ನುಚ್ಚು ಮಜ್ಜಿಗಿ ಸೂರ್ಕೊ..ಉಳ್ಳಾಗಡ್ಡಿ ಕಡ್ಕೋ

ಶರಣಪ್ಪ ಬಾಚಲಾಪುರ ಕೊಪ್ಪಳ

ಆಗ ನಮ್ಮ ಮನಿಯಾಗ ಅಕ್ಕಿ ಅನ್ನ ಮಾಡೋದು ಕಮ್ಮಿ, ಸ್ವಾಮಾರ ಇಲ್ಲ ಹಬ್ಬ,  ಅಮಾಸಿ, ಹುಣ್ಣಿಮಿಗೆ ಮಾತ್ರ. ಆಗ ಅಕ್ಕಿ ಅನ್ನ ಉಣತ್ತಾರ ಅಂದ್ರ ಅವ್ರ ದೊಡ್ಡ ಶ್ರೀಮಂತ್ರು ಅಂತ ಲೆಕ್ಕ. ಆಗ ಬಹುತೇಕರ ಮನಿಯಾಗ ನುಚ್ಚು,  ಸಂಗಟಿ ಕಾಮನ್ ಆಗಿರೋದು. ಈಗ ನುಚ್ಚು.‌‌ ಸಂಗಟಿ ತಿನ್ತಾರ ಅಂದ್ರ ಅವರ ಸ್ಥಿತಿವಂತ್ರು. ಆರೋಗ್ಯದ ಕಡೆ ಲಕ್ಷ್ಯ ಬಾಳ ವಹಿಸ್ಯಾರ ಅಂತಾನ ಲೆಕ್ಕ. ಸುಗರ, ಬಿಪಿ ಇದ್ದವರು ಅಕ್ಕಿ ಅನ್ನ ಬಿಟ್ಟು ನವಣಿ, ಸಾಮಿ, ಹಾರಕ, ಹೀಗೆ ಹಿಂದಿನ ಕಾಲದ್ದು ಅನ್ನ ಉಣ್ಣುತ್ತಾರೆ.

ಬ್ಯಾಸಿಗೆ ಬಂದ್ರ ಸಾಕು. ನಾವು ಮನಿಯಾಗ ಗಡಗ್ಯಾಗಿನ ನುಚ್ಚು, ಅದ್ಕ ಸಾಕಾಗೊವಷ್ಡ ಮಜ್ಜಿಗಿ ಹಾಕೊಂಡು. ಅದರೊಂದಿಗೆ ಉಳ್ಳಾಗಡ್ಡಿ ಕಡಕೊಂತ ಊಟ ಮಾಡಿ. ಬೇನಗಿಡದ ನೆರಳಿನ್ಯಾಗ ಮಕೊಂಡ ಬಿಟ್ರ ಒಂದೆರೆಡು ತಾಸ ಎಚ್ಚರಾದ್ರ ಕೇಳ ಮಗಂದು. ಬಿಸಿಲೊತ್ತಿನ್ಯಾಗ ನುಚ್ಚು ಮಜ್ಜಿಗಿ ಊಟ ಅಂದ್ರ ಹೊಟ್ಟಿಗಿನೂ ತಂಪು. ಕಣ್ಣಿಗೂ ಮಬ್ಬು ಬರುತ್ತ. ಈಗ ನಮ್ಮ‌ಮನ್ಯಾಗ ಆಗಿನಂಗ ನುಚ್ಚು ಮಾಡೋದಿಲ್ಲ. ಇತ್ತೀಚಿಗೆ ನಮ್ಮಕ್ಕ ಬಂದಾಗ ಹೇಳಿ ನಮ್ಮವ್ವ ಮಾಡಿದಂಗ ನುಚ್ಚು ಮಾಡಿಸಿಕೊಂಡು ಉಂಡ‌ ನೆನಪು. ಇನ್ನ ನಾನು ಸಣ್ಣೋನು ಇರೋವಾಗ ನಮ್ಮ ಮನಿಯಾಗ ಕಾಯಂ ನುಚ್ಚು. ಈ‌ ನುಚ್ಚಿಗೆ ಒಮ್ಮೊಮ್ಮೆ ಸಾಕಷ್ಟು ಮಜ್ಜಿಗಿ. ಇಲ್ಲ ಮಜ್ಜಿಗಿ ಅಂಬ್ರ. ಇಲ್ಲ ಮಜ್ಜಿಗಿ ಸಾರು. ಇಲ್ಲ ಹಾಲು ಹಾಕೊಂಡು ಉಂಡ ಅದ್ರ ರುಚಿ ಉಂಡೋವನಿಗೆ ಗೊತ್ತು. ಆ ರುಚಿಯನ ಅಕ್ಷರದಾಗ ಹೇಳೋಕಾಗೊಲ್ಲ.

