ನೋವುಗಳನ್ನೇ ಹಾಡಾಗಿಸಿದ ಕವಿ ಸಿದ್ದಲಿಂಗಯ್ಯ: ಸಿಐಟಿಯು

ನಾಡಿದ ಶೋಷಿತರ ಜನಸಮುದಾಯದ ಭರವಸೆಯ ಬೆಳಕಾಗಿದ್ದ ಮತ್ತು ತನ್ನ ಕವಿತನದಿಂದ ಕಳೆದ ನಾಲ್ಕು ದಶಕಗಳಿಂದ ಶೋಷಿತರನ್ನು ಸದಾ ಎಚ್ಚರದಿಂದ ಇರುವಂತೆ ಮಾಡಿದ್ದ ಕವಿ, ಅಧ್ಯಾಪಕ ಸಿದ್ದಲಿಂಗಯ್ಯ ಕೊರೊನಾದಿಂದ ನಿಧನರಾಗಿರುವುದು ತೀರ ದುಃಖ ಉಂಟು ಮಾಡುವ ಸಂಗತಿಯಾಗಿದೆ. ಆಗಲಿದ ಕವಿಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ಸಮಿತಿ ತೀವ್ರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.

ಇದನ್ನು ಓದಿ: ಕವಿ ಡಾ. ಸಿದ್ದಲಿಂಗಯ್ಯ ನಿಧನ

ಎಪ್ಪತ್ತರ ದಶಕದಿಂದಲೂ ರಾಜ್ಯದಲ್ಲಿ ಬೆಳೆದು ಬಂದ ದಲಿತ, ಬಂಡಾಯ, ಸಾಂಸ್ಕೃತಿಕ ಹಾಗೂ ಮಹಿಳಾ ಮೊದಲಾದ ಚಳವಳಿಯ ಭಾಗವಾಗಿಯೇ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಸಿದ್ದಲಿಂಗಯ್ಯ ಆ ಎಲ್ಲ ಚಳವಳಿಗಳನ್ನು ರಾಜ್ಯಾದ್ಯಂತ ಬೆಳೆಸಲು ಅಮೂಲ್ಯ ಕೊಡುಗೆಯನ್ನು ನೀಡಿದ್ದರು.

ಬಾಲ್ಯದಲ್ಲಿ ಅನುಭವಿಸಿದ ನೋವುಗಳನ್ನೇ ಕವಿತೆಯಾಗಿಸುವ ಮತ್ತು ಹಾಡಾಗಿಸುವ ಮೂಲಕ ಇಡೀ ಶೋಷಿತರ ನಡುವೆ ಅದರಲ್ಲೂ ಅಸೃಶ್ಯತೆಯಲ್ಲಿ ನೊಂದ ಲಕ್ಷಾಂತರ ದಲಿತರಲ್ಲಿ ಜಾಗೃತಿ ಮೂಡಿಸಲು ಕಾರಣವಾದರು ಸಿದ್ದಲಿಂಗಯ್ಯನವರು. ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಎನ್ನುವ ಅವರ ಕವನ ಈಗಲೂ ಶೋಷಿತರ ಮನದಲ್ಲಿ ರೋಮಾಂಚಕ ಉಂಟು ಮಾಡುವಂತದ್ದು. ‘ಊರು ಕೇರಿ’ ಎನ್ನುವ ಆತ್ಮ ಕಥನವು ಸಿದ್ದಲಿಂಗಯ್ಯ ಅವರ ಬೆಳೆದು ಬಂದ ಮತ್ತು ಅವರು ಅನುಭವಿಸಿದ ಸಂಕಟಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಇದನ್ನು ಓದಿ: ಕಲಾಗ್ರಾಮದಲ್ಲಿ ಸರಕಾರಿ ಗೌರವದೊಂದಿಗೆ ಡಾ. ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆ

ಇಂತಹ ಬಹುಮುಖ ವ್ಯಕ್ತಿತ್ವದ ಕವಿ, ಬರಹಗಾರ, ಅಧ್ಯಾಪಕ ಡಾ ಸಿದ್ದಲಿಂಗಯ್ಯ ಕಳೆದ ಒಂದೂವರೆ ತಿಂಗಳಿಂದ ಕೊರೊನಾ ವಿರುದ್ದ ನಿರಂತರವಾಗಿ ಹೋರಾಡುತ್ತಲೇ ಬಂದರೂ ಅಂತಿಮವಾಗಿ ಅದಕ್ಕೆ ಶರಣಾಗಬೇಕಾದುದ್ದು ದುಃಖದ ಸಂಗತಿ. ಅವರು ಬದುಕಿ ಬರುವವರೆಂದು ಕಾಯುತ್ತಿದ್ದ ಲಕ್ಷಾಂತರ ಶೋಷಿತರಿಗೆ ಇದು ಅತ್ಯಂತ ನಿರಾಶೆಯ ದಿನವಾಗಿದೆ.

ಸಿದ್ದಲಿಂಗಯ್ಯ ಅವರು ಇಡೀ ಕುಟುಂಬದ ನೋವಿನ ಜೊತೆ ಸಿಐಟಿಯು ರಾಜ್ಯ ಸಮಿತಿ ನಿಂತಿದೆ. ಅಗಲಿದ ಡಾ ಸಿದ್ದಲಿಂಗಯ್ಯ ಅವರಿಗೆ ಭಾವಪೂರ್ಣ ಅಂತಿಮ ನಮನಗಳು ಎಂದು ಸಿಐಟಿಯು ಪ್ರಕಟಣೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *