, ಯಾವ ಮಾರ್ಗದಲ್ಲಿ ತಿನ್ನಿಸುತ್ತಾರೆ ಎನ್ನುವುದೂ ಅಲ್ಲ. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಆಡಳಿತ ವ್ಯವಸ್ಥೆಯ ಅತ್ಯುನ್ನತ ಹಂತದವರೆಗೆ ಬಂಡವಾಳದ ತಂತುಗಳು ಆಡಳಿತ ಯಂತ್ರದ ನಾಡಿಗಳೊಡನೆ ಒಂದಾಗಿಯೇ ಹರಿಯುತ್ತವೆ. ಇಂದು ರಾಜ್ಯ ಬಿಜೆಪಿ ಸರ್ಕಾರವನ್ನು ದೂಷಿಸುತ್ತಾ, ಗೃಹ ಸಚಿವರ ರಾಜೀನಾಮೆಗಾಗಿ ಆಗ್ರಹಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದಧರಾಮಯ್ಯನವರು ತಮ್ಮ ಆಡಳಿತಾವಧಿಯಲ್ಲಿ ಲೋಕಾಯುಕ್ತವನ್ನು ಏಕೆ ಬಲಪಡಿಸಲಿಲ್ಲ ಎನ್ನುವುದಕ್ಕೂ ಉತ್ತರಿಸಬೇಕಲ್ಲವೇ ? ಹಲ್ಲಿಲ್ಲದ ಹಾವಿನಂತೆ ಲೋಕಾಯುಕ್ತವನ್ನು ಕೇವಲ ಒಂದು ಗುಮಾಸ್ತ ಕಚೇರಿಯನ್ನಾಗಿ ಮಾಡಿ, ಸರ್ಕಾರದ ಸಂಪೂರ್ಣ ಹಿಡಿತದಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ರಚಿಸಿದ ಔಚಿತ್ಯವಾದರೂ ಏನು ? ಪೊಲೀಸ್ ಇಲಾಖೆಯಂತೆಯೇ ಕಾರ್ಯನಿರ್ವಹಿಸುವ ಎಸಿಬಿ ಮತ್ತು ಅದನ್ನು ನಿರ್ವಹಿಸುವ ಉನ್ನತ ಅಧಿಕಾರಿಗಳು ಆಡಳಿತಾರೂಢ ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ ಎಂದು ನಿರೀಕ್ಷಿಸಲೂ ಸಾಧ್ಯವಿಲ್ಲ. ಏಕೆಂದರೆ ನಮ್ಮ ರಾಜಕೀಯ ವ್ಯವಸ್ಥೆ ಅಂತಹ ಒಂದು ವಿಶ್ವಾಸಾರ್ಹ ಪರಂಪರೆಯನ್ನು ಬೆಳೆಸಿಕೊಂಡು ಬಂದಿಲ್ಲ. ಇದಕ್ಕೆ ಯಾವ ಪಕ್ಷವೂ ಹೊರತಾಗಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ.
ಪಿಎಸ್‌ಐ ಹಗರಣವಾಗಲೀ, ಭೂ ಹಗರಣವಾಗಲೀ ಅಥವಾ ಇತರ ಯಾವುದೇ ಇಲಾಖೆಯಲ್ಲಿನ ಭ್ರಷ್ಟ ಕೂಪಗಳಾಗಲೀ, ಇವುಗಳ ಹಿಂದೆ ಒಂದು ರಾಜಕೀಯ ಶಕ್ತಿ ಇರುತ್ತದೆ, ಚುನಾವಣಾ ರಾಜಕಾರಣದ ಭದ್ರ ಕೋಟೆ ಇರುತ್ತದೆ, ತಳಮಟ್ಟದಿಂದಲೂ ರಾಜಕೀಯ ಹಿತಾಸಕ್ತಿಗಳೊಡನೆಯೇ ಮೇಳೈಸಿಕೊಂಡು ಬೆಳೆಯುವ ಗುತ್ತಿಗೆದಾರರು, ರಿಯಲ್ ಎಸ್ಟೇಟ್ ವಾರಸುದಾರರು, ಮಧ್ಯವರ್ತಿಗಳು ಮತ್ತು ಭೂ ಅಕ್ರಮಗಳಲ್ಲಿ ಭಾಗಿಯಾಗುವ ಉದ್ಯಮಿಗಳು ಸಾರ್ವಜನಿಕರ ದೃಷ್ಟಿಯಲ್ಲಿ ಸಹಜವಾಗಿಯೇ ಖಳನಾಯಕರಂತೆ ಕಾಣುತ್ತಾರೆ. ಆದರೆ ಈ ಭ್ರಷ್ಟಾಚಾರದ ಕೂಪಗಳಿಗೆ ರಕ್ಷಣೆ ನೀಡುವ ಒಂದು ಆಡಳಿತ ವ್ಯವಸ್ಥೆ ನಮ್ಮ ನಡುವೆ ಇರುವುದನ್ನು ನಾವು ಗಮನಿಸುವುದಿಲ್ಲ. ಭಾರತದ ಅರ್ಥವ್ಯವಸ್ಥೆಗೆ ಮಾದರಿ ರಾಜ್ಯ ಎಂದೇ ಗುರುತಿಸಲಾಗಿರುವ ಗುಜರಾತ್‌ನಲ್ಲಿ ಇತ್ತೀಚೆಗೆ ಸರ್ಕಾರವೇ ನಡೆಸಿರುವ ಸಮೀಕ್ಷೆಯ ಪ್ರಕಾರ ಸೇ 35ರಷ್ಟು ಕಟ್ಟಡಗಳು ಅಕ್ರಮವಾಗಿ ನಿರ್ಮಾಣವಾಗಿವೆ. ಬಹುಶಃ ಕರ್ನಾಟಕದ ಮಹಾ ನಗರಗಳಲ್ಲಿ ಇಂತಹ ಒಂದು ಸಮೀಕ್ಷೆ ನಡೆಸಿದರೆ ಶೇ 50ಕ್ಕೂ ಹೆಚ್ಚು ಅಕ್ರಮ ಕಟ್ಟಡಗಳು ಕಾಣಬಹುದು.