ನಮ್ಮ‌ಮನಿಯಾಗ ಯಾವಾಗಲೂ ಒಂದು ಎಮ್ಮಿ. ಒಂದೆರೆಡು ಆಕ್ಳ ಹಿಂಡುತ್ತಿದ್ದವು. ಹಿಂಗಾಗಿ ನಮಗೆ ಹೈನಕ್ಕೇನು ಕಮ್ಮಿ ಇರಲಿಲ್ಲ. ನಮ್ಮೂರಾಗ ಬಿಳಿಜ್ವಾಳ ಬೆಳೋದಿಲ್ಲ, ನಮ್ದು ಮಸಾರಿ. ಮುಂಗಾರಿ ಬೆಳಿ ಅಷ್ಟ. ನಮ್ಮ ಹೊಲದಾಗ ಮುಂಗಾರಿ.‌ಬೋಗಾಪುರ ಜ್ವಾಳ ಬೆಳೆದಿದ್ದರು.‌ ಅವುಗಳನ್ನು ತಿನ್ನೋದು ಕಮ್ಮಿ. ನಮ್ಮವ್ವನ ತವರ ಮನಿ ಹುನಗುಂದದ ಕಡಪಟ್ಟಿ ಮಾವರ  ಹೊಲದಾಗಿನೊ ಇಲ್ಲ, ನಮ್ಮತ್ತಿ ಮನಿ ಹಕಾರಿರ ಹೊಲ್ದಾಗೊ ಅವ್ರ ರಾಶಿ ಮಾಡಿದಾಗ ಚೊಲೊ ಜ್ವಾಳ ನಮಗಾಗಿ ತೆಗೆದಿಟ್ಟು ಕಳುಹಿಸುತ್ತಿದ್ದರು. ಆಗ ನುಚ್ಚು, ಸಂಗಟಿಗೆ ಜ್ವಾಳವನ್ನು ಗಿರಣಿಗೆ ಹಾಕಿಸುತ್ತಿದ್ದಿಲ್ಲ. ನಮ್ಮವ್ವ ಇಲ್ಲ ನಮ್ಮಮ್ಮ ಬಿಸೊಕಲ್ಲಾಗ ಬಿಸಿ‌ ಜ್ವಾಳ ನುಚ್ಚು ಕೇರಿ ಸ್ವಚ್ಛ ಮಾಡುತ್ತಿದ್ದರು.  ಒಮ್ಮೆ ಬಿಸೋಕಲ್ಲಾಗ ಎರಡ ಸೇರು, ಮೂರು ಸೇರು ಜ್ವಾಳದ ನುಚ್ಚು ಒಡೆಯುತ್ತಿದ್ದರು. ಹಿಂಗ ಬಿಸೋಕಲ್ಲಾ ಒಡೆದ ನುಚ್ಚಿನಿಂದ ನುಚ್ಚು ಮಾಡುತ್ತಿದ್ದರು. ನುಚ್ಚು ಮಾಡೋದು ಒಂದ ಹದ. ನುಚ್ಚು ಕುದಿಸೋದಕ್ಕ ಒಂದ ದಿನ ಮೊದ್ಲ.  ಸ್ವಲ್ಪ ನುಚ್ಚಿಗೆ ಮಜ್ಜಿಗಿ ಹಾಕಿ ಹುಳಿಗೆ ಬಿಡುತ್ತಿದ್ದರು. ಹುಳಿಯಾದ ನುಚ್ಚನ್ನ ಒಲಿ ಮ್ಯಾಗಿ ದೊಡ್ಡ ಗಡಗಿಟ್ಟು ಅದಕ್ಕೆ ಹುಳಿ ಮಜ್ಜಿಗಿ ಸಾಕಾವಷ್ಡು ನುಚ್ಚು. ನೀರು ಹಾಕಿ ಭಾಳಷ್ಟು ಹೊತ್ತು ಕುದಿಸುತ್ತಿದ್ದರು.

