ಬೆಂಗಳೂರು: ನೂತನ ಪಿಂಚಣಿ ಯೋಜನೆ(ಎನ್‌ಪಿಎಸ್) ರದ್ದಗೊಳಿಸಬೇಕೆಂದು ಮತ್ತು ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಅನ್ನೇ ಮುಂದುವರೆಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಒತ್ತಾಯವಾಗಿದ್ದು ಇಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಿದರು.
ಒಪಿಎಸ್ ಯೋಜನೆಗೂ ಎನ್‌ಪಿಎಸ್ ಯೋಜನೆಯಲ್ಲಿ ಭಾರೀ ಪ್ರಮಾಣದಲ್ಲಿ ವ್ಯತ್ಯಾಸವಿದೆ ಎಂದು ತಿಳಿಸಿರುವ ಪ್ರತಿಭಟನಾಕಾರರು, ನೂತನ ಪಿಂಚಣಿ ಯೋಜನೆ ಅಡಿಯಲ್ಲಿ ನಿವೃತ್ತಿಯ ನಂತರ ಎಷ್ಟು ಮೊತ್ತ ಪಿಂಚಣಿಯಾಗಿ ದೊರೆಯುತ್ತದೆ ಎಂಬ ನಿರ್ದಿಷ್ಟತೆ ಇಲ್ಲ. ಏಕೆಂದರೆ ನೌಕರನು ಪ್ರತಿ ತಿಂಗಳು ಎನ್‌ಪಿಎಸ್ ಖಾತೆಯಲ್ಲಿ ಸಂಬಳದ ಶೇ.10 ರಷ್ಟನ್ನು ಇರಿಸಬೇಕು. ಅದಕ್ಕೆ ಪ್ರತಿಯಾಗಿ ಸರ್ಕಾರವು ಶೇ.14ರಷ್ಟನ್ನು ನೀಡುತ್ತದೆ. ಈ ರೀತಿ ಜಮೆಯಾದ ಮೊತ್ತಕ್ಕೆ ಎಷ್ಟು ಲಾಭ ಸಿಗುತ್ತದೆ ಎಂಬುದನ್ನು ಆಧರಿಸಿ ಪಿಂಚಣಿ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ.
ಆದರೆ ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಅಡಿಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರಿಗೆ ಇಂತಿಷ್ಟು ಎಂದು ನಿಶ್ಚಿತ ಮೊತ್ತವು ಪಿಂಚಣಿಯಾಗಿ ದೊರೆಯುತ್ತಿತ್ತು. ಸರ್ಕಾರ ತೆರಿಗೆದಾರರ ಹಣವನ್ನು ಬಳಸಿ ಈ ಪಿಂಚಣಿ ಯೋಜನೆಯನ್ನು ನೀಡುತ್ತಿದ್ದವು. ಕನಿಷ್ಠ 10 ವರ್ಷ ಸರ್ಕಾರಿ ಸೇವೆ ಸಲ್ಲಿಸಿದ ನೌಕರರು ಈ ಪಿಂಚಣಿ ಯೋಜನೆಗೆ ಅರ್ಹರಾಗುತ್ತಿದ್ದರು. ಪಿಂಚಣಿ ಪಡೆಯಲು ಅವರು ಯಾವುದೇ ಮೊತ್ತವನ್ನು ಹೂಡಿಕೆ ಮಾಡುವ ಅವಶ್ಯಕತೆ ಇರಲಿಲ್ಲ.
2006ರಿಂದ ಜಾರಿಗೊಂಡಿರುವ ಎನ್‌ಪಿಎಸ್ ಯೋಜನೆ ಪ್ರಕಾರ, ನೌಕರರ ಸಂಬಳದಿಂದ ಕಡಿತ ಮಾಡಲಾಗುವ ಹಣವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಕಂಪನಿಗಳು ನಿರ್ವಹಿಸಲಿದ್ದು, ಅವು ಆಯಯಾ ಕಾಲಕ್ಕೆ ಲಾಭ ನಷ್ಟಗಳ ಆಧಾರದಲ್ಲಿ ಪಿಂಚಣಿಯ ಮೊತ್ತವನ್ನು ನಿಗದಿಪಡಿಸಬಹುದು. ಆ ಮೊತ್ತ ಹೆಚ್ಚಿರಬಹುದು, ಕಡಿಮೆ ಇರಬಹುದು ಅಥವಾ ಏನೂ ಇಲ್ಲದೆಯೂ ಆಗಿರಬಹುದು. ಇದನ್ನು ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್‌ಮೆಂಟ್ ಅಥಾರಿಟಿ ಕಾಯ್ದೆಯ ಸೆಕ್ಷನ್ 20 (2)(ಜಿ) ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರ ಪ್ರಕಾರ ಪಿಂಚಣಿ ಮೊತ್ತದ ನೀಡಿಕೆಯ ಬಗ್ಗೆ ಯಾವುದೇ ಖಾತ್ರಿ ಇರುವುದಿಲ್ಲ. ಆಯಾ ಕಾಲಾವಧಿಗೆ ಅನುಗುವಣವಾಗಿ ಪಿಂಚಣಿ ನಿರ್ವಾಹಕರ ತೀರ್ಮಾನದಂತೆ ಪಿಂಚಣಿಯನ್ನು ಬಿಡುಗಡೆ ಮಾಡಲಾಗುತ್ತದೆ. ಇಂಥಹ ನೌಕರ ವಿರೋಧಿ ಯೋಜನೆ ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಒತ್ತಾಯವಾಗಿದೆ.
