ಗುಂಡಣ್ಣ ಚಿಕ್ಕಮಗಳೂರು
ಮತ್ತೊಂದು ಆಘಾತಕಾರಿ ಸುದ್ದಿ ಇಂದು(ಜೂನ್ 24) ಸಂಜೆ ಸಿಡಿಲಿನಂತೆ ನಮ್ಮೆಲ್ಲ ಸಮುದಾಯದ ಸ್ನೇಹಿತರಿಗೆ ಬಂದೆರಗಿದೆ….. ಸಂಜೆ 6.30ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಮ್ಮೆಲ್ಲರ ಆತ್ಮೀಯ ಗೆಳೆಯ ಹೆಚ್.ವಿ.ವೇಣುಗೋಪಾಲ್ ನಿಧನರಾಗಿದ್ದಾರೆ ಎನ್ನುವ ಸುದ್ಧಿ ಬಂತು.
ವೇಣು ಅವರು ಗೌರಿಬಿದನೂರು ಎಇಎಸ್ ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಜೃತ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಬಿ.ಗಂಗಾಧರಮೂರ್ತಿ, ನಗರಗೆರೆ ರಮೇಶ, ರಂಗಾರೆಡ್ಡಿ ಕೋಡಿರಾಮಪುರ ಮತ್ತು ಅಶ್ವಥನಾರಾಯಣ ಇವರೆಲ್ಲರೂ ವೇಣೂ ಜೊತೆ ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನ ಆತ್ಮೀಯ ಸಹೋದ್ಯೋಗಿಗಳು. ಇವರೆಲ್ಲರೂ ಒಟ್ಟಾಗಿ ಗೌರಿಬಿದನೂರಿನ ಸಮುದಾಯ ಘಟಕವನ್ನು ಪ್ರಾರಂಭಿಸಿ, ಸಕ್ರಿಯವಾದ ಚಟುವಟಿಕೆಗಳನ್ನು ಮಾಡಲು ಸಹಕರಿಸಿದವರು.
ಗಂಗಾಧರ ಮೂರ್ತಿ ಸಮುದಾಯ ವಾರ್ತಾಪತ್ರದ ಸಂಪಾದಕರಾದಾಗ, ಇವರೆಲ್ಲರೂ ವಾರ್ತಾಪತ್ರಕ್ಕೆ ಲೇಖನಗಳನ್ನು ಬರೆದು, ಪ್ರತಿ ತಿಂಗಳೂ ವಾರ್ತಾಪತ್ರ ಸರಿಯಾದ ಸಮಯಕ್ಕೆ ಬರುವ ಹಾಗೆ ನೋಡಿಕೊಂಡಿದ್ದರು. ವೇಣು ಆಗಾಗ್ಗೆ ವಾರ್ತಾಪತ್ರಕ್ಕೆ ಚಂದದ ಮುಖಪುಟ ವಿನ್ಯಾಸವನ್ನೂ ಮಾಡಿಕೊಡುತ್ತಿದ್ದರು. ಕೆಲವು ವರುಷಗಳ ನಂತರ ವೇಣೂ, ವಾರ್ತಾಪತ್ರದ ಸಂಪಾದಕರಾದರು. ನೂರಾರು ಕನಸುಗಳನ್ನು ಇಟ್ಟುಕೊಂಡಿದ್ದ ವೇಣೂವಿಗೆ, ಅವಸಾನದ ಸ್ಥಿತಿಯಲ್ಲಿದ್ದ ವಾರ್ತಾಪತ್ರಕ್ಕೆ ಜೀವ ತುಂಬಲು ಸಾಧ್ಯವಾಗಲಿಲ್ಲ…. ಇದರ ಬಗ್ಗೆ ಅವರು ಸಾಕಷ್ಟು ವರುಷ, ಬಹುಶಃ ಈಗಲೂ ಅವರ ಮನಸ್ಸಿನಲ್ಲಿ ನೋವು, ದುಖಃ ಇರಬಹುದು ಅನ್ನಿಸುತ್ತೆ.
ವೇಣೂ, ಗೌರಿಬಿದನೂರಿನಿಂದ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿಗೆ ವರ್ಗಾವಣೆಯಾಗಿ ಬಂದ ಮೇಲೆ, ತುಂಬಾ ದೊಡ್ಡ ಮಟ್ಟದಲ್ಲಿ ರಂಗ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನ್ಯಾಷನಲ್ ಕಾಲೇಜಿನ ಒಳಗೆ ಅಂತರ ತರಗತಿ ನಾಟಕ ಸ್ಪರ್ಧೆಗಳಲ್ಲಿ ಬಹಳ ಉತ್ತಮ ಮತ್ತು ಗಂಭೀರ ನಾಟಕಗಳನ್ನು ತಮ್ಮ ರಂಗಾಸಕ್ತ ವಿದ್ಯಾರ್ಥಿಗಳಿಗೆ ಸೂಚಿಸಿ, ಪ್ರಯೋಗಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. – ಭಾರತ ಯಾತ್ರಾ ಕೇಂದ್ರದ ಆಯೋಜನೆಯಲ್ಲಿ ನಡೆಯುತ್ತಿದ್ದ ಜ್ಞಾನಭಾರತಿ ಅಂತರ ಕಾಲೇಜು ವಾರ್ಷಿಕ ನಾಟಕೋತ್ಸವ ಸ್ಪರ್ಧೆಗಳಲ್ಲಿ ಅಪಾರ ಆಸಕ್ತಿ ವಹಿಸಿ, ನಾಟಕ ಮತ್ತು ನೇಪಥ್ಯದ ಹಲವು ಪ್ರಕಾರಗಳಲ್ಲಿ ಅತ್ತುತ್ಯಮ ಪ್ರಶಸ್ತಿಗಳು ತಮ್ಮ ಕಾಲೇಜಿಗೆ ಬರುವ ಹಾಗೆ ಶ್ರಮ ವಹಿಸುತ್ತಿದ್ದರು.
ಥಿಯೇಟರ್ ಕ್ಲಬ್ ನ ಮುಖ್ಯಸ್ಥರಾದರು. ಡಾ. ಹೆಚ್.ನರಸಿಂಹಯ್ಯ. ಅವರ ನಂಬುಗೆಯ ಮೇಷ್ಟ್ರರಾಗಿ ಸೇವೇ ಸಲ್ಲಿಸಿದರು. ವೇಣೂ ಮತ್ತು ಮೌಳೇಶ್ ಸರ್ ಅವರು ಕಾಲೇಜಿನ ಉನ್ನತಿಗಾಗಿ ಸಂಪೂರ್ಣವಾಗಿ ಸಮರ್ಪಣಾ ಭಾವದಿಂದು ಸಮಯದ ಮಿತಿಯಿಲ್ಲದೆ ದುಡಿಯುತ್ತಿದ್ದರು. ನ್ಯಾಕ್ ಸಂಸ್ಥೆಯ ಗುಣಮಟ್ಟದ ಶ್ರೇಣಿಕರಣದಲ್ಲಿ ತಮ್ಮ ಕಾಲೇಜಿಗೆ ಅತಿ ಹೆಚ್ಚಿನ ಗ್ರೇಡಿಂಗ್ ಬರಲು ನಿರಂತರ ಶ್ರಮಿಸುತ್ತಿದ್ದರು.