ಇದನ್ನೂ ಓದಿ:ಆಧುನಿಕ ನಾಗರಿಕತೆಯೂ ಉಳ್ಳವರ ಬೌದ್ಧಿಕ ಕೌರ್ಯವೂ

ಸಾಮಾನ್ಯವಾಗಿ ಸಂಜಿ ಹೊತ್ತು ನುಚ್ಚಿನ ಗಡಗಿ ಸಿದ್ದವಾದ್ರ ರಾತ್ರಿ ಊಟಕ್ಕ ಗಂಗಾಳ ತುಂಬಾ ಬಿಸಿ ನುಚ್ಚು. ಅದಕ್ಕ ಹಾಲು ಹಾಕಿಕೊಂಡು ಊಟ ಮಾಡುತ್ತಿದ್ದವಿ.ಇನ್ನ ಮರುದಿನ ಆರಿದ ನುಚ್ಚಿಗೆ ಮಜ್ಜಿಗಿ. ಮಜ್ಜಿಗಿ ಅಂಬ್ರ, ಮಜ್ಜಿಗಿ ಸಾರು ಹಾಕೊಂಡು ಊಟ‌ ಮಾಡುತ್ತಿದ್ದಿವಿ. ಆಗ ನಮ್ಮ ಮನಿಯಾಗ ಅಕ್ಕಿ ಅನ್ನ ಮಾಡೋದು ಕಮ್ಮಿ, ಸ್ವಾಮಾರ ಇಲ್ಲ ಹಬ್ಬ,  ಅಮಾಸಿ, ಹುಣ್ಣಿಮಿಗೆ ಮಾತ್ರ. ಆಗ ಅಕ್ಕಿ ಅನ್ನ ಉಣತ್ತಾರ ಅಂದ್ರ ಅವ್ರ ದೊಡ್ಡ ಶ್ರೀಮಂತ್ರು ಅಂತ ಲೆಕ್ಕ. ಆಗ ಬಹುತೇಕರ ಮನಿಯಾಗ ನುಚ್ಚು,  ಸಂಗಟಿ ಕಾಮನ್ ಆಗಿರೋದು. ಈಗ ನುಚ್ಚು.‌‌ ಸಂಗಟಿ ತಿನ್ತಾರ ಅಂದ್ರ ಅವರ ಸ್ಥಿತಿವಂತ್ರು. ಆರೋಗ್ಯದ ಕಡೆ ಲಕ್ಷ್ಯ ಬಾಳ ವಹಿಸ್ಯಾರ ಅಂತಾನ ಲೆಕ್ಕ. ಸುಗರ, ಬಿಪಿ ಇದ್ದವರು ಅಕ್ಕಿ ಅನ್ನ ಬಿಟ್ಟು ನವಣಿ, ಸಾಮಿ, ಹಾರಕ, ಹೀಗೆ ಹಿಂದಿನ ಕಾಲದ್ದು ಅನ್ನ ಉಣ್ಣುತ್ತಾರೆ. ಆಗ ಹೊಟೆಲ್ ಇರಲಿಲ್ಲ. ನಮ್ಮೂರಾಗ ಲಿಂಗಾಯತ್ ಖಾನಾವಳಿ ಎರಡು ಇದ್ದವು ಒಂದು ಕುಷ್ಟಿಗಿ ಅಮರಪ್ಪರದು ಒಂದು,  ಇನ್ನೊಂದು ದಿಬ್ಬದಮನಿಯಾರದು. ಅವರು ಊಟಕ್ಕೆ ಅಕ್ಕಿ ಅನ್ನ ಮಾಡುತ್ತಿದ್ದರು.  ಇತ್ತೀಚಿಗೆ ನಾನು ಕೊಪ್ಪಳದಾಗ ಕೋರ್ಟು ಮುಂದ ಇರೋ ಖಾನಾವಳ್ಯಾಗ ಸಂಗಟಿ ಸಾರು. ಸಂಗಟಿ ಮಜ್ಜಿಗಿ ಊಟದಾಗ ಕೊಡ್ತಾರೆ.‌

ನಿತ್ಯ ಹೊಲಕ್ಕೆ ಹೋಗುವವರಿಗೆ ನುಚ್ಚು ಕಟ್ಟಿಕೊಂಡು ಅದ್ಕ ಸಿಲವರ್ ಸಟ್ಟಿನ್ಯಾಗ ಮಜ್ಜಿಗಿನೊ ಇಲ್ಲ ಸಾರು ಕಟ್ಟಕೊಂಡು ಹೋಗುತ್ತಿದ್ದರು.  ಮೂರು ನಾಕ ರೊಟ್ಟಿ ತಿಂದು ಮ್ಯಾಗ ನುಚ್ಚು ಉಂಡರ ಅದ್ರಂತ ಸುಖ ನೆಮ್ಮದಿ ಯಾವುದು ಇರಲಿಲ್ಲ. ನುಚ್ಚು ಒಮ್ಮೆ ತಾಯಾರಿಸಿದ್ರ ವಾರಗಟ್ಟಲೇ ಉಣಬೌದು. ಅದು ಕೆಡೋದಿಲ್ಲ. ಇನ್ನ ನಮ್ಮವ್ವನ ಕೈಯಾಗಿನ ನುಚ್ಚು ನನಗಂತೂ ಅಮೃತ ಉಂಡಾಂಗ ಆಕಿತ್ತು. ಈಗ ಯಾರರ ಕೇಳ್ರಿ , ಬಿಡ್ರಿ ನೀವು ಜವಾರಿ ಊಟ ಮಾಡಿದವರೊ ಗಟ್ಟಿಯಾಗಿ ಇದ್ದಿರಿ. ನಾವು ಈಗಿನ ಊಟ ಮಾಡಿ ಹಿಂಗಾಗಿವಿ ಎನ್ನುತ್ತಾರೆ.

Donate Janashakthi Media

Leave a Reply

Your email address will not be published. Required fields are marked *