ಈ ಹಿಂದೆ ಜಾರಿಯಲ್ಲಿದ್ದ ಸಾಮಾನ್ಯ ಭವಿಷ್ಯ ನಿಧಿ(ಜಿಪಿಎಫ್)ಗೆ ಸರ್ಕಾರವು ಮೊದಲು ಶೇ. 12ರಷ್ಟು ಬಡ್ಡಿ ನೀಡುತ್ತಿತ್ತು. ನಂತರ ಈ ಬಡ್ಡಿ ದರವು ಸರಿಸುಮಾರು ಶೇ. 8.5 ಕ್ಕೆ ಇಳಿದಿದೆ. ಕೊನೆಗೆ ಅಸಲು ಮತ್ತು ಬಡ್ಡಿ ಒಟ್ಟು ಮೊತ್ತವನ್ನು ಸಂಬಂಧಿತ ನೌಕರರಿಗೆ ಪಾವತಿ ಮಾಡಲಾಗುತ್ತಿತ್ತು. ಈಗ ಅದರ ಬದಲಾಗಿ ನೌಕರರ ಉಳಿತಾಯ ಹಣವನ್ನು ಕಂಪನಿಯ ಷೇರು ಬಂಡವಾಳವಾಗಿ ಪರಿಗಣಿಸಲಾಗುತ್ತದೆ. ಈ ಕಂಪನಿಗೆ ಲಾಭ ಬಂದರೆ ಡಿವಿಡೆಂಟ್ ನೀಡಲಾಗುತ್ತದೆ. ನಷ್ಟವಾದರೆ ಇಡೀ ಉಳಿತಾಯ ಹಣವೇ ಮಂಗಮಾಯವಾಗುತ್ತದೆ.
ಎನ್‌ಪಿಎಸ್ ಅಡಿ ಯೋಜನೆಯ ನೌಕರರ ಹಣವನ್ನು ಷೇರುಪೇಟೆಯಲ್ಲಿಯೂ, ಸರ್ಕಾರದ ಬಾಂಡ್‌ಗಳಲ್ಲಿಯೂ ಹೂಡಿಕೆ ಮಾಡಲಾಗುತ್ತದೆ. ಷೇರುಪೇಟೆಯಲ್ಲಿ ಹೆಚ್ಚಿನ ಮೊತ್ತ ತೊಡಗಿಸಿದರೆ ವಾರ್ಷಿಕವಾಗಿ ಶೇಕಡ 10ರಿಂದ ಶೇ 12ರವರೆಗೆ ಲಾಭ ಪಡೆಯುವ ಸಾಧ್ಯತೆಯೂ ಇರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಏರಿಳಿತ ಕಾರಣ 30 ವರ್ಷಗಳ ಅವಧಿಯಲ್ಲಿ ಶೇ 8ರಷ್ಟು ವಾರ್ಷಿಕ ಸರಾಸರಿ ಲಾಭ ಸಿಕ್ಕರೆ ಹೆಚ್ಚು.
ಸದ್ಯ ಪಿಂಚಣಿ ನಿಧಿ ನಿರ್ವಾಹಕರು (ಪಿಎಫ್‌ಎಂ)
೧. ಎಚ್‌ಡಿಎಫ್‌ಸಿ ಭವಿಷ್ಯ ನಿಧಿ ಮ್ಯಾನೇಜ್‌ಮೆಂಟ್ ಕಂಪನಿ ಲಿ.
೨. ಐಸಿಐಸಿಐ ಪ್ರಿಡೆನ್ಷಿಯಲ್ ಪೆನ್ಷನ್ ಫಂಡ್ಸ್ ಮ್ಯಾನೇಜ್‌ಮೆಂಟ್ ಕಂಪನಿ ಲಿ.