ಬೆಂಗಳೂರಿಗೆ ಬಂದ ಮೇಲೆ ತಾವು ಓದಿದ ಉತ್ತಮ ನಾಟಕಗಳ ಅನುವಾದವನ್ನು ಕನ್ನಡದಲ್ಲಿ ಮಾಡಲು ಪ್ರಾರಂಭಿಸಿದರು. ಅವರು ಅನುವಾದಿಸಿದ ಮೂರು ನಾಟಕಗಳನ್ನು ʻಬೆಂಗಳೂರು ಸಮುದಾಯʼ ಪ್ರಯೋಗ ಮಾಡಿದೆ. ಆರ್.ಕೆ.ನಾರಾಯಣ್ ಅವರ ಇಂಗ್ಲೀಷ್ ಕಥೆಯ ಆಧಾರದ ನಾಟಕ ʻಕುಂಡಲಿ ಮಹಾತ್ಮೆʼ ಬೀದಿ ನಾಟಕವಾಗಿ ಪ್ರಯೋಗವಾಯಿತು. ಇಬ್ಸನ್ನನ ʻಎನಮಿ ಆಫ್ ದ ಪೀಪಲ್ʼ ನಾಟಕ ʻಸುತ್ತಿಕೊಂಡರೆ ಸರ್ಪʼ ಮತ್ತು ರಾಜಸ್ಥಾನಿ ಜಾನಪದ ಕಥೆಯ ಆಧಾರಿತ ಹಿಂದಿ ನಾಟಕ ಕನ್ನಡದಲ್ಲಿ ʻನಮೋ ವೆಂಕಟೇಶʼ, ಪ್ರಸ್ತುತ ಸಾಮಾಜಿಕ-ರಾಜಕೀಯ ನಾಟಕವಾಗಿ ರಂಗ ನಾಟಕವಾಗಿ ಪ್ರಯೋಗವಾಯಿತು. ಬಹಳ ವರುಷಗಳ ಹಿಂದೆ ಇವರು ಅನುವಾದಿಸಿದ ʻಕಕೇಷಿಯನ್ ಚಾಕ್ ಸರ್ಕಲ್ʼ ಕನ್ನಡದಲ್ಲಿ ಅನುವಾದಗೊಂಡು ಮಕ್ಕಳ ರಂಗ ಶಿಬಿರದ ನಾಟಕವಾಗಿ ಪ್ರಯೋಗವಾಯಿತು. ಹಲವು ನಾಟಕಗಳಿಗೆ ಇವರ ರಚಿಸಿದ ಸಾಹಿತ್ಯದ ರಂಗ ಗೀತೆಗಳು ಪ್ರಸ್ತುತವಾಗಿವೆ.
ಪ್ರಾಂಶುಪಾಲರಾಗಿ ನಿವೃತ್ತಿಯಾದ ಮೇಲೆ ವೇಣು ಸಂಪೂರ್ಣವಾಗಿ ವಿವಿಧ ರೀತಿಯ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ರಾಷ್ಟ್ರೀಯ ನಾಟಕ ಶಾಲೆ(ಎನ್.ಎಸ್.ಡಿ.) ಬೆಂಗಳೂರು, ರಂಗಾಯಣ, ಅಭಿನಯ ತರಂಗ ಮುಂತಾದ ಹಲವು ರಂಗ ಶಾಲೆ ಮತ್ತು ಸಂಸ್ಥೆಗಳಿಗೆ ರಂಗಭೂಮಿ ಚರಿತ್ರೆ, ಸಂಸ್ಕೃತ ನಾಟಕಗಳು ಹಾಗೂ ಹಲವು ವಿಷಯಗಳ ಕುರಿತು ತರಗತಿಗಳನ್ನು ತೆಗೆದುಕೊಂಡು ಅನೇಕ ವಿದ್ಯಾರ್ಥಿಗಳ ಪ್ರೀತಿಪಾತ್ರದ ಮೇಷ್ಟ್ರರಾಗಿದ್ದರು. ಹಲವು ಅನುವಾದ ಕಾರ್ಯಗಳನ್ನು ಮನೆಯಲ್ಲಿ ಕುಳಿತು ಮಾಡುತ್ತಿದ್ದರು….. ಸುಮ್ಮನೆ ಕಾಲವನ್ನು ವ್ಯಯ ಮಾಡುವುದನ್ನು ಇಷ್ಟಪಡದ ವೇಣೂ, ಏನಾದರೂ ಧನಾತ್ಮಕ, ಸಕ್ರಿಯ ಚಟುವಟಿಕೆಗಳಲ್ಲಿ ಸದಾಕಾಲ ತೊಡಗಿಸಿಕೊಳ್ಳುತ್ತಿದ್ದರು.
