ಡಾ. ಎಸ್.ವೈ. ಗುರುಶಾಂತ್
ವಿದ್ಯಾರ್ಥಿನೀಯರು ಶಿರವಸ್ತ್ರ ಹಿಜಾಬ್‌ನ್ನು ಧರಿಸಿ ತರಗತಿಗೆ ಹಾಜರಾಗುವ ಕುರಿತ ವಿಷಯದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ ಸುತ್ತ ಹಲವಾರು ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮುಸ್ಲಿಂ ಸಮುದಾಯದ ಹಲವರಲ್ಲಿ ತೀವ್ರತರ ಆತಂಕ, ಸರ್ಕಾರದ ನಡೆಗಳ ಬಗ್ಗೆ ಆಕ್ರೋಶವನ್ನು ನಿರ್ಮಿಸಿದೆ. ನ್ಯಾಯಾಲಯದ ತೀರ್ಪನ್ನು ಒಪ್ಪಬೇಕು, ಜಾರಿಗೊಳಿಸಬೇಕು ಎನ್ನುವುದು ನಿಜವಾದರೂ ತೀರ್ಪನ್ನು ಒಂದು ಸಾಂವಿಧಾನಿಕ ಚೌಕಟ್ಟಿನಲ್ಲಿ ವಿಮರ್ಶಿಸುವುದು ಉನ್ನತ ಹಂತದ ನ್ಯಾಯಾಲಯದಲ್ಲಿ ನ್ಯಾಯಕ್ಕೆ ಮೊರೆಹೋಗುವುದು ನಿಷಿದ್ಧವೇನಲ್ಲ. ಅದು ಭಾರತೀಯ ಪ್ರಜೆಗಳಿಗೆ ನಮ್ಮ ಸಂವಿಧಾನ ಕೊಡಮಾಡಿರುವ ಅತ್ಯಂತ ಮಹತ್ವದ ಹಕ್ಕಾಗಿದೆ. ನ್ಯಾಯ ಬಯಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ ಕಾಲೇಜಿನ ವಿದ್ಯಾರ್ಥಿನಿಯರು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಕೆಲವೆಡೆ ಹಿಜಾಬ್ ಧರಿಸಿದ ಮಕ್ಕಳು ತರಗತಿಗಳಿಗೆ ಪರೀಕ್ಷೆಗಳಿಗೆ ಹಾಜರಾಗಲು ಆಡಳಿತ ಮಂಡಳಿಗಳು ಅವಕಾಶ ಕೊಟ್ಟಿಲ್ಲ. ಕೆಲವು ಮುಸ್ಲಿಂ ಸಮುದಾಯದ ಸಂಘಟನೆಗಳು ನ್ಯಾಯ ಒದಗಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿ ವಹಿವಾಟು ಬಂದ್ ಮಾಡಿ ಶಾಂತಿಯುತವಾಗಿ ವಿರೋಧ ವ್ಯಕ್ತಪಡಿಸಿವೆ. ಇಂತಹ ತೀವ್ರತರ ಪ್ರತಿಕ್ರಿಯೆಗಳು ಅಪಾರ್ಥಗಳಿಗೆ ಎಡೆ ಮಾಡುವ ಅಪಾಯವು ಇಲ್ಲದಿಲ್ಲ.
ಬಾಧಿತರು ತೀರ್ಪಿನಿಂದ ತಮಗೆ ನ್ಯಾಯ ಸಿಗಲಿಲ್ಲ ಎಂದು ಭಾವಿಸುವುದು, ಪ್ರತಿಕ್ರಿಯೆ ವ್ಯಕ್ತಪಡಿಸುವುದು ಸಹಜ. ಆದರೆ ತಮಗೆ ಸಂಬಂಧವೇ ಇರದ ಕೆಲವು ಶಕ್ತಿಗಳು ಸಂಭ್ರಮಿಸುವ, ಬಾಧಿತರನ್ನು ಕೆಣಕಿ ವಿಜಯ ಸಾಧಿಸಿದ ವರ್ತನೆ ಆಕ್ಷೇಪಾರ್ಹ. ಇದು ಅಮಾನವೀಯ ಮಾತ್ರವಲ್ಲ, ದ್ವೇಷ ಹುಟ್ಟು ಹಾಕಿ ನಾಗರಿಕ ವರ್ತನೆಗಳನ್ನು ನೆಲಸಮ ಮಾಡುವ ಪ್ರವೃತ್ತಿಯಾಗಿದೆ.
ಸಮಾಜದ ಸ್ವಾಸ್ತ್ಯ, ಶಾಂತಿ, ಸೌಹಾರ್ದತೆ ಸಾಂವಿಧಾನಿಕ ಹಕ್ಕುಗಳ ಸಂರಕ್ಷಣೆಯನ್ನು ನ್ಯಾಯಾಲಯಗಳ ಅಥವಾ ಚುನಾಯಿತ ಸರಕಾರದಿಂದ ನಿರೀಕ್ಷಿಸಲಾಗುತ್ತದೆ. ತೀರ್ಪುಗಳು ಅದನ್ನು ಬಲಗೊಳಿಸಬೇಕೆಂಬ ಆಶಯವನ್ನು ಹೊಂದಲಾಗುತ್ತದೆ. ಆದರೆ ಹಿಜಾಬ್ ವಸ್ತ್ರ ಬಳಸುವ ಕುರಿತು ಎದ್ದುಬಂದ ವಿವಾದ ಎತ್ತಲಾದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ಕಂಡುಕೊಳ್ಳಲಾಯಿತೇ ಎನ್ನುವಾಗ ನ್ಯಾಯಾಲಯದ ತೀರ್ಪು ಹಲವು ನಿರ್ಣಾಯಕ ಪ್ರಶ್ನೆಗಳಲ್ಲಿ ಮುಗ್ಗರಿಸಿದೆ ಎನಿಸುತ್ತದೆ. ವಿಚಾರಣಾ ವಿಷಯ, ವಿವಾದಗಳ ಕುರಿತು ಪರಿಶೀಲಿಸುವಾಗ ಉಚ್ಚನ್ಯಾಯಾಲಯ ಹಾಕಿಕೊಂಡ ನಾಲ್ಕು ಪ್ರಶ್ನೆಗಳು, ಕಂಡುಕೊಂಡ ಉತ್ತರಗಳ ಬಗ್ಗೆ ವ್ಯಾಪಕ ವಿಮರ್ಶೆಯು ವ್ಯಕ್ತಗೊಂಡಿದೆ.
ʻಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲʼ ಎಂದಿರುವ ನ್ಯಾಯಾಲಯವು ಶಿಕ್ಷಣ ಕಲಿಕೆಯಲ್ಲಿ ಸಮವಸ್ತ್ರಕ್ಕೆ ಧಾರ್ಮಿಕತೆಯ ಆಧಾರದ ಪರಿಶೀಲನೆ ಅಗತ್ಯವಿತ್ತೇ? ಮೂವರು ನ್ಯಾಯಾಧೀಶರ ನ್ಯಾಯಪೀಠವು ಮುಸ್ಲಿಂ ವಿದ್ಯಾರ್ಥಿನೀಯರ ಶಿಕ್ಷಣದ ಹಕ್ಕು ದಕ್ಕುವುದು ಪ್ರಧಾನ ಲಕ್ಷ್ಯವಾಗಿ ಪರಿಗಣಿಸಲು ಅದಕ್ಕೆ ಸಂವಿಧಾನ ಆಧಾರವಾಗಬೇಕಿತ್ತು. ಇದಕ್ಕೆಲ್ಲ ಸಮರ್ಥ, ಸಮಂಜಸ ಉತ್ತರ ಭಾರತದ ಸಂವಿಧಾನದಲ್ಲಿದೆ. ವ್ಯಕ್ತಿಯ ನಡೆ-ನುಡಿ, ಆಚಾರ-ವಿಚಾರಗಳನ್ನು ಪರಿಹಾರಗಳನ್ನು ಮತಧರ್ಮ ಅಥವಾ ಮತಧರ್ಮ ಗ್ರಂಥಗಳ ಆಧಾರದಲ್ಲಿ ನೋಡುವುದು ಸರಿಯಲ್ಲ. ಹಾಗೆ ನೋಡಿದರೆ, ಧಾರ್ಮಿಕ ಆಚರಣೆ ಹಕ್ಕು, ಖಾಸಗಿತನದ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ‍್ಯ, ಶಿಕ್ಷಣದ ಹಕ್ಕು ಇವೆಲ್ಲವೂ ಸಂವಿಧಾನಬದ್ಧ ಬಹುಮುಖ್ಯ ಭಾಗವಾಗಿದ್ದು ಶಿರವಸ್ತ್ರ ಧರಿಸುವ ಪ್ರಶ್ನೆ ಶಿಕ್ಷಣ ಕಲಿಕೆಗೆ ಅಡ್ಡಿಯಾಗದಂತೆ ಸಮರ್ಥ ನ್ಯಾಯದಾನಕ್ಕೆ ಅಗತ್ಯವಾದ ಎಲ್ಲವನ್ನೂ ಒಳಗೊಂಡಿದೆ. ಅತ್ಯಂತ ವ್ಯಾಪಕವಾಗಿ ವೈವಿಧ್ಯತೆ ಆಚರಣೆಗಳನ್ನು ಹೊಂದಿರುವ ಭಾರತದ ಸಮಾಜದ ವಾಸ್ತವಿಕತೆಗಳನ್ನು ಮತ್ತು ಅದು ಆಧುನಿಕ ಕಾಲಘಟ್ಟದಲ್ಲಿ ಸಾಗುವಾಗ ಆಗುತ್ತಿರುವ ಪರಿವರ್ತನೆಗಳನ್ನು ಗಮನದಲ್ಲಿ ಇರಿಸದೆ, ಸಮವಸ್ತ್ರವನ್ನು ಸಮಾನತೆ ಸಮ ಭಾತೃತ್ವದ ಭಾಗವಾಗಿ ಯೋಚಿಸದೆ ಏಕರೂಪತೆಯ ಸಾಂಸ್ಕೃತಿಕ, ಸಾಮಾಜಿಕ ದೃಷ್ಟಿಕೋನದಲ್ಲಿ ನೋಡುವುದು ನಕಾರಾತ್ಮಕವಾಗಿದೆ. ಅರ್ಜಿದಾರರ ವಾದದ ನೆಲೆಗಳು ಹಲವು ದೋಷಗಳಿಂದ ಕೂಡಿದೆ ಎನ್ನುವುದು ಸಹ ಗಮನಿಸಬೇಕಿದೆ. ಇಂದಿನ ಹಲವಾರು ಆಚರಣೆಗಳು ಧಾರ್ಮಿಕತೆಗೆ ತಳುಕು ಹಾಕಿರಬಹುದು. ಆದರೆ ಅವೆಲ್ಲವೂ ಪುರಾತನ ಕುರಾನ್, ಗೀತೆ, ಸ್ಮೃತಿಗಳಲ್ಲಿ ಇರಲು ಸಾಧ್ಯವೇ? ಮತಗಳ ನಿಯಂತ್ರಣಗಳಿಲ್ಲದೇ ವ್ಯಕ್ತಿಗಳು ಬದುಕಲಾರರೇ? ಇಲ್ಲವಾದರೆ ಮತೀಯ ಮೂಲಭೂತವಾದಿ ಚಿಂತನೆಗಳು ವ್ಯಕ್ತಿ ಸ್ವಾತಂತ್ರ‍್ಯವನ್ನೇ ಹರಣ ಮಾಡುತ್ತವೆ.
ಶಿಕ್ಷಣ, ಸಮಾನ ಹಕ್ಕುಗಳ ನಿರಾಕರಣೆಗೆ ಒಳಗಾಗಿಯೇ ಇರುವ ಮಹಿಳೆಯರು ಅದರಲ್ಲೂ ಮುಸ್ಲಿಂ ಮಹಿಳೆಯರು ಇದೀಗ ಹಲವು ಸಾಮಾಜಿಕ, ಧಾರ್ಮಿಕ ನಿರ್ಬಂಧಗಳ ನಡುವೆಯೇ ಶಿಕ್ಷಣ ಕಲಿತು, ದೇಶದ ಪ್ರಗತಿಗೆ ಶ್ರಮಿಸುತ್ತಿರುವ ಪ್ರಕ್ರಿಯೆಗೆ ನ್ಯಾಯಾಲಯ ಒತ್ತು ಕೊಡದಿರುವುದನ್ನು ಗಮನಿಸಬೇಕಿತ್ತು.
ಸರಕಾರದ ಮಟ್ಟದಲ್ಲಿ ಬಗೆಹರಿಸಬಹುದಾಗಿದ್ದ ತಲೆಮೇಲಿನ ತುಂಡು ಹೊದಿಕೆ ವಸ್ತ್ರವನ್ನು ವಿವಾದವಾಗಿಸಿ ಹಿಗ್ಗಿಸಿ, ವಿಜೃಂಭಿಸಿದ್ದು, ನ್ಯಾಯಾಲಯದ ತೀರ್ಪನ್ನು ಸಹ ಮತಿಯ ಕ್ರೋಡೀಕರಣಕ್ಕೆ ಕೋಮುವಾದಿ ಉದ್ದೇಶದ ರಾಜಕೀಯ ಉದ್ದೇಶಗಳಿಗೆ ಬಳಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹಿಂದು-ಮುಸ್ಲಿಮರ ನಡುವಿನ ಮೂಲಭೂತವಾದಿ ಶಕ್ತಿಗಳ ಹುನ್ನಾರಗಳನ್ನು ಜನತೆಯ ಅರಿಯಬೇಕಿದೆ.
ಭಾರತದಂತಹ ವಿಕಾಸಶೀಲ ಸಮಾಜದಲ್ಲಿ ಮೌಲ್ಯಗಳ ಸಂಘರ್ಷ ಹೊಸತೇನಲ್ಲ. ಪ್ರಗತಿ ಮತ್ತು ಪ್ರತಿಗಾಮಿ ಶಕ್ತಿಗಳ ನಡುವೆ ಸಂಘರ್ಷ ಸಹಜವಾಗಿದೆ. ಸಮವಸ್ತ್ರದ ಭಾಗವಾಗಿಯೇ ಉಡುವ ಉಡುಪನ್ನು ಧರ್ಮೀಕರಿಸಿ ಮುಸ್ಲಿಂ ಮಹಿಳೆಯರ ಶಿಕ್ಷಣ, ಆ ಮೂಲಕ ಸ್ವಾವಲಂಬನೆ, ಸ್ವಾಭಿಮಾನ ಬೆಳೆಯುವ ಅರಿವಿನಿಂದ ಬೆಳಗುವ ವೈಚಾರಿಕತೆಯ ಪ್ರಕ್ರಿಯೆಯನ್ನು ವಂಚಿಸುವ ಪ್ರಯತ್ನಗಳೂ ಇಲ್ಲದಿಲ್ಲ. ಪರಂಪರಾನುಗತವಾಗಿ ಸ್ಥಾಪಿತ ಹಿತಾಸಕ್ತಿಗಳ ಹಿಡಿತ ತಪ್ಪುವುದನ್ನು ಬಯಸದ ಶಕ್ತಿಗಳಿಗೂ ಮಹಿಳೆಯರು ಅರಿವು ಪಡೆಯುವುದು ಬೇಕಿಲ್ಲ. ಹೀಗಾಗಿಯೇ ಇಂತಹ ಪ್ರಶ್ನೆಗಳನ್ನು ಜಡವಾಗಿಸುವ ಷಡ್ಯಂತ್ರದ ದುರಾಲೋಚನೆಯನ್ನು ನಿರಾಕರಿಸುವಂತಿಲ್ಲ. ಅದು ಇಡೀ ಮಹಿಳಾ ಸಮುದಾಯದ ಆ ಮೂಲಕ ಸಮಾಜದ ಮುನ್ನಡೆಗೆ ಬಹುದೊಡ್ಡ ಕಂಟಕ. ಅದ್ದರಿಂದ ಶಿರವಸ್ತ್ರದ ಪ್ರಶ್ನೆ ಕೇವಲ ಕೆಲವು ಮುಸ್ಲಿಂ ಸಮುದಾಯದವರ ಪ್ರಶ್ನೆಯಾಗದೇ ಇಡೀ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ, ವಿಸ್ತರಿಸುವ ಪ್ರಶ್ನೆಯಾಗಿದೆ.
ಈ ತೀರ್ಪು ಹಲವು ಪ್ರಮುಖ ಪ್ರಶ್ನೆಗಳನ್ನು ನಮ್ಮ ಮುಂದಿರಿಸಿದೆ. ಮೌಲ್ಯಗಳು ನ್ಯಾಯ ನಿರ್ಣಯಗಳು ಕೂಡ ಸಾಮಾಜಿಕ ಸಂದರ್ಭ ಹಾಗೂ ವಾಸ್ತವಿಕ ಸನ್ನಿವೇಶಗಳನ್ನು ಆಧರಿಸಿರುತ್ತವೆ. ಹಲವು ವಿಭಿನ್ನ ಹಿತಾಸಕ್ತಿಗಳು ಇರುವ ಸಮಾಜದಲ್ಲಿ ಕಾಲಕಾಲಕ್ಕೆ ಮೌಲ್ಯಗಳ ಪುನರ್ ವ್ಯಾಖ್ಯಾನ ಮತ್ತು ಕಂಡುಕೊಳ್ಳುವಿಕೆ ಅತ್ಯಗತ್ಯವಾಗಿ ಆಗಬೇಕು. ವಿವಾದ, ಚರ್ಚೆಗಳಿಂದ ಸಮಾಜ ತನ್ನ ಭವಿಷ್ಯದ ಹೊಸ ಹಾದಿ ಮೌಲ್ಯಗಳನ್ನು ಕಂಡುಕೊಳ್ಳಬೇಕು ಹಾಗೂ ರೂಢಿಸಿಕೊಳ್ಳಬೇಕು. ಪ್ರಜಾಪ್ರಭುತ್ವ, ಸ್ವಾತಂತ್ರ‍್ಯ,-ಸಮಾನತೆ, ಪ್ರಗತಿ ಅಂತಹ ಉನ್ನತ ಮೌಲ್ಯಗಳ ಸಾಧನೆಯತ್ತ ಸಾಗಲು ಚರ್ಚೆ ವಿವಾದಗಳು ನಮ್ಮನ್ನು ಪ್ರೇರೇಪಿಸಬೇಕು. ವರ್ತಮಾನದಲ್ಲಿ ಸಂವಿಧಾನ, ನ್ಯಾಯ ನಿಯಮಗಳ ವ್ಯಾಖ್ಯಾನವೂ ಕೂಡ ಭವಿಷ್ಯವನ್ನು ಉನ್ನತೀಕರಿಸುವಂತಿರಬೇಕು. ಇಲ್ಲವಾದಲ್ಲಿ ಐತಿಹಾಸಿಕ ನಿರ್ಣಾಯಕ ಸನ್ನಿವೇಶದಲ್ಲಿ ಅದು ಕಪ್ಪು ಚುಕ್ಕೆಯಾಗಬಹುದು.