೩. ಕೊಟಕ್ ಮಹೀಂದ್ರ ಪೆನ್ಷನ್ ಫಂಡ್ ಲಿ.
೪. ಎಲ್‌ಐಸಿ ಪೆನ್ಷನ್ ಫಂಡ್ ಲಿ.
೫. ರಿಲೆಯನ್ಸ್ ಕ್ಯಾಪಿಟಲ್ ಪೆನ್ಷನ್ ಫಂಡ್ ಲಿ.
೬. ಎಸ್‌ಬಿಐ ಪೆನ್ಷನ್ ಫಂಡ್ಸ್ ಪ್ರವೈಟ್ ಲಿ.
೭.ಯುಟಿಐ ರಿಟೈರ್‌ಮೆಂಟ್ ಸಲ್ಯುಷನ್ಸ್ ಲಿ.
೮. ಡಿಎಸ್‌ಪಿ ಬ್ಲಾಕ್ ರಾಕ್ ಪೆನ್ಷನ್ ಫಂಡ್ ಮ್ಯಾನೇಜರ್ಸ್ ಪ್ರವೈಟ್ ಲಿ.
ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಸಮನ್ವಯಗೊಳಿಸಲು ಟ್ರಸ್ಟಿ ಬ್ಯಾಂಕ್ ಜವಾಬ್ದಾರಿಯನ್ನು ಆಕ್ಸಿಸ್ ಬ್ಯಾಂಕಿಗೆ ವಹಿಸಲಾಗಿದೆ.
ಒಬ್ಬ ಸರ್ಕಾರಿ ನೌಕರ 30-35 ವರ್ಷ ಸೇವೆಯನ್ನು ಸಲ್ಲಿಸಲಿದ್ದಾನೆ. ಈ ನೌಕರನ ಸಂಧ್ಯಾ ಕಾಲದಲ್ಲಿ ಸಾಮಾಜಿಕ ಆರ್ಥಿಕ ಭದ್ರತೆಯನ್ನು ಒದಗಿಸುವುದು ಸರ್ಕಾರದ ಸಂವಿಧಾನ ಬದ್ಧ ಕರ್ತವ್ಯವಾಗಿರುತ್ತದೆ. ಹೀಗಾಗಿಯೇ ಈ ಹಿಂದೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿತ್ತು.
ಜಾರಿಯಲ್ಲಿದ್ದ ಹಳೆಯ ಪಿಂಚಣಿ ಯೋಜನೆಗೆ ಸುಧಾರಣೆ ತಂದು ನೌಕರರ ಸ್ನೇಹಿಯಾಗಿರಬೇಕು. ಆದರೆ, ನೂತನ ಪಿಂಚಣಿ ಯೋಜನೆಯು ತನ್ನ ಉದ್ದೇಶಕ್ಕೇ ತದ್ವಿರುದ್ಧವಾಗಿದೆ ಎಂದು ಸರ್ಕಾರಿ ನೌಕರರು ಆರೋಪಿಸುತ್ತಿದ್ದಾರೆ. ಎನ್‌ಪಿಎಸ್ ನಿಂದಾಗಿ ಪ್ರತಿ ಸರ್ಕಾರಿ ನೌಕರನ ಸಂಧ್ಯಾಕಾಲವು ಅಭದ್ರತೆಯಿಂದ ಕೂಡಿದೆ. ನಿವೃತ್ತಿ ಜೀವನ ಹೇಗೆಂಬ ತಳಮಳದಿಂದ ಬದುಕು ದೂಡುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಹೊಸ ಪಿಂಚಣಿ ಯೋಜನೆ ಪ್ರಕಾರ ನಿವೃತ್ತಿ ಹೊಂದಿದ ನೌಕರರು 500, 1000, 1,500, 2000 ಹೀಗೆ ಪಿಂಚಣಿ ಪಡೆಯುತ್ತಿದ್ದಾರೆ ಎಂದು ಎನ್‌ಪಿಎಸ್ ನೌಕರ ಸಂಘದ ಅಧ್ಯಕ್ಷ ಶಾಂತರಾಮ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್) ಜಾರಿಗೊಳಿಸುವ ಉದ್ದೇಶದಿಂದ “ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ” (ಪಿಎಫ್‌ಆರ್‌ಡಿಎ) ರೂಪಿಸಿದೆ. ಇದು ಅಂತಿಮವಾಗಿ ಅಂಗೀಕಾರ ಪಡೆದಿರುವುದು 2013ರಲ್ಲಿ. ಆದರೆ, ಇದಕ್ಕೂ ಮೊದಲೇ ಕೇಂದ್ರ ಸರ್ಕಾರ 2003ರ ಅಕ್ಟೋಬರ್ 29ರಂದು ಕಾರ್ಯಾದೇಶದ ಮೂಲಕ ಇದಕ್ಕೆ ಸಂಬಂಧಿಸಿದ ಪ್ರಾಧಿಕಾರ ಸ್ಥಾಪಿಸಿತ್ತು. ಎನ್‌ಡಿಎ ಸರ್ಕಾರದ ಈ ಆದೇಶವನ್ನು ಯುಪಿಎ ಸರ್ಕಾರವೂ ಯಾವುದೇ ಬದಲಾವಣೆಗಳಿಲ್ಲದೆಯೇ ಮುಂದುವರಿಸಿತು. 2004ರ ಜನವರಿ 1ರಿಂದ ನೇಮಕವಾಗುವ ಕೇಂದ್ರ ಸರ್ಕಾರಿ ನೌಕರರಿಗೆ ಈ ಹೊಸ ಪಿಂಚಣಿ ಯೋಜನೆ ಜಾರಿಗೆ ಬಂದಿದೆ. ಈಗಾಗಲೇ 27 ರಾಜ್ಯ ಸರ್ಕಾರಗಳು ಎನ್‌ಪಿಎಸ್ ಜಾರಿಗೊಳಿಸಿವೆ.
ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆಯು ದಿನಾಂಕ 01-04-2006ರಿಂದ ಜಾರಿಗೆ ಬಂದಿದೆ. ಈ ಕುರಿತು ದಿನಾಂಕ 11-11-2009 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, 2006ರಿಂದ ಪೂರ್ವಾನ್ವಯವಾಗುವಂತೆ ಇದನ್ನು ಜಾರಿಗೆ ತರಲು ತೀರ್ಮಾನಿಸಲಾಗಿತ್ತು. ಈ ಯೋಜನೆ ಜಾರಿಗೆ ಬಂದು ಈಗ 16 ವರ್ಷಗಳಾಗಿವೆ. ಈ ಅವಧಿಯಲ್ಲಿ ನೇಮಕಗೊಂಡ ಸುಮಾರು 2,54,000 ನೌಕರರು ಹಾಗೂ ಸುಮಾರು ಒಂದು ಲಕ್ಷ ನಿಗಮ ಮಂಡಳಿಗಳ, ಅನುದಾನಿತ ಹಾಗೂ ಅರೆ ಸರ್ಕಾರಿ ನೌಕರರು ಈ ಹೊಸ ಪಿಂಚಣಿ ಯೋಜನೆಯಡಿ ಬರುತ್ತಾರೆ. ಅವರೆಲ್ಲರೂ ಹೊಸ ಪಿಂಚಣಿ ಯೋಜನೆಗೆ ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹೊಸ ಪಿಂಚಣಿ ಯೋಜನೆ ವಿರುದ್ಧ ರಾಜ್ಯದಲ್ಲಿ ನಿರಂತರವಾಗಿ 2014ರಿಂದಲೂ ರಾಜ್ಯ ಸರ್ಕಾರಿ ನೌಕರರು ಪ್ರತಿಭಟನೆಗಳನ್ನು ಆಯೋಜಿಸುವ ಮೂಲಕ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಾ ಬಂದಿದೆ.
ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಳ ಅಧಿವೇಶನ ನಡೆಯುತ್ತಿದ್ದಾಗ ಜಾಥಾ ಹಾಗೂ ಧರಣಿ ನಡೆಸಲಾಗಿದೆ. 2018 ರ ಅಕ್ಟೋಬರ್ 03 ರಂದು “ರಕ್ತ ಕೊಟ್ಟೆವು ಪಿಂಚಣಿ ಬಿಡೆವುʼʼ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದ 164 ಕೇಂದ್ರಗಳಲ್ಲಿ ರಕ್ತದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಳೆದ ಅಕ್ಟೋಬರ್ 13 ರಿಂದ “ಒಪಿಎಸ್ ಸಂಕಲ್ಪ ಯಾತ್ರೆʼʼ ನಡೆಸಿ, ರಾಜ್ಯದ ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಎನ್‌ಪಿಎಸ್ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಇದೀಗ ಇಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ “ಮಾಡು ಇಲ್ಲವೇ ಮಡಿʼʼ ಎಂಬ ಘೋಷ ವಾಕ್ಯದೊಂದಿಗೆ ಅನಿರ್ಧಿಷ್ಟ ಹೋರಾಟ ಆರಂಭಿಸಲಾಗಿದೆ.