ಈ ಅಕ್ರಮ ನಡೆಯುವುದೆಲ್ಲಿ? ಕೇವಲ ನಗರಾಭಿವೃದ್ಧಿಯ ಕಚೇರಿಗಳಲ್ಲಿ ಎಂದು ಭಾವಿಸಿದರೆ ಅದು ಅರೆ ತಿಳುವಳಿಕೆಯಾದೀತು. ನಗರಾಭಿವೃದ್ಧಿ ಮತ್ತು ನಗರ ಕಾಮಗಾರಿ ಎನ್ನುವುದೇ ಉನ್ನತ ಮಟ್ಟದ ಭ್ರಷ್ಟಾಚಾರದ ಬೀಜಗಳನ್ನು ಬಿತ್ತನೆ ಮಾಡುವ ಫಲವತ್ತಾದ ಭೂಮಿ ಎನ್ನುವುದು ಸಾರ್ವತ್ರಿಕ ಸತ್ಯ. ಕುಸಿಯುವ ಸೇತುವೆಗಳು, ಬಿರುಕು ಬಿಡುವ ರಸ್ತೆಗಳು, ಕೊಚ್ಚಿಹೋಗುವ ಕಾಲುವೆಗಳು ಇವೆಲ್ಲವೂ ಲೋಕೋಪಯೋಗಿ ಇಲಾಖೆಯ ಕಣ್ಗಾವಲಿನಲ್ಲೇ ನಡೆಯುವ ಲೋಕ-ದುರುಪಯೋಗಿ ಕಾಮಗಾರಿಗಳಲ್ಲವೇ? ಈ ಭ್ರಷ್ಟಾಚಾರದ ಬಳ್ಳಿ ಒಮ್ಮೆಲೆ ಯಾವುದೋ ಒಂದು ಇಲಾಖೆಯ ಕಾಂಪೌಂಡಿನಲ್ಲಿ ಬಂದು ನೆಲೆಸುವುದಿಲ್ಲ. ಇದು ಪೋಷಿಸಿ, ನೀರೆರೆದು, ಬೆಳೆಸಲಾದ ವೃಕ್ಷಗಳು. ಕೆಪಿಎಸ್‌ಸಿ ಪರೀಕ್ಷೆ, ವಿವಿಧ ಇಲಾಖೆಗಳ ಪ್ರವೇಶ ಪರೀಕ್ಷೆ, ಐಎಎಸ್-ಐಪಿಎಸ್ ಪರೀಕ್ಷೆ, ಯುಪಿಎಸ್‌ಸಿ ಪರೀಕ್ಷೆ ಹೀಗೆ ಪರೀಕ್ಷಾರ್ಥಿಗಳೇ ಭವಿಷ್ಯದ ಅಧಿಕಾರ ಕೇಂದ್ರಗಳಲ್ಲಿ ತಮ್ಮ ಸ್ಥಾನ ಪಡೆಯಲು ಹಣದ ಥೈಲಿಗಳನ್ನು ಸಿದ್ಧಪಡಿಸಿಕೊಳ್ಳಬೇಕಾದ ವಾಸ್ತವ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ಹಲವಾರು ಹಗರಣಗಳಲ್ಲಿ ನಾವು ಕಾಣುತ್ತಿರುವುದೂ ಇದನ್ನೇ ಅಲ್ಲವೇ ?
ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್‌ಡಿ ಪಡೆಯಲು ಸಾವಿರಾರು ಅರ್ಹ ವಿದ್ಯಾರ್ಥಿಗಳು ಲಂಚ ನೀಡಬೇಕಾಗುತ್ತದೆ. ಅತಿಥಿ ಶಿಕ್ಷಕ/ಉಪನ್ಯಾಸಕ ಹುದ್ದೆಗಳಿಗಾಗಿ ಒಂದು ಮಾರುಕಟ್ಟೆಯೇ ಸೃಷ್ಟಿಯಾಗಿದೆ. ಅಷ್ಟೇಕೆ ಸಮರ್ಪಕ ಬಂಡವಾಳ ಹೂಡದಿದ್ದರೆ ಪೋಷಕರಿಗೆ ತಮ್ಮ ಮಕ್ಕಳನ್ನು ಇಂಜಿನಿಯರುಗಳಾಗಿ, ವೈದ್ಯರುಗಳಾಗಿ ನೋಡುವ ಭಾಗ್ಯವೇ ಲಭಿಸುವುದಿಲ್ಲ. ಸಮಾಜದ ಬೌದ್ಧಿಕ ತಳಹದಿಯನ್ನು ನಿರ್ಮಿಸಬೇಕಾದ ವಿಶ್ವವಿದ್ಯಾಲಯಗಳೇ ಭ್ರಷ್ಟಾಚಾರದ ಬ್ರಹ್ಮಾಂಡ ಕೂಪಗಳಾಗಿರುವುದು ನಮ್ಮ ಕಣ್ಣಮುಂದಿದೆ. ಭವಿಷ್ಯದ ಪೀಳಿಗೆಗೆ ದಾರಿದೀಪವಾಗಬೇಕಾದ ಬೋಧಕರನ್ನು ಉತ್ಪಾದಿಸುವ ಶೈಕ್ಷಣಿಕ ವಲಯ ಇಂದು ಹಲವು ರೀತಿಯ ಅಕ್ರಮ ಮತ್ತು ಭ್ರಷ್ಟಾಚಾರಗಳ ಕೂಪಗಳಾಗಿರುವುದು ಗುಟ್ಟಿನ ಮಾತೇನಲ್ಲ. ಈ ಎಲ್ಲ ಅವಿತ ಸತ್ಯಗಳು ರಾಜಕೀಯ ಪಕ್ಷಗಳಿಗೆ ಅರಿವಿಲ್ಲವೇ ? ತಮ್ಮ ಹಿತಾಸಕ್ತಿಗಳಿಗನುಗುಣವಾಗಿ ಭ್ರಷ್ಟಾಚಾರದ ಆರೋಪ ಮಾಡುವ ರಾಜಕೀಯ ನಾಯಕರು ಮತ್ತು ಪಕ್ಷಗಳು, ಸಾರ್ವಜನಿಕ ಪ್ರಾಮಾಣಿಕತೆ ಮತ್ತು ಸಾಮಾಜಿಕ ನೈತಿಕತೆಯನ್ನು ವಸ್ತುನಿಷ್ಠವಾಗಿ ಪ್ರತಿಪಾದಿಸಿದರೆ ಬಹುಶಃ ಶೇ 80ಕ್ಕೂ ಹೆಚ್ಚು ಜನಪ್ರತಿನಿಧಿಗಳು ಅನರ್ಹರಾಗಿಬಿಡುತ್ತಾರೆ. ಅಪರಾಧ ಮುಕ್ತ ರಾಜಕಾರಣ ಒಂದು ಪ್ರಬಲ ಘೋಷಣೆಯಾಗಿ ಕೇಳಿಬರುತ್ತಿದ್ದರೂ, ಪ್ರಸಕ್ತ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಕ್ರಮವಾಗಿ 67 ಸಂಸದರು, 296 ಶಾಸಕರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ.