ಸಂವಿಧಾನದ ಉದ್ದೇಶಿತ ಸಾಮಾಜಿಕ ಬದಲಾವಣೆಗೆ ಶಿಕ್ಷಣ ಒಂದು ಪ್ರಮುಖ ಸಾಧನ. ಶಿಕ್ಷಣ ಎಲ್ಲರಿಗೂ ಸಿಗುವಂತಾಗ ಬೇಕು. ಅದು ಸಾಮಾಜಿಕ ಬದಲಾವಣೆಯನ್ನು ಉತ್ತೇಜಿಸುತ್ತದೆ. ಸಾಮಾಜಿಕ ವಸ್ತುಸ್ಥಿತಿ ಪಕ್ವಗೊಳ್ಳದ ಹೊರತು ಕಾನೂನು ಮೂಲಕ ತರಲು ಹೊರಡುವ ಸಾಮಾಜಿಕ ಬದಲಾವಣೆಗೆ ಹಲವು ಪ್ರತಿರೋಧ ನಿರ್ಮಿತವಾಗುವುದು ಸಹಜ. ಅದನ್ನು ಅರಿತು ವಿವೇಕದೊಂದಿಗೆ ವಿವೇಚಿಸಿ ಶಿಕ್ಷಣದ ಹಕ್ಕಿನ ಪ್ರಾಧಾನ್ಯತೆಯನ್ನು ಎತ್ತಿ ಹಿಡಿಯಲು ಇದ್ದ ಅವಕಾಶವನ್ನು ಬಳಸುವಲ್ಲಿ ನ್ಯಾಯಾಲಯ ಸೋತಿರುವುದು ವಿಷಾದನೀಯ. ಕಾನೂನಿನ ಮೂಲಕ ಸಾಮಾಜಿಕ ಬದಲಾವಣೆಗೆ ತೊಡರುಗಳೇ ಹೆಚ್ಚಿರುವಾಗ ಸಾಮಾಜಿಕ ಬದಲಾವಣೆಗೆ ಶಿಕ್ಷಣ ಒಂದು ಪ್ರಮುಖ ಆಧಾರವಾಗಲಿದೆ. ನ್ಯಾಯ ನಿಷ್ಠೂರತೆಗಿಂತ ನ್ಯಾಯ ಸಮ್ಮತ ತೀರ್ಪು ಈ ಕಾಲದ ಅನಿವಾರ್ಯವಾಗಿದೆ ಎಂಬ ನ್ಯಾಯಶಾಸ್ತ್ರೀಯ ತತ್ವಕ್ಕೆ ಹಿಜಾಬ್ ಕುರಿತ ತೀರ್ಪಿನಿಂದ ಸೋಲಾಗಿದೆ.
ಈ ತೀರ್ಪಿನ ಹಲವು ಮಿತಿಗಳ ನಡುವೆಯೂ ಪ್ರಸಕ್ತವಾಗಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಅವಕಾಶಗಳು ಕೂಡ ಅದರಲ್ಲೇ ಲಭ್ಯ ಇವೆ. ಶಿರವಸ್ತ್ರದ ಕಾರಣಕ್ಕೆ ತರಗತಿಗಳಿಂದ ಮತ್ತು ಪರೀಕ್ಷೆಗಳಿಂದ ದೂರ ಉಳಿಯುತ್ತಿರುವ ಗಂಭೀರ ಸ್ಥಿತಿಯಿಂದ ಪಾರು ಮಾಡಲು ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಆಳುವ ಪಕ್ಷದ ಅಜೆಂಡಾಕ್ಕಿಂತಲೂ ಸಮಾಜದ ಒಳಿತು ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಎಂದು ಅರಿತು ಸಂವಿಧಾನದ ಮೇಲೆ ಪ್ರಮಾಣವಚನ ಮಾಡಿದ ಈ ಸರ್ಕಾರ ಯೋಚಿಸಬೇಕು.