ತಮ್ಮ ಸ್ವಂತ ಮನೆಯ ನೆಲ ಮಾಳಿಗೆಯಲ್ಲಿ ʻಉನ್ನತಿʼ ಹೆಸರಿನ ಸಂಸ್ಥೆಯ ಅಡಿಯಲ್ಲಿ ವಿದೇಶಿ, ದೇಶಿ ಭಾಷೆಗಳ ಕಲಾತ್ಮಕ, ಸೃಜನಾತ್ಮಕ ಚಲನಚಿತ್ರ ಪ್ರದರ್ಶನಗಳನ್ನು ಪ್ರತಿ ಶನಿವಾರ ಮತ್ತು ಭಾನುವಾರ ಆಯೋಜಿಸುತ್ತಿದ್ದರು. ಅದೇ ರೀತಿ, ಸುಚಿತ್ರಾ ಮತ್ತು ಕೆ ವಿ ಸುಬ್ಬಣ್ಣ ಆಪ್ತರಂಗ ಮಂದಿರದ ವಿಶೇಷ ಚಿತ್ರೋತ್ಸವಗಳಲ್ಲಿ, ತಮ್ಮ ʻಉನ್ನತಿ ಸಂಸ್ಥೆʼಯನ್ನು ಸೇರಿಸಿ ಚಟುವಟಿಕೆಗಳನ್ನು ಮಾಡಿರುತ್ತಾರೆ.
ಇಂತಹ ಸದಾಕಾಲ ಸಕ್ರಿಯವಾಗಿದ್ದ ವೇಣೂ ಸಡನ್ ಆಗಿ ನಮ್ಮನ್ನು ಅಗಲಿರುವುದು ನಿಜಕ್ಕೂ ಆಘಾತಕಾರಿಯೇ… ಎಂಟು-ಹತ್ತು ದಿನಗಳ ಹಿಂದೆ, ಕೆ.ವಿ.ಸುಬ್ಬಣ್ಣ. ಆಪ್ತ ರಂಗಮಂದಿರದಲ್ಲಿ ಕಟ್ಟೀಮನಿ ಅವರ ನಿರ್ದೇಶನದಲ್ಲಿ ಪ್ರದರ್ಶಿತ ರಂಗಶಿಬಿರದ ಪ್ರಯೋಗದಲ್ಲಿ ಒಟ್ಟಿಗೆ ಕೂತು ಪ್ರದರ್ಶನ ನೋಡಿದ್ದೇ ಕಡೆಯ ಭೇಟಿಯಾಯಿತು…..
ಇಂದು ಹೇಳಿ ಮಾಡಿಸಿದ ಹಾಗೆ, ನಾವು ವೇಣುವಿನ ಎಲ್ಲ ಆಪ್ತ ಗೆಳೆಯರು ಗೌರಿಬಿದನೂರಿಗೆ, ವಿದುರಾಶ್ವತ್ಥಕ್ಕೆ ಹೋಗಿದ್ದೆವು. ವೇಣು ಅಗಲಿದ ಸಮಯಕ್ಕೆ ಸರಿಯಾಗಿ, ಹೆಚ್.ಎನ್. ಸಮಾಧಿಯಲ್ಲಿ ನಿಂತು ಅವರ ಗೌರವಾರ್ಥ ಒಂದು ನಿಮಿಷದ ಮೌನಾಚರಣೆಯಲ್ಲಿದ್ದೆವು…. ಇಲ್ಲಿ ಬೆಂಗಳೂರಿನಲ್ಲಿ, ವೇಣು ನಮ್ಮನ್ನೆಲ್ಲ ಅಗಲಿ, ಅವನ ಪ್ರೀತಿಯ ಹೆಚ್.ಎನ್. ಜೊತೆ ಇರಲು ನಡೆದು ಬಿಟ್ಟಿದ್ದಾನೆ….. ಎಂತಹ ವಿಪರ್ಯಾಸ…. ಹೋಗಿ ಬಾ ಗೆಳೆಯ….. ಪ್ರೀತಿಯ, ಆತ್ಮೀಯ ವಿದಾಯ ನಿನಗೆ……