ಅಪರಾಧಗಳು ಪೊಲೀಸ್ ಕಡತಗಳಲ್ಲಿ ದಾಖಲಾಗುತ್ತವೆ ಆದರೆ ಹಣಕಾಸು ಭ್ರಷ್ಟಾಚಾರ ಎಲ್ಲಿಯೂ ದಾಖಲಾಗುವುದಿಲ್ಲ. ನಾವು ತಿನ್ನುವುದೂ ಇಲ್ಲ ತಿನ್ನಿಸುವುದೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರೂ, ಅದು ಅವರ ವ್ಯಕ್ತಿಗತ ನೆಲೆಯಲ್ಲಿ ಮಾತ್ರವೇ ಕಾಣುತ್ತಿದೆ. ಮನಮೋಹನ್‌ಸಿಂಗ್ ಅವರಲ್ಲೂ ಇದನ್ನೇ ಕಾಣಬಹುದಿತ್ತು. ಆದರೆ ಆಡಳಿತ ಯಂತ್ರದೊಳಗಿನ ಭ್ರಷ್ಟಾಚಾರ ವ್ಯವಸ್ಥೆಯ ನರನಾಡಿಗಳಲ್ಲೂ ಪ್ರವಹಿಸುತ್ತಿದೆ. ಕರ್ನಾಟಕದ ಪಿಎಸ್‌ಐ ಹಗರಣ ಒಂದು ಹಿಮಗಡ್ಡೆಯ ತುದಿಯಂತೆ. ಲೋಕಪಾಲ್ ನೇಮಿಸುವುದೇ ಅಲ್ಲದೆ ಅದನ್ನು ಮತ್ತಷ್ಟು ಬಲಪಡಿಸುವ ಆಶ್ವಾಸನೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 8 ವರ್ಷಗಳ ನಂತರವೂ ಲೋಕಪಾಲ್ ಸಂಸ್ಥೆಯ ಬಗ್ಗೆ ಆಲೋಚನೆಯನ್ನೂ ಮಾಡದಿರುವುದು, ಪಿಎಂ ಕೇರ್ ಫಂಡ್, ಚುನಾವಣಾ ಬಾಂಡ್ ಯೋಜನೆ ಮುಂತಾದವುಗಳನ್ನು ಆರ್‌ಟಿಐ ವ್ಯಾಪ್ತಿಗೊಳಪಡಿಸದಿರುವುದು, ಆರ್‌ಟಿಐ ಕಾಯ್ದೆಯನ್ನೇ ದುರ್ಬಲಗೊಳಿಸಿರುವುದು, ಇವೆಲ್ಲವೂ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಒಂದು ಭಾಗವಾಗಿಯೇ ಕಾಣುತ್ತದೆ. ಹಾಗಾಗಿಯೇ ಕರ್ನಾಟಕ ಸರ್ಕಾರಕ್ಕೂ ಪಿಎಸ್‌ಐ ಹಗರಣದಿಂದ ಯಾವುದೇ ರೀತಿಯ ಮುಜುಗರವೂ ಆಗುವುದಿಲ್ಲ. ಇದು ಕೇವಲ ಕಾನೂನು ಮತ್ತು ಆಡಳಿತ ಸಮಸ್ಯೆಯಾಗಿ ಮಾತ್ರವೇ ಕಾಣುತ್ತದೆ.
ಆದರೆ ಸಾರ್ವಜನಿಕ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ನಿರೀಕ್ಷಿಸುವ ಜನತೆಯ ಪಾಲಿಗೆ ಈ ಭ್ರಷ್ಟಾಚಾರದ ಕೂಪಗಳು ಬದುಕಿನ ಹೆಜ್ಜೆಯ ತಡೆಗೋಡೆಗಳಾಗಿ ಪರಿಣಮಿಸುತ್ತವೆ. ತಮ್ಮ ಜೀವನ ಮತ್ತು ಜೀವನೋಪಾಯದ ಹಾದಿಯಲ್ಲಿ ಸಾಮಾನ್ಯ ಜನರು ಹೆಜ್ಜೆ ಹೆಜ್ಜೆಗೂ ಎದುರಿಸುವ ಲಂಚಾವತಾರದ ತಡೆಗೋಡೆಗಳು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ. ಅಧಿಕಾರಿಗಳು, ರಾಜಕಾರಣಿಗಳು, ಅಧಿಕಾರವಲಯದ ಸಿಬ್ಬಂದಿಗಳು ಗಳಿಸುವ ಅಕ್ರಮ ಸಂಪತ್ತಿನ ಪ್ರತಿಯೊಂದು ಕಣವೂ, ಇದೇ ದುಡಿಯುವ ಜನಗಳ ಬೆವರಿನಿಂದಲೇ ಕೂಡಿರುತ್ತದೆ. ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದು ಜಿಡಿಪಿ ಸೂಚ್ಯಂಕಗಳನ್ನು ನೋಡುತ್ತಾ ಭ್ರಮಾಧೀನರಾಗುವ ಜನತೆಗೆ ತಮ್ಮ ಕಾಲಬುಡದಲ್ಲೇ ಅಕ್ರಮ ಸಂಪತ್ತಿನ ಬ್ರಹ್ಮಾಂಡ ಕೂಪಗಳು ಸೃಷ್ಟಿಯಾಗುತ್ತಿರುವ ಅರಿವು ಮೂಡಿದರೆ ಬಹುಶಃ ಮುಂದೊಂದು ದಿನ ಗಾಂಧಿ-ಅಂಬೇಡ್ಕರ್ ಕನಸಿನ ಪ್ರಾಮಾಣಿಕ ಭಾರತವನ್ನು ಕಾಣಲು ಸಾಧ್ಯ.